-

ಇಂದು ಕುದ್ಮುಲ್ ರಂಗರಾವ್‌ರವರ ಜನ್ಮದಿನ

ಮಹಾತ್ಮರ ಗುರು ಕುದ್ಮುಲ್ ರಂಗರಾವ್

-

ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದ ಜನರಿಗೆ ಕುದ್ಮುಲ್ ರಂಗರಾವ್ ಸ್ವಾಭಿಮಾನ ಮತ್ತು ಘನತೆಯ ಬದುಕು ನಡೆಸಲು ಪ್ರೇರಣೆಯನ್ನು ನೀಡಿದರು. ದಲಿತರು ತಮ್ಮ ದಾಸ್ಯದ ಸಂಕೋಲೆಗಳನ್ನು ಕಳಚಿಕೊಳ್ಳಲು ಅಗತ್ಯವಾದ ಯೋಜನೆಗಳನ್ನು ರೂಪಿಸಿ ಕೈಗೆತ್ತಿಕೊಂಡರು. ವಿರೋಧವಿದ್ದರೂ, ಹಣದ ಬೆಂಬಲ ಇಲ್ಲದಾಗ್ಯೂ, ಪತ್ರಿಕೆ, ರೈಲು, ಬಸ್ಸುಗಳಿಲ್ಲದ ಆ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಊರೂರು ಅಲೆದು, ದಲಿತರ ಧಮನಿಗಳಲ್ಲಿ ಹೊಸ ಚೈತನ್ಯ ತುಂಬಿದರು.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತೀಯತೆ, ಅಸ್ಪೃಶ್ಯತೆ ಮೊದಲಾದವುಗಳು ಅನಿಷ್ಟ ಪಿಡುಗುಗಳು. ಜಾತೀಯತೆಯ ದಬ್ಬಾಳಿಕೆ, ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಲು ದಕ್ಷಿಣ ಭಾರತದಲ್ಲಿ ಆರಂಭವಾದ ಸಾಮಾಜಿಕ ಸುಧಾರಣಾ ಚಳವಳಿಯ ನಾಯಕತ್ವವನ್ನು ಮಹಾತ್ಮಾ ಜ್ಯೋತಿಬಾ ಫುಲೆ, ಶಾಹು ಮಹಾರಾಜ್, ನಾರಾಯಣಗುರು, ನಾಲ್ವಡಿ ಕೃಷ್ಣರಾಜ ಒಡೆಯರ್, ಮಹಾತ್ಮಾ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಮೊದಲಾದವರು ವಹಿಸಿದ್ದರು. ಇವರಂತೆ ಸ್ಫೂರ್ತಿ, ಪ್ರೇರಣೆ ನೀಡಿ ಮಾರ್ಗದರ್ಶಕರಾದವರು, ದಕ್ಷಿಣ ಕನ್ನಡ ಜಿಲ್ಲೆಯ ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ ಹಚ್ಚಿದ ಕುದ್ಮುಲ್ ರಂಗರಾವ್. ಇಂದು ಈ ಸಾಮಾಜಿಕ ಸುಧಾರಣಾವಾದಿ ಕುದ್ಮುಲ್ ರಂಗರಾವ್‌ರವರ 163ನೇ ಜನ್ಮದಿನ.

ಇಂದಿಗೆ ನೂರು ವರ್ಷಗಳ ಹಿಂದೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸ್ಪಶ್ಯರಲ್ಲಿ ಅರಿವು ಮೂಡಿಸಿ, ಮಕ್ಕಳಿಗಾಗಿ ಜಿಲ್ಲೆಯಲ್ಲಿ ಹತ್ತಾರು ಕಡೆ ಶಾಲೆಗಳನ್ನು ತೆರೆದು, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಿದರು. ವಿಧವೆಯರು ಮತ್ತು ದೇವದಾಸಿಯರ ಕಲ್ಯಾಣಕ್ಕಾಗಿ ಆಶ್ರಮಗಳನ್ನು ನಿರ್ಮಿಸಿ, ಶ್ರೀಮಂತರಿಂದ ನೂರಾರು ಎಕರೆ ಜಮೀನನ್ನು ಕ್ರಯಕ್ಕೆ ಕೊಂಡು ದಲಿತರ ಕೃಷಿ ಮತ್ತು ವಸತಿಗೆ ನಿವೇಶನಗಳನ್ನು ಉಚಿತವಾಗಿ ಹಂಚಿ, ದಲಿತರ ಆಶಾಕಿರಣವಾಗಿ, ಸಂಪ್ರದಾಯ ಶರಣರಿಗೆ ಸಿಡಿಲಾಗಿ ಹೋರಾಡಿದವರು.

ಆಗಿನ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಒಂದಾಗಿದ್ದ ಕಾಸರಗೋಡಿನ ಕುದ್ಮುಲ್ ಎಂಬ ಚಿಕ್ಕ ಗ್ರಾಮದಲ್ಲಿ ಪ್ರತಿಷ್ಠಿತ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ 1859 ಜೂನ್ 29ರಂದು ದೇವಪ್ಪಯ್ಯ ಮತ್ತು ಶ್ರೀಮತಿ ಗೌರಿ ದಂಪತಿಯ ಮಗನಾಗಿ ರಂಗರಾವ್ ಜನಿಸಿದರು. ಶಿಕ್ಷಣ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿದ್ದ ರಂಗರಾವ್ ಬಡವರ ಬಂಧು, ಬಡವರ ವಕೀಲರೆಂದೇ ಪ್ರಸಿದ್ಧರಾದರು. ದನಿ ಇಲ್ಲದವರಿಗೆ ದನಿ ಕೊಟ್ಟು ಆತ್ಮಸ್ಥೈರ್ಯ ತುಂಬಿ ಆಶಾಕಿರಣವಾದರು.

ತಿರುವು ನೀಡಿದ ಘಟನೆ:

1888ರಲ್ಲಿ ಮಂಗಳೂರು ಜಿಲ್ಲಾ ಕೋರ್ಟಿನಲ್ಲಿ ನಡೆದ ಅನಿರೀಕ್ಷಿತ ಘಟನೆಯು ರಂಗರಾವ್ ಅವರ ಜೀವನದಲ್ಲಿ ಹೊಸ ತಿರುವು ಸೃಷ್ಟಿಸಿತು. ಬೆಂದೂರು ಬಾಬು ಎಂಬ ಅಸ್ಪೃಶ್ಯ ವ್ಯಕ್ತಿ, ಕೋರ್ಟಿನಲ್ಲಿ ಪೇದೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದ. ಆತನನ್ನು ಆಗಿನ ಆಂಗ್ಲ ನ್ಯಾಯಾಧೀಶರು ಕೆಲಸಕ್ಕೆ ನೇಮಕ ಮಾಡಿಕೊಂಡರು. ಈ ವಿಷಯ ತಿಳಿದ ಕೆಲವರು ಒಟ್ಟಾಗಿ ಪ್ರತಿಭಟಿಸಿದರು. ನ್ಯಾಯಾಲಯವನ್ನು ಬಹಿಷ್ಕರಿಸಿ, ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದರು. ಇದನ್ನೆಲ್ಲಾ ಗಮನಿಸಿದ ರಂಗರಾವ್ ವಕೀಲ ವೃತ್ತಿಯನ್ನು ತ್ಯಜಿಸಿ, ಜೀವನಪರ್ಯಂತ ದಲಿತರ ಉದ್ಧಾರಕ್ಕಾಗಿ ತಮ್ಮ ಶಕ್ತಿಯನ್ನೆಲ್ಲ ವಿನಿಯೋಗಿಸಲು ತೀರ್ಮಾನಿಸಿದರು.

ಸಾರಸ್ವತ ಬ್ರಾಹ್ಮಣ ಸಮಾಜದ ಸಾಮಾನ್ಯ ಕುಟುಂಬದ ರಂಗರಾವ್ ಗೌತಮಬುದ್ಧ ಮತ್ತು ಬಸವಣ್ಣನವರ ಸಾಮಾಜಿಕ ಕ್ರಾಂತಿಯಿಂದ ಪ್ರಭಾವಿತರಾಗಿದ್ದರು. ‘ಪ್ರಗತಿಗೆ ವಿದ್ಯೆಯೇ ಮೂಲ’ ಎಂದು ನಂಬಿದ್ದ ರಂಗರಾವ್ ಶೋಷಿತ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಚಿಂತಿಸಿದರು. ಅಂದಿನ ಕಾಲದಲ್ಲಿ ದಲಿತರಿಗೆ ಯಾವುದೇ ಶಾಲೆಗಳಲ್ಲಿ ಪ್ರವೇಶ ಇರಲಿಲ್ಲ. ಅವರನ್ನು ಮುಟ್ಟುವುದಕ್ಕೂ ಕೆಲವರು ಹೇಸುತ್ತಿದ್ದರು. ಸಾರ್ವಜನಿಕ ಕೆರೆ, ಬಾವಿ, ಹೊಟೇಲುಗಳಲ್ಲಿ ದಲಿತರ ಪ್ರವೇಶ ನಿಷಿದ್ಧವಾಗಿತ್ತು.

ದಲಿತರನ್ನು ವಿದ್ಯಾವಂತರನ್ನಾಗಿ ಮಾಡುವುದು ಮತ್ತು ಅವರ ಶ್ರೇಯಸ್ಸಿಗಾಗಿ ದುಡಿಯುವುದು ಅಂದಿನ ಕಾಲದಲ್ಲಿ ಸಮಾಜದ ನಂಬಿಕೆಗೆ ವಿರೋಧವಾಗಿತ್ತು. ‘ದಲಿತರು ವಿದ್ಯಾವಂತರಾದರೆ, ಆರ್ಥಿಕವಾಗಿ ಪ್ರಗತಿ ಹೊಂದಿದರೆ, ಜೀತದ ಕೆಲಸವನ್ನು ಯಾರು ಮಾಡುತ್ತಾರೆ?’ ಎಂಬ ಭಯ ಸಮಾಜದಲ್ಲಿತ್ತು. ಆದ್ದರಿಂದ ದಲಿತರಿಗೆ ಶಿಕ್ಷಣ ನೀಡುವುದನ್ನು ವಿರೋಧಿಸುತ್ತಿದ್ದರು. ರಂಗರಾವ್ ಅವರು, ಡಿ.ಸಿ.ಎಂ. (ಡಿಪ್ರೆಸ್ಟ್ ಕ್ಲಾಸ್ ಮಿಷನ್) ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಮಂಗಳೂರಿನ ಕಂಕನಾಡಿ, ಮೂಲ್ಕಿ, ಬೋಳೂರು, ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್ ಕಾಡುಗಳಲ್ಲಿ ಉಚಿತ ಶಾಲೆಗಳನ್ನು ತೆರೆದರು. ಈ ಶಾಲೆಗಳನ್ನು ‘ಪಂಚಮ ಶಾಲೆಗಳು’ ಎಂದು ಕರೆಯುತ್ತಿದ್ದರು. ಸಂಪ್ರದಾಯನಿಷ್ಠ ಅಧ್ಯಾಪಕರು ಅಸ್ಪಶ್ಯರಿಗೆ ವಿದ್ಯೆ ಕಲಿಸಲು ನಿರಾಕರಿಸಿದಾಗ ಕ್ರೈಸ್ತ ಅಧ್ಯಾಪಕರನ್ನು ನೇಮಿಸಿಕೊಂಡರು. ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿ, ಮಕ್ಕಳು ಶಾಲೆಗೆ ತಪ್ಪದೆ ಬರುವಂತೆ ಪ್ರೋತ್ಸಾಹಿಸಲು ದಿನಕ್ಕೆ 2 ಕಾಸು ನಗದು ಪ್ರೋತ್ಸಾಹ ಧನವನ್ನು ಮಕ್ಕಳ ತಂದೆ-ತಾಯಿಗೆ ನೀಡುತ್ತಿದ್ದರು.

ಕುದ್ಮುಲ್ ರಂಗರಾವ್ ಅಸ್ಪಶ್ಯರ ಮಕ್ಕಳ ಮೈ-ಕೈ ತೊಳೆದು, ಅವರನ್ನು ಶುಚಿಗೊಳಿಸಿದರು. ದಲಿತರ ಮನೆಗಳಿಗೆ ಹೋಗಿ ಮಕ್ಕಳ ತಲೆಯನ್ನು ನೇವರಿಸಿ, ಅವರ ಜೊತೆ ಕುಳಿತು ಊಟ ಮಾಡಿದರು. ಅಸ್ಪಶ್ಯರ ಹಟ್ಟಿಗಳಲ್ಲೇ ಮಲಗಿ, ಮನಸ್ಸು ಗೆದ್ದರು. ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮನ ಒಲಿಸಿದರು. ಇದರ ಫಲವಾಗಿಯೇ ಜಿಲ್ಲೆಯ ಬಹುಸಂಖ್ಯಾತ ದಲಿತ ಜನ ಸಮುದಾಯದ ಪ್ರತಿಭೆಗಳು, ಬೆಳಕಿಗೆ ಬರತೊಡಗಿದವು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಸಿಕ್ಕರೆ ತಾವೂ ಹೇಗೆ ಉನ್ನತಿಗೆ ಏರಬಲ್ಲೆವು ಎಂಬುದನ್ನು ಅನೇಕ ದಲಿತರು ನಿರೂಪಿಸಿದರು.

ಭಾರತೀಯ ಸಮಾಜಕ್ಕೆ ಅಂಟಿಕೊಂಡು ಬಂದಿದ್ದ ಸಾಮಾಜಿಕ ಜಾಡ್ಯಗಳಲ್ಲಿ ಜೀತಪದ್ಧತಿಯೂ ಒಂದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುತ್ತು ಅನ್ನಕ್ಕಾಗಿ, ಅಲ್ಪ ಸಾಲಕ್ಕಾಗಿ ಧಣಿಗಳ ಮನೆಯಲ್ಲಿ ಬಂದಿಗಳಾಗಿದ್ದ ನೂರಾರು ಜೀತದಾಳುಗಳನ್ನು ಕುದ್ಮುಲ್ ರಂಗರಾವ್ ಶತಮಾನದ ಹಿಂದೆಯೇ ವಿಮೋಚನೆಗೊಳಿಸಿದರು.

ದಲಿತರಿಗೆ ವೃತ್ತಿಪರ ಶಿಕ್ಷಣ ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆ ಪ್ರಾರಂಭಿಸಿದರು. ಜೀವ ಬೆದರಿಕೆ ಬಂದರೂ ಕುಗ್ಗದೆ, ತಾವು ಸ್ಥಾಪಿಸಿದ್ದ ಡಿ.ಸಿ.ಎಂ. ಮಿಷನ್ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಗೆ, ತೋಟಗಾರಿಕೆ, ಕಸೂತಿ, ರೇಷ್ಮೆ ಹುಳ ಸಾಕಣೆ ಇತ್ಯಾದಿ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿಯನ್ನು ದಲಿತರಿಗೆ ಕೊಡಿಸಿದರು. ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದರು. ಅನ್ಯರ ಮನೆಯ ಅನ್ನಕ್ಕಿಂತ ಆತ್ಮಗೌರವದ ಗಂಜಿ ಊಟವೇ ದೊಡ್ಡದೆಂದು ತೋರಿಸಿಕೊಟ್ಟರು.

ಕೊರಗ ಜನಾಂಗದವರಿಗೆ ಕೋರ್ಟ್‌ಗುಡ್ಡೆ ಬಳಿ ಸಾಲು ಮನೆಗಳನ್ನು ಕಟ್ಟಿಸಿದರು. ಕುಲ ಕಸುಬಿನಲ್ಲಿ, ಗುಡಿ ಕೈಗಾರಿಕೆಗಳಲ್ಲಿ ತೊಡಗಲು ನೆರವಾದರು. ದಲಿತರ ಆರ್ಥಿಕ ಅಭಿವೃದ್ಧಿಗಾಗಿ, ಸಹಕಾರ ಮನೋವೃತ್ತಿ ಬೆಳವಣಿಗೆಗಾಗಿ ಕೋರ್ಟ್ ಹಿಲ್ಸ್‌ನಲ್ಲಿ ‘ಆದಿ ದ್ರಾವಿಡ ಸಹಕಾರ ಸಂಘ’ವನ್ನು ಸ್ಥಾಪಿಸಿದರು.

ಕುದ್ಮುಲ್ ರಂಗರಾವ್ ತಮ್ಮ ಸಾರಸ್ವತ ಬ್ರಾಹ್ಮಣ ಜಾತಿಯವರಿಂದಲೂ ಬಹಿಷ್ಕಾರಕ್ಕೆ ಗುರಿಯಾದರು. ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸಲಾಯಿತು. ಕ್ಷೌರಿಕರು ಕ್ಷೌರ ಮಾಡಲು, ಅಗಸರು ಬಟ್ಟೆ ಮುಟ್ಟಲು ನಿರಾಕರಿಸುವಂತೆ ವಾತಾವರಣ ಸೃಷ್ಟಿಯಾಯಿತು. ಹಾದಿಯಲ್ಲಿ ಹೋಗುವಾಗ ಪುಂಡರು ಅವಮಾನಿಸಿ ಕಲ್ಲು ತೂರಿದರು. ಈ ಅಪಮಾನ, ಕಿರುಕುಳ ಬೆದರಿಕೆಗಳಿಗೆಲ್ಲ ಕುದ್ಮುಲ್ ರಂಗರಾವ್ ತಿಲ ಮಾತ್ರವೂ ಅಂಜಲಿಲ್ಲ. ಅವರ ಧ್ಯೇಯನಿಷ್ಠೆ ಇನ್ನೂ ದೃಢವಾಯಿತು. ‘‘ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ, ಸರಕಾರಿ ನೌಕರಿಗೆ ಸೇರಿ, ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ’’ ಎಂದು ಹೇಳಿದರು. (ಅವರ ಹೇಳಿಕೆಯನ್ನೇ ಅವರ ಸಮಾಧಿಯ ಮೇಲೆ ಬರೆಯಲಾಗಿದೆ).

ದಲಿತರ ವಿಮೋಚನೆ ಆಗಬೇಕಾದರೆ, ಮೊದಲು ದಲಿತ ಮಹಿಳೆಯರ ವಿಮೋಚನೆ ಆಗಬೇಕೆಂದು ಅರಿತಿದ್ದ ಕುದ್ಮುಲ್ ರಂಗರಾವ್ ದಲಿತ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಆದ್ಯತೆ ನೀಡಿದರು. ದೂರದ ಹಳ್ಳಿಗಳಿಂದ ಬರುವ ಹೆಣ್ಣು ಮಕ್ಕಳಿಗಾಗಿ ನಗರದ ಶೇಡಿಗುಡ್ಡೆಯಲ್ಲಿ ಹಾಸ್ಟೆಲ್ ತೆರೆದರು. ಅಬಲೆಯರ ಮತ್ತು ವಿಧವೆಯರ ವಿದ್ಯಾಭ್ಯಾಸಕ್ಕಾಗಿಯೂ ಆಶ್ರಮಗಳನ್ನು ನಿರ್ಮಿಸಿದರು. ಆಶ್ರಮಗಳು ಎಲ್ಲಾ ಜಾತಿಯ ಅನಾಥ ಮಹಿಳೆಯರಿಗೆ ಮುಕ್ತವಾಗಿದ್ದವು. ಅವರಿಗೆ ರಕ್ಷಣೆಯೂ ಸಿಗುತ್ತಿತ್ತು, ಜೀವನೋಪಾಯಕ್ಕಾಗಿ ವಿವಿಧ ವೃತ್ತಿಗಳನ್ನು ಅವಲಂಬಿಸಲು ಬೇಕಾದ ತರಬೇತಿಯೂ ದೊರಕುತ್ತಿತ್ತು. ಅಂತರ್‌ಜಾತಿ ವಿವಾಹಕ್ಕೆ ಪ್ರೋತ್ಸಾಹವನ್ನು ನೀಡಿ ಅಸ್ಪಶ್ಯರ ಒಳಜಾತಿಗಳೊಂದಿಗೆ ವಿವಾಹ ಸಂಬಂಧ ಏರ್ಪಡಿಸಿದರು; ದೇವದಾಸಿಯರ ಮತ್ತು ವಿಧವೆಯರ ಮರುವಿವಾಹ ಮಾಡಿಸಿದರು.

1912ರಲ್ಲಿ ತಮ್ಮ ಮಗಳು ರಾಧಾಬಾಯಿಯನ್ನು ಮದ್ರಾಸಿನ ಡಾ. ಸುಬ್ರಾಯನ್‌ಗೆ ಕೊಡುವ ಮೂಲಕ, ತಮ್ಮ ಕುಟುಂಬದಲ್ಲೇ ಅಂತರ್ಜಾತಿ ವಿವಾಹಕ್ಕೆ ಅವಕಾಶವನ್ನು ಒದಗಿಸಿದರು. ಈ ಮದುವೆಯ ಪೌರೋಹಿತ್ಯವನ್ನು ಚಕ್ರವರ್ತಿ ರಾಜಗೋಪಾಲಚಾರ್ಯ (ರಾಜಾಜಿ) ವಹಿಸಿದ್ದರು. ಆಡಂಬರ, ವಧುದಕ್ಷಿಣೆ, ವರದಕ್ಷಿಣೆ, ದುಂದುವೆಚ್ಚಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಿದರು. ಇದು ಗಾಂಧೀಜಿಯವರ ಗಮನವನ್ನೂ ಸೆಳೆದು, ಪ್ರಭಾವವನ್ನು ಬೀರಿತು. ಮುಂದೆ ಗಾಂಧೀಜಿಯವರೇ ತಮ್ಮ ಮಗನಿಗೆ ರಾಜಾಜಿಯವರ ಮಗಳನ್ನು ಸೊಸೆಯಾಗಿ ತಂದುಕೊಂಡು, ಅಂತರ್ಜಾತಿ ವಿವಾಹಕ್ಕೆ ಅವಕಾಶ ಒದಗಿಸಿದರು.

ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದ ಜನರಿಗೆ ರಂಗರಾವ್ ಸ್ವಾಭಿಮಾನ ಮತ್ತು ಘನತೆಯ ಬದುಕು ನಡೆಸಲು ಪ್ರೇರಣೆಯನ್ನು ನೀಡಿದರು. ದಲಿತರು ತಮ್ಮ ದಾಸ್ಯದ ಸಂಕೋಲೆಗಳನ್ನು ಕಳಚಿಕೊಳ್ಳಲು ಅಗತ್ಯವಾದ ಯೋಜನೆಗಳನ್ನು ರೂಪಿಸಿ ಕೈಗೆತ್ತಿಕೊಂಡರು. ವಿರೋಧವಿದ್ದರೂ, ಹಣದ ಬೆಂಬಲ ಇಲ್ಲದಾಗ್ಯೂ, ಪತ್ರಿಕೆ, ರೈಲು, ಬಸ್ಸುಗಳಿಲ್ಲದ ಆ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಊರೂರು ಅಲೆದು, ದಲಿತರ ಧಮನಿಗಳಲ್ಲಿ ಹೊಸ ಚೈತನ್ಯ ತುಂಬಿದರು.

ರಾಜಕೀಯ ಮೀಸಲಾತಿ:

ಸಂವಿಧಾನ ಶಿಲ್ಪಿಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಜನ್ಮ ತಾಳುವ (1891 ಎಪ್ರಿಲ್ 14) ಮೂರು ವರ್ಷ ಮೊದಲೇ 1888ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಒದಗಿಸಿಕೊಟ್ಟ ಕೀರ್ತಿ ಕುದ್ಮುಲ್ ರಂಗರಾವ್‌ಗೆ ಸಲ್ಲುತ್ತದೆ. ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಬೋರ್ಡ್ ಮತ್ತು ಪುರಸಭೆಗಳಲ್ಲಿ ದಲಿತ ಜನಾಂಗದ ಸದಸ್ಯರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಲು ಜನರನ್ನು ಸಂಘಟಿಸಿ ಹೋರಾಟಕ್ಕಿಳಿದರು. ಅವರ ಅನವರತ ಹೋರಾಟದ ಫಲವಾಗಿ, ಅಂಗರ ಮಾಸ್ತರ್ ಮತ್ತು ಗೋವಿಂದ ಮಾಸ್ತರ್ ಎಂಬ ಇಬ್ಬರು ದಲಿತರು ಪ್ರಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರಾದರು.

ಕುದ್ಮುಲ್ ರಂಗರಾವ್ ಅವರ ನಿಸ್ವಾರ್ಥ ಸೇವೆ, ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆಯಿತು. ಸುಧಾರಣೆಯ ಕಾರ್ಯವನ್ನು ಮೆಚ್ಚಿ, ಅಮೆರಿಕದ ಖ್ಯಾತ ಉದ್ಯಮಿ ಹೆನ್ರಿ ಫೋರ್ಡ್, ಜಸ್ಟಿಸ್ ವಿಲ್ಬರ್ಟ್, ಡಾ. ಕಾರ್ನಾಟ್ ಹೀಗೆ ಹತ್ತಾರು ಪ್ರಮುಖರು ಡಿ.ಸಿ.ಎಂ. ಸಂಸ್ಥೆಗೆ ಅಭಿನಂದನೆ ಅರ್ಪಿಸಿದರು. ಮಂಗಳೂರಿಗೆ ಅಂದಿನ ಕಾಲದಲ್ಲಿ ಆಗಮಿಸುತ್ತಿದ್ದ ಪ್ರಮುಖರು ಡಿ.ಸಿ.ಎಂ. ಸಂಸ್ಥೆಗೆ ಭೇಟಿ ನೀಡದೆ ಹೋಗುತ್ತಿರಲಿಲ್ಲ. ಗುರುದೇವ ರವೀಂದ್ರನಾಥ ಠಾಗೋರ್, ದೀನಬಂಧು ಸಿ.ಎಸ್.ಆ್ಯಂಡ್ರೂಸ್, ಡಾ. ಅನಿಬೆಸೆಂಟ್, ಗೋಪಾಲಕೃಷ್ಣ ಗೋಖಲೆ ಮತ್ತು ಜಿ.ಕೆ.ದೇವಧರ್ ಮುಂತಾದವರೆಲ್ಲಾ ಈ ಸಂಸ್ಥೆಗೆ ಭೇಟಿ ನೀಡಿ, ಕುದ್ಮುಲ್ ರಂಗರಾವ್ ಅವರ ಮಾನವೀಯ ಸೇವೆಯನ್ನು ಕಣ್ಣಾರೆ ಕಂಡು, ಅಭಿನಂದಿಸಿದರು.

ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಹೆಗ್ಗುರುತೆನಿಸಿದ್ದ ರಂಗರಾವ್ ಅಧಿಕಾರದ ಸ್ಥಾನಗಳನ್ನು ಧಿಕ್ಕರಿಸಿ, ಸೇವಾಕಾರ್ಯವನ್ನು ಆರಿಸಿಕೊಂಡವರು. ತಮಗೆ ಸರಕಾರವು ಕೊಟ್ಟಿದ್ದ ‘ರಾವ್ ಸಾಹೇಬ್’ ಎಂಬ ಬಿರುದು ಮತ್ತು ನೂರಾರು ಸೇವಾ ಪದಕಗಳು ತಮ್ಮ ಬಳಿಯೇ ಉಳಿದರೆ, ಅಹಂಕಾರ ಸದಾ ಕಾಡಬಹುದು ಎಂದು ಭಾವಿಸಿ ಎಲ್ಲಾ ಬಿರುದು, ಪದಕ, ಪ್ರಶಸ್ತಿ ಪತ್ರಗಳನ್ನು ಬೆಂಕಿಗೆ ಹಾಕಿದರು.

ತಮ್ಮ ಅನಾರೋಗ್ಯ ಹಾಗೂ ಇಳಿ ವಯಸ್ಸಿನಲ್ಲೂ ನಿರಂತರವಾಗಿ ದಲಿತರ ಸೇವೆಯಲ್ಲಿ ಬದುಕನ್ನು ಸವೆಸಿದ ಕುದ್ಮುಲ್ ರಂಗರಾವ್ ಹೃದಯ ಬೇನೆಯ ಕಾಯಿಲೆಗೆ ತುತ್ತಾಗಿ, 1928 ಜನವರಿ 30ರಂದು ನಿಧನರಾದರು. ಅಲ್ಲಿಗೆ ದಲಿತರ ಶ್ರೇಯೋಭಿವೃದ್ಧಿಗಾಗಿ ತುಡಿಯುತ್ತಿದ್ದ ಜೀವಸೆಲೆ ಬತ್ತಿದಂತಾಯಿತು.

ಅಸ್ಪಶ್ಯರಿಂದಲೇ ಚಿರಶಾಂತಿ:

ಕುದ್ಮುಲ್ ರಂಗರಾವ್ ತಮ್ಮ ಕಡೆಯ ಆಸೆಯನ್ನು ತಮ್ಮ ವಿಲ್‌ನಲ್ಲಿ ಬರೆದಿದ್ದರು. ‘‘ಅಸ್ಪೃಶ್ಯ ಜನಾಂಗದಲ್ಲೇ ಅತಿಯಾಗಿ ಹಿಂದುಳಿದವರೆನಿಸಿದ ಜಾಡಮಾಲಿಗಳು ನನ್ನ ಪಾರ್ಥಿವ ಶರೀರಕ್ಕೆ ಶವಸಂಸ್ಕಾರ ಮಾಡಬೇಕು. ಆಗ ಮಾತ್ರ ನನಗೆ ಚಿರಶಾಂತಿ ದೊರೆಯುವುದು’’.

ಗಾಂಧೀಜಿ ಅವರು 1934 ಫೆಬ್ರವರಿ 24ರಂದು ಮಂಗಳೂರಿಗೆ ಬಂದಾಗ ಡಿ.ಸಿ.ಎಂ. ಸಂಸ್ಥೆಗೆ ಭೇಟಿ ನೀಡಿದರು. ರಂಗರಾವ್ ಮಾಡಿದ ಸೇವಾ ಕಾರ್ಯಗಳನ್ನು ಕಂಡು ಅತ್ಯಂತ ಸಂತಸಗೊಂಡರು, ಸಂಜೆ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ‘‘ಪೂಜ್ಯ ರಂಗರಾವ್‌ರಿಂದ ಸಾರ್ವಜನಿಕ ಸೇವಾ ನಿಷ್ಠೆಯನ್ನು ಮನಗಾಣಿಸಿಕೊಂಡೆ. ನಮಗೆ ಒಂದು ಉತ್ತಮ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ. ಅಸ್ಪೃಶ್ಯ ಜನಾಂಗದ ಪುನರುದ್ಧಾರ ಕಾರ್ಯದಲ್ಲಿ ಮುನ್ನಡೆದ ರಂಗರಾವ್ ನನಗೆ ಸ್ಫೂರ್ತಿ, ಮಾರ್ಗದರ್ಶಕರು, ಅಸ್ಪೃಶ್ಯತಾ ನಿವಾರಣಾ ಕಾರ್ಯದಲ್ಲಿ ಕುದ್ಮುಲ್ ರಂಗರಾವ್ ನಿಜವಾಗಿಯೂ ನನ್ನ ಗುರುಗಳು’’ ಎಂದು ಘೋಷಿಸಿದರು. ಹೀಗೆ ಮಹಾತ್ಮರ ಗುರು ಎನಿಸಿದ ಕುದ್ಮುಲ್ ರಂಗರಾವ್ ಮೇರು ಮಹಾತ್ಮರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top