--

ಇಂದು ಸಂವಿಧಾನ ಸಮರ್ಪಣಾ ದಿನ

ಭಾರತದ ಸಂವಿಧಾನವೆಂಬ ಪವಿತ್ರ ಸಾಮಾಜಿಕ ಗ್ರಂಥ

1945ರ ದ್ವಿತೀಯ ಮಹಾಯುದ್ಧ ಅಂತ್ಯವಾದ ನಂತರ ಭಾರತಕ್ಕೆ ಸ್ವಾತಂತ್ರ್ಯ ಆಧಿಕಾರದ ಹಾದಿಗಳು ಸುಗಮವಾದವು. ಭಾರತದಲ್ಲಿ ಆಡಳಿತ ನಿರ್ವಹಣೆ ಸುಲಲಿತವಾಗಿ ನಡೆಯಲು ಬ್ರಿಟಿಷ್ ಸರಕಾರವು ‘ಕ್ಯಾಬಿನೆಟ್ ಮಿಷನ್’ ಎಂದು ಕರೆಯುವ ತ್ರಿಸದಸ್ಯ ಆಯೋಗವನ್ನು ಭಾರತಕ್ಕೆ ಕಳುಹಿಸಿತು. ಸದರಿ ನಿಯೋಗವು 1946 ಮಾರ್ಚ್ 16ರಂದು ರಾಜ್ಯಾಂಗ ಸಭೆಯನ್ನು ನೇಮಿಸಬೇಕೆಂದು ಶಿಫಾರಸು ಮಾಡಿತು. ಹೀಗಾಗಿ, ಭಾರತದಲ್ಲಿ ರಾಜ್ಯಾಂಗ ರಚನಾ ಸಭೆಗೆ ಚುನಾವಣೆಗಳು ನಡೆದು ಪ್ರಾಂತೀಯ ವಿಧಾನಸಭೆಗಳಿಂದ ಸದಸ್ಯರನ್ನು ಆಯ್ಕೆಮಾಡಿದವು. ಸ್ವಾತಂತ್ರ್ಯ ಪೂರ್ವದಿಂದಲೂ ಕೇಂದ್ರ ಆಡಳಿತದಲ್ಲಿ ಮಂತ್ರಿಯಾಗಿ ಅಪಾರ ರಾಜಕೀಯ ಅನುಭವ ಹೊಂದಿದ್ದ ಡಾ. ಬಿ. ಆರ್. ಅಂಬೇಡ್ಕರ್‌ರವರು ಕಾಂಗ್ರೆಸ್‌ನ ಕುಟಿಲ ವಿರೋಧದಿಂದ ಮುಂಬೈಯಿಂದ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಜೋಗೇಂದ್ರನಾಥ್ ಮಂಡಲ್ ಮತ್ತು ಪರಿಶಿಷ್ಟ ಜಾತಿಯ ಸದಸ್ಯರ ಬೆಂಬಲದಿಂದ ಅವರು ಬಂಗಾಳ ವಿಧಾನ ಸಭೆಯಿಂದ ಆಯ್ಕೆಯಾಗಿ ರಾಜ್ಯಾಂಗ ಸಭೆಯನ್ನು ಪ್ರವೇಶಿಸಿದರು.

ರಾಜ್ಯಾಂಗ ಸಭೆಗೆ 296 ಸದಸ್ಯರು ಆಯ್ಕೆಯಾಗಿ ಅರ್ಹತೆ ಪಡೆದಿದ್ದರು. ಅದರೆ ಅಧಿವೇಶನದಲ್ಲಿ ಮುಸ್ಲಿಂ ಲೀಗ್ ಸದಸ್ಯರು ಗೈರಾದ್ದರಿಂದ 207 ಸದಸ್ಯರು ಮಾತ್ರ ಹಾಜರಾಗಿದ್ದರು. ರಾಜ್ಯಾಂಗ ರಚನಾ ಸಭೆಯ ಮೊದಲ ಸಭೆಯು 1946 ಡಿಸೆಂಬರ್ 9ರಂದು ದಿಲ್ಲಿಯ ಸಂವಿಧಾನ ಭವನದಲ್ಲಿ ಪ್ರಾರಂಭಿಸಲಾಯಿತು. ರಾಜ್ಯಾಂಗ ರಚನಾ ಸಭೆಯ ಅಧ್ಯಕ್ಷರಾಗಿ ಡಿಸೆಂಬರ್ 11ರಂದು ಡಾ. ರಾಜೇಂದ್ರ ಪ್ರಸಾದ್ ಆಯ್ಕೆಯಾದರು. ರಾಜ್ಯಾಂಗ ಸಭೆಯಲ್ಲಿ ಡಿಸೆಂಬರ್ 13ರಂದು ಜವಾಹರಲಾಲ್ ನೆಹರೂರವರು ಸಂವಿಧಾನ ರಚನೆ ಕುರಿತು ಧ್ಯೆಯೋದ್ದೇಶಗಳನ್ನು ಮಂಡಿಸಿದರು. ಸಂವಿಧಾನ ರಚನೆ ಕುರಿತು ಗಂಭೀರ ಚರ್ಚೆಗಳಾದವು. ಮುಸ್ಲಿಂ ಲೀಗ್‌ನ ಗೈರು ಹಾಜರಿ ಮತ್ತು ಹಲವು ಸಂಸ್ಥಾನಗಳ ಒಳಗೊಳ್ಳುವಿಕೆ ಕುರಿತ ಚರ್ಚೆಯಿಂದಾಗಿ ಸಭೆಯು ಗಂಭೀರತೆ ಪಡೆದುಕೊಂಡಿತ್ತು. ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. 1946 ಡಿಸೆಂಬರ್ 17ರಂದು ಇನ್ನು ಅನೇಕ ಸದಸ್ಯರು ಮಾತನಾಡುವವರಿದ್ದರೂ, ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್‌ರವರು ಈ ಸಂದಿಗ್ಧ ಸಂದರ್ಭದಲ್ಲಿ ಡಾ.ಅಂಬೇಡ್ಕರ್‌ರವರು ತಮ್ಮ ಅಭಿಪ್ರಾಯ ಮಂಡಿಸಬೇಕೆಂದು ಆಹ್ವಾನಿಸಿದರು.

ಇಂತಹ ಅನಿರೀಕ್ಷಿತ ಬೆಳವಣೆಗೆಯಿಂದಾಗಿ ಡಾ.ಅಂಬೇಡ್ಕರ್‌ರವರು ಅಂದು ಸಂವಿಧಾನ ರಚನಾ ಸಭೆಯನ್ನುದ್ದೇಶಿಸಿ ಮಾತನಾಡಬೇಕಾಯಿತು. ಪ್ರಸ್ತುತ ದೇಶದಲ್ಲಿ ರಚನೆಯಾಗಬೇಕಿರುವ ಸಂವಿಧಾನದ ಬೆಳವಣಿಗೆ ಮತ್ತು ದೇಶದ ಹಿನ್ನೋಟ-ಮುನ್ನೋಟಗಳ ಇಡೀ ಚಿತ್ರಣವನ್ನು ಕುರಿತು ಸಭೆಯಲ್ಲಿ ಸುದೀರ್ಘವಾಗಿ ಭಾಷಣ ಮಾಡಿದರು. ಡಾ.ಅಂಬೇಡ್ಕರ್‌ರವರ ಭಾಷಣವನ್ನು ಸದನವು ನಿಶ್ಯಬ್ದದಿಂದ ಆಲಿಸಿತು. ಡಾ. ಅಂಬೇಡ್ಕರ್ ತಮ್ಮ ಹೋರಾಟದುದ್ದಕ್ಕೂ ಕಾಂಗ್ರೆಸ್ ನೀತಿಗಳನ್ನು ಖಂಡಿಸಿದ್ದರೂ, ಕಾಂಗ್ರೆಸ್ ಮುಖಂಡರು ದೇಶದ ಅತ್ಯಂತ ಸಮರ್ಥ ನಾಯಕನ ನಿಖರ ಮತ್ತು ನಿರರ್ಗಳವಾದ ಭಾಷಣ ಕೇಳಿ ಮೌನವಾಗಿದ್ದರು. ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಎನ್. ವಿ. ಗಾಡ್ಗಿಲ್ ಅವರು ‘‘ಡಾ. ಅಂಬೇಡ್ಕರ್‌ರವರ ಮಾತು ಒಬ್ಬ ಉತ್ತಮ ಪ್ರೌಢ ರಾಜನೀತಿಜ್ಞನ ಮಾತಾಗಿತ್ತು. ಅವರ ಭಾಷಣ ದೇಶಕ್ಕೆ ಪೂರಕವಾದ ಅಂಶಗಳಿಂದ ಕೂಡಿತ್ತು’’ ಎಂದು ಹೇಳಿದ್ದರು. ಡಾ. ಅಂಬೇಡ್ಕರ್‌ರವರ ಭಾಷಣ ಕೇಳಿದ ಸದನದ ಸದಸ್ಯರೆಲ್ಲರಿಂದ ಅಭಿನಂದನೆಯ ಮಹಾಪೂರವೇ ಹರಿಯಿತು. ನಂತರ ಸಭೆಯಲ್ಲಿ ಸಂವಿಧಾನ ರಚನೆಗಾಗಿ ವಿವಿಧ ಉಪವಾಕ್ಯಗಳ ಚರ್ಚೆಗಳಲ್ಲಿ ಡಾ. ಅಂಬೇಡ್ಕರ್‌ರವರು ಭಾಗವಹಿಸಿ ಸಮರ್ಪಕವಾಗಿ ಉತ್ತರ ನೀಡಿದರು. 1947 ಜನವರಿ 24ರಂದು ಕ್ಯಾಬಿನೆಟ್ ಸಂವಿಧಾನ ರಚನೆಗೆ ಒಂದು ಸಲಹಾ ಸಮಿತಿಯನ್ನು ರಚಿಸಿತು. ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳು ರಚನೆಯಾದವು. ಇದರಲ್ಲಿ ಎರಡಕ್ಕೆ ಜವಹರಲಾಲ್ ನೆಹರೂ ಅಧ್ಯಕ್ಷರಾದರೆ, ಡಾ. ಅಂಬೇಡ್ಕರ್‌ರವರು ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾದರು. ಜವಹರಲಾಲ್ ನೆಹರೂರವರು 1947 ಜುಲೈ 4ರಂದು ರಾಷ್ಟ್ರಪತಿಗಳಿಗೆ ಸಂವಿಧಾನ ರಚನೆ ಕುರಿತು ವರದಿ ಸಲ್ಲಿಸಿದರು. ಈ ನಡುವೆ ಮುಸ್ಲಿಂ ಲೀಗ್‌ನ ಒತ್ತಾಯದ ಮೇರೆಗೆ, ಭಾರತ ಮತ್ತು ಪಾಕಿಸ್ತಾನ 1947 ಆಗಸ್ಟ್‌ನಲ್ಲಿ ಇಬ್ಭಾಗವಾಯಿತು. ಭಾರತಕ್ಕೆ ಅಗಸ್ಟ್ 15, 1947ರಂದು ಸ್ವಾತಂತ್ರ್ಯ ಲಭಿಸಿತು. ನೆಹರೂ ದೇಶದ ಪ್ರಥಮ ಪ್ರಧಾನಿಯಾದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಯಾದರು. ಡಾ. ಅಂಬೇಡ್ಕರ್‌ರವರು 1947 ಅಗಸ್ಟ್ 15ರಂದು ಪ್ರಥಮ ಕಾನೂನು ಮಂತ್ರಿಯಾದರು. ಅಷ್ಟೊತ್ತಿಗಾಗಲೇ ಅಸೆಂಬ್ಲಿಯ ವಿವಿಧ ಉಪ ಸಮಿತಿಗಳಲ್ಲಿ ಸಂವಿಧಾನ ರಚನೆಯ ಕುರಿತು ಡಾ. ಅಂಬೇಡ್ಕರ್ ಮಾಡಿದ ಸೇವೆಯನ್ನು ಅನೇಕ ಸದಸ್ಯರು ಗುಣಗಾಣ ಮಾಡುತ್ತಿದ್ದರು. ಅದೇ ಅಗಸ್ಟ್ 29ರಂದು ಸಂಸತ್ತು ಡಾ. ಅಂಬೇಡ್ಕರ್‌ರವರನ್ನು ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರಾಗಿ ಸರ್ವಾನುಮತದಿಂದ ಆರಿಸಿತು.

ಡಾ. ಅಂಬೇಡ್ಕರ್‌ರವರು ಪ್ರಮುಖವಾಗಿ 1909ರ ಮಾರ್ಲೋ ಮಿಂಟೋ ಸುಧಾರಣೆಗಳು, 1919 ಮತ್ತು 1935ರ ಭಾರತ ಸರಕಾರದ ಅಧಿನಿಯಮಗಳನ್ನು ಅವಲೋಕಿಸಿ ವಿವಿಧತೆಯಲ್ಲಿ ಏಕತೆ ಕಾಣಲು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದ ತತ್ವದಡಿಯಲ್ಲಿ ಪ್ರಜೆಗಳೇ ಪರಮಾಧಿಕಾರ ಹೊಂದುವ ‘‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರಕಾರ’’ವನ್ನು ಭಾರತದಲ್ಲಿ ಸ್ಥಾಪಿಸಲು ಮತ್ತು ನಾಗರಿಕರಿಗೆ ಆತ್ಮ ಗೌರವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಸ್ತ್ರೀ, ಪುರುಷರೆಲ್ಲರೂ ಸಮಾನರು ಎಂದು ಹೇಳುವ ಮೂಲಭೂತ ಹಕ್ಕುಗಳನ್ನು ಸಮರ್ಪಕವಾಗಿ ನೀಡುವ ಉತ್ತಮ ಶಕ್ತಿಯುತ ಸಂವಿಧಾನವನ್ನು ರಚಿಸುವ ಕಾರ್ಯದಲ್ಲಿ ತಲ್ಲೀನರಾದರು. ಕರಡು ಸಂವಿಧಾನ ಪರಿಶೀಲಿಸಲು ಡಾ. ಬಿ. ಆರ್. ಅಂಬೇಡ್ಕರ್, ಕೆ.ಎಂ. ಮುನ್ಸಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಅಯ್ಯರ್, ಸ್ಯೆಯದ್ ಮುಹಮ್ಮದ್ ಸಾದುಲ್ಲಾ, ಸರ್. ಬಿ.ಎಲ್.ಮಿಟ್ಟರ್, ಡಿ.ಪಿ. ಖೈತಾನ್ ಅವರನ್ನು ನೇಮಿಸಲಾಯಿತು. ಅದರೆ, ಸಂವಿಧಾನ ಕರಡು ಪರಿಶೀಲನೆಗೆ ಆಯ್ಕೆಯಾದ 7 ಜನ ಸದಸ್ಯರಲ್ಲಿ ಒಬ್ಬರು ನಿಧನರಾದರು. ಇಬ್ಬರು ಅನಾರೋಗ್ಯದಿಂದ ದೂರ ಉಳಿದರು. ಇನ್ನೊಬ್ಬರು ಒಂದು ಸಭೆಗೂ ಬರಲಿಲ್ಲ! ಮಗದೊಬ್ಬರು ವಿದೇಶದಲ್ಲಿ ಉಳಿದುಕೊಂಡರು. ಕೆಲವರು ಸಂವಿಧಾನ ಪರಿಶೀಲನೆ ಬಗ್ಗೆ ಜವಾಬ್ದಾರಿ ವಹಿಸಲಿಲ್ಲ! ಕೊನೆಗೆ ಸಂವಿಧಾನ ರಚಿಸುವ ಕೆಲಸ ಡಾ. ಅಂಬೇಡ್ಕರ್ ಒಬ್ಬರ ಮೇಲೆಯೇ ಬಿತ್ತು. ಇಂತಹ ಸಂದರ್ಭದಲ್ಲಿ ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ಮತ್ತು ಕಿಂಚಿತ್ತೂ ಎದೆಗುಂದದೆ ಸಂವಿಧಾನ ರಚಿಸುವ ಕೆಲಸದಲ್ಲಿ ಡಾ. ಅಂಬೇಡ್ಕರ್ ತೊಡಗಿಕೊಂಡರು.

ಸಂವಿಧಾನದ ಪ್ರಸ್ತಾವನೆಯಲ್ಲಿ (Preamble) ಡಾ. ಅಂಬೇಡ್ಕರ್‌ರವರು ‘‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸಮಗ್ರತೆಗಾಗಿ, ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ದೃಢಸಂಕಲ್ಪಮಾಡಿ ವಿಚಾರದ, ವಿಶ್ವಾಸದ, ನಂಬಿಕೆಯ, ಆರಾಧನೆ ಹಾಗೂ ಅಭಿವ್ಯಕ್ತಿಗೊಳಿಸುವ ಸಮಾನತೆಯ ಸ್ಥಾನ, ಅವಕಾಶ ಮತ್ತು ಈ ಭಾವನೆಗಳನ್ನು ಸಮಸ್ತರಲ್ಲಿ ಹರಡಲು, ಭ್ರಾತೃತ್ವವನ್ನು, ವ್ಯಕ್ತಿ ಗೌರವದ ಮತ್ತು ರಾಷ್ಟ್ರದ ಐಕ್ಯತೆಯನ್ನು ಕಾಪಾಡುತ್ತೇವೆ’’ ಎಂಬ ಬಲಿಷ್ಠ ಪೀಠಿಕೆ ಹಾಕಿ ಸಂವಿಧಾನಕ್ಕೆ ಭದ್ರ ಬುನಾದಿ ಹಾಕಿದ್ದಾರೆ.

ಇಂತಹ ಮಹತ್ತರವಾದ ಸಂವಿಧಾನವನ್ನು ಬರೆಯಲು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್‌ರವರು 2 ವರ್ಷಗಳು, 11 ತಿಂಗಳು, 17 ದಿನಗಳನ್ನು ತೆಗೆದುಕೊಂಡು, 395 ಅನುಚ್ಛೇದಗಳನ್ನು, 12 ಪರಿಚ್ಛೇದಗಳನ್ನು, 22 ಭಾಗಗಳನ್ನು, 6 ಪರಿಶಿಷ್ಟಗಳನ್ನು ರಚಿಸಿ ದಿನಾಂಕ 8, ಫೆಬ್ರವರಿ 1949 ರಲ್ಲಿ ಸಂವಿಧಾನ ರಚನಾ ಸಮಿತಿಗೆ ಸಲ್ಲಿಸಿದರು. ಸಂವಿಧಾನ ವಿಮರ್ಶಕರು, ಸಂವಿಧಾನ ಪ್ರಿಯರು, ವಿರೋಧಿಗಳು ಎಲ್ಲರೂ ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡು ಸಂವಿಧಾನವನ್ನು ಓದಿ, ಚರ್ಚಿಸಿ ಒಪ್ಪಿದರು. ಸಂವಿಧಾನ ಜಾರಿಯಾಗುವುದಕ್ಕೂ ಮುನ್ನ ಅನೇಕ ಸಲಹೆಗಳನ್ನು ಪಡೆದುಕೊಂಡು ಕೆಲವು ತಿದ್ದುಪಡಿಗಳನ್ನು ಮಾಡಿ ಅಂಗೀಕರಿಸಲು ಸುಮಾರು 165 ದಿನಗಳು, 11 ಅಧಿವೇಶನಗಳು ಬೇಕಾಯಿತು. ನಂತರ 1949-ನವೆಂಬರ್-26ರಂದು ಡಾ. ಅಂಬೇಡ್ಕರ್‌ರವರು ಸಂವಿಧಾನವನ್ನು ಸಂಸತ್ತಿಗೆ ಸಮರ್ಪಿಸಿದರು. ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತು. ಭಾರತದ ಸಂವಿಧಾನವು ಬಹುತ್ವ ಸಾರುವ ಸಾಮಾಜಿಕ ಪವಿತ್ರ ಗ್ರಂಥವಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top