ಅಡಕತ್ತರಿಯಲ್ಲಿ ನೇಪಾಳ | Vartha Bharati- ವಾರ್ತಾ ಭಾರತಿ

--

ಅಡಕತ್ತರಿಯಲ್ಲಿ ನೇಪಾಳ

ವಿಸ್ತರಣಾವಾದಿ ಮನೋಭಾವದ ಚೀನಾ ಜೊತೆಗಿನ ನಂಟು ಯಾವ ಕ್ಷಣದಲ್ಲೂ ತನಗೆ ಕಂಟಕ ತರಲಿದೆ ಎಂಬ ಅರಿವು ನೇಪಾಳಕ್ಕೆ ಇಲ್ಲ ಎಂದೇನಲ್ಲ. ಈ ಅಪಾಯದ ಬಗ್ಗೆ ಗೊತ್ತಿದ್ದರೂ ಕಿತ್ತು ತಿನ್ನುವ ಬಡತನ ಮತ್ತು ವಿದ್ಯಾವಂತ ಯುವ ಪೀಳಿಗೆಯ ಕೈಗಳಿಗೆ ಕೆಲಸ ಕೊಡಬೇಕಾದ ಅನಿವಾರ್ಯತೆ ಅದನ್ನು ಡ್ರಾಗನ್ ಜೊತೆಗಿನ ಸಹವಾಸಕ್ಕೆ ತಳ್ಳಿದೆ. ಈ ಕಡೆ ಇದೇ ಚೀನಾದಿಂದಾಗಿ ಹಲವು ಬಾಂಧವ್ಯಗಳ ಹೊರತಾಗಿಯೂ ಭಾರತದ ಬಗ್ಗೆಯೂ ಅದು ಭಯಪಟ್ಟಿದೆ. ಇತ್ತ ಧರೆ ಅತ್ತ ಪುಲಿ ಅನ್ನುವ ಸ್ಥಿತಿ. ಏನೂ ಮಾಡಲು ದಿಕ್ಕು ತೋಚದೆ ಪುಟ್ಟ ರಾಷ್ಟ್ರ ನೇಪಾಳ ಕಂಗಾಲಾಗಿದೆ.


ಸರ್ವ ರೀತಿಯಲ್ಲೂ ಭಾರತವನ್ನು ಗಾಢವಾಗಿ ಬೆಸೆದುಕೊಂಡು ಹಿಮಾಲಯದ ತಪ್ಪಲಲ್ಲಿ ದೈತ್ಯ ಶಕ್ತಿಗಳ ನಡುವೆ ಅಡಕತ್ತರಿಯಲ್ಲಿ ಸಿಲುಕಿರುವ ನೇಪಾಳ ಒಂದು ಸೂಕ್ಷ್ಮ ಸಂವೇದನೆಯ ಬಡ ರಾಷ್ಟ್ರ. ಹೇರಳವಾದ ಪ್ರಾಕೃತಿಕ ಸಂಪತ್ತು ಇದ್ದರೂ, ಅದರ ಭೌಗೋಳಿಕ ಸ್ಥಿತಿ ಮಗ್ಗುಲ ಮುಳ್ಳಾಗಿದೆ. ಒಂದು ಕಡೆ ಭಾವನಾತ್ಮಕ ಬಾಂಧವ್ಯದ ನಂಟಾದರೆ, ಇನ್ನೊಂದು ಕಡೆ ಆರ್ಥಿಕ ಅಭಿವೃದ್ಧಿಯ ಆಮಿಷ. ಇವೆಲ್ಲದರ ನಡುವೆ ಸಿಲುಕಿ ಅತಂತ್ರವಾಗಿದೆ ಬುದ್ಧನ ತವರೂರು. ಇದೀಗ ಪ್ರಜಾತಂತ್ರವನ್ನು ಅಧಿಕೃತವಾಗಿ ಒಪ್ಪಿಕೊಂಡಿರುವ ನೇಪಾಳಕ್ಕೆ ಈ ಹಿಂದೆಯೂ ಸ್ಥಿರತೆ ಎಂಬುದು ಮರೀಚಿಕೆಯೇ ಸರಿ. ಐತಿಹಾಸಿಕವಾಗಿ ರಾಜ ಮಹಾರಾಜರ ಕಾಲದಿಂದಲೂ ಅಸ್ಥಿರತೆ, ಅಶಾಂತಿ, ಹಿಂಸಾಚಾರವನ್ನು ಅದು ಅನುಭವಿಸುತ್ತಾ ಬಂದಿದೆ. ಈಗ ಮಿತ್ರನಾಗಿ ನಟಿಸುತ್ತಿರುವ ಚೀನಾ ಒಂದು ಕಾಲದಲ್ಲಿ ಶತ್ರು ಕೂಡ ಹೌದು.

1792ರಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ನೇಪಾಳದ ಅಂದಿನ ದೊರೆ ಬಹದ್ದೂರ್ ಶಾ ಟಿಬೆಟ್ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭ ಟಿಬೆಟ್ ನೆರವಿಗೆ ನಿಂತದ್ದು ಇದೇ ಚೀನಾ. ಹಿಂಸಾತ್ಮಕವಾಗಿ ಬಡಿದಾಡಿಕೊಂಡಿದ್ದ ಎರಡೂ ರಾಷ್ಟ್ರಗಳು ಬಳಿಕ ರಾಜಿ ಮಾಡಿಕೊಂಡಿದ್ದವು. ನೇಪಾಳವು ಟಿಬೆಟ್‌ಗೆ ಕಳಪೆ ದರ್ಜೆಯ ನಾಣ್ಯ ಸರಬರಾಜು ಮಾಡಿದ್ದೇ ಈ ಯುದ್ಧಕ್ಕೆ ಕಾರಣ. ಆ ಕಾಲದಲ್ಲಿ ಟಿಬೆಟ್ ತನ್ನ ಬೆಳ್ಳಿಯ ನಾಣ್ಯದ ಮುದ್ರಣಕ್ಕೆ ನೇಪಾಳವನ್ನು ಅವಲಂಬಿಸಿತ್ತು. ದೊರೆ ಮಹೇಂದ್ರ 1960ರಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಧಾನಿ ಬಿಶ್ವೇಶ್ವರ ಕೊಯಿರಾಲ ಸಹಿತ ಇತರ ರಾಜಕೀಯ ನಾಯಕರನ್ನು ಜೈಲಿಗೆ ಅಟ್ಟಿದಂತಹ ರಾಜಕೀಯ ಅಸ್ಥಿರತೆಯ, ಅಶಾಂತಿಯ ಸನ್ನಿವೇಶಕ್ಕೂ ನೇಪಾಳ ಸಾಕ್ಷಿಯಾಗಿತ್ತು. ಇದೇ ವೇಳೆ ಚೀನಾ ಮೌಂಟ್ ಎವರೆಸ್ಟ್ ಮೇಲೆ ಹಕ್ಕು ಮಂಡಿಸಿದಾಗಲೂ ನೇಪಾಳ ತಲ್ಲಣಗೊಂಡಿತ್ತು. ರಾಜಾಧಿಪತ್ಯ ಕೊನೆಗಾಣಿಸಲು 1996ರಿಂದ 2006ರ ವರೆಗೆ ನಡೆದ ಮಾವೋವಾದಿ ಹಿಂಸಾಚಾರ ಮತ್ತು ದೊರೆ ಬೀರೇಂದ್ರ ಪರಿವಾರದ ಹತ್ಯಾಕಾಂಡದಂತಹ ರಕ್ತಸಿಕ್ತ ಚರಿತ್ರೆಯ ಕರಾಳತೆಯನ್ನೂ ನೇಪಾಳ ಕಂಡಿತ್ತು. ಇವೆಲ್ಲ ರಾಜ ಸಂಸ್ಥಾನವನ್ನು ಕೇಂದ್ರೀಕರಿಸಿ ನಡೆದ ಘಟನಾವಳಿಗಳು. ಇದೀಗ ಅವೆಲ್ಲ ಇತಿಹಾಸ. ಇಲ್ಲಿ ರಾಜನ ಕಾಲದಲ್ಲಿ ವಿವಿಧ ಜಾತಿಗಳ ನಡುವಿನ ಅಸಮಾನತೆ ಮತ್ತು ಶೋಷಣೆ ಬಾಹ್ಯ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಎಲ್ಲವೂ ರಾಜನ ಆಣತಿಯಂತೆ ನಡೆಯುತ್ತಿತ್ತು. ಹೀಗೆ ಶೋಷಣೆ ಮತ್ತು ಅಸಮಾನತೆ ವಿರುದ್ಧ ಸಿಡಿದು ನಡೆಸಿದ ನಿರಂತರ ಹೋರಾಟದ ಫಲವಾಗಿ ನೇಪಾಳ ಗಣ ರಾಜ್ಯವಾಗಿ ಹೊಸ ರೂಪ ಪಡೆದರೂ, ಶೋಷಣೆ ಮತ್ತು ಅಸಮಾನತೆ ಅಲ್ಲಿ ಇನ್ನೂ ಜೀವಂತವಾಗಿದೆ. ಇದರ ಫಲವೇ ಮಾದೇಶಿ ಚಳವಳಿ.

ಮಾದೇಶಿ ಹೋರಾಟ

ಭಾರತಕ್ಕೆ ತಾಗಿಕೊಂಡಿರುವ ನೇಪಾಳದ ದಕ್ಷಿಣ ಭಾಗದ ತೆರಾಯ್‌ಯನ್ನೊಳಗೊಂಡ ಪ್ರದೇಶವೇ ಮಾದೇಶ್. ಇಲ್ಲಿನ ನಿವಾಸಿಗಳನ್ನು ಮಾದೇಶಿಗಳೆಂದು ಗುರುತಿಸಲಾಗುತ್ತಿದೆ. ಇವರೆಲ್ಲ ಭಾರತದ ಉತ್ತರ ಪ್ರದೇಶ, ಬಿಹಾರ ಮತ್ತಿತರ ಪ್ರದೇಶಗಳಿಗೆ ಸೇರಿರುವ ಹಿಂದೂ ಧರ್ಮದ ವಿವಿಧ ಜಾತಿ-ಉಪ ಜಾತಿಯವರು, ಮುಸ್ಲಿಮರು ಮತ್ತು ತೆರಾಯ್ ಮೂಲ ನಿವಾಸಿಗಳು. 18ನೇ ಶತಮಾನದ ನೇಪಾಳದ ಷಾ ದೊರೆಗಳು ಭಾರತೀಯರನ್ನು ತೆರಾಯ್ ಪ್ರಾಂತದಲ್ಲಿ ನೆಲೆಸುವಂತೆ ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಬಿಹಾರಿ ರೈತರಿಗೆ ಇದೊಂದು ವರದಾನವಾಗಿತ್ತು. ಹೀಗೆ ಬಂದವರೆಲ್ಲ ಅಲ್ಲಿನ ದಟ್ಟವಾದ ಅರಣ್ಯವನ್ನು ಕಡಿದು ಕೃಷಿ ನಡೆಸಿ ನೇಪಾಳದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದರು. ಜೊತೆಗೆ ಅಲ್ಲಿನ ಪೌರತ್ವವನ್ನೂ ಪಡೆದಿದ್ದರು. ಈಗ ಸಮಸ್ಯೆ ಆಗಿರುವುದೂ ಇಲ್ಲೇ. ಮೇಲ್ವರ್ಗದ ಪಹಾಡೀಸ್‌ಗಳಿಗೆ (ಪರ್ವತ ಪ್ರದೇಶದಲ್ಲಿ ವಾಸಿಸುವವರು) ಭಾರತೀಯ ಮೂಲದ ಕೆಳವರ್ಗದವರಾದ ಮಾದೇಶಿಗಳನ್ನು ಕಂಡರೆ ಅಷ್ಟಕ್ಕಷ್ಟೆ. ಮಾದೇಶಿಗಳು ಆಡುವ ಭಾಷೆ ಮತ್ತು ಅವರ ಉಡುಗೆ ತೊಡುಗೆಯನ್ನು ಪಹಾಡೀಸ್ ಇಷ್ಟ ಪಡುವುದಿಲ್ಲ. ಹಿಂದಿನಿಂದಲೂ ಸೂಕ್ತ ಸ್ಥಾನಮಾನ ಇಲ್ಲದೆ, ಭೇದಭಾವ ತುಂಬಿದ ಬದುಕು ಇವರದ್ದಾಗಿತ್ತು. ಇದರಿಂದ ಬೇಸತ್ತು ಆರಂಭವಾದ ರಾಜಕೀಯ ಚಳವಳಿಯೇ ‘ಮಾದೇಶ್ ಚಳವಳಿ’.

ಮಾದೇಶಿ, ಥರೂಸ್, ಜನ್ ಜಾತಿ ಗುಂಪು ಮತ್ತು ಮುಸ್ಲಿಮರಿಗೆ ಸಮಾನ ಹಕ್ಕು, ಸೂಕ್ತ ಪ್ರಾತಿನಿಧ್ಯ ಮತ್ತು ಪೌರತ್ವಕ್ಕೆ ಒತ್ತಾಯಿಸಿ ವಿಶೇಷವಾಗಿ ಮಾದೇಶ್ ಪ್ರದೇಶದ ರಾಜಕೀಯ ಪಕ್ಷಗಳು ಈ ಚಳವಳಿಯನ್ನು 2007ರಲ್ಲಿ ಹುಟ್ಟು ಹಾಕಿದ್ದವು. 2015ರಲ್ಲಿ ಅಂಗೀಕರಿಸಲಾದ ಸಂವಿಧಾನದಲ್ಲಿ ಮಾದೇಶಿಗಳ ಈ ಎಲ್ಲ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಇದರಿಂದಾಗಿ ದಕ್ಷಿಣ ನೇಪಾಳದಲ್ಲಿ ಹಿಂಸಾಚಾರ ಸೊ್ಫೀೀಟಗೊಂಡು ಹೊತ್ತಿ ಉರಿದಿತ್ತು. ಅಪಾರ ಸಾವು ನೋವು ಸಂಭವಿಸಿದ ಈ ಹೋರಾಟದಲ್ಲಿ ಭಾರತದಿಂದ ತೆರಾಯ್ ಗಡಿ ಮೂಲಕ ಯಾವುದೇ ಅಗತ್ಯ ವಸ್ತುಗಳು ನೇಪಾಳ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಈ ಬೆಳವಣಿಗೆಯಿಂದ ಆಹಾರ, ಇಂಧನ ಮಿಕ್ಕೆಲ್ಲ ಅಗತ್ಯ ವಸ್ತುಗಳಿಗೆ ಶತಶತಮಾನಗಳಿಂದಲೂ ಭಾರತವನ್ನೇ ಅವಲಂಬಿಸಿದ್ದ ನೇಪಾಳ ಅಕ್ಷರಶ ತತ್ತರಿಸಿತ್ತು. ಆಹಾರಕ್ಕಾಗಿ ಹಾಹಾಕಾರ ಮುಗಿಲು ಮುಟ್ಟಿತ್ತು. ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಮಾನವೀಯ ಬಿಕ್ಕಟ್ಟು ತಲೆದೋರಿತ್ತು. ಇದು ನೇಪಾಳದ ಆಂತರಿಕ ವಿಷಯವಾದರೂ ಇದನ್ನು ಅಂತಿಮವಾಗಿ ಭಾರತದ ತಲೆ ಮೇಲೆ ಕಟ್ಟಲಾಗಿತ್ತು. ಈ ಎಲ್ಲ ಬೆಳೆವಣಿಗೆಗಳಿಂದಾಗಿ ಸುದೀರ್ಘವಾಗಿ ಭಾರತ ಮತ್ತು ನೇಪಾಳ ಹೊಂದಿರುವ ರಾಜತಾಂತ್ರಿಕ ಸಂಬಂಧಕ್ಕೆ ಈಗ ಗ್ರಹಣ ಬಡಿದಿದೆ.

ಭಾರತ ತನ್ನ ಆಂತರಿಕ ವಿಷಯದಲ್ಲಿ ಮೂಗು ತೂರಿಸಿ ದೊಡ್ಡಣ್ಣನ ರೀತಿ ವರ್ತಿಸುತ್ತಿದೆ ಎಂಬುದು ನೇಪಾಳದ ದೂರು. ಆದರೆ ತನ್ನ ಈಗಿನ ವ್ಯವಹಾರ ಡ್ರಾಗನ್ ಜೊತೆ ಎಂಬುದನ್ನು ಮರೆತಿರುವ ಈ ಪುಟ್ಟ ರಾಷ್ಟ್ರ, ಚೀನಾಕ್ಕೆ ಮತ್ತಷ್ಟು ಹತ್ತಿರವಾಗುತ್ತಿದೆ. ತನ್ನ ಸಂವಿಧಾನವನ್ನೂ ಚೀನಾದ ಒತ್ತಾಸೆಯಂತೆ ರಚಿಸಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಹೆಚ್ಚಿನ ಪ್ರಾಂತಗಳ ರಚನೆಗೆ ಮತ್ತು ಜನಾಂಗೀಯ ಆಧಾರಿತ ಒಕ್ಕೂಟ ರಚನೆಗೆ ಚೀನಾದ ವಿರೋಧ ಇದ್ದಿದ್ದು ಬಯಲಾಗಿದೆ. ಇದು ಮಾದೇಶಿಗಳ ಬೇಡಿಕೆಗೆ ವಿರುದ್ಧವಾಗಿದ್ದು, ಹೋರಾಟದ ಕಿಚ್ಚನ್ನು ನೇಪಾಳ ನಿರಂತರ ಅನುಭವಿಸುವಂತಾಗಿದೆ.

ಬಯಸಿದ್ದನ್ನು ಸಾಧಿಸಿದ ಚೀನಾ

ಬ್ರಿಟಿಶ್ ಆಡಳಿತದಲ್ಲಿ ನೇಪಾಳ ಜೊತೆಗಿನ ವ್ಯವಹಾರವು 1816ರಲ್ಲಿ ಮಾಡಿಕೊಂಡ ಸುಗೌಲೀ ಒಪ್ಪಂದದ ಪ್ರಕಾರವೇ ನಡೆಯುತ್ತಿತ್ತು. ಸಾಮ್ರಾಜ್ಯ ವಿಸ್ತರಣೆಯ ಉದ್ದೇಶ ಹೊಂದಿದ್ದ ನೇಪಾಳದ ಅಂದಿನ ದೊರೆ ಪ್ರತ್ವಿ ನಾರಾಯಣ ಶಾ ಮತ್ತು ಬ್ರಿಟಿಶರಿಗೆ ನಡೆದ ಯುದ್ಧವು ಸುಗೌಲೀ ಒಪ್ಪಂದದ ಮೂಲಕ ಕೊನೆಗೊಂಡಿತ್ತು. ಈ ವೇಳೆ ಎರಡೂ ಕಡೆಗಳ ಗಡಿ ರೇಖೆಯನ್ನು ಗುರುತಿಸಲಾಗಿತ್ತು. ಒಪ್ಪಂದದ ಪ್ರಕಾರ ನೇಪಾಳ ಒಂದು ಬ್ರಿಟಿಶ್ ಇಂಡಿಯಾದ ಆಶ್ರಿತ ರಾಜ್ಯವೇ ಹೊರತು, ಯಾವುದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅದಕ್ಕಿರಲಿಲ್ಲ. ಭಾರತ 1947ರಲ್ಲಿ ಸ್ವತಂತ್ರಗೊಂಡ ಬಳಿಕ ಎರಡೂ ದೇಶಗಳು ವ್ಯೆಹಾತ್ಮಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧವನ್ನು ಬಲಪಡಿಸಲು ನಿರ್ಧರಿಸಿದವು. ಇದಕ್ಕೆ ಕಾರಣವೂ ಇತ್ತು. ಚೀನಾ 1949ರ ಕಮ್ಯುನಿಸ್ಟ್ ಕ್ರಾಂತಿಯ ಬಳಿಕ ನೆರೆಯ ಟಿಬೆಟ್ ಅನ್ನು ಆಕ್ರಮಿಸಿತ್ತು. ಇದು ಭಾರತ ಮತ್ತು ನೇಪಾಳಕ್ಕೆ ಆತಂಕ ಹುಟ್ಟಿಸಿತ್ತು. ಚೀನಾವು ಭೂತಾನ್ ಮತ್ತು ನೇಪಾಳದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಬಹುದು ಎಂಬುದು ಭಾರತದ ತಲೆ ನೋವಾದರೆ, ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಿ ತನ್ನ ನೆಲದಲ್ಲೂ ಕ್ರಾಂತಿ ಮಾಡ ಬಹುದೆಂಬುದು ನೇಪಾಳಕ್ಕಿದ್ದ ಕಳವಳವಾಗಿತ್ತು. ನೇಪಾಳ ದೊರೆಗಳ ಈ ಕಳವಳ ಇಂದು ನಿಜವಾಗಿದೆ. ಚೀನಾ ಕೊನೆಗೂ ನೇಪಾಳದಲ್ಲಿ ತಾನು ಬಯಸಿದ್ದನ್ನು ಸಾಧಿಸಿದೆ. ಕಮ್ಯುನಿಸ್ಟ್ ಆಡಳಿತವಿರುವ ನೇಪಾಳ ಇದೀಗ ಚೀನಾದ ಕೈ ಗೊಂಬೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇತ್ತೀಚೆಗೆ ನೇಪಾಳಿ ಕಮ್ಯುನಿಸ್ಟ್ ಪಕ್ಷದಲ್ಲಿ ತಲೆದೋರಿದ್ದ ಭಿನ್ನಮತವನ್ನು ಚೀನಾ ಮುಂದೆ ನಿಂತು ಬಗೆಹರಿಸಿರುವುದೇ ಇದಕ್ಕೆ ಸಾಕ್ಷಿ. ರಾಜಾಡಳಿತದಲ್ಲಿ ನೇಪಾಳದ ಎಲ್ಲ ಆಗು ಹೋಗುಗಳು ಭಾರತದ ಇಚ್ಚೆಯಂತೆ ನಡೆಯುತ್ತಿದ್ದರೆ, ಇಂದು ಚೀನಾ ಹೇಳಿದ್ದೆ ಅಂತಿಮ. ಮಾವೋವಾದಿ ಚಳವಳಿಯನ್ನು ಎಲ್ಲ ರೀತಿಯಲ್ಲೂ ಪೋಷಿಸಿದ್ದ ಚೀನಾ, ಇದೀಗ ನೇಪಾಳವನ್ನು ಸಂಪೂರ್ಣವಾಗಿ ತನ್ನ ಕಬಂಧ ಬಾಹುಗಳಿಂದ ಸುತ್ತಿಕೊಂಡಿದೆ. ಚೀನಾ ಇತ್ತೀಚೆಗೆ ನೇಪಾಳಿ ಪತ್ರಿಕೆಯೊಂದರ ಸಂಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಿರುವುದು ಇದಕ್ಕೆ ಪುಷ್ಟಿ ನೀಡಿದೆ. ಅರುಣ್ ಕಾಪ್ಹ್ಲ್ ಎಂಬ ಹೆಸರಿನ ಈ ಸಂಪಾದಕರು ಕೊರೋನ ಕುರಿತು ಚೀನಾವನ್ನು ಟೀಕಿಸಿ ಲೇಖನ ಪ್ರಕಟಿಸಿದ್ದರು. ಚೀನಾದ ಈ ನಡೆಯು ನೇಪಾಳದ ಮಾಧ್ಯಮ ಸ್ವಾತಂತ್ರದ ಮೇಲಿನ ಸವಾರಿ ಅಲ್ಲದೆ ಮತ್ತೇನೂ ಅಲ್ಲ. ಮಾಧ್ಯಮ ಅಭಿವ್ಯಕ್ತಿಗೆ ಚೀನಾ ಬೆದರಿಕೆ ಯೊಡ್ಡುವುದಾದರೆ, ಅದು ನೇಪಾಳದಲ್ಲಿ ಯಾವ ಮಟ್ಟಕ್ಕೆ ತನ್ನ ಹಿಡಿತ ಸಾಧಿಸಿದೆ ಎಂಬುದು ಇದರಿಂದ ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ನೇಪಾಳದಲ್ಲಿ ಭಾರತದ ಮೃದು ರಾಜ ತಾಂತ್ರಿಕತೆ ಮತ್ತು ಗಾಢವಾದ ಸಾಂಸ್ಕೃತಿಕ ಹಾಗೂ ಸಾಂಸಾರಿಕ ಸಂಬಂಧವು ಚೀನಾಕ್ಕೆ ತಲೆ ನೋವಾಗಿತ್ತು. ಇದನ್ನು ಹತ್ತಿಕ್ಕಲು ಅದುಕಂಡುಕೊಂಡ ಹಾದಿಯೇ ಆರ್ಥಿಕ ರಾಜ ತಾಂತ್ರಿಕತೆ. ನೇಪಾಳದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ನೇಪಾಳಿಗಳ ಮನಸೂರೆಗೊಳ್ಳುವುದೇ ಇದರ ಗುರಿ. ಈ ಉದ್ದೇಶದಿಂದ ಪೋಖ್ರಾಲ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಕಠ್ಮ್ಮಂಡು ರಿಂಗ್ ರೋಡ್ ವಿಸ್ತರಣೆ, ಕಠ್ಮಂಡು-ಲಾಸ ರೈಲು ಸಂಪರ್ಕ ಜಾಲ, ಜಲ ವಿದ್ಯುತ್ ಸ್ಥಾವರ ನಿರ್ಮಾಣ ಮತ್ತಿತರ ಯೋಜನೆಗಳಲ್ಲಿ ಚೀನಾ ಸಾಕಷ್ಟು ಹೂಡಿಕೆ ಮಾಡಿದೆ.

ನೇಪಾಳದ ಅಭಿವೃದ್ಧಿಯಲ್ಲಿ ಭಾರತದ ಪಾಲು ಕಮ್ಮಿ ಏನಲ್ಲ. ಜಲ ವಿದ್ಯುತ್, ಕೃಷಿ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಹಣಕಾಸು ಇನ್ನಿತರ ಕ್ಷೇತ್ರಗಳಲ್ಲಿ ಭಾರತ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಭಾರತ ಆಯ್ದುಕೊಂಡಿರುವ ಕೆಲವೊಂದು ಯೋಜನೆಗಳು ಆಮೆ ನಡಿಗೆಯಲ್ಲಿ ಸಾಗುತ್ತಿರುವುದು ನೇಪಾಳಿಗಳ ಅತೃಪ್ತಿಗೆ ಕಾರಣವಾಗಿದೆ. ಆದಾರೂ ನೇಪಾಳ ಭಾರತವನ್ನು ಎಂದಿಗೂ ಕಡೆಗಣಿಸುವಂತಿಲ್ಲ. ಈ ಎರಡೂ ದೇಶಗಳು ಕರುಳು ಬಳ್ಳಿಯ ಸಂಬಂಧವಾಗಿದ್ದು, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಂಸಾರಿಕವಾಗಿ ಬೆಸೆದುಕೊಂಡಿದೆ. ಗಡಿಯ ಹಂಗಿಲ್ಲದೆ ನೇಪಾಳಿಗಳು ಭಾರತಾದ್ಯಂತ ಸುತ್ತಾಡಿ ಕಸಬು ನಡೆಸಿ ಬದುಕುವ ಮುಕ್ತ ಅವಕಾಶ ಇದೆ. ಒಂದು ಕಾಲದಲ್ಲಿ ಭಾರತಾದ್ಯಂತ ನೇಪಾಳದ ಗೂರ್ಖರೇ ಕಾವಲುಗಾರರು. ಭಾರತೀಯ ಸೇನೆಯ ಗೂರ್ಖಾ ರೈಫಲ್ಸ್ ನಲ್ಲಿ ನೇಪಾಳಿಗಳ ನಿಷ್ಠೆ, ಸಾಹಸ ಮತ್ತು ಬಲಿದಾನ ಯಾರಿಗೂ ಕಮ್ಮಿ ಇಲ್ಲ. ನೇಪಾಳ ಮೂಲದ ಉದಿತ್ ನಾರಾಯಣ್ ಅವರಂತಹ ಕಲಾವಿದರು ಜಗತ್ಪ್ರಸಿದ್ಧರಾಗುವ ಜೊತೆ ಜೊತೆಯಲ್ಲಿ ಸುಖದ ಸುಪ್ಪತ್ತಿಗೆಯನ್ನು ಏರಿದ್ದೇ ಭಾರತದಲ್ಲಿ.

ಪ್ರವಾಸೋದ್ಯಮ ನೇಪಾಳದ ಜೀವಾಳ. ಇಲ್ಲಿಗೆ ಪ್ರವಾಸ ಬರುವವರಲ್ಲಿ ಭಾರತೀಯರದ್ದೇ ಮೇಲುಗೈ. ನೇಪಾಳದಲ್ಲಿ ಭಾರತದ ಸಾಂಸ್ಕೃತಿಕ ಬಾಂಧವ್ಯ ಎಷ್ಟೊಂದು ಪ್ರಭಾವಶಾಲಿ ಯಾಗಿದೆ ಎಂದರೆ, ಕತ್ತಲಾಗುತ್ತಿದ್ದಂತೆಯೇ ಕಠ್ಮ್ಮಂಡುವಿನ ತಾಮೇಲ್ ಪಬ್‌ಗಳಲ್ಲಿ ಪಾರ್ಟಿ ಪ್ರಿಯರ ಮತ್ತು ಡ್ಯಾನ್ಸರ್‌ಗಳ ನಡು ಬಳುಕುವುದೇ ಭಾರತದ ಬಾಲಿವುಡ್ ಹಾಡಿಗೆ. ಶಾಪಿಂಗ್ ಮಾಲ್, ಹೊಟೇಲ್, ರೆಸ್ಟೋರೆಂಟ್ಸ್ ಹೀಗೆ ಎಲ್ಲೆ ಹೋದರೂ ನಮ್ಮ ಕಿವಿಗೆ ಬೀಳುವುದೇ ಶ್ರೇಯಾ ಘೋಷಾಲ್, ಸೋನು ನಿಗಮ್, ನೇಹಾ ಕಕ್ಕರ್ ಮತ್ತಿತರ ಭಾರತದ ಜನಪ್ರಿಯ ಗಾಯಕರ ಸುಮಧುರ ಕಂಠದ ಗಾಯನಗಳು. ಇಲ್ಲಿನ ಫಿಲಂ ಥಿಯೇಟರ್‌ಗಳಲ್ಲಿ ಬಾಲಿವುಡ್ ಚಿತ್ರಗಳದ್ದೇ ಕಾರುಬಾರು. ಮನೆಯಲ್ಲಿ, ಬೀದಿಯಲ್ಲಿ, ಕೆಲಸದ ಸ್ಥಳದಲ್ಲಿ, ಆಟದ ಮೈದಾನದಲ್ಲಿ ಎಲ್ಲಿ ಹೋದರಲ್ಲಿ ನೇಪಾಳಿ ಗುಣಿ ಗುಣಿಸುವುದೇ ಹಿಂದಿ ಹಾಡು. ಹೀಗೆ ಹತ್ತು ಹಲವು ಬಗೆಗಳಲ್ಲಿ ನೇಪಾಳಿಗಳ ಬದುಕು ಭಾರತದ ಜೊತೆ ಹಾಸುಹೊಕ್ಕಾಗಿದೆ. ಇಂತಹ ಸಂಬಂಧವನ್ನು ಅನ್ಯರಿಗೆ ಕಡಿಯಲು ಸಾಧ್ಯವಾದರೂ ಹೇಗೆ ?

ನೇಪಾಳದಲ್ಲಿ ಭೂಮಿ ಕಂಪಿಸಿದರೆ, ಭಾರತದಲ್ಲಿ ಹೃದಯವೇ ಕಂಪಿಸುವುದು. ನೇಪಾಳಕ್ಕೆ ಯಾವುದೇ ಸಮಸ್ಯೆ ಬಂದಾಗ-ಅದು ಪ್ರಾಕೃತಿಕ ವಿಕೋಪವಾಗಲಿ, ಸಾಂಕ್ರಾಮಿಕ ರೋಗದ ಸಂಕಟವಾಗಲಿ ಮೊದಲು ಮುಂದೆ ನಿಂತು ನೆರವಿಗೆ ಬರುವುದೇ ಭಾರತ. ಇಂತಹ ವಿಪತ್ತಿನ ಕಾಲದಲ್ಲಿ ನೇಪಾಳ ಕೂಡ ಮೊದಲು ನೋಡುವುದೇ ಭಾರತದತ್ತ. 2015ರಲ್ಲಿ ನೇಪಾಳವನ್ನು ತೀವ್ರವಾಗಿ ಕಾಡಿದ ಭೂಕಂಪದ ವೇಳೆ ಮಿಂಚಿನ ಗತಿಯಲ್ಲಿ ಭಾರತದ ವಿಪತ್ತು ನಿರ್ವಹಣಾ ತಂಡ ನೇಪಾಳಿಗಳ ನೆರವಿಗೆ ಧಾವಿಸಿತ್ತು. ಇಂತಹ ಹತ್ತು ಹಲವು ಸಂಕಷ್ಟದ ಸಂದರ್ಭಗಳಲ್ಲಿ ಭಾರತ ನೇಪಾಳದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿತ್ತು. ಈ ಎಲ್ಲ ಅಂಶಗಳನ್ನು ನೇಪಾಳ ಮರೆಯುವುದಾದರೂ ಹೇಗೆ? ಹೀಗೆ ಈ ಎರಡೂ ದೇಶಗಳು ಸುದೀರ್ಘವಾದ ಉತ್ತಮ ನೆರೆಯ ಸಂಬಂಧ ಹೊಂದುತ್ತಾ ಬಂದಿವೆ. ಆದರೆ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಈ ಸಂಬಂಧ ಕ್ಷೀಣಿಸುತ್ತಿರುವುದು ದುರದೃಷ್ಟಕರ. ಕಾಲಾಪಾನಿ ಗಡಿ ಬಿಕ್ಕಟ್ಟು ಇದಕ್ಕೆ ಮತ್ತಷ್ಟು ಹುಳಿ ಹಿಂಡುವ ಸೂಚನೆ ನೀಡಿದೆ.
  
ಏನಿದು ಕಾಲಾಪಾನಿ ಬಿಕ್ಕಟ್ಟು?

ಟಿಬೆಟ್‌ನಲ್ಲಿರುವ ಕೈಲಾಸ ಮಾನಸ ಸರೋವರ ಹಿಂದೂಗಳಿಗೆ ಅತ್ಯಂತ ಪವಿತ್ರ ತೀರ್ಥ ಸ್ಥಳ. ಇಲ್ಲಿಗೆ ಚೀನಾಕ್ಕೆ ಸುತ್ತು ಬಳಸಿಯೇ ಹೋಗಬೇಕಿತ್ತು. ಹಾಗಾಗಿ ಇದೊಂದು ಸುದೀರ್ಘವಾದ ತ್ರಾಸದಾಯಕ ತೀರ್ಥ ಯಾತ್ರೆ. ಭಾರತ ಯಾತ್ರೆಯ ಅವಧಿಯನ್ನು ಕಡಿಮೆ ಮಾಡುವುದಕ್ಕೋಸ್ಕರ ಭಾರತ-ಚೀನಾ- ನೇಪಾಳದ ಭೂಭಾಗಗಳು ಕೂಡುವ (ಟ್ರೈ ಜಂಕ್ಷನ್) ಲಿಪು ಲೇಖ್ ಪಾಸ್ ಮೂಲಕ ಹೊಸದಾಗಿ ಕೈಲಾಸ ಮಾನಸ ಸರೋವರಕ್ಕೆ ರಸ್ತೆ ನಿರ್ಮಿಸಿದೆ. ಈ ರಸ್ತೆ ಉತ್ತರಾಖಂಡದ ಕಾಲಾಪಾನಿಯ ಭೂ ಭಾಗದಲ್ಲಿದೆ. ಇದೀಗ ತಗಾದೆ ತೆಗೆದಿರುವ ನೇಪಾಳ ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರ ತನಗೆ ಸೇರಿದ ಭೂ ಭಾಗ ಎಂದು ಘೋಷಿಸಿದೆ. ಇದನ್ನು ತಿರಸ್ಕರಿಸಿರುವ ಭಾರತ, ರಸ್ತೆ ತನ್ನ ಭೂ ಭಾಗದಲ್ಲಿಯೇ ಇದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಕಾಲಾಪಾನಿ ಬಿಕ್ಕಟ್ಟು ಎರಡೂ ದೇಶಗಳ ಮನಸ್ತಾಪಕ್ಕೆ ಕಾರಣವಾಗಿದೆ. ಭಾರತ ಮತ್ತು ಚೀನಾ 2015ರಲ್ಲಿ ಲಿಪು ಲೇಖ್ ಮಾರ್ಗವಾಗಿ ವ್ಯಾಪಾರ ನಡೆಸಲು ನಿರ್ಧರಿಸಿದ್ದಾಗಲೇ ನೇಪಾಳ ಈ ಬಗ್ಗೆ ತಕರಾರು ಎತ್ತಿತ್ತು. ಮತ್ತೊಂದು ಭಾರೀ, ಅಂದರೆ ಭಾರತ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಜಮ್ಮು ಕಾಶ್ಮೀರವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿದಾಗಲೂ ನೇಪಾಳ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಭಾರತ ಮತ್ತು ಚೀನಾ ನಡುವೆ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಗಡಿ ಬಿಕ್ಕಟ್ಟು ಉಲ್ಬಣಿಸಿರುವಾಗಲೇ ನೇಪಾಳ ತಗಾದೆ ಎತ್ತಿದ್ದು ಅದರ ಬಗ್ಗೆ ಸಂದೇಹ ಪಡುವಂತೆ ಮಾಡಿದೆ. ನೇಪಾಳ ಚೀನಾದ ಕುಮ್ಮಕ್ಕಿನಿಂದಲೇ ಈ ರೀತಿ ವರ್ತಿಸುತ್ತಿದೆ ಎಂಬುದಕ್ಕೆ ಬೇರೆ ಯಾವ ವಿವರಣೆಯ ಅಗತ್ಯವೂ ಇಲ್ಲ.

  ಇದಕ್ಕೆ ಮತ್ತಷ್ಟು ಪುರಾವೆಯಾಗಿ ನೇಪಾಳದ ಪ್ರಧಾನಿ ಕೆ.ಪಿ. ಒಲಿ ಅವರ ಮಾತಿನ ದಾಟಿಯೂ ಬದಲಾಗಿದೆ. ನೇಪಾಳ ಸೇರಿದಂತೆ ಇಡೀ ಜಗತ್ತು ಕೊರೋನ ಮಾರಿಗಾಗಿ ಚೀನಾವನ್ನು ಶಪಿಸುತ್ತಿರುವಾಗ, ಒಲಿಗೆ ಚೀನೀ ಕೊರೋನ ಮೇಲೆ ಅನುಕಂಪ ಹುಟ್ಟಿದ್ದು ಅಚ್ಚರಿಯಾಗಿದೆ. ಅವರು ಚೀನಾ ಮತ್ತು ಇಟಲಿ ಕೊರೋನಗಿಂತ ಭಾರತದ ಕೊರೋನ ಅತ್ಯಂತ ಅಪಾಯಕಾರಿ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇಂತಹ ಬೇಜವಾಬ್ದಾರಿಯ ಮಾತು ನೇಪಾಳ ಚೀನಾದ ಬಲೆಯಲ್ಲಿ ಯಾವ ರೀತಿ ಬಂಧಿಯಾಗಿದೆ ಎಂಬುದಕ್ಕೊಂದು ಸ್ಪಷ್ಟ ಸಾಕ್ಷಿ.

ಮತ್ತೆ ಮೌಂಟ್ ಎವರೆಸ್ಟ್ ವಿವಾದ
 ನೇಪಾಳ ಜೊತೆಗಿನ ಮೌಂಟ್ ಎವರೆಸ್ಟ್ ವಿವಾದ ಇದೀಗ ಮತ್ತೆ ಪ್ರಸ್ತಾಪಗೊಂಡಿದೆ. ಚೀನಾದ ಸರಕಾರಿ ಸ್ವಾಮ್ಯದ ಸಿಜಿಟಿಎನ್ (ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ ) ಸುದ್ದಿ ಜಾಲವು ಮೌಂಟ್ ಎವರೆಸ್ಟ್ ಚೀನಾದ ಭೂ ಭಾಗದಲ್ಲಿದೆ ಎಂದು ಮೇ 2ರಂದು ಟ್ವೀಟ್ ಮಾಡಿತ್ತು. ಈ ಮೂಲಕ 60 ವರ್ಷಗಳ ಬಳಿಕವೂ ಮೌಂಟ್ ಎವರೆಸ್ಟ್ ಕಬಳಿಸುವ ತನ್ನ ದಾಹ ತಣಿದಿಲ್ಲ ಎಂದು ಚೀನಾ ಮತ್ತೆ ಜ್ಞಾಪಿಸಿದೆ.

ಈ ಹಿಂದೆ 1960ರಲ್ಲಿ ಮೌಂಟ್ ಎವರೆಸ್ಟ್ ವಿವಾದ ತಲೆದೋರಿತ್ತು. ಜಗತ್ತಿನ ಅತೀ ಎತ್ತರದ ಶಿಖರ ತನ್ನ ಭೂ ಭಾಗದಲ್ಲಿದೆ ಎಂದು ಚೀನಾ ಹಕ್ಕು ಮಂಡಿಸಿತ್ತು. ಈ ಬಗ್ಗೆ ಮಾತುಕತೆ ನಡೆಸಲು ನೇಪಾಳದ ಅಂದಿನ ಪ್ರಧಾನಿ ಬಿಶ್ವೇಶ್ವರ ಪ್ರಸಾದ ಕೊಯಿರಾಲ ಅವರನ್ನು ಚೀನಾದ ಪಿತಾಮಹ ಮಾವೋ ಝೆಡೊಂಗ್ ಆಹ್ವಾನಿಸಿದ್ದರು. ಮೌಂಟ್ ಎವರೆಸ್ಟ್ ಶಿಖರವನ್ನು ನಮ್ಮ ಎರಡು ರಾಷ್ಟ್ರಗಳ ನಡುವೆ ಸಮಪಾಲು ಮಾಡುವ. ದಕ್ಷಿಣ ಭಾಗವು ನಿಮಗೆ ಸೇರಿದರೆ, ಉತ್ತರ ಭಾಗವು ನಮಗೆ ಇರಲಿ. ಅಲ್ಲದೆ ಇದರ ಹೆಸರನ್ನೂ ಬದಲಾಯಿಸುವ. ಈ ಶಿಖರವನ್ನು ನಾವು ಎವರೆಸ್ಟ್ ಎಂದು ಕರೆಯಬಾರದು. ಇದು ಪಾಶ್ಚಿಮಾತ್ಯರು ಕೊಟ್ಟಿರುವ ಹೆಸರು. ಇದನ್ನು ಸಾಗರ್ ಮಾತಾ ಎಂದಾಗಲಿ ಅಥವಾ ಖೋಮೊಲಾಂಗ್ಮಾ ಎಂದಾಗಲಿ ನಾವು ಕರೆಯುವುದು ಬೇಡ. ಮೌಂಟ್ ಸಿನೋ-ನೇಪಾಲೀಸ್ ಫ್ರೆಂಡ್ ಶಿಪ್ (ಚೀನಾ- ನೇಪಾಳ ಮಿತ್ರತ್ವ ಶಿಖರ) ಎಂದು ಹೆಸರಿಡುವ. ಇದರ ಎತ್ತರ 8,800 ಮೀ. ಇದು ಜಗತ್ತಿನ ಅತೀ ಎತ್ತರದ ಶಿಖರ. ಅಮೆರಿಕ, ಸೋವಿಯತ್ ಒಕ್ಕೂಟ ಅಥವಾ ಭಾರತದ ಬಳಿಯಾಗಲಿ ಇಷ್ಟೊಂದು ಎತ್ತರದ ಶಿಖರ ಇಲ್ಲ. ಇದು ನಮ್ಮೆರಡು ದೇಶಗಳ ನಡುವೆ ಮಾತ್ರ ಇರುವುದು ಎಂದು ಕೊಯಿರಾಲ ಅವರ ಮೆದುಳು ತಿನ್ನುವ ಮೂಲಕ ಮಾವೋ ಝೆಡೊಂಗ್ ನೇಪಾಳದ ಅನ್ನದ ಬಟ್ಟಲಿಗೆ ಅಂದು ಕನ್ನ ಕೊರೆಯಲು ಯತ್ನಿಸಿದ್ದರು. ಮೌಂಟ್ ಎವರೆಸ್ಟ್ ಶಿಖರವನ್ನು ತಾಯಿಯಂತೆ ಪ್ರೀತಿಸುವ ನೇಪಾಳಿಗಳಿಗೆ ಇದು ಅನ್ನದ ಬಟ್ಟಲು ಕೂಡ ಹೌದು. ಭಾರೀ ಸಂಖ್ಯೆಯ ನೇಪಾಳಿಗಳ ದಿನ ಸಾಗುವುದೇ ಎವರೆಸ್ಟ್ ಕೃಪೆಯಿಂದ. ಶಿಖರ ಆರೋಹಣಕ್ಕೆ ಬೇಕಾದ ಸಲಕರಣೆಗಳನ್ನು ಪೂರೈಸುವ ಮತ್ತು ವಿದೇಶಿ ಪ್ರವಾಸಿಗರಿಗೆ ಪರ್ವತಾರೋಹಣದಲ್ಲಿ ಸಹಾಯಕರಾಗುವ ಸೇವೆಯ ಮೂಲಕ ನೇಪಾಳಿಗಳು ಸ್ವಾವಲಂಬಿ ಬದುಕು ಬಾಳುತ್ತಿದ್ದಾರೆ. ಚೀನಾ ಇದೀಗ ಮೌಂಟ್ ಎವರೆಸ್ಟ್ ಹಕ್ಕಿನ ಬಗ್ಗೆ ಪ್ರಸ್ತಾಪಿಸಿ ನೇಪಾಳಿಗರ ಕೆಂಗಣ್ಣಿಗೆ ಗುರಿಯಾಗಿದೆ.

ನೇಪಾಳದಲ್ಲಿ ಈಗಿರುವ ಕಮ್ಯುನಿಸ್ಟ್ ಆಡಳಿತದ ಬಗ್ಗೆ ಸಾಕಷ್ಟ್ಟು ಅಸಮಾಧಾನವೂ ಇದೆ. ಅತೀವ ಭ್ರಷ್ಟಾಚಾರ, ಅಭಿವೃದ್ಧಿಯ ನಿರ್ಲಕ್ಷ, ಕೊರೋನ ತಡೆಗಟ್ಟುವಲ್ಲಿ ವೈಫಲ್ಯ, ಗಡಿ ಬಿಕ್ಕಟ್ಟಿನಂತಹ ಹಲವು ವಿಷಯಗಳ ಬಗ್ಗೆ ನೇಪಾಳಿಗಳು ಅಸಮಾಧಾನಿತರಾಗಿದ್ದರೆ. ಇದು ಅಂತಿಮವಾಗಿ ನೇಪಾಳದಲ್ಲಿ ಚೀನಾ ಪ್ರೇರಿತ ಕಮ್ಯುನಿಸ್ಟ್ ಆಡಳಿತ ತಮಗೆ ಹಿಡಿಸದು ಎಂಬುದರ ಸೂಚನೆಯಾಗಿದೆ. ಈಗಿನ ಪ್ರಜಾಪ್ರಭುತ್ವ ಸರಕಾರಕ್ಕಿಂತ ಈ ಹಿಂದಿನ ರಾಜಾಡಳಿತವೇ ಲೇಸು ಎಂಬ ಮನಸ್ಥಿತಿಗೂ ಕೆಲವು ನೇಪಾಳಿಗಳು ಬಂದಿದ್ದಾರೆ.

ನೇಪಾಳಕ್ಕೀಗ ತುರ್ತು ಬೇಕಾಗಿರುವುದು ಭ್ರಷ್ಟಾಚಾರ ಇಲ್ಲದ ತಾರತಮ್ಯ ರಹಿತ ಅಭಿವೃದ್ಧಿ. ಅದು ಯಾವ ಕಡೆಗಳಿಂದ ಬಂದರೂ ಆಗಬಹುದು. ಅದಕ್ಕೆ ರಾಜನ ಆಡಳಿತ, ಕಮ್ಯುನಿಸ್ಟ್ ಆಡಳಿತ, ಕಾಂಗ್ರೆಸ್ ಆಡಳಿತ ಎಂಬ ಲೇಪದ ಅಗತ್ಯ ಇಲ್ಲ. ಯಾರನ್ನು ಬೇಕಾದರೂ ಬೆಂಬಲಿಸಲು ಅವರು ತಯಾರು. ಭಾರೀ ನಿರೀಕ್ಷೆ ಇಟ್ಟು ಆರಿಸಲಾಗಿದ್ದ ಕೆ.ಪಿ. ಒಲಿ ಸರಕಾರ ವಿಫಲವಾಗುತ್ತಿದ್ದು, ನೇಪಾಳಿಗಳಿಗೆ ನಿರಾಸೆ ಮೂಡಿಸಿದೆ. ವಿಸ್ತರಣಾವಾದಿ ಮನೋಭಾವದ ಚೀನಾ ಜೊತೆಗಿನ ನಂಟು ಯಾವ ಕ್ಷಣದಲ್ಲೂ ತನಗೆ ಕಂಟಕ ತರಲಿದೆ ಎಂಬ ಅರಿವು ನೇಪಾಳಕ್ಕೆ ಇಲ್ಲ ಎಂದೇನಲ್ಲ. ಈ ಅಪಾಯದ ಬಗ್ಗೆ ಗೊತ್ತಿದ್ದರೂ ಕಿತ್ತು ತಿನ್ನುವ ಬಡತನ ಮತ್ತು ವಿದ್ಯಾವಂತ ಯುವ ಪೀಳಿಗೆಯ ಕೈಗಳಿಗೆ ಕೆಲಸ ಕೊಡಬೇಕಾದ ಅನಿವಾರ್ಯತೆ ಅದನ್ನು ಡ್ರಾಗನ್ ಜೊತೆಗಿನ ಸಹವಾಸಕ್ಕೆ ತಳ್ಳಿದೆ. ಈ ಕಡೆ ಇದೇ ಚೀನಾದಿಂದಾಗಿ ಹಲವು ಬಾಂಧವ್ಯಗಳ ಹೊರತಾಗಿಯೂ ಭಾರತದ ಬಗ್ಗೆಯೂ ಅದು ಭಯಪಟ್ಟಿದೆ. ಇತ್ತ ಧರೆ ಅತ್ತ ಪುಲಿ ಅನ್ನುವ ಸ್ಥಿತಿ. ಏನೂ ಮಾಡಲು ದಿಕ್ಕು ತೋಚದೆ ಪುಟ್ಟ ರಾಷ್ಟ್ರ ನೇಪಾಳ ಕಂಗಾಲಾಗಿದೆ.

ಭಾರತ ತನ್ನ ನೆರೆಯ ಸಹೋದರ ರಾಷ್ಟ್ರ ನೇಪಾಳ ಜೊತೆಗಿನ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿ ಹಲವು ಬಾಂಧವ್ಯಗಳ ಗಟ್ಟಿ ಬೆಸುಗೆ ಕಡಿಯದಂತೆ ಎಚ್ಚರ ವಹಿಸಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top