ಯಶಸ್ವಿ ಅಧ್ಯಾಪಕರಾಗಲು ಪಿಎಚ್.ಡಿ. ಅಗತ್ಯವೇ? | Vartha Bharati- ವಾರ್ತಾ ಭಾರತಿ

--

ಯಶಸ್ವಿ ಅಧ್ಯಾಪಕರಾಗಲು ಪಿಎಚ್.ಡಿ. ಅಗತ್ಯವೇ?

ಈ ಹೊತ್ತು ಯುಜಿಸಿ ತರಲಿಚ್ಚಿಸಿರುವ ನಿಯಾಮವಳಿಗಳ ಅನ್ವಯ ವಿ.ವಿ.ಗಳ ಶಿಕ್ಷಕರ ನೇರ ನೇಮಕಾತಿಗೆ ಪಿಎಚ್.ಡಿ. ಪದವಿ ಕಡ್ಡಾಯವೆನ್ನುವುದು ಏನನ್ನು ಸೂಚಿಸುತ್ತದೆ? ಪಿಎಚ್.ಡಿ. ಡಿಗ್ರಿ ಇದ್ದವರು ಮಾತ್ರ ವಿ.ವಿ.ಯ ತರಗತಿಗಳಲ್ಲಿ ಉಪನ್ಯಾಸ ಮಾಡಲು ಸಮರ್ಥರು ಎನ್ನುವುದೆ? ಇದು ವಾಸ್ತವವೇ?

ಎಪ್ಪತ್ತರ ದಶಕದಲ್ಲಿ ನಾನು ಮೈಸೂರು ವಿ.ವಿ.ಯ ಮಹಾರಾಜ ಪದವಿ ಕಾಲೇಜಿನ ವಿದ್ಯಾರ್ಥಿ. ಆ ದಿನಗಳಲ್ಲಿ ಮಹಾರಾಜ ಕಾಲೇಜಿನಲ್ಲಿ ಸೀಟು ಸಿಗುವುದೇ ಕಷ್ಟಕರವಾಗಿತ್ತು. ಅಲ್ಲಿ ಇದ್ದ ಎಲ್ಲ ಇಲಾಖೆಗಳ ಪ್ರಾಧ್ಯಾಪಕರು, ಅಧ್ಯಾಪಕರು ಅವರವರ ಸಬ್ಜೆಕ್ಟ್‌ಗಳಲ್ಲಿ ಪರಿಣಿತರು, ವಿದ್ವಾಂಸರು ತಮ್ಮ ಆಳವಾದ ಅಧ್ಯಯನಶೀಲತೆಯಿಂದ ಹೆಸರುವಾಸಿಯಾಗಿದ್ದವರು.

ಅವರ ತರಗತಿಗಳಲ್ಲಿ ನೀಡುತ್ತಿದ್ದ ಉಪನ್ಯಾಸಗಳು, ವಿಚಾರ ಸಂಕಿರಣಗಳಲ್ಲಿ ಅವರು ಆ ನಿರ್ದಿಷ್ಟ ವಿಷಯವನ್ನು ನೋಡುವ ಬಗೆ, ಗ್ರಹಿಸುವ ಶಕ್ತಿ, ಮನನ ಮಾಡಿಸುವ ಕಲೆ ಇದರಿಂದ ತರಗತಿಗಳಲ್ಲಿ ನಮಗೆ ಸಮಯ ಹೋಗಿದ್ದೇ ತಿಳಿಯುತ್ತಿರಲಿಲ್ಲ.

ಇಂತಹ ಪಾಠವನ್ನು ಇಂತಹ ಅಧ್ಯಾಪಕರಿಂದಲೇ ಕೇಳಬೇಕು ಎಂಬಷ್ಟು ಅವರು ಪ್ರಸಿದ್ದರಾಗಿದ್ದರು. ಅವರು ಅಂದು ಕಲಿಸಿದ ಪಾಠಗಳನ್ನು ನಾವು ಇಂದಿಗೂ ಮರೆಯಲು ಸಾಧ್ಯವಾಗದ ರೀತಿ ಅವರ ಉಪನ್ಯಾಸಗಳು ನಮ್ಮಾಳಗೆ ಅಚ್ಚೊತ್ತಿವೆ ಎಂದರೆ ಆಶ್ಚರ್ಯವಿಲ್ಲ.

ಆಗ ವಿ.ವಿ. ಕಾಲೇಜಿನ ಅಧ್ಯಾಪಕರು ಎಷ್ಟು ಪರಿಣಿತರಾಗಿದ್ದರೆಂದರೆ ಇವರ ಪಾಠಗಳನ್ನು ಕೇಳಲು ವಿಶೇಷವಾಗಿ ಹೊರಗಿನಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಮಹಾರಾಜ ಕಾಲೇಜಿನ ಕಟ್ಟಡದ ಕಿಟಕಿಗಳು ಸಹ ಗಾತ್ರದಲ್ಲಿ ಬಾಗಿಲುಗಳಷ್ಟೇ ದೊಡ್ಡವು ಆಗಿದ್ದ ಕಾರಣದಿಂದ ವಿದ್ಯಾರ್ಥಿಗಳು ಸುಲಭವಾಗಿ ಕಿಟಕಿಯಿಂದಲೇ ಪ್ರವೇಶಿಸಿ ಕುಳಿತು ಉಪನ್ಯಾಸಗಳನ್ನು ಆಲಿಸುತ್ತಿದ್ದರು. ತರಗತಿಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡುತ್ತಿದ್ದವು. ನಮ್ಮ ಕಾಲೇಜಿನ ಎಲ್ಲ ವಿಷಯಗಳ ವಿಭಾಗಗಳು ಸಹ ಇಂತಹ ಪರಿಣಿತ ವಿದ್ವಾಂಸರಿಂದ ತುಂಬಿಹೋಗಿದ್ದವು.

ಅಷ್ಟಲ್ಲದೆ ನಮ್ಮ ಕಾಲೇಜಿನಲ್ಲೇ ವಿದ್ಯಾರ್ಥಿಗಳು ಅವರ ಆಸಕ್ತಿಗೆ ಅನುಗುಣವಾಗಿ ಅವರದಲ್ಲದ ಸಬ್ಜೆಕ್ಟ್‌ಗಳ ತರಗತಿಗಳಿಗೆ ಅಂತಹ ಹೆಸರಾಂತ ಅಧ್ಯಾಪಕರ ಉಪನ್ಯಾಸಗಳನ್ನು ಕೇಳಲೆಂದೇ ಬಿಡುವಿನ ವೇಳೆ ಹೋಗಿ ಕುಳಿತು ಆ ವಿದ್ವಾಂಸರ ಉಪನ್ಯಾಸಗಳನ್ನು ಕೇಳುತ್ತಿದ್ದರು. ಇದು ಆ ಕಾಲದಲ್ಲಿ ಸರ್ವೇ ಸಾಮಾನ್ಯವಾದ ವಿಚಾರವೂ ಆಗಿತ್ತು. ಆ ಕಾಲದಲ್ಲಿ ಮೈಸೂರಿನ ಎಲ್ಲ ಕಾಲೇಜುಗಳು ಒಂದೊಂದು ಪದವಿಗೆ ಒಂದೊಂದರಂತೆ ಹೆಸರುವಾಸಿಯಾಗಿದ್ದವು. ಅದಕ್ಕೆ ಪ್ರಮುಖವಾದ ಕಾರಣವೆಂದರೆ ಆ ಎಲ್ಲಾ ಕಾಲೇಜುಗಳಲ್ಲಿದ್ದ ಹೆಸರಾಂತ ಅಧ್ಯಾಪಕ ವೃಂದ.

ಉದಾಹರಣೆಗೆ ನಾನು ವಿದ್ಯಾರ್ಥಿಯಾಗಿದ್ದ ಕಾಲದಲ್ಲೇ ನಮ್ಮ ಕಾಲೇಜಿನಲ್ಲಿದ್ದ ಪ್ರೊ.ವೆಂಕಟರಾಮಪ್ಪ, ಪ್ರೊ. ನಂಜುಂಡಯ್ಯ, ಅನಂತ ರಂಗಚಾರ್, ಭಿಲ್ಲಯ್ಯ, ಧುರಾನಿ, ರಾಜಪ್ಪ, ಪ್ರೊ. ಈಶ್ವರಚಾರಿ, ರುದ್ರೇಗೌಡ, ಪ್ರೊ.ರಾಮದಾಸ್, ಆಲನಹಳ್ಳಿ ಕೃಷ್ಣ, ಬೆಂಗಳೂರು ವಿವಿಯಲ್ಲಿ ಲಂಕೇಶ್, ಪ್ರೊ.ನಂಜುಂಡಸ್ವಾಮಿ, ಬರಗೂರು ರಾಮಚಂದ್ರಪ್ಪ...ಇಂತಹ ನೂರಾರು ಅಧ್ಯಾಪಕರ ಪಟ್ಟಿಯನ್ನು ನೀಡಬಹುದು. ನಾನು ಹೇಳುತ್ತಿರುವ ಈ ಹೆಸರಾಂತ ಅಧ್ಯಾಪಕರಿಗೂ ಪಿಎಚ್.ಡಿ. ಡಿಗ್ರಿ ಇರಲಿಲ್ಲ. ಪಿಎಚ್.ಡಿ. ಇರಲಿಲ್ಲ ಎನ್ನುವುದನ್ನು ಹೊರತು ಪಡಿಸಿದರೆ ಅವರಿಗೆ ಇದ್ದ ವಿದ್ವತ್ತಿಗೆ ಹತ್ತು ಹಲವು ಪಿಎಚ್.ಡಿ.ಗಳನ್ನು ಮೀರಿದ ಪ್ರಬುದ್ಧತೆ, ಬೋಧನಾ ಸಾಮರ್ಥ್ಯ, ಸೃಜನಶೀಲತೆ ಇದ್ದು ಅವರಿಗಿದ್ದ ಸಬ್ಜೆಕ್ಟ್ ಮೇಲಿನ ಕಮಾಂಡ್‌ನಿಂದ ಅವರು ಹೆಸರುವಾಸಿಯಾಗಿದ್ದರು.

ಈಗಲೂ ಆನೇಕ ಕಾಲೇಜುಗಳಲ್ಲಿ ಪಿಎಚ್.ಡಿ. ಇಲ್ಲದ ಇಂತಹ ಬಹುಸಂಖ್ಯಾತ ಪ್ರತಿಭಾವಂತ ಅಧ್ಯಾಪಕರು ಇದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಯಾವ ವಿದ್ಯಾರ್ಥಿಗಳಿಗೂ ಅವರ ಅಧ್ಯಾಪಕರು ಪಿಎಚ್.ಡಿ. ಮಾಡಿದ್ದಾರೆ ಅಥವಾ ಮಾಡಿಲ್ಲ ಎನ್ನುವುದು ಮುಖ್ಯವಾಗುತ್ತಿರಲಿಲ್ಲ. ಈಗಲೂ ಮುಖ್ಯವಾಗು ವುದಿಲ್ಲ. ಅದು ವಿದ್ಯಾರ್ಥಿಗಳು ಬೋಧಕರಿಂದ ಬಯಸುವ ಅರ್ಹತೆಯಲ್ಲ, ಬದಲಿಗೆ ಬೋಧಕರಾಗಿ ಅವರ ಸಬ್ಜೆಕ್ಟ್‌ನಲ್ಲಿ ಎಷ್ಟು ಪ್ರಬುದ್ಧ್ದರು? ಆ ವಿಷಯಗಳ ಬಗೆಗಿನ ಅವರ ಆಳವಾದ ಅಧ್ಯಯನ, ಮನದಟ್ಟು ಮಾಡಿಸುವ ಕಲೆೆ ಇವು ಮುಖ್ಯವಾಗುತ್ತವೆ.

ಎಷ್ಟೋ ಅಧ್ಯಾಪಕರು ಸಂಶೋಧನೆಯಲ್ಲಿ ಅವರಿಗೆ ನಿಜವಾಗಿ ಆಸಕ್ತಿ, ಅಭಿರುಚಿ, ಇದ್ದರಷ್ಟೇ ಬೋಧಕ ವೃತ್ತಿಯ ಜೊತೆ ಸಂಶೋಧನೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಇಲ್ಲದಿದ್ದರೆ ಉತ್ತಮ ಬೋಧಕರಾಗುವುದಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಅದಕ್ಕಾಗಿ ತಮ್ಮ ಹೆಚ್ಚಿನ ಸಮಯವನ್ನು ಮುಡುಪಾಗಿಡುತ್ತಿದ್ದರು. ಹೀಗಾಗಿ ಪಿಎಚ್.ಡಿ.ಗೂ ಯಶಸ್ವಿ ಬೋಧನೆಗೂ ನೇರ ಸಂಬಂಧ ಯುಜಿಸಿಯ ನಿಯಾಮಾವಳಿಯಲ್ಲಿ ಏಕೆ ಅಡಕಮಾಡಲಾಗುತ್ತಿದೆಯೋ ತಿಳಿಯುತ್ತಿಲ್ಲ.

ಸಂಶೋಧನಾ ಕೇಂದ್ರಗಳು ಅಂದು-ಇಂದು

ನಾನು ಎಂ.ಎ. ಡಿಗ್ರಿ ಸಲುವಾಗಿ ಮಾನಸ ಗಂಗೋತ್ರಿಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗಕ್ಕೆ ಹೋದಾಗ ಅಲ್ಲಿನ ಪ್ರತಿ ಇಲಾಖೆಗಳ ಫ್ಯಾಕಲ್ಟಿಯಲ್ಲಿ ಒಂದಷ್ಟು ಪಿಎಚ್.ಡಿ. ಪಡೆದ ಅಧ್ಯಾಪಕರಿದ್ದರು. ಅಲ್ಲಿ ಪಿಎಚ್.ಡಿ. ರೀಡರ್ ಮತ್ತು ಪ್ರೊಫೆಸರ್‌ಗಳಾಗಲು ಉಪಯುಕ್ತವಾದ ಪದವಿಯಾದರೂ ಅದೇ ಮುಖ್ಯವಾದ ಅರ್ಹತೆಯಾಗಿರಲಿಲ್ಲ. ಪಿಎಚ್.ಡಿ.ಯ ಜೊತೆಗೆ ಅಥವಾ ಬದಲಾಗಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟನೆಗೊಳಿಸಿರು ವುದು ಮುಖ್ಯವಾದ ಮಾನದಂಡವಾಗಿತ್ತು. ಪಿ.ಜಿ.ಸೆಂಟರ್‌ಗಳು ಕಡಿಮೆಯಿದ್ದವು, ಅವಕಾಶಗಳು ಕಡಿಮೆ ಇದ್ದವು. ಇಷ್ಟೊಂದು ಸಮಯವನ್ನು ವ್ಯಯಿಸಿ ಈ ಡಿಗ್ರಿ ಪಡೆದುಕೊಂಡ ಸಂಶೋಧಕನಿಗೆ ಅಧ್ಯಾಪಕ ಹುದ್ದೆ ಸಿಗಬಹುದು ಎಂಬ ಖಾತ್ರಿಯೂ ಇರುತ್ತಿರಲಿಲ್ಲ. ಆದ್ದರಿಂದ ತಮ್ಮ ಬೋಧಕ ವೃತ್ತಿಯ ಜೊತೆ ಸಂಶೋಧನೆಯನ್ನು ಮುಂದುವರಿಸುತ್ತಿದ್ದರು. ಆಗ ಪಿಎಚ್.ಡಿ. ಪ್ರಕ್ರಿಯೆ ಕಠಿಣವಾಗಿತ್ತು. ಗೈಡ್ ಮಾಡುವವರ ಸಂಖ್ಯೆ ಕಡಿಮೆ ಇತ್ತು. ಸಿದ್ಧಪಡಿಸಿದ ಥೀಸಿಸನ್ನು ಮೂರು ಎಕ್ಸಾಮಿನರ್ಸ್‌ಗಳ ಪೈಕಿ ಹೊರದೇಶದ ವಿ.ವಿ.ಯ ಒಬ್ಬರು ಕಡ್ಡಾಯವಾಗಿ ಮೌಲ್ಯಮಾಪನ ಮಾಡಲೇಬೇಕಿತ್ತು, ಹೆಚ್ಚಿನ ಪ್ರಾಧ್ಯಾಪಕರು ಹೊರ ದೇಶಗಳಿಗೆ ಹೋಗಿ ಅಲ್ಲಿನ ವಿ.ವಿ.ಗಳಿಂದ ಪಿಎಚ್.ಡಿ. ಪಡೆದಿರುತ್ತಿದ್ದರು.

ಇಂತಹ ಗುಣಮಟ್ಟವನ್ನು ಉಳಿಸಿಕೊಂಡಿದ್ದ ಸಮಯದಲ್ಲೂ ಪಿ.ಜಿ.ಸೆಂಟರ್‌ಗಳಲ್ಲಿ ಪಿಎಚ್.ಡಿ. ಡಿಗ್ರಿ ಕೊಡಿಸುವಲ್ಲಿ ಎಚ್‌ಒಡಿಗಳು ತಾರತಮ್ಯ ಮಾಡಿ ತಮಗೆ ಬೇಕಾದವರಿಗೆ ಮಾತ್ರ ಪಿಎಚ್.ಡಿ. ಸಿಗುವಂತೆ ಮಾಡುತ್ತಾರೆ ಎಂಬ ಆರೋಪ ಇದ್ದುದರಿಂದ ವಿ.ವಿ.ಗಳು ಪ್ರತಿ ಪಿಎಚ್.ಡಿ. ಥೀಸಿಸನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. ಆದರೆ ಈಗ ಪಿಎಚ್.ಡಿ.ಗೆ ಮೊದಲಿನಷ್ಟು ಕಠಿಣವಾದ ನಿಬಂಧನೆಗಳು ಇಲ್ಲ. ವಿ.ವಿ.ಗಳು ತಮಗೆ ಅನುಕೂಲಕ್ಕೆ ತಕ್ಕಂತೆ ಸಾಕಷ್ಟು ನಿಯಮಗಳನ್ನು ಬದಲಾವಣೆ ಮಾಡಿಕೊಂಡಿರುವುದರಿಂದ ಇತ್ತೀಚೆಗೆ ಪಿಎಚ್.ಡಿ.ಗಳ ಗುಣಮಟ್ಟದ ಕುರಿತಂತೆ ಸಂಶೋಧನಾ ಕೇಂದ್ರಗಳಲ್ಲೇ ಅಪಸ್ವರಗಳು ಕೇಳಿ ಬರುತ್ತಿವೆ. ಇನ್ನು ಪದವಿ ಮಟ್ಟಗಳಿಗೆ ಪಿಎಚ್.ಡಿ. ಎಂದರೆ ಗುಣಮಟ್ಟವನ್ನು ಕುರಿತು ಮಾತಾನಾಡದಿರುವುದೇ ಲೇಸು. ಸ್ನಾತಕೋತ್ತರ ವಿಭಾಗದಲ್ಲಿಯೂ ತರಗತಿಗಳಲ್ಲಿ ಬೋಧಿಸುವ ವಿಷಯಗಳಿಗೂ ಪಿಎಚ್.ಡಿ. ಪಡೆದ ಅಧ್ಯಾಪಕರ ಬೊಧನೆಗೂ ಯಾವ ಸಂಬಂಧವೂ ಇರುವುದಿಲ್ಲ. ಈ ಡಿಗ್ರಿಯಿಂದ ಬೋಧನೆಯಲ್ಲಿ ಮೌಲ್ಯವರ್ಧನೆಯೂ ಸೃಷ್ಟಿಯಾಗುವುದಿಲ್ಲ. ಸಂಶೋಧನೆ ಎಂದರೆ ಸಂಶೋಧಕ ಸಂಗ್ರಹಿಸುವ ಆಕರಗಳ ಮತ್ತು ಸಂಪನ್ಮೂಲಗಳ ಕ್ರಮಬದ್ಧ ಅಧ್ಯಯನದ ಮೂಲಕ ವಾಸ್ತವಿಕವಾದ ಸತ್ಯವನ್ನು ವಿಶ್ವಾಸಾರ್ಹವಾದ, ಮೌಲಿಕವಾದ ಸಮರ್ಥನೆಯ ಮೂಲಕ ಸಾದರಪಡಿಸುವುದು ಎಂದು ಅರ್ಥ. ಇದನ್ನು ಸಾಧಿಸಲು ಸಂಶೋಧಕನು ತನ್ನ ಜೀವನದ ಸಾಕಷ್ಟು ಸಮಯವನ್ನು ಅದಕ್ಕಾಗಿ ಮುಡುಪಾಗಿಡಬೇಕಾಗುತ್ತದೆ. ಅದಕ್ಕೊಂದು ವೈಯಕ್ತಿಕ ತುಡಿತ, ಅಧ್ಯಯನಶೀಲತೆಯ ಅಗತ್ಯ ಇರುತ್ತದೆ.

ಅಧ್ಯಾಪಕನು ಬೋಧನೆಯ ಜೊತೆ ತನ್ನ ಆಸಕ್ತಿ, ಕೂತೂಹಲದ ದೃಷ್ಟಿಯಿಂದ ಸೂಕ್ತ, ಅಗತ್ಯ, ಪ್ರಚಲಿತ ವಿಷಯವನ್ನು ಕುರಿತು ಪಿಎಚ್.ಡಿ. ಮಾಡಿದರೆ, ಬೋಧನೆಗೂ ಸಂಶೋಧನೆಗೂ ನ್ಯಾಯ ಒದಗಿಸಿದಂತಾಗುತ್ತದೆ. ಪಿಎಚ್.ಡಿ. ಗಳಿಸಿದ ಮೇಲೆಯೇ ಶಿಕ್ಷಕರಾಗಲಿ ಎನ್ನುವುದು ಸಮಂಜಸವಾಗದು. ವಿದ್ಯಾರ್ಥಿ ಗಳಿಗೆ ಬೇಕಾಗಿರುವುದು ಪರಿಣಿತ ಶಿಕ್ಷಕನೇ ಹೊರತು ಸಂಶೋಧಕನಲ್ಲ.

ಈ ನಿಯಮದಿಂದ ಉಂಟಾಗಬಹುದಾದ ಪರಿಣಾಮಗಳು

1) ಪಿಎಚ್.ಡಿ.ಯ ಕಾರಣದಿಂದ ಅನೇಕ ಕಾರಣಗಳಿಂದ ಪಿಎಚ್.ಡಿ. ಮಾಡಲಾಗದ ಮತ್ತು ನೂರಕ್ಕೆ ನೂರರಷ್ಟು ಬೋಧಕರಾಗಿಯೇ ತಮ್ಮನ್ನು ಸಮರ್ಪಿಸಿಕೊಳ್ಳಲು ಸಿದ್ಧರಿರುವ ಪ್ರಬುದ್ಧರು, ಪರಿಣಿತರು ಮತ್ತು ಪ್ರಾಜ್ಞರ ಮೌಲಿಕವಾದ ಉಪನ್ಯಾಸದಿಂದ ವಿದ್ಯಾರ್ಥಿಗಳು ವಂಚಿತರಾಗುವುದಿಲ್ಲವೇ?

2) ಪಿಎಚ್.ಡಿ.ಯನ್ನು ಕೇವಲ ಒಂದು ಹುದ್ದೆಯನ್ನು ಪಡೆದುಕೊಳ್ಳುವ ಏಕ ಮಾತ್ರ ಉದ್ದೇಶದಿಂದ ಗುಣಾತ್ಮಕ ಫಲಿತಾಂಶವನ್ನು ನಿರ್ಲಕ್ಷಿಸಿ ಸೀಮಿತವಾದ ಸಮಯದಲ್ಲೇ ಮುಕ್ತಾಯಗೊಳಿಸುವುದರಿಂದ ಅದರ ಗುಣಮಟ್ಟವು ಕುಸಿದುಹೊಗಿ ಯಾವುದೋ ಸ್ಪರ್ಧಾತ್ಮಕ ಪರೀಕ್ಷೆಯ ರಿಕ್ರೂಟ್‌ಮೆಂಟ್ ರೀತಿ ಆಗುವುದಿಲ್ಲವೇ?

3) ಹುದ್ದೆಯನ್ನು ಪಡೆಯಲೇಬೇಕೆಂಬ ಉದ್ದೇಶದಿಂದಲೇ ನಡೆಸಲ್ಪಡುವ ಈ ಸ್ಫರ್ಧೆಯಲ್ಲಿ ಜಾತಿ, ಮತ, ಭ್ರಷ್ಟತೆ, ರಾಜಕೀಯ ಪ್ರಭಾವ, ಸ್ವಜನಪಕ್ಷಪಾತ,ಲೈಂಗಿಕ ಕಿರುಕುಳ ಇವೇ ಮುಂತಾದವು ಮುನ್ನಲೆಗೆ ಬಂದು ಪಿಎಚ್.ಡಿ. ಮಾಡುವವರಿಗಿಂತ ಕೊಡುವವರು ಪ್ರಮುಖ ಸ್ಥಾನಕ್ಕೆ ಬಂದು ತಮಗೆ ಬೇಕಾದ ವಿದ್ಯಾರ್ಥಿಗೆ ಬೇಗ ಪಿಎಚ್.ಡಿ. ದೊರಕುವಂತೆ ಮಾಡಬಹುದು.

4) ಪಿಎಚ್.ಡಿ. ಒಂದು ರಿಕ್ರೂಟ್‌ಮೆಂಟ್ ಆಯೋಗದ ರೀತಿ ಒಂದು ಶಾಶ್ವತವಾದ ವರಮಾನದ ಮೂಲವಾಗಿ ಮಾರ್ಪಟ್ಟರೆ ವಿ.ವಿ.ಗಳ ಸಂಶೋಧನೆಗಳ ಗುಣಮಟ್ಟ ಇನ್ನಷ್ಟು ಕುಸಿದು ಯುಜಿಸಿಯ ಗುರಿಯೇ ಮಣ್ಣು ಪಾಲಾಗಬಹುದಲ್ಲವೇ?

ಸಂಶೋಧನೆಗಳ ಮಹತ್ವ
 ಭಾರತದಂತಹ ವೈವಿಧ್ಯತೆಯ ರಾಷ್ಟ್ರದಲ್ಲಿ ಸಂಶೊಧನಾ ಕ್ಷೇತ್ರವು ಸದಾ ಕ್ರಿಯಾಶಾಲಿಯಾಗಿರಬೇಕಾಗುತ್ತದೆ. ಯಾವ ರಾಷ್ಟ್ರಗಳಲ್ಲಿ ಸಂಶೋಧನೆಗೆ ನಿಜವಾದ ಮಹತ್ವವಿರುತ್ತದೆಯೋ ಅಲ್ಲಿ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ನಾವು ಇಂದು ಆನೇಕ ಚಾರಿತ್ರಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಗೊಂದಲಗಳಲ್ಲಿದ್ದೇವೆ. ಅವುಗಳಿಗೆ ನಿಷ್ಪಕ್ಷವಾದ ಸಂಶೋಧನೆಗಳು ಮಾತ್ರ ಉತ್ತರ ಹೇಳಬಲ್ಲವು. ಪಿಎಚ್. ಡಿ. ಮಾಡಲು ಮೌಲ್ಯಯುತವಾದ, ಜರೂರಿರುವ ಸಾವಿರಾರು ವಿಷಯಗಳಿವೆ. ವಿ.ವಿ.ಗಳು ಇತ್ತ ಗಮನಹರಿಸಿ ನಿರಂತರ ಸಂಶೊಧನೆಗಳಿಂದ ಸತ್ಯದ ಹುಡುಕಾಟ ನಡೆಸಿ ಅವುಗಳ ಮೇಲೆ ಬೆಳಕು ಚೆಲ್ಲಬೇಕಾದ ಅವಶ್ಯಕತೆಯಿದೆ. ಆ ಸಂಶೋಧನಾ ಫಲಿತಾಂಶಗಳು ಪಾರದರ್ಶಕವಾಗಿರಬೇಕಾಗುತ್ತದೆ ಮತ್ತು ಅವುಗಳ ಫಲಿತಾಂಶವನ್ನು ಸಾರ್ವಜನಿಕ ಕ್ಷೇತ್ರಗಳಲ್ಲಿ ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ.

ಆದುದರಿಂದ ಯುಜಿಸಿ ಏಕ ಕಾಲಕ್ಕೆ ಉತ್ತಮ ಗುಣಮಟ್ಟದ, ಅರ್ಥಪೂರ್ಣ ಸಂಶೋಧನೆಗಳನ್ನು ನಿರಂತರವಾಗಿ ನಡೆಸುವ ಬಗ್ಗೆ ಮತ್ತು ಬೋಧಕ ಕ್ಷೇತ್ರ ಗಳಲ್ಲಿಯೂ ವಿದ್ವಾಂಸರು ಮತ್ತು ಪರಿಣಿತರನ್ನು ವಿ.ವಿ.ಗಳಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುಜಿಸಿ ತನ್ನ ನಿಯಮಾವಳಿಯನ್ನು ರೂಪಿಸಿದಲ್ಲಿ ಕಳೆದು ಹೋಗುತ್ತಿರುವ ಶೈಕ್ಷಣಿಕ ಗುಣಮಟ್ಟವನ್ನು ಮರಳಿ ಪಡೆಯಬಹುದೇನೊ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top