ಕೇವಲ ಯೆಹೂದಿಯರ ರಾಷ್ಟ್ರವಾಗುತ್ತಿರುವ ಇಸ್ರೇಲ್ ! | Vartha Bharati- ವಾರ್ತಾ ಭಾರತಿ

--

ಕೇವಲ ಯೆಹೂದಿಯರ ರಾಷ್ಟ್ರವಾಗುತ್ತಿರುವ ಇಸ್ರೇಲ್ !

ಎರಡು ರಾಷ್ಟ್ರ-ಪ್ರಭುತ್ವಗಳ ಪರಿಹಾರದ ಬಗೆಗಿನ ಪೊಳ್ಳು ಭರವಸೆಗಳನ್ನು ಹಿಂಬಾಲಿಸುತ್ತಾ ಸ್ವಲ್ಪ ಕಾಲ ಮಂದಗತಿಗೆ ಮರಳಿದ್ದ ಫೆಲೆಸ್ತೀನ್ ವಿಮೋಚನಾ ಹೋರಾಟದ ನಾಯಕರಲ್ಲಿ ಈ ಸಮಸ್ಯೆಯ ಪರಿಹಾರದ ಬಗ್ಗೆ ನಿಧಾನವಾಗಿ ಮೂಡುತ್ತಿರುವ ಚಿಂತನೆಯೇನೆಂದರೆ ಎರಡು ರಾಷ್ಟ್ರಪ್ರಭುತ್ವಗಳ ಬದಲಿಗೆ ಒಂದು ಪ್ರಭುತ್ವ-ಎರಡು ರಾಷ್ಟದ ಪರಿಹಾರ. ಎಂದರೆ ಒಂದೇ ರಾಷ್ಟ್ರಪ್ರಭುತ್ವದ ಕೆಳಗೆ ಜನಾಂಗ ಅಥವಾ ಧಾರ್ಮಿಕ ಶ್ರದ್ಧೆಯ ತಾರತಮ್ಯವಿಲ್ಲದೆ ಸಮಾನ ನಾಗರಿಕರಾಗಿ ಬಾಳುವ ಏಕ ರಾಷ್ಟ್ರಪ್ರಭುತ್ವದ ಪರಿಹಾರ. ಇಸ್ರೇಲ್ ಪ್ರಭುತ್ವವು ಎಲ್ಲೆಡೆ ಸಾವು ಮತ್ತು ವಿನಾಶಗಳನ್ನು ಹರಡುವುದನ್ನು ಮುಂದುವರಿಸುತ್ತಿರುವಾಗಲೇ ಫೆಲೆಸ್ತೀನಿಯರ ಈ ನಿಲುವಿನ ಹಿಂದಿನ ವಿವೇಕವೂ ಇನ್ನಷ್ಟು ನಿಚ್ಚಳಗೊಳ್ಳಲಿದೆ. ಇದನ್ನು ಹೊರತುಪಡಿಸಿದ ಇನ್ಯಾವುದೇ ಪರ್ಯಾಯವು ಇಡೀ ಪ್ರದೇಶವನ್ನು ಮತ್ತು ಜಗತ್ತನ್ನು ಮತ್ತೊಂದು ವಿನಾಶಕಾರಿ ಸಂಘರ್ಷಕ್ಕೆ ದೂಡಲಿದೆ.

ಇತ್ತೀಚೆಗೆ ಇಸ್ರೇಲ್‌ನ ಸಂಸತ್ತು ಇಸ್ರೇಲ್ ಯೆಹೂದಿ ಜನರ ರಾಷ್ಟ್ರ ಪ್ರಭುತ್ವವೆಂದು ಘೋಷಿಸಿದೆ. ಇದು ಫೆಲೆಸ್ತೀನಿಯರನ್ನು ತಮ್ಮ ತಾಯ್ನೆಲದಿಂದ ಶಾಶ್ವತವಾಗಿ ದೂರವಾಗಿಸುವ ಉದ್ದೇಶದಿಂದಲೇ ರೂಪಿಸಿರುವ ಹುನ್ನಾರವಾಗಿದೆ. ಹೀಗಾಗಿಯೇ ಈ ಕ್ರಮವು ಸಕಾರಣವಾದ ಆಕ್ರೋಶ ಮತ್ತು ಆತಂಕಗಳನ್ನು ಕೆರಳಿಸಿದೆ. ಜಾಗತಿಕ ಸಮುದಾಯದ ಸ್ಥಾಪಿತ ಸರಕಾರಗಳು ಈ ಕ್ರಮವನ್ನು ಖಂಡಿಸಲು ಕೆಲವು ವಾಕ್ಯಗಳನ್ನು ಬಳಸಿವೆ. ಆದರೆ ಕೂಡಲೇ ತಮ್ಮ ಎಂದಿನ ಉದಾಸೀನ ಧೋರಣೆಗೆ ಮರಳಿವೆ. ವ್ಯೆಹಾತ್ಮಕ ವಾಸ್ತವಗಳು ನ್ಯಾಯದ ಪರವಾಗಿ ಮಾಡುವ ಯಾವುದೇ ಮಧ್ಯಪ್ರವೇಶದ ವಿರುದ್ಧವಾಗಿದ್ದಾಗ ಉದಾಸೀನವೊಂದೇ ಲಭ್ಯವಿರುವ ಏಕೈಕ ಮಾರ್ಗವಾಗಿರುತ್ತದೆ. ಜಗತ್ತಿನ ಏಕಮಾತ್ರ ಸೂಪರ್ ಪವರ್ ಆಗಿರುವ ಅಮೆರಿಕದಿಂದ ಬೇಷರತ್ ಬೆಂಬಲವನ್ನು ಪಡೆದಿರುವ ಹಾಗೂ ತನ್ನ ಸಂಭಾವ್ಯ ಶತ್ರುಗಳ ಒಟ್ಟಾರೆ ಶಕ್ತಿಬಲಗಳಿಗಿಂತಲೂ ಎಷ್ಟೋ ಪಟ್ಟು ಹೆಚ್ಚು ಮಿಲಿಟರಿ ಪಡೆಗಳು ಸುತ್ತಲೂ ನಿಯೋಜಿತವಾಗಿರುವ ಸಂದರ್ಭದಲ್ಲಿ ಇಸ್ರೇಲನ್ನು ರಣರಂಗದಲ್ಲಿ ಎದುರಿಸುವುದು ದುಸ್ಸಾಧ್ಯವೆಂಬ ತೀರ್ಮಾನಕ್ಕೆ ಜಗತ್ತು ಬಂದಿದೆ. ನಾಗರಿಕರೊಡಗಿನ ವ್ಯವಹಾರಗಳಲ್ಲಿ ಅನುಸರಿಸಬೇಕಾದ ಮಾನವೀಯ ವರ್ತನೆಗಳ ತತ್ವಗಳನ್ನೆಲ್ಲಾ ಗಾಳಿಗೆ ತೂರುತ್ತಾ ಯಾವುದೇ ಶಿಕ್ಷಾಭೀತಿಯಿಲ್ಲದ ಇತಿಹಾಸವು ಇಸ್ರೇಲ್‌ನ ಬೆನ್ನಿಗಿರುವುದರಿಂದ ನೈತಿಕ ನೆಲಗಟ್ಟಿನ ಮೇಲೂ ಅದನ್ನೆದುರಿಸಲು ಸಾಧ್ಯವಿಲ್ಲ.

 ದಮನಕಾರಿ ವಿದ್ಯಮಾನದ ಬಗ್ಗೆ ಇಂದು ಜಗತ್ತೇ ತೋರಿಸುತ್ತಿರುವ ಉದಾಸೀನಕ್ಕೆ ವರ್ತಮಾನದ ಮತ್ತೊಂದು ಕಾರಣವೂ ಇದೆ. ಜಗತ್ತಿನಾದ್ಯಂತ ಹಳೆಯ ನ್ಯಾಯಪ್ರಜ್ಞೆಯ ಮೌಲ್ಯಗಳು ಕಣ್ಮರೆಯಾಗುತ್ತಾ ಅದಕ್ಕಿಂತಲೂ ಸನಾತನವಾದ ಅಮಾನವೀಯ ವರ್ಣ ಮತ್ತು ಜನಾಂಗೀಯ ಮೇಲರಿಮೆಯ ಮೌಲ್ಯಗಳು ಆವರಿಸಿಕೊಳ್ಳುತ್ತಿವೆ. ಪ್ರಾಯಶಃ ಇಸ್ರೇಲ್ ಈ ಬದಲಾವಣೆಗೆ ಬೇಕಾದ ದಾರಿಯನ್ನು ತೋರಿಸಿಕೊಡುತ್ತಿದೆ. ಗತದಲ್ಲಿ ಏರ್ಪಟ್ಟಿರುವ ಎಲ್ಲಾ ಅಸಮಾನತೆಯ ರಚನೆಗಳಿಗೂ ಗಣರಾಜ್ಯದ ಸಾರ್ವತ್ರಿಕ ಮೌಲ್ಯಗಳು ಪರಿಹಾರವನ್ನು ಒದಗಿಸುತ್ತದೆಂದು ಜ್ಞಾನೋದಯ (ಎನ್‌ಲೈಟನ್‌ಮೆಂಟ್) ಯುಗದ ಕಾಲದಿಂದಲೂ ನೀಡುತ್ತ ಬಂದಿರುವ ಭರವಸೆಗಳು ಎಷ್ಟು ಟೊಳ್ಳೆಂಬುದಕ್ಕೆ ಇಸ್ರೇಲ್ ಜೀವಂತ ನಿದರ್ಶನವಾಗಿದೆ. ಇಸ್ರೇಲನ್ನು ಯೆಹೂದಿ ಜನರ ರಾಷ್ಟ್ರ ಪ್ರಭುತ್ವವೆಂದು ಘೋಷಿಸಿ ಕಳೆದ ಜುಲೈ 19ರಂದು ಇಸ್ರೇಲ್‌ನ ನೆಸೆಟ್ (ಇಸ್ರೇಲ್‌ನ ಸಂಸತ್ತು) ಜಾರಿ ಮಾಡಿದ ಕಾಯ್ದೆಯನ್ನು ಯೆಹೂದಿ ದುರಭಿಮಾನಿ ವರ್ತುಲವು ಸಂಭ್ರಮದಿಂದ ಸ್ವಾಗತಿಸಿದೆ. ದುರಭಿಮಾನಿ ಯೆಹೂದಿ ಪ್ರಭುತ್ವವಾದಿ (ಜಿಯೋನಿಸ್ಟರು)ಗಳ ಉದ್ದೇಶಗಳನ್ನು ಸ್ಪಷ್ಟವಾಗಿ ಹೇಳುತ್ತಿದ್ದ ಅವರ ಕ್ರಮಗಳನ್ನು ಗಮನಿಸದೆ ಕೇವಲ ಅವರ ಶಬ್ದಾಡಂಬರಗಳ ಮಾತುಗಳನ್ನು ಮಾತ್ರ ನೆಚ್ಚಿಕೊಂಡಿದ್ದಂಥವರು ಇಸ್ರೇಲ್‌ನ ಈ ಕ್ರಮದಿಂದ ಆಘಾತಕ್ಕೊಳಗಾಗಿದ್ದಾರೆ ಮತ್ತು ಈ ಕಾನೂನನ್ನು ಜಾರಿ ಮಾಡುವ ಮೂಲಕ ಇಸ್ರೇಲ್ ಪ್ರಭುತ್ವದ ತಾತ್ವಿಕ ಮೌಲ್ಯಗಳಿಗೆ ಅಪಚಾರ ಎಸಗಲಾಗಿದೆ ಎಂದು ಗೋಳಿಡುತ್ತಿದ್ದಾರೆ. ಉದಾಹರಣೆಗೆ ಇಸ್ರೇಲ್‌ನ ಖ್ಯಾತ ಸಂಗೀತ ನಿರ್ದೇಶಕ ಮತ್ತು ಪಿಯಾನ್ ವಾದಕ ದೇನಿಯಲ್ ಬಾರನ್‌ಬೋಯಿಮ್ ಅವರು ಇಸ್ರೇಲ್‌ನ ಈ ರಾಷ್ಟ್ರ ಪ್ರಭುತ್ವ ಕಾಯ್ದೆಯು ‘‘ಇಸ್ರೇಲ್‌ನ ಸ್ವಾತಂತ್ರ್ಯ ಘೋಷಣೆಯಲ್ಲಿದ್ದ ಮೌಲ್ಯಗಳಿಗೆ ಎಸಗಿರುವ ದ್ರೋಹ’’ವೆಂದು ಸ್ವಲ್ಪಆಕ್ರೋಶದಿಂದಲೇ ಪ್ರತಿಕ್ರಿಯಿಸಿದ್ದಾರೆ. ಈ ಸ್ವಾತಂತ್ರ್ಯ ಘೋಷಣೆಯಾದದ್ದು 1948ರಲ್ಲಿ. ಆ ಸಂದರ್ಭದಲ್ಲಿ ಯೂರೋಪಿನ ನಿರಾಶ್ರಿತ ಯೆಹೂದಿಗಳಿಂದ ಕೂಡಿದ್ದ ಇಸ್ರೇಲ್ ಆಗತಾನೇ ಜನ್ಮ ತಾಳುತ್ತಿತ್ತು ಮತ್ತು ಅದು ತನ್ನ ಎಲ್ಲಾ ನಾಗರಿಕರನ್ನು ಸಮಾನವಾಗಿ ಕಾಣುವ ಮತ್ತು ನೆರೆಹೊರೆಯ ಜನತೆ ಮತ್ತು ಪ್ರಭುತ್ವಗಳೊಂದಿಗೆ ಶಾಂತಿ ಮತ್ತು ಸೌಹಾರ್ದ ಸಂಬಂಧಗಳನ್ನಿಟ್ಟುಕೊಳ್ಳುವ ಭರವಸೆಯನ್ನೂ ಸಹ ನೀಡಿತ್ತು. ಬಾರೆನ್ಬೋಯಿಮ್ ಆವರ ಕಾಳಜಿಗಳು ಪ್ರಾಮಾಣಿಕವಾಗಿದ್ದರೂ ಅವರ ಬೋಳೆತನ ಮಾತ್ರ ಆಶ್ಚರ್ಯ ಹುಟ್ಟಿಸುತ್ತದೆ. ಜಗತ್ತಿನ ಇತಿಹಾಸದಲ್ಲಿ ಕಂಡುಬರುವ ಇಂಥ ಕ್ಷಣಗಳ ಅಧ್ಯಯನದ ಸಂಕ್ಷಿಪ್ತ ಸಾರಾಂಶವೂ ಹೇಳುವುದೇನೆಂದರೆ ಇಂತಹ ಭರವಸೆಗಳನ್ನು ನೀಡುವ ಮುನ್ನವೇ ಅದನ್ನು ಮುರಿಯುವ ವ್ಯೆಹತಂತ್ರಗಳು ಸಿದ್ಧವಾಗಿರುತ್ತವೆ. ಗತದಲ್ಲಿ ಹೀಗೆ ದ್ರೋಹಬಗೆದ ಭರವಸೆಗಳ ಉದಾಹರಣೆಗಳು ಸಾಕಷ್ಟಿವೆ. ಅಮೆರಿಕದ ಹಕ್ಕುಗಳ ಸನ್ನದು ಮತ್ತು ಫ್ರೆಂಚ್ ಕ್ರಾಂತಿಯಲ್ಲಿ ಘೋಷಣೆಯಾದ ಮಾನವರ ಮತ್ತು ನಾಗರಿಕರ ಹಕ್ಕುಗಳ ಸನ್ನದುಗಳೆರಡೂ ತಾವು ಕೊಟ್ಟ ಭರವಸೆಗಳನ್ನು ಮುರಿದು ಗುಲಾಮಗಿರಿ, ಜನಾಂಗೀಯವಾದ, ಸೈನಿಕ ದುರಾಕ್ರಮಣ ಮತ್ತು ವಸಾಹತುವಾದಗಳನ್ನು ಪಾಲಿಸಿದವು.

ಹಾಗಿದ್ದರೂ, ಇಸ್ರೇಲ್‌ನ ಹುಟ್ಟು ಮತ್ತು ಅದರ ನಂತರದ ಗುಣಲಕ್ಷಣಗಳನ್ನು ಆದರ್ಶಗಳಿಗೆ ಬಗೆದ ದ್ರೋಹವೆಂಬ ರೀತಿಯಲ್ಲಿ ಬಣ್ಣಿಸುವುದು ಸಂಪೂರ್ಣವಾಗಿ ಸರಿಹೊಂದುವುದಿಲ್ಲ. ಯೆಹೂದಿ ದುರಭಿಮಾನಿ ಯೋಜನೆಗಳ ಹುಟ್ಟೇ ನೆರೆಹೊರೆಯ ಮೇಲೆ ಸೈನಿಕ ದುರಾಕ್ರಮಣ ನಡೆಸಲೇ ಬೇಕಾದ ಅಗತ್ಯವನ್ನು ಆಧರಿಸಿತ್ತು ಮತ್ತು ಅದನ್ನು ಇಸ್ರೇಲ್ ಸಾಮ್ರಾಜ್ಯಶಾಹಿ ಶಕ್ತಿಯೊಂದರ ಸಂಪೂರ್ಣ ಬೆಂಬಲದೊಂದಿಗೆ ಸಾಧಿಸಿತು. ಅದು ತನ್ನ ಆಶಯಗಳನ್ನು ಫೆಲೆಸ್ತೀನ್ ಮೇಲೆ ಕೇಂದ್ರೀಕರಿಸುವುದರ ಮೂಲಕ ಈಡೇರಿಸಿಕೊಳ್ಳಲು ತೀರ್ಮಾನಿಸಿದಾಗ ಯೆಹೂದಿ ಆಧಿಪತ್ಯವಾದಿಗಳು ‘‘ಜನರಿಲ್ಲದ ಭೂಮಿ, ನೆಲೆಯಿಲ್ಲದ ಜನರಿಗೆ’’ ಎಂಬ ಘೋಷಣೆಯನ್ನು ನೀಡಿ ಅಲ್ಲಿದ್ದ ಇಡೀ ಜನತೆಯ ಅಸ್ತಿತ್ವವನ್ನೇ ಏಕಾಏಕಿ ನಿರಾಕರಿಸಿಬಿಟ್ಟರು. ಒಂದು ಜನಾಂಗವನ್ನೇ ಹೊರಹಾಕುವುದರ ಮೂಲಕ ಇಸ್ರೇಲ್ ಸ್ಥಾಪನೆಯಾಯಿತು. ಈ ಕ್ರಮವು ಅತ್ಯಂತ ದಮನಕಾರಿಯಾಗಿದ್ದರೂ ನಿರೀಕ್ಷಿತ ಫಲಿತಾಂಶವನ್ನು ನೀಡಿದ್ದೇನೋ ನಿಜ. ಆದರೆ ಅಲ್ಲಿದ್ದ ಫೆಲೆಸ್ತೀನಿ ಅರಬ್ ಅಲ್ಪಸಂಖ್ಯಾತರಿಂದ ಆ ಯೆಹೂದಿ ಪ್ರಭುತ್ವ ಮುಜುಗರವನ್ನು ಅನುಭವಿಸಬೇಕಾಯಿತು. 1967ರ ಸೈನಿಕ ದಿಗ್ವಿಜಯವು ಸೃಷ್ಟಿಸಿದ ಉನ್ಮಾದವು ಪ್ರಜಾತಾಂತ್ರಿಕ ತತ್ವಗಳು ಮತ್ತು ಯೆಹೂದಿ ಮೇಲಧಿಪತ್ಯದ ನಡುವಿನ ಸಂಘರ್ಷವನ್ನು ಮರೆಮಾಡಿತ್ತು. ಆದರೆ ಇದೀಗ ಇಸ್ರೇಲ್ ಪ್ರಭುತ್ವದಡಿ ಜೀವಿಸುತ್ತಿರುವ ಜನಸಂಖ್ಯೆಯಲ್ಲಿ ಯೆಹೂದಿಗಳೂ ಅಲ್ಪಸಂಖ್ಯಾತರೆಂಬ ಕಟು ಸತ್ಯದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆ ಸಂಘರ್ಷ ತಲೆ ಎತ್ತುತ್ತಿದೆ.

ಜಗತ್ತಿನ ಅತ್ಯಂತ ಪ್ರಕ್ಷುಬ್ಧಮಯ ಭಾಗದಲ್ಲಿದ್ದರೂ ತಾನೊಂದು ಪ್ರಜಾತಂತ್ರವಾಗಿಯೇ ಉಳಿದುಕೊಂಡಿದೆ ಎಂದು ಬಹಳ ಸಮಯದಿಂದ ನಾಟಕವಾಡುತ್ತಿದ್ದ ಇಸ್ರೇಲ್ ಇದೀಗ ಅತ್ಯಂತ ಬಹಿರಂಗವಾಗಿಯೇ ಪಕ್ಷಪಾತೀ ಜನಾಂಗೀಯ ನೀತಿಯನ್ನು ಅಪ್ಪಿಕೊಳ್ಳುತ್ತಿರುವುದರಲ್ಲಿ ಅಂತಹ ಆಶ್ಚರ್ಯವೇನಿಲ್ಲ. ಇಸ್ರೇಲ್ ಜಾರಿಗೆ ತಂದಿರುವ ಈ ಹೊಸ ಜನಾಂಗೀಯವಾದಿ ಕಾನೂನು ಜಾಗತಿಕವಾಗಿ ಅಂಥ ದೊಡ್ಡ ಆಕ್ರೋಶವನ್ನೇನೂ ಹುಟ್ಟುಹಾಕಿಲ್ಲ. ಏಕೆಂದರೆ ಪಶ್ಚಿಮದ ದೇಶಗಳೂ ಅದರಲ್ಲೂ ವಿಶೇಷವಾಗಿ ಅಮೆರಿಕವು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಒಂದು ಮೂಲಭೂತ ಮೌಲ್ಯವನ್ನಾಗಿ ಪರಿಗಣಿಸುತ್ತಿಲ್ಲ ಮತ್ತು ಪ್ರಜಾತಂತ್ರವನ್ನು ಒಂದು ಹಕ್ಕಾಗಿಯಲ್ಲದೆ ಒಂದು ಸೌಲಭ್ಯವನ್ನಾಗಿ ಮಾತ್ರ ಪರಿಗಣಿಸಲು ಪ್ರಾರಂಭಿಸಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್‌ನಲ್ಲಿ ಈ ಕಾನೂನು ಜಾರಿಯಾಗಿದೆ.

ಇಸ್ರೇಲ್‌ನ ಹುಟ್ಟೇ ಒಂದು ಅಐತಿಹಾಸಿಕವಾದದ್ದು. ಅದು ಆ ಕಾಲಘಟ್ಟದಲ್ಲಿ ಪಾಶ್ಚಿಮಾತ್ಯ ವಸಾಹತುಶಾಹಿಗಳು ಸಂಪೂರ್ಣವಾಗಿ ಹಿಮ್ಮೆಟ್ಟುವ ಮುನ್ನ ಕೊಟ್ಟ ಕೊನೆಯ ಪೆಟ್ಟು. ಪಾಶ್ಚಿಮಾತ್ಯ ಬಂಡವಾಳಶಾಹಿ ದೇಶಗಳು ವಸಾಹತುಶಾಹಿ ಸೌಕರ್ಯಗಳನ್ನು ಕಳೆದುಕೊಂಡ ನಂತರ ಕಲ್ಯಾಣ ರಾಜ್ಯದ ಪರಿಭಾಷೆಯನ್ನು ಬಳಸಿಕೊಂಡು ತಮ್ಮ ಬಂಡವಾಳಶಾಹಿ ಯಂತ್ರಾಂಗವನ್ನು ಮುನ್ನಡೆಸಲು ಈ ಹಿಂದಿನ ವಸಾಹತುಶಾಹಿ ದೇಶಗಳಿಂದ ವಲಸೆ ಕಾರ್ಮಿಕರನ್ನು ಬರಮಾಡಿಕೊಂಡಿತ್ತು ಮತ್ತು ಆ ಬಲದ ಮೂಲಕ ತನ್ನನ್ನು ತಾನು ಮತ್ತೆ ಗಟ್ಟಿಯಾಗಿ ಕಟ್ಟಿಕೊಂಡಿತು. 1980ರ ವೇಳೆಗೆ ಕಲ್ಯಾಣ ರಾಜ್ಯ ಮತ್ತು ಅಭಿವೃದ್ಧಿಗಳೆರಡೂ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡು ನವಉದಾರವಾಗಿ ಚೌಕಟ್ಟಿನಲ್ಲಿ ಪರಿಹಾರಗಳನ್ನು ಅರಸಲು ಪ್ರಾರಂಭಿಸಿದ್ದವು. ರಾಷ್ಟ್ರಗಳೊಳಗೆ ಮತ್ತು ರಾಷ್ಟ್ರಗಳ ನಡುವೆ ಅಸಮಾನತೆಗಳು ಹೆಚ್ಚುತ್ತಿದ್ದ ಸಂದರ್ಭದಲ್ಲಿ ವರ್ಣ, ಜನಾಂಗ, ಲಿಂಗ ಅಥವಾ ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಭರವಸೆಗಳನ್ನು ಪಾಲಿಸುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಿದ್ದರಿಂದ ಅವನ್ನು ಕೇವಲ ಬಾಯುಪಚಾರದಲ್ಲಿ ಮಾತ್ರ ಪಾಲಿಸುವುದು ಪ್ರಾರಂಭವಾಯಿತು.

ಹೆಚ್ಚುತ್ತಿರುವ ತಳಸಮುದಾಯಗಳ ಅಸಮಾಧಾನಗಳು ಒಂದೆಡೆ ಮೇಲ್ವರ್ಗ ಮತ್ತು ಮಧ್ಯಮ ವರ್ಗಗಳಲ್ಲಿ ಅಭದ್ರತೆಯನ್ನು ಹುಟ್ಟುಹಾಕುವು ದರ ಜೊತೆಜೊತೆಗೆ ತಮ್ಮ ವಿಶೇಷ ಸವಲತ್ತುಗಳಿಗಾಗಿ ನವೋತ್ಸಾಹದ ಪ್ರತಿಪಾದನೆಯನ್ನೂ ಹುಟ್ಟುಹಾಕಿದವು. ಜಗತ್ತು ಅಲ್ಪಕಾಲಾವಧಿಗೆ ಕಂಡ ಅಭಿವೃದ್ಧಿಯ ಸಂಪನ್ನತೆಯು ಅಂತರ್ಗತವಾಗಿದ್ದ ಜನಾಂಗೀಯ ತಾರತಮ್ಯದ ಮೇಲೆ ತೆಳ್ಳನೆಯ ಮುಸುಕನ್ನಷ್ಟೆ ಹೊದಿಸಿತ್ತು. ಹೀಗಾಗಿ ಹೊಸ ರಾಷ್ಟ್ರೀಯವಾದಿ ಚಿಂತನೆಗಳು ಜಗತ್ತಿನಾದ್ಯಂತ ನಿರ್ದಿಷ್ಟವಾದ ಜನಾಂಗೀಯ ಸ್ವರೂಪದಲ್ಲೇ ಅಭಿವ್ಯಕ್ತಗೊಳ್ಳುತ್ತಿರುವುದರಲ್ಲಿ ಅಂತಹ ಆಶ್ಚರ್ಯವೇನಿಲ್ಲ. ತಾನು ಒಂದು ಯೆಹೂದಿ ಜನತೆಯ ರಾಷ್ಟ್ರಪ್ರಭುತ್ವವೆಂದು ಔಪಚಾರಿಕವಾಗಿ ಘೋಷಿಸಿಕೊಳ್ಳಲು ಇಸ್ರೇಲ್ ಅಮೆರಿಕದಲ್ಲಿ ಆಕ್ರಮಣಶೀಲ ಜನಾಂಗೀಯವಾದಿಯಾಗಿರುವ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುವ ತನಕ ಕಾಯಬೇಕಾಯಿತು. ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಅಷ್ಟುಮಾತ್ರವಲ್ಲದೆ ಇನ್ನೂ ಸಾಕಷ್ಟು ಕಾಲ ಇಡೀ ಫೆಲೆಸ್ತೀನ್ ಪ್ರದೇಶದಾದ್ಯಂತ ಯೆಹೂದಿ ನಿಯಂತ್ರಣವು ಮುಂದುವರಿಯಲಿದೆ ಎಂದು ಸಹ ಹೇಳಿದ್ದಾರೆ.

ಆದರೆ ಎಷ್ಟೇ ಅಸಹಾಯಕಗೊಳಿಸಿ ಮೂಲೆಗುಂಪು ಮಾಡಲ್ಪಟ್ಟಿದ್ದರೂ ಫೆಲೆಸ್ತೀನಿಯರು ಧೃತಿಗೆಡದೆ ಹೋರಾಟವನ್ನು ಮುಂದುವರಿಸಬಹುದೆಂಬ ನಿಚ್ಚಳವಾದ ಆದರೆ ಕಟುವಾದ ಭವಿಷ್ಯವೂ ಸಹ ಗೋಚರಿಸುತ್ತಿದೆ. ಎರಡು ರಾಷ್ಟ್ರ-ಪ್ರಭುತ್ವಗಳ ಪರಿಹಾರದ ಬಗೆಗಿನ ಪೊಳ್ಳು ಭರವಸೆಗಳನ್ನು ಹಿಂಬಾಲಿಸುತ್ತಾ ಸ್ವಲ್ಪ ಕಾಲ ಮಂದಗತಿಗೆ ಮರಳಿದ್ದ ಫೆಲೆಸ್ತೀನ್ ವಿಮೋಚನಾ ಹೋರಾಟದ ನಾಯಕರಲ್ಲಿ ಈ ಸಮಸ್ಯೆಯ ಪರಿಹಾರದ ಬಗ್ಗೆ ನಿಧಾನವಾಗಿ ಮೂಡುತ್ತಿರುವ ಚಿಂತನೆಯೇನೆಂದರೆ ಎರಡು ರಾಷ್ಟ್ರಪ್ರಭುತ್ವಗಳ ಬದಲಿಗೆ ಒಂದು ಪ್ರಭುತ್ವ-ಎರಡು ರಾಷ್ಟದ ಪರಿಹಾರ. ಎಂದರೆ ಒಂದೇ ರಾಷ್ಟ್ರಪ್ರಭುತ್ವದ ಕೆಳಗೆ ಜನಾಂಗ ಅಥವಾ ಧಾರ್ಮಿಕ ಶ್ರದ್ಧೆಯ ತಾರತಮ್ಯವಿಲ್ಲದೆ ಸಮಾನ ನಾಗರಿಕರಾಗಿ ಬಾಳುವ ಏಕ ರಾಷ್ಟ್ರಪ್ರಭುತ್ವದ ಪರಿಹಾರ. ಇಸ್ರೇಲ್ ಪ್ರಭುತ್ವವು ಎಲ್ಲೆಡೆ ಸಾವು ಮತ್ತು ವಿನಾಶಗಳನ್ನು ಹರಡುವುದನ್ನು ಮುಂದುವರಿಸುತ್ತಿರುವಾಗಲೇ ಫೆಲೆಸ್ತೀನಿಯರ ಈ ನಿಲುವಿನ ಹಿಂದಿನ ವಿವೇಕವೂ ಇನ್ನಷ್ಟು ನಿಚ್ಚಳಗೊಳ್ಳಲಿದೆ. ಇದನ್ನು ಹೊರತುಪಡಿಸಿದ ಇನ್ಯಾವುದೇ ಪರ್ಯಾಯವು ಇಡೀ ಪ್ರದೇಶವನ್ನು ಮತ್ತು ಜಗತ್ತನ್ನು ಮತ್ತೊಂದು ವಿನಾಶಕಾರಿ ಸಂಘರ್ಷಕ್ಕೆ ದೂಡಲಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top