ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟದ ಸುತ್ತ
-

ಒಟ್ಟು ಬೇಡಿಕೆಯ ಪ್ರಮಾಣ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ದುಡಿಯುವ ವರ್ಗಗಳ ಹಿತಾಸಕ್ತಿಗೆ ವ್ಯತಿರಿಕ್ತವಾಗಿ, ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಯ ಪರವಾಗಿ ಆದಾಯ ವಿತರಣೆಯ ಕ್ರಮಗಳನ್ನು ಅನುಸರಿಸುವುದರ ದುಷ್ಪರಿಣಾಮಗಳು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗುತ್ತವೆ. ಆದರೆ ಇದರಿಂದ ಉನ್ಮತ್ತ ಹಿಂದೂ ರಾಷ್ಟ್ರೀಯತೆ ಮತ್ತಷ್ಟು ಉನ್ಮಾದದಿಂದ ವೃದ್ಧಿಯಾಗುತ್ತದೆ. ಆರ್ಥಿಕ ಸಂಕಷ್ಟವನ್ನು ಜನಸಾಮಾನ್ಯರಿಂದ ಮರೆಮಾಚಲು ಅವರನ್ನು ಸದಾ ಆಘಾತ ಮತ್ತು ಅಚ್ಚರಿಯ ಭಾವನೆಯಲ್ಲೇ ಬದುಕುವಂತೆ ಮಾಡಿ ಸರಕಾರದ ವೈಫಲ್ಯಗಳನ್ನು ಮುಚ್ಚಿಡಲಾಗುತ್ತದೆ.
ವಸಾಹತು ವಿರೋಧಿ ರಾಷ್ಟ್ರೀಯತೆಯ ರೀತಿಯಲ್ಲಿ ಹಿಂದುತ್ವ ರಾಷ್ಟ್ರೀಯತೆ ಅರ್ಥಶಾಸ್ತ್ರವನ್ನು ಗ್ರಹಿಸುವುದಿಲ್ಲ. ಕಾರಣ ಸರಳ. ವಸಾಹತು ವಿರೋಧಿ ರಾಷ್ಟ್ರೀಯತೆಯ ವಿರೋಧದ ಹಿಂದೆ ವಸಾಹತು ಕಾಲದ ಶೋಷಣೆಯ ಗ್ರಹಿಕೆ ಇತ್ತು. ಹಾಗಾಗಿ ಅಲ್ಲಿ ವಸಾಹತುಶಾಹಿಯ ಆಳುವ ವರ್ಗಗಳು ಮತ್ತು ಹಿಂದಿನ ಇತರ ಆಳುವ ವರ್ಗಗಳ ನಡುವೆ ಇದ್ದ ವ್ಯತ್ಯಾಸವನ್ನು ಗ್ರಹಿಸಲು ಸಾಧ್ಯವಾಗಿತ್ತು. ವಸಾಹತು ಪೂರ್ವದ ಆಳುವ ವರ್ಗಗಳು ರೈತಾಪಿಯಿಂದ ಸ್ವಾಧೀನಪಡಿಸಿಕೊಂಡ ಆರ್ಥಿಕ ಮಿಗುತಾಯವನ್ನು ಸ್ಥಳೀಯವಾಗಿಯೇ ವ್ಯಯ ಮಾಡಿದ್ದರು. ಹಾಗಾಗಿ ಇಲ್ಲಿಯೇ ಉದ್ಯೋಗ ಸೃಷ್ಟಿಯೂ ಉಂಟಾಗಿತ್ತು. ಆದರೆ ವಸಾಹತು ಆಳ್ವಿಕೆಯಲ್ಲಿ ರೈತಾಪಿಯಿಂದ ಸ್ವಾಧೀನಪಡಿಸಿಕೊಂಡ ಆರ್ಥಿಕ ಮಿಗುತಾಯವನ್ನು ವಿದೇಶಗಳಿಗೆ ರವಾನಿಸಲಾಗಿತ್ತು. ತತ್ಪರಿಣಾಮ ಭಾರತದಲ್ಲಿ ಸ್ಥಳೀಯ ಉದ್ಯೋಗ ಸೃಷ್ಟಿಗೆ ಹೊಡೆತ ಬಿದ್ದಿತ್ತು. ಈ ಮೂಲ ವ್ಯತ್ಯಾಸವನ್ನು ಗುರುತಿಸದ ಹಿಂದುತ್ವ ಪರಿಕಲ್ಪನೆ, ಮೊಘಲರು ಮತ್ತು ಬ್ರಿಟಿಷರನ್ನು ಒಂದೇ ಸ್ತರದಲ್ಲಿಟ್ಟು ನೋಡುತ್ತದೆ, ಏಕೆಂದರೆ ಹಿಂದುತ್ವ ಅರ್ಥಶಾಸ್ತ್ರವನ್ನು ಗ್ರಹಿಸುವುದಿಲ್ಲ.
ಒಂದು ರೀತಿಯಲ್ಲಿ ಈ ಗ್ರಹಿಕೆಯ ಕೊರತೆಯೇ ಹಿಂದುತ್ವದ ಶಕ್ತಿಯಾಗಿದೆ. ನವ ಉದಾರವಾದಿ ಬಂಡವಾಳ ವ್ಯವಸ್ಥೆ ತನ್ನ ಉತ್ಸಾಹವನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಹಣಕಾಸು ಕಾರ್ಪೊರೇಟ್ ಅಲ್ಪ ಜನಾಧಿಪತ್ಯಕ್ಕೆ ಈ ಹಿಂದೆ ಬಳಸಲಾಗುತ್ತಿದ್ದ ಸೈದ್ಧಾಂತಿಕ ನಿಲುವುಗಳಿಗಿಂತಲೂ ಭಿನ್ನವಾದ ನಿಲುವಿನ ಆವಶ್ಯಕತೆ ಹೆಚ್ಚಾಗಿದೆ. ಜಿಡಿಪಿ ವೃದ್ಧಿಯ ಭರವಸೆ ಮತ್ತು ಅದರಿಂದ ಉಂಟಾಗುವ ಲಾಭದಾಯಕ ಪರಿಣಾಮಗಳ ಸೈದ್ಧಾಂತಿಕ ನಿಲುವು ಈಗ ಫಲಕಾರಿಯಾಗಿ ಕಾಣುತ್ತಿಲ್ಲ. ಆರ್ಥಿಕ ಬೆಳವಣಿಗೆಯಲ್ಲಿ ಹಿಂಜರಿತ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ನಿಲುವು ಪ್ರಭಾವಶಾಲಿಯಾಗಿ ಕಾಣುವುದೂ ಇಲ್ಲ. ಈ ಹಣಕಾಸು ಆಧಿಪತ್ಯದ ದಿಕ್ಕಿನಲ್ಲಿ ಪ್ರಭುತ್ವದ ನೀತಿಗಳನ್ನು ಅನುಸರಿಸುತ್ತಲೇ ಕೆಳಹಂತದಲ್ಲಿ ವ್ಯಕ್ತವಾಗಬಹುದಾದ ಎಲ್ಲ ರೀತಿಯ ಪ್ರತಿರೋಧಗಳನ್ನು ತಡೆಗಟ್ಟಲು ವಿಭಿನ್ನವಾದ ಸೈದ್ಧಾಂತಿಕ ನಿಲುವು ಅವಶ್ಯವಾಗಿ ಬೇಕಾಗುತ್ತದೆ. ಈ ನಿಲುವು ಹಿಂದುತ್ವದ ಮೂಲಕ ಲಭ್ಯವಾಗುತ್ತದೆ. ಪ್ರಸ್ತುತ ಭಾರತವನ್ನು ಆಳುತ್ತಿರುವ ಹಿಂದುತ್ವ ಕಾರ್ಪೊರೇಟ್ ಮೈತ್ರಿಕೂಟದ ತಳಪಾಯವೂ ಇದೇ ಆಗಿದೆ.
ಒಂದು ವೇಳೆ ಹಿಂದುತ್ವ ಅರ್ಥಶಾಸ್ತ್ರವನ್ನೇ ಹೆಚ್ಚು ನೆಚ್ಚಿಕೊಂಡಿದ್ದು, ನವ ಉದಾರವಾದದ ವೈರುಧ್ಯಗಳಿಂದ ಮತ್ತು ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಅನುಷ್ಠಾನದ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ತನ್ನ ಆರ್ಥಿಕ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಪ್ರಯತ್ನಿಸಿದ್ದಲ್ಲಿ ಅದು ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ಉಪಯುಕ್ತವಾಗಿ ಕಾಣುತ್ತಿರಲಿಲ್ಲ. ಆಗ ಈ ಮೈತ್ರಿಕೂಟಕ್ಕೆ ಭಂಗ ಉಂಟಾಗುತ್ತಿತ್ತು. ಅರ್ಥಶಾಸ್ತ್ರದ ವಿಚಾರಗಳಲ್ಲಿ ಹಿಂದುತ್ವದ ಅಜ್ಞಾನವೇ ಅದನ್ನು ಕಾರ್ಪೊರೇಟ್ ಹಿತಾಸಕ್ತಿಗಳ ಪರ ಇರುವಂತೆ ಮಾಡಿದೆ. ಹಾಗಾಗಿಯೇ ಈ ಮೈತ್ರಿಕೂಟವೂ ಮುಂದುವರಿದಿದೆ. ವಸಾಹತು ವಿರೋಧಿ ಹೋರಾಟದ ಹಂತದಲ್ಲಿ ಪ್ರತಿಯೊಂದು ರಾಜಕೀಯ ಬಣವೂ ಜನಸಾಮಾನ್ಯರಿಗೆ ಒದಗಿಸಬಹುದಾದ ಪರಿಹಾರ ಮಾರ್ಗಗಳನ್ನು ವ್ಯಕ್ತಪಡಿಸಲು ಹಾತೊರೆಯುತ್ತಿದ್ದವು. ಇದಕ್ಕೆ ವ್ಯತಿರಿಕ್ತವಾಗಿ ಹಿಂದುತ್ವ ರಾಜಕಾರಣದಲ್ಲಿ ವಿಭಿನ್ನ ಸಂಕಥನ ಮಾರ್ಗವನ್ನು ಅನುಸರಿಸಲಾಗಿದ್ದು ಉನ್ಮತ್ತ ರಾಷ್ಟ್ರೀಯತೆಯ ಧೋರಣೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಇದು ವಸಾಹತು ವಿರೋಧಿ ರಾಷ್ಟ್ರೀಯತೆಗಿಂತಲೂ ಭಿನ್ನವಾಗಿದ್ದು ಜನಸಾಮಾನ್ಯರ ಬದುಕನ್ನು ಸರಿಪಡಿಸಲು ಯಾವುದೇ ರೀತಿಯಲ್ಲೂ ಪ್ರಯೋಜನಕಾರಿಯಾಗಿಲ್ಲ. ಜಾಗತಿಕ ಅಂತರ್ಯುದ್ಧದ ಸಂದರ್ಭದಲ್ಲಿ ಪರಾಕಾಷ್ಠೆ ತಲುಪಿದ್ದ ಉನ್ಮತ್ತ ರಾಷ್ಟ್ರೀಯತೆಯ ಪರಿಕಲ್ಪನೆಯನ್ನೇ ಹಿಂದುತ್ವ ಬಣವೂ ಅನುಸರಿಸುತ್ತಿದೆ.
ಭಾರತದ ರಾಜಕಾರಣದಲ್ಲಿ ಈ ರೀತಿಯ ರೂಪಾಂತರವನ್ನು ಹಿಂದೆಂದೂ ಕಂಡಿರಲಿಲ್ಲ. ಹಾಗಾಗಿಯೇ ವಿರೋಧ ಪಕ್ಷಗಳು ದಿಕ್ಕು ಕಾಣದಂತಾಗಿವೆ. ಎಡಪಕ್ಷಗಳು ತಮ್ಮ ಹಳೆಯ ನಿಲುವುಗಳಿಗೇ ಬದ್ಧವಾಗಿದ್ದು ಆಘಾತಕ್ಕೊಳಗಾಗಿದೆ ಮತ್ತು ಈಗ ಪ್ರತಿರೋಧದ ದನಿ ಎತ್ತುತ್ತಿವೆ. ಕಾಂಗ್ರೆಸ್ ಪಕ್ಷ ಗೊಂದಲಗಳ ಗೂಡಾಗಿದ್ದು ತನ್ನ ಹಳೆಯ ಮಾದರಿಯನ್ನೇ ಅನುಸರಿಸುವುದೋ ಅಥವಾ ಇಷ್ಟವಿಲ್ಲದಿದ್ದರೂ ಹಿಂದುತ್ವ ಅನುಸರಿಸುವ ಉನ್ಮತ್ತ ರಾಷ್ಟ್ರೀಯತೆಯ ಮಾರ್ಗವನ್ನು ಅನುಸರಿಸುವುದೋ ಎಂಬ ಜಿಜ್ಞಾಸೆಯಲ್ಲಿ ಕಳೆದುಹೋಗಿದೆ. ರಾಜಕೀಯ ಸಂಕಥನದಲ್ಲಿನ ಈ ರೂಪಾಂತರ ಪ್ರಕ್ರಿಯೆ ಇತ್ತೀಚಿನ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲೇ ಸ್ಪಷ್ಟವಾಗಿತ್ತು. ಚುನಾವಣೆಗೂ ಮುನ್ನ ತನ್ನ ನೆಲೆಯನ್ನು ಕಳೆದುಕೊಂಡಿದ್ದ ಬಿಜೆಪಿ, ದೇಶಾದ್ಯಂತ ಭುಗಿಲೆದ್ದಿದ್ದ ರೈತಾಪಿಯ ಆಕ್ರೋಶ ಮತ್ತು ಪ್ರಬಲ ಹೋರಾಟಗಳು ಬಿಜೆಪಿ ಸರಕಾರದ ಉಳಿವಿಗೆ ಸಂಚಕಾರ ಉಂಟುಮಾಡುವಂತಾಗಿತ್ತು. ಆದರೆ ಈ ಸಂದರ್ಭದಲ್ಲಿ ಸಂಭವಿಸಿದ ಪುಲ್ವಾಮ ಘಟನೆ ಮತ್ತು ಬಾಲಕೋಟ್ ದಾಳಿ ಉನ್ಮತ್ತ ರಾಷ್ಟ್ರೀಯತೆಯನ್ನು ಮತ್ತಷ್ಟು ಬಲಪಡಿಸಿದ್ದರಿಂದ ಬಿಜೆಪಿಯ ಗೆಲುವು ಸರಾಗವಾಗಿತ್ತು. ಕೆಲವೇ ದಿನಗಳ ಹಿಂದೆ ದಿಲ್ಲಿಗೆ ಪಾದಯಾತ್ರೆ ಬೆಳೆಸಿದ್ದ ಲಕ್ಷಾಂತರ ರೈತರೇ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರಲು ನೆರವಾಗಿದ್ದರು.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಕಾರ್ಪೊರೇಟ್ ಹಣಕಾಸು ಅಧಿಪತ್ಯದ ಪರವಾಗಿ ರೂಪಾಂತರ ಹೊಂದಿರುವ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ. ಹಿಂದುತ್ವದ ಉನ್ಮತ್ತ ರಾಷ್ಟ್ರೀಯತೆಯ ಒಂದು ಭಾಗವಾಗಿ, ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ಸಂವಿಧಾನದ ವಿಧಿ 370 ಮತ್ತು 35ಎ ರದ್ದುಪಡಿಸಲಾಗಿದ್ದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಈ ಕ್ರಮ ಕೈಗೊಂಡ ಕೂಡಲೇ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಕೇಂದ್ರ ಸರಕಾರ ಕಾರ್ಪೊರೇಟ್ ಔದ್ಯಮಿಕ ಕ್ಷೇತ್ರಕ್ಕೆ 1.45 ಲಕ್ಷ ಕೋಟಿ ರೂ.ಗಳ ತೆರಿಗೆ ರಿಯಾಯಿತಿಯನ್ನು ಘೋಷಿಸಿದೆ. ಸಾರ್ವಜನಿಕ ನಿಧಿಯನ್ನು ಕಾರ್ಪೊರೇಟ್ ಉದ್ಯಮಿಗಳ ಮಡಿಲಿಗೆ ಹಾಕುವ ಸರಕಾರದ ಈ ಕ್ರಮವನ್ನು ವಿರೋಧಿಸಬಹುದಾಗಿದ್ದ ಎಲ್ಲ ದನಿಗಳೂ ಕಾಶ್ಮೀರದಲ್ಲಿ ಸಾಧಿಸಿದ ‘ದಿಗ್ವಿಜಯ’ದ ಉನ್ಮತ್ತ ರಾಷ್ಟ್ರೀಯತೆಯಲ್ಲಿ ಕಳೆದುಹೋಗಿದ್ದವು. ಈ ತೆರಿಗೆ ರಿಯಾಯಿತಿ ದೇಶದ ಅರ್ಥವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ, ಹಾಗಾಗಿ ದೇಶದ ಉತ್ಪನ್ನ ಮತ್ತು ಉದ್ಯೋಗದ ಹಿನ್ನಡೆಗೆ ಕಾರಣವಾಗುತ್ತದೆ ಎನ್ನುವುದು ಸ್ಪಷ್ಟವಾಗಿದ್ದರೂ ಎಲ್ಲಿಯೂ ವ್ಯಕ್ತವಾಗಲೇ ಇಲ್ಲ. ಈ ತೆರಿಗೆ ರಿಯಾಯಿತಿಯನ್ನು ಸರಿದೂಗಿಸಲು ಹಣಕಾಸು ಕೊರತೆಯನ್ನು ಹಿಗ್ಗಿಸುವುದು ಸಾಧ್ಯವಿಲ್ಲ. ಏಕೆಂದರೆ ಹಾಗೆ ಮಾಡಿದರೆ ಜಾಗತೀಕರಣಗೊಂಡ ಹಣಕಾಸು ಬಂಡವಾಳ ಕೈಬಿಟ್ಟುಹೋಗುತ್ತದೆ. ಸರಕಾರ ಈ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿಲ್ಲ. ಆದ್ದರಿಂದಲೇ ಸರಕಾರ ದುಡಿಯುವ ವರ್ಗಗಳ ಸಂಪನ್ಮೂಲಗಳನ್ನು ಕಸಿದುಕೊಂಡು ಕಾರ್ಪೊರೇಟ್‌ಗಳ ಉದರ ಪೋಷಣೆ ಮಾಡುತ್ತದೆ. ದುಡಿಯುವ ವರ್ಗಗಳಿಂದ ಕಾರ್ಪೊರೇಟ್‌ಗಳಿಗೆ ಆದಾಯವನ್ನು ರವಾನಿಸುವುದರಿಂದ ಅರ್ಥವ್ಯವಸ್ಥೆಯಲ್ಲಿ ಗ್ರಾಹಕ ಬೇಡಿಕೆಯನ್ನು ಕುಗ್ಗಿಸುತ್ತದೆ.
ಏಕೆಂದರೆ ತನ್ನ ಆದಾಯದಿಂದಲೇ ಖರ್ಚು ಮಾಡುವ ಪ್ರವೃತ್ತಿ ದುಡಿಯುವ ವರ್ಗಗಳಲ್ಲಿ ಹೆಚ್ಚಾಗಿರುತ್ತದೆ. ಕಾರ್ಪೊರೇಟ್ ವಲಯ ತನ್ನ ಹೆಚ್ಚುವರಿ ಆದಾಯವನ್ನು ವಿತರಣೆಯಾಗದ ಲಾಭದ ರೂಪದಲ್ಲಿ ಸಂಗ್ರಹಿಸಿಡುತ್ತದೆ. ಈ ಹೆಚ್ಚುವರಿ ಆದಾಯದಿಂದ ಒದಗುವ ಡಿವಿಡೆಂಡ್‌ಗಳನ್ನು ಬಳಕೆ ಮಾಡುವ ಪ್ರವೃತ್ತಿಯನ್ನೂ ಕಾರ್ಪೊರೇಟ್ ವಲಯದಲ್ಲಿ ಕಾಣಲಾಗುವುದಿಲ್ಲ. ಕಾರ್ಪೊರೇಟ್ ಬಂಡವಾಳ ಹೂಡಿಕೆ ಮಾರುಕಟ್ಟೆಯ ಗಾತ್ರದ ಅಭಿವೃದ್ಧಿಯನ್ನೇ ಆಧರಿಸುವುದರಿಂದ ಈಗ ನೀಡಲಾಗಿರುವ ತೆರಿಗೆ ರಿಯಾಯಿತಿಯಿಂದ ಹೆಚ್ಚುವರಿ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಲಾಗುವುದಿಲ್ಲ. ತೆರಿಗೆ ಪಾವತಿಯ ನಂತರ ಒದಗುವ ಲಾಭಾಂಶವು ಮಾರುಕಟ್ಟೆಯ ಗಾತ್ರದಲ್ಲಿ ಯಾವುದೇ ಬದಲಾವಣೆಯನ್ನೂ ಉಂಟುಮಾಡುವುದಿಲ್ಲ. ಈ ಸನ್ನಿವೇಶದಲ್ಲಿ ಆರ್ಥಿಕತೆಯಲ್ಲಿನ ಒಟ್ಟು ಬೇಡಿಕೆ ಕುಸಿತವಾಗುವುದರಿಂದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸುತ್ತದೆ. ಒಟ್ಟು ಬೇಡಿಕೆಯಲ್ಲಿ ಕುಸಿತ ತೀವ್ರವಾಗುವುದರ ಪರಿಣಾಮ ಮುಂದಿನ ಅವಧಿಯಲ್ಲಿ ಬಂಡವಾಳ ಹೂಡಿಕೆಯೂ ಕುಸಿಯುತ್ತದೆ. ಇದರಿಂದ ಆರ್ಥಿಕ ಹಿನ್ನಡೆ ಮತ್ತಷ್ಟು ತೀವ್ರತೆಯನ್ನು ಪಡೆಯುತ್ತದೆ.
ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಆದಾಯದಲ್ಲಿನ ಅಸಮಾನತೆಯನ್ನು ಉಲ್ಬಣಗೊಳಿಸಿರುವುದಕ್ಕೆ ನವ ಉದಾರವಾದಿ ಬಂಡವಾಳ ವ್ಯವಸ್ಥೆಯೇ ಕಾರಣವಾಗಿದ್ದು ಪ್ರಸ್ತುತ ಬಿಕ್ಕಟ್ಟಿಗೂ ಇದೇ ಕಾರಣವಾಗಿದೆ. ಕೃಷಿಕರಿಂದ, ರೈತಾಪಿಯಿಂದ, ದುಡಿಯುವ ವರ್ಗಗಳಿಂದ, ಕುಶಲಕರ್ಮಿಗಳಿಂದ, ಮೀನುಗಾರರಿಂದ ಆದಾಯವನ್ನು ಹಣಕಾಸು ಬಂಡವಾಳದ ಕಾರ್ಪೊರೇಟ್ ಔದ್ಯಮಿಕ ವಲಯಕ್ಕೆ ರವಾನಿಸಲಾಗುತ್ತಿದೆ. ಈ ರೂಪಾಂತರದಿಂದ ಉಂಟಾಗುವ ಬೇಡಿಕೆಯ ಕುಸಿತದ ಪರಿಣಾಮಗಳನ್ನು ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಆಸ್ತಿಯ ಮೌಲ್ಯಗಳು ಸರಿದೂಗಿಸುತ್ತಿವೆ. ಆದರೆ ಈ ಪ್ರಕ್ರಿಯೆಯಲ್ಲೂ ಹಿನ್ನಡೆ ಉಂಟಾಗುತ್ತಿರುವುದರಿಂದ ಆರ್ಥಿಕ ಬಿಕ್ಕಟ್ಟು ತೀವ್ರತೆ ಪಡೆದುಕೊಂಡಿದ್ದು, ನರೇಂದ್ರ ಮೋದಿ ಸರಕಾರದ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ನೀತಿಗಳು, ನವ ಉದಾರವಾದಿ ಬಂಡವಾಳ ವ್ಯವಸ್ಥೆಯ ರಾಚನಿಕ ಅಸ್ಥಿರತೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿವೆ. ಈ ಸಮಸ್ಯೆಗೆ ಪರಿಹಾರ ಮಾರ್ಗವಾಗಿ ಸರಕಾರ ದುಡಿಯುವ ವರ್ಗಗಳ ಆದಾಯವನ್ನು, ಈ ಬಿಕ್ಕಟ್ಟಿಗೆ ಮೂಲ ಕಾರಣಕರ್ತರಾದ ಕಾರ್ಪೊರೇಟ್ ಉದ್ಯಮಿಗಳಿಗೆ ರವಾನಿಸುತ್ತಿದೆ. ಸರಕಾರಕ್ಕೆ ಹಿಂದುತ್ವದ ಉನ್ಮತ್ತ ರಾಷ್ಟ್ರೀಯತೆಯನ್ನು ಜೀವಂತವಾಗಿರಿಸಲು ಎಲ್ಲಿಯೆವರೆಗೆ ಸಾಧ್ಯವೋ ಅಲ್ಲಿಯವರೆಗೂ ತನ್ನ ಆರ್ಥಿಕ ಪ್ರಮಾದಗಳನ್ನು ಜನಸಾಮಾನ್ಯರಿಂದ ಮುಚ್ಚಿಡಬಹುದು. ಇಲ್ಲಿ ಕಾಡುವ ಮೂರ್ತ ಪ್ರಶ್ನೆ ಎಂದರೆ, ಸರಕಾರ ಈ ಉನ್ಮತ್ತ ರಾಷ್ಟ್ರೀಯತೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾದರೂ ಹೇಗೆ?
ಇದಕ್ಕೆ ಹಲವಾರು ಕಾರಣಗಳಿದ್ದರೂ, ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಆತಂಕ, ಭೀತಿ ಮತ್ತು ಅಭದ್ರತೆಯ ಭಾವನೆಯನ್ನು ಕಡೆಗಣಿಸಲಾಗುವುದಿಲ್ಲ. ಸರಕಾರವನ್ನು ಟೀಕಿಸುವುದು ಅಥವಾ ಸರಕಾರದ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವುದೇ ದೇಶದ್ರೋಹ ಎನ್ನುವಂತಾಗಿದ್ದು, ಇಂತಹವರನ್ನು ರಾಷ್ಟ್ರೀಯತೆಯ ವಿರೋಧಿಗಳೆಂದೋ, ‘ತುಕ್ಡೆತುಕ್ಡೆ’ ಗುಂಪಿನವರೆಂದೋ ಹಳಿಯಲಾಗುತ್ತದೆ. ಕಾರ್ಯಾಂಗವನ್ನೇ ಅನುಸರಿಸುತ್ತಿರುವ ನ್ಯಾಯಾಂಗದಿಂದಲೂ ಇಲ್ಲಿ ನ್ಯಾಯ ದೊರೆಯುವ ಸಾಧ್ಯತೆಗಳಿಲ್ಲ. ರಾಜಕೀಯ ವಿರೋಧಿಗಳನ್ನು ಸದೆಬಡಿಯಲು, ಅವರ ಹಣಕಾಸು ಅಕ್ರಮಗಳ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಸ್ತ್ರವನ್ನು ಅವ್ಯಾಹತವಾಗಿ ಬಳಸಲಾಗುತ್ತಿದೆ. ಮತ್ತೊಂದೆಡೆ ಟ್ರೋಲಿಗರು, ಗೂಂಡಾಪಡೆಗಳು ಯಾರ ಮೇಲಾದರೂ, ಯಾವುದೇ ಕ್ಷಣದಲ್ಲಾದರೂ ದಾಳಿ ನಡೆಸಲು ಸಜ್ಜಾಗಿದ್ದು, ಮುಕ್ತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂದರ್ಭಗಳಲ್ಲಿ ಪೊಲೀಸರು ಎತ್ತಲೋ ನೋಡುತ್ತಾ ಸಮಸ್ಯೆಗೆ ವಿಮುಖರಾ ಗುತ್ತಿದ್ದಾರೆ. ಈ ಸಂದರ್ಭದಲ್ಲಿ, ಹಿಂದುತ್ವ ಉನ್ಮತ್ತ ರಾಷ್ಟ್ರೀಯತೆಗೆ ಮಾಧ್ಯಮ ಜಗತ್ತು ಸಂಪೂರ್ಣವಾಗಿ ಶರಣಾಗಿರುವ ಸನ್ನಿವೇಶದಲ್ಲಿ, ಸಮಸ್ಯೆಯ ಒಂದು ಬದಿಯನ್ನು ಮಾತ್ರ ಜನತೆಯ ಮುಂದಿಡಲಾಗುತ್ತಿದೆ. ಜನಸಾಮಾನ್ಯರು ಇದನ್ನೇ ಸತ್ಯ ಎಂದು ನಂಬುತ್ತಿರುವುದು ಅಚ್ಚರಿಯ ಸಂಗತಿಯೇನಲ್ಲ.
ಒಟ್ಟು ಬೇಡಿಕೆಯ ಪ್ರಮಾಣ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ದುಡಿಯುವ ವರ್ಗಗಳ ಹಿತಾಸಕ್ತಿಗೆ ವ್ಯತಿರಿಕ್ತವಾಗಿ, ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಯ ಪರವಾಗಿ ಆದಾಯ ವಿತರಣೆಯ ಕ್ರಮಗಳನ್ನು ಅನುಸರಿಸುವುದರ ದುಷ್ಪರಿಣಾಮಗಳು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗುತ್ತದೆ. ಆದರೆ ಇದರಿಂದ ಉನ್ಮತ್ತ ಹಿಂದೂ ರಾಷ್ಟ್ರೀಯತೆ ಮತ್ತಷ್ಟು ಉನ್ಮಾದದಿಂದ ವೃದ್ಧಿಯಾಗುತ್ತದೆ. ಆರ್ಥಿಕ ಸಂಕಷ್ಟವನ್ನು ಜನಸಾಮಾನ್ಯರಿಂದ ಮರೆಮಾಚಲು ಅವರನ್ನು ಸದಾ ಆಘಾತ ಮತ್ತು ಅಚ್ಚರಿಯ ಭಾವನೆಯಲ್ಲೇ ಬದುಕುವಂತೆ ಮಾಡಿ ಸರಕಾರದ ವೈಫಲ್ಯಗಳನ್ನು ಮುಚ್ಚಿಡಲಾಗುತ್ತದೆ.
ಇದು ದೇಶಕ್ಕೆ ಎರಡು ಅಲಗಿನ ಕತ್ತಿಯ ಮೇಲಿನ ನಡಿಗೆಯಂತೆಯೇ ಅಪಾಯಕಾರಿಯಾಗಿರುತ್ತದೆ. ಹಿಂದುತ್ವದ ಉನ್ಮತ್ತ ರಾಷ್ಟ್ರೀಯತೆಯ ಒಂದು ದೇಶ, ಒಂದು ಭಾಷೆಯ ಘೋಷಣೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯ ದೇಶವ್ಯಾಪಿ ಕಾರ್ಯಕ್ರಮ, ಪೌರತ್ವ ತಿದ್ದುಪಡಿ ಮಸೂದೆ ಇವೆಲ್ಲವೂ ಭಾರತದ ಸೆಕ್ಯುಲರ್, ಪ್ರಜಾತಂತ್ರ ಸಮಾಜ ಮತ್ತು ರಾಜಕಾರಣಕ್ಕೆ ಅಪಾಯಕಾರಿಯಾಗಿ ಕಾಣುತ್ತವೆ. ಮತ್ತೊಂದೆಡೆ ದುಡಿಯುವ ವರ್ಗಗಳ ಹಿತಾಸಕ್ತಿಗೆ ಮಾರಕವಾದ, ಕಾರ್ಪೊರೇಟ್ ಉದ್ಯಮದ ಪರವಾದ ಆರ್ಥಿಕ ನೀತಿಗಳು ಭಾರತದ ಅರ್ಥವ್ಯವಸ್ಥೆಯನ್ನು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಸುತ್ತವೆ. ಈ ಆರ್ಥಿಕ ನೀತಿಗಳು ಆಘಾತ ಮತ್ತು ಅಚ್ಚರಿಯನ್ನು ಮತ್ತಷ್ಟು ಹೆಚ್ಚಿಸುವುದರಿಂದ ದೇಶ ಚಕ್ರವ್ಯೆಹಕ್ಕೆ ಸಿಲುಕಿದಂತಾಗಿದ್ದು, ಬದಲಾವಣೆಯ ಅಲೆ ಅಪ್ಪಳಿಸುವವರೆಗೂ ಹೀಗೆಯೇ ಮುಂದುವರಿಯುತ್ತದೆ.
ಕೃಪೆ: ಹಿಂದೂ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.