--

ಶೇ.10ರ ಮೀಸಲಾತಿ: ಜಾತಿಗಳ ಅಸಮರ್ಪಕ ಸೇರ್ಪಡೆ

ರಾಜ್ಯ ಸರಕಾರವು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಅರ್ಹತೆ ಇರುವ ಅತೀ ಹಿಂದುಳಿದ ಜಾತಿಗಳು ಮತ್ತು ಈಗಾಗಲೇ ಸೇರಿರುವ ಮುಖ್ಯ ಜಾತಿಗಳಿಗೆ ಅವುಗಳ ಉಪಜಾತಿಗಳನ್ನು ಸೇರಿಸಲು ಕ್ರಮತೆಗೆದುಕೊಳ್ಳಬೇಕಾಗಿದೆ. ರಾಜ್ಯ ಸರಕಾರವೇನಾದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಹಿಂದುಳಿದ ಜಾತಿ-ಉಪಜಾತಿಗಳು ಮೇಲ್ಜಾತಿಗಳೊಡನೆ ಸೆಣೆಸುವುದು, ಅಸಮಬಲರ ನಡುವಿನ ಹೋರಾಟವಾಗಿ ಸಾಮಾಜಿಕ ನ್ಯಾಯವೆಂಬುದು ಅವುಗಳ ಪಾಲಿಗೆ ಮರೀಚಿಕೆಯೇ ಸರಿ!


 ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮಾನತೆಗೆ ಪರ್ಯಾಯವಾಗಿ, ಪರಿಹಾರಗಳನ್ನು ಕಂಡುಕೊಳ್ಳುವುದು ಕಾಲದ ನಡುವೆ, ಪ್ರಸ್ತುತವೆನಿಸಿದುದರಿಂದ ಮೀಸಲಾತಿಯ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ. ಮೀಸಲಾತಿಗೆ ಶತಮಾನದ ಇತಹಾಸವಿದೆ. ಮೈಸೂರು ಸಂಸ್ಥಾನ 1872ರಲ್ಲಿಯೇ ಉದ್ಯೋಗದಲ್ಲಿ ಮೀಸಲಾತಿ ನೀಡುವುದರ ಮೂಲಕ ಮೊದಲ ಹೆಜ್ಜೆಯಿರಿಸಿತು. 1902ರಲ್ಲಿ ಕೊಲ್ಲಾಪುರ ಸಂಸ್ಥಾನದ ಶಾಹು ಮಹಾರಾಜರು ಸಹ ಜಾರಿಗೆ ತಂದರು. ಮೈಸೂರು ಸಂಸ್ಥಾನದಲ್ಲಿ, ಬ್ರಾಹ್ಮಣರ ಪ್ರಾಬಲ್ಯದಿಂದಾಗಿ ಉಳಿದ ಸಮುದಾಯಗಳಿಗೆ ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಕೂಗಿಗೆ ಮಣಿದ ನಾಲ್ವಡಿ ಕೃಷ್ಣರಾಜ ಒಡೆಯರ್ 1918ರಲ್ಲಿ ವೆಸ್ಲಿ ಸಿ. ಮಿಲ್ಲರ್ ಸಮಿತಿ ನೇಮಿಸಿ ಅದರ ವರದಿ ಆಧರಿಸಿ ಬ್ರಾಹ್ಮಣ, ಬ್ರಿಟಿಷರು ಮತ್ತು ಆಂಗ್ಲೋ ಇಂಡಿಯನ್ ಸಮುದಾಯಗಳನ್ನು ಹೊರತು ಪಡಿಸಿ, ಉಳಿದ ಹಿಂದುಳಿದ ವರ್ಗಗಳಿಗೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಜಾರಿಗೆ ತಂದರು. ಆಳರಸರ ಸಂಸ್ಥಾನವೊಂದು ಶಾಸನಾತ್ಮಕವಾಗಿ ಮೀಸಲಾತಿ ತಂದ ಹೆಗ್ಗಳಿಕೆ ಮೈಸೂರು ಸಂಸ್ಥಾನಕ್ಕೆ ಪ್ರಾಪ್ತವಾಯಿತು. ಭಾರತದಲ್ಲಿ ಒಂದೆರಡು ಸಂಸ್ಥಾನ ಹೊರತು ಪಡಿಸಿದಂತೆ ಇತರ ಸಂಸ್ಥಾನಗಳು ಈ ದಿಸೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ 1950ರಲ್ಲಿ ಪ.ಜಾ. ಮತ್ತು ಪ.ಪಂ. ಗಳಿಗೆ ಮೀಸಲಾತಿ ಕಲ್ಪಿಸಲಾಯಿತು.

ಚಂಪಕಮ್ ದೊರೈರಾಜ್ /    ಮದ್ರಾಸ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಸಂವಿಧಾನದ ಮೊದಲನೇ ತಿದ್ದುಪಡಿಗೆ ಕಾರಣವಾಯಿತು. ಸಮಾನತಾ ವಿಧಿ 15ಕ್ಕೆ ತಿದ್ದುಪಡಿ ಮಾಡಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು, ಉಪವಿಧಿ 4ನ್ನು ಸೇರಿಸಲಾಯಿತು. ತತ್ಪರಿಣಾಮ, 1953ರಲ್ಲಿ ನೇಮಕಗೊಂಡ ಕಾಕಾ ಕಾಲೇಲ್ಕರ್ ಆಯೋಗ ಸಲ್ಲಿಸಿದ ವರದಿ ಸಂಸತ್ತಿನಲ್ಲಿ ತಿರಸ್ಕರಿಸಲ್ಪಟ್ಟ ಪ್ರಯುಕ್ತ ಹಿಂದುಳಿದ ವರ್ಗಗಳಿಗೆ ತೀವ್ರ ಹಿನ್ನಡೆಯಾಯಿತು. ಆದರೆ, ಕೆಲವು ರಾಜ್ಯಗಳು ಹಿಂದುಳಿದ ವರ್ಗಗಳಿಗೆ ಸಂವಿಧಾನದ ವಿಧಿ 16/4 ರನ್ವಯ ಮೀಸಲಾತಿ ನೀಡಲು ಮುಂದಾದವು.

ಬಿ.ಪಿ. ಮಂಡಲ್ ಆಯೋಗದ ವರದಿ ಅನುಸಾರ ಕೇಂದ್ರ ಸರಕಾರ 1990ರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿತು. ಕೇಂದ್ರ ಸರಕಾರದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ನವ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಆ ಆದೇಶವನ್ನು ಎತ್ತಿ ಹಿಡಿಯಿತು. ಅಲ್ಲಿಗೆ, ಹಿಂದುಳಿದವರಿಗೆ ಸರಕಾರದ ಹುದ್ದೆಗಳ ನೇಮಕಾತಿಗೆ ಮೀಸಲಾತಿ ಕಲ್ಪಿಸುವುದರ ಕುರಿತು ಇದ್ದ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿತು. ಸರ್ವೋಚ್ಚ ನ್ಯಾಯಾಲಯ ಇದೇ ಪ್ರಕರಣದಲ್ಲಿ ಮತ್ತೊಂದು ಅಂಶದ ಮೇಲೆ ಸ್ಪಷ್ಟ ತೀರ್ಪು ನೀಡಿತ್ತು ಎಂಬುದು ಗಮನಾರ್ಹ. ಅದು ಆರ್ಥಿಕ ಮಾನದಂಡ ಒಂದನ್ನೇ ಆಧರಿಸಿದ ಮೀಸಲಾತಿ ಅಸಾಂವಿಧಾನಿಕ ಎಂಬುದು. ಹಾಗೆಯೇ ಬಾಲಾಜಿ v/s ಕರ್ನಾಟಕ ಪ್ರಕರಣದಲ್ಲಿ, ಒಟ್ಟು ಮೀಸಲಾತಿ ಶೇ. 50ರಷ್ಟನ್ನು ಮೀರಬಾರದು ಎಂದು ನೀಡಿದ್ದ ತೀರ್ಪನ್ನೂ ಸ್ಥಿರೀಕರಿಸಿದ್ದು ಕೂಡ ಮಹತ್ವ ಪಡೆಯಿತು.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಮತ್ತು ಬಡತನ ಒಟ್ಟೊಟ್ಟಿಗೆ ಕ್ರಮಿಸುತ್ತಿವೆ. ಜಾತಿ, ಧಾರ್ಮಿಕ-ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಅಸ್ತಿತ್ವ ಪಡೆದುಕೊಂಡಿದ್ದರೆ, ಆರ್ಥಿಕ ನೀತಿಯ ಅಸಮರ್ಪಕ ನಿರ್ವಹಣೆ ಮತ್ತು ದೂರದೃಷ್ಟಿ ಕೊರತೆಯ ಕಾರ್ಯಯೋಜನೆಗಳ ಪರಿಣಾಮ ಬಡತನ ಉಳಿದಿದೆ. ಬಡತನವನ್ನು ಹೋಗಲಾಡಿಸಲು ಸಾಧ್ಯವಿದೆ! ಆದರೆ, ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತಿ, ವ್ಯಕ್ತಿಯ ಹುಟ್ಟಿನಿಂದಲೇ ಬರುತ್ತದೆ. ಜಾತಿ ಸಾಮುದಾಯಿಕವಾಗಿ ಹರಡಿಕೊಂಡಿರುವ ಕಾರಣ ಅದಕ್ಕೆ ಸಾವಿಲ್ಲ! ಸಾಮಾಜಿಕ ವ್ಯವಸ್ಥೆಯ ಕಾರಣ, ಅಸ್ಪೃಶ್ಯ ಮತ್ತು ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಲು, ಸಂವಿಧಾನ ರಚನಾ ಮಂಡಳಿಯ ಕಾರ್ಯಕ್ಷಮತೆ ಮತ್ತು ದೂರದೃಷ್ಟಿಯ ಫಲದಿಂದ ಮೂಲ ಸಂವಿಧಾನದಲ್ಲಿಯೇ ಸೇರಿಸಲ್ಪಟ್ಟಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕೇಂದ್ರಸರಕಾರದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದ ಮುದ್ರೆ ಬಿದ್ದ ನಂತರದಲ್ಲಿ, ಮೀಸಲಾತಿಗೆ ಒಳಪಡದ ಜಾತಿ-ಸಮುದಾಯಗಳು ಹೊಸ ಪರಿಕಲ್ಪನೆಯ ಹೊಸ ವರಸೆಯನ್ನು ಮುಂದು ಮಾಡಿಕೊಂಡು ಹೋರಾಟಕ್ಕೆ ಅಡಿ ಇಟ್ಟವು. ಹೋರಾಟಕ್ಕೆ ಅಂತಹ ವರ್ಗಗಳ ಹಿತಾಸಕ್ತಿ ಬಯಸುವ ರಾಜಕಾರಣಿಗಳ ಬೆಂಬಲವಂತೂ ಇತ್ತು. ಮೇಲ್ಜಾತಿಯ ಆರ್ಥಿಕ ದುರ್ಬಲರಿಗೆ ಮೀಸಲಾತಿ ಕಲ್ಪಿಸಬೇಕು ಎಂಬುದೇ ಆ ಹೊಸ ಪರಿಕಲ್ಪನೆಯಾಗಿತ್ತು.

ಈ ಹೊಸ ವರಸೆಗೆ ಸರ್ವೋಚ್ಚ ನ್ಯಾಯಾಲಯದ ಸಹಮತ ಇಲ್ಲದಿದ್ದರೂ, ಗುಜರಾತ್ ಮುಂತಾದ ರಾಜ್ಯಗಳು ಮೇಲ್ಜಾತಿಗಳ ಆರ್ಥಿಕ ದುರ್ಬಲ ವರ್ಗದವರಿಗೆ ಕಣ್ಣೊರೆಸುವ ತಂತ್ರವಾಗಿ, ಮೀಸಲಾತಿ ನೀಡಿ ಆದೇಶಗಳನ್ನು ಹೊರಡಿಸಿದವು. ಕಾಲಕ್ರಮೇಣ ಈ ಆದೇಶಗಳು ನ್ಯಾಯಾಲಯದಲ್ಲಿ ಅನೂರ್ಜಿತಗೊಂಡವು ಎಂಬುದು ಬೇರೆ ಮಾತು. 2014ರಲ್ಲಿ, ಮೇಲ್ಜಾತಿ-ವರ್ಗಗಳ ಪಕ್ಷವೆಂದೇ ಹೇಳುವ ಭಾರತೀಯ ಜನತಾಪಕ್ಷ, ಕೇಂದ್ರ ಸರಕಾರವನ್ನು ತನ್ನ ಕೈವಶ ಮಾಡಿಕೊಂಡನಂತರ, ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲರಾದವರನ್ನೂ ಮೀಸಲಾತಿಗೆ ಒಳಪಡಿಸಬೇಕು ಎಂಬ ವಿಷಯಕ್ಕೆ ಮರುಜೀವ ಬಂದಿತು. ಬಿಜೆಪಿಯ ಅಂತರಂಗದಲ್ಲಿ ಗುಪ್ತಗಾಮಿನಿಯಂತಿದ್ದ, ಈ ನೀತಿಯ ಅನುಷ್ಠಾನಕ್ಕಾಗಿ ಅದು ಸಮಯ ಕಾಯುತ್ತಿತ್ತು. 2019ರ ಚುನಾವಣೆಯಲ್ಲಿ ಮೇಲ್ಜಾತಿಗಳ ಮತಗಳ ಕ್ರೋಡೀಕರಣಕ್ಕಾಗಿ ಅದನ್ನು ಅನುಷ್ಠಾನ ಗೊಳಿಸುವ ಅನಿವಾರ್ಯತೆ ಎದುರಾದುದರಿಂದ, 2019ರ ಜನವರಿ ತಿಂಗಳಲ್ಲಿ ಸಂವಿಧಾನದ ತಿದ್ದುಪಡಿಗೆ ಸರಕಾರ ಮಸೂದೆ ಮಂಡಿಸಿ, ಎರಡೇ ದಿನದಲ್ಲಿ ಸಂಸತ್ತಿನ ಉಭಯ ಸದನಗಳಿಂದ ಅನುಮೋದನೆ ಪಡೆದುಕೊಂಡಿತು. ಸಂವಿಧಾನದ 103ನೇ ತಿದ್ದುಪಡಿ ಪ್ರಯುಕ್ತ ವಿಧಿ 15/6 ಮತ್ತು ವಿಧಿ16/6 ಜನ್ಮತಳೆದವು. ಆ ಕಾರಣದಿಂದಾಗಿ, ಮೇಲ್ಜಾತಿಗಳ ಆರ್ಥಿಕ ದುರ್ಬಲರಿಗೆ (EWS) ಗರಿಷ್ಠ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಸಂವಿಧಾನದ ಮಾನ್ಯತೆ ದೊರಕಿತು. ಈ ಹೊಸ ಮೀಸಲಾತಿ ನೀತಿಯಿಂದಾಗಿ ಭಾರತದ ಎಲ್ಲಾ ಜಾತಿ-ಸಮುದಾಯಗಳೂ ಮೀಸಲಾತಿಯೊಳಗೆ ಬಂದದ್ದು, ಜಾತಿ ವ್ಯವಸ್ಥೆಯ ಜನಕರಿಗೆ ಸಂತೃಪ್ತಿ ತಂದಿರಬಹುದು!

ಸಂವಿಧಾನದ ತಿದ್ದುಪಡಿ ಪ್ರಯುಕ್ತ ಮೇಲ್ಜಾತಿಯಲ್ಲಿನ ಆರ್ಥಿಕ ದುರ್ಬಲ ವರ್ಗಕ್ಕೆ (EWS) ಅನ್ವಹಿಸುವಂತೆ, ‘ಸಂವಿಧಾನ (103ನೇ ತಿದ್ದುಪಡಿ) ಕಾಯ್ದೆ, 2019’ ದಿನಾಂಕ 14.1.2019ರಿಂದ ಜಾರಿಗೆ ಬಂದಿದೆ. ವಿಧಿ 15(6)ರಂತೆ ಸರಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಮತ್ತು ವಿಧಿ 16(6) ರಂತೆ ಸರಕಾರದ ಹುದ್ದೆಗಳ ನೇಮಕಾತಿಗೆ ಮೀಸಲಾತಿ ನೀಡಬೇಕು ಎಂಬುದು ವಿಧಿತವಾಯಿತು.
 ಸಂವಿಧಾನದ ಈ ಎರಡು ಹೊಸ ತಿದ್ದುಪಡಿಗಳನ್ವಯ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಹಾಗೂ ಪ.ಜಾತಿ/ಪ.ಪಂಗಡಗಳಿಗೆ ಸೇರದ ಇತರ ಜಾತಿ/ಸಮುದಾಯಗಳ ಆರ್ಥಿಕ ದುರ್ಬಲ ವರ್ಗದವರಿಗೆ ಮೀಸಲಾತಿ ಕಲ್ಪಿಸಬೇಕಾಗಿದೆ. ಕೇಂದ್ರ ಸರಕಾರದ ನಾಗರಿಕ ಹುದ್ದೆಗಳ ನೇಮಕ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ಮೀಸಲಾತಿ ನೀಡಲು, ಕೇಂದ್ರ ಸರಕಾರದ ಸಿಬ್ಬಂದಿ, ಕುಂದುಕೊರತೆ ಮತ್ತು ಪಿಂಚಣಿ ಮಂತ್ರಾಲಯ ದಿನಾಂಕ 19.1.2019ರಂದು ಅಧಿಕೃತ ಜ್ಞಾಪನ ಹೊರಡಿಸಿದೆ. ಹಾಗೆಯೇ, ಉತ್ತರ ಪ್ರದೇಶ ಮುಂತಾದ ಕೆಲವು ರಾಜ್ಯಗಳೂ ಕೂಡ ರಾಜ್ಯಗಳಿಗೆ ಅನ್ವಯಿಸುವಂತೆ, ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಹಾಗೂ ಹುದ್ದೆಗಳ ನೇಮಕಾತಿಗಾಗಿ ಆದೇಶ ಹೊರಡಿಸಿವೆ. ಆದರೆ, ಕರ್ನಾಟಕ ಸರಕಾರ ಮಾತ್ರ ಈ ದಿಸೆಯಲ್ಲಿ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಕೇಂದ್ರ ಸರಕಾರದ ಅಧಿಕೃತ ಜ್ಞಾಪನ ಆಧರಿಸಿ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶೇ.10ರ ಮೀಸಲಾತಿಗೆ ಒಳಪಡುವ ಜಾತಿಗಳ ಪಟ್ಟಿಯನ್ನು ದಿನಾಂಕ 14.5.2019ರ ಆದೇಶದಲ್ಲಿ ಪ್ರಕಟಿಸಿದೆ. ಆದೇಶದಲ್ಲಿ ಕೇಂದ್ರ ಸರಕಾರದ ಇತರ ಹಿಂದುಳಿದ ವರ್ಗಗಳ ಹಾಗೂ ಪ.ಜಾತಿ/ಪ. ಪಂಗಡಗಳ ಪಟ್ಟಿಯಲ್ಲಿ ಸೇರಿರುವ ಜಾತಿಗಳನ್ನು ಹೊರತು ಪಡಿಸಿ, ಅನುಬಂಧ-2ರಲ್ಲಿ ಆರ್ಥಿಕವಾಗಿ ದುರ್ಬಲರಾದವರ ವರ್ಗಕ್ಕೆ ಸೇರಬೇಕೆಂದು 144 ಜಾತಿ/ಉಪಜಾತಿಗಳನ್ನು ಪಟ್ಟಿ ಮಾಡಿದೆ. ಸರಕಾರ ಈ 144 ಜಾತಿ/ಉಪಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಲು ಸುಲಭ ಮಾರ್ಗವೊಂದನ್ನು ಅನುಸರಿಸಿರುವಂತೆ ಕಂಡು ಬಂದಿದೆ!

ರಾಜ್ಯ ಸರಕಾರದ ಹುದ್ದೆಗಳ ಮೀಸಲಾತಿಗಾಗಿ ಪ್ರಸ್ತುತ ಇರುವ ಹಿಂದುಳಿದ ವರ್ಗಗಳ, ಪ್ರವರ್ಗ 1, 2A, 2B, 3A ಮತ್ತು 3B ಎಂದು ವರ್ಗೀಕರಿಸಿರುವ ಪಟ್ಟಿ ಮತ್ತು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿ, ಇವುಗಳ ನಡುವೆ ತುಲನೆ ಮಾಡಿ, ರಾಜ್ಯ ಸರಕಾರದ ಪಟ್ಟಿಯಲ್ಲಿ ಸೇರಿರುವ, ಆದರೆ ಕೇಂದ್ರ ಸರಕಾರದ ಪಟ್ಟಿಯಲ್ಲಿ ಸೇರಿರದ ಜಾತಿ-ಉಪಜಾತಿಗಳನ್ನು ಹಾಗೂ ಈ ಎರಡೂ ಪಟ್ಟಿಗಳಲ್ಲಿ ಸೇರಿರದ ಬ್ರಾಹ್ಮಣ, ಆರ್ಯವೈಶ್ಯ, ಜೈನ, ನಾಯರ್ ಮತ್ತು ಮುದಲಿಯಾರ್ ಜಾತಿಗಳನ್ನು ಸೇರಿಸಿದೆ. ಕೇಂದ್ರ ಸರಕಾರದ ಪಟ್ಟಿಯಲ್ಲಿ ಸೇರಿರದ ವೀರಶೈವ ಲಿಂಗಾಯತ, ಬಂಟ್ ಮತ್ತು ಕ್ರೈಸ್ತರನ್ನೂ ಸೇರಿಸಿ ಪಟ್ಟಿ ಅಂತಿಮಗೊಳಿಸಿದೆ. (ಪಟ್ಟಿಗೆ ‘ನಗರ್ಥ’ ಜಾತಿಯನ್ನು ಸೇರಿಸಬೇಕಿದೆ. ಇವರು ಲಿಂಗಾಯತರಲ್ಲ. ಇದು ಚೆಟ್ಟಿ ಜಾತಿಯ ಉಪಜಾತಿ. ಹೀಗೆಂದು caste and tribes of southern India ಪುಸ್ತಕದಲ್ಲಿ ನಮೂದಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ನಗರ್ಥರು ನೆಲೆಸಿದ್ದಾರೆ. ಈ ಜಾತಿಯು ಹಿಂದುಳಿದ ವರ್ಗಗಳ ಪಟ್ಟಿಗಳಲ್ಲಿ ಸೇರಿಲ್ಲ.) ಪ್ರಮಾದವೆಂಬಂತೆ, ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರುವ ‘ನಂದಿವಾಲ’ ಜಾತಿಯನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರ ವೃತ್ತಿ ಬಸವನ ಜೊತೆ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವುದು. ಎರಡು ಕಡೆ ಜಾತಿ ನಮೂದಾಗಿರುವುದರಿಂದ ಹಿಂದುಳಿದ ಜಾತಿ ದೃಢೀಕರಣ ಪತ್ರ ಪಡೆಯುವುದು ಕಷ್ಟಸಾಧ್ಯ.

ಯಾವುದೇ ಮುಖ್ಯ ಜಾತಿ(main caste) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಪರಿಗಣಿತವಾದಲ್ಲಿ ಅದು ಕೇಂದ್ರ ಅಥವಾ ರಾಜ್ಯಪಟ್ಟಿ ಯಾವುದರಲ್ಲೇ ಆಗಲಿ, ಆ ಜಾತಿಯ ಎಲ್ಲಾ ಉಪಜಾತಿಗಳನ್ನೂ ತಾತ್ವಿಕವಾಗಿ ಅದರ ಜೊತೆಯಲ್ಲಿಯೇ ಸೇರಿಸಬೇಕು. ಆದರೆ ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬಹಳಷ್ಟು ಉಪಜಾತಿಗಳು ಮುಖ್ಯ ಜಾತಿಗಳೊಡನೆ ಸೇರ್ಪಡೆಯಾಗಿಲ್ಲ. ಹಾಗೆಯೇ ಕೆಲವು ಅತೀ ಹಿಂದುಳಿದ ಮುಖ್ಯ ಜಾತಿಗಳೂ ದುರದೃಷ್ಟವಶಾತ್ ಸೇರಿಲ್ಲ. ಅವುಗಳಲ್ಲಿ ಕೆಲವು ಹೀಗಿವೆ. 1. ದೇವದಾಸಿ ಮತ್ತು ಅದರ 4 ಉಪಜಾತಿಗಳು 2. ಲಾಡರು ಮತ್ತು ಅದರ 2 ಉಪಜಾತಿಗಳು 3. ತೆಲುಗು ಗೌಡ 4. ಕೋಲಾಯಿರಿ ಮತ್ತು ಅದರ ಉಪಜಾತಿ 5. ಅನಪ್ಪನ್ 6. ಚಕ್ಕನ್ 7. ದೊಗ್ರ 8. ಗುಳ್ಳಿ 9. ಜೆಟ್ಟಿ ಮತ್ತು ಅದರ 2 ಉಪಜಾತಿಗಳು 10. ಕನಕನ್ ಮತ್ತು ಅದರ 2 ಉಪಜಾತಿಗಳು 11.ಉಷ್ಟಮ 12. ಅಗಮುಡಿ 13. ಬವಂದಿ 14. ಘುರ್ಕ 15. ಮಲಯ 16. ಡೇರಿಯ 17. ಸರಂತ 18. ಪರ್ಧಿಸ್ 19. ಬುದ್ಧಿಸ್ಟ್ 20. ಮಾಳವ 21.ಆರ್ಯನ್ 22.ಸೋಮವಂಶ ಕ್ಷತ್ರಿಯ 23.ಸ್ಥಾನಿಕ, ಮುಂತಾದವು. ಬಹುತೇಕ ಇವು, ಅತೀ ಹಿಂದುಳಿದ ಅಸಹಾಯಕ-ಅಮಾಯಕ ಜಾತಿಗಳಾಗಿವೆ. ಆ ಜಾತಿಗಳ ಸಂಘಟನೆಗಳಾಗಲೀ ಅಥವಾ ರಾಜ್ಯ ಸರಕಾರವೇ ಆಗಲೀ ಅಥವಾ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವೇ ಆಗಲೀ ಪ್ರಯತ್ನಿಸದಿರುವುದು ಇಂತಹ ಲೋಪಕ್ಕೆ ಕಾರಣ.

ಸದ್ಯ ಚಾಲ್ತಿಯಲ್ಲಿರುವ ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ 199 ಮುಖ್ಯಜಾತಿಗಳು ಹಾಗೂ 606 ಉಪಜಾತಿಗಳೂ ಮುಖ್ಯಜಾತಿಗಳ ಜೊತೆಯಲ್ಲೇ ಸೇರಿವೆ. ಹಾಗೆಯೇ, ರಾಜ್ಯ ಮೀಸಲಾತಿ ಪಟ್ಟಿಯಲ್ಲಿ ಎಲ್ಲಾ 5 ಪ್ರವರ್ಗಗಳಲ್ಲಿ, 207 ಮುಖ್ಯ ಜಾತಿಗಳು ಹಾಗೂ 623 ಉಪಜಾತಿಗಳು ಸೇರಿಸಲ್ಪಟ್ಟಿವೆ.

ರಾಜ್ಯ ಪ್ರಕಟಿಸಿರುವ ದಿ.14.5.2019ರ ಪಟ್ಟಿಯಲ್ಲಿ ಕೇಂದ್ರ ಸರಕಾರದ ಹಿಂದುಳಿದ ಮೀಸಲಾತಿ ಪಟ್ಟಿಯಲ್ಲಿರುವ ಮುಖ್ಯಜಾತಿಗಳಿಗೆ ಉಪಜಾತಿಗಳಾಗಿ ಸೇರಬೇಕಾಗಿರುವ ಜಾತಿಗಳು ಇಂತಿವೆ. ಮುತ್ರಾಚ, ಬಾವಂಧಿ, ಬೈರಾಗಿ, ಡವರಿ, ಗುಸಾಯಿ, ಬುಂಡೆ ಬೆಸ್ತ, ಕಬ್ಬೆರ, ಗೋಣಿಗ ಮನೆ, ಗೌರಿಗ, ಜೀನಗಾರ, ತೇವರ್, ಕಲಾರಿ, ಕಲ್ಲುಕುಟಿಗ ಉಪ್ಪಾರ, ಗೌಳಿ, ಕಾಡುಗೊಲ್ಲ, ತಿಯನ್, ಕ್ಷೌರಿಕ, ಗೆಜ್ಜೆಗಾರ, ಕೋಲಾಯಿರಿ, ಸ್ವಕುಲಸಾಲಿ, ತುಳು, ತುಳುವ, ತುಲೇರು(ಬಲಿಜ), ಸರ್ಪ ಒಕ್ಕಲಿಗ, ಕುಂಚಿಟಿಗ, ನಾಮಧಾರಿಗೌಡ, ಲಿಂಗಾಯತ ಹೆಳವ, ಲಿಂಗಾಯತ ಅಂಬಿಗ, ಲಿಂಗಾಯತ ಗಂಗಾಮತ, ಲಿಂಗಾಯತ ಬಂಡಾರಿ, ಲಿಂಗಾಯತ ಪಂಚಾಲ, ಆರ್ಯಮರಾಠ.. ಹೀಗೆ ಒಟ್ಟು 108 ಉಪಜಾತಿಗಳು.

ಸ್ಪಷ್ಟತೆಗಾಗಿ ಒಂದು ಉದಾಹರಣೆ. ಅದು ಹೀಗಿದೆ. ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸುವಲ್ಲಿ ಒಕ್ಕಲಿಗ ಸಮುದಾಯವನ್ನು, ನಗರ ಒಕ್ಕಲಿಗ ಮತ್ತು ಗ್ರಾಮಾಂತರ ಒಕ್ಕಲಿಗ ಎಂದು ವಿಭಾಗಿಸಿ, ಗ್ರಾಮಾಂತರ ಒಕ್ಕಲಿಗರನ್ನು ಮಾತ್ರ ಪರಿಗಣಿಸಿ, ನಗರ ಒಕ್ಕಲಿಗರನ್ನು ಕೈಬಿಡಲಾಗಿದೆ. ಹೀಗಾಗಿ ನಗರ ಒಕ್ಕಲಿಗರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಲ್ಲ ಎಂದು ಪರಿಗಣಿಸಿರುವುದರಿಂದ ಅವರನ್ನು ರಾಜ್ಯದ ದಿ.14.5.2019ರ ಪಟ್ಟಿಯಲ್ಲಿ ಸೇರಿಸಬೇಕಿದ್ದರೂ ಸೇರಿಸುವುದಿಲ್ಲ. ಹಾಗೆಯೇ, ಸರ್ಪ ಒಕ್ಕಲಿಗ, ಹಳ್ಳಿಕಾರ ಒಕ್ಕಲಿಗ, ಗಂಗಡಿಕಾರ್ ಒಕ್ಕಲಿಗ, ದಾಸ ಒಕ್ಕಲಿಗ, ಮರಸು ಒಕ್ಕಲಿಗ, ನಾಮಧಾರಿಗೌಡ ಇವುಗಳು ಒಕ್ಕಲಿಗ ಉಪಜಾತಿಗಳು. ಸದ್ಯ, ಈ ಉಪಜಾತಿಗಳೆಲ್ಲವೂ ರಾಜ್ಯ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಒಕ್ಕಲಿಗರ ಉಪಜಾತಿಗಳು ಎಂದು ಪರಿಗಣಿಸಲ್ಪಟ್ಟು ಸ್ಥಾನ ಪಡೆದುಕೊಂಡಿವೆ. ಇವುಗಳೆಲ್ಲವೂ ಒಕ್ಕಲಿಗರ ಉಪಜಾತಿಗಳೆಂದು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಬೇಕು. ಅದರಂತೆಯೇ, ಎಲ್ಲಾ ಉಪಜಾತಿಗಳೂ ಕೂಡ ಮುಖ್ಯಜಾತಿಗಳೊಡನೆಯೇ ಸೇರಬೇಕು. ಅವುಗಳು ಒಂದು ರೀತಿಯಲ್ಲಿ ಆಲದ ಮರದಲ್ಲಿ ಆಶ್ರಯಿಸುವ ಬಂದಳಿಕೆಯಂತೆ ಅವುಗಳಿಗೆ ಬೇರೆ ಅಸ್ತಿತ್ವ ಇಲ್ಲ!

ಸಂವಿಧಾನದ 102ನೇ ತಿದ್ದುಪಡಿಗೆ ಮುನ್ನ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಯಾವುದೇ ಜಾತಿ-ಉಪಜಾತಿ ಸೇರಿಸುವಲ್ಲಿ ಸರಳ ವಿಧಾನವಿತ್ತು. ಆದರೆ 102ನೇ ತಿದ್ದುಪಡಿ ಮಾಡುವ ಸಮಯದಲ್ಲಿ ವಿಧಿ 338ಕ್ಕೆ B ಉಪವಿಧಿ ಸೇರ್ಪಡೆ ಮಾಡಿದ ನಂತರ ಜಾತಿಗಳ ಸೇರ್ಪಡೆ ವಿಧಾನ ಜಟಿಲಗೊಂಡಿದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ-ಮಾನ ಕೊಡುವ ನೆಪದಲ್ಲಿ ವಿಧಿ 338B ಸೇರ್ಪಡೆ ಮಾಡಲಾಗಿರುವುದು.

ರಾಜ್ಯ ಸರಕಾರ ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಅರ್ಹತೆ ಇರುವ ಅತೀ ಹಿಂದುಳಿದ ಜಾತಿಗಳು ಮತ್ತು ಈಗಾಗಲೇ ಸೇರಿರುವ ಮುಖ್ಯ ಜಾತಿಗಳಿಗೆ ಅವುಗಳ ಉಪಜಾತಿಗಳನ್ನು ಸೇರಿಸಲು ಕ್ರಮತೆಗೆದುಕೊಳ್ಳಬೇಕಾಗಿದೆ. ರಾಜ್ಯ ಸರಕಾರವೇನಾದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಹಿಂದುಳಿದ ಜಾತಿ-ಉಪಜಾತಿಗಳು ಮೇಲ್ಜಾತಿ ಗಳೊಡನೆ ಸೆಣೆಸುವುದು, ಅಸಮಬಲರ ನಡುವಿನ ಹೋರಾಟವಾಗಿ ಸಾಮಾಜಿಕ ನ್ಯಾಯವೆಂಬುದು ಅವುಗಳ ಪಾಲಿಗೆ ಮರೀಚಿಕೆಯೇ ಸರಿ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top