ಆನೆಯ ಹಾದಿ ತಪ್ಪಿಸುವ ಮನುಷ್ಯನ ವಿಕೃತಿ ಮತ್ತು ಅಭಿವೃದ್ಧಿ
-

ನದಿಯಲ್ಲಿ ಪ್ರಾಣ ತ್ಯಜಿಸಿದ ಮಲಪ್ಪುರಂನ ಗರ್ಭಿಣಿ ಆನೆ
ಅದು ಮಲಪ್ಪುರಂ ಜಿಲ್ಲೆಯ ವೆಲ್ಲಿಯರ್ ನದಿ. ಗರ್ಭಿಣಿ ಆನೆಯೊಂದು ಆಹಾರ ತ್ಯಜಿಸಿ ನದಿಯೊಳಗೆ ನಿಂತುಬಿಟ್ಟಿತ್ತು. ಅವಳ ದೇಹ ಕೃಶವಾಗತೊಡಗಿತ್ತು. ಅವಳನ್ನು ನದಿಯಿಂದ ಹೊರ ತರುವ ಪ್ರಯತ್ನಗಳೆಲ್ಲಾ ವ್ಯರ್ಥವಾಗಿದ್ದವು. ಪ್ರಾಣಬಿಡಲು ಅವಳು ನಿರ್ಧರಿಸಿಬಿಟ್ಟಿದ್ದಳು. ಕಠಿಣ ತಪಸ್ಸು ಮಾಡುವಂತಹ ಯೋಗಿಯಂತೆ ಒಂದೇ ಸ್ಥಳದಲ್ಲಿ ನಿಂತು ಮೌನಕ್ಕೆ ಜಾರಿದ್ದಳು. ಕೆಲ ದಿನಗಳಲ್ಲೇ ಅವಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಗರ್ಭ ಧರಿಸಿದ ಕೆಲವೇ ದಿನಗಳಿಗೆ ಅವಳು ಹಳ್ಳಿಗೆ ಕರೆದುಕೊಂಡು ಹೋಗುವ ಕಾಲು ದಾರಿಯಲ್ಲಿ ನಡೆದುಬಂದಿದ್ದಳು. ಹಾಗೆ ನಡೆದು ಬಂದ ಅವಳಿಗೆ ಸ್ಥಳೀಯರು ಅನಾನಸನ್ನು ನೀಡಿದ್ದರು. ಅವಳಿಗೇನು ಗೊತ್ತಿತ್ತು ಹಣ್ಣಿನೊಳಗೆ ಜನ ಪಟಾಕಿಗಳನ್ನಿಟ್ಟು ವಿಕೃತಿ ಮೆರೆಯುತ್ತಾರೆಂದು. ಹಣ್ಣನ್ನು ಬಾಯಿಯೊಳಗೆ ಇಟ್ಟ ಕ್ಷಣ ಪಟಾಕಿ ಸಿಡಿದು ಅವಳ ಕೆಳ ದವಡೆ ಛಿದ್ರಗೊಂಡಿತ್ತು.
ಅದು ತೇಜ್ಪುರ್. ಖಾಝಿರಂಗ ರಾಷ್ಟ್ರೀಯ ಉದ್ಯಾನವನ ತರಹದ ಭೂಪ್ರದೇಶ ಇಲ್ಲೂ ಇತ್ತು. ಬಾಬಾ ರಾಮ್‌ದೇವ್ ಅವರ ಒಂದು ಸಾವಿರ ಕೋಟಿ ರೂ.ನ ಯೋಜನೆಯೊಂದು ಎದ್ದು ನಿಲ್ಲುತ್ತಿತ್ತು. ಕಾಮಗಾರಿ ಭರದಿಂದ ಸಾಗಿತ್ತು. ನಿರ್ಮಾಣಕ್ಕೆಂದು ದೊಡ್ಡ ಹಳ್ಳಗಳನ್ನು ತೋಡಲಾಗಿತ್ತು. ಇಂತಹ ಹತ್ತಡಿ ಹಳ್ಳಕ್ಕೆ ಆನೆ ಮರಿಯೊಂದು ಬೀಳುತ್ತದೆ. ಅದನ್ನು ಕಾಪಾಡಲು ಹೋದ ತಾಯಿಯಾನೆ ಕೂಡ ಹಳ್ಳಕ್ಕೆ ಬಿದ್ದು ಕಾಲು ಮುರಿದುಕೊಳ್ಳುತ್ತದೆ. ತಾಯಿ, ಮಗುವಿನ ಕೂಗಿಗೆ ಸ್ಪಂದಿಸಿದ ಗಂಡಾನೆ ಬಂದು ಅವನ್ನು ಎತ್ತಲು ಪ್ರಯತ್ನಿಸುತ್ತದೆ. ಕಾಲು ಜಾರಿ ಆ ಆನೆ ಕೂಡ ತಾಯಿಯಾನೆ ಮೇಲೆಯೇ ಬಿದ್ದುಬಿಡುತ್ತದೆ. ಮುಂಜಾನೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರುವಷ್ಟರಲ್ಲಿ ತಾಯಿ ಸತ್ತಿರುತ್ತಾಳೆ, ಗಂಡಾನೆ ಗಾಯಗೊಂಡಿರುತ್ತದೆ. ಅನಾಥ ಆನೆ ಮರಿ ತನ್ನ ತಾಯಿಯ ಪಕ್ಕ ನಿಂತು ರೋದಿಸುತ್ತಿರುತ್ತದೆ.
ಜನರ ಸಹವಾಸವೇ ಬೇಡವೆಂದು ದೂರ, ಬಲು ದೂರವಿದ್ದ ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ 21 ವರ್ಷದ ಆನೆಯೊಂದು 2018ರಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಡುತ್ತದೆ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರಿಗೆ ಆನೆಯ ಹೊಟ್ಟೆಯಲ್ಲಿ ಮೀಟರ್ ಗಟ್ಟಲೆ ಪ್ಲಾಸ್ಟಿಕ್ ಸಿಗುತ್ತದೆ. ಶಬರಿಮಲೆಗೆ ಬಂದ ಭಕ್ತರು ಎಸೆದ ಪ್ಲಾಸ್ಟಿಕ್ ಆನೆಯ ಒಡಲು ಸೇರಿರುತ್ತದೆ.
ಅಸ್ಸಾಂ ರಾಜ್ಯದ ಗೋಲ್ಪಾರ ಗೂಳಿಯಾನೆ ಹೊಟ್ಟೆಯ ಮೇಲೆಲ್ಲಾ ಗಾಯದ ಗುರುತುಗಳು. ವಿದ್ಯುತ್ ತಂತಿಗಳನ್ನು ದಾಟುವಾಗ ಆದ ಗಾಯಗಳವು. ಈ ಆನೆ ಭತ್ತದ ಗದ್ದೆಗೆ ನುಗ್ಗಿ ಬೆಳೆ ತಿಂದುಹಾಕಿತು. ರೊಚ್ಚಿಗೆದ್ದ ಜನ ಅದರ ಹಿಂದೆ ಬಿದ್ದರು. 24 ಗಂಟೆಯಲ್ಲಿ ಆನೆ ಐದು ಜನರನ್ನು ಕೊಂದಿತ್ತು. ಜನ ಅದರ ಸೆರೆಗೆ ಪಟ್ಟು ಹಿಡಿದರು. ಸೆರೆಸಿಕ್ಕ ಆನೆಗೆ ಸೆಣಬಿನ ಹಗ್ಗ ಬಿಗಿದು ಬೇರೆಡೆ ಸಾಗಿಸಲಾಯಿತು. ಸೆರೆಸಿಕ್ಕ ಆನೆ ಬಹುದಿನ ಬದುಕಲಿಲ್ಲ. ಬೇಲಿ ತಂತಿಯಲ್ಲಿ ಹರಿಯುವ ವಿದ್ಯುತ್ ಆನೆಯ ಹೃದಯದ ಅಂಗಾಂಶಗಳಿಗೆ ತೀವ್ರವಾಗಿ ಹಾನಿ ಮಾಡಿತ್ತು.
ಪಶ್ಚಿಮ ಬಂಗಾಳದಲ್ಲಿ ಆನೆಗಳನ್ನು ಬೆದರಿಸಿ ಓಡಿಸಲು ಬೆಂಕಿಯ ಉರಿಗೆ ಕರಗುವ ಹಂತದಲ್ಲಿರುವ ಡಾಂಬರಿನ ಚೆಂಡನ್ನು ಆನೆಗಳ ಮೇಲೆ ಎಸೆಯಲಾಗುತ್ತದೆ. ಡಾಂಬರು ಆನೆಯ ಮೈಗಂಟಿ ಬೆಂಕಿ ಉರಿಯತೊಡಗುತ್ತದೆ. ಇಂತಹದೇ ಒಂದು ಆಕ್ರಮಣದಲ್ಲಿ ಆನೆಮರಿ ಮತ್ತು ತಾಯಿಯಾನೆಯ ಮೈಗೆ ಬೆಂಕಿ ಹತ್ತಿದ ಚಿತ್ರವೊಂದನ್ನು ಛಾಯಾಗ್ರಾಹಕ ಬಿಪ್ಲಬ್ ಹಾಜ್ರ ತೆಗೆದಿದ್ದರು. ಆ ಚಿತ್ರಕ್ಕೆ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳು ಬಂದವು. ಭಾರತದಲ್ಲಿ ಮನುಷ್ಯ-ಆನೆ ನಡುವಿನ ಸಂಘರ್ಷ ಜಗತ್ತಿಗೆ ತಿಳಿಯಿತು.
2015ರಲ್ಲಿ ಖಾಝಿರಂಗ ಅಭಯಾರಣ್ಯಕ್ಕೆ ಅಂಟಿಕೊಂಡಿರುವ ನೋ ಡೆವಲಪ್‌ಮೆಂಟ್ ರೆನ್‌ನಲ್ಲಿ ಉಳ್ಳವರ, ‘ನಾಗರಿಕರ’ ಬಳಕೆಗೆಂದು ಗಾಲ್ಫ್ ಕೋರ್ಸ್ ತಯಾರು ಮಾಡಲಾಯಿತು. ಆನೆಗಳನ್ನು ಹೊರಗಿಡಲು ಸುತ್ತಲೂ ಎತ್ತರದ ಸದೃಢ ಗೋಡೆಗಳನ್ನು ಕಟ್ಟಲಾಯಿತು. ಆಹಾರ ಅರಸಿ ಬಂದ ಆನೆಗಳು ಪ್ರತಿನಿತ್ಯ ಗೋಡೆಯನ್ನು ಗುದ್ದಲು ಶುರುಮಾಡಿಕೊಂಡವು. ಹಿರಿಯಾನೆಗಳ ಅನುಕರಣೆಗೆ ಇಳಿದ ಮರಿಯೊಂದು ಗೋಡೆಗೆ ಗುದ್ದಿದ ರಭಸಕ್ಕೆ ಮರಿಯ ಮೆದುಳಲ್ಲಿ ತೀವ್ರ ರಕ್ತಸ್ರಾವವಾಗಿ ಪ್ರಾಣ ಬಿಟ್ಟಿತು.
ಈ ರೀತಿ ಗೋಡೆ ಕಟ್ಟುವುದು, ಕಾಡಿನ ನಡುವೆ ರಾಷ್ಟ್ರೀಯ ಹೆದ್ದಾರಿ ಮಾಡಿ ಎತ್ತರದ ಬೇಲಿ ಹಾಕುವುದು, ಆನೆ ನಡೆಯುವ ಹಾದಿಯಲ್ಲಿ ರೈಲ್ವೆ ಹಳಿಗಳನ್ನು ಎಳೆಯುವುದು, ಅವುಗಳನ್ನು ಬೇಟೆಯಾಡಿ ಕೊಲ್ಲುವುದಕ್ಕಿಂತ ಕ್ರೂರವಾಗಿದೆ. ಜೀವನ್ಮರಣದ ನಡುವೆ ಹೋರಾಡುತ್ತಿರುವ ಹತ್ತಿರದವರನ್ನು ಬಡವ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗುರುತಿನ ಚೀಟಿ ಇಲ್ಲವೆಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದರೆ, ಯಾವುದೇ ಕಾರಣವಿಲ್ಲದೆ ಅವಮಾನಿಸಿ ಕೆಲಸದಿಂದ ತೆಗೆದು ಹಾಕಿದರೆ, ಅರ್ಹ ಅಭ್ಯರ್ಥಿಯಾದರೂ ಕೆಳಜಾತಿಯವನೆಂಬ ಕಾರಣಕ್ಕೆ ಉದ್ಯೋಗ ನಿರಾಕರಿಸಿದರೆ ಆಗುವ ನಿರಾಸೆ, ಮೂಡುವ ಅಸಹಾಯಕತೆ ಬಹುಶಃ ಭಾರತದ ಪ್ರತೀ ಆನೆಗೂ ಅನುಭವವಾಗುತ್ತಿರಬಹುದು.
ಆನೆಗಳು ಸಾಗುವ ಹಾದಿ ಅದರ ಸ್ಮತಿಪಟಲದಲ್ಲಿ ಅಚ್ಚಾಗಿರುತ್ತದೆ. ದಿನಕ್ಕೆ ಹದಿನೆಂಟು ಗಂಟೆ ಆಹಾರ ತಿನ್ನುವುದರಲ್ಲೇ ಕಳೆಯುವ, 135ರಿಂದ 225 ಲೀಟರ್ ನೀರು ಕುಡಿಯುವ ಆನೆ ಸದಾ ಚಲಿಸುತ್ತಲೇ ಇರಬೇಕು. ಚಲಿಸುವುದು ಆನೆಯ ಜರೂರತ್ತು. ಸಾಗುವ ಹಾದಿಯಲ್ಲಿ ಎದುರಾಗುವ ಪ್ರತೀ ಮರ, ಕಲ್ಲುಬಂಡೆ, ನೀರಿನ ಹೊಂಡ, ರಸ್ತೆಯ ತಿರುವು ಆನೆಯ ಹಿಂಡಿನ ಕಲೆಕ್ಟಿವ್ ಮೆಮೊರಿಯಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ.
ಅಭಿವೃದ್ಧಿಯ ಹೆಸರಲ್ಲಿ ಕಾಡು ನಾಶವಾದಾಗ, ರಾಷ್ಟ್ರೀಯ ಹೆದ್ದಾರಿಗಳು ಕಾಡನ್ನು ಕತ್ತರಿಸಿದಾಗ, ಮನುಷ್ಯ ಕಾಡು ಕಡಿದು ಗದ್ದೆ, ತೋಟ, ಟೀ ಎಸ್ಟೇಟ್ ಮಾಡಿದಾಗ, ರೈಲ್ವೆ ಹಳಿಗಳು ದಟ್ಟಡವಿಯ ನಡುವೆ ಸಾಗಿದಾಗ, ನದಿ ಕಲುಷಿತಗೊಂಡಾಗ, ನಗರಗಳು ವಿಸ್ತಾರಗೊಂಡಾಗ ಆನೆ ಮನುಷ್ಯನ ಮುಖಾಮುಖಿ ಸಹಜವಾಗಿಯೇ ಹೆಚ್ಚಾಗಿದೆ.
ಆನೆಗಳ ನೆನಪುಗಳಲ್ಲಿ ಮಾನವನ ಬಗ್ಗೆ ಒಳ್ಳೆಯ ಅಭಿಪ್ರಾಯವಾಗಲಿ, ಅನುಭವವಾಗಲಿ ಇಲ್ಲವೇ ಇಲ್ಲ. ಮೇಲೆ ವಿವರಿಸಿದ ಮನುಷ್ಯನ ವಿಕೃತಿಗಳ ಕುರಿತು ಆನೆಗಳ ಮೆದುಳಲ್ಲಿ ಯಾವ ಅಭಿಪ್ರಾಯವಿರಬಹುದು? ಆನೆಯ ಸಮಗ್ರ ಅಸ್ತಿತ್ವವೇ ಜನರು ಪಂಜು ಹಿಡಿದು ಅವುಗಳ ಹಿಂದೆ ಓಡಿಸಿಕೊಂಡು ಹೋಗುವುದು, ಪಟಾಕಿ ಹೊಡೆದು ಹೆದರಿಸುವುದು, ದೊಣ್ಣೆಯಿಂದ ಹೊಡೆಯುವುದು, ಕಲ್ಲು ತೂರುವುದು, ವಿದ್ಯುತ್ ಬೇಲಿಗಳಿಗೆ, ರೈಲುಗಳಿಗೆ ಸಿಲುಕಿ ಸಾಯುವುದು, ಜನರಿಂದ ಹಲ್ಲೆಗೊಳಗಾಗಿ ಗಾಯಗೊಳ್ಳುವುದೇ ಆಗಿರುವಾಗ, ಜನರನ್ನು ಕಂಡರೆ ದ್ವೇಷಿಸುವ, ಸೇಡು ತೀರಿಸಿಕೊಳ್ಳುವ ಇರಾದೆಯೇ ಅವುಗಳೊಳಕ್ಕೆ ಬೆಳೆದರೆ ಅಚ್ಚರಿಯಿಲ್ಲ.
ಭಾರತದ ಆನೆಗಳು ಮಾತೃ ಪ್ರಧಾನ ಹಿಂಡಿನಲ್ಲಿರುತ್ತವೆ. ಪ್ರಬಲ ಹೆಣ್ಣಾನೆಯ ನೇತೃತ್ವದಲ್ಲಿ ಆನೆಗಳು ಸಾಗುತ್ತವೆ. ಆನೆಗಳ ಹಿಂಡು ಒಂದು ದೊಡ್ಡ ಅವಿಭಕ್ತ ಕುಟುಂಬ. ಅಲ್ಲಿ ಅನೇಕ ತಾಯಂದಿರು, ಚಿಕ್ಕಮ್ಮಂದಿರು, ಮರಿಗಳಿರುತ್ತವೆ. ಸಣ್ಣ ಮರಿಗಳನ್ನು ಅತ್ಯಂತ ಪ್ರೀತಿಯಿಂದ ಎಲ್ಲಾ ಆನೆಗಳು ಸೇರಿ ಬೆಳೆಸುತ್ತವೆ. ಅದೊಂದು ಪ್ರೀತಿಯ ಶಿಶುವಿಹಾರ ವ್ಯವಸ್ಥೆ. ಹಿಂಡಿನ ಸದಸ್ಯನಿಗೆ, ಮರಿಗೆ ಹಾನಿಯಾದರೆ ಎಲ್ಲಾ ಆನೆಗಳು ಮರುಗುತ್ತವೆ. ಆ ದುರ್ಘಟನೆಯನ್ನು ಸಾಯುವ ತನಕ ನೆನಪಿನಲ್ಲಿಡುತ್ತವೆ. ಬೆಳೆದ ಗಂಡಾನೆಗಳು ಹಿಂಡಿನಿಂದ ಬೇರ್ಪಡುತ್ತವೆ. ಆನೆಗಳ ಹಿಂಡಿನಲ್ಲಿ ಹಲವು ದೈತ್ಯ ಆನೆಗಳಿದ್ದರೂ ಎಲ್ಲರದು ಏಕ ಭಾವ, ಏಕ ನಿರ್ಧಾರ, ಏಕ ನಡೆ. ಆದ್ದರಿಂದ ಆನೆಗಳ ಇಡೀ ಹಿಂಡು ಘರ್ಷಣೆಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳದೆ, ಘರ್ಷಣೆ ನಡೆದ ಜಾಗಗಳನ್ನು ನೆನಪಿಟ್ಟುಕೊಳ್ಳುತ್ತದೆ.
ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಮಾನವ-ಆನೆಗಳ ಸಂಘರ್ಷದ ರಣರಂಗವಾಗಿದೆ. ಅಭಿವೃದ್ಧಿ ಹೆಸರಲ್ಲಿ ನಡೆದಿರುವ ಕಾಮಗಾರಿಗಳು ಇದಕ್ಕೆ ನೇರ ಕಾರಣವೆಂದು ಮತ್ತೊಮ್ಮೆ ಹೇಳುವ ಅವಶ್ಯಕತೆಯಿಲ್ಲ. ಮೊನ್ನೆ ಚನ್ನಪಟ್ಟಣಕ್ಕೆ ಹೋದಾಗ ಕೆಂಗಲ್ ಸುತ್ತಮುತ್ತ ಸುಮಾರು 28 ಆನೆಗಳು ಬೀಡುಬಿಟ್ಟಿವೆ ಎಂದು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ನನ್ನ ಗೆಳೆಯನೊಬ್ಬ ಹೇಳಿದಾಗ ಹೌಹಾರಿಹೋದೆ. ಚನ್ನಪಟ್ಟಣದಿಂದ ಕೂಗಳತೆ ದೂರದಲ್ಲಿರುವ ತಗಚಗೆರೆ, ಹರಿಸಂದ್ರ, ಹೊಂಗನೂರು ಅಮ್ಮಳಿದೊಡ್ಡಿ, ದ್ಯಾವ ಪಟ್ಟಣ, ವಿಠಲೇನ ಹಳ್ಳಿ, ಅರಳಾಳುಸಂದ್ರ ಗ್ರಾಮಸ್ಥರು ಬೆಳಗ್ಗೆ ಒಂಭತ್ತು ಗಂಟೆಯವರೆಗೆ ಮನೆ ಬಿಟ್ಟು ಹೊರಬರದ, ಸಂಜೆ ನಾಲ್ಕಕ್ಕೆ ಮನೆ ಸೇರಿಕೊಂಡುಬಿಡುವ ವಾತಾವರಣ ಸೃಷ್ಟಿಯಾಗಿದೆ.
ಹಾಲು ಕರೆಯಲೆಂದು ಕೊಟ್ಟಿಗೆಗೆ ತೆರಳುತ್ತಿದ್ದ ಮಹಿಳೆಯೊಬ್ಬಳ ಮೇಲೆ ದಾಳಿ ಮಾಡಿದ ಆನೆ, ಅವರ ಕಾಲುಗಳನ್ನು ತುಳಿದು ಅಪ್ಪಚ್ಚಿಯಾಗಿಸಿದೆ. ಆನೆಯ ದಂತಗಳ ನಡುವೆ ಸಿಕ್ಕಿಹಾಕಿಕೊಂಡ ಆಕೆ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ, ರಾಮನಗರ, ಕನಕಪುರ ತಾಲೂಕುಗಳು ನವ ಸಕಲೇಶಪುರಗಳಾಗಬಹುದು.
ಮಧುಮಲೈ, ಕೊಯಂಬತ್ತೂರು, ಮೆಟ್ಟುಪಾಳಯಂ, ಮಹದೇಶ್ವರ ಬೆಟ್ಟ, ಶಿವನಸಮುದ್ರ, ಮೇಕೆದಾಟು, ಮುತ್ತತ್ತಿ, ಬನ್ನೇರುಘಟ್ಟ, ಆನೇಕಲ್, ಧರ್ಮಪುರಿ, ದಿಂಡಿಗಲ್, ನಾಮಕ್ಕಲ್, ಸೇಲಂವರೆಗೆ ಆನೆ ಓಡಾಡುವ ಹಾದಿಯಿದೆ. ನಡುವೆ ಕನಕಪುರ, ಚನ್ನಪಟ್ಟಣ, ರಾಮನಗರಗಳಿವೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆನೆಗಳ ಓಡಾಟವನ್ನು ಹೇಗೆ ಪ್ರಭಾವಿಸುತ್ತದೆ ಎಂದು ಕಾದು ನೋಡಬೇಕಿದೆ. ಮೇಕೆ ದಾಟು ನೀರಾವರಿ ಯೋಜನೆಯಂತೂ ಆನೆಗಳಿಗೆ ಮಾರಕವಾಗಲಿದೆ.
ಮನುಷ್ಯ ಕೇಂದ್ರಿತ ಅಭಿವೃದ್ಧಿ ಯೋಜನೆಗಳು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ಭರದಲ್ಲಿ ಅದಕ್ಕಿಂತ ದೊಡ್ಡ ಸಮಸ್ಯೆಗಳನ್ನು ಹುಟ್ಟುಹಾಕಿಬಿಡುತ್ತವೆ ಎನ್ನುವುದರಲ್ಲಿ ಅನುಮಾನಗಳು ಉಳಿದಿಲ್ಲ. ಮಾನವ ಬೇರೆಲ್ಲಾ ಜೀವಿಗಳ ಜೊತೆಗಿರುವ ತನ್ನ ಬೆಸುಗೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳು ಭಯಾನಕವಾಗಲಿವೆ. ಪಶ್ಚಿಮ ಬಂಗಾಳದಲ್ಲಿ ಬೆಂಕಿಯನ್ನೇ ಮೈಮೇಲೆ ಹೊತ್ತು ಓಡುತ್ತಿರುವ ಆನೆ ಮರಿ ಮತ್ತು ತಾಯಿ ಆನೆಯ ಮನ ಕಲಕುವ ಚಿತ್ರಕ್ಕೆ ಬಿಪ್ಲಬ್ ಹಾಜ್ರ ಕೊಟ್ಟ ಶೀರ್ಷಿಕೆ ‘Hell is Here’ ಎಂದು. ನಿಜ. ನರಕ ಇರುವುದು ಇನ್ನೆಲ್ಲೋ ಅಲ್ಲ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.