--

ಸೌಹಾರ್ದ ಕರ್ನಾಟಕ ಅಪಾಯದಲ್ಲಿ

ಒಂದೇ ರಾಷ್ಟ್ರ, ಒಂದೇ ಧರ್ಮ, ಒಂದೇ ಭಾಷೆಯ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳನ್ನು ಅಳಿಸಿ ಹಾಕಿ ಎಲ್ಲ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿಯನ್ನು ಹೇರಲು ಹೊರಟ ಒಕ್ಕೂಟ ಸರಕಾರದ ಏಕಪಕ್ಷೀಯ ನೀತಿಯಿಂದ ಕರ್ನಾಟಕದ ಭಾಷೆ, ಸಂಸ್ಕೃತಿ, ಪರಂಪರೆಗೆ ಈಗ ಗಂಡಾಂತರ ಎದುರಾಗಿದೆ.


ಈಗ ನಮ್ಮೆದುರು ಇರುವ ಬಹುದೊಡ್ಡ ಸವಾಲೆಂದರೆ ಕನ್ನಡ ಭಾಷೆಯ ಅಳಿವು ಉಳಿವು ಹಾಗೂ ಸೌಹಾರ್ದ ಕರ್ನಾಟಕಕ್ಕೆ ಎದುರಾಗಿರುವ ಗಂಡಾಂತರ.
 ಎಲ್ಲ ಜನ ಸಮುದಾಯಗಳು ಸೇರಿ ಕಟ್ಟಿದ ರಾಜ್ಯ ಈ ಕರ್ನಾಟಕ. ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಬಂದರೂ ಕನ್ನಡ ನಾಡು ಅಸ್ತಿತ್ವಕ್ಕೆ ಬಂದದ್ದು 1956ರ ನವೆಂಬರ್ 1ರಂದು. ಇದಕ್ಕಿಂತ ಮೊದಲು ಕನ್ನಡ ಭಾಷಿಕ ಪ್ರದೇಶಗಳು ಅಕ್ಕಪಕ್ಕದ ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದವು. ಇವುಗಳನ್ನೆಲ್ಲ ಒಂದೆಡೆ ಸೇರಿಸಿ ಕರ್ನಾಟಕ ರಾಜ್ಯ ರಚನೆ ಆಗಬೇಕೆಂದು ಸ್ವಾತಂತ್ರಾ ನಂತರ ಬಹುದೊಡ್ಡ ಹೋರಾಟವೇ ನಡೆಯಿತು. ಕರಾವಳಿಯ ಮಂಗಳೂರು, ಕಾರವಾರದಿಂದ ಹಿಡಿದು ಉತ್ತರ ಕರ್ನಾಟಕದ ಬಿಜಾಪುರ, ಬೀದರ್, ಹಳೆಯ ಮೈಸೂರಿನ ಬೆಂಗಳೂರು, ಹಾಸನ, ಕೋಲಾರ ಸೇರಿ ಎಲ್ಲ ಕಡೆ ಕನ್ನಡದ ಜನ ಬೀದಿಗಿಳಿದು ಹೋರಾಡಿದ ಪರಿಣಾಮವಾಗಿ ಅಂದಿನ ನೆಹರೂ ಸರಕಾರ ಕೊನೆಗೂ ಸಮ್ಮತಿ ನೀಡಿತು. ಈ ಹೋರಾಟದ್ದೇ ದೊಡ್ಡ ಇತಿಹಾಸ. ಅದರ ವಿವರಗಳು ಈಗ ಬೇಡ.

ಒಂದೇ ರಾಷ್ಟ್ರ, ಒಂದೇ ಧರ್ಮ, ಒಂದೇ ಭಾಷೆಯ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳನ್ನು ಅಳಿಸಿ ಹಾಕಿ ಎಲ್ಲ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿಯನ್ನು ಹೇರಲು ಹೊರಟ ಒಕ್ಕೂಟ ಸರಕಾರದ ಏಕಪಕ್ಷೀಯ ನೀತಿಯಿಂದ ಕರ್ನಾಟಕದ ಭಾಷೆ, ಸಂಸ್ಕೃತಿ, ಪರಂಪರೆಗೆ ಈಗ ಗಂಡಾಂತರ ಎದುರಾಗಿದೆ.
ಬಹುತ್ವ ಈ ನಾಡಿನ ಜೀವ ಜಲ. ಬಹುಧರ್ಮ, ಬಹುಭಾಷೆ, ಬಹು ಸಂಸ್ಕೃತಿಗಳ ತಾಣವೆಂದು ಹೆಸರಾದ ಕನ್ನಡ ನಾಡಿನ ಕನ್ನಡದ ಮೊಟ್ಟ ಮೊದಲ ಲಭ್ಯ ಕೃತಿಯಾದ ಕವಿರಾಜ ಮಾರ್ಗ ಕನ್ನಡಿಗರ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿದಿದೆ.
 
ಬೆಳಗಾವಿ ಜಿಲ್ಲೆಯ ಸಾವಳಗಿ ಶಿವಲಿಂಗೇಶ್ವರ, ಶಿರಹಟ್ಟಿಯ ಫಕೀರೇಶ್ವರ, ಕೊಡೆಕಲ್ ಬಸವಣ್ಣ, ತಿಂಥಣಿ ಮೋನಪಯ್ಯ, ಆಳಂದದ ಲಾಡ್ಲೆ ಮಸಾಕ್ ಮುಂತಾದ ಪೀಠಗಳಿಗೆ ಹಿಂದೂ-ಮುಸ್ಲಿಮರು ಒಟ್ಟಾಗಿಯೇ ನಡೆದುಕೊಳ್ಳುತ್ತಾರೆ. ತಮ್ಮ, ತಮ್ಮ ನಂಬಿಕೆಯಂತೆ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಾರೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂತಹ ಸೌಹಾರ್ದದ ತಾಣಗಳಿವೆ.

ಈಗ ಎಲ್ಲವನ್ನೂ ಕೋಮುವಾದೀಕರಣಗೊಳಿಸಲು ನಡೆದಿರುವ ಹುನ್ನಾರಗಳು, ಕೇಸರಿ ಉಡುಪಿನಲ್ಲಿ ಮಿಂಚಿದ ಪೋಲಿಸರು, ಅನೈತಿಕ ಪೊಲೀಸ್‌ಗಿರಿ ಇವೆಲ್ಲಾ ಸಾಕಷ್ಟು ವರದಿಯಾಗುತ್ತಲೇ ಇವೆ. ಇಂತಹ ಪ್ರಚೋದನಾಕಾರಿ ಚಟುವಟಿಕೆಗಳ ಬಗ್ಗೆ ಪ್ರಭುತ್ವ ಮೃದು ಧೋರಣೆ ತಾಳಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಇವುಗಳಾಚೆ ಕರ್ನಾಟಕದ ಸೌಹಾರ್ದ ಪರಂಪರೆಯ ಬಗ್ಗೆ ನಾವೆಲ್ಲರೂ ಕಣ್ಣು ತೆರೆದು ನೋಡಬೇಕಾಗಿದೆ.

ಪರಧರ್ಮ ಸಹಿಷ್ಣುತೆ ಇಲ್ಲದ ಬದುಕು ಬದುಕೇ ಅಲ್ಲ ಎಂದು ಕವಿರಾಜ ಮಾರ್ಗದ ಕವಿ ಪ್ರತಿಪಾದಿಸುತ್ತಾನೆ. ‘ಯಾವುದೇ ಮತದ ಉಗ್ರವಾದದ ಬದುಕಿನಲ್ಲಿ ಬಂಗಾರವಿದ್ದರೂ ಕಸದಂತೆ ವ್ಯರ್ಥ’ಎಂದು ಕವಿ ರಾಜ ಮಾರ್ಗದ ಕವಿ ಹೇಳುತ್ತಾನೆ.

 ಇಂತಹ ಕರ್ನಾಟಕದಲ್ಲಿ ಈಗ ಕೋಮು ದ್ವೇಷದ ವಿಷ ಬೀಜ ಬಿತ್ತುವ ಮಸಲತ್ತು ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಕಡೆ ಗೋಹತ್ಯೆ, ಮತಾಂತರದ ಸುಳ್ಳು ಕತೆಗಳನ್ನು ಕಟ್ಟಿ ಸೌಹಾರ್ದದಿಂದ ಬದುಕುತ್ತಿರುವ ಜನಸಾಮಾನ್ಯರ ನಡುವೆ ವೈಷಮ್ಯದ ದಳ್ಳುರಿ ಎಬ್ಬಿಸುವ ಮಸಲತ್ತು ನಡೆದಿದೆ. ಮುಂಬರುವ 2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೋಮು ದ್ವೇಷದ ಬೆಂಕಿ ಆರದಂತೆ ನೋಡಿಕೊಳ್ಳಲಾಗುತ್ತಿದೆ.

ಕರ್ನಾಟಕದ ಸೂಫಿ ಪರಂಪರೆ ತನ್ನದೇ ಆದ ವೈಶಿಷ್ಟಗಳನ್ನು ಹೊಂದಿದೆ. ಕ್ರಿ.ಶ.1317-1423ರ ಕಾಲಾವಧಿಯಲ್ಲಿ ಬದುಕಿದ್ದ ಕಲಬುರಗಿಯ ಸಂತ ಕವಿ ಸಯ್ಯದ್ ಮುಹಮ್ಮದ್ ಗೇಸುದರಾಜನೇ ಕರ್ನಾಟಕದ ಸೂಫಿ ಪರಂಪರೆಯ ಮೊದಲಿಗನಾಗಿದ್ದಾನೆ. ಖ್ವಾಜಾ ಬಂದೇನವಾಝ್ ಎಂದೇ ಖ್ಯಾತರಾದ ಇವರು ಉತ್ತರ ಭಾರತದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಯಾ ಗರೀಬ್ ನವಾಝ್ ಸಂವಾದಿಯಾಗಿ ನೆಲೆ ಕಂಡುಕೊಂಡಿದ್ದಾನೆ.

ಚಿಕ್ಕಮಗಳೂರಿನಲ್ಲಿರುವ ಬಾಬಾಬುಡಾನ್ ಸ್ವಾಮಿ ದರ್ಗಾ-ದತ್ತಪೀಠವು ಕೂಡ ಹಿಂದೂ- ಮುಸ್ಲಿಮರ ಸೌಹಾರ್ದದ ತಾಣ. ಭಾರತಕ್ಕೆ ಕಾಫಿ ಬೀಜವನ್ನು ತಂದ ಮುಸ್ಲಿಂ ಸಂತ ಬಾಬಾಬುಡಾನ್ ಹೆಸರನ್ನು ಈ ಗಿರಿ ನೆನಪಿಸುತ್ತದೆ. ಕೋಮುವಾದಿ ಶಕ್ತಿಗಳು ತಮ್ಮ ಕೋಮು ವಿಭಜನೆಯ ಚುನಾವಣಾ ರಾಜಕೀಯಕ್ಕಾಗಿ ಈ ಸೌಹಾರ್ದ ತಾಣವನ್ನು ಯಾವ ಸ್ಥಿತಿಗೆ ತಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಇಂತಹ ಭಾವೈಕ್ಯ ಕೇಂದ್ರಗಳನ್ನು ಹುಡುಕಿ ವಿವಾದದ ಅಲೆಯನ್ನು ಎಬ್ಬಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಇವರ ಹುನ್ನಾರವಾಗಿದೆ.

 ಶತಮಾನಗಳಿಂದ ಈ ನೆಲದಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಅಣ್ಣ ತಮ್ಮಂದಿರಂತೆ ಬದುಕುತ್ತಾ ಬಂದಿದ್ದಾರೆ. ಮತಾಂತರದ ಹೆಸರಿನಲ್ಲಿ ಕ್ರೈಸ್ತರನ್ನು ಗುರಿಯಾಗಿಸಿ ಅಪಪ್ರಚಾರ ನಡೆದಿದೆ. ಆದರೆ ಕರಾವಳಿ ಕರ್ನಾಟಕ ಸೇರಿದಂತೆ ಬಹುತೇಕ ಕಡೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರೈಸ್ತರ ಕೊಡುಗೆ ಅಪಾರವಾಗಿದೆ. ಸಂಘ ಪರಿವಾರದ ಅನೇಕ ನಾಯಕರ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಾದ ಬಿಷಪ್ ಕಾಟನ್, ಸೈಂಟ್ ಮೇರಿ, ಬಾಸೆಲ್ ಮಿಶನ್, ಸೈಂಟ್ ಆ್ಯಂಡ್ರ್ಯೂಸ್ ಮುಂತಾದ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನ ಮಾನವನ್ನು ಹೊಂದಿದ್ದಾರೆ.

ಕ್ರೈಸ್ತರ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಮತಾಂತರಕ್ಕೆ ಒತ್ತಾಯಿಸಿದ ಒಂದೇ ಒಂದು ಪ್ರಕರಣವೂ ಇಲ್ಲ. ಕ್ರೈಸ್ತರು ನಡೆಸುವ ಅನೇಕ ಆಸ್ಪತ್ರೆಗಳು ಕರ್ನಾಟಕದಲ್ಲಿ ಇವೆ. ಅಲ್ಲಿ ಎಲ್ಲ ಜಾತಿ ಮತಗಳ ಜನರು ಯಾವುದೇ ತಾರತಮ್ಯವಿಲ್ಲದೇ ಚಿಕಿತ್ಸೆಯನ್ನು ಪಡೆಯುತ್ತಾರೆ. ಹೀಗೆ ಚಿಕಿತ್ಸೆ ಪಡೆದವರನ್ನು ಮತಾಂತರ ಮಾಡಿದ ಒಂದೇ ಇಂದು ಉದಾಹರಣೆಯನ್ನು ಕೋಮುವಾದಿಗಳು ನೀಡುವರೇ?

ಕರ್ನಾಟಕದಲ್ಲಿ ಎಲ್ಲಿ ಹೋದರೂ ದರ್ಗಾ, ದೇವಸ್ಥಾನ, ಮಠ, ಮಂದಿರಗಳು ಭಾವೈಕ್ಯದ ಸಂದೇಶ ಸಾರುತ್ತಾ ಶತಮಾನಗಳಿಂದ ಅಸ್ತಿತ್ವದಲ್ಲಿವೆ. ಇಲ್ಲಿ ನಡೆಯುವ ಜಾತ್ರೆ, ಉರೂಸು, ರಥೋತ್ಸವ, ಸಂತೆಗಳಲ್ಲಿ ಎಲ್ಲ ಜಾತಿ, ಮತಗಳ ಜನಸಾಮಾನ್ಯರು ಸೇರುತ್ತಾರೆ. ಅವರವರ ಇಷ್ಟದಂತೆ ಶಾಲು ಹೊದಿಸುವ, ಸಕ್ಕರೆ ಎಡೆ ಮಾಡುವ, ಗಂಧವನ್ನು ಸಮರ್ಪಿಸುವ, ಮೊಹರಂ ಸಂದರ್ಭದಲ್ಲಿ ಪೀರ್‌ಗಳನ್ನು ಹೊರುವ ಹೀಗೇ ನಾನಾ ವಿಧದ ಭಕ್ತಿ ಮತ್ತು ಆರಾಧನಾ ವಿಧಾನಗಳು ಇಲ್ಲಿವೆ. ಸಂತರು, ಶರಣರು, ಸೂಫಿಗಳು, ಪಾದ್ರಿಗಳು, ಜೈನರು, ಬೌದ್ಧರು ಎಲ್ಲರನ್ನೊಳಗೊಂಡ ನಾಡಿದು. ಅಂತಲೇ ರಾಷ್ಟ್ರ ಕವಿ ಕುವೆಂಪು ಅವರು ಇದನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು.

ಕರ್ನಾಟಕ ಮಾತ್ರವಲ್ಲ ಭಾರತದಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ. ದಿವಾಳಿಯಾದ ದೇಶದ ಆರ್ಥಿಕ ಪರಿಸ್ಥಿತಿ, ಬೆಲೆಏರಿಕೆ, ನಿರುದ್ಯೋಗ ಮುಂತಾದವುಗಳ ಬಗ್ಗೆ ಕ್ರಮೇಣ ಜನಸಾಮಾನ್ಯರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ.ಇದರಿಂದ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಗುರುಗಳಿಗೆ ಆತಂಕವಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿ ಸೋತರೆ ಮೋದಿಯವರ ನೇತೃತ್ವದಲ್ಲಿ ಅತ್ಯಂತ ನಾಜೂಕಾದ ತಂತ್ರದ ಮೂಲಕ ಕಟ್ಟಲು ಹೊರಟ ಮನುವಾದಿ ಹಿಂದೂ ರಾಷ್ಟ್ರದ ಕನಸು ನನಸಾಗುವುದಿಲ್ಲ ಎಂದು ದಿಗಲುಗೊಂಡ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ದಿಢೀರನೇ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಮತ್ತು ಮತಾಂತರದ ಬಗ್ಗೆ ಮಾತಾಡಿದ್ದಾರೆ. ಆ ಮೂಲಕ ಭಾರತದ ಜನರನ್ನು ಕೋಮು ಆಧಾರದಲ್ಲಿ ವಿಭಜಿಸಿ ಬಲಿಷ್ಠವಾದ ಹಿಂದೂ ಓಟ್ ಬ್ಯಾಂಕ್ ನಿರ್ಮಿಸಿ ಬಿಜೆಪಿಯನ್ನು ಮತ್ತೆ ಗೆಲ್ಲಿಸುವ ಲೆಕ್ಕಾಚಾರ ಅವರದು.

ಇಂತಹ ಸೌಹಾರ್ದ, ಪ್ರೀತಿಯ ಕರ್ನಾಟಕ ಇನ್ನೊಬ್ಬರ ಸಾವನ್ನು ಸಂಭ್ರಮಿಸುವ, ಚಿಂತಕರನ್ನು ಹಾಡಹಗಲೇ ಗುಂಡಿಕ್ಕಿ ಕೊಲ್ಲುವ ಫ್ಯಾಶಿಸ್ಟ್ ನಾಡಾಗಿ ಬದಲಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಜನರನ್ನು ರಕ್ಷಿಸಬೇಕಾದವರ ಬಾಯಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತಹ ಮಾತುಗಳನ್ನು ಕೇಳಬೇಕಾಗಿ ಬಂದಿದೆ.

ಕರ್ನಾಟಕದ ಸೌಹಾರ್ದ ಪರಂಪರೆಗೆ 12ನೇ ಶತಮಾನದ ವಚನ ಚಳವಳಿಯ ಕೊಡುಗೆ ದೊಡ್ಡದು. ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಸವಾಲಾಗಿ ನಿಂತ ಬಸವಣ್ಣ ಇವ ನಮ್ಮವ ಇವ ನಮ್ಮವ ಎಂದರು. ಇಂತಹ ನೆಲದಲ್ಲಿ ಪ್ರತಿನಿತ್ಯವೂ ದ್ವೇಷದ ದಳ್ಳುರಿ ಎಬ್ಬಿಸುವ ಹುನ್ನಾರ ನಡೆದಿರುವುದು ಆತಂಕದ ಸಂಗತಿಯಾಗಿದೆ.

ಈ ಎಲ್ಲ ವಿದ್ಯಮಾನಗಳಿಂದ ಕರ್ನಾಟಕದ ಕನ್ನಡ ಪರಂಪರೆ, ಭಾಷೆ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಗಳು ಅಳಿವು ಉಳಿವಿನ ಹೊಸ ಸವಾಲನ್ನು ಎದುರಿಸಬೇಕಾಗಿ ಬಂದಿದೆ. ಕ್ರಮೇಣ ಭಾಷಾವಾರು ರಾಜ್ಯಗಳನ್ನೇ ಅಳಿಸಿ ಹಾಕಿ ಅಖಂಡ ಹಿಂದೂ ರಾಷ್ಟ್ರಕ್ಕೆ ಪೂರಕವಾಗಿ ಸಣ್ಣ ಪುಟ್ಟ ರಾಜ್ಯಗಳನ್ನು ನಿರ್ಮಿಸುವುದು ಪ್ರಾದೇಶಿಕ ಭಾಷೆಗಳ ಅಸ್ಮಿತೆಯನ್ನು ಹೊಸಕಿ ಹಾಕುವುದು ಮಸಲತ್ತಿನೊಳಗಿನ ಮಸಲತ್ತಾಗಿದೆ. ಈ ಕಾರ್ಯತಂತ್ರದ ಭಾಗವಾಗಿ ಕನ್ನಡಿಗರನ್ನು ಕೋಮು ಆಧಾರದಲ್ಲಿ ವಿಭಜಿಸಲು ಅನೈತಿಕ ಪೊಲೀಸ್‌ಗಿರಿ, ಮತಾಂತರ, ದನ ಸಾಗಾಟದಂತಹ ಪ್ರಚೋದನಾಕಾರಿ ವಿಷಯಗಳನ್ನು ಕೆದಕಲಾಗುತ್ತಿದೆ.

 ಮುಂಬರಲಿರುವ ಚುನಾವಣೆಯ ಸೋಲನ್ನು ತಪ್ಪಿಸಲು ಕೋಮುವಾದಿ ಶಕ್ತಿಗಳ ಬಳಿ ಇರುವ ಏಕೈಕ ಅಸ್ತ್ರ ಕೋಮು ಆಧಾರದಲ್ಲಿ ಧ್ರುವೀಕರಣ ಅಂದರೆ ಜನ ವಿಭಜನೆ. ಇದನ್ನು ಆ ಸಂಘಟನೆಗಳಿಂದ ಹೊರಗೆ ಬಂದಿರುವ ಕಾರ್ಯಕರ್ತರೇ ಹೇಳುತ್ತಿದ್ದಾರೆ.
ಕನ್ನಡ ನಾಡನ್ನು ರಾಜಕೀಯ ಸ್ವಾರ್ಥಕ್ಕಾಗಿ ಕೋಮು ದ್ವೇಷದ ದಳ್ಳುರಿಗೆ ತಳ್ಳುವ ಎಲ್ಲ ತಂತ್ರ, ಕುತಂತ್ರಗಳನ್ನು ವಿಫಲಗೊಳಿಸುವುದು ಕನ್ನಡಿಗರೆಲ್ಲರ ಹೊಣೆಗಾರಿಕೆಯಾಗಿದೆ.

ದಕ್ಷಿಣ ಭಾರತದಲ್ಲಿ ಬೇರೂರಿ ವಿಸ್ತಾರಗೊಳ್ಳಲು ಕರ್ನಾಟಕದಲ್ಲಿ ತನ್ನ ನೆ ೆಯನ್ನು ಭದ್ರಪಡಿಸಿಕೊಳ್ಳುವುದು ಸಂಘಪರಿವಾರ ಅರ್ಥಾತ್ ಬಿಜೆಪಿಗೆ ಅನಿವಾರ್ಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರೂ ಕೂಡ ಒತ್ತಡಕ್ಕೊಳಗಾಗಿ ಅಥವಾ ಸ್ಥಾನ ಭದ್ರಪಡಿಸಿಕೊಳ್ಳಲು ಕ್ರಿಯೆಗೆ ಪ್ರತಿಕ್ರಿಯೆ ಯಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರೆಸ್ಸೆಸ್‌ನ ಅಖಿಲ ಭಾರತ ಸರಕಾರ್ಯವಾಹ ಕರ್ನಾಟಕದವರೇ ಆದ ದತ್ತಾತ್ರೇಯ ಹೊಸಬಾಳೆ ಅವರೂ ಕೂಡ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮಾತನ್ನು ಆಡಿದ್ದಾರೆ.

ಇದರರ್ಥ ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಗಲಭೆಗಳು ಆಕಸ್ಮಿಕ ಇಲ್ಲವೇ ಸ್ಥಳೀಯ ವೈಷಮ್ಯಗಳ ಕಾರಣಗಳಿಗಾಗಿ ಮಾತ್ರ ನಡೆದಿಲ್ಲ. ಇದು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ ಕಾರ್ಯಾಚರಣೆ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ. 2020ರಲ್ಲಿ ರಾಜ್ಯದಲ್ಲಿ ಕೋಮು ಘರ್ಷಣೆಯ 110 ಘಟನೆಗಳು ವರದಿಯಾಗಿವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top