ನಾರಾಯಣ ಗುರುಗಳ ಕೇರಳದಲ್ಲಿ ಸಂಘ ಪರಿವಾರದ ಹತಾಶೆ | Vartha Bharati- ವಾರ್ತಾ ಭಾರತಿ

--

ನಾರಾಯಣ ಗುರುಗಳ ಕೇರಳದಲ್ಲಿ ಸಂಘ ಪರಿವಾರದ ಹತಾಶೆ

ಭಾರತ ಎಂಬುದು ಎಲ್ಲ ಜನ ಸಮುದಾಯಗಳ ಆಸರೆಯ ತಾಣ. ಇದಕ್ಕೆ ಸದ್ಯ ಖಾತರಿ ನೀಡುತ್ತಿರುವುದು ನಾರಾಯಣ ಗುರುಗಳ ಕೇರಳ. ಪಿಣರಾಯಿ ವಿಜಯನ್ ಮತ್ತು ಅವರ ಪಕ್ಷ ಕೇರಳದ ಸಭ್ಯ, ಸೌಹಾರ್ದ, ಪರಂಪರೆಯ ನೈಜ ವಾರಸುದಾರರು. ತಮ್ಮ ಸಹನೆಯ ನಾಡನ್ನು ಸುಡುವ ಬೆಂಕಿ ಯಾವುದೆಂಬುದು ಕೇರಳದ ಜನರಿಗೆ ಗೊತ್ತಿದೆ. ಆ ಬೆಂಕಿಯನ್ನು ನಂದಿಸಿ ಬೆಳಕನ್ನು ನೀಡುವ ದೀಪವನ್ನು ಬೆಳಗುವ ಆರೋಗ್ಯವಂತ ಮನಸ್ಸು ಅವರಿಗಿದೆ. ಅದನ್ನು ಅವರು ಮತ್ತೆ ಸಾಬೀತು ಮಾಡಲಿದ್ದಾರೆ. ಇಂಡಿಯಾದ ಪ್ರಜಾಪ್ರಭುತ್ವದ ಅಳಿವು-ಉಳಿವಿನ ಮಹಾ ಸಮರದಲ್ಲಿ ಕೇರಳದ ಜನ ಜಯಶಾಲಿಯಾಗುತ್ತಾರೆ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ.


ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ಮತ್ತು ಕೇಂದ್ರಾ ಡಳಿತ ಪ್ರದೇಶ ಪುದುಚೇರಿ ವಿಧಾನ ಸಭೆಗಳ ಚುನಾವಣೆ ನಡೆಯುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್ ಶಾ ತಮ್ಮ ಪ್ರತಿಷ್ಠೆಯನ್ನು ಪಣಕ್ಕೆ ಇಟ್ಟಿರುವುದು ಮಮತಾ ಬ್ಯಾನರ್ಜಿ ಎದುರು ನಡೆಸಿರುವ ಸಮರದಲ್ಲಿ. ಅಲ್ಲಿ ಗೆದ್ದು ಅಸ್ಸಾಮನ್ನು ಉಳಿಸಿಕೊಂಡು ಕೇರಳದಲ್ಲಿ ಇರುವ ಒಂದರ ಜೊತೆ ಇನ್ನೆರಡು ಸ್ಥಾನಗಳನ್ನು ಗೆದ್ದು ತಮಿಳುನಾಡಿನಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳುವುದು ಭಾರತೀಯ ಜನತಾ ಪಕ್ಷ ಮತ್ತು ಅದನ್ನು ನಿಯಂತ್ರಿಸುತ್ತಿರುವ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಗುರಿಯಾಗಿದೆ. ಈ ಗುರಿ ಸಾಧನೆಗಾಗಿ ಇಬ್ಬರು ಘಟಾನುಘಟಿಗಳ ಮೈ ಬೆವರು, ಕಾರ್ಪೊರೇಟ್ ಲಾಬಿಯ ಹಣದ ಹೊಳೆ ಧಾರಾಳವಾಗಿ ಹರಿಯುತ್ತಿದೆ. ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾವಿರಾರು ಸ್ವಯಂಸೇವಕರು ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ. ಕಾರಣ ಇದು ಅವರ ಅಸ್ತಿತ್ವದ ಪ್ರಶ್ನೆ. ಈ ಚುನಾವಣೆಯ ಫಲಿತಾಂಶ ಪೂರಕವಾಗಿ ಬಂದರೆ ಇನ್ನಷ್ಟು ಜನಮಾರಕ ಕಾರ್ಯಸೂಚಿಗಳನ್ನು ಜಾರಿಗೆ ತರಬಹುದಾಗಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಜಯಶಾಲಿಯಾದರೆ ಏಕ ಪಕ್ಷ, ಏಕ ಸಿದ್ಧಾಂತ, ಏಕ ವ್ಯಕ್ತಿ, ಏಕ ಭಾಷೆ, ಏಕ ಧರ್ಮ ನಿರಂಕುಶಾಡಳಿತದ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ.

ಈ ಚುನಾವಣೆಯನ್ನು ಗೆಲ್ಲಲು ಮಮತಾ ಬ್ಯಾನರ್ಜಿ ಶತಾಯ ಗತಾಯ ಸೆಣಸುತ್ತಿದ್ದಾರೆ. ಅಸ್ಸಾಮನ್ನು ಉಳಿಸಿಕೊಳ್ಳಲು ಬಿಜೆಪಿ ನಾನಾ ಕಸರತ್ತು ನಡೆಸಿದೆ. ಇವೆರಡರ ಜೊತೆಗೆ ದಕ್ಷಿಣ ಭಾರತದಲ್ಲಿ ಕಾಲೂರಲು ಬಿಜೆಪಿ ನಾನಾ ತಂತ್ರ, ಕುತಂತ್ರಗಳನ್ನು ನಡೆಸಿದೆ. ತಮಿಳುನಾಡಿನ ದ್ರಾವಿಡ ನೆಲದಲ್ಲಿ ನೆಲೆಯೂರಲು ಸಂಘ ಪರಿವಾರ ಕಳೆದ ಏಳೆಂಟು ದಶಕಗಳಿಂದ ಯತ್ನಿಸುತ್ತಲೇ ಇದೆ. ಪೆರಿಯಾರ್, ಅಣ್ಣಾ ದೊರೈ, ಕರುಣಾನಿಧಿ ಪ್ರಭಾವಕ್ಕೊಳಗಾದ ಹಳೆಯ ಪೀಳಿಗೆಯನ್ನು ಬಿಟ್ಟು ಹೊಸ ಪೀಳಿಗೆಯಲ್ಲಿ ಹಿಂದುತ್ವದ ಮತ್ತೇರಿಸಲು ರಾಜ್ಯದ ಹಳ್ಳಿ, ಪಟ್ಟಣಗಳಲ್ಲಿ ಸಂಘದ ಶಾಖೆಗಳು ನಡೆಯುತ್ತಿವೆ. ಸೋಷಿಯಲ್ ಇಂಜಿನಿಯರಿಂಗ್ ಭಾಗವಾಗಿ ಸಣ್ಣಪುಟ್ಟ ಜಾತಿಗಳನ್ನು ಬಲೆಗೆ ಹಾಕಿಕೊಳ್ಳುವ ಅವಿರತ ಯತ್ನಗಳೂ ನಡೆದಿವೆ.ಆದರೆ ಇವೆಲ್ಲ ಚುನಾವಣಾ ರಾಜಕಾರಣದಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂದು ಖಚಿತಪಡಿಸಿಕೊಂಡು ಎಐಎಡಿಎಂಕೆ ಹೆಗಲ ಮೇಲೆ ಕುಳಿತು ಹೇಗಾದರೂ ಮಾಡಿ ವಿಧಾನಸಭೆ ಪ್ರವೇಶಿಸಲು ಮಸಲತ್ತು ನಡೆದಿದೆ. ಚುನಾವಣಾ ಗೆಲುವಿಗಾಗಿ ಶ್ರೀರಾಮನ ಹೆಸರನ್ನು ಹಿಂದೆ ಸರಿಸಿ ಮುರುಗನ ಜಪ ಮಾಡಲಾಗುತ್ತಿದೆ. ರಜನಿಕಾಂತ್ ಕಟೌಟ್ ಕೆಲಸಕ್ಕೆ ಬರುವುದಿಲ್ಲ ಎಂದು ಗೊತ್ತಾದ ನಂತರ ಈಗ ಹೊಸ ತಂತ್ರಗಳನ್ನು ಹೆಣೆಯುತ್ತಿದೆ. ಈ ಚುನಾವಣೆಯಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ‘‘ಗೆದ್ದೇ ಗೆಲ್ಲುತ್ತೇವೆ, ನೀವು ಗೆದ್ದ ಒಂದು ಸ್ಥಾನವನ್ನೂ ಬಿಡುವುದಿಲ್ಲ’’ ಎಂದು ಎದೆ ತಟ್ಟಿಕೊಂಡು ಹೇಳುತ್ತಿರುವವರು ಕೇರಳ ಸಿಎಂ ಪಿಣರಾಯಿ ವಿಜಯನ್.

ಕೇರಳದ ಕಮ್ಯುನಿಸ್ಟ್ ಸರಕಾರ ಅದರಲ್ಲೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರಂಕುಶ ಸರ್ವಾಧಿಕಾರಿ ಜೋಡಿಗೆ ಮಾತ್ರವಲ್ಲ ಈ ಜೋಡಿಯನ್ನು ಆಡಿಸುವ ನಾಗಪುರದ ಗುರುಗಳಿಗೆ ನುಂಗಲಾಗದ ತುತ್ತಾಗಿದ್ದಾರೆ. ಉಳಿದ ರಾಜ್ಯಗಳಲ್ಲಿ ಕೋಮು ವಿಭಜನೆ ಮಾಡಿದಂತೆ, ಲವ್ ಜಿಹಾದ್ ಕತೆ ಕಟ್ಟಿದಂತೆ, ಮತಾಂತರದ ಅವಾಂತರ ಮಾಡಿದಂತೆ ಕೇರಳದಲ್ಲಿ ಮಾಡಲು ಆಗುತ್ತಿಲ್ಲ. ಕೇರಳದ ಕಮ್ಯುನಿಸ್ಟ್ ಪಕ್ಷ ಬರೀ ಸಂಬಳ ಕೊಡಿಸುವ ಟ್ರೇಡ್ ಯುನಿಯನ್ ಪಾರ್ಟಿಯಲ್ಲ. ಅದು ಅಲ್ಲಿನ ಜನಸಮುದಾಯದ ಸಾಂಸ್ಕೃತಿಕ, ಸಾಮಾಜಿಕ ಬದುಕಿನಲ್ಲಿ ಆಳವಾಗಿ ಬೇರು ಬಿಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರ ಮನಸ್ಸಿನ ಮೂಲೆ ಮೂಲೆಯಲ್ಲಿ ವಿಸ್ತಾರಗೊಂಡು ನೆಲೆಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಳವ (ಈಡಿಗ) ಮುಂತಾದ ತಳ ಸಮುದಾಯಗಳ ಜನ ಕಮ್ಯುನಿಸ್ಟ್ ಪಾರ್ಟಿಯನ್ನು ತಮ್ಮ ಪಾರ್ಟಿಯೆಂದು ಒಪ್ಪಿಕೊಂಡಿದ್ದಾರೆ. ಕಾಲ ಕಾಲಕ್ಕೆ ಹೊಸ ಪೀಳಿಗೆಯ ಯುವಕರು ನಾಯಕತ್ವ ವಹಿಸಿಕೊಂಡು ಮುನ್ನಡೆಸುತ್ತಾ ಬಂದಿದ್ದಾರೆ. ಜೊತೆಗೆ ನಾರಾಯಣ ಗುರುಗಳ ಪರಂಪರೆ ಇಲ್ಲಿ ಭದ್ರ ನೆಲೆ ಹೊಂದಿದೆ. ಇಂತಹ ರಾಜ್ಯದಲ್ಲಿ ಲಾಠಿ ತಿರುವಿ, ಕವಾಯತು ಮಾಡಿ, ಹತ್ಯಾ ರಾಜಕೀಯ ಮಾಡಿ ಗೆಲ್ಲುವುದು ಸುಲಭವಲ್ಲ.

ಕೇರಳದ ಜನ ಕೋಮುವಾದಿ ಶಕ್ತಿಗಳನ್ನು ಪರ್ಯಾಯ ಎಂದು ಎಂದೂ ನಂಬಿಲ್ಲ. ಅವರು ಕಳೆದ ಶತಮಾನದ ಐವತ್ತರ ದಶಕದಿಂದ ಕಮ್ಯುನಿಸ್ಟರ ನಾಯಕತ್ವದ ಎಲ್‌ಡಿಎಫ್ (ಎಡರಂಗ) ಒಮ್ಮೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತೊಮ್ಮೆ ಹೀಗೆ ಚುನಾಯಿಸುತ್ತಾ ಬಂದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೇರಳದಲ್ಲಿ ಒಂದಿಷ್ಟು ನೆಲೆ ಹೊಂದಿದ್ದರೂ ಚುನಾವಣಾ ರಾಜಕೀಯದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಒಂದು ಸ್ಥಾನ ಗೆದ್ದು ಖಾತೆಯನ್ನು ಓಪನ್ ಮಾಡಿತ್ತು. ಈಗ ಅದನ್ನೂ ಕ್ಲೋಸ್ ಮಾಡಿಸುವುದಾಗಿ ಪಿಣರಾಯಿ ಹೇಳುತ್ತಿದ್ದಾರೆ.

ಜೊತೆಗೆ ಒಮ್ಮೆ ಎಡರಂಗ ಇನ್ನೊಮ್ಮೆ ಯುಡಿಎಫ್ ಸರದಿಯಂತೆ ಗೆಲ್ಲುವ ಸಂಪ್ರದಾಯದ ಬದಲಿಗೆ ಮತ್ತೆ ಎರಡನೇ ಬಾರಿಗೆ ಎಡರಂಗವನ್ನು ಅಧಿಕಾರಕ್ಕೆ ತರುವ ಮೂಲಕ ಪಿಣರಾಯಿ ಹೊಸ ದಾಖಲೆಯನ್ನು ಸೃಷ್ಟಿಸುವ ಎಲ್ಲ ಸೂಚನೆಗಳು ಕಾಣುತ್ತಿವೆ. ಪಿಣರಾಯಿ ಕೇರಳದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ.ಅವರೀಗ ಬರೀ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿ ಮಾತ್ರ ಉಳಿದಿಲ್ಲ. ಎಲ್ಲ ಸಮುದಾಯಗಳ ನಾಯಕರಾಗಿ ಬೆಳೆದು ನಿಂತಿದ್ದಾರೆ. ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರು ಮಾಡಿದ್ದಾರೆ. ಪಿಣರಾಯಿ ಹೆಸರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಪಬ್ಲಿಕ್ ಅಫೇರ್ಸ್ ಸೆಂಟರ್ ಎಂಬ ಚಿಂತಕರ ಚಾವಡಿ ಪಿಣರಾಯಿ ವಿಜಯನ್ ಅವರನ್ನು 2016ರಿಂದ ಸತತವಾಗಿ ಮೂರನೇ ಬಾರಿಗೆ ಅತ್ಯುತ್ತಮ ಆಡಳಿತದ ರಾಜ್ಯ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಿದೆ. 2018ರ ಸಂಯುಕ್ತ ರಾಷ್ಟ್ರ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳ ಮೊದಲ ಸ್ಥಾನ ಪಡೆದಿತ್ತು. ಕೊರೋನವನ್ನು ಎದುರಿಸಿದ ದಕ್ಷತೆ, ವಲಸೆ ಕಾರ್ಮಿಕರಿಗೆ ಗುಣಮಟ್ಟದ ವಸತಿ ಸೌಕರ್ಯ ಒದಗಿಸುವ ಅಪ್ನಾಘರ್ ಯೋಜನೆ, ಐವತ್ತಕ್ಕೂ ಹೆಚ್ಚು ಕಂಪೆನಿಗಳಿಗೆ ಆಸರೆ ಯಾದ, ಐವತ್ತು ಸಾವಿರ ಉದ್ಯೋಗ ಸೃಷ್ಟಿಸಿದ ಐಟಿ ಪಾರ್ಕ್ ಇವೆಲ್ಲ ಪಿಣರಾಯಿ ಸರಕಾರದ ಸಾಧನೆಗಳಲ್ಲಿ ಮುಖ್ಯವಾಗಿವೆ.

ಮುಂಚೆ ಮಾಧ್ಯಮಗಳ ಮೂಲಕವೇ ಪಿಣರಾಯಿ ಬಗ್ಗೆ ತಿಳಿದುಕೊಂಡಿದ್ದ ಕರ್ನಾಟಕದಲ್ಲಿರುವ ನನ್ನಂತಹವರಿಗೆ ಅವರ ಬಗ್ಗೆ ತಪ್ಪುಕಲ್ಪನೆಗಳಿದ್ದವು.ಅಚ್ಯುತಾನಂದನ್‌ರಂತಹ ಶುಭ್ರ ಚಾರಿತ್ರ್ಯದ ಸಂಗಾತಿ ಎದುರು ಪಿಣರಾಯಿ ಕಳಪೆ ಎಂಬ ಅಭಿಪ್ರಾಯ ಇತ್ತು.ಆದರೆ ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ಸಾಧಿಸಿದ್ದನ್ನು ನೋಡಿದರೆ ಅಚ್ಚರಿ ಉಂಟಾಗುತ್ತದೆ.ಆರ್ಥಿಕಾಭಿವೃದ್ಧಿ ಮಾತ್ರವಲ್ಲ ಸಾಮಾಜಿಕ ರಂಗದಲ್ಲೂ ದಲಿತರನ್ನು ಅರ್ಚಕರನ್ನಾಗಿ ಮಾಡಿ ದೇವಾಲಯಗಳ ಗರ್ಭಗುಡಿಗೆ ಕಳಿಸಿದ ಪಿಣರಾಯಿ ಈಗ ತಮ್ಮ ಪಕ್ಷದ ಹೊರಗೂ ಅಭಿಮಾನಿಗಳ ದೊಡ್ಡ ಪಡೆಯನ್ನೇ ಹೊಂದಿದ್ದಾರೆ.

ಪಿಣರಾಯಿ ಜನಪ್ರಿಯತೆಯಿಂದ ಹತಾಶರಾದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಚುನಾವಣಾ ಪ್ರಚಾರಕ್ಕೆಂದು ಕೇರಳಕ್ಕೆ ಬಂದು ಚಿನ್ನ ಹಾಗೂ ಡಾಲರ್ ಕಳ್ಳ ಸಾಗಣೆಯಲ್ಲಿ ಎಡರಂಗದ ಕೈವಾಡವಿದೆ ಎಂದು ಬುರುಡೆ ಬಿಟ್ಟು ಅಪಹಾಸ್ಯಕ್ಕೀಡಾದರು. ಕೇಂದ್ರ ಕಸ್ಟಮ್ಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಚಿನ್ನ ಕಳ್ಳ ಸಾಗಣೆ ಹಗರಣದಲ್ಲಿ ಕೇರಳ ಮುಖ್ಯಮಂತ್ರಿ ಮತ್ತು ವಿಧಾನಸಭಾಧ್ಯಕ್ಷರ ಕೈವಾಡವಿದೆ ಎಂದು ಹೈಕೋರ್ಟ್‌ಗೆಸದರಿ ಇಲಾಖೆ ಮೂಲಕ ತಿಳಿಸಲಾಯಿತು. ಇದಕ್ಕೆ ಜಗ್ಗದ ಪಿಣರಾಯಿ ‘‘ಅಮಿತ್ ಶಾ ಮಾಡುತ್ತಿರುವ ಅಪಪ್ರಚಾರ ಕೇರಳಕ್ಕೆ ಮಾಡಿದ ಅಪಮಾನ ಎಂದು ಹೇಳಿದರಲ್ಲದೆ ಚಿನ್ನ ಕಳ್ಳ ಸಾಗಣೆ ಮಾಡಿದ ವ್ಯಕ್ತಿ ಸಂಘಪರಿವಾರಕ್ಕೆ ಸೇರಿದವನು. ತಿರುವನಂತಪುರ ವಿಮಾನ ನಿಲ್ದಾಣ ಕೇಂದ್ರ ಸರಕಾರದ ಅಧೀನದಲ್ಲಿದೆ.ಅದೀಗ ಚಿನ್ನ ಕಳ್ಳ ಸಾಗಣೆಯ ಕೇಂದ್ರವಾಗಿದೆ’’ ಎಂದು ಮಾರುತ್ತರ ನೀಡಿದ್ದಲ್ಲದೆ ‘‘ಫೇಕ್ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತಿನಿಂದ ಗಡಿಪಾರು ಮಾಡಲ್ಪಟ್ಟಿದ್ದ ವ್ಯಕ್ತಿಯಿಂದ ನಮಗೆ ಪಾಠ ಬೇಡ’’ ಎಂದು ತಿರುಗೇಟು ನೀಡಿದರು.

ಅಮಿತ್ ಶಾ ಅವರು ಹೊಂದಿರುವ ಗೃಹ ಇಲಾಖೆಯನ್ನು ಕಂಡರೆ ದೇಶದ ಬಹುತೇಕ ರಾಜಕಾರಣಿಗಳು ಹೆದರುತ್ತಾರೆ. ಅಂತಲೇ ಅವರನ್ನು ಕೆಣಕಲು ಹೋಗುವುದಿಲ್ಲ. ಸವಾಲು ಹಾಕುವುದಿಲ್ಲ. ಆದರೆ ಪಿಣರಾಯಿ ಅಮಿತ್ ಶಾಗೆ ಸೊಪ್ಪುಹಾಕಲಿಲ್ಲ. ‘‘ಕೇರಳದ ಜನತೆಯ ಸ್ವಾಭಿಮಾನ, ಸ್ವಂತಿಕೆಗೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ’’ ಎಂದು ವಾಪಸು ಉತ್ತರ ಕೊಟ್ಟರು. ಮಾತ್ರವಲ್ಲ ಕೇರಳ ಸಿಎಂಪಿ ಣರಾಯಿ ಅವರನ್ನು ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸಿಲುಕಿಸಲು ಆಪಾದಿತೆಯಿಂದ ಸುಳ್ಳು ಹೇಳಿಸಿದ್ದೆನ್ನಲಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ತನಿಖೆಗೆ ಕೇರಳ ಸರಕಾರ ಆದೇಶ ನೀಡಿದೆ.

ಕೇರಳದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಬಣ್ಣ ಬಯಲಾಗಿದೆ. ಬೇರೆ ರಾಜ್ಯಗಳಲ್ಲಿ ಮತಾಂತರದ ನೆಪ ಮುಂದೆ ಮಾಡಿ ಕ್ರೈಸ್ತರ ಮೇಲೆ, ಚರ್ಚುಗಳ ಮೇಲೆ ದಾಳಿ ಮಾಡುವ ಕೋಮುವಾದಿಗಳು ವೋಟಿಗಾಗಿ ಇಲ್ಲಿ ಕ್ರೈಸ್ತ ಧರ್ಮಗುರುಗಳನ್ನು ಒಲೈಸುವ ನಾಟಕ ನಡೆಸಿದ್ದಾರೆ. ಪಕ್ಕದ ಕರ್ನಾಟಕದಲ್ಲಿ ಗೋಮಾಂಸ ಮಾರಾಟದ ನೆಪ ಮಾಡಿ ದೈಹಿಕ ದಾಳಿ ನಡೆಸುವ ಬಿಜೆಪಿ ಕೇರಳದಲ್ಲಿ ವೋಟಿಗಾಗಿ ಚುನಾವಣೆಯಲ್ಲಿ ಗೆದ್ದರೆ ಶುದ್ಧ ದನದ ಮಾಂಸ ನೀಡುವುದಾಗಿ ಭರವಸೆ ನೀಡುತ್ತಿದೆ. ಆದರೆ ಪಿಣರಾಯಿ ಜನಪ್ರಿಯತೆಯ ಮುಂದೆ ತಮ್ಮ ಆಟ ನಡೆಯಲಾರದು ಎಂದು ಬಿಜೆಪಿಯ ಹಿರಿಯ ನಾಯಕ ರಾಜ ಗೋಪಾಲರೇ ಹೇಳಿದ್ದಾರೆ.

ಕೇರಳ ಉಳಿದ ರಾಜ್ಯಗಳಂತೆ ಅಲ್ಲ. ಪಿಣರಾಯಿ ಬೇರೆ ಮುಖ್ಯಮಂತ್ರಿಗಳಂಥಲ್ಲ. ಅಂತಲೇ ತಮ್ಮನ್ನು ಕೆಣಕಿದ ಅಮಿತ್ ಶಾಗೆ ‘‘ನಾನು ಅಪಹರಣ ಮಾಡಿ ಜೈಲಿಗೆ ಹೋಗಿಲ್ಲ. ನಿಮ್ಮ ಸಂಸ್ಕೃತಿ ನಮ್ಮ ಸಂಸ್ಕೃತಿ ಅಲ್ಲ’’ ಎಂದು ಮುಟ್ಟಿ ನೋಡಿಕೊಳ್ಳುವಂತೆ ಹೇಳಿದರು.

ಜಗತ್ತಿನ, ದೇಶದ ಬೇರೆ ಕಡೆ ಕಮ್ಯುನಿಸ್ಟ್ ಚಳವಳಿಗೆ ಹಿನ್ನಡೆಯಾಗಿರಬಹುದು. ಆದರೆ ಕೇರಳ ಹಾಗಲ್ಲ. ಅಲ್ಲಿಯ ನೆಲ ಸಂಸ್ಕೃತಿಗೆ ಪೂರಕವಾಗಿ ಕಮ್ಯುನಿಸ್ಟ್ ಚಳವಳಿ ಒಂದಿಷ್ಟು ಮಾರ್ಪಾಡು ಗಳನ್ನು ಮಾಡಿಕೊಂಡಿದೆ. ಪಿಣರಾಯಿ ವಿಜಯನ್ ಅವರಂತಹ ತಳ ಸಮುದಾಯದ ನೇತಾರ ಈಗ ಬಹುದೊಡ್ಡ ನಾಯಕನಾಗಿ ಹೊರ ಹೊಮ್ಮಿದ್ದಾರೆ.ಕೇಂದ್ರ ಸರಕಾರದ ನಿರಂತ ಅಸಹಕಾರದ ನಡುವೆ ಪ್ರವಾಹ, ಭೂ ಕುಸಿತ, ಕೊರೋನದಂತಹ ವಿಪತ್ತುಗಳನ್ನು ಪರಿಣಾಮ ಕಾರಿಯಾಗಿ ಎದುರಿಸಿ ನಿಭಾಯಿಸಿದ್ದಾರೆ.ಕೇರಳದಲ್ಲಿ ಕೋಮು ದಂಗೆಗೆ ಅವಕಾಶವಿಲ್ಲ. ಕೇರಳದಲ್ಲಿ ದನ ಸಾಗಣೆ ಹೆಸರಿನಲ್ಲಿ ಅಮಾಯಕರ ಮೇಲೆ ದಾಳಿಗೆ ಆಸ್ಪದವಿಲ್ಲ. ಪಡಿತರ ವ್ಯವಸ್ಥೆ ಜನಸಾಮಾನ್ಯರ ಹಸಿವನ್ನು ಇಂಗಿಸುತ್ತಿದೆ. ಎಲ್ಲರನ್ನೂ ಪ್ರೀತಿ ಸುವ ನಾರಾಯಣಗುರುಗಳ ಸಿದ್ಧಾಂತ ನಿತ್ಯ ಬೆಳಕನ್ನು ನೀಡು ತ್ತಿದೆ. ಅಂತಲೇ ಕೋಮು ವ್ಯಾಧಿಗಳಿಗೆ ಇಲ್ಲಿ ಅವಕಾಶವಿಲ್ಲ.

ಆದರೂ ವೋಟಿಗಾಗಿ ನಾನಾ ವೇಷ ಹಾಕುವ ಆಧುನಿಕ ಜೂದಾಸರಿಗೆ ಕೇರಳದ ಚುನಾವಣಾ ಪ್ರಚಾರಕ್ಕೆ ಹೋದಾಗ ಯೇಸು ಕ್ರಿಸ್ತನ ನೆನಪಾಗಿದೆ. ಯಾರೋ ಬರೆದು ಕೊಟ್ಟ ಭಾಷಣ ಓದುವ ಇವರು ಗುಜರಾತಿನಲ್ಲಿ ಮತಾಂತರ ವಿರೋಧದ ಹೆಸರಿನಲ್ಲಿ ನಡೆಸಿದ ದೌರ್ಜನ್ಯ, ಪ್ರಾರ್ಥನಾ ಸ್ಥಳಗಳ ಮೇಲಿನ ದಾಳಿಯನ್ನು ಮರೆಯಲು ಹೇಗೆ ಸಾಧ್ಯ ‘ಜೂದಾಸ’ರ ಭಾಷಣ ಕೇಳಿದಾಗ ಎರಡು ದಶಕಗಳ ಹಿಂದೆ ಗ್ರಹಾಂ ಸ್ಟೈನ್ ಎಂಬ ಕ್ರೈಸ್ತ ಧರ್ಮ ಪ್ರಚಾರಕನನ್ನು ಮತ್ತು ಅವರ ಇಬ್ಬರು ಪುಟ್ಟ ಮಕ್ಕಳನ್ನು ಹಾಡ ಹಗಲೇ ಜೀವಂತ ಬೆಂಕಿ ಹಚ್ಚಿ ಸುಟ್ಟ ಘಟನೆ ನೆನಪಿಗೆ ಬಂತು. ಹೀಗೆ ಸುಟ್ಟ ದಾರಾಸಿಂಗ್ ಇವರದೇ ಪರಿವಾರಕ್ಕೆ ಸೇರಿದವನು. ಈತ ಒಳ್ಳೆಯವನೆಂದು ಅಡ್ವಾಣಿ ಸರ್ಟಿಫಿಕೇಟ್ ನೀಡಿದ್ದರು. ಅದೇನೇ ಇರಲಿ ಈ ಆಷಾಢ ಭೂತಿಗಳ ಮಾತಿಗೆ ಮರುಳಾಗುವಷ್ಟು ಕೇರಳದ ಜನ ದಡ್ಡರಲ್ಲ.

ಭಾರತ ಎಂಬುದು ಎಲ್ಲ ಜನ ಸಮುದಾಯಗಳ ಆಸರೆಯ ತಾಣ. ಇದಕ್ಕೆ ಸದ್ಯ ಖಾತರಿ ನೀಡುತ್ತಿರುವುದು ನಾರಾಯಣ ಗುರುಗಳ ಕೇರಳ. ಪಿಣರಾಯಿ ವಿಜಯನ್ ಮತ್ತು ಅವರ ಪಕ್ಷ ಕೇರಳದ ಸಭ್ಯ, ಸೌಹಾರ್ದ, ಪರಂಪರೆಯ ನೈಜ ವಾರಸುದಾರರು. ತಮ್ಮ ಸಹನೆಯ ನಾಡನ್ನು ಸುಡುವ ಬೆಂಕಿ ಯಾವುದೆಂಬುದು ಕೇರಳದ ಜನರಿಗೆ ಗೊತ್ತಿದೆ. ಆ ಬೆಂಕಿಯನ್ನು ನಂದಿಸಿ ಬೆಳಕನ್ನು ನೀಡುವ ದೀಪವನ್ನು ಬೆಳಗುವ ಆರೋಗ್ಯವಂತ ಮನಸ್ಸು ಅವರಿಗಿದೆ. ಅದನ್ನು ಅವರು ಮತ್ತೆ ಸಾಬೀತು ಮಾಡಲಿದ್ದಾರೆ. ಇಂಡಿಯಾದ ಪ್ರಜಾಪ್ರಭುತ್ವದ ಅಳಿವು-ಉಳಿವಿನ ಮಹಾ ಸಮರದಲ್ಲಿ ಕೇರಳದ ಜನ ಜಯಶಾಲಿಯಾಗುತ್ತಾರೆ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top