ಮತಾಂತರ ನಿಷೇಧದ ಅವಾಂತರ | Vartha Bharati- ವಾರ್ತಾ ಭಾರತಿ

--

ಮತಾಂತರ ನಿಷೇಧದ ಅವಾಂತರ

ಈ ದೇಶದಲ್ಲಿ ಸಂವಿಧಾನ ಎಂಬುದೊಂದಿದೆ. ಆ ಸಂವಿಧಾನ ಭಾರತದ ಎಲ್ಲ ಪ್ರಜೆಗಳಿಗೆ ತಮಗೆ ಇಷ್ಟ ಬಂದ ಧರ್ಮವನ್ನು ಸೇರುವ ಹಾಗೂ ಇಷ್ಟವಿಲ್ಲದ ಧರ್ಮವನ್ನು ತ್ಯಜಿಸುವ ಸ್ವಾತಂತ್ರವನ್ನು ನೀಡಿದೆ. ಸಂವಿಧಾನಾತ್ಮಕವಾಗಿ ರೂಪುಗೊಂಡ ಸರಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು.

ನಮ್ಮನ್ನು ಆಳುವ ಸರಕಾರಗಳು ಅಂದರೆ ಪ್ರಭುತ್ವದ ಅಧಿಕಾರ ಸೂತ್ರ ಹಿಡಿದ ಪಕ್ಷಗಳು ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಜನ ವಿಭಜಕ ಮಸಲತ್ತುಗಳನ್ನು ನಡೆಸುತ್ತವೆ. ಜನಸಾಮಾನ್ಯರನ್ನು ಬಾಧಿಸುತ್ತಿರುವ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸೋತು ಹೋದಾಗ ಮತಾಂತರ ನಿಷೇಧ, ಗೋರಕ್ಷಣೆ ನಿರ್ಬಂಧ, ಲವ್ ಜಿಹಾದ್‌ನಂಥ ವಿಷಯಗಳು ಅಧಿಕಾರದಲ್ಲಿರುವವರ ನೆನಪಿಗೆ ಬರುತ್ತವೆ. ಕರ್ನಾಟಕದ ಬಿಜೆಪಿ ಸರಕಾರ ಇದೀಗ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆ ಇದಕ್ಕೆ ಒಂದು ಉದಾಹರಣೆ.

ಭಾರತದ ಸಂವಿಧಾನ ಯಾವುದೇ ವ್ಯಕ್ತಿ ತನಗೆ ಇಷ್ಟವಾದ ಧರ್ಮವನ್ನು ಸೇರುವುದನ್ನು ನಿರ್ಬಂಧಿಸಿಲ್ಲ. ಆದರೂ ವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವ ಈ ಶಾಸನ ಜಾರಿಗೆ ತರಲು ಸರಕಾರ ಯಾಕೆ ವಿಶೇಷ ಆಸಕ್ತಿ ಹೊಂದಿದೆಯೋ ಅರ್ಥವಾಗುತ್ತಿಲ್ಲ. ಕ್ರೈಸ್ತ ಧರ್ಮ ಪ್ರಚಾರಕರು ಲಂಬಾಣಿ ತಾಂಡಾಗಳಿಗೆ ಹೋಗಿ ಅಮಾಯಕ ಜನರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಸಂಘ ಪರಿವಾರ ಪ್ರೇರಿತ ಆರೋಪ, ಕಟ್ಟುಕತೆಗಳ ಆಧಾರದಲ್ಲಿ ಇಂಥ ಕಾನೂನು ತರುವ ಮುನ್ನ ಸರಕಾರ ಕಾನೂನು ಪರಿಣಿತರ ಜೊತೆ ಚರ್ಚಿಸಬೇಕಾಗಿತ್ತು.

ಹಿಂದೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರೂ ಮತಾಂತರ ನಿಷೇಧ ಶಾಸನ ತಂದಿದ್ದರು. ಗುಜರಾತ್‌ನಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಇಂಥದೇ ಶಾಸನ ಜಾರಿಗೆ ಬಂದಿತ್ತು. ಇದೀಗ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯವರ ಸರಕಾರ ಅದೇ ಮಾದರಿಯ ಕಾನೂನು ತರಲು ಮುಂದಾಗಿದೆ. ಈ ಬಗ್ಗೆ ಸದನದಲ್ಲಿ ನಡೆದ ಚರ್ಚೆಯಲ್ಲಿ ಕೆಲ ಶಾಸಕರು ಮತಾಂತರ ದ ಬಗ್ಗೆ ಅತಿರಂಜಿತವಾಗಿ ಮಾತಾಡಿದ್ದಾರೆ.

ಇಂಥ ವಿಧೇಯಕದ ಬಗ್ಗೆ ಶಾಸನ ಸಭೆಯಲ್ಲಿ ಚರ್ಚೆ ನಡೆದಾಗಲೇ ಯಾದಗಿರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ದಲಿತ ಮಹಿಳೆಯೊಬ್ಬಳನ್ನ್ನು ಮನೆಯ ಒಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಕ್ರೂರಿಯೊಬ್ಬ ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ಈ ಬಗ್ಗೆ ಸದನದಲ್ಲಿ ಯಾವ ಶಾಸಕನೂ ಆತಂಕ ವ್ಯಕ್ತಪಡಿಸಿಲ್ಲ. ಬದಲಾಗಿ ಗೂಳಿಹಟ್ಟಿ ಶೇಖರ್ ಎಂಬ ಚಿತ್ರದುರ್ಗದ ಶಾಸಕ ತನ್ನ ತಾಯಿಯನ್ನು ಪಾದ್ರಿಗಳು ಮತಾಂತರ ಮಾಡಿದ್ದಾರೆ ಎಂದು ಗೋಳಾಡಿದ್ದಾರೆ.

ಯಾದಗಿರಿಯಲ್ಲಿ ಈ ರೀತಿ ದಲಿತ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದ ಏಳೆಂಟು ಘಟನೆಗಳು ನಡೆದರೂ ಅದನ್ನು ತಡೆಯಲು ಆಡಳಿತ ವ್ಯವಸ್ಥೆಗೆ ಸಾಧ್ಯವಾಗಿಲ್ಲ.

ಮತಾಂತರ ಇದೇ ರೀತಿ ನಡೆಯುತ್ತ ಹೋದರೆ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಮುಸ್ಲಿಮರು ಮತ್ತು ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮನು ಧರ್ಮ ರಕ್ಷಕರು ಬೊಬ್ಬೆ ಹಾಕುತ್ತಲೇ ಇದ್ದಾರೆ.

ಇದಕ್ಕಾಗಿ ಇವರು ತಳಬುಡವಿಲ್ಲದ ಅಂಕಿ-ಅಂಶಗಳನ್ನು ನೀಡುತ್ತಾರೆ.

ಮತಾಂತರ ಎಂಬುದು ಆರೆಸ್ಸೆಸ್‌ನ ಸರಸಂಘಚಾ ಲಕರಾಗಿದ್ದ ಮಾಧವ ಸದಾಶಿವ ಗೋಳ್ವಾಲ್ಕರ್ ಅವರಿಗೆ ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುವ ಹುನ್ನಾರವಾಗಿ ಕಂಡಿತ್ತು. ಆದರೆ, ಮತಾಂತರ ಎಂಬುದು ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಬಿಡುಗಡೆಯ ದಾರಿಯಾಗಿತ್ತು.

 ಮತಾಂತರ ಎಂಬ ಹುಯಿಲೆಬ್ಬಿಸುವುದು ಸಂಘಪರಿವಾರದ ರಾಜಕೀಯ ಕಾರ್ಯ ಸೂಚಿಯಲ್ಲದೆ ಬೇರೇನೂ ಅಲ್ಲ. ಈ ಭಾರತವನ್ನು ಮೊಘಲರು ಸುಮಾರು 600 ವರ್ಷಗಳಿಗಿಂತ ಹೆಚ್ಚು ಕಾಲ ಆಳಿದರು. ಆಗಲೂ ಹಿಂದೂಗಳ ಸಂಖ್ಯೆ ಕಡಿಮೆಯಾಗಲಿಲ್ಲ. ಮುಸ್ಲಿಮರ ಸಂಖ್ಯೆ ಹೆಚ್ಚಾಗಲಿಲ್ಲ. ಆ ನಂತರ ಬ್ರಿಟಿಷರು, ಬಹುತೇಕ ಪೋರ್ಚುಗೀಸರು ಹಾಗೂ ಫ್ರೆಂಚರು ಭಾರತದ ಕೆಲ ಭಾಗಗಳನ್ನು ಆಳಿದರು. ಸುಮಾರು 200 ವರ್ಷಕ್ಕೂ ಹೆಚ್ಚು ಕಾಲ ಆಳಿದರು ಆಗ ಇಲ್ಲಿ ಕ್ರೈಸ್ತರ ಸಂಖ್ಯೆಯೇನೂ ಹೆಚ್ಚಾಗಲಿಲ್ಲ. ನಂತರ ದೇಶಕ್ಕೆ ಸ್ವಾತಂತ್ರ ಬಂತು. ಈ ಎಪ್ಪತ್ತು ವರ್ಷಗಳಲ್ಲಿ ಮುಸ್ಲಿಮರ ಸಂಖ್ಯೆ ಶೇ.16ಕ್ಕಿಂತ ಹೆಚ್ಚಾಗಿಲ್ಲ ಹಾಗೂ ಕ್ರೈಸ್ತರ ಸಂಖ್ಯೆ ಶೇ.2ನ್ನೂ ಕೂಡ ದಾಟಿಲ್ಲ.

ಇವೆಲ್ಲ ಇವರದೇ ಸರಕಾರದ ಅಂಕಿ-ಅಂಶಗಳು. ಮತಾಂತರದ ಬಗ್ಗೆ ಗುಲ್ಲೆಬ್ಬಿಸಿ ಜನರನ್ನು ದಾರಿ ತಪ್ಪಿಸುವ ಕುತಂತ್ರವೇಕೆ?

ಈ ದೇಶದಲ್ಲಿ ಸಂವಿಧಾನ ಎಂಬುದೊಂದಿದೆ. ಆ ಸಂವಿಧಾನ ಭಾರತದ ಎಲ್ಲ ಪ್ರಜೆಗಳಿಗೆ ತಮಗೆ ಇಷ್ಟ ಬಂದ ಧರ್ಮವನ್ನು ಸೇರುವ ಹಾಗೂ ಇಷ್ಟವಿಲ್ಲದ ಧರ್ಮವನ್ನು ತ್ಯಜಿಸುವ ಸ್ವಾತಂತ್ರವನ್ನು ನೀಡಿದೆ. ಸಂವಿಧಾನಾತ್ಮಕವಾಗಿ ರೂಪುಗೊಂಡ ಸರಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು.

ಮತಾಂತರದ ಕಟ್ಟುಕತೆಯನ್ನು ಕಟ್ಟಿ ತನ್ನ ಹಿಂದುತ್ವದ ಮೂಲಕ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸಲು ಮಸಲತ್ತು ನಡೆಸಿರುವ ಶಕ್ತಿಗಳು ವಾಸ್ತವ ಸಂಗತಿಗಳ ಮೇಲೆ ಮುಸುಕೆಳೆಯುವ ಹುನ್ನಾರಗಳನ್ನು ನಡೆಸುತ್ತಲೇ ಇವೆ.

ರಾಜರುಗಳ ಕಾಲದಲ್ಲಿ ಈ ದೇಶದ ಅಸ್ಟಶ್ಯರು, ಶೂದ್ರರು ಮತ್ತು ಮಹಿಳೆಯರ ಪರಿಸ್ಥಿತಿ ಹೇಗಿತ್ತ್ತು ಎಂಬುದು ಬಾಬಾಸಾಹೇಬ ಅಂಬೇಡ್ಕರ್, ಜ್ಯೋತಿಬಾ ಫುಲೆ, ಡಿ.ಡಿ.ಕೋಸಾಂಬ್ ಹಾಗೂ ಪೆರಿಯಾರ್ ಮತ್ತು ರಾಹುಲ ಸಾಂಕ್ರಾತ್ಯಾಯನರ ಪುಸ್ತಕಗಳನ್ನು ಓದಿದರೆ ಗೊತ್ತಾಗುತ್ತದೆ.

 ಪ್ರಜಾಪ್ರಭುತ್ವ ಈ ಭಾರತಕ್ಕೆ ಬರುವ ಮುನ್ನ ಅಂದರೆ ಮೊಘಲರು ಮತ್ತು ಬ್ರಿಟಿಷರು ಬರುವ ಮುನ್ನ ಇಲ್ಲಿ ಸಾವಿರಾರು ರಾಜರು ಆಳುತ್ತಿದ್ದರು. ಭಾರತ ಎಂಬುದು ಒಂದು ದೇಶವಾಗಿ ಅಸ್ತಿತ್ವಕ್ಕೆ ಬಂದುದು ಬ್ರಿಟಿಷರು ಬಂದ ನಂತರ.

 ಹಿಂದೆ ಊರೂರಿಗೆ ಒಬ್ಬೊಬ್ಬ ರಾಜ್ಯ ವಚನ ಕೆಳಗೆ ನೂರಾರು ಪಾಳೆಯಗಾರರು.

ಆಗ ಗೋ ಬ್ರಾಹ್ಮಣ ಪರಿಪಾಲನೆ ರಾಜ ಧರ್ಮವಾಗಿತ್ತು.

ಭಾರತದಲ್ಲಿ ಮತಾಂತರ ಪ್ರಕ್ರಿಯೆ ನಿನ್ನೆ, ಮೊನ್ನೆ ಆರಂಭವಾದುದಲ್ಲ. ಸಾವಿರಾರು ವರ್ಷಗಳಿಂದ ಇದು ನಡೆಯುತ್ತಲೇ ಬಂದಿದೆ. ಈ ಮತಾಂತರಗಳು ಬಲವಂತದಿಂದ ನಡೆದಿವೆ ಎಂದು ನಾಗಪುರದ ಗುರುಗಳು ಹೇಳುತ್ತಾರೆ. ಆದರೆ ಸ್ವಾಮಿ ವಿವೇಕಾನಂದರ ಅಭಿಪ್ರಾಯ ಭಿನ್ನವಾಗಿದೆ. ‘ಭೂಮಾಲೀಕರು, ಪುರೋಹಿತರ ಉಪಟಳ ಸಹಿಸದೆ ದಲಿತರು, ಶೂದ್ರರು ಮಹಮ್ಮದಿಯರಾದರು’ ಎಂದು ವಿವೇಕಾನಂದ ಸ್ಪಷ್ಟವಾಗಿ ಹೇಳಿದ್ದಾರೆ. ಬರೆದಿದ್ದಾರೆ.

ಗೋವನ್ನು ಹಾಗೂ ಬ್ರಾಹ್ಮಣರನ್ನು ಸುರಕ್ಷಿತವಾಗಿ ಪಾಲನೆ ಮಾಡುವ ರಾಜನಿಗೆ ಅದರ ಫಲವಾಗಿ ಸತ್ತ ನಂತರ ಸ್ವರ್ಗದಲ್ಲಿ ಸೀಟು ರಿಸರ್ವ್ ಆಗಿರುತ್ತಿತ್ತು. ಮುಸ್ಲಿಮರು ಮತ್ತು ಕ್ರೈಸ್ತರು ಭಾರತಕ್ಕೆ ಬಂದ ನಂತರ ಈ ವ್ಯವಸ್ಥೆಯಲ್ಲಿ ಕೊಂಚ ಏರು ಪೇರಾಯಿತು. ಬ್ರಿಟಿಷರು ಈ ದೇಶವನ್ನು ಎಷ್ಟೇ ಲೂಟಿ ಮಾಡಿದರೂ ನಾಗರಿಕ ಆಡಳಿತವೊಂದನ್ನು ನೀಡಿ ಇಲ್ಲಿನ ಶ್ರೇಣೀಕೃತ ಜಾತಿಯ ಕಟ್ಟು ಪಾಡುಗಳಿಗೆ ಕೊಂಚ ಚುರುಕು ಮುಟ್ಟಿಸಿದರು. ಆಂಗ್ಲರು ಬರದಿದ್ದರೆ ನಾನು ದನದ ಕೊಟ್ಟಿಗೆಯಲ್ಲಿ ಸಗಣಿ ಬಳಿಯಬೇಕಾಗುತ್ತಿತ್ತು’ ಎಂದು ರಾಷ್ಟ್ರಕವಿ ಕುವೆಂಪು ಒಂದೆಡೆ ಹೇಳಿದ್ದಾರೆ.

ದಲಿತರು, ಹಿಂದುಳಿದವರು, ಈ ನೆಲದ ಮೂಲನಿವಾಸಿಗಳು ತಮ್ಮ ಸೇವೆ ಮಾಡುತ್ತ, ತಾವು ಎಸೆದಿದ್ದನ್ನು ತಿಂದು ನಾಯಿ, ಬೆಕ್ಕುಗಳಿಗಿಂತ ಕಡೆಯಾಗಿ ಬಿದ್ದಿರಬೇಕು. ಹಿಂದುತ್ವದ ಹೆಸರಿನ ತಮ್ಮ ಪಲ್ಲಕ್ಕಿ ಹೊರಲು ಹೆಗಲು ಕೊಡಬೇಕು. ತಾವು ಬರೆ ಹಾಕಿದರೆ ಹಾಕಿಸಿಕೊಳ್ಳಬೇಕು. ಜೀವಂತ ಸುಟ್ಟರೆ ಸುಡಿಸಿಕೊಳ್ಳಬೇಕು. ದೇವಾಲಯದೊಳಗೆ ಕಾಲಿಡಕೂಡದು ಇದೆಲ್ಲ ಸಾಕು ಎಂದು ಈ ನೆಲದ ಸಹ ಧರ್ಮಗಳಿಗೆ ಹೋಗಲು ಮಾತ್ರ ಬಿಡುವುದಿಲ್ಲ ಎಂದು ಪುರೋಹಿತಶಾಹಿ ಹಿಂದುತ್ವವಾದಿಗಳು ನಮ್ಮದೇ ಶೂದ್ರ ಹುಡುಗರ ಕೈಯಲ್ಲಿ ಲಾಠಿ ಕೊಟ್ಟು ನಿಲ್ಲಿಸಿದ್ದಾರೆ. ಕ್ರಿಮಿನಲ್ ಕೇಸ್ ಆಗಿ ಜೈಲಿಗೆ ಹೋಗುವವರು, ಕೋರ್ಟಿಗೆ ಎಡತಾಕುವವರು ಇದೇ ಹುಡುಗರೆ. ಆ ಪರಿ ಅವರ ಬ್ರೈನ್ ವಾಶ್ ಮಾಡಲಾಗಿದೆ.

 ಆರೆಸ್ಸೆಸ್ ಕೇಂದ್ರ ಕಚೇರಿಯಿರುವ ನಾಗಪುರದಲ್ಲಿ ದಲಿತರ, ಬಡವರ ಪ್ರಾಣ ಹಿಂಡುವ ವರ್ಣಾಶ್ರಮ ಧರ್ಮದ ಕಟ್ಟುಪಾಡುಗಳನ್ನು ಧಿಕ್ಕರಿಸಿ ಬಾಬಾಸಾಹೇಬ ಅವರು ತಮ್ಮ ಸಾವಿರಾರು ಜನ ಬೆಂಬಲಿಗರೊಂದಿಗೆ ಬೌದ್ಧ ಧರ್ಮವನ್ನು ಸೇರಿದರು. ಆಗ ಬಾಯಿ ಬಿಡದ ಮನುವಾದಿ ಗಳು ಈಗ ಘೀಳಿಡುತ್ತಿದ್ದಾರೆ.

ದಲಿತರ, ಹಿಂದುಳಿದವರ, ಗಿರಿಜನರ ಮತಾಂತರದ ಬಗ್ಗೆ ಹುಯಿಲೆಬ್ಬಿಸುವವರು ಜಾತೀಯತೆ, ಅಸ್ಟಶ್ಯತೆ, ಮಹಿಳೆಯರ ಶೋಷಣೆ ಬಗ್ಗೆ ಎಂದೂ ಉಸಿರೆತ್ತುವುದಿಲ್ಲ. ಹರ್ಯಾಣದಲ್ಲಿ ಸತ್ತ ಆಕಳಿನ ಚರ್ಮ ಸುಲಿದ ಐವರು ದಲಿತರನ್ನು ಸವರ್ಣೀಯರು ಹಾಡ ಹಗಲೇ ಸುಟ್ಟು ಹಾಕಿದಾಗ ಇವರು ಖಂಡಿಸಲಿಲ್ಲ.

ಲವ್ ಜಿಹಾದ್ ಎಂದು ಬೊಬ್ಬೆ ಹಾಕುವ ಇವರು ಖೈರ್ಲಾಂಜಿಯಲ್ಲಿ ದಲಿತ ತಾ ುಮತ್ತು ಮಗಳನ್ನು ಹಾಡಹಗಲೇ ನಡು ಬೀದಿಯಲ್ಲಿ ಅತ್ಯಾಚಾರ ಮಾಡಿ ಕೊಚ್ಚಿ ಕೊಂದು ಹಾಕಿದಾಗ ಮಾತಾಡಲಿಲ್ಲ. ಇಂಥ ಸಂದರ್ಭಗಳಲ್ಲಿ ದಲಿತರು ತಿರುಗಿ ಬೀಳದಂತೆ ಸಾಮರಸ್ಯದ ನಾಟಕ ಆಡಿಕೊಂಡು ಬರುವವರು ಯಾರೆಂದು ಎಲ್ಲರಿಗೂ ಗೊತ್ತಿದೆ.

ಸ್ವಾತಂತ್ರಾ ನಂತರ ಭಾರತ ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಒಪ್ಪಿಕೊಂಡಿದೆ. ಇಲ್ಲಿ ನೆಲೆಸಿರುವ ಯಾವುದೇ ಜಾತಿ, ಮತಗಳಾಗಲಿ, ಧರ್ಮಗುರುಗಳಾಗಲಿ, ಮಠಾಧೀಶರಾಗಲಿ, ದೇವ ಮಾನವರಾಗಲಿ, ಸಂತ ಮಂಡಲಿಗಳಾಗಲಿ, ಕೋಮುವಾದಿ ಪರಿವಾರಗಳಾಗಲಿ ಈ ಸಂವಿಧಾನಕ್ಕಿಂತ ದೊಡ್ಡವರಲ್ಲ. ಬಹು ಧರ್ಮೀಯ, ಬಹು ಸಂಸ್ಕೃತಿ ಗಳ, ಬಹು ಭಾಷೆಗಳ, ಜನಾಂಗೀಯ ವೈವಿಧ್ಯತೆಗಳನ್ನು ಹೊಂದಿರುವ ಈ ಭಾರತದಲ್ಲಿ ಜಾತ್ಯತೀತ ಜನತಂತ್ರ ವ್ಯವಸ್ಥೆಯನ್ನು ಬದುಕಿನ ಅವಿಭಾಜ್ಯ ಅಂಗ ಎಂದು ಒಪ್ಪಿಕೊಂಡಿದ್ದೇವೆ. ಅದಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಎಲ್ಲರ ರಾಷ್ಟ್ರೀಯ ಕರ್ತವ್ಯ ವಾಗಿದೆ.

ಭಾರತಕ್ಕೆ ಮತ್ತು ಕರ್ನಾಟಕಕ್ಕೆ ಕ್ರೈಸ್ತರ ಕೊಡುಗೆಯ ಬಗ್ಗೆ ಬರೆಯಲು ಹೊರಟರೆ ಈ ಅಂಕಣದ ಜಾಗ ಸಾಲುವುದಿಲ್ಲ. ಕುಷ್ಠರೋಗ ಬಂದರೆ ಸಾಯಲಿ ಎಂದು ಕಾಡಿನಲ್ಲಿ ಬಿಸಾಡುವ ಶತಮಾನದ ಹಿಂದಿನ ದಿನಗಳಲ್ಲಿ ಮದರ್ ಥೆರೇಸಾ ಅಂಥ ತಾಯಿ ಬಂದು ಸಲ್ಲಿಸಿದ ಸೇವೆ ಮರೆಯಲು ಸಾಧ್ಯವೇ? ಕನ್ನಡಕ್ಕೆ ಕಿಟೆಲ್ ಅಂಥವರು ನೀಡಿದ ಕೊಡುಗೆ ಅನನ್ಯವಾದುದು. ಈ ಭಾರತ ಎಲ್ಲರೂ ಕೂಡಿ ಕಟ್ಟಿಕೊಂಡ ಬಹುತ್ವ ಭಾರತ ಎಂಬುದನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತಾಂತರ ನಿಷೇಧ ಕಾಯ್ದೆ ತರಲು ಹೊರಟವರು ತಿಳಿದುಕೊಳ್ಳಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top