ಸರಕಾರಿ ಬ್ಯಾಂಕುಗಳ ಖಾಸಗೀಕರಣ: ಹಿನ್ನೆಲೆ ಮತ್ತು ಔಚಿತ್ಯ | Vartha Bharati- ವಾರ್ತಾ ಭಾರತಿ

--

ಸರಕಾರಿ ಬ್ಯಾಂಕುಗಳ ಖಾಸಗೀಕರಣ: ಹಿನ್ನೆಲೆ ಮತ್ತು ಔಚಿತ್ಯ

ಭಾಗ-2

ಉದಾರೀಕರಣದ ಬಳಿಕ ತಪ್ಪಿದ ಆದ್ಯತೆಗಳು:

1991ರ ಬಳಿಕ ಬಂದ ಹೊಸ ಆರ್ಥಿಕ ನೀತಿಯ ಪರಿಣಾಮವಾಗಿ ಹಣಕಾಸು ರಂಗವನ್ನೂ ಅನೇಕ ನಿಯಂತ್ರಣಗಳಿಂದ ಮುಕ್ತಗೊಳಿಸಲಾಯಿತು. ಆಂತರಿಕ ಲೆಕ್ಕಪತ್ರಗಳನ್ನು ತಯಾರಿಸುವ ಪದ್ಧತಿ, ನಷ್ಟಸಂಭಾವ್ಯ ಸಾಲಗಳನ್ನು ಗುರುತುಹಾಕುವ ಕ್ರಮ, ಆಯ-ವ್ಯಯವನ್ನು ತೋರಿಸುವ ವಿಧಾನ, ವ್ಯವಹಾರ ಮತ್ತು ಬಂಡವಾಳದ ಅನುಪಾತವನ್ನು ನಿರ್ಧರಿಸುವ ರೀತಿಗಳನ್ನು ಅಂತರ್‌ರಾಷ್ಟ್ರೀಯ ನೀತಿಗಳಿಗನುಸಾರವಾಗಿ ಬದಲಾಯಿಸಲು ಆರಂಭವಾಯಿತು. ಲಾಭದಾಯಕತೆಗೆ ಪ್ರಾಶಸ್ತ್ಯ ಬಂತು. ಶಾಖೆಗಳನ್ನು ತೆರೆಯುವ ಮತ್ತು ಮುಚ್ಚುವ ಸ್ವಾಯತ್ತತೆಯನ್ನು ಬ್ಯಾಂಕುಗಳ ನಿರ್ದೇಶಕ ಮಂಡಳಿಗೆ ನೀಡಲಾಯಿತು; ನಷ್ಟವಾಗುತ್ತಿದ್ದ ಶಾಖೆಗಳನ್ನು ಮುಚ್ಚಲಾಯಿತು, ಇಲ್ಲವೇ ಹತ್ತಿರದ ಶಾಖೆಯ ಜೊತೆ ವಿಲೀನ ಮಾಡಲಾಯಿತು. ಆದ್ಯತಾ ರಂಗದ ಮರುವ್ಯಾಖ್ಯಾನ ಮಾಡಿ ಇನ್ನು ಹಲವು ಉದ್ದಿಮೆ, ವ್ಯವಹಾರಗಳನ್ನು ಈ ರಂಗವೆಂದು ಪರಿಗಣಿಸಲಾಯಿತು.

ಲಾಭಸಂಪಾದನೆಯು ಗುರಿಯಾದಾಗ ಸರಕಾರಿ ಬ್ಯಾಂಕುಗಳ ವ್ಯವಹಾರದ ಮಾದರಿಯಲ್ಲಿ ಆಮೂಲಾಗ್ರವಾದ ಬದಲಾವಣೆಗಳು ಆರಂಭವಾದವು. ವೆಚ್ಚ ಕಡಿಮೆ ಮಾಡಿ, ಹೆಚ್ಚು ಆದಾಯ ದೊರೆಯಬಹುದಾದ ಸಾಲಗಳು ಮತ್ತು ಸೇವೆಗಳಿಗೆ ಉತ್ತೇಜನ ನೀಡುವ ಕ್ರಮದಲ್ಲಿ ಬ್ಯಾಂಕುಗಳು ತೊಡಗಿಸಿಕೊಂಡವು. ಸಣ್ಣ ಮಟ್ಟದ ಸಾಲಗಳ ಬದಲಾಗಿ ದೊಡ್ಡ ದೊಡ್ಡ ಸಾಲಗಳಿಗೆ ಪ್ರಾಶಸ್ತ್ಯ ನೀಡಲಾಯಿತು. ಬೃಹತ್ ಕೈಗಾರಿಕೆಗಳು, ಮೂಲಸೌಕರ್ಯ ಒದಗಿಸುವ ಕಂಪೆನಿಗಳು, ಕಟ್ಟಡ ನಿರ್ಮಾಣ ಕಂಪೆನಿಗಳು ಬ್ಯಾಂಕುಗಳಿಗೆ ಆಪ್ತವಾದವು. ರಾಜಕೀಯ ಮಟ್ಟದ ಒತ್ತಡಗಳೂ ಹೆಚ್ಚತೊಡಗಿತು.

ಬದಲಾದ ಆದ್ಯತೆಗಳ ಪರಿಣಾಮ ಗ್ರಾಮೀಣ ಮತ್ತು ಅರೆಪಟ್ಟಣಗಳಲ್ಲಿರುವ ಬಡರೈತರ ಮೇಲೆ ಆಯಿತು. ಬ್ಯಾಂಕುಗಳು ಬೇಕಾದಷ್ಟು ಸಾಲವನ್ನು ಕ್ಲಪ್ತ ಸಮಯಕ್ಕೆ ಕೊಡಲು ಹಿಂದೇಟು ಹಾಕುವಾಗ ರೈತರು ಮತ್ತೆ ಬಡ್ಡಿವ್ಯಾಪಾರಿಗಳ ಮೊರೆ ಹೋಗಬೇಕಾಯಿತು. ನಿನ್ನೆಯ ಮೊದಲ ಕೋಷ್ಟಕದಲ್ಲಿ ಹೇಳಿದಂತೆ 1991ರಲ್ಲಿ ಅವರ ಪಾಲು ಶೇ. 17.5 ಇದ್ದುದು 2002ಕ್ಕೆ ಶೇ. 26.8 ಏರಿತ್ತು, ಬ್ಯಾಂಕುಗಳ ಸಾಲದ ಪ್ರಮಾಣ ಶೇ. 35.2ರಿಂದ ಶೇ. 26.3ಕ್ಕೆ ಇಳಿದಿತ್ತು. ಹಿಂದಿನ ಆರ್‌ಬಿಐ ಗವರ್ನರ್ ಡಿ.ಸುಬ್ಬರಾಯರ ಪ್ರಕಾರ ಗ್ರಾಮೀಣ ಶಾಖೆಗಳ ಸಂಖ್ಯೆಯ ಇಳಿಕೆ ಇದಕ್ಕೆ ಒಂದು ಮುಖ್ಯ ಕಾರಣವಾಗಿತ್ತು. ಕೇಂದ್ರ ಸರಕಾರದ 2010ರ ಮತ್ತೊಂದು ವರದಿಯ ಪ್ರಕಾರ ಬಡ್ಡಿವ್ಯಾಪಾರಿಗಳ ಸಾಲದ ಮೇಲೆ ಶೇ. 20ರಿಂದ ಶೇ. 35ರ ತನಕ ಬಡ್ಡಿಯನ್ನು ತೆರಬೇಕಿತ್ತು.

ಮೇಲ್ವಿಚಾರಣೆಯ ವೆಚ್ಚ ಹೆಚ್ಚಾಗಿರುವ ಸಣ್ಣ ಸಣ್ಣ ಸಾಲಗಳಿಗೆ ಕಡಿವಾಣ ಹೇರಲಾಯಿತು; ಇದರಿಂದಾಗಿ ಸಣ್ಣ ಸಾಲಗಾರರ (ರೂಪಾಯಿ 2 ಲಕ್ಷದ ತನಕದ ಸಾಲಗಳ) ಸಂಖ್ಯೆ ಮತ್ತು ಸಾಲದ ಪ್ರಮಾಣ, ಮೇಲಿನ ಕೋಷ್ಟಕ ದಲ್ಲಿ ಉಲ್ಲೇಖಿಸಿದಂತೆ 1999ರಿಂದೀಚೆಗೆ ಕುಸಿಯುತ್ತಾ ಹೋಯಿತು.

ವಿತ್ತೀಯ ಸೇರ್ಪಡೆಗೆ ಒತ್ತು:

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ 2004-14ರ ಅವಧಿಯಲ್ಲಿ ವಿತ್ತೀಯ ಸೇರ್ಪಡೆಯ ಯೋಜನೆಗಳನ್ನು ಸರಕಾರ ಮತ್ತು ಆರ್‌ಬಿಐ ಆರಂಭಿಸಿದವು. ಅತ್ಯಂತ ಕಡಿಮೆ ಶಿಲ್ಕಿನ ಮೂಲ ಉಳಿತಾಯ ಠೇವಣಿ ಯೋಜನೆ, ಬ್ಯಾಂಕಿಂಗ್ ಕರೆಸ್ಪಾಂಡೆಂಟ್ (ಬಿಸಿ)ಗಳ ನೇಮಕಾತಿ, ಕೃಷಿ ಸಾಲದ ಕಾರ್ಡುಗಳು, ಹಣಕಾಸಿನ ಅಕ್ಷರತೆ ಮುಂತಾದ ಸ್ಕೀಮುಗಳ ಮೂಲಕ ದೇಶದ ಮೂಲೆಮೂಲೆಗೆ ಬ್ಯಾಂಕಿಂಗ್ ಸೌಲಭ್ಯವನ್ನು ತಲುಪಿಸುವ ಪ್ರಯತ್ನವನ್ನು ಮಾಡಲಾಯಿತು. 2014ರ ಬಳಿಕ ಇವುಗಳಿಗೆ ಹೊಸ ರೂಪ ಮತ್ತು ಹೆಸರು ಕೊಟ್ಟು ಮತ್ತಷ್ಟು ಉತ್ತೇಜನವನ್ನು ಸರಕಾರವೂ ಆರ್‌ಬಿಐಯೂ ನೀಡಿದವು. ಇವುಗಳ ಜೊತೆಗೆ ಪ್ರಾದೇಶಿಕ ಮಟ್ಟದಲ್ಲಿಯೇ ವ್ಯವಹಾರ ನಡೆಸುವ ಸಣ್ಣ ಸಾಲದ ಬ್ಯಾಂಕುಗಳನ್ನು ಸ್ಥಾಪಿಸಲು ಸರಕಾರ ಉತ್ತೇಜಿಸಿತು. ಸ್ವಸಹಾಯ ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮುನ್ನೆಲೆಗೆ ಬಂದವು.

2014ರ ವಸ್ತು ಸ್ಥಿತಿ:

ಮುಂದೆ 2014ರಲ್ಲಿ ನರೇಂದ್ರ ಮೋದಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯುವ ಹೊತ್ತಿಗೆ ಬ್ಯಾಂಕುಗಳ ಪರಿಸ್ಥಿತಿ ಹದಗೆಡುವ ಎಲ್ಲಾ ಸೂಚನೆಗಳು ಇದ್ದವು. ಬ್ಯಾಂಕುಗಳ ದಕ್ಷತೆ ಕುಸಿದಿತ್ತು, ವ್ಯವಹಾರ ತಗ್ಗಿತ್ತು, ನಷ್ಟದ ಭಾರ ಹೆಚ್ಚಲು ಆರಂಭವಾಗಿತ್ತು. ಇದಕ್ಕೆ ಅನೇಕ ಕಾರಣಗಳಿವೆ. ಒಂದು ಪ್ರಮುಖ ಕಾರಣ ಸಾಲ ಪಡಕೊಂಡು ಸ್ಥಾಪಿಸಲು ಹೊರಟ ದೊಡ್ಡ ದೊಡ್ಡ ಉದ್ದಿಮೆಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ, ಸ್ಥಾವರಗಳ ಸ್ಥಾಪನೆಯಲ್ಲಿ ನಿಧಾನ, ಕಾನೂನುಗಳ ತೊಡಕು ಮುಂತಾದ ವಿಘ್ನಗಳಿಂದ ನಿರ್ಮಾಣದ ಹಂತದಲ್ಲಿಯೇ ವಿಳಂಬವಾಗಿ ಉತ್ಪಾದನೆಯನ್ನು ಆರಂಭ ಮಾಡಲಾಗಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಏರುಪೇರಾಗಿ, ಇರುವ ಉದ್ದಿಮೆಗಳು ತಮ್ಮ ಸ್ಥಾಪಿತ ಉತ್ಪಾದನಾ ಸಾಮರ್ಥ್ಯಕ್ಕಿಂತ ಎಷ್ಟೋ ಕೆಳಮಟ್ಟದಲ್ಲಿ ಕಾರ್ಯವೆಸಗಬೇಕಾಗಿ ಬಂತು. ಸಿದ್ಧವಸ್ತುಗಳಿಗೆ ಬೇಡಿಕೆಯೂ ಕಡಿಮೆಯಾಗತೊಡಗಿತು.

ಈ ಎಲ್ಲ ಕಾರಣಗಳಿಂದಾಗಿ ದೊಡ್ಡ ಕೈಗಾರಿಕೆಗಳು, ಉದ್ದಿಮೆಗಳು ನಷ್ಟ ಅನುಭವಿಸಲು ಆರಂಭವಾಗಿ ಬ್ಯಾಂಕು ಸಾಲಗಳನ್ನು ಮರುಪಾವತಿ ಮಾಡಲು ತೊಡಕಾಯಿತು. ಬ್ಯಾಂಕುಗಳ ಸಾಲಗಳು ಅನುತ್ಪಾದಕವಾಗಿ ಅವುಗಳು ನಷ್ಟದತ್ತ ಜಾರಿದವು. ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ವೆಂಬ ಮಂತ್ರ ಜಪಿಸುತ್ತಿದ್ದ ಹೊಸ ಸರಕಾರ ತನ್ನ ಸ್ವಾಮ್ಯದಲ್ಲಿದ್ದ ಬ್ಯಾಂಕುಗಳ ದಕ್ಷತೆಯ ಸುಧಾರಣೆಗೆ ನಿರ್ದಿಷ್ಟವಾದ ದೂರಗಾಮಿ ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳಲಿಲ್ಲ. 2014ರಲ್ಲಿ ಪಿ.ಜೆ.ನಾಯಕ ಸಮಿತಿ ಕೊಟ್ಟ ಅನೇಕ ಸಲಹೆಗಳು ಕಾರ್ಯರೂಪಕ್ಕೆ ಬರಲಿಲ್ಲ. ತಾನೇ ನೇಮಿಸಿದ ಬ್ಯಾಂಕ್ ಬೋರ್ಡ್ ಬ್ಯೂರೋದ ಮೊದಲ ಅಧ್ಯಕ್ಷರಾಗಿದ್ದ ವಿನೋದ ರೈ ಕೊಟ್ಟಿದ್ದ ನಿರ್ದಿಷ್ಟ ಶಿಫಾರಸುಗಳು ಮೂಲೆಗುಂಪಾದವು. ಬ್ಯಾಂಕುಗಳು ಇನ್ನಷ್ಟು ಕೆಟ್ಟಸಾಲಗಳ ಹೊರೆಯಿಂದ ತತ್ತರಿಸಿದವು. ಒಂದು ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಐಎಲ್‌ಎಫ್‌ಎಸ್ ಮುಳುಗಿತು; ಖಾಸಗಿ ರಂಗದ ಪಿಎಂಸಿ ಮತ್ತು ಆಕ್ಸಿಸ್ ಬ್ಯಾಂಕುಗಳು ಸಂಕಟಕ್ಕೆ ತುತ್ತಾದವು. ನೀರವ್ ಮೋದಿ, ಮೆಹುಲ್ ಚೋಕ್ಸಿ, ಸಂದೇಸ್ರ ಸಹೋದರರು ಮುಂತಾದವರನ್ನು ಒಳಗೊಂಡಂತೆ ಸಹಸ್ರಾರು ಕೋಟಿ ರೂ. ವಂಚನೆಯ ಪ್ರಕರಣಗಳಿಂದ ಸರಕಾರಿ ಬ್ಯಾಂಕುಗಳು ಭಾರೀ ನಷ್ಟವನ್ನು ಅನುಭವಿಸಿದವು.

ಸರಕಾರಿ ಬ್ಯಾಂಕುಗಳ ಈ ಸಮಸ್ಯೆಗಳನ್ನು ಕಟ್ಟುನಿಟ್ಟಾದ ನೀತಿಯ ಮೂಲಕ ಪರಿಹರಿಸುವುದರ ಬದಲು ಎರಡು ಹಂತದಲ್ಲಿ 2018-19 ಮತ್ತು 2019-20ರಲ್ಲಿ ಅವುಗಳ ವಿಲೀನೀಕರಣವನ್ನು ಸರಕಾರ ಮಾಡಿತು. ಈ ಪ್ರಕ್ರಿಯೆಯಲ್ಲಿಯೇ ಮಗ್ನರಾಗಿ ಬ್ಯಾಂಕು ಸಿಬ್ಬಂದಿ ಮುಖ್ಯ ವ್ಯವಹಾರಕ್ಕೆ ಆದ್ಯತೆಯನ್ನು ಕೊಡಲು ಸಾಧ್ಯವಾಗಲಿಲ್ಲ. ವಿಲೀನ ಮುಗಿಯುತ್ತಿದ್ದಂತೆಯೇ ಗ್ರಾಹಕರು ತೆರಬೇಕಾದ ಎಲ್ಲಾ ಶುಲ್ಕಗಳನ್ನು ಬ್ಯಾಂಕುಗಳು ಪರಿಷ್ಕರಿಸಿವೆ-ತಮ್ಮ ಆದಾಯವನ್ನು ಹೆಚ್ಚಿಸಲೆಂದು! 2014ರಿಂದಲೇ ವೆಚ್ಚದಲ್ಲಿ ಕಡಿತ ಮಾಡುವ ಉದ್ದೇಶದಿಂದ ಬ್ಯಾಂಕುಗಳು ತಮ್ಮ ಶಾಖೆಗಳನ್ನು ಮುಚ್ಚುವ ಕ್ರಮಗಳನ್ನು ಕೈಗೊಂಡಿವೆ.

ಕೆಳಗಿನ ಕೋಷ್ಟಕದಲ್ಲಿ ತಿಳಿಸಿದಂತೆ 2015ರಲ್ಲಿ ಗ್ರಾಮೀಣ ಶಾಖೆಗಳ ಸಂಖ್ಯೆ 30,085 ಇದ್ದುದು 2019ಕ್ಕೆ 29,119ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ ಪಟ್ಟಣಗಳಲ್ಲಿನ ಶಾಖೆಗಳ ಸಂಖ್ಯೆಯೂ 17,863 ರಿಂದ 17,119ಕ್ಕೆ ಕುಸಿಯಿತು. ಒಟ್ಟು ಶಾಖೆಗಳ ಸಂಖ್ಯೆ 2018ರಲ್ಲಿ 90,273 ಇದ್ದರೆ 2019ಕ್ಕೆ ಅದು 88,824ಕ್ಕೆ ಕುಸಿಯಿತು. ಇದರ ಜೊತೆಗೆ ವೆಚ್ಚ ಉಳಿಸಿ ದಕ್ಷತೆಯನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿ ಸಿಬ್ಬಂದಿಯ ನೇಮಕಾತಿಯಲ್ಲಿ ಕಡಿತವಾಗತೊಡಗಿತು. 2014ರಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 8,46,293 ಇತ್ತು; 2019ಕ್ಕೆ ಅದು 8,18,507 ಕುಸಿಯಿತು. ಆದರೆ, ಅಧಿಕಾರಿಗಳು, ಕಾರಕೂನರು ಮತ್ತು ಸಹಾಯಕರು ಮಾಡಬೇಕಾದ ಕೆಲಸಕ್ಕೆ ಗುತ್ತಿಗೆ ಆಧಾರದಲ್ಲಿ ಹೊರಗಿನವರ ಸೇವೆಯನ್ನು ಬ್ಯಾಂಕುಗಳು ಬಳಸಿಕೊಳ್ಳುತ್ತವೆ-ಉದಾಹರಣೆಗಾಗಿ ಗ್ರಾಹಕರ ಹಿನ್ನೆಲೆಯನ್ನು ತಿಳಿಯಲು, ಸಾಲದ ಅರ್ಜಿಗಳನ್ನು ತುಂಬಲು, ಅಡವಿಡಲಾಗುವ ಆಸ್ತಿಗೆ ಸಂಬಂಧಿಸಿದ ಹಕ್ಕುಪತ್ರಗಳ ವಿಚಾರಣೆಗೆ, ಸಾಲದ ವಸೂಲಿಗೆ ಹೊರಗುತ್ತಿಗೆಯವರನ್ನು ನೇಮಿಸಲಾಗುತ್ತಿದೆ.

ಒಟ್ಟಿನಲ್ಲಿ ಇಂದು ಸರಕಾರಿ ಕ್ಷೇತ್ರದ ಬ್ಯಾಂಕುಗಳು ರಾಷ್ಟ್ರೀಕರಣದ ಉದ್ದೇಶಗಳಿಂದ ವಿಮುಖವಾಗಿವೆ. ಅವುಗಳನ್ನು ತಮ್ಮ ಮೂಲ ಉದ್ದೇಶಗಳಿಗೆ ಬದ್ಧರಾಗುವಂತೆ ಮಾಡುವಲ್ಲಿಯೇ ಸರಕಾರದ ನಿಲುವು ಅಸ್ಪಷ್ಟ. 2020 ಮತ್ತು 2021ರ ಕೊರೋನ ಮಹಾಮಾರಿಯಿಂದಾದ ಆರ್ಥಿಕ ಹಿಂಜರಿತ ಈ ಬ್ಯಾಂಕುಗಳ ಪುನಶ್ಚೇತನಕ್ಕೆ ತೀವ್ರವಾದ ಧಕ್ಕೆಯನ್ನುಂಟು ಮಾಡಿದೆ. ಈ ಸಂದರ್ಭದಲ್ಲಿ ಸರಕಾರಿ ಬ್ಯಾಂಕುಗಳನ್ನು ಖಾಸಗಿಯವರಿಗೆ ಮಾರುವುದು ದೇಶದ ಆರ್ಥಿಕತೆ ಹೇಗೆ ಪೂರಕವಾಗಬಲ್ಲುದು?
ಈ ಹಿಂದೆ ವಿವರಿಸಿದಂತೆ ಖಾಸಗಿ ಒಡೆತನಕ್ಕೆ ಬ್ಯಾಂಕುಗಳು ಬಂದಾಗ ಹಣಕಾಸು ರಂಗದ ಮೇಲೆ ಮತ್ತು ಆ ಮೂಲಕ ದೇಶದ ಅರ್ಥವ್ಯವಸ್ಥೆಯ ಮೇಲೆ ಸ್ಥೂಲವಾಗಿ ಕೆಳಗಿನ ಪರಿಣಾಮಗಳು ಆಗಲಿವೆ:
1. ಗ್ರಾಮೀಣ ಮತ್ತು ಸಣ್ಣ ಸಣ್ಣ ಪಟ್ಟಣಗಳಲ್ಲಿನ ಬ್ಯಾಂಕಿಂಗ್ ಸೌಲಭ್ಯದ ಕಡಿತ
2. ಸಮಾಜದ ಅಂಚಿನಲ್ಲಿರುವ ಅರ್ಹ ಸಾಲಾಪೇಕ್ಷಿಗಳಿಗೆ ಸಾಲದ ಕೊರತೆ
 3. ಬ್ಯಾಂಕು ವ್ಯವಹಾರ ನಡೆಸಲು ತಾಂತ್ರಿಕ ಜ್ಞಾನ ಅಗತ್ಯವಾಗಿರುವಾಗ ಅದರ ಬಗ್ಗೆ ಕನಿಷ್ಠ ಜ್ಞಾನವಿಲ್ಲದ ಮತ್ತು ಜಾಲತಾಣದ ಸಂಪರ್ಕವಿಲ್ಲದ ಹಳ್ಳಿಗಳಲ್ಲಿರುವ ಲಕ್ಷಾಂತರ ಗ್ರಾಹಕರಿಗೆ ಬ್ಯಾಂಕಿನೊಂದಿಗೆ ವ್ಯವಹಾರ ನಡೆಸುವುದು ಕಷ್ಟಸಾಧ್ಯ. 
 4. ಸಣ್ಣ ಉದ್ದಿಮೆ, ವ್ಯಾಪಾರ, ಸೇವಾ ಉದ್ದಿಮೆ, ಕಿರು ಕೈಗಾರಿಕೆ, ಸಣ್ಣ ವಾಣಿಜ್ಯ ಸಾರಿಗೆ, ಸಣ್ಣ ಭೂ ಹಿಡುವಳಿದಾರರು ನಡೆಸುವ ಕೃಷಿ ಮುಂತಾದ ರಂಗಗಳಿಗೆ ದೊರಕುವ ಸಾಲಗಳಿಗೆ ಹೊಡೆತ.
5. ಇವುಗಳ ಋಣಾತ್ಮಕ ಪ್ರಭಾವ ಉದ್ಯೋಗ ಸೃಷ್ಟಿ ಮತ್ತು ಬಡತನ ನಿರ್ಮೂಲನದ ಕಾರ್ಯಕ್ರಮಗಳ ಮೇಲೆ ಆಗಲಿದೆ.
 6. ಉಳ್ಳವರಿಗೆ ಬ್ಯಾಂಕು ಸೌಲಭ್ಯಗಳನ್ನು ಮತ್ತಷ್ಟು ಒದಗಿಸಿ, ಆರ್ಥಿಕ ಅಸಮಾನತೆ ಇನ್ನೂ ಉಲ್ಬಣಗೊಳ್ಳಲಿದೆ.
7. ದೇಶ ವಿದೇಶಗಳ ಅನುಭವದ ಆಧಾರದಿಂದ ಗಮನಿಸಿದರೆ ಖಾಸಗಿ ಬ್ಯಾಂಕುಗಳು ಸಂಕಟಕ್ಕೆ ಗುರಿಯಾದಾಗ ಅರ್ಥವ್ಯವಸ್ಥೆಯ ರಕ್ಷಣೆಗೋಸ್ಕರ ಆ ಬ್ಯಾಂಕುಗಳಿಗೆ ಸರಕಾರ ಧನಸಹಾಯ ವನ್ನು ಜನಸಾಮಾನ್ಯರು ಕೊಡುವ ತೆರಿಗೆಯ ಹಣದಿಂದ ನೀಡಬೇಕಾಗಿ ಬಂದು ಆ ಭಾರವೂ ಜನರ ಮೇಲೆಯೇ ಬೀಳುತ್ತದೆ.

ಕೇವಲ ಒಂದು ಬ್ಯಾಂಕನ್ನು ಮಾತ್ರ ತನ್ನ ಅಧೀನದಲ್ಲಿಟ್ಟುಕೊಂಡು ಉಳಿದೆಲ್ಲ ಬ್ಯಾಂಕುಗಳನ್ನು ಖಾಸಗೀಕರಣ ಗೊಳಿಸುವ ಇರಾದೆಯನ್ನು ಸರಕಾರ ತಿಳಿಸಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ 1970ರ ಬ್ಯಾಂಕು ರಾಷ್ಟ್ರೀಕರಣದ ಕಾಯ್ದೆಯನ್ನು ತಿದ್ದುಪಡಿಮಾಡಿ ಸರಕಾರವು ಮುಂದುವರಿಯಲಿದೆ. ಒಂದು ಕಾಲಕ್ಕೆ 28 ಇದ್ದ ಸರಕಾರಿ ಬ್ಯಾಂಕುಗಳ ಸಂಖ್ಯೆ ಇಂದು 10ಕ್ಕೆ ಇಳಿದಿದೆ. ಈ ಬ್ಯಾಂಕುಗಳ ಮೂಲಕವೇ ದೇಶದ ಭೌಗೋಳಿಕ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳನ್ನು ನಿವಾರಿಸುವ ಪ್ರಯತ್ನ ಆಗಬೇಕು. ಈ ಗುರಿಯನ್ನು ಸಾಧಿಸುವ ಮೊದಲೇ ಬ್ಯಾಂಕುಗಳನ್ನು ಉದ್ಯೋಗಪತಿಗಳಿಗೆ ಮಾರಾಟ ಮಾಡಿದರೆ ದಾರಿದ್ರ್ಯ, ನಿರುದ್ಯೋಗ ಮತ್ತು ಅಸಮಾನತೆಗಳ ಸಮಸ್ಯೆಗಳು ಮತ್ತಷ್ಟು ತೀವ್ರವಾಗುತ್ತವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top