ಮೀಸಲಾತಿ ಕೋಟ ಮತ್ತು ಶೇ.50ರ ಮಿತಿಯ ಕಟ್ಟಾಜ್ಞೆ! | Vartha Bharati- ವಾರ್ತಾ ಭಾರತಿ

--

ಮೀಸಲಾತಿ ಕೋಟ ಮತ್ತು ಶೇ.50ರ ಮಿತಿಯ ಕಟ್ಟಾಜ್ಞೆ!

ಕರ್ನಾಟಕದಲ್ಲಿಯೂ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಾಕಷ್ಟು ಪರಿಣಾಮ ಬೀರಿದೆ ಎಂಬುದು ವರ್ತಮಾನದ ವಿದ್ಯಮಾನಗಳಿಂದ ತಿಳಿಯಬಹುದು. ಸರಕಾರಗಳು ಮಾತ್ರ ತೀರ್ಪಿನ ಪರಿಣಾಮದಿಂದ ಉಂಟಾಗಿರುವ ಅಂಶಗಳನ್ನು ಸರಿಪಡಿಸುವ ದಿಸೆಯಲ್ಲಿ ಕೈಗೊಳ್ಳುವ ಕ್ರಮಕ್ಕೆ ಬದಲಾಗಿ ಕಾಲವ್ಯಯ ಮಾಡಿಕೊಂಡೇ ಬರುತ್ತಿವೆ. ಪ. ಜಾ., ಪ. ಪಂ. ಮತ್ತು ಹಿಂದುಳಿದ ವರ್ಗಗಳಿಗೆ ಸೂಕ್ತ ನ್ಯಾಯ ಒದಗಿಸಲು ಸರಕಾರಗಳಿಗಿರುವ ಕಾರಣ ಮಾತ್ರ ನಿಗೂಢ! ಯಾವ ಸಂದರ್ಭಗಳಲ್ಲಿ ಸರಕಾರಗಳು ಈ ವರ್ಗಗಳಿಗೆ ನ್ಯಾಯ ಒದಗಿಸಲು ವಿಫಲವಾಗಿವೆ ಎಂಬ ಅಂಶಗಳನ್ನು ಗಮನಿಸುವುದು ಬಹು ಮುಖ್ಯವೆನಿಸಿದೆ.

‘‘ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಷ್ಟೂ ಮಟ್ಟಿಗೆ ಸಂವಿಧಾನದ ಭಾಷೆ ಸರಳವೂ ಮತ್ತು ಅಸಂದಿಗ್ಧವೂ ಆಗಿದೆ. ಆದರೆ, ಸಂವಿಧಾನದ ಆಶಯಗಳನ್ನು ವ್ಯಾಖ್ಯಾನಿಸುವ ನ್ಯಾಯಾಂಗದ ಭಾಷೆ ತೀರಾ ಸಂದಿಗ್ಧವೂ ತೊಡಕಿನದೂ ಆಗಿದೆ.... ಮೀಸಲಾತಿಯ ವ್ಯಾಪ್ತಿಯನ್ನು ಶೇ. 50ರಷ್ಟಕ್ಕೆ ಮಿತಿಗೊಳಿಸುವುದರಿಂದ ಸಂವಿಧಾನದ ವಿಧಿಗಳಾದ 15(4) ಮತ್ತು 16(4)ರ ಭಾಷೆಯನ್ನೂ ಮೀರಿ ನ್ಯಾಯಾಂಗ ಹೋಗಿದೆ; ಹೀಗಾದುದರಿಂದ ‘ಹಿಂದುಳಿದ ವರ್ಗಗಳು’ ಎಂದು ಗುರುತಿಸುವ ಭಾರೀ ಸಂಖ್ಯೆಯ ಜನಸಮುದಾಯಕ್ಕೆ ತಕ್ಕಂತೆ ಮೀಸಲಾತಿ ಕಲ್ಪಿಸಲು ಸರಕಾರವನ್ನು ತಡೆಗಟ್ಟಿದೆ.’’

-(ಎಲ್. ಜಿ. ಹಾವನೂರ್)

ಕರ್ನಾಟಕದ ಮೊದಲನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಲ್. ಜಿ. ಹಾವನೂರ್ ತಮ್ಮ ವರದಿಯಲ್ಲಿ ಮೇಲಿನ ಮಾತುಗಳನ್ನು ದಾಖಲಿಸಿರುವರು. ಮೀಸಲಾತಿ ಕೋಟ ಮಿತಿಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು (ಎಂ. ಆರ್. ಬಾಲಾಜಿ vs ಮೈಸೂರು, AIR 1963 SC 649) ಗಮನದಲ್ಲಿರಿಸಿಕೊಂಡು ಹೇಳಿರುವ ಮಾತುಗಳಿವು.ಆದಾಗ್ಯೂ, ಹಾವನೂರ್ ಸರ್ವೋಚ್ಚ ನ್ಯಾಯಾಲಯದ ಆಜ್ಞೆಯನ್ನು ತಮ್ಮ ವರದಿಯಲ್ಲಿ ಪರಿಪಾಲನೆ ಮಾಡಿದ್ದಾರೆ. ಹಿಂದುಳಿದ ವರ್ಗಗಳನ್ನು ಹಿಂದುಳಿದ ಕೋಮು, ಹಿಂದುಳಿದ ಜಾತಿ ಮತ್ತು ಹಿಂದುಳಿದ ಬುಡಕಟ್ಟು ಎಂದು 3 ಪ್ರವರ್ಗಗಳಾಗಿ ಬೇರ್ಪಡಿಸಿ ಕ್ರಮವಾಗಿ ಶೇ.16, ಶೇ.10 ಮತ್ತು ಶೇ. 6 ಎಂದು ಕೋಟ ನಿಗದಿ(ಹಿಂ. ವ. 32+ ಪ. ಜಾ. 15 + ಪ. ಪಂ. 3 =50)ಮಾಡಿರುವುದು ಮಹತ್ವದ್ದಾಗಿದೆ.

ಮೀಸಲಾತಿ ವ್ಯಾಪ್ತಿಯ ಗರಿಷ್ಠ ಮಿತಿಯನ್ನು ನಿಗದಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಮುಂದೆ ಇದ್ದ ಪ್ರಕರಣವೂ ಕರ್ನಾಟಕ ಮೂಲದ್ದೇ ಆಗಿರುವುದೂ ವಿಶೇಷ. ಡಾ. ನಾಗನಗೌಡ ವರದಿ ಆಧರಿಸಿ ಶೇ. 68ರಷ್ಟು ಮೀಸಲಾತಿ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ (ಎಂ. ಆರ್. ಬಾಲಾಜಿ vs ಮೈಸೂರು) ಅಸಿಂಧು ಎಂದಿದ್ದೂ ಅಲ್ಲದೆ ಗರಿಷ್ಠ ಮೀಸಲಾತಿ ವ್ಯಾಪ್ತಿಯನ್ನೂ ಶೇ. 50ಕ್ಕೆ ಸೀಮಿತಗೊಳಿಸಿ ಇತ್ತ ತೀರ್ಪು, ಮೀಸಲಾತಿ ಚರಿತ್ರೆಗೆ ಬರೆದ ಮುನ್ನುಡಿ. ಶೇ. 50ರ ಈ ಮಿತಿಗೆ 1992ರಲ್ಲಿ (ಇಂದಿರಾ ಸಾಹ್ನಿ vs ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, AIR 1993 SC 477) ಸಾಂವಿಧಾನಿಕ ಪೀಠದ ಮುದ್ರೆ ಬಿದ್ದ ನಂತರ ಅದು ಸ್ಥಿರವಾಯಿತು ಎಂದಾದರೂ, ಅಸಾಧಾರಣ ಸಂದರ್ಭದಲ್ಲಿ ಮಾತ್ರ ಶೇ. 50ರ ಮಿತಿಯ ಗಡಿ ದಾಟ ಬಹುದು ಎಂಬ ಪರಿಹಾರವನ್ನೂ ತೀರ್ಪಿನಲ್ಲೇ ನ್ಯಾಯಾಲಯ ಹೇಳಿರುವುದೂ ಕೂಡಾ ಸಮಾಧಾನ ತರುವ ಸಂಗತಿ.

ಮೀಸಲಾತಿ ಪ್ರಕ್ರಿಯೆಗೆ ಒಳಪಡುವ ಸಂವಿಧಾನದ ವಿಧಿಗಳೆಂದರೆ 15(4), 16(4), 29(2), 38, 39, 46, 330, 332, 338b ಮತ್ತು 342a(1), (2). ವಿಧಿಗಳಾದ 330 ಮತ್ತು 332 ಅನ್ನು ಹೊರತು ಪಡಿಸಿ, ಉಳಿದ ವಿಧಿಗಳಲ್ಲಿಯೇ ಆಗಲಿ ಅಥವಾ ಸಂವಿಧಾನದ ಬೇರೆ ಎಲ್ಲಿಯೇ ಆಗಲಿ ಮೀಸಲಾತಿಯ ಗರಿಷ್ಠ ಮಿತಿ ಮತ್ತು ಮೀಸಲಾತಿ ಜಾರಿಯಲ್ಲಿರಬೇಕಾದ ಸಮಯದ ಬಗ್ಗೆ ಹೇಳಿಲ್ಲ. ಆದರೆ, ವಿಧಿಗಳಾದ 330 ಮತ್ತು 332ರಲ್ಲಿ ಮಾತ್ರ ಪರಿಶಿಷ್ಟ ಸಮುದಾಯದವರು ಸಂಸತ್ ಮತ್ತು ವಿಧಾನಸಭೆಗಳಿಗೆ ಚುನಾಯಿತರಾಗಲೂ ಇರುವ ಮೀಸಲಾತಿ ಅವಕಾಶಗಳನ್ನೂ ತಿಳಿಸಿ, ಕಾಲವನ್ನು 10 ವರ್ಷಗಳು ಎಂದೂ ನಿಗದಿಗೊಳಿಸಿದೆ. ಆದರೂ, ಪ್ರತಿ 10 ವರ್ಷಗಳಿಗೊಮ್ಮೆ ಮೀಸಲಾತಿ ಅವಕಾಶ ಮುಂದುವರಿಕೆಗೆ ಸಂವಿಧಾನದ ತಿದ್ದುಪಡಿ ಮಾಡಿಕೊಂಡು ಬರಲಾಗುತ್ತಿದೆ.

ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಗರಿಷ್ಠ ಕೋಟ ಮಿತಿಯನ್ನು, ಒಕ್ಕೂಟ ಸರಕಾರವೇ ಆಗಲಿ ಅಥವಾ ರಾಜ್ಯಸರಕಾರಗಳೇ ಆಗಲಿ ಪಾಲಿಸಬೇಕಾದ ಅನಿವಾರ್ಯತೆ ಅಂತೂ ಇದೆ(judge made lawvs 5.5.21). ಒಕ್ಕೂಟ ಸರಕಾರ ಮಾತ್ರ ಸರ್ವೋಚ್ಚ ನ್ಯಾಯಾಲಯ ವಿಧಿಸಿದ ಮಿತಿಯನ್ನು ಈ ವರೆಗೂ ಉಲ್ಲಂಘಿಸಿಲ್ಲ. ಆದರೆ ಕೆಲವು ರಾಜ್ಯ ಸರಕಾರಗಳು ಸ್ಥಳೀಯ ಮತ ರಾಜಕೀಯ ಕಾರಣಗಳಿಗೋ ಅಥವಾ ವಾಸ್ತವ ಪರಿಸ್ಥಿತಿಯ ಕಾರಣಗಳಿಗೋ ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಮಿತಿಯ ಗಡಿಯನ್ನೂ ದಾಟಿ ಹೋಗಿವೆ. ಆ ರಾಜ್ಯಗಳೆಂದರೆ -ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ, ಹರ್ಯಾಣ, ಛತ್ತೀಸಗಡ, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ. ಮಹಾರಾಷ್ಟ್ರ ಬಿಟ್ಟು ಉಳಿದ ಎಲ್ಲಾ ರಾಜ್ಯಗಳ ಮೀಸಲಾತಿ ಮಿತಿಯನ್ನು ಪ್ರಶ್ನಿಸಿರುವ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇವೆ. ಮಹಾರಾಷ್ಟ್ರ ಶೇ. 50ರ ಮಿತಿ ದಾಟಿ ಹೋಗಿರುವುದನ್ನು ರದ್ದುಗೊಳಿಸಿ ಸರ್ವೋಚ್ಚ ನ್ಯಾಯಾಲಯ ಇತ್ತೀಚಿನ ತೀರ್ಪಿನಲ್ಲಿ (ಜಯಶ್ರೀ ಲಕ್ಷ್ಮಣ್ ರಾವ್ ಪಾಟೀಲ್ vs ಮಹಾರಾಷ್ಟ್ರ, 5.5.2021) ಆದೇಶಿಸಿದೆ; ಅಲ್ಲದೆ, ಮರಾಠರು ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಪಡೆಯಲೂ ಅರ್ಹರಲ್ಲ ಎಂದೂ ಹೇಳಿದೆ. ಈ ತೀರ್ಪಿನಿಂದ ಮಹಾರಾಷ್ಟ್ರ ತತ್ತರಿಸಿ ಹೋಗಿದೆ! ಸದ್ಯ ಕಾದು ನೋಡುವ ಪರಿಸ್ಥಿತಿ ಅಲ್ಲಿದೆ.

ಆದರೆ, ಅಪವಾದ ಎಂಬಂತೆ, ತಮಿಳುನಾಡು ಮಾತ್ರ ಈ ನಿಟ್ಟಿನಲ್ಲಿ ಚಾರಿತ್ರಿಕ ಎನ್ನಬಹುದಾದ ಹೆಜ್ಜೆ ಗುರುತನ್ನು ಮೂಡಿಸಿದೆ. ಸಂವಿಧಾನದ ವಿಧಿ 31C ಅನ್ವಯ ಕಾಯ್ದೆ ರೂಪಿಸಿ ಮೀಸಲಾತಿ ಮಿತಿಯನ್ನು ಶೇ. 69ಕ್ಕೆ ಹೆಚ್ಚಿಸಿಕೊಂಡು, ಆನಂತರದಲ್ಲಿ ಸಂವಿಧಾನದ ವಿಧಿ 31Bಗೆ 76ನೇ ತಿದ್ದುಪಡಿ ಮಾಡಿಸಿಕೊಳ್ಳುವಲ್ಲಿಯೂ ಅದು ಸಫಲವಾಗಿದೆ. ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಿರುವುದರಿಂದ, ಅದು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗುಳಿದಿದೆ.

ಕರ್ನಾಟಕದಲ್ಲಿಯೂ, ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಸಾಕಷ್ಟು ಪರಿಣಾಮ ಬೀರಿದೆ ಎಂಬುದು ವರ್ತಮಾನದ ವಿದ್ಯಮಾನಗಳಿಂದ ತಿಳಿಯಬಹುದು. ಸರಕಾರಗಳು ಮಾತ್ರ ತೀರ್ಪಿನ ಪರಿಣಾಮದಿಂದ ಉಂಟಾಗಿರುವ ಅಂಶಗಳನ್ನು ಸರಿಪಡಿಸುವ ದಿಸೆಯಲ್ಲಿ ಕೈಗೊಳ್ಳುವ ಕ್ರಮಕ್ಕೆ ಬದಲಾಗಿ ಕಾಲವ್ಯಯ ಮಾಡಿಕೊಂಡೇ ಬರುತ್ತಿವೆ. ಪ. ಜಾ., ಪ. ಪಂ. ಮತ್ತು ಹಿಂದುಳಿದ ವರ್ಗಗಳಿಗೆ ಸೂಕ್ತ ನ್ಯಾಯ ಒದಗಿಸಲು ಸರಕಾರಗಳಿಗಿರುವ ಕಾರಣ ಮಾತ್ರ ನಿಗೂಢ! ಯಾವ ಸಂದರ್ಭಗಳಲ್ಲಿ ಸರಕಾರಗಳು ಈ ವರ್ಗಗಳಿಗೆ ನ್ಯಾಯ ಒದಗಿಸಲು ವಿಫಲವಾಗಿವೆ ಎಂಬ ಅಂಶಗಳನ್ನು ಗಮನಿಸುವುದು ಬಹು ಮುಖ್ಯವೆನಿಸಿದೆ.

ಟಿ. ವೆಂಕಟಸ್ವಾಮಿ ಅಧ್ಯಕ್ಷತೆಯ 2ನೇ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತಿರಸ್ಕರಿದ ಸರಕಾರ, ನ್ಯಾ. ಒ.ಚಿನ್ನಪ್ಪರೆಡ್ಡಿ ಅಧ್ಯಕ್ಷತೆಯ ಏಕ ವ್ಯಕ್ತಿ ಆಯೋಗ ರಚಿಸಿತು. ಆಯೋಗ ತನ್ನ ವರದಿಯನ್ನು 1980ರ ಜುಲೈನಲ್ಲಿ ಸರಕಾರಕ್ಕೆ ಸಲ್ಲಿಸಿತು. ವರದಿಯನ್ನು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸ್ವೀಕರಿಸಿ, ವಿಧಾನ ಮಂಡಲದಲ್ಲಿ ಮಂಡಿಸುವುದಾಗಿ ಹೇಳಿದ ಕೆಲವೇ ದಿನಗಳಲ್ಲಿ ಅವರು ಅಧಿಕಾರ ವಂಚಿತರಾದರು. ಆ ನಂತರ ಬಂದವರೇ ಸಾರೆಕೊಪ್ಪಬಂಗಾರಪ್ಪ. ಅವರು ತಮ್ಮ ಅಧಿಕಾರದ ಅವಧಿಯ 2 ವರ್ಷ ವರದಿಯತ್ತ ಕಣ್ಣು ಹಾಯಿಸಲೇ ಇಲ್ಲ. ಅವರೂ ಕೂಡಾ ರಾಜಕೀಯ ಸುಳಿಯಲ್ಲಿ ಸಿಲುಕಿ ಅಧಿಕಾರದಿಂದ ಹೊರಬಿದ್ದರು. ತರುವಾಯ ಎಂ. ವೀರಪ್ಪಮೊಯ್ಲಿ ಅಧಿಕಾರಕ್ಕೆ ಬಂದರಾದರೂ, ಪ್ರಾರಂಭದ ದಿನಗಳಲ್ಲಿ ವರದಿ ಅನುಷ್ಠಾನದ ಗೊಡವೆಗೆ ಹೋಗಲಿಲ್ಲ. ಅಧಿಕಾರದ ಅವಧಿಯ ಕೊನೆಗಾಲದಲ್ಲಿ ವರದಿ ಜಾರಿಗೆ ಮುಂದಾದರು. ಅದರ ಸುಳಿವು ಹಿಡಿದ, ವರದಿಯಲ್ಲಿ ಸೇರಿರದ ಬಹುಸಂಖ್ಯಾತ ಸಮುದಾಯವೊಂದರ ಮುಂಚೂಣಿ ಮುಖಂಡರು ತಮ್ಮ ಅನುಯಾಯಿಗಳೂಡನೆ ಹೋರಾಟಕ್ಕಿಳಿದರು. ಹೋರಾಟದ ತೀಕ್ಷಣತೆಗೆ ಬೆಚ್ಚಿ ಬಿದ್ದ ಸರಕಾರ, ವರದಿಯ ಅನುಷ್ಠಾನದಲ್ಲಿ ತೀವ್ರ ಸ್ವರೂಪದ ಬದಲಾವಣೆಗೆ ಮುಂದಾಯಿತು.

ನ್ಯಾ. ಒ. ಚಿನ್ನಪ್ಪರೆಡ್ಡಿ ಅವರು ತಮ್ಮ ವರದಿಯಲ್ಲಿ ಹಿಂದುಳಿದ ವರ್ಗಗಳನ್ನು 2 ಪ್ರವರ್ಗಗಳಲ್ಲಿ ವಿಂಗಡಿಸಿದ್ದರು. ಆದರೆ, ಸರಕಾರ 3A ಮತ್ತು 3B ಎಂಬ 2 ಹೊಸ ಪ್ರವರ್ಗಗಳನ್ನು ಸೃಜಿಸಿ, ಬಹುತೇಕ ವರದಿಯಲ್ಲಿ ಸೇರಿಸಿಲ್ಲದ, ಹಿಂದುಳಿದ ವರ್ಗಗಳೆಂದೂ ಪರಿಗಣಿಸದ, ಸಮುದಾಯಗಳೆಲ್ಲವನ್ನೂ, ಆ ಹೊಸ ಪ್ರವರ್ಗಗಳಲ್ಲಿ ಸೇರಿಸಿದ್ದಲ್ಲದೆ, ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಗರಿಷ್ಠ ಮಿತಿಯನ್ನೂ ದಾಟಿ ಕೋಟ ನಿಗದಿ ಮಾಡಿತು. ಪ್ರವರ್ಗ -1, ಪ್ರವರ್ಗ-2A, 2B ಹಾಗೂ 3A, 3B ಎಂದು ಹೊಸದಾಗಿ ಪ್ರವರ್ಗಗಳನ್ನು ವಿಂಗಡಣೆ ಮಾಡಿ, ಪರಿಶಿಷ್ಟ ವರ್ಗಗಳೂ ಸೇರಿದಂತೆ ಮೀಸಲಾತಿಯ ಗರಿಷ್ಠ ಮಿತಿಯನ್ನೂ ಮೀರಿ ಹೋಗಿ ಆದೇಶವೊಂದನ್ನು ಎಪ್ರಿಲ್ 1994ರಲ್ಲಿ ಹೊರಡಿಸಿತು. ಅದರ ಕಾನೂನು ಭದ್ರತೆಗಾಗಿ ಕಾಯ್ದೆಯನ್ನೂ ರೂಪಿಸಿತು (THE KARNATAKA SCHEDULED CASTES SCHEDULED TRIBES AND OTHER BACKWARD CLASSES, reservation of seats in educational institutions and of appointment or posts in the services under the state, ACT, 1994). ತಮಿಳುನಾಡು ಮಾದರಿಯಲ್ಲಿ, ಜನಸಂಖ್ಯೆ ಆಧರಿಸಿ ಶೇ. 73ರಷ್ಟು ಮೀಸಲಾತಿ ಕೋಟವನ್ನು ಕಾಯ್ದೆಯಲ್ಲಿ ಅಳವಡಿಸಿತು. ಕಾಯ್ದೆ ರೀತ್ಯಾ(ಕಲಂ 6)ವಿವಿಧ ಪ್ರವರ್ಗಗಳಿಗೆ ಹಂಚಿಕೆ ಮಾಡಿರುವ ಮೀಸಲಾತಿ ಕೋಟ ಹೀಗಿದೆ: ಪ. ಜಾ. 18, ಪ. ಪಂ. 5, ಪ್ರವರ್ಗ 1(most backward) 7, ಪ್ರವರ್ಗ 2A(more backward) 20, ಪ್ರವರ್ಗ 2B(more backward) 6, ಪ್ರವರ್ಗ 3A(backward) 7 ಮತ್ತು ಪ್ರವರ್ಗ 3B(backward) 10.

ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವೇನೋ ಎಲ್ಲಾ ಜನಸಮುದಾಯಗಳಿಗೂ ‘ನ್ಯಾಯ’ ಒದಗಿಸಿರುವ ಸಂತೃಪ್ತ ಭಾವ ತಳೆದು, ಮುಂದೆ ಬರಲಿರುವ ವಿಧಾನಸಭೆಯ ಚುನಾವಣೆಗೆ ಹುರುಪಿನಿಂದ ಸಜ್ಜುಗೊಳ್ಳತೊಡಗಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯ, ರಿಟ್ ಅರ್ಜಿ ಮೇರೆಗೆ,(WP NO. 438/94) ತನ್ನ ಮಧ್ಯಂತರ ಆದೇಶದಲ್ಲಿ ಮೀಸಲಾತಿ ಕೋಟ ಶೇ. 50ಕ್ಕೆ ಮಿತಿ ಗೊಳಿಸಲು ನಿರ್ದೇಶಿಸಿದ ಪ್ರಯುಕ್ತ, ಸರಕಾರ ನ್ಯಾಯಾಲಯದ ಕಟ್ಟಾಜ್ಞೆಯನ್ನು ಪಾಲಿಸ ಬೇಕಾದುದರಿಂದ ಸೆಪ್ಟಂಬರ್ 1994ರಲ್ಲಿ ಮೀಸಲಾತಿ ಕೋಟವನ್ನು ಶೇ. 50ಕ್ಕೆ ಮಿತಿಗೊಳಿಸಿ ಮರು ಆದೇಶ ಹೊರಡಿಸಿತು. 1994ರ ಕೊನೆಯ ದಿನಗಳಲ್ಲಿ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಹೀನಾಯವಾಗಿ ಸೋತು ಹೋಯಿತು. ಪಡೆದ ಸೀಟುಗಳು ಕೇವಲ 34!. ಜನತಾಪಕ್ಷ ಬಹುಮತ ಗಳಿಸಿದುದರಿಂದ ದೇವೇಗೌಡರು ಮುಖ್ಯಮಂತ್ರಿ ಗದ್ದುಗೆಗೆ ಏರಿದರು. ಮುಂಬರುವ ಚುನಾವಣೆಯನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು, ಶೇ. 95ರಷ್ಟೂ ಜನಸಮುದಾಯಗಳನ್ನು ಮೀಸಲಾತಿಗೆ ಒಳ ಪಡಿಸಿದ್ದರೂ, ಕಾಂಗ್ರೆಸ್ ಮರಳಿ ಅಧಿಕಾರ ಗಳಿಸುವಲ್ಲಿ ವಿಫಲವಾಯಿತು. ಮತ್ತೊಂದು ವಿಷಯವೆಂದರೆ, ಮೀಸಲಾತಿಯಿಂದ ಹೊರಗುಳಿದ ಜನ ಸಮುದಾಯಗಳು ಮಾತ್ರ ಕೆಲವೇ ಕೆಲವು, ಅವುಗಳೆಂದರೆ -ಬ್ರಾಹ್ಮಣ, ಆರ್ಯ ವೈಶ್ಯ, ಮೊದಲಿಯಾರ್, ಬೇಡಗಂಪಣ, ವೈಷ್ಣವ ನಗರ್ಥ, ಪೊಮ್ಮಲ, ಜೈನ್, ನಾಯರ್ ಇತ್ಯಾದಿ ಬೆರಳೆಣಿಕೆಯಷ್ಟು. ಅವುಗಳ ಒಟ್ಟು ಜನಸಂಖ್ಯೆ 25 ಲಕ್ಷವನ್ನೂ ಮೀರಿಲ್ಲ! ಶೇ.95ರಷ್ಟೂ ಜನಸಮುದಾಯವನ್ನು ಮೀಸಲಾತಿಗೆ ಒಳಪಡಿಸಿಯೂ ಹಾಗೂ ಮೀಸಲಾತಿ ಮಿತಿ ಹೆಚ್ಚಿಸಿರುವುದರ ಕಾನೂನು ಭದ್ರತೆಗಾಗಿ ಕಾಯ್ದೆ ರೂಪಿಸಿಯೂ, ಸರ್ವೋಚ್ಚ ನ್ಯಾಯಾಲಯದಲ್ಲಿ ಮೀಸಲಾತಿ ಕೋಟ ಹೆಚ್ಚಿಸಲು ಇರುವ ಅಸಾಧಾರಣ ಸಂದರ್ಭವನ್ನು ಮಾತ್ರ ಸಮರ್ಥನೀಯವಾಗಿ ಮನದಟ್ಟು ಮಾಡಿಕೊಡುವಲ್ಲಿ ಸರಕಾರ ಸರ್ವ ವಿಧದಲ್ಲಿಯೂ ವಿಫಲವಾಗಿರುವುದು ಎದ್ದು ಕಾಣಿಸುತ್ತಿದೆ. ನ್ಯಾಯಾಲಯದಲ್ಲಿ ವಿಫಲವಾದರೂ, ತಮಿಳುನಾಡು ಮಾದರಿಯಲ್ಲಿ ಕಾಯ್ದೆಯನ್ನು, ಒಕ್ಕೂಟ ಸರಕಾರವು ಕಾಂಗ್ರೆಸ್ ಕೈಯಲ್ಲೇ ಇದ್ದಾಗ್ಯೂ 9ನೇ ಅನುಸೂಚಿಯಲ್ಲಿ ಸೇರಿಸಲು ಸರಕಾರ ಪ್ರಯತ್ನಿಸದಿರುವುದೂ ಕೂಡಾ ಐತಿಹಾಸಿಕ ಪ್ರಮಾದ!

ಸರಕಾರ ತನಗಿದ್ದ ಈ ಎರಡೂ ಸದವಕಾಶಗಳನ್ನೂ ಸದುಪಯೋಗ ಪಡಿಸಿಕೊಳ್ಳುವಲ್ಲಿ ಸಂಪೂರ್ಣ ಸೋತಿತೇನೋ ಸರಿ. ಆದರೆ, ಈ ವಿಫಲ ಪ್ರಯತ್ನದಿಂದ ಅನ್ಯಾಯಕ್ಕೆ ಒಳಪಟ್ಟವು ಮಾತ್ರ, ವರದಿಯಲ್ಲಿ ಮೀಸಲಾತಿಗಾಗಿ ಶಿಫಾರಸು ಮಾಡಿದ್ದ ಅರ್ಹ ಹಿಂದುಳಿದ ಸಮುದಾಯಗಳು. ವಾಸ್ತವ ಪರಿಸ್ಥಿತಿ ಹೀಗಿದ್ದರೂ, ಹಿಂದುಳಿದ ವರ್ಗಗಳೆಂದೂ ಆಯೋಗದ ವರದಿಯಲ್ಲಿ ಸೇರಿಸಿಲ್ಲದ ಸಮುದಾಯಗಳನ್ನು ಪಟ್ಟಿಯಿಂದ ಹೊರಗಿಡುವುದನ್ನು ಬಿಟ್ಟು, ಇರುವ ಶೇ.32ರಷ್ಟು ಕೋಟಾದಲ್ಲೇ ಮರು ಹಂಚಿಕೆ ಮಾಡಿ ತಿಪ್ಪೆಸಾರಿಸಿರುವುದು ಮಾತ್ರ ದುರ್ದೈವ. ಇಂತಹ ಅಸಮರ್ಪಕ ಕಾರ್ಯವಿಧಾನದಿಂದ ಘೋರ ಅನ್ಯಾಯವಾಗಿರುವುದು, ಬಹುತೇಕ ಅಲೆಮಾರಿ-ಅರೆ ಅಲೆಮಾರಿ ಸಮುದಾಯಗಳಿರುವ ಪ್ರವರ್ಗ-1 ಮತ್ತು ಪ್ರವರ್ಗ-2Bಯಲ್ಲಿರುವ ಮುಸ್ಲಿಂ ಸಮುದಾಯಗಳಿಗೆ ಮಾತ್ರ. ಸರಕಾರದ ಈ ಧೋರಣೆಯನ್ನು ಯಾವ ಹಿಂದುಳಿದ ಸಂಘ- ಸಂಸ್ಥೆಗಳೂ ನ್ಯಾಯಾಲಯದಲ್ಲಿ ಪ್ರಶ್ನಿಸುವ ಗೊಡವೆಗೆ ಹೋಗದಿರುವುದೂ ಕೂಡಾ ಮರುಕ ಹುಟ್ಟಿಸುತ್ತದೆ. ವಿಷಾದವೆಂದರೆ, ಇಷ್ಟೆಲ್ಲಾ ಅವಾಂತರಗಳಿಗೆ ಅಂದಿದ್ದ ಅಧಿಕಾರಸ್ತ ಕಾಂಗ್ರೆಸ್ ಪ್ರಭುಗಳೇ ಹೊಣೆಗಾರರಾಗಿರುವುದು!

ಇಂತಹ ವಿಷಮ ಪರಿಸ್ಥಿತಿಯಲ್ಲಿ ಸದ್ಯ ಮೀಸಲಾತಿ ಕೋಟ ಮಿತಿಯನ್ನು ಹೆಚ್ಚಿಸಲೂ ಸರಕಾರದ ಮುಂದೆ ಮಂಡಿಯೂರಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ತನಾದವನ್ನು ಕೇಳಿಸಿಕೊಳ್ಳುವವರು ಯಾರು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top