ಶಿಕ್ಷಣದಿಂದ ವಿಮುಖರಾಗುತ್ತಿರುವ ಬುಡಕಟ್ಟು ಮಕ್ಕಳು: ಕಾರಣಗಳೇನು? | Vartha Bharati- ವಾರ್ತಾ ಭಾರತಿ

--

ಶಿಕ್ಷಣದಿಂದ ವಿಮುಖರಾಗುತ್ತಿರುವ ಬುಡಕಟ್ಟು ಮಕ್ಕಳು: ಕಾರಣಗಳೇನು?

ಈಗಾಗಲೇ ಪರೀಕ್ಷೆಯೆಲ್ಲ ಮುಗಿದು, ಬೇಸಿಗೆ ರಜೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ಮಕ್ಕಳು ಮತ್ತು ಪೋಷಕರು ಇನ್ನೇನು ಕೆಲವೇ ದಿನಗಳಲ್ಲಿ ಬರುವ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶಕ್ಕಾಗಿ ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ. ಕೆಲ ಪೋಷಕರಂತೂ ತಮ್ಮ ಮಕ್ಕಳನ್ನು ಉತ್ತಮ ಶಾಲಾಕಾಲೇಜುಗಳಿಗೆ ಸೇರಿಸುವ ಸಲುವಾಗಿ ಹಗಲು ರಾತ್ರಿಯೆನ್ನದೆ ಹಲವಾರು ತಿಂಗಳಿಂದ ಯಾವ ಶಾಲೆಗೆ ಅಥವಾ ಕಾಲೇಜಿಗೆ ಸೇರಿಸಿದರೆ ಉತ್ತಮ, ಯಾವ ಕಾಂಬಿನೇಶನ್ ಕೊಡಿಸಿದರೆ ಉತ್ತಮ, ಮುಂದೆ ಮಕ್ಕಳು ವೈದ್ಯರಾಗಬೇಕೆ, ಇಂಜಿನಿಯರಾಗಬೇಕೆ, ವಿಜ್ಞಾನಿಗಳಾಗಬೇಕೆ ಹೀಗೆ ಹಲವಾರು ರೀತಿಯಲ್ಲಿ ಯೋಚಿಸುತ್ತಿರುವುದು ಒಂದು ಕಡೆಯಾದರೆ ಶಾಲಾ ಕಾಲೇಜು ಅಥವಾ ಶಿಕ್ಷಣದ ಮಹತ್ವವೇ ತಿಳಿಯದೆ ಕೇವಲ ಜೀವನ ಸಾಗಿಸಲು ಒಂದೊತ್ತಿನ ಊಟಕ್ಕೂ ಪರದಾಡುತ್ತಾ ಕೂಲಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಾ, ಮಕ್ಕಳನ್ನು ಕೂಲಿಗೆ ದೂಡುತ್ತಿರುವ ಅನೇಕ ಅಲೆಮಾರಿ, ಅರೆ-ಅಲೆಮಾರಿ, ಅಲ್ಪಸಂಖ್ಯಾತ, ಪರಿಶಿಷ್ಟಜಾತಿ ಹಾಗೂ ಬುಡಕಟ್ಟು ಸಮುದಾಯಗಳು ನಮ್ಮ ನಡುವೆ ಬದುಕುತ್ತಿವೆ. ಬಡತನ, ಅಜ್ಞಾನ, ಅನಕ್ಷರತೆ, ಕೀಳರಿಮೆ, ಅರಿವಿನ ಕೊರತೆ ಇವರನ್ನು ಕಾಡುತ್ತಿದೆ.

 ಯಾವುದೇ ಒಂದು ರಾಷ್ಟ್ರ, ಜನಾಂಗ ಅಥವಾ ಸಮಾಜ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಆಚಾರ ವಿಚಾರ ಸಂಸ್ಕೃತಿಯನ್ನು ವರ್ಗಾಯಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರವಹಿಸುತ್ತದೆ. ಶಿಕ್ಷಣವು ವ್ಯಕ್ತಿಯನ್ನು ವೈಜ್ಞಾನಿಕ ಚಿಂತನೆಗೆ ಒರೆ ಹಚ್ಚುವುದರ ಮುಖೇನ ಸರ್ವತೋಮುಖ ಬೆಳವಣಿಗೆ, ಸಂಸ್ಕೃತಿಯ ಸಂರಕ್ಷಣೆಗೆ ಅತ್ಯವಶ್ಯಕವಾಗಿದೆ. ಶಿಕ್ಷಣವು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಿ, ರಾಜಕೀಯ ಸ್ಥಿರತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸಿ ಮುಂದುವರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹಾಗಾಗಿ ಶಿಕ್ಷಣ ಕೇವಲ ಜ್ಞಾನ ಸಂಪತ್ತಿನ ಕೇಂದ್ರವಾಗಿರದೆ ಮಕ್ಕಳಿಗೆ ಭವಿಷ್ಯವನ್ನು ಎದುರಿಸಲು ಅಗತ್ಯವಾದ ಕಲೆ ಮತ್ತು ನೈಪುಣ್ಯತೆಯನ್ನು ಉತ್ತಮೀಕರಿಸುವ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ.

 ರಾಜ್ಯದಲ್ಲಿ ವಿವಿಧ ಬುಡಕಟ್ಟು ಸಮುದಾಯಗಳಿದ್ದು, ಅವುಗಳಲ್ಲಿ 50 ಸಮುದಾಯಗಳನ್ನು ಸಂವಿಧಾನದ 342ನೇ ಅನುಚ್ಛೇದದಡಿಯಲ್ಲಿ ಪರಿಶಿಷ್ಟ ಬುಡಕಟ್ಟು ಪಟ್ಟಿಗೆ ಸೇರಿಸಲಾಗಿದೆ. ಆದಿಯನ್, ಬಾರ್ದ, ಬಾವಚ, ಹಕ್ಕಿ_ಪಿಕ್ಕಿ, ಹಸಲರು, ಇರುಳರು, ಜೇನುಕುರುಬ, ಕಾಡುಕುರುಬ, ಕಣಿಯನ್, ಕಾಟ್ಟುನಾಯಕನ್, ಸೋಲಿಗ, ಕೊರಗ, ಮಲೆಕುಡಿಯ, ಮರಾಠಿ, ಗೊಂಡ, ಟೋಕರೆ ಕೋಳಿ, ಸಿದ್ದಿ, ನಾಯಕ ಸಮುದಾಯಗಳು ಪ್ರಮುಖವಾದವುಗಳಾಗಿವೆ. ಈ ಐವತ್ತು ಬುಡಕಟ್ಟು ಸಮುದಾಯಗಳಲ್ಲಿ ಜೇನುಕುರುಬ ಮತ್ತು ಕೊರಗ ಸಮುದಾಯಗಳನ್ನು ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳ ಪಟ್ಟಿಗೆ ಸೇರಿಸಲಾಗಿದೆ. ಸಾಮಾನ್ಯವಾಗಿ ಬುಡಕಟ್ಟು ಜನರು ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಹಂಚಿ ಹೋಗಿದ್ದರೂ ಕೂಡ ಕೆಲ ಜಿಲ್ಲೆಗಳಲ್ಲಿ (ರಾಯಚೂರು, ಬಳ್ಳಾರಿ, ಹಾವೇರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಳಗಾಂ, ದಾವಣಗೆರೆ, ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ತುಮಕೂರು) ಹೆಚ್ಚಿನ ಪ್ರಮಾಣದಲ್ಲಿಯೂ, ಕೆಲ (ಮಂಡ್ಯ ಮತ್ತು ಹಾಸನ) ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತಾರೆ. ಕೆಲ ಪ್ರದೇಶಗಳಲ್ಲಿ ಕೆಲ ಬುಡಕಟ್ಟುಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳ್ಳುತ್ತಿದ್ದರೆ, ಬಹುತೇಕ ಬುಡಕಟ್ಟುಗಳು ವಿಶೇಷವಾಗಿ ಅರಣ್ಯವಾಸಿ ಬುಡಕಟ್ಟುಗಳು ಇಂದಿಗೂ ಕೂಡ ಪೂರ್ಣ ಪ್ರಮಾಣದ ಪ್ರಾಪಂಚಿಕ ಅರಿವಿಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಜೀವನ ದೂಡುತ್ತಿದ್ದಾರೆ. ಹಾಗಾಗಿ ಶಿಕ್ಷಣವನ್ನೊಳಗೊಂಡಂತೆ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ ಆದರೆ ಎಲ್ಲಾ ಬುಡಕಟ್ಟು ಸಮುದಾಯಗಳ ಶೈಕ್ಷಣಿಕಮಟ್ಟ ನಿರೀಕ್ಷಿಸಿದಂತೆ ಸುಧಾರಣೆಗೊಂಡಿಲ್ಲ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಮತ್ತು ಎಲ್ಲಾ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ಸಿಗಬೇಕೆಂಬ ಬಯಕೆಯಿಂದ ಪಠ್ಯ ಪುಸ್ತಕಗಳ ವಿತರಣೆ, ವಿದ್ಯಾರ್ಥಿ ವೇತನ, ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಅಲ್ಲದೆ ಶಾಲೆಯಿಂದ ಹೊರಗುಳಿದ ಮತ್ತು ನಿಯಮಿತವಾಗಿ ಶಾಲೆಗೆ ಹಾಜರಾಗದ ಮಕ್ಕಳನ್ನು ಶಾಲೆಗೆ ಕರೆತರುವ ಉದ್ದೇಶದಿಂದ ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಚಿಣ್ಣರ ಅಂಗಳ, ಕಲಿಕಾ ಖಾತ್ರಿ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಸಹಾ ಮಕ್ಕಳ ಶಿಕ್ಷಣ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದೇ ಕೆಳ ವರ್ಗದ ಸಮುದಾಯದಲ್ಲಿ ಅದರಲ್ಲೂ ಬುಡಕಟ್ಟು ಸಮುದಾಯದ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಆಘಾತಕಾರಿ ವಿಷಯವಾಗಿದೆ. (ಕರ್ನಾಟಕ ಮಾನವ ಅಭಿವೃದ್ಧಿ ವರದಿ -2005)

ಬುಡಕಟ್ಟು ಸಮುದಾಯಗಳು ಸಾಂಸ್ಕೃತಿಕವಾಗಿ ಇತರ ಸಮುದಾಯಗಳಗಿಂತ ಭಿನ್ನರಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿವೆ. ಸಾಮಾನ್ಯ ಸಮುದಾಯಗಳಿಗೆ ಹೋಲಿಸಿದಾಗ ಬುಡಕಟ್ಟು ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಕಡಿಮೆಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬುಡಕಟ್ಟು ಸಮುದಾಯದ ಮಕ್ಕಳ ದಾಖಲಾತಿಯಲ್ಲಿ ಬದಲಾವಣೆಗಳಾದರೂ ಶಾಲೆಯಿಂದ ಹೊರಗುಳಿ ಯುವ ಬುಡಕಟ್ಟು ಮಕ್ಕಳ ಪ್ರಮಾಣ ಹೆಚ್ಚಿದೆ. ಅದರಲ್ಲೂ ಹೆಣ್ಣು ಮಕ್ಕಳ ಗೈರು ಹಾಜರಿ ಹಾಗೂ ಶಾಲೆ ಬಿಡುವ ಪ್ರಮಾಣ ಅಧಿಕವಾಗಿದೆ. ಇತರ ಮಕ್ಕಳಿಗೆ ಹೋಲಿಸಿದರೆ ಬುಡಕಟ್ಟು ಮಕ್ಕಳ ಶಿಕ್ಷಣ ಅತ್ಯಂತ ಶೋಚನೀಯವಾಗಿದ್ದು, ಬುಡಕಟ್ಟು ಮಕ್ಕಳ ಶಾಲೆ ಬಿಡುವ ಪ್ರಮಾಣ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಅಧಿಕವಾಗಿದೆ. ಅತ್ಯಂತ ಹೆಚ್ಚಿನ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದಲ್ಲಿ ಶಾಲೆ ತೊರೆಯುತ್ತಿದ್ದಾರೆ. ಉದಾಹರಣೆ ನೋಡುವುದಾದರೆ ಗುಂಡ್ಲುಪೇಟೆ ತಾಲೂಕಿನ ನಮಿಲುಗುಂದಿ, ಆನಂಜಿಹುಂಡಿ, ಮತ್ತು ಮಗುವಿನಹಾಡಿ ಎಂಬ ಗಿರಿಜನ ಕಾಲನಿಗಳಲ್ಲಿ ಯಾವುದೇ ಒಬ್ಬ ವಿದ್ಯಾರ್ಥಿಯು ಸಹ ಪದವಿ ಇರಲಿ ಪಿಯುಸಿವರೆಗೂ ಕೂಡ ಓದಿಲ್ಲ. ಈ ಕಾಲನಿಗಳಲ್ಲಿ ಪ್ರಾಥಮಿಕ ಶಾಲೆಯೂ ಇಲ್ಲ.

ಅಲ್ಲದೇ ಯಾವುದೇ ಕಾಲನಿಯಲ್ಲಿಯೂ ಹಿರಿಯ ಪ್ರಾಥಮಿಕ ಶಾಲೆಯಾಗಲಿ, ಪ್ರೌಢ ಶಾಲೆಯಾಗಲಿ ಇಲ್ಲದ ಕಾರಣ ಹಿರಿಯ ಪ್ರಾಥಮಿಕ ಶಾಲೆಗೆ 3 ರಿಂದ 7 ಕಿ.ಮೀ. ಹಾಗೂ ಪ್ರೌಢ ಶಾಲೆಗೆ 8 ರಿಂದ 15 ಕಿ.ಮೀ. ದೂರದವರೆಗೆ ಹೋಗಬೇಕು. ಇವರು ವಾಸಿಸುವ ಬಹುತೇಕ ಕಾಲನಿಗಳಿಗೆ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಶಾಲೆಗೆ ಹೋಗಬೇಕೆಂದರೆ ನಡೆದುಕೊಂಡು ಹೋಗಬೇಕು. ಈ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಭಯದಿಂದ ಮಕ್ಕಳು ಶಾಲೆಗೆ ಹೋಗಲು ಸಹ ಹೆದರುತ್ತಾರೆ. ಅಲ್ಲದೆ ಸಹಪಾಠಿ ಅಥವಾ ಸೋದರ/ಸೋದರಿಯರು ಶಾಲೆ ಬಿಟ್ಟರೆ ಇತರ ಮಕ್ಕಳು ಕೂಡಾ ಶಾಲೆ ಬಿಡುವ ಪರಿಪಾಠವಿದ್ದು, ಪೋಷಕರ ಅನಕ್ಷರತೆ ಮತ್ತು ನಿರಾಸಕ್ತಿಯಿಂದಲೂ ಮಕ್ಕಳು ಶಾಲೆಯನ್ನು ತೊರೆಯುತ್ತಿದ್ದಾರೆ. ಅಲ್ಲದೆ ಮೂಲತಃ ಬಡತನದಿಂದ ಜೀವನ ಸಾಗಿಸುತ್ತಿರುವ ಇವರಿಗೆ ಸ್ಥಳೀಯವಾಗಿ ಕೂಲಿಸಿಗದ ಸಂದರ್ಭದಲ್ಲಿ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿಗೆ ಮಕ್ಕಳ ಸಹಿತ ವಲಸೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳು 2 ರಿಂದ 4 ತಿಂಗಳು ಶಾಲೆಗೆ ಗೈರು ಹಾಜರಾಗುವುದರಿಂದ ಕಲಿಕಾ ಸಮಸ್ಯೆ ಉಂಟಾಗಿ ತದನಂತರದಲ್ಲಿ ಶಾಲೆ ಬಿಡುತ್ತಾರೆ. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದಾಗಲೂ ಸಹ ಮಕ್ಕಳನ್ನು ಶಾಲೆ ಬಿಡಿಸುವುದು ಸಾಮಾನ್ಯವಾಗಿದೆ. ಪ್ರಾಣಿ ಸಾಕಣೆ, ಕೂಲಿಗೆ ಮಕ್ಕಳನ್ನು ಬಳಸಿಕೊಳ್ಳುವುದು ಕೂಡ ಮಕ್ಕಳು ಶಾಲೆಯನ್ನು ತೊರೆಯುವಂತೆ ಮಾಡಿದೆ. ಶಾಲೆಯಲ್ಲಿನ ಬೋಧನಾ ಭಾಷೆ (ಮಾಧ್ಯಮ) ಬುಡಕಟ್ಟು ಭಾಷೆಗಿಂತ ವಿಭಿನ್ನವಾಗಿದೆ, ಪ್ರಸ್ತುತವಿರುವ ಪಠ್ಯಕ್ರಮವು ಕೂಡಾ ಬುಡಕಟ್ಟು ಸಮಾಜ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಅನುಗುಣವಾಗಿಲ್ಲದಿರುವುದು ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿಯನ್ನು ಕುಂದುವಂತೆ ಮಾಡುತ್ತಿದೆ. ಹೀಗೆ ಹಲವಾರು ಅಂಶಗಳು ಬುಡಕಟ್ಟು ಮಕ್ಕಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿವೆ. ಆದರೂ ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಬುಡಕಟ್ಟು ಮಕ್ಕಳು ಮಧ್ಯಂತರದಲ್ಲಿ ಶಾಲೆ ಬಿಡುವುದನ್ನು ತಡೆಗಟ್ಟಲು ಮತ್ತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿಸಿ ಕೊಡಲು ಬುಡಕಟ್ಟು ಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಢಗೊಳಿಸುವುದರ ಜೊತೆಗೆ ವಲಸೆ ಹೋಗುವುದನ್ನು ತಪ್ಪಿಸುವುದು ಹಾಗೂ ಮಕ್ಕಳಿಗೆ, ಪೋಷಕರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿ ಕೊಡುವುದು ಅವಶ್ಯಕವಾಗಿದೆ. ಈಗಿರುವ ಕನಿಷ್ಠ ಮಕ್ಕಳ ಕೊರತೆಯ ನೆಪ ಹೇಳಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚದೆ ಅವುಗಳನ್ನು ಹಿರಿಯ ಪ್ರಾಥಮಿಕ ಶಾಲೆಯವರೆಗೆ ವಿಸ್ತರಿಸುವುದು ಹಾಗೂ ಬುಡಕಟ್ಟು ಪ್ರದೇಶಗಳಿಗೆ ಹತ್ತಿರವಾಗುವಂತೆ ಪ್ರೌಢಶಾಲೆಗಳನ್ನು ತೆರೆಯುವುದು ಅಗತ್ಯವಾಗಿದೆ. ಆಶ್ರಮಶಾಲೆ ಮತ್ತು ವಸತಿ ಶಾಲೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಬುಡಕಟ್ಟು ಸಮಾಜದ ಸಂಸ್ಕೃತಿಗೆ ಅನುಗುಣವಾಗಿ ವೌಖಿಕ ಸಾಹಿತ್ಯ, ಕಥೆಗಳು, ನೈತಿಕ ವೌಲ್ಯ, ಪರಿಸರ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸುವಂತಹ ಪಠ್ಯಕ್ರಮಗಳನ್ನು ರೂಪಿಸಬೇಕಿದೆ. ಪ್ರಮುಖವಾಗಿ ಬುಡಕಟ್ಟು ಭಾಷೆ, ಸಮಾಜ, ಸಂಸ್ಕೃತಿ ಬಗ್ಗೆ ಜ್ಞಾನವಿರುವ ಶಿಕ್ಷಕರನ್ನು ನೇಮಿಸುವುದು ಅತ್ಯವಶ್ಯಕವಾಗಿದೆ. ಬುಡಕಟ್ಟು ಹಾಡಿಯಲ್ಲಿರುವ ಕೆಲವು ವಿದ್ಯಾವಂತರನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿ ಅವರ ಜೀವನವನ್ನು ಉತ್ತಮೀಕರಿಸಿ, ಅವರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಬುಡಕಟ್ಟು ಪ್ರದೇಶಗಳಿಗೆ ಮಾದರಿ ವ್ಯಕ್ತಿಗಳನ್ನಾಗಿ ರೂಪಿಸುವುದು ಅತ್ಯವಶ್ಯಕವಾಗಿದೆ. ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವುದು ಅವಶ್ಯಕವಾಗಿದೆ. ಇದರ ಜೊತೆಗೆ ಶಿಕ್ಷಕರ, ಅಧಿಕಾರಿಗಳ ಮತ್ತು ಇತರ ಸಮುದಾಯದವರ ಮನೋಭಾವ ಬದಲಾಣೆಯಾಗಬೇಕಿದೆ. ಜೊತೆಗೆ ನಮ್ಮ ನಿಮ್ಮೆಲ್ಲರ ಸಕಾರಾತ್ಮಕ ಸಹಕಾರವು ಕೂಡಾ ಬುಡಕಟ್ಟು ಮಕ್ಕಳ ಶೈಕ್ಷಣಿಕ ಮಟ್ಟವನ್ನು ಉತ್ತಮ ಪಡಿಸುವಲ್ಲಿ ಸಹಕಾರಿಯಾಗ ಬಲ್ಲದು.

email: manjuanthropology@gmail.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top