-

ಮೀಸಲಾತಿ: ಹಾವನೂರು ವರದಿಗೂ ಮುನ್ನ

-

ಮೀಸಲಾತಿ ಪರಿಜ್ಞಾನ ಉಳ್ಳವರೆಲ್ಲರಿಗೂ ತಿಳಿದಿರುವ ವಿಷಯವೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ 1918ರಲ್ಲಿ ಲೆಸ್ಲಿ ಸಿ. ಮಿಲ್ಲರ್ ಸಮಿತಿ ರಚಿಸಿ ವರದಿ ಪಡೆದು 1921ರಿಂದ ಅದು ಜಾರಿಗೆ ಬರುವ ಹಾಗೆ ಕ್ರಮವಹಿಸಿದ್ದರು. ಇದೊಂದು ದಿಟ್ಟತನದ ಕಾರ್ಯಕ್ರಮ ಎಂದು ಚಾರಿತ್ರಿಕ ದಾಖಲೆಯಾಗಿ ಉಳಿದು ಪ್ರಶಂಸೆಗೂ ಪಾತ್ರವಾಗಿದೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಭಾಷಾವಾರು ರಾಜ್ಯ ರಚನೆಯಾಗಿದ್ದು ಮಾತ್ರ 1956ರಲ್ಲಿ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾದ ದಿನ ಅದು! ಆ ದಿನದವರೆಗೂ ಮೈಸೂರು ರಾಜ್ಯದಲ್ಲಿ ಮಿಲ್ಲರ್ ವರದಿ ಆಧಾರಿತ ಮೀಸಲಾತಿಯೇ ಜಾರಿಯಲ್ಲಿತ್ತು ಎಂಬುದೂ ವಿಶೇಷ.

ಪ್ರೊ.ರವಿವರ್ಮ ಕುಮಾರ್ ಅಧ್ಯಕ್ಷತೆಯ ಕರ್ನಾಟಕ ರಾಜ್ಯದ ಮೊದಲನೇ (ಶಾಶ್ವತ) ಹಿಂದುಳಿದ ವರ್ಗಗಳ ಆಯೋಗ ಬಹು ಮುಖ್ಯ ವಿಷಯಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿ ಸರಕಾರಕ್ಕೆ ಸಲಹೆಗಳನ್ನು ನೀಡಿದೆ. ಆದರೂ, ಕ್ರಮ ಕುರಿತು ಸರಕಾರ ಮಾತ್ರ ದಿವ್ಯ ಮೌನ ತಾಳಿದೆ.

ಆಯೋಗ ಈ ನಿಟ್ಟಿನಲ್ಲಿ ಹಾವನೂರು ವರದಿ ಜಾರಿಗೆ ಬರುವ ಮುನ್ನ ಹಿಂದುಳಿದ ವರ್ಗಗಳ ಮೀಸಲಾತಿಯ ಹಿನ್ನೆಲೆ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿದೆ. ಮೀಸಲಾತಿ ಪರಿಜ್ಞಾನ ಉಳ್ಳವರೆಲ್ಲರಿಗೂ ತಿಳಿದಿರುವ ವಿಷಯವೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ 1918ರಲ್ಲಿ ಲೆಸ್ಲಿ ಸಿ. ಮಿಲ್ಲರ್ ಸಮಿತಿ ರಚಿಸಿ ವರದಿ ಪಡೆದು 1921ರಿಂದ ಅದು ಜಾರಿಗೆ ಬರುವ ಹಾಗೆ ಕ್ರಮವಹಿಸಿದ್ದರು. ಇದೊಂದು ದಿಟ್ಟತನದ ಕಾರ್ಯಕ್ರಮ ಎಂದು ಚಾರಿತ್ರಿಕ ದಾಖಲೆಯಾಗಿ ಉಳಿದು ಪ್ರಶಂಸೆಗೂ ಪಾತ್ರವಾಗಿದೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಭಾಷಾವಾರು ರಾಜ್ಯ ರಚನೆಯಾಗಿದ್ದು ಮಾತ್ರ 1956ರಲ್ಲಿ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾದ ದಿನ ಅದು! ಆ ದಿನದವರೆಗೂ ಮೈಸೂರು ರಾಜ್ಯದಲ್ಲಿ ಮಿಲ್ಲರ್ ವರದಿ ಆಧಾರಿತ ಮೀಸಲಾತಿಯೇ ಜಾರಿಯಲ್ಲಿತ್ತು ಎಂಬುದೂ ವಿಶೇಷ. ಐದು ಏಕೀಕೃತ ಪ್ರದೇಶದಲ್ಲಿ ಹಿಂದುಳಿದ ವರ್ಗಗಳು ಬೇರೆ ಬೇರೆ ಪಟ್ಟಿಯಲ್ಲಿದ್ದವು. ಏಕೀಕರಣಗೊಂಡ ನಂತರವೂ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಬರುವಂತೆ ಅನುಮತಿ ನೀಡಲಾಯಿತಾದರೂ, ಇದು ಗೊಂದಲಕ್ಕೆ ಎಡೆ ಮಾಡಿ ಕೊಟ್ಟಿತು. ಯಾವುದೋ ಒಂದು ಸಮುದಾಯ ಒಂದು ಪ್ರದೇಶದಲ್ಲಿ ಹಿಂದುಳಿದಿದೆ ಎಂದು ಪರಿಗಣಿಸಿದರೆ ಮತ್ತೊಂದು ಪ್ರದೇಶದಲ್ಲಿ ಅದು ಮುಂದುವರಿದ ಸಮುದಾಯವಾಗಿತ್ತು. ಹೇಳಬೇಕೆಂದರೆ ಹಳೆ ಮೈಸೂರು ಪ್ರದೇಶದಲ್ಲಿ ಲಿಂಗಾಯತರನ್ನು ಹಿಂದುಳಿದ ಸಮುದಾಯ ಎಂದು ಪರಿಗಣಿಸಿದರೆ, ಇತರ ಏಕೀಕೃತ ಪ್ರದೇಶದ ಲಿಂಗಾಯತರನ್ನು ಮುಂದುವರಿದ ಸಮುದಾಯವೆಂದು ಪರಿಗಣಿಸಲಾಗಿತ್ತು. ಈ ಅಸಂಗತತೆಯನ್ನು ನಿವಾರಿಸಲು ಮತ್ತು ಇಡೀ ಹೊಸ ಮೈಸೂರು ರಾಜ್ಯಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಏಕ ರೀತಿಯ ಪಟ್ಟಿಯನ್ನು ತಯಾರಿಸಲು ಸರಕಾರವು 1959ರ ಪ್ರಾರಂಭದಲ್ಲಿ ಅಧಿಕಾರಿಗಳ ಒಂದು ಸಣ್ಣ ಸಮಿತಿಯನ್ನು ನೇಮಕ ಮಾಡಿ ಆ ಮೂಲಕ ವರದಿಯನ್ನು ಪಡೆದಿತ್ತು.

► ಬಾಲಾಜಿ ಪ್ರಕರಣಕ್ಕೂ ಮುನ್ನ ಮೈಸೂರಿನ ಬೆಳವಣಿಗೆ:
ಮೈಸೂರು ಸರಕಾರವು, ರಾಜ್ಯ ಪುನರ್ ವಿಂಗಡಣೆಯ ನಂತರ ಕ್ರಮವಾಗಿ 14ಮೇ 1959 ಮತ್ತು 22 ಜುಲೈ 1959ರಲ್ಲಿ ವೃತ್ತಿ ನಿರತ ಹಾಗೂ ತಾಂತ್ರಿಕ ಕಾಲೇಜುಗಳಿಗೆ ಪರಿಶಿಷ್ಟ ವರ್ಗಗಳು ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.65ರಷ್ಟು ಮೀಸಲಾತಿ ಕಲ್ಪಿಸಿ ಎರಡು ಅಧಿಸೂಚನೆಗಳನ್ನು ಹೊರಡಿಸಿತು. ಹಿಂದುಳಿದ ವರ್ಗಗಳನ್ನು ಮತ್ತೆ ಎರಡು ಸಣ್ಣ ಗುಂಪುಗಳಾಗಿ ಪ್ರತ್ಯೇಕವಾಗಿ ವಿಂಗಡಿಸಿ ಹಾಗೆಯೇ ಪ್ರತ್ಯೇಕ ಮೀಸಲಾತಿ ಕೋಟಾ ನೀಡಿ 2ನೆಯ ಅಧಿಸೂಚನೆ ಹೊರಡಿಸಿತು. ಪರಿಣಾಮವಾಗಿ, ಮೀಸಲಾತಿಗೆ ಒಳಪಟ್ಟ ಜಾತಿಗಳು ಒಟ್ಟು ಜನಸಂಖ್ಯೆಯ ಶೇ. 95ರಷ್ಟು ಆಗಿದ್ದವು. ಮೀಸಲಾತಿಗೆ ಒಳಪಡದವರು ಬ್ರಾಹ್ಮಣ, ಕಾಯಸ್ತಾ, ಬನಿಯ, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ಸ್ ಮಾತ್ರ. ಈ ಎರಡು ಅಧಿಸೂಚನೆಗಳು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟವು. (ರಾಮಕೃಷ್ಣ ಸಿಂಗ್ ರಾಮ್ಸಿಂಗ್ ವರ್ಸಸ್ ಸ್ಟೇಟ್ ಆಫ್ ಮೈಸೂರು). ಈ ಅಧಿಸೂಚನೆಗಳು ಹಿಂದುಳಿದ ವರ್ಗಗಳಿಗಾಗುವ ಪ್ರಯೋಜನಕ್ಕಿಂತ ಅವು ಕೋಮು ಆಧಾರಿತವಾಗಿವೆ ಮತ್ತು ಉಳಿದ ಶೇ.5ರಷ್ಟು ಜನಸಂಖ್ಯೆಗೆ ಮೂಲತಃ ತಾರತಮ್ಯ ಸ್ವರೂಪದ್ದಾಗಿವೆ ಎಂದು ವಿವರಿಸಿ ರದ್ದುಗೊಳಿಸಲಾಗಿತ್ತು. ಅದೂ ಅಲ್ಲದೆ ಹಿಂದುಳಿದ ವರ್ಗಗಳನ್ನು 2ನೇ ಅಧಿಸೂಚನೆಯಲ್ಲಿ ಉಪವರ್ಗೀಕರಣ ಮಾಡಿರುವುದು ಕೂಡ ಅನುಚ್ಛೇದ 15(4) ಅನ್ನು ಉಲ್ಲಂಘಿಸಲಾಗಿದೆ ಎಂದು ಸ್ಪಷ್ಟಪಡಿಸುತ್ತದೆ.

ಈ ಮೇಲಿನ ಎರಡು ಪ್ರಕರಣಗಳನ್ನೂ ಉಚ್ಚ ನ್ಯಾಯಾಲಯವು ಅಸಿಂಧು ಎಂದು ಘೋಷಿಸಿದ ನಂತರ ಮೈಸೂರು ಸರಕಾರ ಡಾ. ಆರ್. ನಾಗನಗೌಡ ಸಮಿತಿ ರಚಿಸಿರುವುದು. ಸಮಿತಿಯು ತನ್ನ ಮಧ್ಯಂತರ ವರದಿಯಲ್ಲಿ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3 ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 22ರಷ್ಟು ಕೋಟಾ ಮೀಸಲಿರಿಸಿ, ಸಾಮಾನ್ಯ ವರ್ಗಕ್ಕೆ ಶೇ.60ರಷ್ಟನ್ನು ಉಳಿಸಿ ಸರಕಾರ ಆದೇಶವನ್ನು ಹೊರಡಿಸಿತ್ತು. ಈ ಆದೇಶ ಹಲವರ ಹುಬ್ಬೇರುವಂತೆ ಮಾಡಿತ್ತು. ಸರಕಾರದ ಈ ಆಜ್ಞೆಯನ್ನು ವಿರೋಧಿಸಿ ಬರೋಬ್ಬರಿ 50 ರಿಟ್ ಅರ್ಜಿಗಳು ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದವು(ಎಸ್. ಎ. ಪಾರ್ಥ ವರ್ಸಸ್ ಸ್ಟೇಟ್ ಆಫ್ ಮೈಸೂರು AIR,1961 Mys 220,) ವಾದ- ಪ್ರತಿವಾದದ ನಂತರ ನ್ಯಾಯಾಲಯದ ಅಭಿಪ್ರಾಯ ಹೀಗಿರುತ್ತದೆ: ‘‘ಇತರ ಹಿಂದುಳಿದ ವರ್ಗಗಳಿಗೆ ಮೀಸಲಾದ ಶೇ.22ಕ್ಕಿಂತ ಹೆಚ್ಚಿರುವ ಇತರ ಹಿಂದುಳಿದ ವರ್ಗಗಳ ಪರವಾಗಿ ಆಕ್ಷೇಪಾರ್ಹ ಆದೇಶಗಳ ನಿಬಂಧನೆಗಳ ಅಡಿಯಲ್ಲಿ ಸೀಟುಗಳನ್ನು ಬಹಿರಂಗ ಸ್ಪರ್ಧೆಯಿಂದ ಹೊರತುಪಡಿಸಿ ಬೇರೆ ರೀತಿಯಲ್ಲಿ ಹಂಚಿಕೆ ಮಾಡುವುದು ಅಸಮಂಜಸ ನಿರ್ಬಂಧವಾಗಿದೆ. ಇತರ ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಆದ್ದರಿಂದ ಸಂವಿಧಾನದ ತತ್ವಗಳಿಗೆ ವಿರುದ್ಧವಾಗುತ್ತದೆ.’’

ನ್ಯಾಯಾಲಯದ ಆದೇಶದ ಹಿಂದೆಯೇ ಡಾ. ನಾಗನಗೌಡ ಸಮಿತಿಯು ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸುತ್ತದೆ. ಅಂತಿಮ ವರದಿ ತಯಾರಿಸುವಲ್ಲಿ, ಜಾತಿವಾರು ಅಂಕಿ ಅಂಶಗಳ ಅಲಭ್ಯತೆಯಿಂದ ಹಿಂದಿನ ಅಂಕಿ ಅಂಶಗಳನ್ನು ಅಗತ್ಯವಾಗಿ ಅನುಸರಿಸಬೇಕಾಯಿತು. 1941 ಜನಗಣತಿಯ ಪ್ರಕಾರ ರಾಜ್ಯದಲ್ಲಿನ ಬಹುತೇಕ ಜಾತಿಗಳಿಗೆ ಸಂಬಂಧಿಸಿದ ಜನಸಂಖ್ಯಾ ದತ್ತಾಂಶಗಳನ್ನು ಹಾಗೂ ಅವರಲ್ಲಿ ಸಾಕ್ಷರರ ಶೇಕಡಾವಾರು ಪ್ರಮಾಣವನ್ನು ಸಮಿತಿ ಅವಲಂಬಿಸಿದೆ.

ಸಮಿತಿಯು ಮೀಸಲಾತಿ ಪಟ್ಟಿಯನ್ನು ಜಾತಿ ಮತ್ತು ಸಮುದಾಯಗಳ ಆಧಾರದ ಮೇಲೆ ಮಾಡಲು ಕೆಲವು ಪ್ರಶ್ನೆಗಳನ್ನು ಮುಂದಿರಿಸಿಕೊಂಡು ಮುಂದುವರಿಯುತ್ತದೆ. ‘‘ಭಾರತದಲ್ಲಿ ಜಾತಿ ವ್ಯವಸ್ಥೆಯು ಒಂದು ಪ್ರಾಚೀನ ಸಾಮಾಜಿಕ ಪದ್ಧತಿಯಾಗಿದೆ. ಧಾರ್ಮಿಕ ಹಿನ್ನೆಲೆ ಇದ್ದು ಅನೂಚಾನವಾಗಿ ಬಂದ ಪದ್ಧತಿಯಾಗಿದೆ. ಪ್ರತಿಯೊಂದು ಜಾತಿಯೂ ಒಂದು ಸಾಮಾಜಿಕ ಘಟಕವಾಗಿದೆ ಮತ್ತು ಒಂದು ಜಾತಿ ಅನುಸರಿಸುವ ಆಚರಣೆಗಳು ಸಾಮಾನ್ಯವಾಗಿ ಇತರ ಜಾತಿಗಳು ಅನುಸರಿಸುವ ಆಚರಣೆಗಳಿಗಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿವೆ. ಜಾತಿ ಜಾತಿ ನಡುವೆ ವಿವಾಹ ಇರುವುದಿಲ್ಲ..ಭೋಜನವಿಲ್ಲ.. ನೀರು ಕುಡಿಯುವುದಿಲ್ಲ.’’

ಈ ಹಿನ್ನೆಲೆಯಲ್ಲಿಯೇ ಸಮುದಾಯದ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಸಾಮಾನ್ಯವಾಗಿ ಸಮಾಜದಲ್ಲಿ ಸಮುದಾಯಕ್ಕೆ ನೀಡಲಾದ ಸ್ಥಾನಮಾನದ ಮೂಲಕ ನಿರ್ಣಯಿಸುವುದು. ಹಾಗಾಗಿ ಜಾತಿ ಒಂದನ್ನೇ ಮಾನದಂಡವನ್ನಾಗಿ ಸಮಿತಿ ಇರಿಸಿಕೊಂಡಿದೆ.

ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಲು ಪ್ರೌಢಶಾಲೆಯ 1,2 ಮತ್ತು 3ನೇ ವರ್ಷಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯ ಶೇಕಡವಾರು ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಆ ಸಮುದಾಯವನ್ನು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವೆಂದು ಪರಿಗಣಿಸಿದೆ ಮತ್ತು ಸರಕಾರಿ ಸೇವೆಯಲ್ಲಿ ಆ ಸಮುದಾಯ ಹೊಂದಿರುವ ಪ್ರಾತಿನಿಧ್ಯತೆಯನ್ನೂ ಪರಿಗಣಿಸಿದೆ.

ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಮತ್ತು ಸರಕಾರಿ ಸೇವೆಯಲ್ಲಿನ ನೇಮಕಾತಿಗಾಗಿ ಪ್ರತ್ಯೇಕ ಪಟ್ಟಿಗಳನ್ನು ಸಮಿತಿಯು ಮಾಡುತ್ತದೆ. ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಹಿಂದುಳಿದವರು ಮತ್ತು ಹೆಚ್ಚು ಹಿಂದುಳಿದವರು ಎಂದು ವಿಭಾಗಿಸಿ ಕ್ರಮವಾಗಿ ಮೀಸಲಾತಿ ಕೋಟಾವನ್ನು ಶೇ.28 ಮತ್ತು ಶೇ.22 ಎಂದು ನಿಗದಿ ಮಾಡುವುದು. ಹಾಗೆಯೇ ನೇಮಕಾತಿಗಾಗಿ ಜಾತಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತದೆ 1. ಹಿಂದುಳಿದವರು 2. ಹೆಚ್ಚು ಹಿಂದುಳಿದವರು ಎಂದು. ಅವಕ್ಕೆ ಕ್ರಮವಾಗಿ ಶೇ. 21 ಮತ್ತು ಶೇ.24 ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡುವುದು ಹಾಗೂ 8 ಸಾಮಾನ್ಯ ಶಿಫಾರಸುಗಳೊಡನೆ 16.5.1961ರಂದು ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸುವುದು.

ಸರಕಾರವು ಸಮುದಾಯಗಳನ್ನು ಹಿಂದುಳಿದ ಮತ್ತು ಹೆಚ್ಚು ಹಿಂದುಳಿದ ಎಂದು ವಿಭಾಗಿಸಿ ಈ ಕೆಳಗಿನಂತೆ ಮೀಸಲಾತಿ ಕೋಟಾ ನಿಗದಿಪಡಿಸಿ (ಒಟ್ಟು ಶೇ.68) ಆದೇಶ ಹೊರಡಿಸುತ್ತದೆ.
ಹಿಂದುಳಿದವರು ಶೇ.28
ಹೆಚ್ಚು ಹಿಂದುಳಿದವರು ಶೇ.22
ಪರಿಶಿಷ್ಟ ಜಾತಿ. ಶೇ.15
ಪರಿಶಿಷ್ಟ ಪಂಗಡ. ಶೇ.3

ಪ್ರಶ್ನಿತ ಆದೇಶವು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂತು (ಎಂ.ಆರ್. ಬಾಲಾಜಿ ವರ್ಸಸ್ ಸ್ಟೇಟ್ ಆಫ್ ಮೈಸೂರು-AIR, 1963 SC 649,)
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂಬುದು ಹೇಗೆ ರಚನೆ ಆಗುತ್ತದೆ ಎಂಬ ವಿಷಯವೇ ಸರ್ವೋಚ್ಚ ನ್ಯಾಯಾಲಯದ ಮೊದಲನೇ ಪ್ರಶ್ನೆಯಾಗಿರುತ್ತದೆ. ಹಿಂದುಳಿದ ವರ್ಗ ಎಂದರೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಎಂಬ ಜೋಡಿ ನುಡಿಗಟ್ಟುಗಳನ್ನು ಸ್ವಾಭಾವಿಕವಾಗಿ ಒಂದೇ ಎಂದು ಪರಿಗಣಿಸಬೇಕಾಗುತ್ತದೆ ಎಂಬ ಅರ್ಥ ವಿವರಣೆಯನ್ನು ಸರ್ವೋಚ್ಚ ನ್ಯಾಯಾಲಯ ನೀಡುತ್ತದೆ. ಹಿಂದುಳಿದ ವರ್ಗಗಳನ್ನು ಗುರುತಿಸಲು ಖಂಡಿತ ಜಾತಿ ಒಂದು ಮಾನದಂಡವೇ ಆದರೂ, ಅದೊಂದನ್ನೇ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ಬಡತನ, ವೃತ್ತಿ ಮತ್ತು ವಾಸ ಸ್ಥಳ ಇಂಥವುಗಳೆಲ್ಲವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.ಹಾಗಾದಾಗ ಅಂಥ ಸಮುದಾಯವನ್ನು ಸಾಮಾಜಿಕವಾಗಿ ಹಿಂದುಳಿದಿದೆ ಎಂದು ಪರಿಗಣಿಸಲಷ್ಟೇ ಸಾಧ್ಯ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹೇಳುತ್ತದೆ. ಜಾತಿ ಒಂದನ್ನೇ ಪರಿಗಣಿಸಿದಲ್ಲಿ ಮುಸ್ಲಿಮರು, ಕ್ರೈಸ್ತರು ಮತ್ತು ಲಿಂಗಾಯತರೂ ಅನುಚ್ಛೇದ 15(4)ರ ವ್ಯಾಪ್ತಿಗೆ ಬರಲಾರರು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ಹಾಗೆಯೇ ನ್ಯಾಯಾಲಯ ಹಿಂದುಳಿದ ವರ್ಗಗಳನ್ನು ಹಿಂದುಳಿದ, ಹೆಚ್ಚು ಹಿಂದುಳಿದ, ಅತಿ ಹೆಚ್ಚು ಹಿಂದುಳಿದ ಎಂದು ಉಪ ವರ್ಗೀಕರಣ ಮಾಡಲು ಸಾಧ್ಯವಿಲ್ಲ. ಅದೂ ಅಲ್ಲದೆ, ಒಟ್ಟಾರೆ ಮೀಸಲಾತಿ ಶೇ.50ರಷ್ಟನ್ನು ಮೀರಿ ಹೋಗುವ ಹಾಗಿಲ್ಲ ಎಂದು ಕೂಡ ಅಜ್ಞಾಪಿಸಿತು. 1992ರಲ್ಲಿ ಇಂದ್ರ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ಹಿಂದುಳಿದ ವರ್ಗಗಳನ್ನು ಉಪ ವರ್ಗೀಕರಣ ಮಾಡಬಹುದೆಂದೂ ತೀರ್ಪು ನೀಡಿತ್ತು. ಆದರೆ ಶೇ. 50ರಷ್ಟು ಮೀಸಲಾತಿಗೆ ಮಾತ್ರ ಯಾವ ರಿಯಾಯಿತಿಯನ್ನು ತೋರಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಡಾ. ನಾಗನಗೌಡ ಸಮಿತಿ ವರದಿ ಆಧರಿಸಿ ಜಾರಿಗೆ ತಂದಿದ್ದ ಅಧಿಸೂಚನೆ ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ಘೋಷಿಸಿತ್ತು. 

ಆನಂತರದಲ್ಲಿ ಬಹಳ ವರ್ಷಗಳ ಕಾಲ ಹಿಂದುಳಿದವರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಯಾವುದೇ ಆಯೋಗವನ್ನು ಸರಕಾರ 1972ರ ತನಕ ರಚಿಸಲು ಮನಸ್ಸು ಮಾಡುವುದಿಲ್ಲ. ಈ ಅವಧಿಯಲ್ಲಿ ಕ್ರಮವಾಗಿ 1. ಬಿ.ಡಿ. ಜತ್ತಿ, 2. ಎಸ್.ಆರ್. ಕಂಠಿ 3. ಸಿದ್ದವನಹಳ್ಳಿ ನಿಜಲಿಂಗಪ್ಪ4. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಗಳಾಗಿದ್ದವರು. ಕಾಕತಾಳೀಯವಾಗಿ ಇವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರು.

ಎಂ.ಅರ್. ಬಾಲಾಜಿ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ ಹಿಂದುಳಿದ ವರ್ಗಗಳಲ್ಲಿ ಯಾವುದೇ ಮೀಸಲಾತಿ ಜಾತಿ ಪಟ್ಟಿ ಅಸ್ತಿತ್ವಕ್ಕೆ ಬರಲಿಲ್ಲ. ಬದಲಾಗಿ ವರಮಾನ ಹಾಗೂ ಉದ್ಯೋಗದ ಮಾನದಂಡದ ಆಧಾರದ ಮೇಲೆ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಮೀಸಲಾತಿ ನಿಗದಿಪಡಿಸಲಾಗಿತ್ತು. ಈ ಅವಧಿಯಲ್ಲಿ ಇದ್ದಂತಹ ಸರಕಾರದ ಮನಃಸ್ಥಿತಿ ಹೇಗಿತ್ತೆಂದರೆ, ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಅವಕಾಶವಿತ್ತಾದರೂ, ಅದನ್ನು ಅನುಷ್ಠಾನಗೊಳಿಸುವಲ್ಲಿ ಅವರಲ್ಲಿ ಇದ್ದ ಕಡುವಿರೋಧಿತನ.

ಕಾಂಗ್ರೆಸ್ ಇಬ್ಭಾಗವಾಗಿ, ಅದರಲ್ಲಿ ಒಂದು ಭಾಗದ ನೇತೃತ್ವ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತಂದು 1972ರಲ್ಲಿ ಮುಖ್ಯಮಂತ್ರಿ ಆದವರೇ ಡಿ. ದೇವರಾಜ ಅರಸು. ಅವರು ತಳ ಸಮುದಾಯಗಳ ಬಗ್ಗೆ ಅಪಾರ ಮಮಕಾರವನ್ನು ಇಟ್ಟುಕೊಂಡು ಅವರ ಏಳಿಗೆಗಾಗಿ ಸದಾ ದುಡಿದವರು. ಡಿ. ದೇವರಾಜ ಅರಸು ಅವರು ಒಬ್ಬ ದಕ್ಷ ಮತ್ತು ಕ್ರಿಯಾಶೀಲ ವಕೀಲರಾಗಿದ್ದ ಎಲ್. ಜಿ. ಹಾವನೂರು ಅವರನ್ನು 8.8.1972ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದರು. 1975ರಲ್ಲಿಯೇ ಅವರು ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು. ಫೆಬ್ರವರಿ 22, 1977ರಿಂದ ವರದಿ ಆಧಾರಿತ ಮೀಸಲಾತಿ ಜಾರಿಗೆ ಬಂತು. ಅಂದಿಗೆ ಹಾವನೂರು ವರದಿ ಹಿಂದುಳಿದ ವರ್ಗಗಳ ಬೈಬಲ್ ಎನಿಸಿಕೊಳ್ಳುತ್ತದೆ!
(ಟಿಪ್ಪಣಿ: ಇದೇ ಲೇಖಕನ ‘50ನೇ ವರ್ಷದಲ್ಲಿ ಹಾವನೂರು ಆಯೋಗ-ಒಂದು ಟಿಪ್ಪಣಿ’ ದಿನಾಂಕ 8.8.22ರ ವಾರ್ತಾಭಾರತಿಯಲ್ಲಿದೆ. ಓದಿ.)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top