ಉತ್ತರ ಪ್ರದೇಶ ಚುನಾವಣೆ: ಬಹುಜನರ ಮುಂದಿರುವ ಸವಾಲುಗಳು | Vartha Bharati- ವಾರ್ತಾ ಭಾರತಿ

--

ಉತ್ತರ ಪ್ರದೇಶ ಚುನಾವಣೆ: ಬಹುಜನರ ಮುಂದಿರುವ ಸವಾಲುಗಳು

ಭಾರತದ ನಕ್ಷೆಯಲ್ಲಿ ಸುಮಾರು 22 ಕೋಟಿ ಜನಸಂಖ್ಯೆಯುಳ್ಳ ಉತ್ತರಪ್ರದೇಶ ರಾಜ್ಯ ಬಹಳ ಪ್ರಮುಖವಾದುದು. ವಿಶೇಷವಾಗಿ ದಲಿತ -ಬಹುಜನ ಅಧಿಕಾರ ರಾಜಕಾರಣದ ಪ್ರಯೋಗಶಾಲೆ ಹಾಗೂ ಯಶಸ್ಸುಗಳ ಕೇಂದ್ರಬಿಂದು. ಇಡೀ ರಾಷ್ಟ್ರದಲ್ಲಿಯೇ ದಲಿತ ಹಾಗೂ ಮುಸ್ಲಿಮರ ಸಾಂಸ್ಕೃತಿಕ ಐಕ್ಯತೆಯ ಜೊತೆ ಜೊತೆಗೆ ದಲಿತ ಹಾಗೂ ಬ್ರಾಹ್ಮಣಜಾತಿಗಳ ಅಧಿಕಾರ ಹೊಂದಾಣಿಕೆಯ ರಾಜಕಾರಣದ ಪ್ರಯೋಗದ ಕೇಂದ್ರಬಿಂದು ಈ ಯುಪಿ ನಾಡು. ಉತ್ತರ ಪ್ರದೇಶದ ಪ್ರಮುಖ ಜಾತಿ -ಸಮುದಾಯಗಳ ಸುಮಾರು ಶೇಕಡಾವಾರು ಜನಸಂಖ್ಯೆ, ದಲಿತರು ಶೇ. 22, ಮುಸ್ಲಿಮರು ಶೇ. 19, ಯಾದವರು ಶೇ. 10, ಬ್ರಾಹ್ಮಣರು ಶೇ. 9, ರಜಪೂತರು ಶೇ. 5. ಈ ಜಾತಿಗಳೇ ಅಧಿಕಾರದ ನಿರ್ಣಾಯಕ ಶಕ್ತಿ ಕೇಂದ್ರಗಳು.

ಇಂತಹ ಯುಪಿಯಲ್ಲಿ ದಲಿತರ ಹೆಸರಿನಲ್ಲಿನ ನಾಲ್ಕು ಬಾರಿ ಅಧಿಕಾರ ಹೊಂದಾಣಿಕೆಯ ದಲಿತ ಮುಖ್ಯಮಂತ್ರಿಯನ್ನು ಕಂಡ ನಂತರವೂ ದಲಿತರ ಬದುಕಿನ ಸ್ಥಿತಿ-ಗತಿಗಳಲ್ಲಿ ದೊಡ್ಡಮಟ್ಟದ ಪಲ್ಲಟಗಳೇನೂ ಸಂಭವಿಸಲಿಲ್ಲ. ಹಾಗೆಯೇ ಭೂತಕಾಲದ ಆಡಳಿತಗಾರರಾಗಿದ್ದ, 1993ರ ವಿಧಾನಸಭಾ ಚುನಾವಣೆಯಲ್ಲಿ 28 ಮಂದಿ, 1996ರಲ್ಲಿ 38, 2002ರಲ್ಲಿ 46, 2007ರಲ್ಲಿ 56, 2012ರಲ್ಲಿ 68, 2017ರಲ್ಲಿ 25 ಮಂದಿ ಮುಸ್ಲಿಮರು ಗೆದಿದ್ದರು. ಯುಪಿ ಮುಸ್ಲಿಮರ ಜನಸಂಖ್ಯೆಯ ಅನುಪಾತದಲ್ಲಿ ಕನಿಷ್ಠ 90 ಜನ ವಿಧಾನ ಸಭೆಯಲ್ಲಿ ಪಾಲು ಪಡೆಯಬೇಕಿತ್ತು, ಆದರೆ ಇದುವರೆಗೂ ಅದು ಸಾಧ್ಯವಾಗಲಿಲ್ಲ. 2017ರ ಯುಪಿ ಚುನಾವಣೆಯಲ್ಲಿ ಎಸ್ಪಿ-ಬಿಎಸ್ಪಿ- ಕಾಂಗ್ರೆಸ್‌ನ ದಲಿತ -ಒಬಿಸಿ ಮತದಾರರೇ ಅವರದೇ ಪಕ್ಷದ ಮುಸ್ಲಿಂ ಅಭ್ಯರ್ಥಿಗಳಿಗೆ ಮತನೀಡಲಿಲ್ಲ ಎಂಬ ಕಟು ಸತ್ಯವನ್ನು ಯುಪಿಯ ದಲಿತ-ಒಬಿಸಿ ಪಕ್ಷಗಳು ಹಾಗೂ ಈ ಸಮುದಾಯಗಳ ಮುಖಂಡರು ಮನಗಾಣ ಬೇಕಿದೆ. (ಕರ್ನಾಟಕದ ಜಾತಿ ರಾಜಕಾರಣವೂ ಇದರಿಂದ ಹೊರತಾಗಿಲ್ಲ) ಹೊಂದಾಣಿಕೆಯ ರಾಜಕಾರಣದ ಪ್ರಮುಖ ಪಾಲುದಾರರಾದ, ಒಮ್ಮೆ ದಲಿತ ರಾಜಕಾರಣದ ಜೊತೆ ಮತ್ತೊಮ್ಮೆ ಯಾದವ್/ಠಾಕೂರ್ ಜಾತಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಮುಸ್ಲಿಮರ ವಿಷಯದಲ್ಲೂ ಇದೇ ಆಗಿದೆ.

ಸ್ವತಂತ್ರ ಭಾರತದಲ್ಲಿ ಸವರ್ಣೀಯರ ಆಳ್ವಿಕೆಯಲ್ಲಿನ ಪಿತೂರಿಯು ಮುಸ್ಲಿಮರನ್ನು ಅಧಿಕಾರದ ಮೂಲಗಳಿಂದ (ಸಾಮಾಜಿಕ -ಆರ್ಥಿಕ-ರಾಜಕೀಯ-ಶೈಕ್ಷಣಿಕ-ಉದ್ಯೋಗ ಕ್ಷೇತ್ರಗಳಿಂದ) ದೂರ ತಳ್ಳುವ ಮೂಲಕ, ಅವರನ್ನು ಅಸಮರ್ಥರು ಮತ್ತು ಅಸಹಾಯಕರನ್ನಾಗಿ ಮಾಡಲಾಯಿತು. ಅವರ ಹೀನ ಕಠೋರ ನೈಜ ಸ್ಥಿತಿ-ಗತಿಗಳನ್ನು 2006ರ ಜಸ್ಟಿಸ್ ರಾಜೇಂದ್ರ ಸಾಚಾರ್ ವರದಿಯಲ್ಲಿ ಕಾಣಬಹುದಾಗಿದೆ. ಮುಸ್ಲಿಮರ ಈ ಚಿಂತಾಜನಕ ಪರಿಸ್ಥಿತಿಯು ದಲಿತರ ಸ್ಥಿತಿಗಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ. ಸ್ವತಂತ್ರ ಭಾರತದ ಆಡಳಿತ ವರ್ಗವು ಸಹ ಈ ಮುಸ್ಲಿಮರ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟುಮಾಡುವ ಹೊಣೆಗಾರಿಕೆಯನ್ನು ಹೊರಲಿಲ್ಲ, ಇಂತಹ ಭಾರತೀಯ ಮುಸ್ಲಿಮರ ಶೋಚನೀಯ ಬದುಕಿಗೆ ಜಾತ್ಯತೀತವಾದಿಗಳು ಎಂದು ಕರೆಯಲ್ಪಡುವವರ ಜವಾಬ್ದಾರಿಯೇನೂ ಕಡಿಮೆ ಇರಲಿಲ್ಲ, ಅವರು ಜಾಣತನದಿಂದ ಈ ಸಮುದಾಯದ ಮನಸ್ಸಿನಲ್ಲಿ ಅಧಿಕಾರ ಕೇಂದ್ರಗಳಲ್ಲಿ ಭಾಗವಹಿಸುವ ಅವಕಾಶಗಳ ಸೃಷ್ಟಿಯ ಬದಲು, ‘ಭದ್ರತೆ’ಯೇ ಮೊದಲ ಆದ್ಯತೆಯ ವಿಷಯವಾಗಿಸಿ ಅವರ ಮನಸ್ಸು-ಮೆದುಳುಗಳಲ್ಲಿ ತುರುಕಲಾಯಿತು.

ಅದಕ್ಕಾಗಿಯೇ ಕಳೆದ ಯುಪಿ ಚುನಾವಣೆಯಲ್ಲಿ 143 ಸ್ಥಾನಗಳಲ್ಲಿ ಪರಿಣಾಮಕಾರಿ ಪ್ರಭಾವ ಬೀರಬಹುದುದಾದ ಮುಸ್ಲಿಂ ಸಮುದಾಯದಲ್ಲಿ ತಮ್ಮ ಬೆಂಬಲದ ವಿನಿಮಯ(ಅಲಯನ್ಸ್) ಮಾಡಿಕೊಳ್ಳುವ ಅಥವಾ ಅಧಿಕಾರದ ಕೇಂದ್ರಗಳಲ್ಲಿ ಭಾಗವಹಿಸುವ ಒಂದಷ್ಟು ಅವಕಾಶಗಳನ್ನು ಸಹ ನೀಡಲಿಲ್ಲ. ಆದರೆ ಮುಸ್ಲಿಮರು ದಲಿತ, ಒಬಿಸಿ ಮತ್ತು ಜಾತ್ಯತೀತವಾದಿಗಳ ರಾಜಕೀಯ ದಾಳಗಳಿಗೆ ಬಲಿಯಾಗಿ ತಮ್ಮ ಪಾಲನ್ನು ಕೇಳುವುದನ್ನು ಮರೆತು ಕೇವಲ ಸುರಕ್ಷತೆಗಾಗಿ ಮಾತ್ರ ಆದ್ಯತೆ ನೀಡಬೇಕಾದ ತುರ್ತಿಗೆ ಒಳಗಾದರು. ಇಂದು ಮುಸ್ಲಿಮರು ಭದ್ರತೆ ಮಾತ್ರ ಬಯಸುತ್ತಿದ್ದಾರೆ ಎಂಬದನ್ನು ಸಂಘ ಪರಿವಾರಿಗರು ಅರ್ಥಮಾಡಿಕೊಂಡಿದ್ದಾರೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶದ ವಿಷಯವನ್ನು ಬೈಪಾಸ್ ಮಾಡುವ ಮೂಲಕ ರಾಜಕೀಯ ಕಾರ್ಯತಂತ್ರ ಹೆಣೆದು ಮುಸ್ಲಿಮರನ್ನು ಅಧಿಕಾರದಿಂದ ವಂಚಿಸಲು ಮುಂದಾಗಿದ್ದಾರೆ. ಮುಸ್ಲಿಮರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಪರ್ಯಾಯವಾಗಿ ನಿಲ್ಲಬಹುದಾದ ಪಕ್ಷ ಅಥವಾ ತಮ್ಮಿಂದಿಗೆ ನಿಜವಾಗಿಯೂ ನಿಲ್ಲುವ ಸಮುದಾಯದೊಂದಿಗೆ ಅಲಯನ್ಸ್ ಮಾಡಬೇಕಿದೆ. ಮುಸ್ಲಿಮರಿಗೆ ಅಧಿಕಾರದ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ, ಗೌರವ ಪಡೆಯುವುದು ಮೊದಲ ಆದ್ಯತೆಯಾಗಬೇಕಿದೆ.

1992 ಇಡೀ ವಿಶ್ವದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಬಹಳ ಪ್ರಮುಖ ವರ್ಷ. ಆದರೆ ಇದೇ ವರ್ಷ ಬಾಬರಿ ಮಸೀದಿಯನ್ನು ಕಳೆದು ಕೊಂಡ ಭಾರತದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಿಗೆ ಇದು ಕರಾಳ ವರ್ಷ. ವಿಶ್ವಸಂಸ್ಥೆಯು 1992ರಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ 2ನೇ ವಿಧಿಯು ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಭಾಗವಹಿಸುವ ಹಕ್ಕನ್ನು ಸ್ಪಷ್ಟವಾಗಿ ಅನುಮೋದಿಸಿ ಘೋಷಿಸಿತು. ಈ ಘೋಷಣೆಯ 4 (5) ನೇ ವಿಧಿಯು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ‘ತಮ್ಮ ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪೂರ್ಣ ಭಾಗವಹಿಸುವಿಕೆಗೆ ಅವಕಾಶಗಳನ್ನು ನೀಡಲು ಸೂಕ್ತವೆಂದು ರಾಷ್ಟ್ರಗಳು ಪರಿಗಣಿಸಬೇಕು’ ಎಂದು ಹೇಳುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಈ ‘ಅಲ್ಪಸಂಖ್ಯಾತರ ಹಕ್ಕುಗಳ ಘೋಷಣೆ’ಯನ್ನು ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ ಪ್ರತಿಯೊಂದು ದೇಶವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುತ್ತದೆ. ಆದರೆ ಭಾರತದಲ್ಲಿ ಅದೇ 1992ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಉರುಳಿಸುವ ಮೂಲಕ ಅಕ್ಷರಶಃ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯಲಾಯಿತು, ಭಾರತೀಯ ಮುಸ್ಲಿಮರನ್ನು ಅಭದ್ರಗೊಳಿಸಲಾಯಿತು.

ವಿಶ್ವಸಂಸ್ಥೆಯ ಆ ಘೋಷಣೆಯನ್ನು ಭಾರತದಲ್ಲಿ ವ್ಯರ್ಥಗೊಳಿಸಲಾಯಿತು. ಏಕೆಂದರೆ ಇಲ್ಲಿನ ಎಲ್ಲಾ ಸರಕಾರಗಳ ಅಧಿಕಾರ ಮತ್ತು ಆಡಳಿತ ವರ್ಗದಲ್ಲಿ ಮೇಲ್ಜಾತಿಗಳ ಹಿಡಿತವಿದೆ. ಅವರ ನಡವಳಿಕೆಯು ಮುಸ್ಲಿಮರ ಕುರಿತು ಅಸಡ್ಡೆ ಮಾತ್ರವಲ್ಲ ಮೂಲತಃ ಮುಸ್ಲಿಮರ ನ್ಯಾಯಯುತ ಪಾಲಿನ ವಿರುದ್ಧದ ಪಿತೂರಿಯನ್ನು ಸಹ ಒಳಗೊಂಡಿದೆ. ಇಷ್ಟೇ ಅಲ್ಲ ಅಧಿಕಾರದ ಮೂಲಗಳಲ್ಲಿ ತಮ್ಮ ಪಾಲಿಗಾಗಿ ಮೇಲ್ಜಾತಿಯ ವಿರುದ್ಧ ಹೋರಾಡುತ್ತಿರುವ ಮುಸ್ಲಿಮರ ಈ ಪ್ರತಿರೋಧವನ್ನು ಧಾರ್ಮಿಕ ವಿರೋಧಿ ಎಂದು ಬಣ್ಣ ಕಟ್ಟುವ ಹಿಂದುತ್ವದ ಗುಂಪುಗಳ ಬೆಂಬಲವೂ ಇದೆ. ಈಗ ಇರುವ ಒಂದೇ ಒಂದು ಕಾರ್ಯತಂತ್ರವೆಂದರೆ ದಲಿತ-ಮುಸ್ಲಿಮರು ಪ್ರಜಾಪ್ರಭುತ್ವದಡಿಯಲ್ಲಿ ಅಧಿಕಾರದ ಪಾಲಿಗಾಗಿ ಬಲವಾದ ಐಕ್ಯ ಹೋರಾಟದಡಿ ಮುಂದುವರಿಯುವುದು. ಮಂಡಲ್ -1 (1990, ಒಬಿಸಿ ಸಮುದಾಯಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ದೊರೆತಾಗ) ಮತ್ತು ಮಂಡಲ್-2 (2006, ಹಿಂದುಳಿದ ಸಮುದಾಯಗಳಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ದೊರೆತಾಗ) ವೇಳೆ ಒಬಿಸಿ ಪರವಾಗಿ ನಿಂತ ಏಕೈಕ ಸಮುದಾಯ ದಲಿತರು. ದಲಿತ ಸಮುದಾಯ ತನ್ನ ಜೊತೆ ಇತರ ವಂಚಿತ ಸಮುದಾಯಗಳಿಗೂ ಸಮಾನಪಾಲು ಬೇಕೆಂದು ಬಯಸುತ್ತದೆ ಮತ್ತು ಮುಸ್ಲಿಮರನ್ನು ಒಳಗೊಂಡು ಎಲ್ಲಾ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಸಾಮಾಜಿಕ ನ್ಯಾಯದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

ನೆನಪಿರಲಿ, ರಾಮಜನ್ಮಭೂಮಿಯ ವಿಮೋಚನೆಗಾಗಿ ಹೋರಾಟ ನಡೆಸುವ ಮೂಲಕ ಹಿಂದುತ್ವದ ರಾಜಕೀಯ ಪಕ್ಷ ಬಿಜೆಪಿ ಸಾವಿರಾರು ಕೋಟಿ ಪಾರ್ಟಿ ಫಂಡ್‌ನ ಸಂಪತ್ತನ್ನು ಕ್ರೋಡೀಕರಿಸುವುದರ ಜೊತೆಗೆ ಅಸಂಖ್ಯಾತ ಜೀವ ಹಾನಿಗಳನ್ನು ಉಂಟುಮಾಡಿದ್ದು ಮಂಡಲ್ ವರದಿ ಪ್ರಕಟಗೊಂಡ ನಂತರವೇ. ಸವರ್ಣೀಯರ ನೇತೃತ್ವದ ಪಕ್ಷವಾದ ಕಾಂಗ್ರೆಸ್‌ನ ಪ್ರಧಾನಿ ನರಸಿಂಹರಾವ್ ಕಾಗದದ ಮೇಲೆ ಮಾತ್ರ ಒಬಿಸಿ ಮೀಸಲಾತಿಯನ್ನು ಸೀಮಿತಗೊಳಿಸಲು ಜಾಗತೀಕರಣದ ಆರ್ಥಿಕ ನೀತಿಯನ್ನು ಜಾರಿಗೊಳಿಸಿದರು. ನಂತರ ಸ್ವದೇಶಿ ಘೋಷಣೆಯೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಭಾರತದೇಶವನ್ನು ವೇಗವಾಗಿ ಅಭಿವೃದ್ಧಿ ಗೊಳಿಸುವ ನೆಪದಲ್ಲಿ ಎಲ್‌ಪಿಜಿ(ಲಿಬರಲೈಸೇಶನ್-ಪ್ರೈವೇಟೈಸೇಶನ್ -ಗ್ಲೋಬಲೈಸೇಶನ್‌ಗಳ ಮೂಲಕ ಖಾಸಗೀಕರಣಗೊಳಿಸಿದಾಗ ಮೀಸಲಾತಿ ನಿರ್ಮೂಲನೆಗಾಗಿ ನರಸಿಂಹರಾವ್‌ಗಿಂತ ವೇಗವಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದರು. ಮಂಡಲ್    ಕಮಂಡಲದ ರಾಜಕಾರಣದಲ್ಲಿ ಒಬಿಸಿ ಮೀಸಲಾತಿಯ ವಿರುದ್ಧದ ತಂತ್ರಗಾರಿಕೆಯ ನಡುವೆ ಮುಸ್ಲಿಮರನ್ನು ಬಲಿಕೊಡಲಾಯಿತು. ಇದೇ ಸಂದರ್ಭದಲ್ಲಿ ಲಾಭದಾಯಕ ಸರಕಾರಿ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವ ನೆಪದಲ್ಲಿ ಖಾಸಗಿ ಹೂಡಿಕೆ ಸಚಿವಾಲಯಗಳನ್ನು ತೆರೆಯಲಾಯಿತು.

ಈ ಜಾಗತೀಕರಣ ನೀತಿಯಿಂದ ದೀನದಲಿತರ ಸರಕಾರಿ ಹುದ್ದೆಗಳ ಮೀಸಲಾತಿಗೆ ಹೊಡೆತ ಬಿತ್ತು. ಈ ಬೆಳವಣಿಗೆಯ ನಂತರ ದಲಿತ ಬುದ್ಧಿಜೀವಿಗಳು ಹೊಸ ತಂತ್ರದೊಂದಿಗೆ ಕಣಕ್ಕೆ ಪ್ರವೇಶಿಸಿದರು. ಕಳೆದು ಹೋಗುತ್ತಿರುವ ಸರಕಾರಿ ಹುದ್ದೆಗಳ ಅಧಿಕಾರದ ಮೂಲಗಳನ್ನು ಮತ್ತೆ ಪಡೆಯಲು ಹೊಸದೊಂದು ಕಲ್ಪನೆಯನ್ನೇ ಹುಟ್ಟು ಹಾಕಲಾಯಿತು. ಈ ಹೊಸ ಯೋಜನೆಯೇ ಮೀಸಲಾತಿಯನ್ನು ಉಳಿಸುವುದರ ಜೊತೆಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕೇಳುವುದು. ಅದರಡಿ ಸರಕಾರಿ ವಲಯದ ಉದ್ಯೋಗಗಳಾದ ಸೈನ್ಯ ಮತ್ತು ನ್ಯಾಯಾಂಗ ಕ್ಷೇತ್ರಗಳ ಜೊತೆಗೆ ಖಾಸಗಿ ವಲಯದ ಉದ್ಯೋಗಗಳಲ್ಲಿಯೂ ಮೀಸಲಾತಿಯ ಕೂಗನ್ನು ಹುಟ್ಟು ಹಾಕಲಾಯಿತು. ಸರಕಾರಿ ಮತ್ತು ಖಾಸಗಿವಲಯಗಳ ಕಾಮಗಾರಿ ಒಪ್ಪಂದಗಳು, ರಸ್ತೆ ನಿರ್ಮಾಣ, ಪಾರ್ಕಿಂಗ್, ಸಾರಿಗೆ ಟೆಂಡರ್‌ಗಳನ್ನು ಪಡೆಯುವುದು ಮತ್ತು ಆಡಳಿತದಲ್ಲಿ ದಲಿತ-ಮುಸ್ಲಿಮರ ಐಕ್ಯತೆಯು ಎಂದಿಗಿಂತಲೂ ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಬಹುತೇಕ ಅಂತರ್‌ರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ ‘‘2014ರ ನಂತರ ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ನೇತೃತ್ವದ ಸರಕಾರಗಳ ಜನವಿರೋಧಿ ಕಾಯ್ದೆಗಳು, ಪರಿಣಾಮಕಾರಿ ಕ್ರಿಮಿನಲ್ ಕಾನೂನು ಕಟ್ಟಳೆಗಳ ಸ್ಥಿರತೆಯ ಕೊರತೆಯಿಂದಾಗಿ ಭಾರತದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ದಲಿತರು ನಿರಂತರ ದಬ್ಬಾಳಿಕೆ ಮತ್ತು ತಾರತಮ್ಯವನ್ನು ಎದುರಿಸುತ್ತಿದ್ದಾರೆ’’ ಎಂದು ಹೇಳುತ್ತಿವೆ.

 ರಾಷ್ಟಮಟ್ಟದಲ್ಲಿ ದಲಿತ-ಮುಸ್ಲಿಂ ಬುದ್ಧಿಜೀವಿಗಳು ಅಧಿಕಾರ ಹಂಚಿಕೆಯ ಕಾಮನ್ ಅಜೆಂಡಾದ ಆಧಾರದ ಮೇಲೆ ಸಂಘ ಪರಿವಾರದ ಹಿಂದುತ್ವದ ರಾಜಕಾರಣವನ್ನು ತಡೆಯಲು ದಲಿತ-ಮುಸ್ಲಿಂ ಐಕ್ಯತೆಯ ಹಾದಿಯನ್ನು ಹುಡುಕುತ್ತಿರುವುದು ಬಹಳ ತೃಪ್ತಿಯ ಸಂಗತಿಯಾಗಿದೆ. ಇಂದು ಉತ್ತರ ಪ್ರದೇಶವು ರಾಷ್ಟ್ರರಾಜಕಾರಣದ ದಿಕ್ಕನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿದೆ. ಭಾರತದ ಜಾತಿ ಜನಸಂಖ್ಯಾವಾರು ಪಾಲು ಎಂಬ ಪರಿಕಲ್ಪನೆಯನ್ನೇ ತನ್ನ ಮೂಲ ರಾಜಕೀಯ ಅಜೆಂಡಾವಾಗಿಸಿಕೊಂಡು 1984ರಲ್ಲಿ ಸ್ಥಾಪಿತಗೊಂಡ ಬಿಎಸ್ಪಿಪಕ್ಷವು ಈ ಬಾರಿಯಾದರೂ ಮುಸ್ಲಿಂ ಸಮುದಾಯದ ವಿಶ್ವಾಸವನ್ನು ಪಡೆದು ಗರಿಷ್ಠ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಳ್ಳಲಿ ಎಂದು ಆಶಿಸೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top