ಸಾಂಸ್ಕೃತಿಕ ಮಹತ್ವದ ಲಂಕೇಶರ ‘ಶೂದ್ರ’ ಪ್ರಜ್ಞೆ | Vartha Bharati- ವಾರ್ತಾ ಭಾರತಿ

--

ಸಾಂಸ್ಕೃತಿಕ ಮಹತ್ವದ ಲಂಕೇಶರ ‘ಶೂದ್ರ’ ಪ್ರಜ್ಞೆ

ಧ್ಯಾನ, ಮೌನ, ಪ್ರಕೃತಿ, ತೀರ್ಥರಾಮೇಶ್ವರ, ಉತ್ಕಟವಾದ ಜೀವನ ಪ್ರೀತಿ, ಜ್ವಲಂತವಾದ ರಾಜಕೀಯ ಪ್ರಜ್ಞೆ, ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಕಡುಕೋಪ, ಸಾಹಿತ್ಯ ಶಕ್ತಿಯಲ್ಲಿನ ದೃಢವಾದ ನಂಬಿಕೆ ಹೀಗೆ ಹಲವಾರು ರೂಪಕಗಳಲ್ಲಿ ಸೃಜನಶೀಲ ಪ್ರತಿಭೆಯೊಂದರ ಏಳುಬೀಳುಗಳನ್ನು ಆಪ್ತ ಧಾಟಿಯಲ್ಲಿ ಓದುಗರ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಶೂದ್ರ ಶ್ರೀನಿವಾಸರ ಈ ಕೃತಿ ವಿದಗ್ಧ ಕಾವ್ಯ ಮಾದರಿಯ ಜೀವನಚರಿತ್ರೆಯಷ್ಟೇ ಒಂದು ಕಾಲಘಟ್ಟದ ಸಾಂಸ್ಕೃತಿಕ ದಾಖಲೆಯಾಗಿಯೂ ಮುಖ್ಯವಾಗುತ್ತದೆ.


ವಿದ್ಯಾರ್ಥಿ ದಿನಗಳಿಂದಲೂ, ಅಂದರೆ ಸರಿಸುಮಾರು ಐದೂವರೆ ದಶಕಗಳಿಂದಲೂ ಬರೆಯುತ್ತಿರುವ ಶೂದ್ರ ಶ್ರೀನಿವಾಸ್ ಅವರದು ಮೂಲತ: ಕವಿ ಹೃದಯ. 1973ರಲ್ಲಿ ಶುರುಮಾಡಿದ ‘ಶೂದ್ರ’ ಪತ್ರಿಕೆಯಿಂದ ಹಾಗೂ ತಮ್ಮ ಸೃಜನಶೀಲ ಬರಹಗಳಿಂದ ಕನ್ನಡ ಸಾಹಿತ್ಯವಲಯವನ್ನು ಬೆಚ್ಚಗಿರಿಸಿರುವ ಶ್ರೀನಿವಾಸ್ ತೀವ್ರ ಸಂವೇದನಾಶೀಲರು. ಈ ಮಾತಿಗೆ ಅವರ ‘ಕನಸಿಗೊಂದು ಕಣ್ಣು’ ಅಂಕಣಬರಹಗಳಿಗಿಂತ ಮಿಗಿಲಾದ ಮತ್ತೊಂದು ಉದಾಹರಣೆ ಬೇಕಿಲ್ಲ. ಈ ಬರಹಗಳಲ್ಲಿ ಸೃಜನಶೀಲ ಬರಹಗಾರನಲ್ಲಿ ಇರಬೇಕಾದ ಸಮಾಜವನ್ನು/ವ್ಯಕ್ತಿಗಳನ್ನು ಶೋಧಿಸುವ ಕುತೂಹಲದ ಕಣ್ಣುಗಳು, ಆದರ್ಶ ಸಮಾಜವೊಂದನ್ನು ಕಟ್ಟುವ ಕನಸುಗಳು, ಮಾನವೀಯತೆಯಿಂದ ಮಿಡಿವ ಹೃದಯ, ಇತಿಹಾಸ-ವರ್ತಮಾನಗಳ ಹಿನ್ನೆಲೆಯಲ್ಲಿ ಸತ್ಯವನ್ನು ಅನ್ವೇಷಿಸುವ ಪ್ರಜ್ಞಾವಂತಿಕೆ ಇವೆಲ್ಲ ಗುಣಗಳೂ ಢಾಳವಾಗಿ ಕಾಣುತ್ತವೆ.ಇಲ್ಲಿಯವರೆಗೆ ‘ಕನಸಿಗೊಂದು ಕಣ್ಣು’ ಸಮಗ್ರ ಸಂಪುಟವೂ ಸೇರಿದಂತೆ ಸುಮಾರು ಮೂವತ್ತು ಕೃತಿಗಳನ್ನು ರಚಿಸಿರುವ ಶೂದ್ರ ಶ್ರೀನಿವಾಸ್ ವ್ಯಕ್ತಿ ಚಿತ್ರಣ ಮತ್ತು ಜೀವನಚಿತ್ರಣದಲ್ಲಿ ಸಿದ್ಧಹಸ್ತರು. ರಾಮಕೃಷ್ಣ ಹೆಗಡೆ, ಅನಂತಮೂರ್ತಿ, ಜಿ. ಎಸ್. ಶಿವರುದ್ರಪ್ಪ, ಎಸ್. ವೆಂಕಟರಾಮ್, ವಿ. ವೆಂಕಟರಮಣ, ಕೆ.ಮರುಳಸಿದ್ದಪ್ಪಹೀಗೆ ಬೆಳೆಯುತ್ತದೆ ಶೂದ್ರ ಅವರ ಜೀವನಚಿತ್ರಣ ಸಾಧನೆ. ಈಗ ಇದೆಲ್ಲದಕ್ಕೂ ಶೃಂಗಪ್ರಾಯವಾಗಿ ಬಂದಿರುವ ಕೃತಿ: ‘ಲಂಕೇಶ್-ಮೋಹಕ ರೂಪಕಗಳ ನಡುವೆ’. ಅಸಾಧಾರಣ ಕವಿ, ಲೇಖಕರಾಗಿದ್ದ ಲಂಕೇಶರ ವ್ಯಕ್ತಿತ್ವವನ್ನು ಅಷ್ಟೇ ಅಸಾಧಾರಣ ರೀತಿಯಲ್ಲಿ ಅನಾವರಣಗೊಳಿಸುವ ಒಂದು ಮೋಹಕ ಕೃತಿ.

ದಶಕಗಳ ಕಾಲ ಲಂಕೇಶರ ಒಡನಾಟದಲ್ಲಿದ್ದು ಕೊಂಡು, ಒಂದಷ್ಟು ಕಾಲ ಹತ್ತಿರದಲ್ಲಿ-ದೂರದಲ್ಲಿ ಇದ್ದು, ಅವರನ್ನು ‘ಹತ್ತಿರ-ದೂರ’ಗಳಿಂದ ಧ್ಯಾನಸ್ಥ/ಚಿಕಿತ್ಸಕ ಭಾವಗಳಿಂದ ಕಂಡಿರುವ ಶ್ರೀನಿವಾಸ್ ಅವರ ಈ ಕೃತಿ ಪ್ರಚಂಡ ಪ್ರವಾಹದ ಸಮಸಮ ಈಸಿದಂತಿದೆ. ಕವಿಯಾಗಿ, ಪತ್ರಕರ್ತರಾಗಿ ಲಂಕೇಶರದು ಭೋರ್ಗರೆವ ಪ್ರವಾಹಕ್ಕೆ ರೂಪಕವಾಗಬಲ್ಲಂತಹ ದೈತ್ಯಪ್ರತಿಭೆ. ಈ ಪ್ರವಾಹವನ್ನು ಹಿಡಿದಿರಿಸುವ, ಬೊಗಸೆ ನೋಟದಲ್ಲಿ ಬಿಂಬಿಸುವ ರೂಪಕಶಕ್ತಿಯ ಬರವಣಿಗೆ ಶೂದ್ರ ಶ್ರೀನಿವಾಸರದು. ಒಮ್ಮೆ ಶೂದ್ರ ಶ್ರೀನಿವಾಸ್ ಲಂಕೇಶರ ಸಮಾಧಿ ಸ್ಥಳಕ್ಕೆ ಭೇಟಿಕೊಡುತ್ತಾರೆ.ಅದರ ಈಗಿನ ಸ್ಥಿತಿ ಕಂಡು ಅವರ ಮನಸ್ಸು ಮಮ್ಮಲ ಮರುಗುತ್ತದೆ. ಮೇಷ್ಟ್ರಿಗೆ ಯೋಗ್ಯವಾದ ಸಮಾಧಿಯೊಂದನ್ನು ನಿರ್ಮಿಸಬೇಕೆಂದು ಮನಸ್ಸು ಆ ಕ್ಷಣ ತುಡಿಯುತ್ತದೆ. ಸಾವಧಾನವಾಗಿ ಯೋಚಿಸಿದಾಗ,

‘‘ಈಗ ಮನಸ್ಸಿನಲ್ಲಿ ಅನಾವರಣಗೊಳಿಸಿಕೊಂಡಿರುವ ಆ ಅಪೂರ್ವ ಚಿತ್ರದ ಸುತ್ತ ನೆನಪಿನ ನೂರಾರು ಘಟನೆಗಳ ಸ್ಮರಣೀಯ ಪುಷ್ಪಗಳಲ್ಲಿ ಹಾರ ಕಟ್ಟಿ ಆರಾಧಿಸುವ ರೂಪಕಶಕ್ತಿಯನ್ನು ಕಾಯ್ದುಕೊಂಡರೆ ಸಾಕು’’ (ಪುಟ 149-150)
ಎಂದು ಅಂತರಂಗ ಪಿಸುಗುಟ್ಟುತ್ತದೆ. ಅಂತರಂಗದ ಈ ಪಿಸುಮಾತು, ಮೋಹಕ ರೂಪಕಗಳಲ್ಲಿ ಲಂಕೇಶರನ್ನು ಇಲ್ಲಿ ಸ್ಮರಣೀಯವಾಗಿ ಕಡೆದಿರಿಸಿದೆ.

ಧ್ಯಾನ, ಮೌನ, ಪ್ರಕೃತಿ, ತೀರ್ಥರಾಮೇಶ್ವರ, ಉತ್ಕಟವಾದ ಜೀವನ ಪ್ರೀತಿ, ಜ್ವಲಂತವಾದ ರಾಜಕೀಯ ಪ್ರಜ್ಞೆ, ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಕಡುಕೋಪ, ಸಾಹಿತ್ಯ ಶಕ್ತಿಯಲ್ಲಿನ ದೃಢವಾದ ನಂಬಿಕೆ ಹೀಗೆ ಹಲವಾರು ರೂಪಕಗಳಲ್ಲಿ ಸೃಜನಶೀಲ ಪ್ರತಿಭೆಯೊಂದರ ಏಳುಬೀಳುಗಳನ್ನು ಆಪ್ತ ಧಾಟಿಯಲ್ಲಿ ಓದುಗರ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಶೂದ್ರ ಶ್ರೀನಿವಾಸರ ಈ ಕೃತಿ ವಿದಗ್ಧ ಕಾವ್ಯ ಮಾದರಿಯ ಜೀವನಚರಿತ್ರೆಯಷ್ಟೇ ಒಂದು ಕಾಲಘಟ್ಟದ ಸಾಂಸ್ಕೃತಿಕ ದಾಖಲೆಯಾಗಿಯೂ ಮುಖ್ಯವಾಗುತ್ತದೆ.

ನವ್ಯಪಂಥದ ಪ್ರಸಿದ್ಧ ಕತೆಗಾರ, ಪತ್ರಕರ್ತ ಜಿ. ಎಸ್. ಸದಾಶಿವ ಲಂಕೇಶರ ಓರಗೆಯ ಬರಹಗಾರರಲ್ಲದೆ ಆಪ್ತ ಮಿತ್ರರೂ ಆಗಿದ್ದರು.(ಸದಾಶಿವ ಅವರ ಮೊದಲ ಕಥಾ ಸಂಕಲನವನ್ನು ಲಂಕೇಶರೇ ಪ್ರಕಟಿಸಿದ್ದರು). ಅವರಿಬ್ಬರ ನಡುವಣ ಆಪ್ತತೆಯನ್ನು ಶೂದ್ರ ಇಲ್ಲಿ ದಾಖಲಿಸಿದ್ದಾರೆ. ಒಮ್ಮೆ ಸದಾಶಿವ ಅವರು ನನ್ನ ಜೊತೆ ಮಾತನಾಡುತ್ತಿದ್ದಾಗ, ‘‘ಲಂಕೇಶರ ಸ್ನೇಹಿತರು ಎಂದರೆ ವಿಧಾನ ಮಂಡಲದ ಮೇಲ್ಮನೆಯ ಸದಸ್ಯರಿದ್ದಂತೆ. ಸದಸ್ಯತ್ವದ ಅವಧಿ ಮುಗಿದು ಹೊಸಬರು ಬರುತ್ತಾರಲ್ಲವೆ?, ಮೇಲ್ಮನೆ ಸದಸ್ಯರು ಬದಲಾದಂತೆ ಅವರ ಸ್ನೇಹಿತರೂ’’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂದರೆ ಲಂಕೇಶರಿಗೆ, ಯಾರು ಯಾವಾಗ ಮಿತ್ರರು ಇನ್ಯಾವಾಗ ಇನ್ನೇನೋ ಆಗಿರುತ್ತಿದ್ದರೋ ಹೇಳಲು ಬರುತ್ತಿರಲಿಲ್ಲ. ಕೆಲವರು ಹೋದಂತೆ ಹೊಸಬರು ಲಂಕೇಶರಿಗೆ ಸಮೀಪವಾಗುತ್ತಿದ್ದರು.

ಲಂಕೇಶರಿಗೆ ಖಾಯಮ್ಮಾಗಿ ಮಿತ್ರರೂ ಇರುತ್ತಿರಲಿಲ್ಲ ಶತ್ರುಗಳೂ ಇರುತ್ತಿರಲಿಲ್ಲ ಎಂಬುದು ಸದಾಶಿವನ ಮಾತಿನ ತಾತ್ಪರ್ಯ. ಈ ಮಿತ್ರತ್ವ ಮತ್ತು ಶತ್ರುತ್ವಗಳೂ ಅವರ ಮೋಹಕ ರೂಪಕಗಳಲ್ಲಿ ಬಲು ಮುಖ್ಯವಾದುದು. ಈ ಪುಸ್ತಕದಲ್ಲಿ ಅಂತಹ ‘ಮೋಹಕ’ ರೂಪಕಗಳು ಹಲವಾರು ಇವೆ. ಅವರ ಇಸ್ಪೀಟು ಸಂಗಾತಿಗಳಾದ ಡಾ. ಶ್ರೀನಿವಾಸ ಗೌಡ, ರಾಮಚಂದ್ರ ಶರ್ಮ, ಮೈಸೂರು ಮಠ ಅವರ ಖಾಯಂ ಮಿತ್ರರಿದ್ದಂತೆ ತೋರುತ್ತದೆ. ಸಾಹಿತಿಗಳ ಬಗ್ಗೆಯಂತೂ ಈ ಮಾತು ಸತ್ಯಸ್ಯಸತ್ಯ. ಗೋಪಾಲಕೃಷ್ಣ ಅಡಿಗರು, ಅನಂತ ಮೂರ್ತಿಯವರಂತೂ ಲಂಕೇಶರಿಗೆ ಗೌರವಾನ್ವಿತ ಮಿಶತೃ(ಮಿತ್ರಶತ್ರು)ವೇ ಆಗಿದ್ದರು. ಅಡಿಗರ ಕಾವ್ಯದ ಬಗ್ಗೆ, ಅನಂತಮೂರ್ತಿಯವರ ಕಥೆಗಳ ಬಗ್ಗೆ ಲಂಕೇಶರಿಗೆ ಒಲವು, ಗೌರವಗಳಿದ್ದವು. ಆದರೆ ಅನ್ಯಕಾರಣಗಳಿಂದಾಗಿ ಅವರ ಬಗ್ಗೆ ಅಸಹನೆಯೂ ಇತ್ತು.

‘‘ನಮ್ಮ ಆತಂಕ ಮತ್ತು ಅವಮಾನದ ಸಮಯದಲ್ಲಿಯೇ ನಾವು ತಾಯ್ತನದ ಮನಸ್ಸನ್ನು ತಂದುಕೊಳ್ಳಬೇಕಾಗಿರುವುದು’’(ಪುಟ 116) ಹಾಗೂ ‘‘ಪಡೆಯುವುದರ ಬಗ್ಗೆ ತಾದಾತ್ಮತೆ ಇದ್ದರೆ ಅದರ ಅನುಭವ ಎಂದೆಂದೂ ಅಜೀರ್ಣ ಅನ್ನಿಸುವುದಿಲ್ಲ. ಸದಾ ನೆನಪು ಪುಳಕಗೊಳಿಸುತ್ತಿರುತ್ತದೆ’’ (ಪುಟ 151)

ಇವು ಲಂಕೇಶರು ಸಾಂದರ್ಭಿಕವಾಗಿ ಶೂದ್ರ ಶ್ರೀನಿವಾಸರಿಗೆ ತಿಳಿಸುವ ಅವರ ವ್ಯಕ್ತಿತ್ವದ ರೂಪಕಗಳು. ಅಡಿಗರ ಕಾವ್ಯವನ್ನು ಪ್ರೀತಿಸಿಯೂ(ಚಿಂತಾಮಣಿಯಲ್ಲಿ ಕಂಡ ಮುಖ ಲಂಕೇಶರಿಗೆ ಪ್ರಿಯವಾಗಿತ್ತು. ‘‘ಈ ವಯಸ್ಸಿನಲ್ಲಿ ಅಂತಹ ಅಮೋಘ ಕವಿತೆಯನ್ನು ಬರೆದಿದ್ದಾರೆ’’ ಎಂದು ಪುಳಕಗೊಂಡಿದ್ದರು), ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರ ಮಾಡಿಯೂ ಮಾನಸಿಕವಾಗಿ ಅವರೊಡನೆ ಒಂದು ದೂರ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ದಿನ ಹಗೆಗಳು ಎನ್ನುವಂತೆ ದೂರವಾಗಿ ಬಿಡುತ್ತಾರೆ. ಆದರೆ ಶೂದ್ರ ಒಂದು ದಿನ ಇಬ್ಬರು ಮಹಾನ್ ವ್ಯಕ್ತಿಗಳನ್ನೂ ಭೇಟಿಮಾಡಿಸುತ್ತಾರೆ. ಅಡಿಗರಲ್ಲಿ ‘‘ನಮ್ಮ ಕಾಲದ ಬಹುದೊಡ್ಡ ಸಂತರನ್ನು ಕಾಣುತ್ತಾರೆ (ಪುಟ 29) ಹಾಗೂ ‘‘ನಿಮ್ಮಬ್ಬರಿಗೂ ಥ್ಯಾಂಕ್ಸ್ ಕಣೋ.ಅಡಿಗರನ್ನು ಕೊನೆಗೂ ಭೇಟಿ ಮಾಡಿಸಿದ್ದಕ್ಕೇ’’ ಎನ್ನುತ್ತಾರೆ(ಪುಟ 29).

‘‘ಲಂಕೇಶ್ ನೀಚ. ಆದರೆ ಅತ್ಯಂತ ಚೆನ್ನಾಗಿ ಬರೆಯುತ್ತಾನೆ’’ ಎನ್ನುವ ಅಡಿಗರ ಮಾತಿಗೆ ಮಂದಸ್ಮಿತರಾಗುತ್ತಾರೆ. ಲಂಕೇಶರು ತಾಯ್ತನದ ಮನಸ್ಸನ್ನು ತಂದುಕೊಳ್ಳುವ ಪರಿಗೆ ಇನ್ನೊಂದು ನಿದರ್ಶನ, ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ‘ಬೂಸಾ’ ಎಂದು ಕರೆದ ಸಂದರ್ಭದಲ್ಲಿ ಅವರ ಮೇಲೆ ಕೆಲವರು ಹಲ್ಲೆ ನಡೆಸುತ್ತಾರೆ. ಲಂಕೇಶರು ‘‘ಇಟೀಸ್ ಆಲ್ ರೈಟ್’’ ಎಂದು ನಿರುಂಬಳರಾಗುತ್ತಾರೆ, ಇಲ್ಲ ಧ್ಯಾನಸ್ಥರಾಗುತ್ತಾರೆ..ಲಂಕೇಶರ ಸಿಟ್ಟು ಕೋಪಗಳು ಕ್ಷಣಿಕವಾದುದೆಂದು ಶೂದ್ರರು ಮತ್ತೆಮತ್ತೆ ಹೇಳುತ್ತಾರೆ. ಇದಕ್ಕನುಗುಣವಾಗಿಯೇ, ಆಪ್ತರಿರಲಿ ಅಪರಿಚಿತರಿರಲಿ ಅನೇಕ ಸಂದರ್ಭಗಳಲ್ಲಿ ಲಂಕೇಶರೊಳಗಿನ ಪರಿತಪಿಸುವ ಮಾತೃಹೃದಯದ ಆತಂಕಗಳನ್ನು ಎತ್ತಿ ತೋರಿದ್ದಾರೆ. ಹೀಗೆಯೇ, ನವೋದಯದ ನಂತರ ಕನ್ನಡದ ಇಬ್ಬರು ಮಹಾನ್ ಲೇಖಕರನ್ನು-‘‘ಶೂದ್ರ ಮತ್ತೆ ಕನ್ನಡ ಸಾಹಿತ್ಯದ ಇಬ್ಬರು ಮಹತ್ವಪೂರ್ಣ ಸವತಿಗಳನ್ನು’’- ಸಂಧಿಸಲು ಅವಕಾಶಮಾಡಿಕೊಡುತ್ತಾರೆ. ಅನಂತಮೂರ್ತಿ ಲಂಕೇಶರ ಚಾರಿತ್ರಿಕ ಸಮಾಗಮ. ಅದಕ್ಕೆ ಚಿರಂಜೀವಿ ಸಿಂಗ್ ಮತ್ತು ನಝೀರ್‌ಸಾಬ್ ಸಾಕ್ಷಿಗಳಾಗುತ್ತಾರೆ.

ನಂತರ ಅನಂತಮೂರ್ತಿಯವರಿಗೆ ಅರವತ್ತು ತುಂಬಿದಾಗ ಸ್ವತ: ಲಂಕೇಶರು ಒಂದು ಔತಣಕೂಟ ಏರ್ಪಡಿಸುತ್ತಾರೆ. ಅಲ್ಲಿ ನೆನಪುಗಳು ಪುಳಕಗೊಳಿಸುವಂತೆ ಕಾಣುವುದಿಲ್ಲ. ಆ ಔತಣಕೂಟದಲ್ಲಿ ಲಂಕೇಶರ ಮನದೊಳಗೆ ಅಡಗಿದ್ದ ಕಹಿ ಹೊರಹೊಮ್ಮುತ್ತದೆ. ಔತಣಕೂಟ ವಿಷಾದದಿಂದ ಕೊನೆಗೊಳ್ಳುತ್ತದೆ. ನಂತರ ಲಂಕೇಶರು ಅಪರಾಧಿ ಪ್ರಜ್ಞೆಯಿಂದ ದುಃಖಿಸುತ್ತಾರೆ. ಅನಂತಮೂರ್ತಿಯವರ ಬಗ್ಗೆ ಸುಪ್ತವಾಗಿದ್ದ ಪ್ರೀತಿ-ದ್ವೇಷಗಳ ಸಂಘರ್ಷ ಅವರನ್ನು ಬಹಳಷ್ಟು ಕಾಡಿದಂತಿದೆ. ಇದಂತೂ ಲಂಕೇಶರ ವ್ಯಕ್ತಿತ್ವ ಮನಃಶಾಸ್ತ್ರೀಯ ಅಧ್ಯಯನಕ್ಕೂ ಅರ್ಹವಾದುದು ಎಂಬಂತಹ ಅನ್ನಿಸಿಕೆಗೆ ಪುಷ್ಟಿಕೊಡುವ ರೀತಿಯದು. ಲಂಕೇಶರ ಜೀವಿತಾವಧಿಯ ಮುಖ್ಯ ಭಾಗವಾದ ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಂತೂ ಕರ್ನಾಟಕದ, ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಗಳ ದೃಷ್ಟಿಯಿಂದ ಬಲು ಮಹತ್ವದ ಕಾಲಘಟ್ಟವಷ್ಟೇ ಅಲ್ಲ, ಕಾಲಮಾನವೂ ಹೌದು.

‘‘ದೊಡ್ಡ ಸಾಹಿತ್ಯ ಸೃಷ್ಟಿಯಾಗುವುದು ನಮ್ಮ ನೋಟ ವಿಶಾಲವಾದಾಗ ಮತ್ತು ಅದಕ್ಕೆ ಹೃದಯವಂತಿಕೆ ಇದ್ದಾಗ’’ ಎನ್ನುವ ಲಂಕೇಶರು ಲೇಖಕರಾಗಿ, ಪತ್ರಕರ್ತರಾಗಿ ಸಾಂಸ್ಕೃತಿಕವಾಗಿ ಅತ್ಯಂತ ಕ್ರಿಯಾಶೀಲರಾಗಿದ್ದ ದಿನಗಳವು. ರಾಜಕೀಯವಾಗಿಯೂ ಅವರ ಶಕ್ತಿ ಹೊಸ ದಿಕ್ಕಿನತ್ತ ದಾಂಗುಡಿ ಇಡಲು ಹೊಮ್ಮುತ್ತಿದ್ದ (ಹೊಸ ಪಕ್ಷ ಕಟ್ಟುವ ಉತ್ಸಾಹ) ಕಾಲವದು. ಪ್ರಗತಿ ರಂಗ, ಪ್ರೊ. ಹಿರೇಮಠರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಿರುದ್ಧ ಕೆ. ಎಸ್. ನರಸಿಂಹಸ್ವಾಮಿಗಳ ಅಧ್ಯಕ್ಷತೆಯಲ್ಲಿ ವ್ಯವಸ್ಥೆ ಮಾಡಿದ ಜಾಗೃತ ಸಾಹಿತ್ಯ ಸಮ್ಮೇಳನ, ಪುರೋಹಿತಶಾಹಿ ವಿರುದ್ಧ ದನಿ ಎತ್ತಿದ ಅಬ್ರಾಹ್ಮಣ ಲೇಖಕರ ಒಕ್ಕೂಟ ಸಮ್ಮೇಳನ ಮತ್ತು ಬ್ರಾಹ್ಮಣ ಪತ್ರಿಕೆಗಳಿಗೆ ಬರೆಯದಿರುವ ನಿರ್ಧಾರ, ವೀರಶೈವ ಸಮ್ಮೇಳನದ ವಿರುದ್ಧ ಪ್ರತಿಭಟನೆ ಇವೆಲ್ಲ ಆ ಕಾಲಘಟ್ಟದಲ್ಲಿ ಸಾಂಸ್ಕೃತಿಕವಾಗಿ ಮಹತ್ವದ ಘಟನೆಗಳು. ಇವುಗಳಲ್ಲಿ ಜಾತಿ ಮತ್ತು ಪುರೋಹಿತಶಾಹಿ ವ್ಯವಸ್ಥೆಯ ಮುಖ್ಯ ಪ್ರತಿಭಟನಾಕಾರರಾಗಿ ಆಂದೋಲನವನ್ನು ಸಂಘಟಿಸುವುದರಲ್ಲಿ ಲಂಕೇಶರು ವಹಿಸಿದ ಪಾತ್ರ ಚಾರಿತ್ರಿಕವಾಗಿ ಬಹಳ ಮುಖ್ಯವಾದುದು.

ಇವೆಲ್ಲದರ ವಿವರಗಳನ್ನು ಒಂದು ಬಗೆಯ ಲಂಕೇಶರ ವೈಯಕ್ತಿಕ ತರದೂದಿನ ದೃಷ್ಟಿಯಿಂದ ಹಾಗೂ ಸಾರ್ವತ್ರಿಕ ನೆಲೆಯಿಂದ ನಿರೂಪಿಸಿರುವುದು ಈ ಕೃತಿಯ ಮತ್ತೊಂದು ಸಾಂಸ್ಕೃತಿಕ ಮಹತ್ವ. ಈ ಸಂದರ್ಭಗಳಲ್ಲೆಲ್ಲ ಸಾಹಿತ್ಯವಷ್ಟೇ ಅಲ್ಲ, ದೇಶದ ರಾಜಕೀಯ ಸಾಗಿರುವ ಗತಿ, ಸಮಾಜವಾದಿ ಚಳವಳಿ, ರೈತ ಚಳವಳಿ, ಬಂಡಾಯ, ಪುರೋಹಿತಶಾಹಿ ವಿರುದ್ಧ ಆಕ್ರೋಶ ಇವೆಲ್ಲ ಘಟಿಸುತ್ತವೆ. ಅಂಬೇಡ್ಕರ್, ಲೋಹಿಯಾ, ರಾಜನಾರಾಯಣ್, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ನಝೀರ್ ಸಾಬ್, ಕಿಷನ್ ಪಟ್ನಾಯಕ್, ಅಪರೂಪದ ರಾಜಕಾರಣಿ ಶರಭಣ್ಣ(ನಿಜಲಿಂಗಪ್ಪನವರ ಬೀಗರು), ಎಂ. ಡಿ. ನಂಜುಂಡಸ್ವಾಮಿ, ಸುಂದರೇಶ್, ರಾಮದಾಸ್, ಡಿ. ಆರ್. ನಾಗರಾಜ್, ತೇಜಸ್ವಿ, ಕೀರಂ ಮೊದಲಾದ ಕ್ರಿಯಾಶೀಲಪಟುಗಳು ಇಲ್ಲಿ ಸಂಭವಿಸುತ್ತಾರೆ-ಕೇಂದ್ರ ಪ್ರಜ್ಞೆಯ ದೊಂದಿಯ ಕುಡಿಗಳಂತೆ. ಇವುಗಳೆಲ್ಲದರ ಸಾಕ್ಷಿ ಪ್ರಜ್ಞೆಯೂ ಲಂಕೇಶರ ಪ್ರಜ್ಞೆಯ ಒಂದು ಭಾಗವೂ ಆದ ಶೂದ್ರ ಶ್ರೀನಿವಾಸರು ಇದೆಲ್ಲವನ್ನೂ ಆ ಕಾಲದ ಮೌಲ್ಯಗಳು ಮತ್ತು ಚಲನಶೀಲತೆಯ ರೂಪಕವಾಗಿ ಹಿಡಿದಿರಿಸಿರುವುದರಿಂದ ಸಾಹಿತ್ಯಕವಾಗಿಯಷ್ಟೇ ಅಲ್ಲ ಸಾಂಸ್ಕೃತಿಕವಾಗಿಯೂ ಇದೊಂದು ಮಹತ್ವದ ಕೃತಿಯಾಗಿದೆ.

ಲಂಕೇಶ್ ಪತ್ರಿಕೆ ಉತ್ತುಂಗದಲ್ಲಿದ್ದಾಗ ಕರ್ನಾಟಕದ ಪ್ರಸಿದ್ಧ ಪತ್ರಕರ್ತ ಎಂ. ವಿ. ಕಾಮತರು ಲಂಕೇಶರನ್ನು ‘‘ಕರ್ನಾಟಕದ ಆತ್ಮಸಾಕ್ಷಿ, ಕರ್ನಾಟಕದ ಆತ್ಮಸಾಕ್ಷಿಯ ಕಾವಲುಗಾರ’’ ಎಂದು ಬಣ್ಣಿಸಿದ್ದರು. ಆ ಕಾಲಕ್ಕೆ ಹೊಸ ಪೀಳಿಗೆಯ ಜಾಣಜಾಣೆಯರಲ್ಲಿ ಲಂಕೇಶರ ಪ್ರಭಾವ, ಪ್ರಜ್ಞೆ ಅಷ್ಟು ಕ್ರಿಯಾಶೀಲವಾಗಿತ್ತು. ಎಂದೇ ಎಂ. ವಿ .ಕಾಮತರ ಮಾತನ್ನೂ ಒಂದು ರೂಪಕವಾಗಿಯೇ ನೋಡಿ ಆ ‘ಕಾಲಮಾನ’ವನ್ನು ಗ್ರಹಿಸಬಹುದು. ಈ ಕೃತಿಯನ್ನು ಇಡಿಯಾಗಿ ಗ್ರಹಿಸಿದಾಗ ಶೂದ್ರ ಶ್ರೀನಿವಾಸರೂ ಲಂಕೇಶರ ಆತ್ಮಸಾಕ್ಷಿಯ ಕಾವಲುಗಾರರಂತೆ ಭಾಸವಾಗುತ್ತದೆ. ಅಷ್ಟರಮಟ್ಟಿಗೆ, ವಿರೋಧ, ಪ್ರತಿರೋಧ, ಜಗಳ, ಪ್ರೀತಿಗೌರವ, ಅಭಿಮಾನ ಇವೆಲ್ಲದರ ಮಧ್ಯೆಯೂ ಲಂಕೇಶರ ಪ್ರಜ್ಞೆಯ ಒಂದು ಭಾಗವಾಗಿದ್ದವರು ಶೂದ್ರ ಶ್ರೀನಿವಾಸ್.ಲಂಕೇಶರು ಕನ್ನಡ ಸಂಸ್ಕೃತಿಯ ಪ್ರಜ್ಞಾ ಪ್ರಭಾವಿ ಪೋಷಕರಾಗಿದ್ದಂತೆ ಶೂದ್ರ ಶ್ರೀನಿವಾಸರೂ ಅವರ ಪ್ರಜ್ಞೆಯ ಕಾಳಜಿಹೊಂದಿದ್ದರು ಎಂಬುದಕ್ಕೆ ಈ ಪುಸ್ತಕದಲ್ಲಿ ಹಲವಾರು ನಿದರ್ಶನಗಳು ಸಿಗುತ್ತವೆ.

ಅನಂತಮೂರ್ತಿ, ಅಡಿಗ, ಜಿ. ರಾಜಶೇಖರ, ಓಂಪ್ರಕಾಶ ಕಣಗಲಿ ಮೊದಲಾದ ಪ್ರಸಂಗಗಳಲ್ಲಿ, ಅಬ್ರಾಹ್ಮಣ ಲೇಖಕರ ಒಕ್ಕೂಟಕ್ಕೆ ಅನಂತಮೂರ್ತಿ, ಜಿ. ಎಸ್. ಸದಾಶಿವ, ಸೂ. ರಮಾಕಾಂತ ಅವರುಗಳನ್ನು ಸೇರಿಸಿಕೊಳ್ಳಬೇಕೆಂದು ಆಗ್ರಹಪಡಿಸಿದ ಪ್ರಸಂಗವಿರಲಿ ಶೂದ್ರ ಶ್ರೀನಿವಾಸ್ ವಹಿಸಿದ ಪಾತ್ರವನ್ನು ಗಮನಿಸಬೇಕು, ಆ ಸಂದರ್ಭಗಳಲ್ಲಿನ ಲಂಕೇಶರ ಪ್ರತಿಕ್ರಿಯೆಯನ್ನು ಗಮನಿಸಬೇಕು. ಹೀಗೆ ಹಲವಾರು ಪ್ರಕರಣ-ಪ್ರಸಂಗಗಳಲ್ಲಿ ತವಕದಲ್ಲೋ, ಆತಂಕದಲ್ಲೋ, ಕ್ಷಣಿಕ ಕೋಪದಲ್ಲೋ ತತ್ತರಿಸಿದಾಗ ಸಾಕ್ಷಿಯಾಗಿದ್ದುಕೊಂಡು ಲಂಕೇಶರ ಪ್ರಜ್ಞಾ ಪಾತಳಿಯನ್ನು ಕಾಪಾಡಿದವರು. ಎಂದೇ ಲಂಕೇಶರದು ವ್ಯಕ್ತಿಗತವಾಗಿಯೂ ಸಾಹಚರ್ಯದಲ್ಲೂ ‘ಶೂದ್ರ ಪ್ರಜ್ಞೆ’. ಸ್ವತ: ಲಂಕೇಶರಿಗೂ ಹೀಗೆಯೇ ಅನ್ನಿಸಿರಬೇಕು. ಮುನಿಸಿಕೊಂಡ ಶೂದ್ರ ಶ್ರೀನಿವಾಸರನ್ನು ಮತ್ತೆಮತ್ತೆ ಅವರು ತಮ್ಮ ಆಂತರ್ಯಕ್ಕೆ ಸೆಳೆದುಕೊಂಡಿದ್ದಿದೆ-ಕ್ಷಮಯಾ ಧರಿತ್ರೀ ಎಂಬಂತೆ.

ಗೋಪಾಲಗೌಡರನ್ನು ಕುರಿತು ಶೂದ್ರ ಶ್ರೀನಿವಾಸ್ ಬರೆದ ಲೇಖನವನ್ನು ಮೆಚ್ಚಿಕೊಂಡ ಲಂಕೇಶ್, ಪ್ರಸಿದ್ಧ ಆಂಗ್ಲ ಸಾಹಿತಿ ಜಾನ್ಸನ್‌ರ ‘ಮನೋಲೋಕದ ದಟ್ಟತೆಯಂತೆ’ ಅವರ ಜೀವನ ಚರಿತ್ರೆಯನ್ನು ಬರೆದ ಬಾಸ್ವೆಲ್‌ನನ್ನು ಪರಿಚಯಿಸು ತ್ತಾರೆ. ‘‘ನನ್ನ ಬಗ್ಗೆ ಎಂದಾದರೂ ನಾಲ್ಕು ಸಾಲು ಬರೆದರೆ, ಅದೇ ಆತ್ಮೀಯತೆಯಿಂದ ಬರೆಯಲು ಪ್ರಯತ್ನಿಸು’’ ಎಂದು ಶೂದ್ರನಿಗೆ ಹೇಳುತ್ತಾರೆ. ಜಾನ್ಸನ್‌ನ ಪ್ರಜ್ಞೆಯ ಒಳಹೊಕ್ಕು ಅವನ ಮನೋಲೋಕವನ್ನು ಪರಿಚಯಿಸಿದ ಬಾಸ್ವೆಲ್‌ನ ಬರವಣಿಗೆ ಈಗ ಸಾಹಿತ್ಯ ಲೋಕದಲ್ಲಿ ಜೀವನ ಚರಿತ್ರೆ ರಚನೆಗೊಂದು ಮಾದರಿಯಾಗಿದೆ. ಅತ್ಯಂತ ಶ್ರದ್ಧಾಪೂರ್ವಕ ನಿಷ್ಠೆಯ ಜೀವನಚರಿತ್ರೆ ಬರವಣಿಗೆಗೆ ಈಗ ಬಾಸ್ವೇಲಿಯನ್ ಜೀವನಚರಿತ್ರೆ ಎಂಬ ರೂಪಕವೂ ಸೇರಿಕೊಂಡಿದೆ. ಶೂದ್ರ ಶ್ರೀನಿವಾಸರ ಲಂಕೇಶರ ಈ ಜೀವನಚರಿತ್ರೆ ಅಂಥ ಒಂದು ಕೃತಿ. ಅತ್ಯಂತ ನಿಷ್ಠೆಯಿಂದ, ಪ್ರೀತಿಯಿಂದ, ವಸ್ತುನಿಷ್ಠತೆಗೆ ಅಪಚಾರವೆಸಗದಂತೆ ಸೃಷ್ಟಿಗೊಂಡಿರುವ ಶೂದ್ರ ಶ್ರೀನಿವಾಸರ ಈ ಕೃತಿ ಒಂದು ರೀತಿಯಲ್ಲಿ ಲಂಕೇಶರ ಜೀವನ ಚರಿತ್ರೆಯೂ ಹೌದು, ಶೂದ್ರ ಶ್ರೀನಿವಾಸರ ಆತ್ಮವೃತ್ತಾಂತವೂ ಹೌದು. ಅವರು ತಮ್ಮ ಜೀವಿತದ ಮುಕ್ಕಾಲು ಭಾಗವನ್ನು ಗೋಚರಾಗೋಚರಗಳಲ್ಲಿ ಲಂಕೇಶ ಮೇಸ್ಟರ ಶಿಷ್ಯನಾಗಿ, ಗೆಳೆಯನಾಗಿ, ಪ್ರತಿವಾದಿಯಾಗಿ, ವಿರೋಧಿಯಾಗಿ, ಮಾನವಾನುರಕ್ತಿಯಾಗಿ ಲಂಕೇಶರ ಜೊತೆ ಕಳೆದವರು. ಹೀಗೆ ಅವರ ಪ್ರಜ್ಞೆಯ ಭಾಗವಾದವರು. ಪರಕಾಯಪ್ರವೇಶ ಎನ್ನುವ ಮುನ್ನುಡಿಕಾರ ರಾಜೇಂದ್ರ ಚೆನ್ನಿಯವರ ಗ್ರಹಿಕೆಯೂ ಇದೇ ಆಗಿದೆ. ಎಂದೇ ಶ್ರೀನಿವಾಸರ ಈ ಗ್ರಂಥವನ್ನು ಲಂಕೇಶರ ‘ಶೂದ್ರ ಪ್ರಜ್ಞೆ’ ಎಂದು ಶ್ಲೇಷಾರ್ಥದಲ್ಲೂ ನೋಡಬಹುದು.ಅದು ಹೆಚ್ಚು ಧ್ವನಿಪೂರ್ಣವಾಗಬಹುದು, ಲಂಕೇಶರ ವ್ಯಕ್ತಿತ್ವದ ಹೊಸ ಹೊಳಹುಗಳನ್ನು ನೀಡಬಹುದು.

ಇತಿಹಾಸಕಾರರಿಗೆ ಅನಿವಾರ್ಯವಾಗಲಿರುವ ಇಂಥ ಒಂದು ಸಾಂಸ್ಕೃತಿಕ ಆಕರ ಗ್ರಂಥ ಕೊಟ್ಟಿದ್ದಕ್ಕಾಗಿ ಶೂದ್ರ ಶ್ರೀನಿವಾಸರಿಗೆ ಅಭಿನಂದನೆಗಳು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top