ಗೋರಖ್ಪುರ ಆಸ್ಪತ್ರೆಯಲ್ಲಿ ಮತ್ತೆ 69 ಮಕ್ಕಳ ಸಾವು
ಲಕ್ನೋ,ಅ.12 : ಆಗಸ್ಟ್ ತಿಂಗಳಲ್ಲಿ ಗೋರಖ್ಪುರ ಬಿಆರ್ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಕೊರತೆಯಿಂದ ಹಲವಾರು ಮಕ್ಕಳು ಸಾವಿಗೀಡಾದ ನಂತರ ಸಂಸ್ಥೆಯ ಪ್ರಿನ್ಸಿಪಾಲ್, ವೈದ್ಯರೊಬ್ಬರು ಹಾಗೂ ಇತರ ಸಿಬ್ಬಂದಿಯ ಬಂಧನವಾಗಿದ್ದರೂ ಆಸ್ಪತ್ರೆಯಲ್ಲಿ ಸಾವುಗಳ ಪ್ರಮಾಣ ಕಡಿಮೆಯಾಗಿಲ್ಲ.
ಕಳೆದ 24 ಗಂಟೆಗಳ ಅವಧಿಯಲ್ಲಿ ಆಸ್ಪತ್ರೆಯಲ್ಲಿ 13 ನವಜಾತ ಶಿಶುಗಳೂ ಸೇರಿದಂತೆ 19 ಮಕ್ಕಳು ಮೃತಪಟ್ಟಿದ್ದು ಆರು ಮಂದಿ ಇತರರು ಎಕ್ಯೂಟ್ ಎನ್ಸಿಫಾಲಿಟಿಸ್ ಸಿಂಡ್ರೋಮ್ ನಿಂದ ಬಳಲುತ್ತಿದ್ದರೆಂದು ಕಾಲೇಜಿನ ಪ್ರಿನ್ಸಿಪಾಲ್ ಪಿ ಕೆ ಸಿಂಗ್ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅಕ್ಟೋಬರ್ 7ರಿಂದ ನಾಲ್ಕು ದಿನಗಳ ಅವಧಿಯಲ್ಲಿ ಒಟ್ಟು 69 ಸಾವುಗಳು ಸಂಭವಿಸಿವೆ.
ಆಗಸ್ಟ್ ಎರಡನೇ ವಾರದಲ್ಲಿ ಐದು ದಿನಗಳ ಅವಧಿಯಲ್ಲಿ 60 ಸಾವುಗಳು ಸಂಭವಿಸಿದ್ದವು. ಇತ್ತೀಚೆಗೆ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿದ್ದ 14 ಶಿಶುಗಳು ವಿವಿಧ ಕಾರಣಗಳಿಂದಾಗಿ ಸಾವಿಗೀಡಾಗಿವೆ. ಮಕ್ಕಳ ವಾರ್ಡಿನಲ್ಲಿರುವ 333 ರೋಗಿಗಳಲ್ಲಿ 109 ಮಕ್ಕಳಿಗೆ ಎಕ್ಯೂಟ್ ಎನ್ಸಿಫಾಲಿಟಿಸ್ ಸಿಂಡ್ರೋಮ್ ಇದೆ ಎಂದೂ ಪ್ರಿನ್ಸಿಪಾಲ್ ತಿಳಿಸಿದ್ದಾರೆ.
ಕೆಲವು ವರದಿಗಳ ಪ್ರಕಾರ ಆಸ್ಪತ್ರೆಯಲ್ಲಿ ಅಕ್ಟೋಬರ್ 7, 8, 9 ಹಾಗೂ 10ರಂದು ಕ್ರಮವಾಗಿ 12, 20,18 ಹಾಗೂ 19 ಮಕ್ಕಳು ಸಾವನ್ನಪ್ಪಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ದುರಂತ ಸಾವಿನ ಘಟನೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಮಾಡುವವನನ್ನೂ ಬಂಧಿಸಲಾಗಿತ್ತು.