ಈ ಸಾವು ಭಾರತ ಗಣತಂತ್ರದ ಘನತೆಯನ್ನು ಕುಗ್ಗಿಸಿತು... | Vartha Bharati- ವಾರ್ತಾ ಭಾರತಿ

--

ಈ ಸಾವು ಭಾರತ ಗಣತಂತ್ರದ ಘನತೆಯನ್ನು ಕುಗ್ಗಿಸಿತು...

ಇಡೀ ವಿಶ್ವ ಭಾರತದಲ್ಲಿ ಕೋವಿಡ್-19 ಸಂಕಷ್ಟದ ಬೇಜವಾಬ್ದಾರಿಯುತ ನಿರ್ವಹಣೆ, ಲಕ್ಷಾಂತರ ವಲಸೆಗಾರರ ಗೋಳು, ವೈದ್ಯಕೀಯ ಸೌಲಭ್ಯವಿಲ್ಲದೆ ಅಮಾಯಕರ ಸಾವು, ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಶ್ರೀಸಾಮಾನ್ಯರ ಸಂಕಷ್ಟಗಳನ್ನು ಗಂಭೀರವಾಗಿ ಗಮನಿಸುತ್ತಿದೆ. ಮಾನವ ಹಕ್ಕುಗಳಿಗಾಗಿ ಬದುಕಿನುದ್ದಕ್ಕೂ ಹೋರಾಡುವ ಫಾದರ್ ಸ್ಟಾನ್‌ಸ್ವಾಮಿ ಅಂತಹವರಿಗೆ ಭಾರತದಲ್ಲಿ ಸಿಗುತ್ತಿರುವ ನೋವು-ಸಾವು ಭಾರತ ಗಣತಂತ್ರದ ಘನತೆಯನ್ನು ಕುಗ್ಗಿಸಿದೆ.


ಭೀಮಾ ಕೋರೆಗಾಂವ್ ಯುದ್ಧ ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ. ಜನವರಿ 01, 1818ರಲ್ಲಿ ಪೇಶ್ವೆ ಬಾಜಿರಾವ್-2 ಮತ್ತು ಈಸ್ಟ್ ಇಂಡಿಯಾ ಕಂಪೆನಿಯ ಮಹಾರ್ ಸೇನೆಗಳ ನಡುವೆ ನಡೆದ ಯುದ್ಧದಲ್ಲಿ ಸುಮಾರು 28 ಸಾವಿರ ಸೈನ್ಯಬಲವನ್ನು ಹೊಂದಿದ್ದ ಪ್ರಭುತ್ವವಾದಿ ಪೇಶ್ವೆ ಬಾಜಿರಾವ್ ಸ್ವಾಭಿಮಾನಿ ದಲಿತ ಮಹಾರ್ ಸೇನೆಯ 800 ವೀರ ಯೋಧರ ಮುಂದೆ ಸೋಲುಂಡಂತಹ ಘಟನೆ ಐತಿಹಾಸಿಕವಾಗಿ ವಿಶೇಷ ಮಹತ್ವ ಹೊಂದಿದೆ. ಮಹಾರಾಷ್ಟ್ರದ ಪುಣೆ ಬಳಿಯ ಕೋರೆಗಾಂವ್ ಎಂಬಲ್ಲಿ ವಿಜಯದ ಸಂಕೇತವಾಗಿ ಯುದ್ಧ ಸ್ಮಾರಕವನ್ನು ಬ್ರಿಟಿಷರು ಅಂದು ನಿರ್ಮಿಸಿದ್ದರು. ಸುಮಾರು 49 ಜನ ವೀರ ಮಹಾರ್ ಯೋಧರು ಹುತಾತ್ಮರಾಗಿ ಪ್ರಭುತ್ವದ ವಿರುದ್ಧ ತಮ್ಮ ಶೌರ್ಯವನ್ನು ದಾಖಲಿಸಿದ್ದಾರೆ. ಸ್ಮಾರಕದಲ್ಲಿ ಸಿದನಾಯಕ ಸೇರಿದಂತೆ ಸುಮಾರು 22 ವೀರಯೋಧರ ಹೆಸರನ್ನು ಅಭಿಮಾನಪೂರ್ವಕವಾಗಿ ಮಂಡಿಸಲಾಗಿದೆ.

ದಲಿತರ ಸಾಮಾಜಿಕ ನ್ಯಾಯಪರ ಹೋರಾಟಕ್ಕೆ ಕೋರೆಗಾಂವ್ ಯುದ್ಧದ ಗೆಲುವು ಸ್ಫೂರ್ತಿಯೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಬಣ್ಣಿಸಿದ್ದಾರೆ. ಅವರು ಬದುಕಿರುವ ತನಕ ಪ್ರತಿ ವರ್ಷ ಜನವರಿ 01ರಂದು ಕೋರೆಗಾಂವ್‌ಗೆ ತೆರಳಿ ಸ್ಮಾರಕಕ್ಕೆ ನಮಿಸುತ್ತಿದ್ದರು. ಅಂದಿನಿಂದ ದೇಶದ ಎಲ್ಲೆಡೆ ಸ್ವಾಭಿಮಾನಿ ದಲಿತರು ಕೋರೆಗಾಂವ್ ಗೆಲುವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಲ್ಲದೆ ದೇಶದ ಬಹಳಷ್ಟು ಕಡೆ ಕೋರೆಗಾಂವ್ ಯುದ್ಧ ಸ್ಮಾರಕಗಳನ್ನು ಪ್ರೀತಿಪೂರ್ವಕವಾಗಿ ದಲಿತರು ನಿರ್ಮಿಸಿದ್ದಾರೆ. ಐತಿಹಾಸಿಕ ಮೈಸೂರು ನಗರದ ಅಶೋಕಪುರಂನಲ್ಲಿಯೂ ಕೂಡ ಇಂತಹದೇ ಒಂದು ಸ್ಮಾರಕವಿದ್ದು ಪ್ರತಿವರ್ಷ ಜನವರಿ 01ರಂದು ಸಾವಿರಾರು ದಲಿತರು ಕೋರೆಗಾಂವ್ ಗೆಲುವಿನ ರೂವಾರಿಗಳು ಮತ್ತು ಹುತಾತ್ಮರಿಗೆ ನುಡಿನಮನ ಸಲ್ಲಿಸುತ್ತಾರೆ. ಡಿಸೆಂಬರ್ 31, 2017ರಂದು ಪುಣೆಯಲ್ಲಿ ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥವಾಗಿ ಎಲ್ಗಾರ್ ಪರಿಷದ್ ಎಂಬ ಸ್ವಾಭಿಮಾನಿ ದಲಿತರ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 260ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿದ್ದವು. ಲಕ್ಷಾಂತರ ಜನ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಆನಂದ್ ತೇಲ್ತುಂಬ್ಡೆ, ಗೌತಮ್ ನೌವ್ಲಾಖ, ಸ್ಟಾನ್‌ಸ್ವಾಮಿ ಮೊದಲಾದ ಸುಮಾರು 15 ಮಂದಿ ಸಮಾನತೆಯ ಹರಿಕಾರರು ಭಾಗವಹಿಸಿ ಬುದ್ಧ, ಫುಲೆ, ಅಂಬೇಡ್ಕರ್, ಪೆರಿಯಾರ್ ಮೊದಲಾದ ಮಹಾತ್ಮರು ಕಂಡ ಪ್ರಬುದ್ಧ ಭಾರತದ ಕನಸನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನನಸು ಮಾಡಬೇಕೆಂದು ಕರೆ ನೀಡಿದರು.

ಇದರಿಂದ ಕುಪಿತಗೊಂಡ ದಲಿತ ವಿರೋಧಿಗಳು ಕೋರೆಗಾಂವ್ ಯುದ್ಧದ ಐತಿಹಾಸಿಕ ಮಹತ್ವಕ್ಕೆ ಕಳಂಕ ತರಲು ದುರುದ್ದೇಶ ಪೂರ್ವಕವಾಗಿ ಹಿಂಸಾಚಾರ ನಡೆಸಿದರು. ಆನಂತರ ನಡೆದ ಸಂಘರ್ಷದಲ್ಲಿ ಅನೇಕ ಜನ ಮುಗ್ಧ ದಲಿತರು ಪ್ರಾಣ ಕಳೆದುಕೊಂಡಿದ್ದರು. ಅಂದು ಕೇಂದ್ರ ಹಾಗೂ ಮಹಾರಾಷ್ಟ್ರಗಳಲ್ಲಿ ಆಡಳಿತ ನಡೆಸುತ್ತಿದ್ದ ಸರಕಾರಗಳು ಬಲಾಢ್ಯರ ಪರವಾಗಿ ನಿಂತು ದಲಿತರನ್ನು ಹೀನಾಯವಾಗಿ ಕಡೆಗಣಿಸಿದರು. ಈ ಘಟನೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೊಳಗಾಗಿ ಭಾರತವು ಮಾನವ ಹಕ್ಕುಗಳ ಉಲ್ಲಂಘನೆಯ ದೇಶವೆಂಬ ಕಳಂಕ ಹೊಂದಲು ಕಾರಣವಾಯಿತು. ಫಾದರ್ ಸ್ಟಾನ್‌ಸ್ವಾಮಿ ಆದಿವಾಸಿಗಳ ಮಾನವ ಹಕ್ಕುಗಳ ಅಪ್ರತಿಮ ಹೋರಾಟಗಾರರೆಂದು ಭಾರತದ ಇತಿಹಾಸದಲ್ಲಿ ಗೌರವಿಸಲ್ಪಟ್ಟಿದ್ದಾರೆ. ಆದಿವಾಸಿಗಳ ಭೂಮಿಯ ಹಕ್ಕು, ಶಿಕ್ಷಣ ಹಕ್ಕು, ಆರೋಗ್ಯ ಹಕ್ಕು, ಉದ್ಯೋಗ ಹಕ್ಕು, ಸಾಮಾಜಿಕ ಸುರಕ್ಷತೆ, ಒಳಗೊಳ್ಳುವ ಅಭಿವೃದ್ಧಿ ಮೊದಲಾದ ಮಹತ್ವದ ವಿಷಯಗಳನ್ನು ಕೈಗೊಂಡು ಉತ್ತರ ಭಾರತದಲ್ಲಿ ಇವರು ನಡೆಸಿದ ಹೋರಾಟ ಅಪ್ರತಿಮವಾದುದು. ಇವರು ಬದುಕಿನುದ್ದಕ್ಕೂ ಮಾನವತಾವಾದಿಯಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಮಹಾಶ್ವೇತಾದೇವಿಯವರ ಜೊತೆಗೆ ಕೈಜೋಡಿಸಿ ಅಹರ್ನಿಶಿ ದುಡಿದರು. ಇವರ ಬದುಕು, ಹೋರಾಟ ಮತ್ತು ಕೊಡುಗೆಗಳು ತೆರೆದ ಪುಸ್ತಕವೆಂದೇ ನಿರ್ಭಿಡೆಯಿಂದ ಹೇಳಬಹುದು.

ಇವರು 2017ರಲ್ಲಿ ಕೋರೆಗಾಂವ್ ಯುದ್ಧದ ಸ್ಮರಣಾರ್ಥ ಎಲ್ಗಾರ್ ಪರಿಷದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ದಲಿತರು, ಆದಿವಾಸಿಗಳು ಮತ್ತು ಶೋಷಿತ ವರ್ಗಗಳಲ್ಲಿ ಜನಜಾಗೃತಿ ಮೂಡಿಸಿದ್ದರೇ ಹೊರತು ಯಾವುದೇ ರೀತಿಯ ಹಿಂಸಾಚಾರಕ್ಕೆ ಪ್ರೇರಣೆ ನೀಡಲಿಲ್ಲ. ಆದಿವಾಸಿಗಳು ಇಂದಿಗೂ ಇವರನ್ನು ಮಹಾನ್ ಶಾಂತಿಧೂತ ಮತ್ತು ಮಾನವತಾವಾದಿಯೆಂದು ಗೌರವಿಸುತ್ತಾರೆ. ಫಾದರ್ ಸ್ಟಾನ್‌ಸ್ವಾಮಿ ವಿರುದ್ಧ ಆಗಸ್ಟ್ 22, 2018ರಂದು ಪುಣೆ ಪೊಲೀಸರು ಭಯೋತ್ಪಾದನೆಗೆ ಪ್ರೇರಣೆ ನೀಡಿದರೆಂದು ಎಫ್‌ಐಆರ್ ದಾಖಲಿಸಿದರು. ಅಕ್ಟೋಬರ್ 08, 2020ರಂದು ಭಾರತ ಸರಕಾರದ ಎನ್‌ಐಎ ಬಂಧಿಸಿ ಅವರನ್ನು ತಲೋಜ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿತು. ಅಕ್ಟೋಬರ್ 23, 2020ರಂದು ಎನ್‌ಐಎ ವಿಶೇಷ ನ್ಯಾಯಾಲಯ ಅವರು ಆರೋಗ್ಯದಿಂದಿದ್ದಾರೆಂದು ಜಾಮೀನು ನಿರಾಕರಿಸಿತು. ನವೆಂಬರ್ 06, 2020ರಂದು ಅವರು ಮಾನವೀಯ ನೆಲೆಗಟ್ಟಿನಲ್ಲಿ ತನಗೆ ಒಣಹುಲ್ಲಿನ ಹಾಸಿಗೆ ಮತ್ತು ವೈದ್ಯಕೀಯ ಪರಿಕರಗಳನ್ನು ಒದಗಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಆದರೆ ಎನ್‌ಐಎ ತನ್ನ ಬಳಿ ಇಂತಹ ಸೌಲಭ್ಯಗಳಿಲ್ಲವೆಂದು ನಿರಾಕರಿಸಿತು. ಆದಾಗ್ಯೂ ಡಿಸೆಂಬರ್ 04, 2020ರಂದು ಈ ಸೌಲಭ್ಯಗಳು ಪ್ರಜ್ಞಾವಂತರ ಹಸ್ತಕ್ಷೇಪದಿಂದಾಗಿ ಲಭಿಸಿದವು.

ಫಾದರ್ ಸ್ಟಾನ್‌ಸ್ವಾಮಿ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಾರ್ಚ್ 22, 2021ರಂದು ಎನ್‌ಐಎ ನ್ಯಾಯಾಲಯ ಇವರ ಆರೋಗ್ಯ ಕೇಂದ್ರಿತ ಜಾಮೀನು ಮನವಿಯನ್ನು ಸಮರ್ಪಕ ಪರಿಶೀಲನೆಗೆ ಒಳಪಡಿಸದೆಯೇ ತಿರಸ್ಕರಿಸಿತು. ಎಪ್ರಿಲ್ 26, 2021ರಂದು ತಲೋಜ ಸೆರೆಮನೆಗೆ ತೆರಳಿದ ಆನಂತರ ಅವಶ್ಯಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಇವರ ಅನಾರೋಗ್ಯ ಮತ್ತಷ್ಟು ಹೆಚ್ಚಾದ ಕಾರಣ ತಮಗೆ ಜಾಮೀನು ನೀಡಬೇಕೆಂದು ಮುಂಬೈ ಉಚ್ಚನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮೇ 21, 2021ರಂದು ಮುಂಬೈನ ಜೆ.ಜೆ. ಆಸ್ಪತ್ರೆಯ ತಜ್ಞ ವೈದ್ಯರ ತಂಡ ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಇವರ ಕಾಲುಗಳು ಸ್ವಾಧೀನವಿಲ್ಲದೆ ನಡುಗುತ್ತವೆ, ಎರಡೂ ಕಿವಿಗಳು ಕೇಳಿಸುವುದಿಲ್ಲ, ದೈಹಿಕವಾಗಿ ಅಶಕ್ತರು, ಆಗಾಗ್ಗೆ ಭೇದಿ ಉಂಟಾಗುವುದು, ತೀವ್ರ ಬೆನ್ನು ನೋವು ಮೊದಲಾದ ಗಂಭೀರ ಆರೋಗ್ಯ ಸಮಸ್ಯೆಗಳಿರುವುದನ್ನು ವರದಿ ಮಾಡಿತು. ಇವರಿಗೆ ಸೆರೆಮನೆಯಲ್ಲಿ ನಡೆದಾಡಲು ಊರುಗೋಲು, ಸಹಾಯಕರು, ಗಾಲಿಕುರ್ಚಿ ಮೊದಲಾದವುಗಳನ್ನು ಒದಗಿಸಬೇಕೆಂದು ತಿಳಿಸಿತು. ಮೇ 28, 2021ರಂದು ಮುಂಬೈ ಉಚ್ಚನ್ಯಾಯಾಲಯದ ಎಸ್.ಜೆ. ಕಥವಲ್ಲ ಮತ್ತು ಎಸ್.ಪಿ.ಥಾವ್ಡೆ ವಿಭಾಗೀಯ ಪೀಠ ಫಾದರ್ ಸ್ಟಾನ್‌ಸ್ವಾಮಿಯವರು ದೈಹಿಕವಾಗಿ ತುಂಬಾ ದುರ್ಬಲರು ಮತ್ತು ಕಿವಿಗಳು ಸರಿಯಾಗಿ ಕೇಳಿಸದ ಕಾರಣ ಅವರನ್ನು ಒಂದು ಒಳ್ಳೆಯ ಆಸ್ಪತ್ರೆಗೆ ಸೇರಿಸಬೇಕೆಂದು ಸೂಚಿಸಿತು.

ಫಾದರ್ ಸ್ಟಾನ್‌ಸ್ವಾಮಿಯವರು ತಾನು ಯಾವುದೋ ಒಂದು ನಾಮ್‌ಕೆವಾಸ್ತೆ ಆಸ್ಪತ್ರೆಯಲ್ಲಿ ಸಾಯುವುದಕ್ಕಿಂತ ಸೆರೆಮನೆಯಲ್ಲಿ ಸಾಯುವುದೇ ಲೇಸು ಎಂದು ನ್ಯಾಯಾಲಯಕ್ಕೆ ಮಂಡಿಸಿದರು. ಆದಾಗ್ಯೂ ಇವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಉತ್ತಮ ಚಿಕಿತ್ಸೆಗಾಗಿ ಸೇರಿಸಬೇಕೆಂದು ಉಚ್ಚನ್ಯಾಯಾಲಯ ತೀರ್ಮಾನಿಸಿತು. ಮೇ 30, 2021ರಂದು ಇವರು ಕೋವಿಡ್-19 ಸೋಂಕಿಗೆ ಗುರಿಯಾದರು. ಜೂನ್ 17, 2021ರಂದು ಉಚ್ಚನ್ಯಾಯಾಲಯ ಇವರನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆಗಾಗಿ ಉಳಿಸಬೇಕೆಂಬ ತೀರ್ಪು ನೀಡಿತು. ಜುಲೈ 04, 2021ರಂದು ಇವರಿಗೆ ತೀವ್ರ ಹೃದಯಾಘಾತವಾದ ಕಾರಣ ಇವರನ್ನು ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಸೌಲಭ್ಯದಲ್ಲಿ ಇಡಲಾಯಿತು. ಜುಲೈ 05, 2021ರಂದು ಇವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಈ ಘಟನೆಗಳಿಂದ 84 ವಯಸ್ಸಿನ ವಯೋವೃದ್ಧ ಮತ್ತು ಅಪ್ರತಿಮ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್‌ಸ್ವಾಮಿ ಜೈಲುವಾಸ, ಅವರು ಜೈಲಿನಲ್ಲಿ ಅನುಭವಿಸಿದ ಯಾತನೆ, ಅವರಿಗೆ ಜಾಮೀನು ನಿರಾಕರಣೆಯಿಂದ ಉಂಟಾದ ಆರೋಗ್ಯ ಸಮಸ್ಯೆ ಮತ್ತು ಅವರು ಲೋಕಕ್ಕೆ ವಿದಾಯ ಹೇಳಿದ ಅಮಾನವೀಯ ಪರಿಸರ ಸ್ಪಷ್ಟವಾಗಿ ತಿಳಿದು ಬರುತ್ತದೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಶೇಷ ಪ್ರತಿನಿಧಿಗಳಾದ ಮೇರಿ ಲಾಲರ್ ಮತ್ತು ಇಮಾನ್ ಗಿಲ್ಮೋರ್ ಎಂಬವರು ಫಾದರ್ ಸ್ಟಾನ್‌ಸ್ವಾಮಿ ಅವರನ್ನು ಭಯೋತ್ಪಾದನೆಯ ಸುಳ್ಳು ಅಪಾದನೆ ಮೇರೆಗೆ ಸ್ಥಾಪಿತ ಹಿತಾಸಕ್ತಿಗಳು ಅಮಾನುಷವಾಗಿ ಸೆರೆಮನೆಗೆ ದಬ್ಬಿದವು ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿ ಇತಿಹಾಸದ ಬಗ್ಗೆ ಜನಜಾಗೃತಿ ಮೂಡಿಸಿದ ವ್ಯಕ್ತಿಗೆ ಇಂತಹ ಸ್ಥಿತಿ ಬರಬಾರದಾಗಿತ್ತು. ಫಾದರ್ ಸ್ಟಾನ್‌ಸ್ವಾಮಿ ಅಮಾನುಷ ಸಾವಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮೈಕೆಲ್ ಬ್ಯಾಚೆಲೆಟ್ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಲ್ಲ 15 ಮಂದಿ ಪ್ರಗತಿಪರ ಚಿಂತಕರು ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಪೂರ್ವ ವಿಚಾರಣೆಯ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಭಾರತ ಸರಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ವ್ಯವಸ್ಥೆಯ ಲೋಪದೋಷಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರವೃತ್ತಿಗಳನ್ನು ವಿಶ್ಲೇಷಿಸುವ ಮತ್ತು ವಿರೋಧಿಸುವ ಪ್ರಜ್ಞಾವಂತರ ವಿರುದ್ಧ ದೇಶದ್ರೋಹ ಕಾಯ್ದೆಯನ್ವಯ ಸುಳ್ಳು ಕೇಸುಗಳನ್ನು ದಾಖಲಿಸಿ ಸೆರೆಮನೆಗೆ ದಬ್ಬುವುದು ಸಾಮಾನ್ಯವಾಗಿದೆ.

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮತ್ತು ನಾಗರಿಕರಿಗೆ ಸಲ್ಲಬೇಕಾದ ಹೋರಾಟದ ಅವಕಾಶಗಳನ್ನು ಕುಗ್ಗಿಸುವುದು ಭಾರತದ ಪ್ರಜಾಸತ್ತೆಗೆ ಮಾರಕಪ್ರಾಯವಾಗಿದೆ. ಇಡೀ ವಿಶ್ವ ಭಾರತದಲ್ಲಿ ಕೋವಿಡ್-19 ಸಂಕಷ್ಟದ ಬೇಜವಾಬ್ದಾರಿಯುತ ನಿರ್ವಹಣೆ, ಲಕ್ಷಾಂತರ ವಲಸೆಗಾರರ ಗೋಳು, ವೈದ್ಯಕೀಯ ಸೌಲಭ್ಯವಿಲ್ಲದೆ ಅಮಾಯಕರ ಸಾವು, ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಶ್ರೀಸಾಮಾನ್ಯರ ಸಂಕಷ್ಟಗಳನ್ನು ಗಂಭೀರವಾಗಿ ಗಮನಿಸುತ್ತಿದೆ. ಮಾನವ ಹಕ್ಕುಗಳಿಗಾಗಿ ಬದುಕಿನುದ್ದಕ್ಕೂ ಹೋರಾಡುವ ಫಾದರ್ ಸ್ಟಾನ್‌ಸ್ವಾಮಿ ಅಂತಹವರಿಗೆ ಭಾರತದಲ್ಲಿ ಸಿಗುತ್ತಿರುವ ನೋವು-ಸಾವು ಭಾರತ ಗಣತಂತ್ರದ ಘನತೆಯನ್ನು ಕುಗ್ಗಿಸಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top