‘ನಡುವೆ ಸುಳಿವ ಹೆಣ್ಣು’; ಆತ್ಮಕಥೆ ಮಾತ್ರವಲ್ಲ, ಸಮಾಜದರ್ಶನಗಳ ನೆನಪಿನ ದೀಪ | Vartha Bharati- ವಾರ್ತಾ ಭಾರತಿ

--

‘ನಡುವೆ ಸುಳಿವ ಹೆಣ್ಣು’; ಆತ್ಮಕಥೆ ಮಾತ್ರವಲ್ಲ, ಸಮಾಜದರ್ಶನಗಳ ನೆನಪಿನ ದೀಪ

‘ನಡುವೆ ಸುಳಿವ ಹೆಣ್ಣು’ ಕನ್ನಡದ ಅತ್ಯಂತ ಪ್ರಮುಖ ಸಂವೇದನಾಶೀಲ ಕೃತಿ. ಅದು ಜೋಗತಿಯಾಗಿ ಬದುಕು ನಡೆಸಿದ ವ್ಯಕ್ತಿಯೊಬ್ಬರ ಆತ್ಮಕಥನ ಮಾತ್ರವಲ್ಲ. ಸುಮಾರು ಅರವತ್ತು ವರ್ಷಗಳ ಸಮಾಜದ ಆತ್ಮಕಥನ ಎಂಬುದು ಬಹಳ ಮುಖ್ಯ ಮತ್ತು ಗಮನಾರ್ಹ ಸಂಗತಿ. ಆತ್ಮಕಥೆಗಳಲ್ಲಿ ಸಮಾಜ ನಿಮಿತ್ತ ಮಾತ್ರವಾಗಿ ಬಂದು ಹೋಗುತ್ತಿರುತ್ತದೆ. ಆದರೆ ಈ ಕಥನದಲ್ಲಿನ ವ್ಯಕ್ತಿ ತಾನು ನಿಮಿತ್ತ ಮಾತ್ರ ಎಂಬ ತಿಳುವಳಿಕೆಯಿಂದಲೇ ಕತೆಯನ್ನು ಹೇಳುತ್ತಾರೆ. ಮಧ್ಯ ಕರ್ನಾಟಕದ ಸಾಮಾಜಿಕ ಪಲ್ಲಟಗಳು, ನಗರ-ಗ್ರಾಮಗಳ ಸಂಘರ್ಷಗಳು, ಕೃಷಿಕರ ಸಂಕಷ್ಟಗಳು, ನಗರಗಳ ನೋವುಗಳು, ನರಕಗಳನ್ನು ಈ ಕೃತಿ ಪ್ರಾಮಾಣಿಕವಾಗಿ ಹಿಡಿಯಲು ಪ್ರಯತ್ನಿಸಿದೆ. ಹಾಗಾಗಿ ಈ ಕೃತಿ ಓದುಗರ ಅರಿವನ್ನು ವಿಸ್ತರಿಸುತ್ತದೆ. ದಿಕ್ಕೆಡುವಂಥ ವಾಸ್ತವವನ್ನು ಹಿಡಿಯಲು ಪ್ರಯತ್ನಿಸಿದೆ.


 -1-

 ಮಂಜಮ್ಮ ಜೋಗತಿಯವರ ಆತ್ಮ ಕಥನ ‘ನಡುವೆ ಸುಳಿವ ಹೆಣ್ಣು’ ಕೃತಿಯನ್ನು ಅದರ ನಿರೂಪಕರಾದ ಡಾ. ಅರುಣ್ ಜೋಳದಕೂಡ್ಲಿಗಿಯವರು ತಿಂಗಳ ಹಿಂದೆ ಕಳಿಸಿಕೊಟ್ಟಿದ್ದರು. ಕೃತಿ ಕೈಗೆ ಸೇರಿದಾಗ ಅದಿನ್ನೂ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಕೃತಿಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಲು ಸಾಧ್ಯವಾಯಿತು. ಆತ್ಮಕಥನ ಎಂಬುದು ಮನುಷ್ಯನೊಬ್ಬ ಏಕಾಂಗಿಯಾಗಿ ತನ್ನ ನೆನಪುಗಳನ್ನು ಧ್ಯಾನಿಸಿ ಬರೆವ ಅಗ್ನಿದಿವ್ಯ ಎಂಬುದು ಅಕ್ಷರಲೋಕದ ಸಾಮಾನ್ಯ ತಿಳುವಳಿಕೆ. ಲಿಪಿರೂಪ ಗೊತ್ತಿಲ್ಲದ ಜನರಿಗೆ ಆತ್ಮಕಥನವೆಂಬ ಪ್ರಕಾರವಿನ್ನೂ ದೂರವೇ ಉಳಿದಿದೆ. ಲಿಪಿರೂಪದಲ್ಲಿ ವಿವರಿಸಲು ಆಗದ ಅಥವಾ ಹಾಗೆ ದಾಖಲಿಸಲು ಇಷ್ಟ ಪಡದ ಸಾಧಕರ ಬದುಕನ್ನು ಕುರಿತ ಜೀವನಗಾಥೆಗಳನ್ನು ಇತರರು ನಿರೂಪಿಸಿದ್ದಾರೆ. ಜೀವನ ಚರಿತ್ರೆಗಳನ್ನು ನಿರೂಪಿಸುವಾಗ ಸಾಧಕರ ಕುರಿತು ಇತರರು ಅತಿರೇಕಗಳಲ್ಲಿ, ಉತ್ಪ್ರೇಕ್ಷೆಗಳಲ್ಲಿ ವಿವರಿಸುವುದೇ ಹೆಚ್ಚು. ಬಹುಶಃ ಭಾರತದ ಸಂಸ್ಕೃತಿಗಳ ಈ ಗುಣವೇ ಇತಿಹಾಸ ಪುರಾಣಗಳನ್ನು ಬೆರೆಸಿ ನೋಡುವಂತೆ ಮಾಡಿದೆ. ಇಲ್ಲಿ ಮನುಷ್ಯ ದೇವರಾಗಿ, ದೇವರು ಮನುಷ್ಯನಾಗಿ ಥಟ್ಟನೆ ಬದಲಾಗಬಲ್ಲ. ಜೈನ ಮೀಮಾಂಸೆಯ ಪ್ರಧಾನ ಧಾರೆಯಾದ ಉತ್ಪ್ರೇಕ್ಷಾಲಂಕಾರವು ಇಲ್ಲಿನ ಮನುಷ್ಯರ ನರನಾಡಿಗಳಂತೆ ಸಹಜಸ್ವರೂಪಿಯಾಗಿದೆ. ಆದರೆ ಆತ್ಮಕಥೆಗಳಿಗೆ ಈ ಸೌಲಭ್ಯ ಇರುವುದಿಲ್ಲ.

ಅಲ್ಲಿ ತೆರೆದು ತೋರಿದ್ದಕ್ಕಿಂತ ಬಚ್ಚಿಟ್ಟುಕೊಂಡಿದ್ದೇ ಹೆಚ್ಚು. ಅದೊಂತರ ಹಿಮಾವೃತಗೊಂಡ ಕಂದರಗಳ ಹಾಗೆ. ಕಂದರಗಳ ಆಳ ತಿಳಿಯಲು ತಿಳಿ ಮುಗಿಲು ಬೇಕು. ಉರಿಬಿಸಿಲು ಬೇಕು. ಮನುಷ್ಯ ಸಮಾಜದ ಭೀಕರ ಸಂಕೀರ್ಣ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಮನುಷ್ಯ ಸತ್ತ ಮೇಲೂ ಜನ ಸತ್ತವನ ಕುರಿತು ಒಳ್ಳೆಯದನ್ನೇ ನುಡಿಯಬೇಕು ಎಂಬ ಹಂಬಲ ನಮ್ಮದು. ಅದಕ್ಕಾಗಿ ನಾವೂ ಸಹ ಹಿಮಾವೃತ ಕಂದರಗಳಂತೆಯೇ ಬದುಕುತ್ತೇವೆ. ಬಹುಶಃ ಈ ಕಾರಣಕ್ಕಾಗಿಯೇ ನಮ್ಮ ಅವಧೂತ ಮತ್ತು ಆರೂಢ ಪಂಥಗಳು ಮನುಷ್ಯ ಏಕಾಂಗಿಯಾಗಿ ಮನದ ಆಳದ ಬಾವಿಗೆ ಹಗ್ಗ ಇಳಿಬಿಟ್ಟು ಇಳಿದು ನೋಡಲು ಪ್ರೇರೇಪಿಸುತ್ತವೆ. ನೀನು ಸಂತೆಯೊಳಗಿದ್ದರೂ ನಿನ್ನನ್ನು ನೀನು ಅರಿತುಕೊಳ್ಳುವುದೇ ಬಹಳ ದೊಡ್ಡ ಸಾಧನೆ ಎನ್ನುತ್ತವೆ. ಮನುಷ್ಯರು ಜೊಳ್ಳೋ ಗಟ್ಟಿಯೋ ಎಂದು ಅರ್ಥವಾಗುವುದು ಏಕಾಂಗಿಯಾಗಿ ತನ್ನನ್ನು ಕುರಿತು ತಾನೇ ಧ್ಯಾನಿಸಿಕೊಳ್ಳಲಾರಂಭಿಸಿದಾಗ ಮಾತ್ರ ಎಂದು ಕಾಣುತ್ತದೆ. ಎದುರಿಗಿನವರ ಕಣ್ಣಲ್ಲಿ ಸಭ್ಯಸ್ಥನಂತೆ ಕಾಣಬೇಕು ಎಂಬ ಮೋರೆಲ್ ಥಿಂಕಿಂಗನ್ನು ನಮ್ಮ ಸಮಾಜಗಳು, ಶಿಕ್ಷಣ ವ್ಯವಸ್ಥೆಗಳು ಕಲಿಸುತ್ತವೆ. ಆದರೆ ತನ್ನೊಳಗಿನ ಮೃಗದ ದರ್ಶನ ಏಕಾಂಗಿಯಾಗಿದ್ದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಕಾಣುತ್ತದೆ. ಬಹುಶಃ ಧ್ಯಾನ, ತಪಸ್ಸುಗಳ ಹಿಂದಿನ ಮರ್ಮ ತನ್ನ ಭೀಕರ ಇಂಪಲ್ಸಿವ್ ಗುಣಗಳನ್ನು ತೊರೆದು ಬದುಕುವ ಹಂಬಲ ಎಂದು ಕಾಣುತ್ತದೆ.

ಜೀವನಚರಿತ್ರೆಯಾಗಬಹುದಾಗಿದ್ದ ಮಂಜಮ್ಮ ನವರ ಕತೆಯನ್ನು ಜೋಳದಕೂಡ್ಲಿಗಿಯವರು ಆತ್ಮಕಥೆಯನ್ನಾಗಿ ನಿರೂಪಿಸಿದ್ದಾರೆ. ಘಟನೆಗಳು ಚರಿತ್ರೆಯ ಕ್ರೋನಾಲಜಿಯ ಹಂಗು ತೊಡೆದು ಹೊರಬರಲು ತವಕಿಸಿವೆ. ನುರಿತ ಕೈ ಮಗ್ಗಕಾರನಂತೆ ಹೂವು, ಹಸಿರು, ಮುಳ್ಳು, ಮಾಗಿದ ಹಣ್ಣು ಮುಂತಾದವುಗಳನ್ನು ನೇಯಬೇಕಾದ ಕಡೆ ಕಡೆದು ಕೂರಿಸಿ ನೇಯ್ದ ಚಂದದ ಸೀರೆಯಂತೆ ಕೃತಿಯನ್ನು ಅರುಣ್ ರೂಪಿಸಿದ್ದಾರೆ. ಸಾಮಾನ್ಯವಾಗಿ ಪಶ್ಚಿಮದ ಬರಹಗಾರರಿಂದ ಪ್ರೇರಣೆ ಪಡೆವ ಆತ್ಮಕತೆಗಳಲ್ಲಿ ಕ್ರೋನಾಲಜಿ ಎಂಬ ಚರಿತ್ರೆಯ ಛಾಪಿನ ಬಿಗಿ ಹಿಡಿತ ಕಾಣುತ್ತದೆ. ಆದರೆ ಈ ಕೃತಿ ಸಿದ್ಧ ಮಾದರಿಯ ಎಲ್ಲ ಚೌಕಟ್ಟುಗಳನ್ನು ಛಿದ್ರಗೊಳಿಸಿ ಮೈತಳೆದಿದೆ. ನೆನಪುಗಳ ದಾರ ಸಿಕ್ಕಿದಲ್ಲಿಂದಲೇ ನೇಯ್ಗೆ ಶುರುವಾಗುತ್ತದೆ.

ಕೃತಿಯನ್ನು ಓದುತ್ತಾ ಹೋದಂತೆ ನಾನು, ನಾವು ಇರುವ ಕಡೆ ಮಂಜಮ್ಮ, ಕಾಳಮ್ಮ ಮತ್ತು ಇತರರ ಹೆಸರು ಸೇರಿಸಿದ್ದರೆ ಅದು ಜೀವನ ಚರಿತ್ರೆಯಾಗಿ ರೂಪಾಂತರ ಪಡೆಯುತ್ತಿತ್ತು. ಅಷ್ಟರ ಮಟ್ಟಿಗೆ ತೆಳುವಾದುದು ಈ ಎರಡರ ನಡುವಿನ ಭಿನ್ನತೆ. ಯಾವುದೇ ಚರಿತ್ರೆಯ ದರ್ಶನಗಳು ವ್ಯಾಮೋಹ ಮುಕ್ತವಾಗಿದ್ದು ಬಹಳ ಕಡಿಮೆ. ಜಾತಿ, ಧರ್ಮ, ಸಿದ್ಧಾಂತ, ವರ್ಗ, ಪ್ರದೇಶ, ದೇಶ, ಪಂಥಗಳ ವ್ಯಾಮೋಹಗಳನ್ನು ಬಿಡಿಸಿಕೊಂಡು ಹೊರ ಬಂದು ಬರೆದವರು ಬಹಳ ಕಡಿಮೆ ಜನ. ಈ ಕೃತಿಯಲ್ಲೂ ಅನೇಕ ಕಡೆ ಈ ಸಮಸ್ಯೆ ಇದೆ.

‘ನಡುವೆ ಸುಳಿವ ಹೆಣ್ಣು’ ಕೃತಿಯ ಓದು ಇದೆಲ್ಲವನ್ನೂ ಜ್ಞಾಪಿಸಿತು. ಲಿಂಗ ರಾಜಕೀಯವನ್ನು ಬರೆಯುವಾಗ ಸಾವಿರಗಟ್ಟಲೆ ವರ್ಷಗಳ ಲಿಂಗಾಧಾರಿತ ಯಜಮಾನಿಕೆಯ ಅರಿವು ಇಲ್ಲದಿದ್ದರೆ ಇಂತಹ ಕೃತಿಗಳು ಸುಲಭವಾಗಿ ದಕ್ಕಲಾರವು. ತೃತೀಯ ಲಿಂಗಿ ಸಮುದಾಯಗಳಿಗೆ ಸೇರಿದ ಪ್ರತಿಭಾವಂತರು ಬರೆದ ಆತ್ಮಕಥನಗಳನ್ನು ಓದುವಾಗ ಜನ ಅಲ್ಲಿನ ಭೀಕರತೆಗೆ, ರೋಚಕತೆಗೆ, ತಮ್ಮ ಅರಿವಿಗೆ ಬರದ ಬೆಚ್ಚಿಬೀಳಿಸುವ ಸಂಗತಿಗಳ ಕಾರಣಕ್ಕಾಗಿ ಓದುತ್ತಾರೆ ಎನ್ನಿಸುತ್ತದೆ. ಏನಿದು? ಯಾಕಿದು? ಎಂಬುದು ಬಹುಪಾಲು ಓದುಗರ ಕುತೂಹಲ. ರೇವತಿ, ನಳಿನಿ ಮುಂತಾದವರ ಕಥನಗಳಲ್ಲಿ ಕುಟುಂಬ, ಸಮಾಜ ಮತ್ತು ಪೊಲೀಸ್ ಪ್ರಭುತ್ವಗಳ ಕ್ರೌರ್ಯದ ವಿವಿಧ ಮುಖಗಳಿವೆ. ದೇಹ ಮತ್ತು ಮನಸ್ಸುಗಳ ಭೀಕರ ಯಾತನಾತ್ಮಕ ಸಂಘರ್ಷವಿದೆ. ಈ ಸಂಗತಿಗಳು ಮಧ್ಯಮ ವರ್ಗದ ಓದುಗರಿಗೆ ನವನವೋನ್ಮೇಷಶಾಲಿನಿಯಾದುದು. ದಮನಿತ ಸಮುದಾಯಗಳ ಕುರಿತು ಈ ಪದ ಬಳಕೆ ಮಾಡುವುದು ಕ್ರೌರ್ಯವೆನ್ನಿಸುತ್ತದೆ. ಆದರೆ ಸ್ಥೂಲ ಮಟ್ಟದಲ್ಲಿ ಗ್ರಹಿಸುವ ಓದುಗರ ಬಳಿ ಈ ಕುರಿತು ಮಾತನಾಡಿದ್ದೇನೆ. ಅವರ ಓದಿನ ಹಿಂದಿನ ತರ್ಕ ಹೊಸದು ಮತ್ತು ರೋಚಕತೆಯನ್ನು ಗ್ರಹಿಸುವ ಕುತೂಹಲದ ಆಚೆಗೆ ತೆರೆದುಕೊಂಡದ್ದು ಕಡಿಮೆ ಎಂದೇ ಅನ್ನಿಸಿದೆ.

ಭಾರತೀಯ ಮಿಥಕಗಳ, ಪುರಾಣಗಳ ಪ್ರಮುಖ ವಿಶ್ಲೇಷಕರಾದ ದೇವದತ್ ಪಟ್ಟನಾಯಕ್ ಅವರು ತೃತೀಯ ಲಿಂಗಿ ಸಮುದಾಯಗಳ ಕುರಿತು ನಮ್ಮ ಪರಂಪರೆಗಳಲ್ಲಿನ ತಿಳುವಳಿಕೆಗಳನ್ನು ವಿವರಿಸಿದ್ದಾರೆ. ಅವರ ‘ಶಿಖಂಡಿ’ (2014) ಮತ್ತು ‘ದ ಪ್ರೆಗ್ನೆಂಟ್ ಕಿಂಗ್’ (2008) ಕೃತಿಗಳು ಈ ದೃಷ್ಟಿಯಿಂದ ಗಮನಾರ್ಹವಾದವುಗಳು. ಶಿಖಂಡಿ ಕೃತಿಯು ಕತೆಗಳ ಮೂಲಕ ಜಗತ್ತಿನ ವಿವಿಧ ಸಂಸ್ಕೃತಿಗಳು ಲೈಂಗಿಕ ಅಲ್ಪಸಂಖ್ಯಾತರ ಕುರಿತಂತೆ ನಡೆಸಿರುವ ಚಿಂತನೆಗಳನ್ನು ವಿವರಿಸಿದ್ದಾರೆ. ಬೈಬ್ಲಿಕಲ್ ಚಿಂತನೆಗಳಿಗೂ ಮೊದಲೇ ಪಶ್ಚಿಮದ ಮೆಸಪೊಟೇಮಿಯಾ, ಸುಮೇರಿಯಾ, ಈಜಿಪ್ಟ್ ಮುಂತಾದ ಸಂಸ್ಕೃತಿಗಳಲ್ಲೂ ಸಲಿಂಗಿಗಳ ಕುರಿತು ಗೇಲಿ, ವ್ಯಂಗ್ಯ ಮತ್ತು ದಮನಕಾರಿ ಮನೋವೃತ್ತಿ ಇತ್ತೆಂಬುದನ್ನು ದಾಖಲಿಸಿದ್ದಾರೆ. ಆದರೆ ಆಶ್ಚರ್ಯವೆಂಬಂತೆ ಭಾರತದ ಪುರಾಣಗಳಲ್ಲಿ ಈ ಚಮತ್ಕಾರಿ ವರ್ಗಗಳ ಕುರಿತು ವಿಭಿನ್ನ ಆಲೋಚನೆಗಳಿರುವುದನ್ನು ಗ್ರಹಿಸಿದ್ದಾರೆ. ಗಂಡುಗಳು ಹೆಣ್ಣಾಗುವುದು, ಹೆಣ್ಣುಗಳು ಗಂಡಾಗುವುದು, ಗಂಡಸರು ಗರ್ಭ ಧರಿಸುವುದು, ಹೆಂಗಸರು ಗಂಡಿನ ಸಂಪರ್ಕವಿಲ್ಲದೆ ಮಕ್ಕಳು ಪಡೆಯುವುದು ಮುಂತಾದ ಸಂಗತಿಗಳು ಪದೇ ಪದೇ ಪ್ರಸ್ತಾಪವಾಗುವ ದೃಷ್ಟಾಂತಗಳನ್ನು ಹಿಡಿದು ಅದ್ಭುತ ವಿಶ್ಲೇಷಣೆ ಮಾಡಿದ್ದಾರೆ. ದ್ರುಪದನಲ್ಲಿ ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಯಾದ ಶಿಖಂಡಿಯ ಕತೆಯ ಹಿಂದಿನ ವಿವರಗಳು ಭಾರತೀಯರಿಗೆ ತಿಳಿಯದ ಸಂಗತಿಯೇನಲ್ಲ.

‘ದ ಪ್ರೆಗ್ನೆಂಟ್ ಕಿಂಗ್’ ಕೂಡ ಹಾಗೆಯೇ. ಪಾಂಡವರ ವನವಾಸದ ಸಂದರ್ಭದಲ್ಲಿ ಲೋಮಸನೆಂಬ ಋಷಿಯು ಹೇಳಿದ ಯುವನಾಶ್ವನೆಂಬ ರಾಜನ ಕತೆ ಇದು. ಮಕ್ಕಳಿಲ್ಲದ ದಂಪತಿಗೆ ಋಷಿ ನೀಡಿದ ವಸ್ತುವನ್ನು ತನ್ನ ಹೆಂಡತಿಯರಿಬ್ಬರು ಕುಡಿಯಬೇಕಿತ್ತು ಆದರೆ ತಿಳಿಯದೆ ತಾನೆ ಕುಡಿದು ರಾಜ ಗರ್ಭ ಧರಿಸಿಬಿಡುವ ರೋಚಕ ಕತೆ ಇದು.

ಇಂತಹ ಸಂಗತಿಗಳನ್ನು ಭಾರತೀಯ ಪರಂಪರೆಗಳು ಯಾಕೆ ಧ್ಯಾನಿಸಿವೆ? ಎಂಬುದೇ ಕುತೂಹಲದ ವಿಚಾರ. ಯಾವುದೋ ನಿರ್ದಿಷ್ಟ ಉದ್ದೇಶ ಸಾಧನೆಗೋ ಇಲ್ಲ ಶಾಪದ ಕಾರಣಕ್ಕಾಗಿಯೋ ಈ ಆಶ್ಚರ್ಯಕರ ಜನರು ಜನಿಸುತ್ತಾರೆ ಎಂದು ಭಾರತೀಯ ಪುರಾಣಗಳು ನಂಬಿ ಇಂಥದ್ದನ್ನು ನಿರೂಪಿಸುತ್ತವೆ. ದೇವ ದೇವತೆಗಳೇ ಗಂಡು ಹೆಣ್ಣುಗಳಾಗಿ ಬದಲಾಗುವ ಚೋದ್ಯವನ್ನು ಇವು ವಿವರಿಸುತ್ತವೆ. ಈ ವರ್ಗದ ಜನರ ಕುರಿತು ಅಸಹನೆಯೇನೂ ಕಾಣುವುದಿಲ್ಲ. ಆದರೆ ಶಿಖಂಡಿಯ ಎದುರು ನಿಶ್ಯಸ್ತ್ರನಾಗುವ ಭೀಷ್ಮನಲ್ಲಿನ ಪೌರುಷ ಪ್ರಜ್ಞೆ ಯುದ್ಧ ಮಾಡದಂತೆ ತಡೆಯುತ್ತದೆ. ಇದು ಪುರಾಣದ ಅತ್ಯಂತ ವಿಕಟ ಗಳಿಗೆ. ಗಂಡಲ್ಲದವರೊಡನೆ ಯುದ್ಧ ಮಾಡೆನು ಎಂದು ಮಾಡಿದ್ದ ಪ್ರತಿಜ್ಞೆಗೆ ಬದ್ಧನಾಗಿ ಭೀಷ್ಮ ವರ್ತಿಸುತ್ತಾನೆ. ಮೂಲ ವ್ಯಾಸ ಭಾರತದಲ್ಲಿ ಶಿಖಂಡಿಯನ್ನು ತನ್ನ ಎದುರು ನಿಲ್ಲಿಸುವಂತೆ ಭೀಷ್ಮನೇ ಪಾಂಡವರಿಗೆ ಸೂಚಿಸುತ್ತಾನೆ. ಇದು ಕೃಷ್ಣ ತೋರಿಸುವ ಐಡಿಯಾ ಅಲ್ಲ. ಬಹುಶಃ ಮಂಜಮ್ಮನಿಗೆ ತೃತೀಯ ಲಿಂಗ ಸಮುದಾಯದಾಕೆ ಎಂದರೆ ಸಿಟ್ಟೂ ಬರಬಹುದು. ಆಕೆ ನಿಸ್ಸಂದೇಹವಾಗಿ ತಾನು ಹೆಣ್ಣು ಎಂದೇ ತಿಳಿದಿದ್ದಾರೆ.

ಪಟ್ಟನಾಯಕ್ ಬರೆಯುತ್ತಾರೆ; ಬೈಬ್ಲಿಕಲ್ ಸಂಸ್ಕೃತಿಯು ಆಧುನಿಕ ರಾಷ್ಟ್ರ ಸಂರಚನೆಗಳ ಕಾನೂನುಗಳ ಹಿಂದೆ ಪ್ರಭಾವ ಬೀರಿದೆ. ಎಲ್ಲರಿಗೂ ಒಂದೇ ಕಾನೂನು ಎಂಬ ತತ್ವದಿಂದ ಲೈಂಗಿಕ ಅಲ್ಪಸಂಖ್ಯಾತರು ಪ್ರಭುತ್ವದಿಂದಲೇ ಅಧಿಕೃತವಾಗಿ ದಮನಕ್ಕೊಳಗಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರು ದೇವರ ಸೃಷ್ಟಿಯಾಗಿರಲು ಸಾಧ್ಯವಿಲ್ಲ ಎಂದು ನಂಬಿಸಿದ ಪಶ್ಚಿಮದ ಧಾರ್ಮಿಕ ಪಂಡಿತರು ಸೃಷ್ಟಿಸಿದ ಭೀಕರ ಅನಾಹುತಗಳು ಆಧುನಿಕ ರಾಷ್ಟ್ರಗಳ ಮೇಲೂ ಪ್ರಭಾವ ಬೀರಿವೆ ಎನ್ನುತ್ತಾರೆ.
 ಮನುಷ್ಯನೆಂದರೆ ಪ್ರಜ್ಞೆ. ಆತ್ಮ, ಮನಸ್ಸು ಮಾತ್ರ. ದೇಹವೆಂಬುದು ಕೃತಕ ಎಂದು ನಂಬುವ ಅವಧೂತರ ಹಾಗೆಯೇ ಆಧುನಿಕ ಮನಶ್ಯಾಸ್ತ್ರಜ್ಞರು ಸಹ ತುಸು ಹೆಚ್ಚೂ ಕಡಿಮೆ ಹಾಗೆ ಯೋಚಿಸುತ್ತಾರೆ. ಸಿಗ್ಮಂಡ್ ಫ್ರಾಯ್ಡಾ ತನ್ನ ‘ಎಸ್ಸೇಸ್ ಆನ್ ಥಿಯರಿ ಆಫ್ ಸೆಕ್ಸೂಯಾಲಿಟಿ’ (1905) ಪ್ರಬಂಧದಲ್ಲಿ ಪ್ರತಿಯೊಬ್ಬರೂ ಉಭಯ ಲಿಂಗಿ ಸ್ವಭಾವಗಳನ್ನು ಧರಿಸಿಯೇ ಹುಟ್ಟುತ್ತಾರೆ. ನಂತರ ಉಭಯ ಲಿಂಗಗಳ ಕಡೆಗೂ ಆಕರ್ಷಿತರಾಗುತ್ತಾರೆ ಎಂದು ಬಿಡುತ್ತಾನೆ. ಇವೆಲ್ಲವೂ ತೀರ ಚರ್ಚೆಯ ಸಂಗತಿಗಳೆ.

-2-

‘ನಡುವೆ ಸುಳಿವ ಹೆಣ್ಣು’ ಕೃತಿಯು ಈ ಎಲ್ಲ ಸಂಗತಿಗಳನ್ನು ಯೋಚಿಸುವಂತೆ ಮಾಡಿತು. ನಗರ ಕೇಂದ್ರಿತ ಲೈಂಗಿಕ ಅಲ್ಪಸಂಖ್ಯಾತರ ಆತ್ಮಕಥೆಗಳಲ್ಲಿ ಬರುವ ಸಾಹಸ, ರೋಚಕತೆಗಳು ಈ ಕೃತಿಯಲ್ಲಿಲ್ಲ. ಆದರೆ ಶತಮಾನಗಳಿಂದ ರೂಪುಗೊಂಡಿದ್ದ ಸಾಂಪ್ರದಾಯಿಕ ಮನಸ್ಸು ಮತ್ತು ಅದಕ್ಕೆ ವಿರುದ್ಧ ನಿಲುವಿನ ತಲೆಮಾರುಗಳ ಸಂಘರ್ಷವನ್ನು ಈ ಕೃತಿಯು ತೀವ್ರ ವಿಷಾದದಿಂದ ವಿವರಿಸುತ್ತದೆ. ಜೊತೆಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ಸಾಮಾಜಿಕವಾಗಿದೆ. ಅಂದರೆ, ಕತೆ ಹೇಳುವ ವ್ಯಕ್ತಿ ಸಾಮಾಜಿಕ ಬದುಕಿನಲ್ಲಿ ತಾನು ನೆಪ ಮಾತ್ರ ಎಂದು ಭಾವಿಸಿಕೊಂಡಿದೆ. ಸಾಂಪ್ರದಾಯಿಕ ಮನಸ್ಸಿನೊಳಗಿದ್ದ ವಿವೇಕ ಮತ್ತು ಕ್ರೌರ್ಯವನ್ನು ಕೃತಿ ನಿರೂಪಿಸುವ ರೀತಿ ಅಪ್ರತಿಮವಾದುದು. 30-40 ವರ್ಷಗಳ ಹಿಂದೆ ಇದ್ದ ಕರ್ನಾಟಕ ಕಳೆದು ಹೋಗಿರುವ ಕುರಿತು ಕಥನಕಾರರಿಗೆ ತೀವ್ರ ವ್ಯಥೆ ಇರುವುದು ಕಾಣುತ್ತದೆ. ಹಾಗೆಂದು ಪರಂಪರೆಯ ಕುರಿತು ನಾಸ್ಟಾಲ್ಜಿಕ್ ಆಗಿ ಯೋಚಿಸುವುದಿಲ್ಲ.

ಘಟನೆಗಳನ್ನು ವಿವರಿಸುವಾಗ ಪ್ರಧಾನ ಸಂಗತಿಗಳನ್ನು ಮುಂದಕ್ಕೆ ತಳ್ಳಿ ಬೇಡವಾದವುಗಳನ್ನು ಮರೆಮಾಚುವ ರಾಜಕೀಯವನ್ನೇನೂ ಈ ಕೃತಿ ಮಾಡುವುದಿಲ್ಲ. ಅಪ್ರಿಯ ಸತ್ಯಗಳನ್ನು ಬಚ್ಚಿಟ್ಟು ಆತ್ಮಕಥೆ ಬರೆಯುವ ಅಪ್ರಾಮಾಣಿಕತೆಯನ್ನು ದೊಡ್ಡ ದೊಡ್ಡ ಲೇಖಕರೂ ಮಾಡಿದ್ದಾರೆ. ಆದರೆ ಈ ಕೃತಿ ಅಂತಹ ಎಲ್ಲ ಮಿತಿಗಳನ್ನು ಮೀರಿ ಬೆಳೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿರುವುದು ಓದುಗರಿಗೆ ಕಾಣುತ್ತದೆ. ಬದುಕಿನಲ್ಲಿ ತನಗೆ ಅಪಥ್ಯವಾದ ಸಂಗತಿಗಳನ್ನು ವಿವರಿಸಲು ವಿಷಾದಪಡುತ್ತದೆಯೇ ಹೊರತು, ಬಚ್ಚಿಟ್ಟು ಸೋಗು ತಳೆಯುವುದಿಲ್ಲ. ಮಂಜಮ್ಮ ತಾನು ಸಮಾಜದ ತೃಣರೂಪಿ ಜೀವಿ ಎಂದು ಭಾವಿಸಿದ್ದಾರೆ, ಹಾಗಾಗಿ ಕೃತಿಗೆ ಸಾಮಾಜಿಕ ಆಯಾಮ ಲಭಿಸಿಬಿಟ್ಟಿದೆ. ಇದನ್ನು ನಿರೂಪಿಸಲು ಆಕೆ ಹಲವು ಘಟನೆಗಳನ್ನು ಹೇಳುತ್ತಾ ಹೋಗಿದ್ದಾರೆ. ಬಾಲ್ಯದಲ್ಲಿ ಶೇಂಗಾ ಬಿಡಿಸಲು ಹೋದಾಗಿನ ಒಂದು ಘಟನೆ ಇದು; ‘‘ಒಬ್ಬ ಹೆಣ್ಣು ಮಗಳು ಅಡಿಕಿ ಚೀಲದ ತರಹದ ಉದ್ದನೆ ಚೀಲ ಹೊಲೆಸಿಕೊಂಡಿದ್ಲು. ಅದನ್ನ ಸೀರೆ ಒಳಾಗ ಕಟ್ಟಿಕೊಳ್ತಿದ್ಲು. ಅದರೊಳಗೆ ಜೀಜ ಸುಲಿದು ಕಳ್ಳತನದಿಂದ ತುಂಬಿಕೊಂಡು ಯಾರಿಗೂ ಗೊತ್ತಾಗದ ಹಾಗೆ ಮನೆಗೆ ತೊಗೊಂಡು ಹೋಗ್ತಿದ್ಲು. ಒಂದ್ಸಲ ಹೊಲದವರಿಗೆ ಯಾರೋ ಚಾಡಿ ಹೇಳಿ ಬಿಟ್ಟಿದ್ರು. ಆಗ ಹೊಲದ ಯಜಮಾನ ಬಂದು ಆ ಹೆಣ್ಣ ಮಗಳ ಸೀರೆ ಬಿಚ್ಚಿ, ಬಾರುಕೋಲು ತೊಗೊಂಡು, ಹೊಲದ ತುಂಬಾ ಓಡಾಡಿಸ್ಕೊಂಡು ಹೊಡೆದಿದ್ರು. ಬರಿ ಲಂಗದಲ್ಲಿದ್ದ ಆಕೆ ಕೈಯಿಂದ ಎದೆ ಮುಚ್ಚಿಕೊಂಡು ಅಳುತ್ತಾ, ಕಿರುಚುತ್ತಾ ಹೆದರಿಕೆಯಿಂದ ನಡುಗುತ್ತಾ ಹೊಲದ ತುಂಬಾ ಓಡೋಡಿ ತಿರುಗ್ತಿದ್ಲು (17). ಹಸಿವಿಗಿಂತ ಕದಿಯುವುದು ದೊಡ್ಡ ಅಪರಾಧವೆಂದು ಭಾವಿಸಿದ್ದ ಸಂಸ್ಕೃತಿಗಳಲ್ಲಿ ಪಾಳೆಗಾರಿ ಕ್ರೌರ್ಯವೇನೂ ಮಾಯವಾಗಿರಲಿಲ್ಲ. ಇಂತಹ ಘಟನೆಗಳು ಊಳಿಗಮಾನ್ಯ ಸಮಾಜಗಳ ಪ್ರಧಾನ ಲಕ್ಷಣಗಳು ಎಂದುಕೊಳ್ಳುವ ಹೊತ್ತಿಗೆ ಥಟ್ಟನೆ ಮಾನವೀಯವೆನ್ನಿಸುವ ದೃಷ್ಟಾಂತಗಳು ಕೃತಿಯಲ್ಲಿ ಬುತ್ತಿ ಬಿಚ್ಚಿ ಹೊರಬರುತ್ತವೆ.

‘‘ಹಳ್ಳಿಗಳಲ್ಲಿ ನಾಟಕ ಮಾಡುವ ದಿನಗಳಲ್ಲಿ, ನಾಟಕ ಮುಗಿದ ಮೇಲೆ ಬೆಳಗ್ಗೆ ಸ್ಯಾವಿಗೆ ಬಸ್ತಿರ್ತಿದ್ರು, ಜೋಗ್ತೇರಾ ನಮ್ಮನಿಗೆ ಊಟಕ್ಕ ಬರ್ರಿ, ನಮ್ಮನಿಗೆ ಬರ್ರಿ ಅಂತ ಊಟಕ್ಕೆ ಕರೆಯೋಕೆ ನಾಮುಂದೆ ನೀಮುಂದೆ ಅಂತ ಕಚ್ಚಾಡ್ತಿದ್ರು. ಹಾಡಿದ ಹೊಟ್ಟೆ, ಹಡೆದ ಹೊಟ್ಟೆ ಎರಡೂ ಒಂದೆ ಅಂತ ಹೇಳತಿದ್ರು. ಹಡೆದ ಹೊಟ್ಟೆ ಎಷ್ಟು ಹಸಿದಿರುತ್ತೋ, ಹಾಡಿದ ಹೊಟ್ಟೇನೂ ಅಷ್ಟೇ ಹಸಿದಿರುತ್ತೆ ಅನ್ನೋದು ಜನಪದರ ನಂಬಿಕೆ’’ (144).

 ಇಂತಹ ಅಸಂಖ್ಯಾತ ಘಟನೆಗಳು ಈ ಕೃತಿಯಲ್ಲಿವೆ. ಉತ್ತರ ಕರ್ನಾಟಕದ ಜನರ ಈ ವಿವೇಕವು ನಗರಗಳ ನ್ಯಾರೋ ನಿಲುವುಗಳಿಗೆ ತದ್ವಿರುದ್ಧವಾದವು. ಕ್ರಿಟಿಕಲ್ ಥಿಂಕಿಂಗಿನ ಪ್ರಮೇಯಗಳ ಮೂಲಕ ನೋಡುವವರಿಗೆ ದಕ್ಕುವ ವಿವೇಕವನ್ನು ಒಳನಾಡಿನ ಜನಪದರು ಅದನ್ನೊಂದು ಆಚರಣೆಯ ಹಾಗೆ ಗ್ರಹಿಸುತ್ತಾರೆ.

ಮಂಜುನಾಥನೆಂಬ ಹುಡುಗ ಮಂಜಮ್ಮನಾಗುವಾಗ ಕುಟುಂಬ ಮತ್ತು ಹತ್ತಿರದವರು ನಡೆಸಿದ ಕ್ರೌರ್ಯವನ್ನೂ ಕೃತಿ ದಾಖಲಿಸುತ್ತದೆ. ಆದರೆ ಜೋಗಮ್ಮನಾಗಿ ಅನನ್ಯತೆ ಸಾಧಿಸಿದ ಮೇಲೆ ತನ್ನ ತಾಯಿ, ತಂದೆ ಮತ್ತು ಕುಟುಂಬದವರು ತೋರಿಸುವ ಆಪ್ತತೆಯನ್ನೂ, ಸಮಾಜದ ವಿವೇಕವನ್ನೂ ಕೃತಿ ಮರೆಯದೆ ದಾಖಲಿಸುತ್ತದೆ. ಒಳಿತು ಕೆಡುಕುಗಳು ಸಂದರ್ಭಗಳ ಆಧಾರದ ಮೇಲೆ ನಡೆಯುತ್ತಿರುತ್ತವೆ. ಅವು ಯಾವಾಗಲೂ ಸರಳ ರೇಖೆಯಂತೆ ವರ್ತಿಸುವುದಿಲ್ಲ. ಮನುಷ್ಯರ ಹಾಗೆ ಸಮಾಜವನ್ನೂ ಸಹ ಕಪ್ಪು ಬಿಳುಪುಗಳೆಂಬ ಎರಡೇ ಬಣ್ಣಗಳ ಮೂಲಕ ಅಳೆಯಲಾಗದು ಎಂಬುದು ಕೃತಿಯ ದೊಡ್ಡ ವಿವೇಕ.

ಜನರ ಆಚರಣೆಯ ಕೇಂದ್ರಗಳು ಹೇಗೆ ಪುರೋಹಿತಶಾಹಿಗಳ ಕೈಗೆ ಹೋಗುತ್ತಿವೆ. ಹೋದ ಮೇಲೆ ಅಲ್ಲಿ ನಡೆಯುವ ಪಲ್ಲಟಗಳನ್ನು ವಿವರಿಸುತ್ತಾರೆ. ‘‘ಆಗಿನ ಹುಲಿಗಿಗೂ ಈಗಿನ ಹುಲಿಗಿಗೂ ಬಾಳ ಪರಕು ಐತಿ. ಆಗೆಲ್ಲ ಗರ್ಭಗುಡಿ ಮುಂದೆ ಮಲಗ್ತಿದ್ವಿ. ಗುಡಿಯಾಗ ಉಳಿತಿದ್ವಿ. ಗುಡೀನೆ ನಮ್ ಮನಿ ಅನ್ನೋ ತರ ಭಾವನೆ ಇರ್ತಿತ್ತು. ..ನೆಮ್ಮದಿ ಆಗ್ತಿತ್ತು... ಈಗ ಗುಡಿಯಾಗ ಜೋಗ್ತ್ಯಾರು ಹಾಡದ್ನೂ ಬಿಡಿಸ್ಯಾರ. ಜೋಗ್ತೇರು ಹಾಡಾದು ಕುಣಿಯಾದು ಈಗ ಅಲ್ಲಿ ಮಾಡಂಗಿಲ್ಲ. ...ಹಂಗಾಗಿ ನಾನು ಈಗ ಹುಲಿಗೀಗೆ ಹೋಗದ್ನಾ ಬಿಟ್ಟೀನಿ. ಈಗ ಬ್ರಾಂಬ್ರು ಪೂಜಿ ಮಾಡ್ತಾರ, ಅವರದ್ದೇ ಏನೇನೊ ಕಂಡೀಷನ್ ಮಾಡಿಕಂಡ್ಯಾರ. ಮೊದ್ಲು ಜೋಗುಳ ಮಾತಾ, ಹುಲಿಗೆಮ್ಮ ಅಂತ ಕರೀತಿದ್ರು, ಈಗ ಹುಲಿಗೆಮ್ಮ ದೇವಿ, ಹುಲಿಗೇಶ್ವರಿ ಅಂತ ಕರೀತಾರ. ಈ ಹೆಸರುಗಳು ನಮ್ ಹುಲಿಗೆಮ್ ಅನ್ನೋ ಭಾವನೆನೆ ಕಡಿಮೆ ಮಾಡಿದೆ. ಆವಾಗ ಅಲ್ಲಿ ಕಳ್ತನ ಆಗ್ತಿರ್ಲಿಲ್ಲ,.. ಈಗ ಚೂರು ಮೈಮರೆತ್ರೂ ಕಳ್ಳತನ ಆಗ್ತೈತಿ’’ (56).

ಸರ್ಪ ಸುತ್ತಿಗೆ ಔಷಧ ಬರೆಯುವಾಗ ಗಾಯತ್ರಿ ಮಂತ್ರ ಹೇಳುವುದನ್ನು, ಧರ್ಮಸ್ಥಳದ ತೀರ್ಥ ಕುಡಿಸುವುದನ್ನು ಪ್ರಸ್ತಾಪಿಸುವ ಮಂಜಮ್ಮ ಹುಲಿಗೆಮ್ಮ ಹುಲಿಗೇಶ್ವರಿ ಆಗಿ ಜನರಿಂದ ಔಪಚಾರಿಕ ಭಕ್ತಿ ಪಡೆಯುವ ಒಂದರ್ಥದಲ್ಲಿ ದೂರವಾದ ಕತೆಯನ್ನು ದುಃಖ ದಿಂದ ವಿವರಿಸುತ್ತಾರೆ. ಬೈಬ್ಲಿಕಲ್ ಭಕ್ತಿ ಮತ್ತು ನಂಬಿಕೆಗಳನ್ನು ತೆಗಳುವ ಭಾರತದ ಪುರೋಹಿತಶಾಹಿಯು ತನ್ನ ಲಾಭ ಬಡುಕ ದಾಹಗಳಿಂದಾಗಿ ಜನರ ನಂಬಿಕೆಯ ಕೇಂದ್ರಗಳನ್ನು ಕಬ್ಜಾ ಮಾಡಿಕೊಳ್ಳುತ್ತಿದೆ. ಸಮುದಾಯಗಳು ಸಾವಿರಾರು ವರ್ಷಗಳಿಂದ ನಂಬಿ ಆಚರಿಸಿಕೊಂಡು ಬಂದ ನಂಬಿಕೆಗಳನ್ನು, ಬಹುತ್ವದಲ್ಲಿನ ನಂಬಿಕೆಗಳನ್ನು, ಇತರ ಆಚರಣೆಗಳ ಕುರಿತಾದ ಸಹನೆಯನ್ನು ದಮನ ಮಾಡಿ ಏಕ ಮಾದರಿಯ ಯಜಮಾನಿಕೆಯ ದಮನಕಾರಿ ಸಂಸ್ಕೃತಿಯ ಹೇರಿಕೆಯನ್ನು ಈ ರೀತಿಯ ಪ್ರಸಂಗಗಳು ಪ್ರಸ್ತಾಪಿಸುತ್ತವೆ. ಸ್ಥಳೀಯ ಸಂಗತಿಗಳಲ್ಲೇ ಸಂಭ್ರಮ ಪಡುತ್ತಿದ್ದ ಈ ರೀತಿಯ ಆಚರಣಾ ಕೇಂದ್ರಗಳು ಬೃಹತ್ತಾದ ಧಾರ್ಮಿಕ ಸಂಕೀರ್ಣಗಳ ಸ್ವರೂಪ ಪಡೆಯುತ್ತಿದ್ದ ಹಾಗೆ ಕುಬ್ಜಗೊಳ್ಳುತ್ತವೆ ಎಂದು ಕಾಣುತ್ತದೆ. ಸವದತ್ತಿ, ಹುಲಿಗಿ ಮುಂತಾದ ಆಚರಣಾ ಕೇಂದ್ರಗಳು ಪಶುಪಾಲಕ ಸಮುದಾಯಗಳು ರೂಪಿಸಿದ ಕೇಂದ್ರಗಳು. ಸಾವಿರಗಟ್ಟಲೆ ವರ್ಷಗಳಿಂದ ಇವು ಅನೇಕರ ಭಾವನೆಗಳನ್ನು, ಭಕ್ತಿಯನ್ನು ಪೊರೆಯುತ್ತಿದ್ದ ಜಾಗಗಳು. ಜೋಗತಿ, ಜೋಗಪ್ಪಗಳಂತಹ ತಬ್ಬಲಿಗಳನ್ನು ಪೊರೆದು ಸಮುದಾಯಗಳ ನಡುವೆ ಅವರ ಕುರಿತು ಗೌರವ ಭಾವನೆಯನ್ನು ಹುಟ್ಟಿಸಿ ಅವರನ್ನು ಸಹನೆಯಿಂದ ನೋಡುವಂತೆ ಮಾಡಿದ ಜಾಗಗಳಿವು. ಈಗ ಜೋಗತಿಯರು ಹಾಡುವಂತಿಲ್ಲ, ಕುಣಿಯುವಂತಿಲ್ಲ ಎಂದು ಮಾಡಿಬಿಟ್ಟಿದ್ದಾರೆ ಎಂಬುದು ಎಂತಹ ಯಾತನೆಯ ಸಂಗತಿ.

ಹಿಟ್ಲರ್ ತನ್ನ ಶ್ರೇಷ್ಠ ರಾಷ್ಟ್ರದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಇರಬಾರದೆಂದು ಸುಮಾರು 2.58 ಲಕ್ಷ ಜನರನ್ನು ಕೊಂದು ಹಾಕಿದ್ದಾಗಿ ಅವರ ವಾರ್ ಡೈರಿ ಹೇಳುತ್ತದೆ. ಇಲ್ಲಿ ಜೋಗಪ್ಪ, ಜೋಗಮ್ಮಗಳನ್ನು ಅವಮಾನಿಸಿ ಹೊರಗಟ್ಟಲಾಗಿದೆ. ವೇದ, ಉಪನಿಷತ್ತು, ಪುರಾಣಗಳಲ್ಲಿ ಏನೇನೋ ಇದೆಯೆಂದು ಸಂಭ್ರಮಿಸುವ ನಗರ ಪ್ರಜ್ಞೆಯು ಸಾವಿರಾರು ವರ್ಷಗಳಿಂದ ನಡೆದು ಬಂದ ಸಂಕರ ಸಂಸ್ಕೃತಿಯನ್ನು, ಬಹುತ್ವಗಳ ಕುರಿತಾದ ಸಹನೆ, ವಿವೇಕಗಳ ಬೇರುಗಳನ್ನು ಕತ್ತರಿಸಿ ಎಸೆಯಲು ಯಾಕೆ ಸಮ್ಮತಿ ನೀಡಿದೆ?. ‘ಏಕ’ದ ಹೆಸರಲ್ಲಿ ಸಮಾಜಗಳ ಹಲವು ವರ್ಗಗಳ ಬದುಕನ್ನು ಅವಮಾನಿಸಲು, ದುರುಳೀಕರಿಸಲು ನಮಗೆ ಕಲಿಸಿದ್ದು ಯಾರು? ಅಭಿಪ್ರಾಯಗಳು, ನಂಬಿಕೆಗಳು ಹೇಗೆ ಎಲ್ಲೆಲ್ಲಿ ಉತ್ಪಾದನೆಯಾಗುತ್ತವೆ ಎಂಬುದಕ್ಕೆ ಹುಲಿಗಿ ಅತ್ಯುತ್ತಮ ಉದಾಹರಣೆ. ಸಹನೆ, ವಿವೇಕ ಸಂಗಾತಿ ಸಂಸ್ಕೃತಿಗಳ ಕುರಿತಂತೆ ಗೌರವಾದರಗಳು ನಮ್ಮ ಪರಂಪರೆಗಳ ರ್ಯಾಶನಲ್ ಅಂಶಗಳು. ಇವುಗಳನ್ನು ಯಾವ ಸಂಸ್ಕೃತಿಗಳೂ ಕಳೆದುಕೊಳ್ಳಬಾರದು. ಸಂತರು, ಅವಧೂತರು, ಅನುಭಾವಿಗಳು, ಹಿರಿಯರು ಈ ವಿವೇಕವನ್ನು ಸೃಷ್ಟಿಸಿ ಮನುಷ್ಯ ಸಮಾಜವನ್ನು ಸಿಮೆಂಟಿಂಗ್ ಮಾಡಿದ್ದರು. ಇವರನ್ನೇ ನಾವು ಆರ್ಗ್ಯಾನಿಕ್ ಚಿಂತಕರು ಎಂದು ಕರೆಯಬೇಕು, ಕರೆಯುವುದಾದರೆ. ಇಂತಹ ಚಿಂತನೆಗಳಿಗೆ ಬರ ಬಂದ ಕಾರಣಕ್ಕೆ ಸಮಾಜ ಏಕ ಸಂಸ್ಕೃತಿಯ ಮುಳ್ಳಿನುಂಡೆಯನ್ನು ಕಂಕುಳ ಕೆಳಗೆ ಇಟ್ಟುಕೊಂಡು ನರಳುತ್ತಿದೆ ಎನ್ನಿಸುತ್ತದೆ.

ಮಂಜಮ್ಮನನ್ನು ಪೊರೆಯುವ ಗೊಲ್ಲರಹಳ್ಳಿಯವರು, ಮುಸ್ಲಿಂ ಟೀಚರ್ ಸಯೀದಾ ಮತ್ತು ಫ್ಯಾಕ್ಟರಿ ಮ್ಯಾನೇಜರನ ಪ್ರೇಮ, ಮುಸ್ಲಿಂ ಜೋಗತಿಯ ಶವಸಂಸ್ಕಾರದ ಸಂದರ್ಭದ ಸಂಘರ್ಷ ಇವೆಲ್ಲ ಸಮಾಜದ ಸಹಜ ಚಲನೆಗಳೆಂಬ ಗ್ರಹಿಕೆ ಇಲ್ಲಿದೆ. ಸಮಾಜದ ಸ್ವಾರ್ಥ ಮತ್ತು ಕ್ರೌರ್ಯ, ಪ್ರೇಮ ಮತ್ತು ದ್ವೇಷಗಳು ಒಟ್ಟಿಗೆ ಇರುವುದನ್ನು ಕೃತಿ ಧ್ಯಾನಿಸಿ ಹಿಡಿದಿದೆ. ಜೋಗತಿ, ಜೋಗಪ್ಪಗಳು ಜಾತಿಗಳನ್ನು ಮೀರಿದವರೇನಲ್ಲ ಎಂಬ ಅಂಶಗಳು ಕೃತಿಯಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತವೆ. ತಾನು ಶೆಟ್ಟರ ಸಮುದಾಯಕ್ಕೆ ಸೇರಿದ ಜೋಗತಿಯಾದ ಕಾರಣಕ್ಕೆ ತನ್ನನ್ನು ಸಮಾಜವೂ ಬೇರೆ ಕಣ್ಣಿನಿಂದ ನೋಡುತ್ತಿತ್ತು ಮತ್ತು ಜೋಗತಿಯರ ನಡುವೆ ತನ್ನೊಳಗೂ ಸಹ ತುಸು ಉತ್ತಮಿಕೆಯ ಭಾವವಿತ್ತು ಎಂಬ ಗ್ರಹಿಕೆ ಮಂಜಮ್ಮನಿಗಿರುವಂತೆ ಕೃತಿಯಲ್ಲಿ ಅನೇಕ ಕಡೆ ಕಾಣುತ್ತದೆ. ಒಂದು ಹುಡುಗನೊಂದಿಗಿನ ಪ್ರೇಮ ಪ್ರಸಂಗ ಮತ್ತು ಅದು ತಂದೊಡ್ಡಿದ ಸಂಕಷ್ಟಗಳನ್ನು, ಲಿಂಗ ಪರಿವರ್ತನೆ ಅಥವಾ ನಿರ್ವಾಣ ಮಾಡಿಕೊಳ್ಳುವುದನ್ನು ನಿರಾಕರಿಸಿದ್ದರ ಕುರಿತ ಹೆಮ್ಮೆಯ ಭಾವವನ್ನೂ ಕೃತಿಯಲ್ಲಿ ದಾಖಲಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಏಕಾಂಗಿಯಾಗಿ ಸುತ್ತಿದರೂ ದೈಹಿಕ ದೌರ್ಜನ್ಯಗಳನ್ನು ಎದುರಿಸದ ಮಂಜಮ್ಮ ದಾವಣಗೆರೆ ನಗರದಲ್ಲಿ ಕಾಮುಕರು ನಡೆಸಿದ ಭೀಕರ ದೌರ್ಜನ್ಯವನ್ನು ಓದುಗರು ನಡುಗುವಂತೆ ವಿವರಿಸಿದ್ದಾರೆ.

‘ನಡುವೆ ಸುಳಿವ ಹೆಣ್ಣು’ ಕನ್ನಡದ ಅತ್ಯಂತ ಪ್ರಮುಖ ಸಂವೇದನಾಶೀಲ ಕೃತಿ. ಅದು ಜೋಗತಿಯಾಗಿ ಬದುಕು ನಡೆಸಿದ ವ್ಯಕ್ತಿಯೊಬ್ಬರ ಆತ್ಮಕಥನ ಮಾತ್ರವಲ್ಲ. ಸುಮಾರು ಅರವತ್ತು ವರ್ಷಗಳ ಸಮಾಜದ ಆತ್ಮಕಥನ ಎಂಬುದು ಬಹಳ ಮುಖ್ಯ ಮತ್ತು ಗಮನಾರ್ಹ ಸಂಗತಿ. ಆತ್ಮಕಥೆಗಳಲ್ಲಿ ಸಮಾಜ ನಿಮಿತ್ತ ಮಾತ್ರವಾಗಿ ಬಂದು ಹೋಗುತ್ತಿರುತ್ತದೆ. ಆದರೆ ಈ ಕಥನದಲ್ಲಿನ ವ್ಯಕ್ತಿ ತಾನು ನಿಮಿತ್ತ ಮಾತ್ರ ಎಂಬ ತಿಳುವಳಿಕೆಯಿಂದಲೇ ಕತೆಯನ್ನು ಹೇಳುತ್ತಾರೆ. ಮಧ್ಯ ಕರ್ನಾಟಕದ ಸಾಮಾಜಿಕ ಪಲ್ಲಟಗಳು, ನಗರ-ಗ್ರಾಮಗಳ ಸಂಘರ್ಷಗಳು, ಕೃಷಿಕರ ಸಂಕಷ್ಟಗಳು, ನಗರಗಳ ನೋವುಗಳು, ನರಕಗಳನ್ನು ಈ ಕೃತಿ ಪ್ರಾಮಾಣಿಕವಾಗಿ ಹಿಡಿಯಲು ಪ್ರಯತ್ನಿಸಿದೆ. ಹಾಗಾಗಿ ಈ ಕೃತಿ ಓದುಗರ ಅರಿವನ್ನು ವಿಸ್ತರಿಸುತ್ತದೆ. ದಿಕ್ಕೆಡುವಂಥ ವಾಸ್ತವವನ್ನು ಹಿಡಿಯಲು ಪ್ರಯತ್ನಿಸಿದೆ. ವ್ಯಕ್ತಿಗತ ನೆಲೆಗಟ್ಟನ್ನು ಮೀರಿ ಸಾಮಾಜಿಕ ಆಯಾಮವನ್ನು ಪಡೆದದ್ದರಿಂದ ನಾಸ್ಟಾಲ್ಜಿಕ್ ಆಗಬಹುದಾದ ಮಿತಿಯನ್ನು ಮೀರಿಕೊಂಡಿದೆ. ಇದು ಕನ್ನಡದ ಮಟ್ಟಿಗೆ ಅಪೂರ್ವವಾದ ಸಮಜೋ-ಸಾಂಸ್ಕೃತಿಕ ದರ್ಶನಗಳ ಪ್ರಮುಖ ಕೃತಿ. ಇಂತಹ ಅಪೂರ್ವ ಕೃತಿಯನ್ನು ಕನ್ನಡಕ್ಕೆ ನೀಡಿದ ಮಂಜಮ್ಮ ಮತ್ತು ಇದನ್ನು ನಿರೂಪಿಸಿದ ಅರುಣ್ ಜೋಳದಕೂಡ್ಲಿಗಿ ಇಬ್ಬರೂ ಸಹ ಚರಿತ್ರೆಯಲ್ಲಿ ಉಳಿಯುತ್ತಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top