-

ಶ್ರೀ ನಾರಾಯಣ ಗುರು ಮತ್ತು ಮುಸ್ಲಿಮರು

-

ಕರ್ನಾಟಕದ ಕರಾವಳಿ ಪ್ರದೇಶದ ಹಿಂದೂ-ಮುಸ್ಲಿಮ್ ಸಹೋದರರು ರಾಜಕೀಯ ಷಡ್ಯಂತ್ರಕ್ಕೆ ಸಿಲುಕಿ ಪರಸ್ಪರ ವಿದ್ವೇಷವನ್ನು ಬೆಳೆಸುತ್ತಾ ಬದುಕುತ್ತಿರುವ ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಕಲಿಸಿದ ಸರ್ವಧರ್ಮ ಸಮಭಾವ ಪರಿಕಲ್ಪನೆಯ ಚಿಂತನೆ ಅಗತ್ಯವೆನಿಸುತ್ತದೆ. 'ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು' ಎಂಬ ಸಮಾನತೆಯ ಚಿಂತನೆಯನ್ನು ಬಿತ್ತಿದ ಗುರು ಎಲ್ಲಾ ಧರ್ಮದವರೊಂದಿಗೆ ಧಾರ್ಮಿಕ ಸೌಹಾರ್ದದ ಸಂಬಂಧವನ್ನು ಬೆಳೆಸಿದ್ದರು. ಅವರು ಆಧ್ಯಾತ್ಮಿಕ ಚಿಂತನೆಯತ್ತ ಹೆಚ್ಚು ಒಲವು ಹೊಂದಿದ್ದ ಕಾಲದಲ್ಲಿ ಹಲವು ಸೂಫಿಗಳ, ಮುಸ್ಲಿಮ್ ಪಂಡಿತರ ನಿರಂತರ ಸಂಪರ್ಕವನ್ನು ಹೊಂದಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಹಲವು ಮುಸ್ಲಿಮ್ ನಾಯಕರು ಅವರ ಜೊತೆಗಿದ್ದರು. ಸೂಫಿಗಳೊಂದಿಗೆ: ಇಸ್ಲಾಮಿನ ಸೂಫಿ ಚಿಂತನೆಯೊಂದಿಗೆ ಶ್ರೀ ನಾರಾಯಣ ಗುರು ಒಲವು ಹೊಂದಿದ್ದರು. ಅವರು ಪರಿವ್ರಾಜಕರಾಗಿ ದೇಶ ಪರ್ಯಟನೆ ನಡೆಸುತ್ತಿದ್ದ ಕಾಲದಲ್ಲಿ ಉತ್ತರ ಭಾರತದ ಖಾನ್ ಗಾಹುವಿನ ಖಾದಿರಿಯಾ, ಚಿಸ್ತೀಯ, ನಖಬಂದೀಯ ಮೊದಲಾದ ಸೂಫಿಗಳೊಂದಿಗೂ ಹಾಗೂ ತಮಿಳುನಾಡಿನ ಮಾಸ್ತಿ ಸೂಫಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಸ್ವದಖತುಲ್ಲಾಹ್ ಖಾಹಿರಿಯಾರವರ ನೇತೃತ್ವದಲ್ಲಿರುವ ಸೂಫಿ ಖಾನ್ ಗಾಹಿಗೆ ನಿತ್ಯ ಸಂದರ್ಶಕರಾಗಿದ್ದರೆಂದು ಈ ಬಾಂಧವ್ಯದಿಂದಾಗಿ ಗುರುವಿಗೆ ಇಸ್ಲಾಮಿನ ಬಗ್ಗೆ, ಪ್ರವಾದಿ(ಸ)ರ ಬಗ್ಗೆ ಹೆಚ್ಚು ತಿಳಿಯಲು ಪ್ರಯೋಜನವಾಯಿತು. ಅರಬಿ, ಪರ್ಶಿಯನ್ ಮತ್ತು ಉರ್ದು ಭಾಷೆಗಳು ಅವರ ಚಿಂತನೆಗಳಲ್ಲಿ ಪ್ರಭಾವ ಬೀರಲು ಕಾರಣವಾಯಿತು. ಸೂಫಿ ಸಂಪರ್ಕದಿಂದಾಗಿ ಇಸ್ಲಾಮಿನ ಜ್ಞಾನಕ್ಕೆ ಅವರು ಆತ್ಮೀಯರಾಗಿದ್ದರು. ಧಾರ್ಮಿಕ ಸೌಹಾರ್ದದ ಪರಿಕಲ್ಪನೆಗೆ ಇಸ್ಲಾಮಿನ ಆತ್ಮೀಯ ಜ್ಞಾನವೂ ಅವರಿಗೆ ಹೆಚ್ಚು ಆಕರ್ಷಣೀಯವಾಯಿತು. ತಮಿಳುನಾಡಿನ ಸೂಫಿಗಳಲ್ಲದೆ ಕೇರಳದ ಮಹಾನ್ ಪಂಡಿತರೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸಿದರು. ಕಣ್ಣೂರಿನ ಪರಂಪರೆಯಿಂದ ಬಂದ ಇಚ್ಚ ಮಸ್ತಾನ್ ಎಂದು ಪ್ರಸಿದ್ಧರಾದ ಅಬ್ದುಲ್ ಖಾದಿರ್ ಮಸ್ತಾನರ ಆತ್ಮೀಯ ಬಂಧದಿಂದ ಸೂಫಿ ಚಿಂತನೆಗಳು ಅವರಲ್ಲಿ ಇನ್ನಷ್ಟು ಶಕ್ತಿಯಾಯಿತು. ಅಬ್ದುಲ್ ಖಾದಿರ್ ಸೂಫಿಯವರೊಂದಿಗೆ ಗುರು ನಿರಂತರ ಸಂಪರ್ಕದಲ್ಲಿದ್ದರು. ಉತ್ತರ ಪ್ರದೇಶದ ಬದಾಯಿನಿಲ್ ಪ್ರದೇಶದ ಅಬ್ದುಲ್ ಹಲೀಮ್ ಬದಾಯಿನಿ ಎಂಬ ಪಂಡಿತರೊಂದಿಗೆ ಪತ್ರ ವ್ಯವಹಾರವೂ ಇತ್ತೆಂದು ಹೇಳಲಾಗುತ್ತದೆ.

ವಕ್ಕಂ ಮೌಲವಿ ಇತರ ಮುಸ್ಲಿ ನಾಯಕರು:
ಕೇರಳದ ನವೋತ್ಥಾನ ಯುಗದ ಮುಸ್ಲಿಮ್ ನಾಯಕರಾಗಿದ್ದ ವಕ್ಕಂ ಅಬ್ದುಲ್ ಖಾದಿರಿ ಮೌಲವಿ, ಸ್ವಾತಂತ್ರ್ಯ ಹೋರಾಟ ರಂಗದ ಮುಂಚೂಣಿ ನಾಯಕರೂ ಆಗಿದ್ದರು ಅಲ್ಲದೆ, ಧಾರ್ಮಿಕ ಪಂಡಿತ ಮತ್ತು ಪತ್ರಕರ್ತರಾಗಿಯೂ ಹೆಸರುವಾಸಿಯಾಗಿದ್ದರು. ಅವರು ಶ್ರೀ ನಾರಾಯಣ ಗುರುವಿನೊಂದಿಗೆ ಬಹಳಷ್ಟು ಆತ್ಮೀಯತೆಯನ್ನು ಬೆಳೆಸಿದ್ದರು. ತಂದೆಯ ಗೆಳೆಯರಾಗಿದ್ದ ಕಾರಣದಿಂದಲೂ ಗುರುವನ್ನು ಅವರು ಹೆಚ್ಚು ಭಕ್ತಿಯಿಂದ ಕಾಣುತ್ತಿದ್ದರು. ವಕ್ಕಂ ಮೌಲವಿಯವರೊಂದಿಗೆ ಧಾರ್ಮಿಕ ವಿಷಯಗಳಿಗಿಂತ ಹೆಚ್ಚಾಗಿ ಅರಬಿ ಭಾಷೆಯ ಬಗ್ಗೆ ಚರ್ಚಿಸುತ್ತಿದ್ದರಂತೆ. ಅಲ್ಲಾಹು, ಶಿರ್ಕ್, ತೌಹೀದ್, ಇಬಾದತ್ ಎಂಬ ಪಾರಿಭಾಷಿಕ ಪದಗಳೊಂದಿಗೆ ನಾರಾಯಣ ಗುರುವಿಗಿರುವ ಪಾಂಡಿತ್ಯವು ಅದ್ಭುತವಾದದ್ದೆಂದು ವಕ್ಕಂ ಮೌಲವಿ ಹೇಳುತ್ತಿದ್ದರು. ಗುರುವಿನಿಂದ ಪ್ರಭಾವಿತರಾದ ಮೌಲವಿಯವರು ''ಶಿಕ್ಷಣದಿಂದ ಶಕ್ತರಾಗಿ ಸಂಘಟನೆಯಿಂದ ಬಲಯುತರಾಗಿ'' ಎಂಬ ಘೋಷಣೆಯನ್ನು ಮುಸ್ಲಿಮ್ ಜನ ಸಾಮಾನ್ಯರಲ್ಲಿ ಬೋಧಿಸಿ ಅವರನ್ನು ಶಿಕ್ಷಣದ ಕಡೆಗೆ ಆಸಕ್ತಿ ಉಂಟಾಗುವಂತೆ ಪ್ರಯತ್ನಿಸಿದರು.

ಸಮಸ್ತ ಸ್ಥಾಪಕರಲ್ಲಿ ಓರ್ವರಾದ ವರಕ್ಕಲ್ ಮುಲ್ಲಕೋಯ ತಂಙಲ್‌ರವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಇವರೊಂದಿಗಿನ ಆತ್ಮೀಯತೆ 1920ರಿಂದ 1928 ಗುರುವಿನ ಕೊನೆಯ ದಿನಗಳವರೆಗೆ ದೃಢವಾಗಿದ್ದವು. 1922 ಮತ್ತು 1928ರ ಅಲ್ ಇಸ್ಲಾಮ್ ಮತ್ತು ಅಲ್ ಮುಸ್ಲಿಮ್ ಎಂಬ ಪತ್ರಿಕೆಯಲ್ಲಿ ನಾರಾಯಣಗುರು ಮತ್ತು ಇಸ್ಲಾಮ್ ಬಗೆಗಿರುವ ಪರಾಮರ್ಶೆಗಳನ್ನು ಕಾಣಬಹುದು. ಗುರು ಮತ್ತು ಪ್ರದೇಶದ ಮುಸ್ಲಿಮ್ ನಿವಾಸಿಗಳು:
 

ನಾರಾಯಣ ಗುರು ಅರವಿಪ್ಪುರಂ ಪ್ರದೇಶಕ್ಕೆ ಬಂದ ಸಮಯದಲ್ಲಿ ಇತರರಂತೆ ಆ ಪ್ರದೇಶದ ಮುಸ್ಲಿಮರು ಕೂಡ ತಮ್ಮ ದುಃಖ ದುಮ್ಮಾನಗಳನ್ನು ಹೇಳಲು ಬರುತ್ತಿದ್ದರು. ಆಲಪ್ಪುಝ ಮತ್ತು ಕೊಲ್ಲಂನ ತೀರ ಪ್ರದೇಶದಲ್ಲಿದ್ದ ಕೇರಿಯ ದುರ್ಬಲ, ನಿರಾಶ್ರಿತ ಕೆಳವರ್ಗದ ಬಡ ಮಕ್ಕಳಿಗೆ ಅಕ್ಷರ ಜ್ಞಾನವನ್ನು ನೀಡುತ್ತಿದ್ದ ಸಂದರ್ಭದಲ್ಲಿ ಮುಸ್ಲಿಮ್ ಮಕ್ಕಳು ಕೂಡಾ ಅವರ ತರಗತಿಯಲ್ಲಿ ಹಾಜರಿರುತ್ತಿದ್ದರು. ಗುರು ಮುಸ್ಲಿಮ್ ಮಕ್ಕಳಿಗೂ ಮಲೆಯಾಳಂ ಭಾಷಾ ಜ್ಞಾನವನ್ನು ಕಲಿಸುತ್ತಿದ್ದರು. ಅವರ ಸಮಸ್ಯೆಗಳಿಗೆ ಸ್ಪಂದಿಸುತಿದ್ದರು. ಆ ಕಾರಣದಿಂದ ಮುಸ್ಲಿಮ್ ಕುಟುಂಬಕ್ಕೆ ನಾರಾಯಣ ಗುರು ಚಿರಪರಿಚಿತರಾಗಿದ್ದರು ಮತ್ತು ಅವರ ಬದುಕಿಗೆ ಗುರು ಸಾಂತ್ವನವಾಗಿದ್ದರು. 'ನಾಣು ಸ್ವಾಮಿ' ಮತ್ತು 'ನಾರಾಯಣ ಮೂಪನ್' ಎಂದು ಅವರನ್ನು ಕರೆಯುತ್ತಿದ್ದರು. ಶ್ರೀ ನಾರಾಯಣ ಗುರುವಿನ ಹೋರಾಟದ ಆರಂಭ ಕಾಲದಲ್ಲ್ಲಿ ಅನೇಕ ಮುಸ್ಲಿಮ್ ವ್ಯಾಪಾರಿಗಳು ದೇಣಿಗೆಗಳನ್ನು ನೀಡಿದ್ದರು. ದೇವಸ್ಥಾನ ನಿರ್ಮಿಸಲು, ಸ್ವಉದ್ಯೋಗಕ್ಕಾಗಿ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಇತ್ಯಾದಿ ಕಾರ್ಯಗಳಿಗೆ ಅನೇಕ ಮುಸ್ಲಿಮ್ ಉದ್ಯಮಿಗಳ ಕೊಡುಗೆಗಳು ಸ್ಮರಣೀಯ. ''ಮುಸ್ಲಿಮರಿಗೆ ನೀವು ಮಸೀದಿಗಳನ್ನು ಏಕೆ ನಿರ್ಮಿಸಿ ಕೊಡುತ್ತಿಲ್ಲ?'' ಎಂದು ಖಿಳಿರ್ ಎಂಬ ಯುವಕ ಪ್ರಶ್ನಿಸಿದಾಗ ''ನೀವು ನನ್ನಲ್ಲಿ ಮಸೀದಿ ನಿರ್ಮಿಸಲು ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ'' ಎಂದುತ್ತರಿಸಿದ್ದರು. ಕೆಳವರ್ಗದವರಿಗೆ ದೇವಸ್ಥಾನ ನಿರ್ಮಿಸಿದಂತೆ ಮುಸ್ಲಿಮರ ಮಸೀದಿಗಳ ನಿರ್ಮಾಣಕ್ಕೂ ಗುರು ತಯಾರಿದ್ದರು ಎಂದು ತಿಳಿಯಬಹುದು. ಗುರುವಿನ ಆಶ್ರಮದಲ್ಲಿ ಇತರ ಜಾತಿಯ ಮಕ್ಕಳು ಕಲಿಯುತ್ತಿದ್ದಂತೆ ಹಲವು ಮುಸ್ಲಿಮ್ ಮಕ್ಕಳು ಕೂಡಾ ವಿದ್ಯೆ ಅರ್ಜಿಸುತ್ತಿದ್ದರು. ಕುದ್ರೋಳಿ ದೇವಸ್ಥಾನ ನಿರ್ಮಾಣದಲ್ಲಿ ಮುಸ್ಲಿಮರ ಪಾತ್ರ:
ಈಳವರು ಕರ್ನಾಟಕದ ಕರಾವಳಿಯಲ್ಲಿ ಬಿಲ್ಲವರೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಹತ್ತೊಂಬತನೇ ಶತಮಾನದಲ್ಲಿ ಇಲ್ಲಿನ ಬಿಲ್ಲವರೂ, ಶೂದ್ರರೂ ಅಸ್ಪಶ್ಯತೆಯ ಶೋಷಣೆಗೆ ಒಳಗಾಗಿದ್ದರು. ಕೇರಳದಲ್ಲಿ ನಾರಾಯಣ ಗುರುವಿನ ಪ್ರಭಾವ ಅರಿತಿದ್ದ ಕೆಲವು ಬಿಲ್ಲವ ನಾಯಕರು ಸೇರಿ ಗುರುವನ್ನು ಮಂಗಳೂರಿಗೆ ಕರೆತರುವ ಯೋಜನೆ ಹಾಕಿದರು. 1908ರಲ್ಲಿ ನಾರಾಯಣ ಗುರು ಮಂಗಳೂರಿಗೆ ಬಂದರು. ಇಲ್ಲಿನ ಕೆಳವರ್ಗದವರಿಗಾಗಿ ದೇವಸ್ಥಾನದ ಅಗತ್ಯತೆಯನ್ನು ತಿಳಿಸಿದಾಗ ಕುದ್ರೋಳಿಯಲ್ಲಿ ಸ್ಥಳ ಸೂಚಿಸಿದರು. ದೇವಾಲಯ ನಿರ್ಮಾಣಕ್ಕೆ ಎಚ್. ಕೊರಗಪ್ಪನವರು ಶಕ್ತಿ ಮೀರಿ ಶ್ರಮಿಸಿದರು. ಕೊರಗಪ್ಪನವರು ಉದ್ಯಮಿ ಸಿ. ಅಬ್ದುಲ್ ರಹಿಮಾನ್ ರವರ ಆಪ್ತರಾಗಿದ್ದರು ಹಾಗೂ ಸಿ. ಅಬ್ದುಲ್ ರಹಿಮಾನ್ ಮತ್ತು ಕೊರಗಪ್ಪಕಂಪಿನಿಯಲ್ಲಿ ಪಾಲುದಾರಿಕೆಯನ್ನು ಹೊಂದಿ ಒಣ ಮೀನು ವ್ಯಾಪಾರ ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಮುಸ್ಲಿಮ್ ಬಾಹುಳ್ಯ ಪ್ರದೇಶವಾದ ಕುದ್ರೋಳಿಯೂ ದೊಡ್ಡ ಸಮಸ್ಯೆಯಾಗಿ ಕಾಣಲಿಲ್ಲ.
ಅವರು ಈ ಪ್ರದೇಶದ ಮುಸ್ಲಿಮ್ ನಿವಾಸಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಅವರ ಸಂಪೂರ್ಣ ಸಹಕಾರದಿಂದ ಕುದ್ರೋಳಿ ದೇವಸ್ಥಾನ ನಿರ್ಮಾಣವಾಯಿತು. 1912ರಲ್ಲಿ ನಾರಾಯಣ ಗುರು ಅಲ್ಲಿ ಶಿವಲಿಂಗ ಪ್ರತಿಷ್ಠೆ ಮಾಡಿದರು.

ಹಿಂದೂ-ಮುಸ್ಲಿಮ್ ಸಾಮರಸ್ಯಕ್ಕೆ ಪ್ರಯತ್ನ : 1921ರಲ್ಲಿ ಕೇರಳದ ಮಲಬಾರ್ ಪ್ರದೇಶದಲ್ಲಿ ಖಿಲಾಫತ್ ಚಳವಳಿ ಪ್ರಾರಂಭವಾಗಿ ಅನೇಕರು ಸಾವನ್ನಪ್ಪಿದ್ದರು, ಅನೇಕ ಕುಟುಂಬಗಳು ನಿರ್ಗತಿಕರಾಗಿದ್ದರು. ಹಲವು ಶತಮಾನಗಳಿಂದ ಸಹೋದರರಾಗಿ ಬಾಳುತ್ತಿದ್ದ ಹಿಂದೂ-ಮುಸ್ಲಿಮ್ ಸಹೋದರರ ನಡುವೆ ಪರಸ್ಪರ ವಿದ್ವೇಷ ಬೆಳೆಯುತ್ತಿದ್ದುದು ಗುರುವಿನ ಗಮನಕ್ಕೆ ಬಂದಾಗ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಿದರು. ಅದರಲ್ಲಿ ಮುಸ್ಲಿಮ್ ವಿಭಾಗದಿಂದ ಮುಹಮ್ಮದ್ ಮೌಲಿಯವರನ್ನು ಅತಿಥಿಯಾಗಿ ಕರೆಸಿದ್ದರು. ಅವರು ಇಸ್ಲಾಮಿನ ಸಹೋದರತ್ವದ ಬಗ್ಗೆ ಬಹಳ ವಿಶಾಲವಾಗಿ ಮಾತನಾಡಿದ್ದನ್ನು ಗುರು ಮೆಚ್ಚಿಕೊಂಡಿದ್ದರು. ಇದೊಂದು ಉತ್ತಮ ಬೆಳವಣಿಗೆಯಾಗಿತ್ತು. ''ಈ ಸರ್ವಧರ್ಮ ಸಮ್ಮೇಳನ ವಾದಿಸಲಿಕ್ಕಲ್ಲ, ವಾದಿಸಿ ಜಯಿಸಲಿಕ್ಕಲ್ಲ. ತಿಳಿಯಲು ಮತ್ತು ತಿಳಿಸಲು'' ಎಂದು ನಿರ್ಣಯದಲ್ಲಿ ಬರೆಸಿದರು. ಹಿಂದೂ- ಮುಸ್ಲಿಮ್ ಐಕ್ಯವನ್ನು ಪುನರ್‌ಸ್ಥಾಪಿಸಲು ಈ ಸಂಗಮವು ಸಹಕಾರಿಯಾಯಿತು.
ಪ್ರವಾದಿ (ಸ) ಮತ್ತು ಗುರು : ಪ್ರವಾದಿ ಮುಹಮ್ಮದ್ ಮತ್ತು ನಾರಾಯಣ ಗುರುವಿನ ಸಾಮಾಜಿಕ ಚಿಂತನೆಯಲ್ಲಿ ಅನೇಕ ಸಾಮ್ಯತೆಗಳನ್ನು ಕಾಣಲು ಸಾಧ್ಯವಿದೆ. ಗುರು ಪ್ರವಾದಿ(ಸ) ಜೀವನದಿಂದಲೂ ಪ್ರಭಾವಿತರಾಗಿದ್ದರೆಂದು ಅವರ 'ಅನುಕಂಬ ದಶಕ' ಎಂಬ ಕೃತಿಯಲ್ಲಿ ಪ್ರವಾದಿ (ಸ) ರನ್ನು ಗೌರವಿಸಿ ಬರೆದ ಕೀರ್ತನೆಯ ಸಾಲುಗಳಲ್ಲಿ ಗಮನಿಸಬಹುದು.
''ಪುರುಷಾಕೃತಿ ಪೂಂಡದೈವಮೋ
ನರ ದಿವ್ಯಾಕೃತಿ ಪೂಂಡಧರ್ಮಮೋ
ಪರಮ ಪವಿತ್ರ ಪುತ್ರನೋ
ಕರುಣಾವಾನ್ ನಬಿ ಮುತ್ತುರತ್ನಮೋ''
ಅರ್ಥ: ಪುರುಷಾಕೃತಿಯಂತಿರುವ ದೇವನೇ
ನರ ದಿವ್ಯಾಕೃತಿಯಂತಿರುವ ಧರ್ಮವೇ
ಅತಿ ಶ್ರೇಷ್ಠ ಪವಿತ್ರ ಪುತ್ರನೇ
ಕಾರುಣ್ಯದ ನಬಿ ಮತ್ತುರತ್ನವೇ ?
'ಕಾರುಣ್ಯದ ನಬಿ ಮುತ್ತುರತ್ನ' ಎಂಬ ಬಳಕೆ ಈ ವಚನದಿಂದ ಹೆಚ್ಚು ಪ್ರಖ್ಯಾತಿಗಳಿಸಿತ್ತು ಎಂಬ ಪ್ರತೀತಿಯೂ ಇದೆ. ಮನುಷ್ಯನನ್ನು ಸಹೋದರನನ್ನಾಗಿಸುವ ಇಸ್ಲಾಮಿನ ಅಭೇದ್ಯವಾದ ಐಕ್ಯಭಾವ, ಮಸೀದಿಗಳಲ್ಲಿ ಅವರು ನಮಾಝ್‌ಗೆ ನಿಲ್ಲುವಾಗ ಇರುವ ಏಕತೆ ಮತ್ತು ಪ್ರವಾದಿ(ಸ) ಜಗತ್ತಿಗೆ ಕಲಿಸಿದ ಸಹೋದರತ್ವಕ್ಕೆ ಗುರುಗಳು ಹೆಚ್ಚು ಆಕರ್ಷಿತರಾಗಿದ್ದರು. ಈ ಸಾಲನ್ನು ಪ್ರೊಫೆಸರ್ ಜಿ. ಬಾಲಕೃಷ್ಣನ್ ನಾಯರ್ ವ್ಯಾಖ್ಯಾನಿಸುತ್ತಾ ''ಕರುಣಾಮಯನಾದ ಪ್ರವಾದಿಯವರನ್ನು ಮನುಷ್ಯ ಜಾತಿಯಲ್ಲಿ ಅಮೂಲ್ಯವಾದ ರತ್ನವಾಗಿ ಗುರುದೇವರು ತಿಳಿದಿದ್ದರು'' ಎಂದು ಹೇಳುತ್ತಾರೆ. (ಶ್ರೀ ನಾರಾಯಣ ಗುರುದೇವ ಕೃತಿಗಳು ಸಂಪೂರ್ಣ ವ್ಯಾಖ್ಯಾನ: ಪುಟ: 452-453)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top