ಇನ್ನಾದರೂ ನಾವು ಎಚ್ಚರಗೊಳ್ಳಬೇಕಾಗಿದೆ

ಸುಶಿಕ್ಷಿತ ಕಾರ್ಮಿಕ ವರ್ಗವೇ ಶ್ರಮಜೀವಿಗಳ ಕ್ರಾಂತಿಕಾರಿ ಹೋರಾಟಗಳ ಮುಂಚೂಣಿಯಲ್ಲಿರಬೇಕು ಎಂದು ಬಯಸಿದ್ದ ಮಾರ್ಕ್ಸ್, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲ್ಚಲನೆ ಹೊಂದಿರುವ ಶೋಷಿತ ಸಮುದಾಯದ ಒಂದು ವರ್ಗ ತುಳಿತಕ್ಕೊಳಗಾದವರ ಹೋರಾಟಗಳ ಮುಂಚೂಣಿಯಲ್ಲಿರಬೇಕು ಎಂದು ಬಯಸಿದ್ದ ಅಂಬೇಡ್ಕರ್ ಘೋಷಣೆಗಳಲ್ಲೇ ಉಳಿದಿರುವುದು ನಮ್ಮ ನಡುವಿನ ದುರಂತ. ಈ ವರ್ತುಲದಿಂದ ಹೊರಬಂದು ಭಾರತದ ಶ್ರಮಿಕ ವರ್ಗದ ತುಡಿತಗಳಿಗೆ, ಆಕ್ರಂದನಕ್ಕೆ, ನೋವಿಗೆ ಸ್ಪಂದಿಸುವ ನೈತಿಕ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರತಿರೋಧದ ದನಿಗಳನ್ನು ಸುಲಭವಾಗಿ ದಮನಿಸಲು ಸಾಧ್ಯವಾಗುತ್ತಿದೆ. ಏಕೆಂದರೆ ಈ ದನಿಗೆ ದನಿಗೂಡಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ.


ಭಾರತದ ಶ್ರಮಿಕ ವರ್ಗಗಳಿಗೆ ಕಳೆದ ಐದೂವರೆ ದಶಕಗಳಿಂದ ನಿದ್ರಿಸಲು ಬಿಡದಂತೆ ಈ ದೇಶದ ಆಳುವ ವರ್ಗಗಳು ಪ್ರಭುತ್ವವನ್ನು ನಿರ್ವಹಿಸುತ್ತಾ ಬಂದಿವೆ. ಕಳೆದ ಮೂರು ದಶಕಗಳಿಂದ ಒಂದೆಡೆ ಕುಳಿತುಕೊಳ್ಳಲೂ ಅವಕಾಶ ನೀಡದಂತೆ ಆಡಳಿತಾರೂಢ ಸರಕಾರಗಳು ಆಡಳಿತ ನೀತಿಗಳನ್ನು, ಆರ್ಥಿಕ ನೀತಿಗಳನ್ನು ನಿರ್ವಹಿಸುತ್ತಿವೆ. ಈ ಐದು ದಶಕಗಳಲ್ಲಿ ನಾವು, ಅಂದರೆ ಈ ದೇಶದ ಶ್ರಮಿಕವರ್ಗ ಮತ್ತು ನಾಗರಿಕ ಸಮಾಜ ಎಂದು ಕರೆದುಕೊಳ್ಳುವ ಸಾರ್ವಭೌಮ ಪ್ರಜೆಗಳು ಯಾವುದೋ ಭ್ರಮೆಗೊಳಗಾಗಿ, ನಾಳಿನ ಸುಂದರ ಕನಸು ಕಾಣುತ್ತಾ, ಕಂಡ ಕನಸು ನನಸಾಗುವ ದಿನಗಳನ್ನೆಣಿಸುತ್ತಾ ತೂಕಡಿಸಿದ್ದೇವೆ.

  ಕನಸು ಭಗ್ನವಾದಾಗಲೂ ಮತ್ತೊಂದು ಕನಸು ಹಿಂಬದಿಯಲ್ಲೇ ಇದೆ, ಅದಾದರೂ ನನಸಾಗುತ್ತದೆ ಎನ್ನುವ ಹಗಲುಗನಸಿನಲ್ಲಿ ಕಾಲ ಕಳೆದಿದ್ದೇವೆ. ಕಳೆದ ಮೂರು ದಶಕಗಳಲ್ಲಿ, ವಿಶೇಷವಾಗಿ ಪ್ರಸಕ್ತ ಸಹಸ್ರಮಾನದ ಎರಡು ದಶಕಗಳಲ್ಲಿ ಈ ಕನಸುಗಳು ಭ್ರಮೆಯಾಗಿ ಮಾರ್ಪಟ್ಟಿದ್ದು ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದೇವೆ. ಇನ್ನು ಕಳೆದ ಆರು ವರ್ಷಗಳಲ್ಲಿ ಕನಸುಗಳ ಮತ್ತು ಭ್ರಮಾಲೋಕದ ಪೊರೆಯನ್ನು ಕಳಚಿಕೊಂಡು ಸಮೂಹ ಸನ್ನಿಗೊಳಗಾಗಿ ಐವತ್ತು ವರ್ಷಗಳ ಹಿಂದೆ ಕಂಡ ಕನಸು ನನಸಾಗುವುದು ಖಚಿತ ಎನ್ನುವ ಹಗಲುಗನಸು ಕಾಣುತ್ತಿದ್ದೇವೆ.

ಹಗಲುಗನಸು ನಿಜವಾಗುತ್ತದೆ ಎನ್ನುವ ನಂಬಿಕೆ ಬಹಳ ಪ್ರಾಚೀನವಾದದ್ದು. ಆದರೆ ಅಷ್ಟೇ ಪ್ರಾಚೀನವಾದ ‘‘ಬೇಲಿಯೇ ಎದ್ದು ಹೊಲ ಮೇಯ್ದಂತೆ’’ ಎನ್ನುವ ಗಾದೆಯೂ ನಮ್ಮ ನಡುವೆ ಬೆಳೆದುಕೊಂಡುಬಂದಿದೆ. ಭಾರತದ ಅತ್ಯುತ್ಕೃಷ್ಟ ಸಂವಿಧಾನಕ್ಕೆ ಬದ್ಧರಾಗಿ ನಾವೇ ಆಯ್ಕೆ ಮಾಡಿರುವ ಜನಪ್ರತಿನಿಧಿಗಳು, ಸರಕಾರ ಎನ್ನುವ ಹೆಸರಿನಲ್ಲಿ, ಈ ಬೇಲಿಯನ್ನೂ ನಾಚಿಸುವಂತೆ, ಭರತ ಭೂಮಿ ಎನ್ನುವ ಸಮೃದ್ಧ, ಸಂಪನ್ಮೂಲಯುಕ್ತ ಹೊಲವನ್ನು ಮೇಯಲು ಸಜ್ಜಾಗಿಬಿಟ್ಟಿದ್ದಾರೆ. ಇಂದು ನಾವು ಸಂವಿಧಾನ ನಿಷ್ಠೆಯಿಂದ ಆಯ್ಕೆ ಮಾಡುತ್ತಿರುವ ಜನಪ್ರತಿನಿಧಿಗಳು ಜನಾಧಿಪತಿಗಳಾಗಿದ್ದಾರೆ ಎನ್ನುವ ಮಾರ್ಮಿಕ ಸತ್ಯ ನಮ್ಮ ಕಣ್ಣೆದುರಿದ್ದರೂ ಗ್ರಹಿಸಲಾರದಷ್ಟು ಮಟ್ಟಿಗೆ ಸಮೂಹ ಸನ್ನಿಗೆ ನಾವು ಒಳಗಾಗಿದ್ದೇವೆ. ತತ್ಪರಿಣಾಮ ನಾವು ನಿದ್ರಿಸುತ್ತಿದ್ದರೆ ಅವರು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುತ್ತಿದೆ.

ಸ್ವಾಮಿ ವಿವೇಕಾನಂದರು ‘‘ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ಹೋರಾಡಿ’’ ಎಂದು ಹೇಳಿರುವುದು ಇಂದಿನ ಸಾಂಸ್ಕೃತಿಕ ರಾಜಕಾರಣದ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ಹರಿಕಾರರಿಗಾಗಿ ಅಲ್ಲ, ಪ್ರತಿಪಾದಕರಿಗಾಗಿಯೂ ಅಲ್ಲ. ಈ ಹೇಳಿಕೆ ಹೋರಾಟದ ಹಾದಿಯಲ್ಲಿರುವ, ಸಂಘರ್ಷದ ಪಥದಲ್ಲಿರುವ, ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಹೋರಾಡುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಉದ್ದೇಶಿಸಲಾಗಿದೆ. ಅವರು ಈ ಹೇಳಿಕೆಯನ್ನು ಬಂಡವಾಳ ಮಾಡಿಕೊಂಡಿದ್ದಾರೆ. ನಾವು ಮಿಕಮಿಕ ನೋಡುತ್ತಿದ್ದೇವೆ. ಸಂವಿಧಾನದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯದ ಪರಿಕಲ್ಪನೆಗೆ ಒತ್ತುಕೊಟ್ಟು ಪ್ರಜಾಸತ್ತಾತ್ಮಕ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದ ಬಿ. ಆರ್. ಅಂಬೇಡ್ಕರ್ ಅವರ ಘೋಷಣೆ ‘‘ಶಿಕ್ಷಣ ನೀಡಿ, ಸಂಘಟಿತರಾಗಿ ಮತ್ತು ಪ್ರತಿಭಟಿಸಿ (ಹೋರಾಡಿ)’’ ಈ ದೇಶದ ಶೋಷಿತ ವರ್ಗಗಳನ್ನು ಉದ್ದೇಶಿಸಿದ್ದರೂ ಇದು ಸಾರ್ವತ್ರಿಕವಾಗಿದ್ದು, ಸಾಮಾಜಿಕ ನ್ಯಾಯಕ್ಕಾಗಿ, ಆರ್ಥಿಕ ಸಬಲತೆಗಾಗಿ, ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮತ್ತು ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಡಲು ನೀಡಿರುವ ಕರೆ ಎಂದೇ ನಾವು ಸ್ವೀಕರಿಸಬೇಕು. ನಾವು ಈ ಘೋಷಣೆಯನ್ನು ಸಂಕುಚಿತಗೊಳಿಸಿದ್ದೇವೆ, ಅಂಬೇಡ್ಕರರ ದೃಷ್ಟಿ ದಿಗಂತದಾಚೆಗೂ ಹಬ್ಬಿತ್ತು.

ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಏಂಗೆಲ್ಸ್ ನೀಡಿದ ಘೋಷಣೆ ‘‘ವಿಶ್ವದ ಶ್ರಮಜೀವಿಗಳೇ ಒಂದಾಗಿ ನೀವು ನಿಮ್ಮ ದಾಸ್ಯದ ಸಂಕೋಲೆಗಳನ್ನು ಬಿಟ್ಟು ಬೇರೇನನ್ನೂ ಕಳೆದುಕೊಳ್ಳುವುದಿಲ್ಲ’’, ಇದು ತಮ್ಮ ಬೆವರು ಸುರಿಸಿ, ತಮ್ಮ ಶ್ರಮವನ್ನು ಖರ್ಚು ಮಾಡಿ, ಮಾರಿಕೊಂಡು ಯಾವುದೇ ದೇಶದ ಒಟ್ಟು ಉತ್ಪಾದನೆಗೆ ಕೊಡುಗೆ ನೀಡುವ ಎಲ್ಲ ದುಡಿಯುವ ವರ್ಗಗಳಿಗೂ ಅನ್ವಯಿಸುವ ಒಂದು ಸಾರ್ವಕಾಲಿಕ ಘೋಷವಾಕ್ಯ. ನಾವು ಇದನ್ನೂ ಸಂಕುಚಿತಗೊಳಿಸಿಬಿಟ್ಟೆವು. ಇದು ಕೆಂಬಾವುಟ ಹಿಡಿದವರಿಗೆ ಮಾತ್ರ ಎಂದು ಭಾವಿಸಿದೆವು, ಕಾರ್ಮಿಕರಿಗೆ ಮಾತ್ರ ಎಂದು ಭಾವಿಸಿದೆವು, ಬೆವರು ಸುರಿಸಿ ದೈಹಿಕ ಶ್ರಮವಹಿಸುವವರಿಗೆ ಮಾತ್ರ ಎಂದು ಅರ್ಥೈಸಿದೆವು. ದುಡಿಯುವ ವರ್ಗಗಳ ಒಂದು ವಲಯ ಕಾರ್ಮಿಕ ಎನ್ನುವ ಚೌಕಟ್ಟಿನೊಳಗೆ ಪ್ರವೇಶಿಸಲೇ ಇಲ್ಲ. ಆದರೆ ಮಾರ್ಕ್ಸ್‌ನ ದೃಷ್ಟಿಕೋನ ನೂರು ದಿಗಂತಗಳನ್ನು ದಾಟುವಂತಹುದು. ತನ್ನ ಶ್ರಮ ವನ್ನು ಬಂಡವಾಳಿಗನಿಗೆ ಅಥವಾ ತನ್ನ ಮಾಲಕನಿಗೆ ಮಾರಿಕೊಳ್ಳುವ, ಉತ್ಪಾದನೆಯ ಪ್ರಕ್ರಿಯೆಯಲ್ಲಿ ತನ್ನೊಳಗಿನ ಶ್ರಮಶಕ್ತಿಯನ್ನು ಮಾಲಕರೇ ನಿರ್ಧರಿಸುವ ಒಂದು ನಿರ್ದಿಷ್ಟ ಬೆಲೆಗೆ ಮಾರಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಗೂ ಇದು ಅನ್ವಯಿಸುತ್ತದೆ ಎನ್ನುವ ಸತ್ಯ ನಮಗೆ ಇಂದಿಗೂ ಅರಿವಾಗಿಲ್ಲ.

ಆದರೆ ಅವರಿಗೆ, ಅಂದರೆ ಉತ್ಪಾದನಾ ಪ್ರಕ್ರಿಯೆಯ ಮಾಲಕರಿಗೆ, ಬಂಡವಾಳಿಗರಿಗೆ ಮತ್ತು ಈ ಎರಡೂ ವರ್ಗಗಳ ಭದ್ರತಾ ಸಿಬ್ಬಂದಿಯಂತೆ ಕಾರ್ಯನಿರ್ವಹಿಸುವ ಆಳುವ ವರ್ಗಗಳಿಗೆ ಇವೆಲ್ಲವೂ ಅರ್ಥವಾಗಿದೆ. ಹಾಗಾಗಿಯೇ ಅವರು, ಅಂದರೆ ಆಳುವ ವರ್ಗಗಳು ಅಥವಾ ಪ್ರಭುತ್ವಗಳು ಸಂಘಟನೆಯನ್ನು, ಹೋರಾಟವನ್ನು, ಶಿಕ್ಷಣದ ಪ್ರಸರಣವನ್ನು, ಐಕ್ಯತೆಯ ಸರಪಳಿಗಳನ್ನು ಮತ್ತು ಗುರಿಮುಟ್ಟಲು ಮುಂದಾಗುವ ಕಾಲುಗಳನ್ನು ಹಂತಹಂತವಾಗಿ ತುಂಡರಿಸುತ್ತಲೇ ಬರುತ್ತಿದ್ದಾರೆ. ಈ ವಿಘಟನೆ ಮತ್ತು ವಿಭಜನೆಯ ಪ್ರಕ್ರಿಯೆಗೆ ಇದೇ ಮಹನೀಯರನ್ನು ದಾಳಗಳನ್ನಾಗಿ ಬಳಸಿರುವುದೂ ಇದೆ. ನಮಗೆ, ಅಂದರೆ ಶ್ರಮವನ್ನು, ಶ್ರಮದ ಶಕ್ತಿಯನ್ನು ವ್ಯಯ ಮಾಡುವವರಿಗೆ, ಮಾರಿಕೊಳ್ಳುವವರಿಗೆ ಇದು ಅರ್ಥವಾಗಿಲ್ಲ. ಇದು ನಮ್ಮ ದುರಂತ.

ನಮಗೆ ಈ ಸಾರ್ವತ್ರಿಕ ಸತ್ಯ ಏಕೆ ಅರ್ಥವಾಗಿಲ್ಲ? ಜಟಿಲವಾದ ಪ್ರಶ್ನೆ. ಕ್ಲಿಷ್ಟಕರವೂ ಹೌದು. ಹಾಗೆನಿಸುವುದೇ? ಖಂಡಿತವಾಗಿಯೂ ಅಲ್ಲ. ನಮ್ಮಿಳಗಿನ ಅಂದರೆ ಮಾರ್ಕ್ಸ್ ಪರಿಭಾವಿಸುವ, ಅಂಬೇಡ್ಕರ್ ಪ್ರಮಾಣಿಸುವ ದುಡಿಯುವ ವರ್ಗಗಳು ಮತ್ತು ಶೋಷಿತ ವರ್ಗಗಳೊಳಗಿನ, ನಾವು ಅಂದರೆ ಶ್ರಮಜೀವಿಗಳು ನಮ್ಮನ್ನು ನಾವೇ ವಿಘಟನೆಗೆ ಒಳಪಡಿಸಿಕೊಂಡಿದ್ದೇವೆ. ನಮ್ಮ ಕೈಗಳಿಗೆ ನಾವೇ ಸಂಕೋಲೆಗಳನ್ನು ಹಾಕಿಕೊಂಡಿದ್ದೇವೆ. ನಮ್ಮ ಗುರಿ ಯಾವುದೆಂಬುದನ್ನು ನಾವೇ ಮರೆತಿದ್ದೇವೆ. ನಮ್ಮ್‌ಳಗಿನ ಈ ದೌರ್ಬಲ್ಯ ಅವರ ಶಕ್ತಿಯಾಗಿದೆ. ನಮ್ಮಿಳಗಿನ ಶಕ್ತಿ ಅವರ ರಾಜಕೀಯ ಬಂಡವಾಳವಾಗಲು ನಾವೇ ಅವಕಾಶ ಕೊಟ್ಟಿದ್ದೇವೆ. ಜಾತಿ, ಮತ, ಭಾಷೆ, ಸಮುದಾಯ, ಜನಾಂಗ ಹೀಗೆ ಬದುಕು ನಮಗೆ ನೀಡಿರುವ ಅಸ್ಮಿತೆಗಳನ್ನು ನಮ್ಮ ಖಾಸಗಿ ವಿಚಾರವಾಗಿ ಇಟ್ಟುಕೊಳ್ಳದೆ ಸಾರ್ವಜನಿಕವಾಗಿ ಹರಾಜು ಹಾಕಿಬಿಟ್ಟಿದ್ದೇವೆ. ಎಲ್ಲವನ್ನು ನಮ್ಮ ಜನಪ್ರತಿನಿಧಿಗಳು ಖರೀದಿಸಿಬಿಟ್ಟಿದ್ದಾರೆ. ನಮ್ಮ ಖಾಸಗಿ ಬದುಕನ್ನು ಅವರು ನಿರ್ಧರಿಸುತ್ತಾರೆ, ನಮ್ಮ ಅಸ್ಮಿತೆಯನ್ನು ಅವರು ಕಾಪಾಡುತ್ತಾರೆ ಈ ರೀತಿಯ ಭ್ರಮೆಗಳು ನಮ್ಮನ್ನು ವ್ಯವಸ್ಥೆಯೊಳಗೆ ಒಂದಾಗುವಂತೆ ಮಾಡಿಬಿಟ್ಟಿವೆ.

ನಮ್ಮಳಗಿನ ಈ ನಿಷ್ಕ್ರಿಯತೆಯನ್ನು ನಾವು ನಿರ್ಲಿಪ್ತತೆ ಎಂದು ಭಾವಿಸಿದ್ದೇವೆ. ಹಿತವಲಯದಲ್ಲಿರುವ ಸುಶಿಕ್ಷಿತ ಕಾರ್ಮಿಕ ವರ್ಗ ಮಾರ್ಕ್ಸ್, ಅಂಬೇಡ್ಕರ್ ಅವರನ್ನು ನೆನೆಯುತ್ತದೆ ಆದರೆ ಅನುಸರಿಸುತ್ತಿಲ್ಲ. ಏಕೆಂದರೆ ಕಾರ್ಮಿಕ ವರ್ಗ ವಿಘಟಿತವಾಗಿದೆ. ನಮ್ಮ ಅಸ್ಮಿತೆ ಏನು ಎಂದು ನಿರ್ಧರಿಸಲಾಗದಷ್ಟು ಮಟ್ಟಿಗೆ ಅವರ ನಿಯಂತ್ರಣಕ್ಕೆ ನಾವು ಸಿಲುಕಿದ್ದೇವೆ. ಇದರ ಒಂದು ಆಯಾಮವನ್ನು ಕಳೆದ ಆರು ವರ್ಷಗಳಲ್ಲಿ ಕಂಡಿದ್ದೇವೆ. ನಾವೇ ನೀರೆರೆದು ಪೋಷಿಸಿದ ಸಾರ್ವಜನಿಕ ಉದ್ದಿಮೆಗಳು, ನಾವೇ ಸಂರಕ್ಷಿಸಿದ ನೈಸರ್ಗಿಕ ಸಂಪತ್ತು, ನಾವೇ ಕಟ್ಟಿಬೆಳೆಸಿದ ಬೃಹತ್ ಸಂಸ್ಥೆಗಳು ಇವೆಲ್ಲವೂ ನಮ್ಮ ಕೈಬಿಟ್ಟು ಹೋಗುತ್ತಿವೆ. ನಾವು ನಮ್ಮ ರಕ್ಷಣೆಗಾಗಿ ಕೆಂಬಾವುಟವನ್ನೋ, ನೀಲಿ ಬಾವುಟವನ್ನೋ ಹಿಡಿದು ಧ್ಯೇಯ ಸಾಧಿಸಿಕೊಳ್ಳುತ್ತಿದ್ದೇವೆ. ಆದರೆ ನಾವು ನಿಂತ ನೆಲವೇ ಕುಸಿಯುತ್ತಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತಿಲ್ಲ. ನಮ್ಮದೇ ಸಂಪತ್ತು ಬರಿದಾಗುತ್ತಿದೆ ಎನ್ನುವ ಪರಿವೇ ನಮಗೆ ಇದ್ದಂತಿಲ್ಲ.

ನವ ಉದಾರವಾದ, ಬಲಪಂಥೀಯ ರಾಜಕಾರಣ, ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಅಧಿಕಾರ ರಾಜಕಾರಣ ಈ ನಾಲ್ಕರ ಸಮ್ಮಿಶ್ರ ವ್ಯವಸ್ಥೆಯನ್ನು ನಾವು ಎದುರಿಸುತ್ತಿದ್ದೇವೆ. ಸಾರ್ವಜನಿಕ ಉದ್ದಿಮೆಗಳನ್ನು ಹಂತಹಂತವಾಗಿ ಕೊಲ್ಲುತ್ತಿದ್ದಾಗ, ಅದು ನಮಗೆ ತಟ್ಟದ ಬಿಸಿ ಎಂದುಕೊಂಡಿದ್ದ ಬ್ಯಾಂಕ್ ನೌಕರರು ಇಂದು ಅನಿಶ್ಚಿತತೆ ಎದುರಿಸುತ್ತಿದ್ದಾರೆ. ವಿಮಾನಯಾನ ವಲಯವನ್ನು ಸಾರಾಸಗಟಾಗಿ ಮಾರಾಟ ಮಾಡಿದಾಗ ನಿರ್ಲಿಪ್ತತೆಯಿಂದಿದ್ದ ರೈಲ್ವೆ ನೌಕರರು ನಾಳಿನ ಚಿಂತೆಯಲ್ಲಿದ್ದಾರೆ. ಏಕೆ ಹೀಗೆ ಎಂದು ನಾವು ಯೋಚಿಸಿದ್ದೇವೆಯೇ? ನಮ್ಮನ್ನು ಪ್ರತಿನಿಧಿಸುವ ಸಂಘಟನೆಗಳು ಅಥವಾ ಪಕ್ಷಗಳು ಯೋಚಿಸಿವೆಯೇ? ನವ ಉದಾರವಾದ ಒಂದು ಬೃಹತ್ ಗಾತ್ರದ ಬಂಡೆಯಂತೆ ಉರುಳಿ ಬರುತ್ತಿದೆ. ಈ ಬಂಡೆಗೆ ಸಿಲುಕಿದವರು ನಮ್ಮ ಗಣನೆಗೆ ಬರುತ್ತಿಲ್ಲ. ಇದಕ್ಕೆ ರೈತರ ಆತ್ಮಹತ್ಯೆಗಳೇ ಒಂದು ನಿದರ್ಶನ.

ಸ್ವತಂತ್ರ ಭಾರತದಲ್ಲಿ ಕೋಮು ಗಲಭೆ, ಉಗ್ರವಾದ, ಭಯೋತ್ಪಾದನೆ, ಜಾತಿ ಸಂಘರ್ಷ ಈ ಎಲ್ಲ ಜಟಿಲ ವಿದ್ಯಮಾನಗಳಿಂದ ಮೃತಪಟ್ಟವರನ್ನು ನಿತ್ಯ ಎಣಿಸುತ್ತಾ ನಮ್ಮ ಪ್ರಥಮ ವೈರಿ ಯಾರು ಎಂದು ಯೋಚಿಸುತ್ತಿದ್ದೇವೆ. ಈ ಮೃತರ ಸಂಖ್ಯೆಯ ಹತ್ತು ಪಟ್ಟು ರೈತರು ಸರಕಾರದ ಆರ್ಥಿಕ ನೀತಿಯ ಪರಿಣಾಮವಾಗಿ ಮೃತಪಟ್ಟಿರುವುದು ನಮ್ಮ ಗಮನಕ್ಕೆ ಬರುತ್ತಿಲ್ಲ. ಏಕೆಂದರೆ ಕೃಷಿ ಸಮಸ್ಯೆ, ಭೂಮಿಯ ಪ್ರಶ್ನೆ ಕೇವಲ ಅನ್ನದಾತನಿಗೆ, ಅಂದರೆ ರೈತಾಪಿಗೆ ಸಂಬಂಧಪಟ್ಟಿದ್ದು ಎಂದು ನಿರ್ಲಿಪ್ತರಾಗಿದ್ದೆವು. ಇಂದು ಈ ಭೂಮಿ ಹರಾಜುಕಟ್ಟೆಯಲ್ಲಿದೆ. ಸಂವಿಧಾನವನ್ನು ಬದಲಾಯಿಸದೆಯೇ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿ ಕೃಷಿ ಮಸೂದೆ, ಕಾರ್ಮಿಕ ಮಸೂದೆ ಮುಂತಾದ ಕರಾಳ ಶಾಸನಗಳನ್ನು ಜಾರಿಗೊಳಿಸುತ್ತಿದ್ದರೂ ನಾವು ಸಂವಿಧಾನ ಸುರಕ್ಷಿತವಾಗಿದೆ ಎಂದು ಭಾವಿಸಿದ್ದೇವೆ. ಗ್ರಾಂಥಿಕವಾಗಿ ಸಂವಿಧಾನ ಸುರಕ್ಷಿತವಾಗಿದೆ ಆದರೆ ಆಚರಣೆಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಭಾಸವಾಗುತ್ತಿದೆ. ನಮ್ಮ ಗಮನ ಗ್ರಂಥದ ಮೇಲಿದೆ ಆ ಗ್ರಂಥದ ಹಿಂದಿರುವ ಆಶಯಗಳು ಗಾಳಿಗೆ ತೂರಿಹೋಗುತ್ತಿವೆ.

ನಮ್ಮ ಸಂವಿಧಾನದ ಸ್ವರೂಪವೇ ಹಾಗಿದೆ. ಆಡಳಿತಾರೂಢ ಪಕ್ಷದ ಬಲಾಬಲದ ಮೇಲೆ ಸಾಂವಿಧಾನಿಕ ಮೌಲ್ಯಗಳು ನಿರ್ಧರಿಸಲ್ಪಡುತ್ತವೆ. ಕೊರೋನ ಸಂದರ್ಭದಲ್ಲಿ ದೇಶದ ಜನಸಾಮಾನ್ಯರು ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗಲೇ ಕೃಷಿ ಭೂಮಿ, ಬ್ಯಾಂಕಿಂಗ್ ವಲಯ, ಕಲ್ಲಿದ್ದಲು ಗಣಿಗಾರಿಕೆ, ರೈಲ್ವೆ, ದೂರಸಂಪರ್ಕ ಕ್ಷೇತ್ರ, ವಿಮೆ ಮತ್ತು ವಿಮಾನಯಾನ ಕ್ಷೇತ್ರಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಕೃಷಿ ಮಸೂದೆಯ ವಿರುದ್ಧ ದೇಶಾದ್ಯಂತ ಕೋಟ್ಯಂತರ ರೈತರು ಬೀದಿಗಿಳಿದಿದ್ದಾರೆ. ಇದು ಒಂದು ನಿರ್ಣಾಯಕ ಹೋರಾಟ. ಈ ಹೋರಾಟಕ್ಕೆ ದಲಿತ ಸಂಘಟನೆಗಳು, ರೈತಸಂಘಟನೆಗಳು, ಎಡಪಂಥೀಯ ಕಾರ್ಮಿಕ ಸಂಘಟನೆಗಳು ಮತ್ತು ಪ್ರಗತಿಪರರು ಹೆಗಲು ನೀಡಿರುವುದು ಸ್ವಾಗತಾರ್ಹ.

ಆದರೆ ಪ್ರಶ್ನೆ ಇರುವುದು ಈ ಹೋರಾಟವನ್ನು ಕುರಿತು ಅಲ್ಲ. ಕೃಷಿ ಬಿಕ್ಕಟ್ಟು ಮತ್ತು ಕೃಷಿ ಮಸೂದೆ ಕೇವಲ ರೈತರಿಗೆ ಸಂಬಂಧಿಸಿದ್ದೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಇದು ವ್ಯವಸಾಯ ಮಾಡುವವರ ಪ್ರಶ್ನೆಯಲ್ಲ. ಭೂಮಿಯ ಪ್ರಶ್ನೆ. ಭೂಮಿ ಮತ್ತು ಮಾನವನ ನಡುವೆ ಇರುವ ಸಂಬಂಧಗಳ ಪ್ರಶ್ನೆ. ರೈತಸಂಘಟನೆಗಳ ಪ್ರತಿಭಟನೆಯಲ್ಲಿ ಹಸಿರು ಶಾಲು, ಕೆಂಬಾವುಟ, ನೀಲಿ ಧ್ವಜ ಮಾತ್ರ ಕಂಡರೆ ಸಾಲದು. ಬಿಳಿಯ ಕಾಲರುಗಳೂ ಕಾಣಬೇಕಲ್ಲವೇ? ರೈತ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂದರೆ ನಾವು ನಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರ್ಥ ಅಲ್ಲವೇ? ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಂತರ ಎಕರೆ ಕಾಡುಗಳನ್ನು ಕಾರ್ಪೊರೇಟ್ ಉದ್ದಿಮೆಗಳಿಗೆ ನೀಡಿ, ಅರಣ್ಯಗಳನ್ನು ಮರುಭೂಮಿಯನ್ನಾಗಿ ಮಾಡಲಾಗುತ್ತಿದೆ. ಛತ್ತಿಸ್‌ಗಡದಲ್ಲಿ 40 ಕಲ್ಲಿದ್ದಲು ಗಣಿಗಳಿಗಾಗಿ 4,20,000 ಎಕರೆ ಅರಣ್ಯ ನಾಶ ಮಾಡಲಾಗುತ್ತಿದೆ.

ಇತ್ತ ಅನ್ನ ಬೆಳೆಯುವ ಭೂಮಿ, ಅತ್ತ ಉಸಿರು ನೀಡುವ ನೈಸರ್ಗಿಕ ಸಂಪತ್ತು ಎರಡೂ ಕಾರ್ಪೊರೇಟ್ ಉದ್ದಿಮೆಗಳಿಗೆ ಪರಭಾರೆಯಾಗುತ್ತಿವೆ. ನಾವು ಅವಲಂಬಿಸಿರುವ ನೈಸರ್ಗಿಕ ಸಂಪತ್ತಿನ ಮೇಲೆ, ನಾವೇ ಉತ್ಪಾದಿಸುವ ಸರಕುಗಳ ಮೇಲೆ, ನಾವೇ ಕಟ್ಟಿ ಬೆಳೆಸಿದ ಉದ್ದಿಮೆ ಮತ್ತು ಸಂಸ್ಥೆಗಳ ಮೇಲೆ ಕಾರ್ಪೊರೇಟ್ ಕುಳಗಳು ಅಧಿಪತ್ಯ ನಡೆಸಲು ಸಜ್ಜಾಗುತ್ತಿದ್ದಾರೆ. ಇದನ್ನು ವಿರೋಧಿಸಲು ಕಾರ್ಮಿಕರಿಗೆ ಇದ್ದ ಹಕ್ಕುಗಳನ್ನೂ ಕಸಿದುಕೊಳ್ಳಲು ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಇಂದು ನಮ್ಮೆಲ್ಲರ ನೆಲೆ ಕುಸಿಯುತ್ತಿದೆ. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಗೆ ಭಾರತದ ಉದ್ಯಮಶೀಲತೆ ಶರಣಾದಂತೆ ನಾವು ಕಟ್ಟಿದ ಭದ್ರಕೋಟೆಗಳು ಆಧುನಿಕ ಕಾರ್ಪೊರೇಟ್ ಕುಳಗಳಿಗೆ ಶರಣಾಗುತ್ತಿವೆ.

ಹೋರಾಟಗಳನ್ನು ಅನುಮಾನದ ದೃಷ್ಟಿಯಿಂದ ನೋಡುವ ಮಟ್ಟಿಗೆ ನಮ್ಮ ಸಮಾಜದ ಒಂದು ವರ್ಗ ಸಮೂಹ ಸನ್ನಿಗೊಳಗಾಗಿದೆ. ಹಾಗಾಗಿಯೇ ಹೋರಾಟನಿರತ ರೈತರು ಭಯೋತ್ಪಾದಕರಂತೆ ಕಾಣುತ್ತಾರೆ. ಅರಣ್ಯ ಮತ್ತು ಪರಿಸರ ರಕ್ಷಣೆಗಾಗಿ ಹೋರಾಡುವವರು ನಗರ ನಕ್ಸಲರಂತೆ ಕಾಣುತ್ತಾರೆ. ಸರಕಾರದ ಜನವಿರೋಧಿ ಕಾಯ್ದೆಗಳನ್ನು ವಿರೋಧಿಸುವವರು ದೇಶದ್ರೋಹಿಗಳಂತೆ ಕಾಣುತ್ತಾರೆ. ಈ ವ್ಯಾಖ್ಯಾನಗಳನ್ನು ಬೇಷರತ್ತಾಗಿ ಒಪ್ಪಿಕೊಳ್ಳುವ ಮಧ್ಯಮ ವರ್ಗಗಳು ಪ್ರತಿಭಟನೆ ಎಂದರೆ ದಂಧೆಕೋರರ ಸಂಚು ಎಂದು ಭಾವಿಸುತ್ತವೆ. ಸುರಕ್ಷಿತ ಹಿತವಲಯಗಳಲ್ಲಿರುವ ಸುಶಿಕ್ಷಿತ ಕಾರ್ಮಿಕರೂ ಈ ಮಧ್ಯಮ ವರ್ಗಗಳ ಒಂದು ಭಾಗವಾಗಿದ್ದು, ಇದೇ ಧೋರಣೆಯನ್ನು ಅನುಸರಿಸುತ್ತಿವೆ.

ಈ ಸುಶಿಕ್ಷಿತ ಕಾರ್ಮಿಕ ವರ್ಗವೇ ಶ್ರಮಜೀವಿಗಳ ಕ್ರಾಂತಿಕಾರಿ ಹೋರಾಟಗಳ ಮುಂಚೂಣಿಯಲ್ಲಿರಬೇಕು ಎಂದು ಬಯಸಿದ್ದ ಮಾರ್ಕ್ಸ್, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲ್ಚಲನೆ ಹೊಂದಿರುವ ಶೋಷಿತ ಸಮುದಾಯದ ಒಂದು ವರ್ಗ ತುಳಿತಕ್ಕೊಳಗಾದವರ ಹೋರಾಟಗಳ ಮುಂಚೂಣಿಯಲ್ಲಿರಬೇಕು ಎಂದು ಬಯಸಿದ್ದ ಅಂಬೇಡ್ಕರ್ ಘೋಷಣೆಗಳಲ್ಲೇ ಉಳಿದಿರುವುದು ನಮ್ಮ ನಡುವಿನ ದುರಂತ. ಈ ವರ್ತುಲದಿಂದ ಹೊರಬಂದು ಭಾರತದ ಶ್ರಮಿಕ ವರ್ಗದ ತುಡಿತಗಳಿಗೆ, ಆಕ್ರಂದನಕ್ಕೆ, ನೋವಿಗೆ ಸ್ಪಂದಿಸುವ ನೈತಿಕ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರತಿರೋಧದ ದನಿಗಳನ್ನು ಸುಲಭವಾಗಿ ದಮನಿಸಲು ಸಾಧ್ಯವಾಗುತ್ತಿದೆ. ಏಕೆಂದರೆ ಈ ದನಿಗೆ ದನಿಗೂಡಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಸಮೂಹ ಸನ್ನಿಯಿಂದ ಹೊರಬಂದು, ವಾಸ್ತವವನ್ನು ಅರಿತು, ನಮ್ಮ ಕಣ್ಣೆದುರಿನಲ್ಲೇ ನಡೆಯುತ್ತಿರುವ ಸಂಪನ್ಮೂಲಗಳ ಲೂಟಿಯನ್ನು ತಡೆಗಟ್ಟಲು ಕೈ ಜೋಡಿಸದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ. ನಾವು ಸೃಷ್ಟಿಸಿಕೊಂಡಿರುವ ಅಸ್ಮಿತೆಯ ಪ್ರಭಾವಳಿಗಳು ನಮ್ಮನ್ನು ರಕ್ಷಿಸಬಹುದು ಆದರೆ ನಾವು ನಿಂತ ನೆಲೆಯನ್ನು ರಕ್ಷಿಸುವುದಿಲ್ಲ. ಸಂರಕ್ಷಿತ ಅಸ್ಮಿತೆ ವ್ಯಕ್ತಿಗತ ನೆಲೆಯಲ್ಲಿ ಸುಭದ್ರವಾಗಿರಬಹುದು ಆದರೆ ನಮ್ಮ ಸುತ್ತಲಿನ ಸಮಾಜದ ಅಭದ್ರತೆಯಿಂದ ನರಳುತ್ತಿರುತ್ತದೆ. ಈ ನರಳುವಿಕೆಗೆ ಸ್ಪಂದಿಸುವುದು ನಮ್ಮ ಕರ್ತವ್ಯವೂ ಹೌದು, ಹೊಣೆಯೂ ಹೌದು. ನಾವು ಎಚ್ಚೆತ್ತಿದ್ದೇವೆ ಆದರೆ ನಮ್ಮ ಪ್ರಜ್ಞೆ ನಿದ್ರಿಸುತ್ತಿದೆ. ಎಚ್ಚರವಾಗಬೇಕಿರುವುದು ನಮ್ಮ ಸಮಷ್ಟಿ ಪ್ರಜ್ಞೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top