--

ಭಾರತ ಮರೆಯಲಾಗದ ನೆಹರೂ

ಸ್ವಾತಂತ್ರೋತ್ತರ ಭಾರತದಲ್ಲಿ ನೆಹರೂ ಅವರು ತಳೆದ ಮೂರು ನಿರ್ಣಾಯಕ ನಿರ್ಧಾರಗಳು ಭಾರತವು ಗಣರಾಜ್ಯವಾಗುವಂತೆ ರೂಪುಗೊಳ್ಳುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದವು. ಮೊದಲನೆಯದಾಗಿ ಭಾರತದ ಕುರಿತ ತನ್ನ ಕಲ್ಪನೆಯು ಸಂವಿಧಾನದಲ್ಲಿ ಸಾಕಾರಗೊಳ್ಳುವುದನ್ನು ನೆಹರೂ ಖಾತರಿಪಡಿಸಿಕೊಂಡಿದ್ದರು. ಎರಡನೆಯದಾಗಿ ಭಾರತವು ಜನರಿಂದಲೇ ಎಲ್ಲಾ ಅಧಿಕಾರಗಳು ಕೊಡಮಾಡಲ್ಪಡುವ ಒಂದು ಸ್ವತಂತ್ರ ಗಣರಾಜ್ಯವೆಂಬ ನಿರ್ಣಯವು ಸಂವಿಧಾನ ರಚನಾ ಸಭೆಯಲ್ಲಿ ಅಂಗೀಕಾರಗೊಳ್ಳುವಂತೆ ಮಾಡಿದರು. ಮೂರನೆಯದಾಗಿ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ಸಮಾನ ಅವಕಾಶ ಹಾಗೂ ಸ್ಥಾನಮಾನ, ಚಿಂತನಾ ಸ್ವಾತಂತ್ರವನ್ನು ಪ್ರತಿಯೊಬ್ಬರಿಗೂ ಖಾತರಿಪಡಿಸಲು ಶ್ರಮಿಸಿದರು.

ಬಹುಶಃ ನರೇಂದ್ರ ಮೋದಿ ಒಪ್ಪದೆ ಇದ್ದರೂ, ಜವಾಹರಲಾಲ್ ನೆಹರೂ ಅವರು ಭಾರತ ಹಾಗೂ ವಿಶ್ವದಲ್ಲಿ ತನ್ನದೇ ಆದ ಗುರುತನ್ನು ಬಿಟ್ಟುಹೋದಂತಹ ಓರ್ವ ಐತಿಹಾಸಿಕ ವ್ಯಕ್ತಿ ಎಂಬುದಾಗಿ ಪರಿಗಣಿಸಲು ಜಗತ್ತು ಯಾವತ್ತೂ ಹಿಂಜರಿದಿರಲಿಲ್ಲ. ನೆಹರೂ ಅವರು 1964ರಲ್ಲಿ ಮೃತಪಟ್ಟಾಗ ನ್ಯೂಯಾರ್ಕ್ ಟೈಮ್ಸ್ ಅವರನ್ನು ಸ್ಪಷ್ಟವಾಗಿ ‘ಆಧುನಿಕ ಭಾರತದ ನಿರ್ಮಾತೃ’ ಎಂಬುದಾಗಿ ಪ್ರಸ್ತಾಪಿಸಿತ್ತು. ದಿ ಎಕನಾಮಿಸ್ಟ್ ಪತ್ರಿಕೆಯು ‘ವರ್ಲ್ಡ್ ವಿದೌಟ್ ನೆಹರೂ’ ಎಂಬ ಶೀರ್ಷಿಕೆಯ ಮುಖಪುಟ ಲೇಖನವನ್ನು ಪ್ರಕಟಿಸಿತ್ತು. ಜನಸಮೂಹದ ಮೇಲೆ ಅವರಿಗಿದ್ದ ಮಾಂತ್ರಿಕ ಹಿಡಿತವನ್ನು ಅದು ಸ್ಮರಿಸಿಕೊಂಡಿತು ಹಾಗೂ ಈ ‘ಮಹಾನ್ ವ್ಯಕ್ತ್ತಿ’ಯಿಲ್ಲದೆ ವಿಶ್ವದ ವೇದಿಕೆಯು ಬಡವಾಗಿ ಹೋಗಿದೆ ಎಂದು ಅದು ಲೇಖನದಲ್ಲಿ ವಿಷಾದಿಸಿತ್ತು.

ಭಾರತದಲ್ಲಿ ನೆಹರೂ ಕುರಿತ ಅಭಿಪ್ರಾಯದಲ್ಲಿ ಈಗ ಗಣನೀಯವಾದ ಬದಲಾವಣೆಯಾಗಿದೆ. ಅವರು ಬದುಕಿದ್ದಾಗ ಜನರು ಅವರನ್ನು ಆರಾಧಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಕ್ರಿಯಾತ್ಮಕವಾಗಿ ಮರೆಯುವಂತೆ ಮಾಡುವ ಅಥವಾ ಅವರ ಪಾತ್ರವನ್ನು ಕಡಿಮೆಗೊಳಿಸಲು ಯತ್ನಿಸುವ ಪ್ರವೃತ್ತಿಯು ಬೆಳೆಯುತ್ತಿರುವುದು ಕಂಡಬರುತ್ತಿದೆ. ಒಂದೊಮ್ಮೆ ಪ್ರಧಾನಿ ಮೋದಿಯವರು ಸಂಸತ್ತನ್ನುದ್ದೇಶಿಸಿ, ‘‘ಕಾಂಗ್ರೆಸ್ ನಮ್ಮನ್ನು ನಂಬಿಸಲು ಯತ್ನಿಸುತ್ತಿರುವಂತೆ, ಭಾರತಕ್ಕೆ ಸ್ವಾತಂತ್ರ ದೊರೆತಿರುವುದು ಪಂಡಿತ್ ನೆಹರೂ ಅವರಿಂದಲ್ಲ.’’ ಎಂದು ಹೇಳಿದ್ದರು. ರಾಜಸ್ಥಾನದ 8ನೇ ತರಗತಿಯ ಪಠ್ಯಪುಸ್ತಕಗಳಿಂದ ನೆಹರೂ ಅವರ ಹೆಸರನ್ನು ಕೈಬಿಡಲಾಗಿತ್ತು. ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥವಾಗಿ ನಡೆದ ರಾಷ್ಟ್ರೀಯ ಪತ್ರಾಗಾರದ ಪ್ರದರ್ಶನ ಮೇಳದಲ್ಲಿಯೂ ಅವರ ಪ್ರಸ್ತಾವನೆಯೇ ಇರಲಿಲ್ಲ. ಕೇಂದ್ರ ಸಂಸ್ಕೃತಿ ಸಚಿವಾಲಯವು ನೆಹರೂ ಅವರ ಅಧಿಕೃತ ನಿವಾಸದಲ್ಲಿರುವ ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಗ್ರಂಥಾಲಯವನ್ನು ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ಜೀವನ ಇತಿಹಾಸವನ್ನು ಪ್ರದರ್ಶಿಸುವ ಸಂಕೀರ್ಣವಾಗಿ ಮಾರ್ಪಡಿಸಲು ನಿರ್ಧರಿಸಿದೆ. ಉದಾಹರಣೆಗೆ ಅಮೆರಿಕದ ವಿಶ್ವಪ್ರಸಿದ್ಧ ಲಿಂಕನ್ ಸ್ಮಾರಕ ಭವನದಲ್ಲಿ ಇದ್ದಕ್ಕಿದ್ದಂತೆ ಇತರ ಗಣ್ಯರ ಪ್ರತಿಮೆಗಳು ತುಂಬಿತುಳುಕತೊಡಗಿದರೆ ಏನಾಗಬಹುದೆಂಬುದನ್ನು ನೀವೇ ಯೋಚಿಸಿರಿ.

ನೆಹರೂ ಅವರನ್ನೇ ಯಾಕೆ ಗುರಿಯಾಗಿರಿಸಲಾಗುತ್ತಿದೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಮಹಾತ್ಮಾ ಗಾಂಧೀಜಿಯವರ ಹತ್ಯೆಯ ಆನಂತರ ತನ್ನ ಮೇಲೆ ನಿಷೇಧ ಹೇರಿದ್ದಕ್ಕಾಗಿ ಆರೆಸ್ಸೆಸ್, ನೆಹರೂ ವಿರುದ್ಧ ಬಹಳ ಸಮಯದಿಂದ ತಿರಸ್ಕಾರ

ಭಾವನೆಯನ್ನು ಹೊಂದಿದೆ. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅವರು ಸಾಂಸ್ಥೀಕರಣಗೊಳಿಸಿದ್ದಂತಹ ಜಾತ್ಯತೀತತೆಯ ಸ್ವರೂಪವನ್ನು ಆರೆಸ್ಸೆಸ್ ಘಂಟಾಘೋಷವಾಗಿ ವಿರೋಧಿಸುತ್ತಾ ಬಂದಿದೆ. 1962ರಲ್ಲಿ ನಡೆದ ಚೀನಾ ವಿರುದ್ಧದ ಸಮರದಲ್ಲಿ ಉಂಟಾದ ಅಪಮಾನಕಾರಿ ಸೋಲನ್ನು ನೆನಪಿಸಿಕೊಳ್ಳುತ್ತಲೇ ನೆಹರೂ ವಿರುದ್ಧ ಸಾರ್ವಜನಿಕ ಭಾವನೆಯನ್ನು ಪ್ರಚೋದಿಸುವುದು ಸುಲಭವಾಗಿದೆ. ನೆಹರೂ ಅವರ ಆಲಿಪ್ತ ವಿದೇಶಾಂಗ ನೀತಿ ಹಾಗೂ ಸರಕಾರಿ ಯೋಜನೆ ರೂಪಿಸುವಲ್ಲಿ ಅವರಿಗಿದ್ದ ನಂಬಿಕೆಯನ್ನು ಕೂಡಾ ಪ್ರಶ್ನಿಸಲಾಗಿದೆ. ಸಾರ್ವಜನಿಕ ಬದುಕಿನಲ್ಲಿ ಅವರಿಗೆ ನೀಡಲಾಗುವ ಪ್ರಾಮುಖ್ಯತೆಗೆ ಹಲವರು ಅಸಹನೆಯನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ನೆಹರೂ ಹೆಸರಿನಲ್ಲಿ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ, ರಸ್ತೆಗಳು ಹಾಗೂ ಸರಕಾರಿ ಕಾರ್ಯಕ್ರಮಗಳಿಗೆ ಅವರ ಹೆಸರಿಡುವ ಮೂಲಕ, ಸುದ್ದಿಪತ್ರಿಕೆಗಳಲ್ಲಿ ನೆಹರೂ ಚಿತ್ರವನ್ನು ಒಳಗೊಂಡ ಹಲವಾರು ಜಾಹೀರಾತುಗಳ ಪ್ರಕಟ ಇತ್ಯಾದಿ ವಿಧಾನಗಳಿಂದ ಕಾಂಗ್ರೆಸ್ ಪಕ್ಷವು ಅವರಿಗೆ ರಾಜಕೀಯ ಮನ್ನಣೆ ದೊರಕಿಸಿಕೊಡಲು ಪ್ರಯತ್ನಿಸುತ್ತಾ ಬಂದಿದೆ.

ನೆಹರೂ ಕುರಿತಾಗಿ ಈವರೆಗೆ ಪ್ರಕಟವಾದ ಗ್ರಂಥಗಳು, ಲೇಖನಗಳು, ಸಾಹಿತ್ಯ ಕೃತಿಗಳಿಗೆ ಲೆಕ್ಕವಿಲ್ಲ. ಖ್ಯಾತ ಇತಿಹಾಸಗಾರ್ತಿ ಜ್ಯೂಡಿತ್ ಎಂ. ಬ್ರೌನ್ ಅವರು 2003ರಲ್ಲಿ ಬರೆದಿರುವ ನೆಹರೂ ಅವರ ಅಸಾಧಾರಣ ಜೀವನಚರಿತ್ರೆ ಗ್ರಂಥ ‘ನೆಹರೂ: ಎ ಪಾಲಿಟಿಕಲ್ ಲೈಫ್’, ಈ ನಿಟ್ಟಿನಲ್ಲಿ ಒಂದು ಅತ್ಯಂತ ಉಪಯುಕ್ತವಾದ ಕೃತಿಯಾಗಿದೆ. ಸೋನಿಯಾಗಾಂಧಿಯವರ ಮೂಲಕ ಲಭ್ಯವಾದ 1947ರ ಆನಂತರದ ನೆಹರೂ ಕುರಿತಾದ ಕಾಗದಗಳು, ದಾಖಲೆಪತ್ರಗಳ ಮೂಲಕ ಜ್ಯೂಡಿತ್ ಅವರು, ನೆಹರೂರವರ ರಾಜಕೀಯ ಬದುಕಿನ ಕುರಿತಾಗಿ ಆಸಕ್ತಿಯುತವಾದ ವಿವರಗಳನ್ನು ತಮ್ಮ ಕೃತಿಯಲ್ಲಿ ಕಲೆಹಾಕಿದ್ದಾರೆ.

ಶ್ರೀಮಂತ ಕುಟುಂಬದಿಂದ ಬಂದ ನ್ಯಾಯವಾದಿ ಹಾಗೂ ರಾಜಕೀಯ ನಾಯಕ ಮೋತಿಲಾಲ್ ನೆಹರೂ ಅವರ ಪುತ್ರನಾಗಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಜವಾಹರಲಾಲ್ ನೆಹರೂ ಅವರು ಸುಶಿಕ್ಷಿತ ಭಾರತೀಯರ ಭೌತಿಕ ಹಾಗೂ ರಾಜಕೀಯ ಅವಕಾಶಗಳನ್ನು ತೆರೆದಿಡುವ ಜೊತೆಜೊತೆಗೆ ಭಾರತದ ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಗಳಿಗೆ ಸವಾಲೆಸೆದರು. ಹ್ಯಾರೋ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಲ್ಲಿ ಪಡೆದ ಶಿಕ್ಷಣವು ನೆಹರೂ ಅವರ ರಾಜಕೀಯ ಅಭಿಪ್ರಾಯಗಳನ್ನು ರೂಪಿಸಿತು. ಈ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿದ್ದ ಸಮಯದಲ್ಲಿ ಅವರು ಸಾಮ್ರಾಜ್ಯಶಾಹಿ ವಾದದ ವಿರುದ್ಧ ಬಲವಾದ ಅಂತರವನ್ನು ಬೆಳೆಸಿಕೊಂಡರು. ಉನ್ನತ ವ್ಯಾಸಂಗ ಮುಗಿಸಿ ಸ್ವದೇಶಕ್ಕೆ ಆಗಮಿಸಿದ ಕೆಲವು ವರ್ಷಗಳ ಆನಂತರ ಅವರು ಮಹಾತ್ಮಾ ಗಾಂಧಿ ಹಾಗೂ 1919-20ರ ಅವಧಿಯಲ್ಲಿ ಬ್ರಿಟಿಷ್ ಸರಕಾರದ ವಿರುದ್ಧ ನಡೆದ ಪ್ರತಿಭಟನೆಗಳಿಂದ ಪ್ರೇರಿತರಾಗಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಭಾರತದ ಸ್ವಾತಂತ್ರ ಚಳವಳಿಯ ಕಿಡಿ ಹೊತ್ತಿದ ಸಮಯದಲ್ಲಿ ಸೌಮ್ಯವಾದಿಗಳು ಹಾಗೂ ತೀವ್ರವಾದಿಗಳ ನಡುವೆ ಬಿರುಸಿನ ಚರ್ಚೆಯು ವ್ಯಾಪಕವಾಗಿ ನಡೆಯುತ್ತಿತ್ತು. ಸ್ವಾತಂತ್ರ ಹೋರಾಟದ ಕಾರ್ಯತಂತ್ರ, ನೀತಿ, ಅಸಹಕಾರಿ ಹೋರಾಟದ ಬಳಕೆ, ಸಂಪೂರ್ಣವಾಗಿ ಸ್ವಾತಂತ್ರವನ್ನು ಪಡೆದುಕೊಳ್ಳುವುದು ಇಲ್ಲವೇ ಹಂತಹಂತವಾಗಿ ದೇಶಕ್ಕೆ ಸ್ವಾತಂತ್ರವನ್ನು ಸಾಧಿಸಿಕೊಳ್ಳುವ ಬಗ್ಗೆ ತೀವ್ರವಾದಿಗಳು ಹಾಗೂ ಸೌಮ್ಯವಾದಿಗಳು ಒಡೆದು ಹೋಳಾಗಿದ್ದರು.

ಇಂತಹ ಭಿನ್ನಮತದ ವಾತಾವರಣದಲ್ಲಿ ನೆಹರೂ ಗಾಂಧಿ ಜೊತೆ ನಿಂತರು. ಸ್ವಾತಂತ್ರದೆಡೆಗೆ ಭಾರತದ ಪಥದಲ್ಲಿ ಅವರನ್ನು ಕೇಂದ್ರ ಬಿಂದುವಾಗಿ ಗುರುತಿಸಿದರು. ಮಹಾತ್ಮಾ ಗಾಂಧೀಜಿಯವರ ರಾಜಕೀಯ ನಿಲುವುಗಳು ಹಾಗೂ ನೈತಿಕ ಪರಿವರ್ತನೆಗೆ ನೀಡಿದ ಆದ್ಯತೆಯು ನೆಹರೂರಿಗೆ ಆಗಾಗ್ಗೆ ಹತಾಶೆಯನ್ನುಂಟು ಮಾಡಿದ್ದರೂ, ಗಾಂಧೀಜಿಯವರನ್ನು ತನ್ನ ನಾಯಕನಾಗಿ ಗುರುತಿಸಿದರು. ನೆಹರೂ ಅವರು ಹಿಂದೂ- ಮುಸ್ಲಿಂ ಸಂಸ್ಕೃತಿ ಸಮ್ಮ್ಮಿಳಿತವಾದ ಕುಟುಂಬದಲ್ಲಿ ಬೆಳೆದವರು. ಮೋತಿಲಾಲ್ ತನ್ನ ಆರಂಭಿಕ ಶಿಕ್ಷಣವನ್ನು ಮುಸ್ಲಿಂ ಉಪಾಧ್ಯಾಯರೊಬ್ಬರಿಂದ ಆರಬಿ ಹಾಗೂ ಪರ್ಷಿಯನ್ ಭಾಷೆಯಲ್ಲಿ ಪಡೆದುಕೊಂಡಿದ್ದರು. ಕಾಶ್ಮೀರಿ ಕುಟುಂಬವಾದ್ದರಿಂದ ಅವರನ್ನು ಸ್ಥಳೀಯರು ಒಪ್ಪಿಕೊಳ್ಳದೆ ಇರುವ ಸಾಧ್ಯತೆಯೂ ಇತ್ತು. ಆದರೆ ನೆಹರೂ ಕುಟುಂಬ ಸಂಕುಚಿತತೆ ಹಾಗೂ ಪ್ರಾದೇಶಿಕ ನಿಷ್ಠೆಯನ್ನು ಹೊಂದಿರಲಿಲ್ಲ. ನೆಹರೂ ಅವರು ಕಟ್ಟಾ ರಾಷ್ಟ್ರವಾದಿಯಾಗಿದ್ದರೂ ಅವರು ಬ್ರಿಟಿಷ್ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ಭಾವನೆಯನ್ನು ಹೊಂದಿದ್ದರು. ಭಾರತವು ವಿದೇಶಿ ಆಡಳಿತದಲ್ಲಿ ದಮನಕ್ಕೊಳಗಾಗಿರುವ ಬಗ್ಗೆ ಅವರು ತೀವ್ರವಾಗಿ ನೊಂದಿದ್ದರು. ಇದೇ ವೇಳೆ ಭಾರತದಲ್ಲಿ ಬೇರೂರಿದ್ದ ಅನೇಕ ಕಂದಾಚಾರ ಹಾಗೂ ಸಂಪ್ರದಾಯಗಳನ್ನು ಅವರು ಒಪ್ಪುತ್ತಿರಲಿಲ್ಲ.

ರಾಜಕೀಯ ಪ್ರವೇಶಿಸಿದ ಬಳಿಕ ನೆಹರೂ ಅವರು ಕಾಂಗ್ರೆಸ್ ಪಕ್ಷದಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡರು. ಅವರು ಅಪಾರವಾಗಿ ಓದಿನ ಗೀಳನ್ನು ಕೂಡಾ ಬೆಳೆಸಿಕೊಂಡಿದ್ದರು. ಜೈಲಿನಲ್ಲಿಯೂ ಎಡೆಬಿಡದೆ ಓದುತ್ತಲೇ ಇದ್ದರು. 1921ರಿಂದ 1945ರವರೆಗೆ 24 ವರ್ಷಗಳ ಅವಧಿಯಲ್ಲಿ ಅವರು 9 ಬಾರಿ ಜೈಲಿಗೆ ಹೋಗಿದ್ದರು. 12 ದಿನಗಳಿಂದ ಹಿಡಿದು 1,041 ದಿನಗಳವರೆಗೆ, ಹೀಗೆ ಒಟ್ಟು 3,259 ದಿನಗಳ ಕಾರಾಗೃಹ ವಾಸವನ್ನು ಅವರು ಅನುಭವಿಸಿದ್ದರು. ಜೈಲಿನಲ್ಲಿರುವಾಗಲೂ, ಹೊರಗಿರುವಾಗಲೂ ಓದಿನಲ್ಲಿಯೇ ಅವರು ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದರು. ನೆಹರೂ ರಾಜಕೀಯ, ಅರ್ಥಶಾಸ್ತ್ರ, ವಿಜ್ಞಾನ, ಸಾಹಿತ್ಯ ಹಾಗೂ ಸಮಕಾಲೀನ ವಿಷಯಗಳನ್ನು ವ್ಯಾಪಕವಾಗಿ ಓದುತ್ತಿದ್ದರು. 1934ರ ಫೆಬ್ರವರಿ ಹಾಗೂ 1935ರ ಸೆಪ್ಟೆಂಬರ್ ಅವಧಿಯಲ್ಲಿ ಅವರು ತಿಂಗಳಲ್ಲಿ ಸರಾಸರಿ 15-20 ಸಂಪುಟಗಳ ಹಾಗೆ 188 ಪುಸ್ತಕಗಳನ್ನು ಓದಿದ್ದರು.

ಮಾಂತ್ರಿಕ ಸ್ಪರ್ಶದಿಂದ ಕೂಡಿದ ಗದ್ಯವನ್ನು ರಚಿಸುವಲ್ಲಿ ನೆಹರೂ ಅವರ ಪ್ರತಿಭೆಗೆ ಅವರ ಆತ್ಮಕತೆ ಹಾಗೂ ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿಗಳು, ಅವರು ಬರೆದ ಪತ್ರಗಳು ಮತ್ತು ಭಾಷಣಗಳು ಸಾಕ್ಷಿಗಳಾಗಿವೆ.

ನೆಹರೂ ಅವರು 1946ರಲ್ಲಿ ಮಧ್ಯಂತರ ಸರಕಾರದ ನೇತೃತ್ವವನ್ನು ವಹಿಸಿಕೊಂಡರು. ಲಾರ್ಡ್ ವೌಂಟ್‌ಬ್ಯಾಟನ್ ಹಾಗೂ ಎಂ.ಎ. ಜಿನ್ನಾ ಜೊತೆ ದೇಶವಿಭಜನೆ ಹಾಗೂ ಸ್ವಾತಂತ್ರಕ್ಕೆ ಕಾರಣವಾದಂತಹ ಮಾತುಕತೆಗಳಲ್ಲಿ ಕೇಂದ್ರ ವ್ಯಕ್ತಿಯಾಗಿದ್ದರು. ಗಾಂಧೀಜಿಯವರಿಗಿಂತಲೂ ಮೊದಲೇ ನೆಹರೂ ಅವರು ಭಾರತಕ್ಕೆ ಪೂರ್ಣ ಪ್ರಮಾಣದ ಸ್ವಾತಂತ್ರವನ್ನು ಆಗ್ರಹಿಸಿದ್ದರು. ಅಧಿಕಾರದ ಹಸ್ತಾಂತರಕ್ಕೆ ಮೊದಲು ಭಾರತದ ಸಂಸ್ಥಾನಗಳಿಗೆ ಹೆಚ್ಚಿನ ಅಧಿಕಾರವನ್ನು ಒದಗಿಸುವ ವೌಂಟ್‌ಬ್ಯಾಟನ್ ಅವರ ಪ್ರಸ್ತಾವವನ್ನು ನೆಹರೂ ಖಂಡತುಂಡವಾಗಿ ವಿರೋಧಿಸಿದ್ದರು. ಪ್ರಾಂತಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವುದು ಭಾರತದಲ್ಲಿ ಅರಾಜಕತೆ ಹಾಗೂ ಅನೈಕ್ಯತೆಗೆ ಕಾರಣವಾಗುತ್ತದೆಂಬುದು ಅವರ ಅಭಿಪ್ರಾಯವಾಗಿತ್ತು. ಇದಾದ ಆನಂತರ ವೌಂಟ್‌ಬ್ಯಾಟನ್ ಅವರು ತನ್ನ ನಿಲುವಿನಿಂದ ಹಿಂದೆ ಸರಿದರು. ಆದರೆ ನೆಹರೂ ಹಾಗೂ ಅವರ ಸಹವರ್ತಿಗಳು ಭಾರತಕ್ಕೆ ಸ್ವಾತಂತ್ರ ದೊರೆತ ಆನಂತರದ ವಾರಗಳಲ್ಲಿ ಸವಾಲುಗಳ ಮಹಾಪೂರವನ್ನೇ ಎದುರಿಸಬೇಕಾಯಿತು. ಕೋಮುಗಲಭೆ, ಪ್ರಾಂತಗಳಿಗೆ ಭಾರತ ಹಾಗೂ ಪಾಕಿಸ್ತಾನದಲ್ಲಿ ಸೇರಲು ಆಯ್ಕೆಯನ್ನು ನೀಡುವುದು, ಸಂಸ್ಥಾನಗಳ ಅರಸೊತ್ತಿಗೆಗಳ ಭವಿಷ್ಯ, ಭಾರತ ಹಾಗೂ ಬ್ರಿಟನ್ ನಡುವೆ ಸೊತ್ತುಗಳ ವಿಭಜನೆಯಂತಹ ಸವಾಲುಗಳು ಅವರ ಮುಂದಿದ್ದವು. ಇದರ ಬೆನ್ನಲ್ಲೇ ನೆಹರೂ ಅವರು ಕಾಶ್ಮೀರದ ಬಿಕ್ಕಟ್ಟನ್ನು ನಿಭಾಯಿಸಬೇಕಾಯಿತು ಮತ್ತು ಸ್ವಾತಂತ್ರ ದೊರೆತು ಆರು ತಿಂಗಳೊಳಗೆ ಮಹಾತ್ಮಾ ಗಾಂಧೀಜಿಯವರ ಹತ್ಯೆಯಾಯಿತು.

ಸ್ವಾತಂತ್ರೋತ್ತರ ಭಾರತದಲ್ಲಿ ನೆಹರೂ ಅವರು ತಳೆದ ಮೂರು ನಿರ್ಣಾಯಕ ನಿರ್ಧಾರಗಳು ಭಾರತವು ಗಣರಾಜ್ಯವಾಗುವಂತೆ ರೂಪುಗೊಳ್ಳುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದವು.

ಮೊದಲನೆಯದಾಗಿ ಭಾರತದ ಕುರಿತ ತನ್ನ ಕಲ್ಪನೆಯು ಸಂವಿಧಾನದಲ್ಲಿ ಸಾಕಾರಗೊಳ್ಳುವುದನ್ನು ನೆಹರೂ ಖಾತರಿಪಡಿಸಿಕೊಂಡಿದ್ದರು. ಎರಡನೆಯದಾಗಿ ಭಾರತವು ಜನರಿಂದಲೇ ಎಲ್ಲಾ ಅಧಿಕಾರಗಳು ಕೊಡಮಾಡಲ್ಪಡುವ ಒಂದು ಸ್ವತಂತ್ರ ಗಣರಾಜ್ಯವೆಂಬ ನಿರ್ಣಯವು ಸಂವಿಧಾನ ರಚನಾ ಸಭೆಯಲ್ಲಿ ಅಂಗೀಕಾರಗೊಳ್ಳುವಂತೆ ಮಾಡಿದರು. ಮೂರನೆಯದಾಗಿ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ಸಮಾನ ಅವಕಾಶ ಹಾಗೂ ಸ್ಥಾನಮಾನ, ಚಿಂತನಾ ಸ್ವಾತಂತ್ರವನ್ನು ಪ್ರತಿಯೊಬ್ಬರಿಗೂ ಖಾತರಿಪಡಿಸಲು ಶ್ರಮಿಸಿದರು. 1937ರಲ್ಲಿ ನಡೆದ ಪ್ರಾತೀಯ ಚುನಾವಣೆಗಳು ಆಸ್ತಿಯ ಒಡೆತನಕ್ಕೆ ಸೀಮಿತವಾಗಿತ್ತು ಹಾಗೂ ಕೇವಲ 3 ಕೋಟಿ ಭಾರತೀಯರಿಗೆ ಮಾತ್ರವೇ ಮತದಾನದ ಹಕ್ಕನ್ನು ದಯಪಾಲಿಸಲಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಸ್ವಾತಂತ್ರಾನಂತರ 1951ರಲ್ಲಿ ನಡೆದ ಚುನಾವಣೆಯಲ್ಲಿ 17.30 ಕೋಟಿ ಜನರು ಮತಚಲಾಯಿಸಲು ಅರ್ಹರಾಗಿದ್ದರು. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ತನ್ನ ‘ಪೇಟ್ರಿಯಾಟ್ಸ್ ಆ್ಯಂಡ್ ಪಾರ್ಟಿಶನ್ಸ್ ’ (ದೇಶಭಕ್ತರು ಮತ್ತು ವಿಭಜನೆಗಳು) ಕೃತಿಯಲ್ಲಿ ‘‘ಪ್ರಶ್ನಾತೀತವಾಗಿ ನೆಹರೂ ಅವರು ನಮ್ಮ ಪ್ರಜಾಪ್ರಭುತ್ವದ ಮುಖ್ಯಶಿಲ್ಪಿಯಾಗಿದ್ದಾರೆ. ಇತರ ಯಾವುದೇ ರಾಷ್ಟ್ರೀಯವಾದಿಗಿಂತ ಮಿಗಿಲಾಗಿ ಅವರು ಸಾರ್ವತ್ರಿಕ ಮತಾಧಿಕಾರ ಹಾಗೂ ಬಹುಪಕ್ಷೀಯ ವ್ಯವಸ್ಥೆಯನ್ನು ಉತ್ತೇಜಿಸಿದ್ದರು’’ ಎಂದು ಹೇಳಿದ್ದಾರೆ. ಭಾರತವು ಹಲವಾರು ಧರ್ಮಗಳು ಹಾಗೂ ಸಾಂಸ್ಕೃತಿಕ ಪರಂಪರೆ ಗಳಿಂದ ಸಮ್ಮಿಳಿತಗೊಂಡು ಶತಮಾನಗಳಿಂದ ರೂಪುಗೊಂಡ ನಾಗರಿಕತೆಯುಳ್ಳ ದೇಶವಾಗಿದೆ ಎಂಬ ದೃಷ್ಟಿಕೋನವನ್ನು ನೆಹರೂ ಹೊಂದಿದ್ದರು.

ನೆಹರೂ ಹಲವಾರು ಬಗೆಯ ವೈಫಲ್ಯಗಳನ್ನು ಕಂಡಿದ್ದಾರೆ. ಅವರು ಚೀನಾದ ಉದ್ದೇಶಗಳನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿದ್ದರು ಹಾಗೂ 1962ರಲ್ಲಿ ಚೀನಾದ ಸೇನೆಯು ಭಾರತದ ಮೇಲೆ ಆಕ್ರಮಣವನ್ನು ನಡೆಸುವುದನ್ನು ಅವರು ನಿರೀಕ್ಷಿಸಿಯೇ ಇರಲಿಲ್ಲ. ಅವರ ಈ ಗ್ರಹಿಕೆಯು ಭಾರತದ ರಕ್ಷಣಾ ಸಿದ್ಧತೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಿತ್ತು. ಅಗತ್ಯಕ್ಕಿಂತಲೂ ಅಧಿಕವಾಗಿ ತನ್ನ ಸ್ನೇಹಿತ, ರಕ್ಷಣಾ ಸಚಿವ ಕೃಷ್ಣ ಮೆನನ್ ಅವರನ್ನು ನೆಚ್ಚಿಕೊಂಡಿದ್ದರು. ಆಂತರಿಕವಾಗಿ ಹೇಳುವುದಾದರೆ, ಭೂಸುಧಾರಣೆಯಂತಹ ಅವರ ಆಶಯಗಳಿಗೆ ಗ್ರಾಮೀಣ ಪ್ರದೇಶಗಳ ಪ್ರಬಲ ಭೂಮಾಲಕರು ಅಡ್ಡಗಾಲು ಹಾಕಿದ್ದರು. ನೆಹರೂ ಅವರಿಗೆ ಆಗಾಗ್ಗೆ ತಾನು ದೇಶದ ಜನರಿಂದ ವಿಭಿನ್ನವಾಗಿರುವಂತೆ ಭಾಸವಾಗುತ್ತಿತ್ತು. ಆಡಳಿತಾತ್ಮಕ ಅದಕ್ಷತೆ, ಕೋಮುವಾದಿ ವಾಗ್ದಾಳಿಗಳು, ಕಾಂಗ್ರೆಸ್ ಪಕ್ಷದಲ್ಲಿನ ಭ್ರಷ್ಟಾಚಾರ, ಸಂಕುಚಿತವಾದ ಪ್ರಾದೇಶಿಕ ಹಾಗೂ ಜಾತೀಯವಾದಿ ದೃಷ್ಟಿಕೋನಗಳು ಅವರಲ್ಲಿ ಹತಾಶೆಯನ್ನುಂಟು ಮಾಡಿತ್ತು.

ಆದಾಗ್ಯೂ ಅವರ ಸಾಧನೆಯು ಜನಮನದಲ್ಲಿ ಶಾಶ್ವತವಾಗಿ ನೆಲೆಯಾಗಿದೆ. ಖ್ಯಾತ ಬರಹಗಾರ ನಿರಾದ್ ಚೌಧುರಿ ಅವರು, ‘‘ಜವಾಹರಲಾಲ್ ನೆಹರೂ ಭಾರತದ ಏಕತೆಯ ಹಿಂದಿರುವ ಅತ್ಯಂತ ಪ್ರಮುಖವಾದ ನೈತಿಕ ಶಕ್ತಿ’’ ಎಂದು ಬಣ್ಣಿಸಿದ್ದನ್ನು ಗುಹಾ ತನ್ನ ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ.

ನೆಹರೂ ನಿಜಕ್ಕೂ ಭಾರತಕ್ಕಾಗಿಯೇ ತನ್ನ ಪೂರ್ತಿ ಬದುಕನ್ನು ಮುಡಿಪಾಗಿಟ್ಟಿದ್ದರು. ಬಹುಶಃ ನೆಹರೂ ರೂಪುಗೊಳಿಸದ ಅಥವಾ ಪ್ರಭಾವ ಬೀರದ ಯಾವುದೇ ಸಾರ್ವಜನಿಕ ಸಂಸ್ಥೆ ಇರಲಾರದು. ಸ್ವತಂತ್ರ ಭಾರತದಲ್ಲಿ ಅವರ ಪಾತ್ರವನ್ನು ಕ್ಷುಲ್ಲಕಗೊಳಿಸುವ ಅಥವಾ ಅವರನ್ನು ಮರೆತುಬಿಡುವ ಯತ್ನಗಳು ದೇಶದ ಇತಿಹಾಸಕ್ಕೆ ಬಗೆಯುವ ದ್ರೋಹವಾಗಿದೆ.

ಕೃಪೆ: thewire

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top