-

ಕಪ್ಪು ಬರಹಗಾರ ಮತ್ತು ದಕ್ಷಿಣದ ಅನುಭವ

-

ಮೂವತ್ತರ ದಶಕದ 'ಆರ್ಥಿಕ ಕುಸಿತ'ದ ಸಮಯದಲ್ಲಿನ ಒಂದು ಘಟನೆಯನ್ನು ಅವ್ವ ಸದಾ ಹೇಳುತ್ತಿದ್ದಳು. ಆ ಸಮಯದಲ್ಲಿ ನನ್ನ ತಂದೆ-ತಾಯಿ ಎಂಟು ಮಕ್ಕಳೊಂದಿಗೆ ಜಾರ್ಜಿಯಾ ಎಂಬ ಚಿಕ್ಕಪಟ್ಟಣದಲ್ಲಿ ವಾಸ ಮಾಡುತ್ತಿದ್ದರು. ಪಾಲುಬೆಳೆಗಾರರಾಗಿದ್ದ ಅವರಿಗೆ ಆಹಾರ, ಹಿಟ್ಟು ಸಿಗುವುದೇ ದುಸ್ಸಾಧ್ಯವಾಗಿತ್ತು. 'ರೆಡ್ ಕ್ರಾಸ್' ಹಂಚುತ್ತಿದ್ದ ಹಿಟ್ಟನ್ನು ದೊರಕಿಸಿಕೊಳ್ಳಲು ಸ್ಥಳೀಯ ಅಧಿಕಾರಿ ಸಹಿ ಮಾಡಿದ ದಾಖಲೆಯೊಂದನ್ನು ಒದಗಿಸಬೇಕಾಗಿತ್ತು. ಪಟ್ಟಣಕ್ಕೆ ಹಿಟ್ಟನ್ನು ಪಡೆಯಲು ಹೋಗುವ ದಿನವೇ ಉತ್ತರದಲ್ಲಿ ವಾಸವಾಗಿದ್ದ ಚಿಗವ್ವನಿಂದ ದೊಡ್ಡದೊಂದು ಪೆಟ್ಟಿಗೆಯ ತುಂಬಾ ಬಟ್ಟೆಗಳು ಬಂದವು. ಅವು ಬಳಸಿದ್ದ ಬಟ್ಟೆಗಳೇ ಆಗಿದ್ದರೂ ಸುಸ್ಥಿತಿಯಲ್ಲಿದ್ದವು. ಅವ್ವನಿಗೆ ತೊಡುವುದಕ್ಕೆ ಒಂದು ಒಳ್ಳೆಯ ಬಟ್ಟೆ ಬೇಕಾಗಿದ್ದರಿಂದ ಅದನ್ನೇ ಹಾಕಿಕೊಂಡಳು. ಹಿಟ್ಟನ್ನು ಹಂಚುತ್ತಿದ್ದ ಕೇಂದ್ರಕ್ಕೆ ಹೋಗಿ ತನ್ನಲ್ಲಿದ್ದ ದಾಖಲೆಗಳನ್ನು ಅವ್ವ ನೀಡಿದಾಗ ಬಿಳಿಯ ಹೆಂಗಸೊಬ್ಬಳು ಸಿಟ್ಟು ಮತ್ತು ಹೊಟ್ಟೆಕಿಚ್ಚಿನಿಂದ ಅವಳತ್ತ ನೋಡಿದಳು. ''ಇಲ್ಲಿಗ್ಯಾಕೆ ಬಂದಿದ್ದೀಯಾ?'' ಬಿಳಿಯ ಹೆಂಗಸು ಕೇಳಿದಳು.

 ''ಸ್ವಲ್ಪಹಿಟ್ಟು ತೆಗೆದುಕೊಂಡು ಹೋಗಲು'' ಅವ್ವ ಉತ್ತರಿಸಿದಳು..

ಅವ್ವ ತೊಟ್ಟಿದ್ದ ಉಡುಪನ್ನೇ ನೋಡುತ್ತಾ, ''ನಿನ್ನ ತರಹ ಚೆನ್ನಾಗಿ ಬಟ್ಟೆ ತೊಟ್ಟುಕೊಂಡಿರುವವರು ಹಿಟ್ಟು ಬೇಕು ಎಂದು ಭಿಕ್ಷೆ ಬೇಡೋದಕ್ಕೆ ಇಲ್ಲಿ ಬರಲ್ಲ'' ಎಂದು ಆ ಹೆಂಗಸು ಹೇಳಿದಳು. ''ನಾನೇನು ಭಿಕ್ಷೆ ಬೇಡೋದಕ್ಕೆ ಬಂದಿಲ್ಲ, ಸರಕಾರ ಅವಶ್ಯಕತೆ ಇರುವವರಿಗೆ ಕೊಡ್ತಾ ಇರೋ ಹಿಟ್ಟು ತಗೊಂಡು ಹೋಗಕ್ಕೆ ಬಂದಿದ್ದೀನಿ. ಬೇಡವಾಗಿದ್ದರೆ ನಾನಿಲ್ಲಿಗೆ ಬರ್ತಾನೆ ಇರಲಿಲ್ಲ. ಈ ಬಟ್ಟೆ ಕೂಡ ಯಾರೋ ಕೊಟ್ಟಿದ್ದು'' ಎಂದಳು. ಅಷ್ಟು ಹೊತ್ತಿಗೆ ಆ ಹೆಂಗಸು ಅವ್ವನ ಹಿಂದೆ ನಿಂತಿದ್ದ ವ್ಯಕ್ತಿಯ ಕಡೆ ನೋಡುತ್ತಿದ್ದಳು. ತನ್ನ ಭುಜದ ಬಳಿಯಿದ್ದ ಬಿಳಿಯನಿಗೆ, ''ಈ ನಿಗ್ಗರ್‌ಗಳು ನನಗಿಂತ ಚೆನ್ನಾಗಿ ಡ್ರೆಸ್ ಮಾಡ್ಕೊಂಡು ಬರ್ತಾರೆ'' ಎಂದು ಹೇಳುತ್ತಿದ್ದಳು. ನನ್ನ ಅವ್ವ ತನ್ನೊಂದಿಗೆ ಬಂದಿದ್ದ ಮೂರು ಮಕ್ಕಳನ್ನು ಎಳೆದುಕೊಂಡು, ಅವಮಾನದಿಂದ ಅಳುತ್ತ ಮರಳಿದಳು. ''ಆ ಚಳಿಗಾಲಕ್ಕೆ ಬೇಕಾಗಿದ್ದ ಹಿಟ್ಟಿಗೆ ನೀನು ಮತ್ತು ಅಪ್ಪಏನು ಮಾಡಿದಿರಿ?'' ಅವ್ವನನ್ನು ಕೇಳಿದೆ. ನಾವು ವಾಸಿಸುತ್ತಿದ್ದ ರಸ್ತೆಯಲ್ಲಿ ಸ್ವಲ್ಪ ಕೆಳಗೆ ಹೋದರೆ ಮ್ಯಾಂಡಿ ಐಕನ್ಸ್ ಚಿಗವ್ವನ ಮನೆಯಿತ್ತು. ಅವರಿಗೆ ಸಾಕಷ್ಟು ಹಿಟ್ಟು ದೊರಕಿತ್ತು. ನಾವು ಜೋಳವನ್ನು ಸಂಗ್ರಹಿಸಿಟ್ಟುಕೊಂಡಿದ್ದೆವು. ಅದರಲ್ಲಿ ಮಾಡಿದ ಅಡುಗೆಯನ್ನು ತೆಗೆದುಕೊಂಡು ಹೋದರೆ ಅಷ್ಟೇ ಹಿಟ್ಟನ್ನು ಚಿಗವ್ವ ಕೊಡುತ್ತಿದ್ದಳು. ಊಟಕ್ಕೇನು ತೊಂದರೆಯಾಗಿರಲಿಲ್ಲ.         

ಈ ಕತೆಯೊಂದೇ ಜನರ ಸ್ಥಿತಿಗತಿಯನ್ನು ಮತ್ತು ಅವರಿಗಿದ್ದ ಶಕ್ತಿಶಾಲಿ ವ್ಯಕ್ತಿತ್ವವನ್ನು ಹೇಳಬಲ್ಲದು. ಬಹಿಷ್ಕೃತರಾದವರು ಸಮಾಜದ ಹೆಚ್ಚಿನವರಿಂದ ಹಿಂಸೆಗೊಳಗಾಗುತ್ತಿದ್ದರು. ದಕ್ಷಿಣದ ಬೆಳೆ ಪಾಲುದಾರರು ಮತ್ತು ಬಡರೈತರು ಪರಸ್ಪರರ ಮೇಲೆ ಅವಲಂಬಿತರಾಗಬೇಕಿತ್ತೇ ಹೊರತು ಯಾರೆಂದರೆ ಯಾರೂ ಅವರೊಂದಿಗಿರಲಿಲ್ಲ. ಅವ್ವನ ಬಳಿ ಈ ಕತೆಯನ್ನು ನಾನು ಮತ್ತೆ ಮತ್ತೆ ಕೇಳಿದಾಗೆಲ್ಲ ಆ ಬಿಳಿಯ ಹೆಂಗಸಿನ ಸೇಡಿನ ಮನೋಭಾವಕ್ಕಿಂತ ಮ್ಯಾಂಡಿ ಚಿಗವ್ವನ ಧಾರಾಳತನ, ಅವ್ವ ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಜೋಳ ಹೆಚ್ಚು ಮುಖ್ಯವಾದ ವಿಷಯವೆಂದು ತೋರಿತ್ತು. ದಕ್ಷಿಣದ ಹೆಂಗಸರ ಕರುಣಾಜನಕ ಬದುಕಿನ ಸ್ಥಿತಿಗೆ ಇದು ಉದಾಹರಣೆ ಎನ್ನುವುದಕ್ಕಿಂತ ಅವರ ಶಕ್ತಿಶಾಲಿ ವ್ಯಕ್ತಿತ್ವದ ಬಗ್ಗೆಯೇ ಹೆಚ್ಚು ಹೇಳುವಂತಿತ್ತು. ದಕ್ಷಿಣದ ಬರಹಗಾರರು ಆನುವಂಶಿಕವಾಗಿ, ಸಹಜವೆನ್ನುವಂತೆ ಸಮುದಾಯ ಪ್ರಜ್ಞೆಯನ್ನು ಪಡೆದಿದ್ದರು. ಇದು ನೋಡಲು ಸರಳವಾಗಿದ್ದರೂ ಪಾಲಿಸುವುದು ಕಷ್ಟಕರ. ನನ್ನ ತಾಯಿಯಂತೂ ತನ್ನ ಸಮುದಾಯದ ಇತಿಹಾಸವನ್ನೇ ನಡೆದು ತೋರಿಸುತ್ತಿದ್ದಳು. ಪ್ರತೀ ಮಗುವಿಗೆ ಜನ್ಮ ನೀಡಿದಾಗ ಸೂಲಗಿತ್ತಿಗೆ ಸಂಭಾವನೆಯಾಗಿ ಮನೆಯಲ್ಲಿ ಬೆಳೆದಿದ್ದನ್ನೋ, ಆಹಾರವನ್ನೋ, ಕೌದಿಯನ್ನೋ, ಹಣ್ಣು ತರಕಾರಿಗಳ ಜಾಡಿಗಳನ್ನೋ ನೀಡುತ್ತಿದ್ದಳು.

ಸೂಲಗಿತ್ತಿಯಂತೂ ಯಾವಾಗ ಹೇಳಿಕಳಿಸಿದರೂ ಬರುತ್ತಿದ್ದಳು. ಹೆರಿಗೆಬೇನೆಯಿಂದ ಹೆಂಗಸರು ನರಳುತ್ತಿದ್ದರೂ, ಆಸ್ಪತ್ರೆಗಳು ಮಾತ್ರ ಕೇಳಿದಷ್ಟು ಹಣ ಕೊಡದಿದ್ದರೆ ಸೇರಿಸಿಕೊಳ್ಳುತ್ತಿರಲಿಲ್ಲ. ಫ್ರೆಂಚ್ ಅಧ್ಯಾಪಕರು ಒಮ್ಮೆ ಅಳಿದುಹೋದ ಬಡತನದ ಬಗ್ಗೆ ಬರೆದಿದ್ದಂತೆ ಇದೇನು ನನ್ನ ಭಾವನಾತ್ಮಕ ಹಲುಬುವಿಕೆಯಲ್ಲ. ನಾನು ಹಳಹಳಿಸುತ್ತಿರುವುದು ಆ ಒಗ್ಗಟ್ಟಿನ ವಿನೀತ, ಮರ್ಯಾದೆಯ ಅಸ್ತಿತ್ವಕ್ಕೆ, ಬಡತನ ನಮಗೆ ಗೊತ್ತಿತ್ತು. ನನ್ನ ತಂದೆಯ ಶ್ರಮಕ್ಕೆ ವರ್ಷಕ್ಕೆ ಕೇವಲ ಮುನ್ನೂರು ಡಾಲರ್‌ಗಳನ್ನು ಹೊಟ್ಟೆಕಿಚ್ಚಿನಿಂದ ಕೊಡುತ್ತಿದ್ದ ನೆಲದೊಡೆಯನಿಗೂ ಅದು ಗೊತ್ತಿತ್ತು. ಯಾರಾದರೂ ಬೇಕೆಂದೇ ಅವಮಾನ ಮಾಡುವವರೆಗೂ ನಮ್ಮನ್ನು ನಾವು ಬಡವರೆಂದುಕೊಂಡೇ ಇರಲಿಲ್ಲ. ನಾವು ಬಡವರೆಂದು, ಬಡತನದಿಂದ ಕೆಲಸಕ್ಕೆ ಬಾರದವರು ಎಂದುಕೊಳ್ಳದೆ ಇದ್ದಿದ್ದರಿಂದಲೇ ಯಾವುದೇ ಸಂಕೋಚವಿಲ್ಲದೆ ಒಬ್ಬರ ಮೇಲೊಬ್ಬರು ಅವಲಂಬಿತರಾಗಿದ್ದೆವು. ಕೆಲವು ಸಂಘ, ಸಮಾಜಗಳು ಅವಶ್ಯಕತೆಯಿದ್ದಾಗ ನೆರವಾಗಲು ಹುಟ್ಟಿಕೊಂಡಿದ್ದವು. ಬಿಳಿಯ ಇನ್ಶೂರೆನ್ಸ್ ಕಂಪೆನಿಗಳು ಕಪ್ಪುಬೆಳೆ ಪಾಲುದಾರರನ್ನು ಅವಗಣಿಸಿದ್ದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಹುಟ್ಟು, ಸಾವಿಗೆ ಸಮುದಾಯದ ನೆರವು ಅಗತ್ಯವಾಗಿತ್ತು ಎನ್ನುವುದನ್ನು ಅವ್ವ ತಿಳಿದಿದ್ದಳು. ದಕ್ಷಿಣದ ಕಪ್ಪುಬರಹಗಾರರ ಅನುಭವದ ಶ್ರೀಮಂತಿಕೆ ಅಸಾಧಾರಣವಾದದ್ದು. ನಾನೊಮ್ಮೆ ಕಾಲೇಜಿನಲ್ಲಿದ್ದಾಗ ಉತ್ತರದ ಬಿಳಿಯ ನಡುವಯಸ್ಕನೊಬ್ಬನ ಬಳಿ ಕವಿಯಾಗಬೇಕೆಂಬ ನನ್ನ ಆಸೆಯ ಬಗ್ಗೆ ಹೇಳಿದೆ, ಅದೂ ಅತ್ಯಂತ ಸಿಹಿಯಾದ ನುಡಿಯಲ್ಲಿ. ಆದರೆ ಆತ 'ರೈತನ ಮಗಳು' ಕವಿಯಾಗುವ ಸಾಮರ್ಥ್ಯ ಹೊಂದಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ.

ಅವನು ಹೇಳಿದ್ದರಲ್ಲಿ ಒಂದು ಅಂಶವಂತೂ ಇತ್ತು. ಗುಡಿಸಲಲ್ಲಿ ವಾಸಮಾಡುವ, ಹತ್ತೋ ಹನ್ನೆರಡೋ ಪುಸ್ತಕ ಹೊಂದಿರುವ ವ್ಯಕ್ತಿಯಲ್ಲಿ ಜಾನ್ ಕೀಟ್ಸ್‌ನನ್ನು ಕಾಣುವುದು ಹೇಗೆ ಸಾಧ್ಯ? ಕೀಟ್ಸ್‌ನಂತಹ ಕವಿ ಮಾತ್ರವೇ ಆಗಬೇಕೆನ್ನುವ ಆಲೋಚನೆ ತೀರಾ ಸಂಕುಚಿತವಾದದ್ದು. ಜನರಿಗೆ ಅರ್ಥವಾಗುವ ಹಾಗೆ ಬರೆಯಬೇಕೇ ಹೊರತು ಇಂಗ್ಲೆಂಡಿನ ರಾಣಿಗಲ್ಲ. ದಕ್ಷಿಣದ ಬರಹಗಾರ ತನ್ನ ಹಳ್ಳಿಯಿಂದ ಲೇಖಕ ರೈಟ್‌ನಂತೆ ಸೀದಾ ಎದ್ದು ಬಂದಂತೆ ಭಾವಿಸುವುದು! ಅದೊಂದು ಹಳ್ಳಿ ಮತ್ತು ಪಟ್ಟಣಕ್ಕಿರುವ ಹೋಲಿಕೆ, ತಲೆಚಿಟ್ಟು ಹಿಡಿವ ಜನಸಂದಣಿ, ಕಠೋರತೆ ತುಂಬಿ ತುಳುಕುವ ನಗರ ಮತ್ತು ವಿಶಾಲ, ಸ್ವಚ್ಛ ಗಾಳಿ ಬೆಳಕಿನ ಹಳ್ಳಿಯ ಹೋಲಿಕೆ. ಒಬ್ಬ ಹಳ್ಳಿಗನಿಗೆ ನಗರವೊಂದು ಬಿಗಿಯಾದ ಉಡುಪು ತೊಟ್ಟು ಒದ್ದಾಡಿದ ಭಾವನೆ ತರಿಸುತ್ತದೆ. ಸಾಮಾನ್ಯವಾಗಿ ಚಿಕ್ಕವರಿಂದ ಬೆಳೆದಿರುವ ಬಗೆಯೇ ಮನುಷ್ಯನ ನೆನಪಿನಲ್ಲಿ ಸದಾ ಜೀವಂತವಾಗಿರುತ್ತದೆ. ರಸ್ತೆಯಿಂದಾಚೆ ಹುದುಗಿಕೊಂಡ ಪುಟ್ಟ ಚರ್ಚ್. ನಂಬಿಕೆ ಇತ್ತೋ ಇಲ್ಲವೋ ರವಿವಾರದ ಆರಾಧನೆಯ ಉಜ್ವಲತೆ, ಅಪರಿಚಿತರು ಹುಡುಕುವುದಕ್ಕೆ ಅಸಾಧ್ಯವೆನ್ನುವಂತೆ ಗಿಡಮರಗಳಾಚೆ ಕಳೆದು ಹೋಗಿರುವ ಮನೆಗಳು. ಇಂಥ ಖಾಸಗಿ ಜಗತ್ತಿನಲ್ಲಿ ಹೊಮ್ಮುತ್ತಿದ್ದ ನಾಟಕೀಯ ದೈನಿಕ ಸಂಗತಿಗಳೆಲ್ಲ ಅಪ್ಪಟ ಚಿನ್ನವಾಗಿದ್ದವು.

ಆದರೆ ಈ ಖಾಸಗಿ ಮತ್ತು ಮರೆಮಾಡಲಾದ ಅಸ್ತಿತ್ವದ ಬಗೆಗಿನ ನೋಟ, ತನ್ನ ಗೆಲುವು, ಸೋಲುಗಳಿಂದ, ವ್ಯಂಗ್ಯ, ವಿಡಂಬನೆಗಳಿಂದ ಸಾಮಾಜಿಕ ಪ್ರಜ್ಞೆಯುಳ್ಳ ದಕ್ಷಿಣದ ಬರಹಗಾರರಿಗೆ ಉಳಿದವರಿಗಿಂತ ಹೆಚ್ಚಿನ ದರ್ಶನ, ಕಾಣ್ಕೆ ನೀಡಿದ್ದವು. ಆತ ತನ್ನ ಪ್ರಪಂಚವನ್ನು, ಮತ್ತದರ ಆಪ್ತ ಸಮುದಾಯವನ್ನು, ತನ್ನ ಪ್ರಪಂಚವನ್ನು ನಿಗ್ರಹಿಸುತ್ತಿದ್ದ ವಿಸ್ತಾರವಾದ ಜಗತ್ತನ್ನು ಮೌನವಾಗಿ, ಖಚಿತವಾಗಿ ಗ್ರಹಿಸಬಲ್ಲವನಾಗಿದ್ದ. ಜನಾಂಗವಾದಕ್ಕೆ ಸಂಪೂರ್ಣ ಶರಣಾಗಿ ತಾವು ಮನುಷ್ಯರೆನ್ನುವುದನ್ನು ಮರೆಯಬೇಕು ಎನ್ನುವ ವಿಚಾರವನ್ನು ವಿರೋಧಿಸಿದ ತಂದೆ-ತಾಯಿಗಳಿಗೆ ಬದ್ಧರಾಗಿರುವುದನ್ನು ದಕ್ಷಿಣದ ಕಪ್ಪುಬರಹಗಾರರು ತಮ್ಮ 'ಕಾಣ್ಕೆಯ ಸ್ಪಷ್ಟತೆ'ಯ ಮೂಲಕ ನಿರೂಪಿಸಬೇಕಿತ್ತು. ಇತರ ಮನುಷ್ಯರ ಬಗೆಗಿನ ಅತಿಯಾದ ಋಣಾತ್ಮಕ ಭಾವನೆಗಳನ್ನು ನಿಯಂತ್ರಣಗೊಳಿಸದಿದ್ದರೆ ಕುರುಡರಾಗುತ್ತೇವೆ ಎಂಬುದು ತಂದೆ ತಾಯಂದಿರಿಗೆ ತಿಳಿದಿತ್ತು. ಇತರ ಜೀವಿಗಳ ಬಗ್ಗೆ ಬರಹಗಾರನೊಬ್ಬನಿಗೆ ಅಂಧತ್ವ ಇದ್ದರೆ ಅದು ಸಾವಿಗೆ ಸಮಾನವಾದದ್ದು. ಈ ಕುರುಡುತನದಿಂದ, ಜನಾಂಗವಾದದಿಂದ ಅನೇಕ ದಕ್ಷಿಣ ಬರಹಗಾರರ ಕೃತಿಗಳು ಸತ್ತು ಹೋಗಿವೆ. 'ಹಿಂದುಳಿದವರ' ಹಿನ್ನೆಲೆಯಿಂದ ಅನೇಕ ಧನಾತ್ಮಕ ವಿಷಯಗಳನ್ನು ನಾನು ಸೆಳೆದುಕೊಳ್ಳಬಲ್ಲೆ ಎನ್ನುವ ವಿಷಯವನ್ನು ಉತ್ತರದ ಸೋದರರು ಬಹುಶಃ ನಂಬುವುದಿಲ್ಲ.

ಅವರೆಂದೂ ನನ್ನಂತೆ ಜೀವಿಸಿಲ್ಲ. ಉದ್ದಾನುದ್ದದ ರಸ್ತೆಯ ಕೊನೆಯ, ಜಗತ್ತಿನ ಅಂಚಿಗೆ ಎದುರಾದ ಮನೆಯಲ್ಲಿ, ಮೈಲುಗಟ್ಟಲೆ ಯಾರ್ಯಾರು ಇಲ್ಲದಂತಹ ಸ್ಥಿತಿಯಲ್ಲಿ ಅವರು ಬದುಕಿಲ್ಲ. ಬೇಸಗೆಯ ಅದ್ಭುತ ಮೌನವನ್ನು, ಧೂಳು ತುಂಬಿದ ಹತ್ತಿಯ ಹೊಲದಲ್ಲಿನ ಓಡಾಟ ಹುಟ್ಟಿಸುವ ದಾಹವನ್ನು, ಅಂತಹ ಗಳಿಗೆಯಲ್ಲಿ ಬದುಕಿಗೆ ನೀರೊಂದೇ ಸತ್ವ ಎನ್ನುವುದನ್ನು ಅನುಭವಿಸಿಲ್ಲ. ಪಟ್ಟಣಗಳಲ್ಲಿ ವಾಸ ಮಾಡುವ ವ್ಯಕ್ತಿಗೆ ತಾನು ಈ ನೆಲದ ಸೃಷ್ಟಿ, ಬೆರಳುಗಳ ಸಂದಿಯಲ್ಲಿನ ಮಣ್ಣು, ಮಳೆ ಹಾರಿಸಿದ ಧೂಳಿನ ವಾಸನೆ, ನೆಲದ ರುಚಿಯನ್ನು ಸವಿಯುವ ಬಯಕೆ ಇತ್ಯಾದಿಗಳ ಬಗ್ಗೆ ಸ್ಪಷ್ಟತೆಯಿಲ್ಲ. ನಾನು ದಕ್ಷಿಣದ ಕಪ್ಪುಜನರ ಹಳ್ಳಿಯ ಜೀವನವನ್ನೇನು ರಮ್ಯಗೊಳಿಸುತ್ತಿಲ್ಲ. ಹೊಲಗಳಲ್ಲಿನ ಕಷ್ಟದ ದುಡಿಮೆ, ಕೊಳಕಾದ ಮನೆ, ನನ್ನ ತಂದೆಯನ್ನು ಸಾಯಿಸುವಷ್ಟು ಕೆಲಸ ಮಾಡಿಸಿದ, ಗಟ್ಟಿಗಿತ್ತಿಯಾದ ಅವ್ವನನ್ನು ಕುಸಿಯುವಂತೆ ಮಾಡಿದ ಹೊಟ್ಟೆಕಿಚ್ಚಿನ ಕೆಡುಕು ಜನರು ನನಗೆ ಗೊತ್ತು.

ಹೇಳುತ್ತಿರುವುದು ಇಷ್ಟೇ. ದಕ್ಷಿಣದ ಬರಹಗಾರರು ಸಹ ಉಳಿದ ಬರಹಗಾರರಂತೆ ಪ್ರೀತಿ ಮತ್ತು ದ್ವೇಷವನ್ನು ಆಸ್ತಿಯಾಗಿ ಪಡೆದಿದ್ದಾರೆ. ಆದರೆ ಸಿರಿವಂತ ಪರಂಪರೆಯಿಂದ ಅವರು ಸೆಳೆದುಕೊಳ್ಳಬಹುದಾದ ಅಗಾಧ ವಿಷಯಗಳಿವೆ. ಕಮು ಹೇಳಿದಂತೆ ಅವರದ್ದು 'ನೋವು ಮತ್ತು ಸೂರ್ಯನ ನಡುವೆ ಅರ್ಧ ದಾರಿ'. ಸೂರ್ಯನ ಅಡಿಯಲ್ಲಿ ಎಲ್ಲವು ಒಳಿತಲ್ಲ, ಇತಿಹಾಸ ಮಾತ್ರವೇ ಎಲ್ಲವು ಅಲ್ಲವೆಂದು ಅವರಿಗೆ ತಿಳಿದಿದೆ. ದಕ್ಷಿಣದ ಕಪ್ಪು ಬರಹಗಾರರಿಗೆ ಉಡುಗೊರೆಯಾಗಿ ಬಂದಿರುವ ಈ ಲಾಭದಾಯಕ ಪರಂಪರೆಯೆಂದರೆ ನೆಲದ ಬಗೆಗಿನ ಸಹಾನುಭೂತಿ, ಕೆಡುಕಿನ ಜ್ಞಾನಕ್ಕಿಂತ ಮಿಗಿಲಾಗಿ ಮಾನವೀಯತೆಯ ಬಗೆಗಿನ ವಿಶ್ವಾಸ, ಸತ್ಯದ ಮೇಲೆ ಅಪಾರವಾದ ಪ್ರೀತಿ ಇಂತಹ ಆನುವಂಶಿಕ ಹೊಣೆಗಾರಿಕೆಯನ್ನು ನಾವೀಗ ಹೊತ್ತಿದ್ದೇವೆ. ಶತಮಾನಗಳ ಕಹಿ ಮೌನ ಮತ್ತು ದ್ವೇಷಕ್ಕೆ ಮಾತ್ರ ದನಿಗೂಡಿಸುವುದಲ್ಲ, ನೆರೆಯವರ ದಯಾಳುತನ ಮತ್ತು ಉಳಿದುಕೊಂಡೇ ಇರುವ ಪ್ರೀತಿಗೂ ದನಿ ನೀಡಬೇಕಿದೆ.

(1970)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top