ಮನುಕುಲದ ಮಹಾಮಾರಿ ಏಡ್ಸ್ | Vartha Bharati- ವಾರ್ತಾ ಭಾರತಿ

--

ಇಂದು ವಿಶ್ವ ಏಡ್ಸ್ ದಿನ

ಮನುಕುಲದ ಮಹಾಮಾರಿ ಏಡ್ಸ್

ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್‌ರೋಗ ಮನುಕುಲದ ಬಹುದೊಡ್ಡ ಶತ್ರು. 2013ರ ಅಂಕಿಅಂಶಗಳ ಪ್ರಕಾರ ಸುಮಾರು 36 ಮಿಲಿಯನ್ ಮಂದಿ (1981-2012ರ ವರೆಗೆ) ಸಾವನ್ನಪ್ಪಿದ್ದಾರೆ ಮತ್ತು ಸುಮಾರು 36 ಮಿಲಿಯನ್ ಮಂದಿ ಎಚ್‌ಐವಿ. ರೋಗಾಣುವಿನಿಂದ ರೋಗಗ್ರಸ್ತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಏಡ್ಸ್‌ನ್ನು ವಿಶ್ವದ ಬಹುದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಅತಿಶಯೋಕ್ತಿಯಲ್ಲ.

ರೋಗದ ತೀವ್ರತೆಯನ್ನು ಕಡಿಮೆ ಮಾಡುವ ಚಿಕಿತ್ಸೆಯ ಹೊರತಾಗಿಯೂ, ಪ್ರತಿವರ್ಷ 2 ಮಿಲಿಯನ್ ಮಂದಿ ಜೀವ ಕಳೆದುಕೊಳ್ಳುತ್ತಿರುವುದು ಬಹುದೊಡ್ಡ ದುರಂತವೇ ಸರಿ. ಈ ನಿಟ್ಟಿನಲ್ಲಿ ಏಡ್ಸ್ ರೋಗದ ಜಾಗೃತಿ ಮೂಡಿಸಿ, ಏಡ್ಸ್ ರೋಗದ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಪ್ರತೀ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್‌ದಿನ ಆಚರಿಸಲಾಗುತ್ತದೆ.

 ಏನಿದು ಏಡ್ಸ್ ಮತ್ತು ಎಚ್‌ಐವಿ ? 
ಎಚ್‌ಐವಿ ಎಂದರೆ ಹ್ಯೂಮನ್ ಇಮ್ಯೂನ್ ಡೆಫಿಷಿಯನ್ಸ್ ವೈರಸ್ ಎಂಬ ರೋಗಾಣು. ಇದು ಮನುಷ್ಯನ ದೇಹಕ್ಕೆ ಸೇರಿಕೊಂಡಾಗ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಮಾಡಿ ಮಾನವನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಹತ್ತು ಹಲವಾರು ರೋಗಗಳಿಗೆ ಕಾರಣವಾಗುತ್ತದೆ.

ಏಡ್ಸ್ ಎಂದರೆ ಅಕ್ವಾಯರ್ಡ್ ಇಮ್ಯೂನ್ ಡೆಫಿಷಿಯನ್ಸಿ ಸಿಂಡ್ರೋಮ್. ಎಚ್‌ಐವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೆಂದಿಲ್ಲ. ಮನುಷ್ಯನ ರೋಗ ನಿರೋಧಕ ಶಕ್ತಿ ಕುಂದಿ ಮನುಷ್ಯನ ದೇಹ ರೋಗಗಳ ಹಂದರವಾದಾಗ, ಮನುಷ್ಯನ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿದ ರೋಗಗಳ ಸಮೂಹಕ್ಕೆ ‘ಏಡ್ಸ್’ ಎನ್ನಲಾಗುತ್ತದೆ. ಏಡ್ಸ್ ರೋಗ ಇರುವವರೆಲ್ಲರೂ ಎಚ್‌ಐವಿ ಸೋಂಕಿತರಾಗಿರುತ್ತಾರೆ. ಆದರೆ ಎಚ್‌ಐವಿ ಸೋಂಕು ತಗಲಿದವರೆಲ್ಲರೂ ಏಡ್ಸ್ ರೋಗದಿಂದ ಬಳಲೇಬೇಕು ಎಂಬ ನಿಯಮವಿಲ್ಲ. ವ್ಯಕ್ತಿಯ ರೋಗನಿರೋಧಕ ಶಕ್ತಿ ತೀರಾ ದುರ್ಬಲವಾದಾಗ ರೋಗಿ ಏಡ್ಸ್ ರೋಗಕ್ಕೆ ತುತ್ತಾಗಿ ದೇಹದ ರಕ್ಷಣಾ ವ್ಯವಸ್ಥೆ ದುರ್ಬಲಗೊಂಡು ರೋಗಿ ಸಾವನ್ನಪ್ಪುತ್ತಾನೆ.

ಏಡ್ಸ್ ರೋಗದ ಲಕ್ಷಣಗಳು 

 ಪದೇ ಪದೇ ಕಾಡುವ ಜ್ವರ ಮತ್ತು ಪದೇ ಪದೇ ಕಾಡುವ ಭೇದಿ ಏಡ್ಸ್ ನ ಪ್ರಾಥಮಿಕ ಲಕ್ಷಣವಾಗಿರುತ್ತದೆ. ಯಾವುದೇ ರೀತಿಯ ಚಿಕಿತ್ಸೆಗೆ ಇದು ಸ್ಪಂದಿಸುವುದಿಲ್ಲ. ವ್ಯಕ್ತಿ ಕಾರಣವಿಲ್ಲದೆ ದೇಹದ ತೂಕವನ್ನು ಕಳೆದುಕೊಳ್ಳುತ್ತಾನೆ. ಎಚ್‌ಐವಿ ವೈರಾಣು ದೇಹದ ರಕ್ಷಣಾ ವ್ಯವಸ್ಥೆಯ ಸೈನಿಕರಾದ ಬಿಳಿರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ.

ಹೀಗಾಗಿ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಬಿದ್ದು, ವ್ಯಕ್ತಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಇತರ ವೈರಾಣುಗಳ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾನೆ. ಎಚ್‌ಐವಿ ಸೋಂಕಿತ ವ್ಯಕ್ತಿ ಏಡ್ಸ್ ರೋಗಕ್ಕೆ ತುತ್ತಾಗಲು 5ರಿಂದ 10 ವರ್ಷ ತಗಲಬಹುದು. ಕೆಲವೊಮ್ಮೆ 10ರಿಂದ 15 ವರ್ಷ ತಗಲಬಹುದು ಇದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಿರುತ್ತದೆ. ಸಕಾಲದಲ್ಲಿ ಗುರುತಿಸಿ ವೈರಸ್ ವಿರುದ್ಧ ಚಿಕಿತ್ಸೆ ಪಡೆದಲ್ಲಿ ರೋಗದ ಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಬಹುದು.

ಜ್ವರ, ಭೇದಿಯ ಜೊತೆಗೆ ವಿಪರೀತ ಸುಸ್ತು, ಅಪೌಷ್ಟಿಕತೆ, ಬಾಯಿಯಲ್ಲಿ ಹುಣ್ಣು, ಗಂಟಲು ಉರಿ, ಗಂಟಲು ನೋವು, ಕೆಮ್ಮು ಮತ್ತು ಕುತ್ತಿಗೆಯ ಸುತ್ತ ಗಡ್ಡೆಗಳ ಅನುಭವ ಉಂಟಾಗಬಹುದು. ಆಹಾರ ನುಂಗುವಾಗ ನೋವು, ತಲೆನೋವು ಮತ್ತು ಮರೆಗುಳಿತನ ಇರುತ್ತದೆ. ಅದೇ ರೀತಿ ಏಡ್ಸ್ ರೋಗಿ ಅರ್ಬುದ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕೂಡಾ ಹೆಚ್ಚಾಗಿರುತ್ತದೆ.

ಏಡ್ಸ್‌ರೋಗದ ತೀವ್ರತೆಯನ್ನು ಸಿ.ಡಿ-4 ಎಂಬ ಬಿಳಿರಕ್ತ ಕಣಗಳ ಸಂಖ್ಯೆಯ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ ಎಚ್‌ಐವಿ ಪೀಡಿತರಲ್ಲಿ ಈ ಸಂಖ್ಯೆ 500ಕ್ಕಿಂತ ಜಾಸ್ತಿ ಇರುತ್ತದೆ. ಏಡ್ಸ್ ರೋಗಿಗಳಲ್ಲಿ ಈ ಸಂಖ್ಯೆ 200ಕ್ಕಿಂತಲೂ ಕಡಿಮೆ ಇರುತ್ತದೆ. ಅದೇ ರೀತಿ ಚಿಕಿತ್ಸೆಯ ಪರಿಣಾಮ ಮತ್ತು ಯಶಸ್ಸನ್ನು ಸಿ.ಡಿ-4 ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಚಿಕಿತ್ಸೆ ಪರಿಣಾಮಕಾರಿಯಾಗಿದ್ದಲ್ಲಿ ಸಿ.ಡಿ-4 ಎಂಬ ಬಿಳಿ ರಕ್ತಕಣಗಳ ಸಂಖ್ಯೆ ವೃದ್ಧಿಸುತ್ತದೆ. ಸಿ.ಡಿ-4 ರಕ್ತಕಣಗಳ ಸಂಖ್ಯೆ ವೃದ್ಧಿಸಿದಲ್ಲಿ ರೋಗಿಯ ರೋಗ ನಿರೋಧಕಶಕ್ತಿ ಕೂಡ ಹೆಚ್ಚಾಗುತ್ತದೆ.

ಹೇಗೆ ಹರಡುತ್ತದೆ?

1. ಎಚ್‌ಐವಿ ಸೋಂಕಿತ ರೋಗಿಯೊಂದಿಗಿನ ಅಸುರಕ್ಷಿತ ಲೈಂಗಿಕ ಸಂಪರ್ಕ
2. ಎಚ್‌ಐವಿ ಸೋಂಕಿತ ವ್ಯಕ್ತಿಗಳಿಂದ ರಕ್ತ ಪಡೆಯುವುದರಿಂದ

3. ಮಾದಕ ದ್ರವ್ಯ ವ್ಯಸನಿಗಳು ಬಳಸಿದ ಎಚ್‌ಐವಿ ಸೋಂಕಿತ ಸೂಜಿ ಅಥವಾ ಸಿರಿಂಜ್‌ಗಳನ್ನು ಬಳಸುವುದರಿಂದ 4. ಎಚ್‌ಐವಿ ಸೋಂಕಿತ ತಾಯಿಯಂದಿರಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆಯ ಸಮಯದಲ್ಲಿ ಮತ್ತು ಎದೆ ಹಾಲುಣಿಸುವ ಮುಖಾಂತರ.

5. ಅಸ್ವಾಭಾವಿಕ ಲೈಂಗಿಕ ಕ್ರಿಯೆಗಳಾದ ಬಾಯಿ, ಗುಧದ್ವಾರದ ಸೆಕ್ಸ್ 6. ದೇಹದ ಮೇಲೆ ಹಾಕುವ ಹಚ್ಚೆಗಳು ಮತ್ತು ದೇಹದ ವಿವಿಧ ಭಾಗಗಳಲ್ಲಿ ಹಾಕಿಕೊಳ್ಳುವ ಆಲಂಕಾರಿಕ ಸಾಮಗ್ರಿಗಳು ಒಂದು ವೇಳೆ ಎಚ್‌ಐವಿ ಸೋಂಕಿತವಾಗಿದ್ದಲ್ಲಿ ರೋಗ ಹರಡುವ ಸಾಧ್ಯತೆ ಇರುತ್ತದೆ.

ಚಿಕಿತ್ಸೆ ಹೇಗೆ?
ಏಡ್ಸ್ ರೋಗಕ್ಕೆ ಮದ್ದು ಇಲ್ಲ. ಚಿಕಿತ್ಸೆಯಿಂದ ರೋಗವನ್ನು ಗುಣ ಪಡಿಸಲು ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಆರ್‌ಟಿ (ಆ್ಯಂಟಿ ರಿಟ್ರೊವೈರಲ್ ಥೆರಪಿ) ಎಂಬ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಯ ಮುಖಾಂತರ ಎಚ್‌ಐವಿ ರೋಗಾಣುವಿನ ಆರ್ಭಟವನ್ನು ಕಡಿಮೆ ಮಾಡಬಹುದು. ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಕುಂದದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಇತರ ವ್ಯಕ್ತಿಗಳಂತೆ ಎಚ್‌ಐವಿ ಸೋಂಕಿತ ವ್ಯಕ್ತಿಗಳು ದೈನಂದಿನ ಜೀವನ ನಡೆಸಬಹುದು.

ತಪ್ಪುಕಲ್ಪನೆಗಳು 
 ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ. ನೆನಪಿರಲಿ, ಎಚ್‌ಐವಿ ಪೀಡಿತರು ಎಲ್ಲರಂತೆ ಜೀವನ ನಡೆಸಬಹುದು. ಎಚ್‌ಐವಿ ಸೋಂಕಿತರು ತಾನು ಎಚ್‌ಐವಿ ಸೋಂಕಿತ ಎಂದು ತಿಳಿದಾಕ್ಷಣ, ಆಕಾಶವೇ ತಲೆಯ ಮೇಲೆ ಬಿದ್ದಂತೆ ವರ್ತಿಸುತ್ತಾರೆೆ. ಇನ್ನು ಕೆಲವೇ ದಿನಗಳಲ್ಲಿ ತಾನು ಸಾಯುತ್ತೇನೆ ಎಂಬ ಭಯದಲ್ಲಿ ಊಟ, ನಿದ್ರೆ ಬಿಟ್ಟು ಚಿಂತೆಗೆ ಶರಣಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಈ ಚಿಂತೆಯಿಂದಲೇ ಇನ್ನೂ ಹತ್ತಿಪ್ಪತ್ತು ವರ್ಷ ಬಾಳಿ ಬದುಕಬೇಕಾದ ಜೀವ, ಒಂದೆರಡು ವರ್ಷದಲ್ಲಿಯೇ ಕೊರಗಿ ಕೊರಗಿ ಜೀವ ಬತ್ತಿ ಹೋಗುತ್ತದೆ. ಮಾನಸಿಕ ಚಿಂತೆ, ಒತ್ತಡ, ಅವಮಾನ, ಆತಂಕ, ಗಾಬರಿ ಮತ್ತು ಸಮಾಜದ ಪ್ರಶ್ನೆಗಳಿಗೆ ಹೆದರಿ ತನ್ನದಲ್ಲದ ತಪ್ಪಿಗೆ ಜೀವ ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಎಚ್‌ಐವಿ ಬಾಧಿತರಿಗೆ ಸಾಂತ್ವನ ಹೇಳಿ ಅವರನ್ನು ಇತರರಂತೆ ಉಪಚರಿಸಿ, ಸಮಾಜದ ಮುಖ್ಯ ವಾಹಿನಿಗೆ ಸೇರಿಸಿಕೊಳ್ಳಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ.

ಹೇಗೆ ಹರಡುವುದಿಲ್ಲ

1. ಕೈ ಕುಲುಕುವುದು, ಆಲಿಂಗನ, ಸೀನುವುದು, ಕೆಮ್ಮುವುದು ಇತ್ಯಾದಿ

2. ಬೆವರು, ಎಂಜಲು, ಕಣ್ಣೀರು, ಸಿಂಬಳ, ಮಲ-ಮೂತ್ರ ಮುಂತಾದವು ಗಳನ್ನು ಸ್ಪರ್ಶಿಸುವುದರಿಂದ.

3.ಊಟ, ತಟ್ಟೆ, ಬಟ್ಟೆ, ನೀರು ಮುಂತಾದವುಗಳನ್ನು ಹಂಚಿಕೊಳ್ಳುವುದರಿಂದ.

4. ಸೊಳ್ಳೆಗಳಿಂದ ಹರಡುವುದಿಲ್ಲ.
ಎಚ್‌ಐವಿ ವೈರಸ್ ಬಹಳ ಕಾಲ ಮನುಷ್ಯನ ದೇಹದ ಹೊರಗೆ ಜೀವಿಸಲಾರದು. ಹೊರಗಿನ ಉಷ್ಣತೆಯನ್ನು ಸಹಿಸಿಕೊಳ್ಳುವ ಶಕ್ತಿ ಅದಕ್ಕಿಲ್ಲ. ದೇಹದ ದ್ರವ ಆರಿದಾಗ ವೈರಾಣು ತನ್ನಿಂತಾನೇ ಸಾಯುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top