ಇಂದು ಡಾ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನ

ಬುದ್ಧನ ಹಾದಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್

ನಾಗಪುರದಲ್ಲಿ 1956 ಅಕ್ಟೋಬರ್ 14ರಂದು ವಿಜಯದಶಮಿ ದಿನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬೌದ್ಧ ಧರ್ಮ ದೀಕ್ಷೆಯನ್ನು ಪಡೆಯಲು ಶುಭ್ರವಾದ ತೆಳ್ಳನೆಯ ಬಿಳಿ ಅಂಗಿ ದೋತರವುಟ್ಟು ಆಗಮಿಸಿ ಸಾಂಚೀಸ್ತೂಪದ ಭವ್ಯ ವೇದಿಕೆಯಲ್ಲಿ ಪತ್ನಿ ಸವಿತಾ ಅಂಬೇಡ್ಕರ್, ಭಾರತೀಯ ಮಹಾಬೋಧಿ ಸೊಸೈಟಿಯ ಮಹಾ ಕಾರ್ಯದರ್ಶಿ ಖ. ವಲಿಸಿನ್ಹಾ, ಆಪ್ತ ಸಹಾಯಕ ಎಂ.ಎಸ್.ರತ್ತು ಮತ್ತು ದೇಶ-ವಿದೇಶಗಳಿಂದ ಆಗಮಿಸಿದ ಅಪಾರ ಅನುಯಾಯಿಗಳ ಸಮ್ಮುಖದಲ್ಲಿ ದೇಶದ ಹಿರಿಯ ಬೌದ್ಧ ಭಿಕ್ಕು ಕುಶಿನಾರದ ಮಹಾಸ್ಥಾವೀರ ಚಂದ್ರಮಣಿಯವರಿಂದ ತ್ರಿಸರಣ ಪಂಚಶೀಲ ಪಠಣ ಮತ್ತು ‘‘ಬುದ್ಧಂ ಶರಣಂ ಗಚ್ಛಾಮಿ, ದಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ’’ ಎಂದು ಮೂರು ಬಾರಿ ಹೇಳಿಸಿಕೊಂಡು ದಮ್ಮಾನುಸ್ಸತಿ, ಸಂಘಾನುಸ್ಸತಿ ಆಗುತ್ತಾರೆ.


ಪ್ರಾಚೀನ ಭಾರತದಲ್ಲಿ ಸಿದ್ಧಾರ್ಥ ಜನರ ಸಂಕಷ್ಟಗಳನ್ನು ಅರಿಯಲು ಅವರ ಬಳಿಗೆ ಹೋಗುತ್ತಾನೆ. ಅವರ ದುಃಖ ದುಮ್ಮಾನಗಳನ್ನು ಆಲಿಸಿದ ಅವನು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಅರಮನೆ ತ್ಯಜಿಸಿ ಲೋಕ ಸಂಚಾರ ಮಾಡುತ್ತಾನೆ. ಸಿದ್ಧಾರ್ಥ ಕೈಗೊಂಡ ಅನೇಕ ಪರಿತ್ಯಾಗಗಳ ನಂತರ ಲಭಿಸಿದ ಜ್ಞಾನೋದಯದಿಂದ ಬುದ್ಧನಾಗಿ ಸಕಲ ಜೀವರಾಶಿಗಳ ಮೇಲೆ ಅನುಪಮ ಕರುಣೆಯಿಂದ ಸಮ್ಮಾಸಂಬುದ್ಧನಾಗುತ್ತಾನೆ. ತಥಾಗತನ ಮೈತ್ರಿ, ಕರುಣೆಯ ನೀತಿ ಮಾರ್ಗದ ಮೇಲೆ ಭೂಮಿಯಲ್ಲಿ ನ್ಯಾಯ ಸಂರಚನೆಯಾಯಿತು. ಬುದ್ಧನ ನಂತರ ಅವನ ಅನುಯಾಯಿಗಳಾಗಿ ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಅಶೋಕನ ತರುವಾಯ ಅನೇಕ ರಾಜರು ಬುದ್ಧ ತೋರಿದ ಹಾದಿಯಲ್ಲಿ ಶಾಂತಿ, ನೆಮ್ಮದಿಯ ಸಾಮ್ರಾಜ್ಯ ಸ್ಥಾಪಿಸಿ ಆಡಳಿತ ನಡೆಸಿದರು. ಬುದ್ಧನ ತತ್ವಗಳು ಜಾರಿಯಾದ ಸಾವಿರಾರು ವರ್ಷಗಳ ನಂತರ ಜಾತಿ, ಅಸ್ಪಶ್ಯತೆಯಂತಹ ಪಿಡುಗುಗಳಿಂದ ಜನರನ್ನು ರಕ್ಷಿಸಲು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್‌ರವರು ಬುದ್ಧನ ಹಾದಿಯಲ್ಲಿ ಸಾಗುತ್ತಾರೆ. ಬುದ್ಧನ ನಂತರ ಭೀಮ್‌ರಾವ್ ಅಂಬೇಡ್ಕರ್ ತನ್ನ ಆಲೋಚನಾ ಶಕ್ತಿಯಿಂದ ಭೂಮಿಯ ಮೇಲೆ ಜೀವಿಸುವ ಸಕಲ ಜೀವಿಗಳ ಸಂಬಂಧ ಗಟ್ಟಿಗೊಳಿಸಲು ಇಡೀ ಸಮಾಜದ ಓರೆ ಕೋರೆಗಳನ್ನು ಪರೀಕ್ಷೆಗೆ ಒಳಪಡಿಸುತ್ತಾರೆ.

ಅವರು ಅಪಾರ ಜ್ಞಾನಸಂಪತ್ತು ಗಳಿಸಿದ ಮೇಲೆ ಜನರಲ್ಲಿ ಹಾಸುಹೊಕ್ಕಿರುವ ಜಾತಿ ಮತ್ತು ಅಸ್ಪಶ್ಯತೆ ಎಂಬ ಪಿಡುಗು ನಿವಾರಿಸಲು ಪರಿಹಾರ ಮಾರ್ಗಗಳನ್ನು ಸೂಚಿಸುತ್ತಾರೆ. ಶೋಷಿತ ಸಮುದಾಯಗಳನ್ನು ಪ್ರಾಣಿಗಿಂತಲೂ ಕಡೆಯಾಗಿ ಕಾಣುತ್ತಿರುವ ಹಿಂದೂ ಧರ್ಮದಲ್ಲಿರುವ ಅಸ್ಪಶ್ಯತೆ ಮತ್ತು ಜಾತೀಯತೆಯನ್ನು ಅತ್ಯಂತ ನಿಷ್ಠುರವಾಗಿ ಡಾ. ಅಂಬೇಡ್ಕರ್‌ರವರು ಖಂಡಿಸುತ್ತಾರೆ. ಮುಂದೆ ಆಲೋಚನಾ ಶಕ್ತಿ ಎಂಬ ಅಸ್ತ್ರವಿಡಿದು ನ್ಯಾಯ, ಸಮಾನತೆಯನ್ನು ಮರು ಸ್ಥಾಪಿಸಲು ಸಂವಿಧಾನದಲ್ಲಿ ಸಮಾನತೆ, ಸೋದರತೆ, ಸ್ವಾತಂತ್ರ್ಯವನ್ನು ಅಳವಡಿಸುತ್ತಾರೆ. ಡಾ. ಅಂಬೇಡ್ಕರ್‌ರವರ ನಿಷ್ಪಕ್ಷಪಾತ ಆಲೋಚನೆಯಿಂದ ಬುದ್ಧನ ತರುವಾಯ ಭಾರತದ ಜನತೆಗೆ ಒಂದು ಶಾಶ್ವತ ಪರಿಹಾರ ದೊರೆಯಿತು. ಹಿಂದೂ ಧರ್ಮದ ಶೋಷಣೆಯನ್ನು ಅನುಭವಿಸಿಕೊಂಡು ಬಂದಿದ್ದ ಡಾ. ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಪ್ರಸಿದ್ಧ ಮತ್ತು ಸಾಮಾನ್ಯ ವ್ಯಕ್ತಿತ್ವ ಹೊಂದಿರುವ ಇಬ್ಬರಿಗೂ ತಾರತಮ್ಯ ಎಂಬುದು ಇದ್ದೇ ಇರುತ್ತದೆ. ಹೀಗಾಗಿ, ಶತಶತಮಾನಗಳಿಂದ ಶೋಷಿತರನ್ನು ಶೋಷಿಸುತ್ತಿರುವ ‘‘ಹಿಂದೂ ಧರ್ಮ ಅಸಮಾನತೆಯ ತವರೂರು’’ ಎಂದು ಹೇಳಿದ್ದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 1933ರಲ್ಲಿ ಲಂಡನ್‌ನಲ್ಲಿ ಗ. ಆ. ಗವಾಯಿಯವರೊಡನೆ ಧರ್ಮಾಂತರ ಎಂಬ ವಿಷಯ ಕುರಿತು ಚರ್ಚಿಸುವಾಗ ‘‘ನನ್ನ ಒಲವು ಬೌದ್ಧ ಧರ್ಮದ ಕಡೆಗೆ’’ ಎಂದು ಸಾರ್ವಜನಿಕವಾಗಿ ಘೋಷಿಸಿದ್ದರು. 1935ರ ಅಕ್ಟೋಬರ್ 13ರಂದು ಯೇವಲಾ ನಗರದಲ್ಲಿ ‘ಭಾರತದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ’ಯ ಕುರಿತು ಭಾಷಣ ಮಾಡುವಾಗ ‘‘ಹಿಂದೂ ಧರ್ಮದಿಂದ ಅಸ್ಪಶ್ಯರು ಹೀನಾಯ ಬದುಕನ್ನು ಎದುರಿಸುತ್ತಿದ್ದಾರೆ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ’’ ಎಂದು ಹಿಂದೂ ಧರ್ಮದಿಂದ ದೂರ ಸರಿಯುವ ಸುಳಿವು ನೀಡಿದರು.

ಮುಂದುವರಿದು ‘‘ಅಸ್ಪಶ್ಯರು ಯಾವ ಪಾಪವನ್ನೂ ಮಾಡಿಲ್ಲ. ಪಾಪ ಮಾಡಿದ್ದು ಈ ಸ್ಪಶ್ಯರು ಅದರ ಫಲ ಮಾತ್ರ ನಾವು ಅನುಭವಿಸಬೇಕಾಗಿರುವುದರಿಂದ ನಾವೇ ಅವರಿಂದ ದೂರ ಆಗಬೇಕಿದೆ.’’ (ಸಂಪುಟ-19, ಪುಟ-389-90)

‘‘ಅಸ್ಪಶ್ಯರನ್ನು ಕನಿಷ್ಠ ಮನುಷ್ಯರಂತೆ ಕಾಣದ ಧರ್ಮದಿಂದ ದಲಿತರಿಗೆ ತಾರತಮ್ಯಗಳು ಜೀವಂತವಾಗಿರುತ್ತವೆ. ಭಾರತದಲ್ಲಿರುವ ಅಸ್ಪಶ್ಯತೆ ಆಚರಣೆ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಈ ಮಾರಕ ರೋಗ ನಮಗೆ ಹರಡದಂತೆ ದಲಿತರು ಹಿಂದೂ ಧರ್ಮದಿಂದ ದೂರ ಸರಿದು (ಪ್ರತ್ಯೇಕವಾಗಿ) ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೌದ್ಧ ದಮ್ಮದತ್ತ ಸಾಗಬೇಕಿದೆ. ಬುದ್ಧನ ದಮ್ಮವೇ ಇದಕ್ಕೆ ಮೂಲ ಮದ್ದು’’ ಎಂದ ಡಾ. ಅಂಬೇಡ್ಕರ್‌ರವರು, ಹಿಂದೂ ಧರ್ಮದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಉಳಿದಿರುವ ಏಕೈಕ ಉಪಾಯ ಎಂದರೆ ‘‘ಧರ್ಮಾಂತರ’’ ಎಂದು ಡಿಸೆಂಬರ್-08-1935ರಲ್ಲಿ ಅಭಿಪ್ರಾಯ ಪಡುತ್ತಾರೆ.

1936ರ ಜೂನ್ 1ರಲ್ಲಿ ಕೋಲ್ಕತದಲ್ಲಿ ಬೌದ್ಧಭಿಕ್ಕುಗಳ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ 1940 ಫೆಬ್ರವರಿಯಲ್ಲಿ ಮುಂಬೈ ಪತ್ರಕರ್ತರಿಗೆ ಸಂದರ್ಶನ ನೀಡಿದ ಬಾಬಾ ಸಾಹೇಬರು ಬೌದ್ಧ ಧರ್ಮ ಸೇರುವ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು. ನಂತರ 1944 ಸೆಪ್ಟಂಬರ್ 4ರಲ್ಲಿ ಮದ್ರಾಸ್‌ನಲ್ಲಿ ‘‘ಭಾರತದ ಬೌದ್ಧಿಕ ಸಂಸ್ಕರಣ’’ ಎಂಬ ವಿಷಯದ ಮೇಲೆ ಭಾಷಣ ಮಾಡಿದ ಅಂಬೇಡ್ಕರ್‌ರವರು ಬೌದ್ಧ ಧರ್ಮ ಮತ್ತು ವೈದಿಕ ಧರ್ಮಗಳ ಭಿನ್ನತೆ ಹಾಗೂ ಭಾರತದಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ ಬೌದ್ಧ ಧರ್ಮದ ಅವಶ್ಯಕತೆಯನ್ನು ಒತ್ತಿ ಹೇಳಿದರು. ಮುಂದೆ, ಬೌದ್ಧ ಧರ್ಮ ಕುರಿತು 1950ಮೇ 25ರಂದು ಶ್ರೀಲಂಕಾದ ಕೊಲಂಬೊದಲ್ಲಿ ‘ಯಂಗ್‌ಮೆನ್ಸ್ ಬುದ್ಧಿಸ್ಟ್ ಅಸೋಸಿಯೇಷನ್’ ಪ್ರತಿನಿಧಿಗಳ ಸಭೆಯಲ್ಲಿ ಉಪನ್ಯಾಸವನ್ನು ನೀಡಿದರು.

ಅಂದು ಸುಮಾರು 500 ಮಂದಿ ಭಾರತೀಯರು ಬೌದ್ಧ ಧರ್ಮ ಸ್ವೀಕರಿಸಿದರು. ನಂತರ ಭಾರತದ ತಿರುವನಂತಪುರಂ ಮತ್ತು ಮದ್ರಾಸ್‌ನಲ್ಲಿ ಬೌದ್ಧ ಧರ್ಮ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಮುಂದೆ ಜುಲೈ 29ರಂದು ದಿಲ್ಲಿಯ ಬುದ್ಧ ವಿಹಾರದಲ್ಲಿ ‘‘ಬೌದ್ಧ ಧರ್ಮದ ಪುನರುತ್ಥಾನಕ್ಕಾಗಿ ನನ್ನ ಸಂಪೂರ್ಣ ಆಯುಷ್ಯವನ್ನು ಮುಡಿಪಾಗಿಡುತ್ತೇನೆ’’ ಎಂದು ಹೇಳಿದರು. ಭಾರತದಲ್ಲಿ 1951 ಜುಲೈನಲ್ಲಿ ‘ಇಂಡಿಯನ್ ಬುದ್ಧಿಸ್ಟ್ ಸೊಸೈಟಿ’ ಸ್ಥಾಪಿಸಿದರು. 1953ರಲ್ಲಿ ಬುದ್ಧ ಮಹಾ ಪರಿನಿಬ್ಬಾಣ ದಿನ ಪ್ರಯುಕ್ತ ಲಕ್ಷಾಂತರ ಜನರನ್ನು ಸೇರಿಸಿ ಬೌದ್ಧ ಧರ್ಮ ಸ್ಥಾಪನೆಗಾಗಿ ದುಡಿದರು. ನಾಗಪುರ ದಲಿತರ ಪಾಲಿಗೆ ಐತಿಹಾಸಿಕ ಸ್ಥಳವಾದ್ದರಿಂದ ಅಲ್ಲಿ ಬೌದ್ಧ ದಮ್ಮ ಸಮಿತಿ ಸ್ಥಾಪಿಸಿ, ವಾಮನರಾವ್ ಗೋಡ ಬೋಲೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ, ಬೌದ್ಧ ಧರ್ಮ ಸೇರುವ ಕುರಿತು 1956 ಸೆಪ್ಟಂಬರ್ 23ರಂದು ಪತ್ರಿಕಾ ಪ್ರಕಟನೆೆ ಹೊರಡಿಸಿದರು.

ನಾಗಪುರದಲ್ಲಿ 1956 ಅಕ್ಟೋಬರ್ 14ರಂದು ವಿಜಯದಶಮಿ ದಿನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬೌದ್ಧ ಧರ್ಮ ದೀಕ್ಷೆಯನ್ನು ಪಡೆಯಲು ಶುಭ್ರವಾದ ತೆಳ್ಳನೆಯ ಬಿಳಿ ಅಂಗಿ ದೋತರವುಟ್ಟು ಆಗಮಿಸಿ ಸಾಂಚೀಸ್ತೂಪದ ಭವ್ಯ ವೇದಿಕೆಯಲ್ಲಿ ಪತ್ನಿ ಸವಿತಾ ಅಂಬೇಡ್ಕರ್, ಭಾರತೀಯ ಮಹಾಬೋಧಿ ಸೊಸೈಟಿಯ ಮಹಾ ಕಾರ್ಯದರ್ಶಿ ಖ. ವಲಿಸಿನ್ಹಾ, ಆಪ್ತ ಸಹಾಯಕ ಎಂ.ಎಸ್.ರತ್ತು ಮತ್ತು ದೇಶ-ವಿದೇಶಗಳಿಂದ ಆಗಮಿಸಿದ ಅಪಾರ ಅನುಯಾಯಿಗಳ ಸಮ್ಮುಖದಲ್ಲಿ ದೇಶದ ಹಿರಿಯ ಬೌದ್ಧ ಭಿಕ್ಕು ಕುಶಿನಾರದ ಮಹಾಸ್ಥಾವೀರ ಚಂದ್ರಮಣಿಯವರಿಂದ ತ್ರಿಸರಣ ಪಂಚಶೀಲ ಪಠಣ ಮತ್ತು ‘‘ಬುದ್ಧಂ ಶರಣಂ ಗಚ್ಛಾಮಿ, ದಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ’’ ಎಂದು ಮೂರು ಬಾರಿ ಹೇಳಿಸಿಕೊಂಡು ದಮ್ಮಾನುಸ್ಸತಿ, ಸಂಘಾನುಸ್ಸತಿ ಆಗುತ್ತಾರೆ. ಈ ಸಂದರ್ಭ ದಲ್ಲಿ ಸ್ವತಃ ತಾವೇ ತಯಾರಿಸಿ ತಂದ 22 ಪ್ರತಿಜ್ಞೆಗಳನ್ನು ದಲಿತರು ಪಾಲಿಸಬೇಕೆಂದು ನೆರೆದಿದ್ದ ಜನರಿಗೆ ಹೇಳಿ, ಅವರಿಂದ ಪುನರುಚ್ಚಾರ ಮಾಡಿಸಿ, ಸುಮಾರು 6 ಲಕ್ಷಕ್ಕೂ ಮಿಗಿಲಾಗಿ ಸೇರಿದ ಅನುಯಾಯಿಗಳ ಜೊತೆ ಬೌದ್ಧ ದಮ್ಮ ಸ್ವೀಕರಿಸಿದರು. ಇಂದು ಬಾಬಾ ಸಾಹೇಬ್ ಡಾ. ಅಂಬೇಡ್ಕರ್‌ರ ಋಣದಲ್ಲಿ ಬದುಕುತ್ತಿರುವ ಕೋಟ್ಯಂತರ ದಲಿತರು ಅವರು ನಡೆದ ಹಾದಿಯನ್ನು ಸದಾ ನೆನಪಿಟ್ಟುಕೊಳ್ಳಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top