ಮಠಾಧೀಶರಿಗೆ ಏಕೆ ಮತಾಂತರದ ಚಿಂತೆ? | Vartha Bharati- ವಾರ್ತಾ ಭಾರತಿ

--

ಮಠಾಧೀಶರಿಗೆ ಏಕೆ ಮತಾಂತರದ ಚಿಂತೆ?

ಬಸವಣ್ಣನವರ ಹೆಸರನ್ನು ಬಂಡವಾಳ ಮಾಡಿಕೊಂಡು ತಮ್ಮ ಪೀಠಗಳನ್ನು ಭದ್ರಪಡಿಸಿಕೊಳ್ಳುವ ಮಠಾಧೀಶರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರಿಗೆ ಇಷ್ಟು ದಿನ ಹೇಳುತ್ತಾ ಬಂದ ಬಸವಣ್ಣನವರೂ ಬೇಕು, ಬಾಬಾಸಾಹೇಬರ ಹೆಸರೂ ಬೇಕು. ನಾಗಪುರದ ಗುರುಗಳನ್ನು ಒಲೈಸಲು ಸರಕಾರದಿಂದ ಸವಲತ್ತುಗಳನ್ನು ಪಡೆಯಲು ಮತಾಂತರ ವನ್ನೂ ವಿರೋಧಿಸಬೇಕು.

ಮತಾಂತರ ನಿಷೇಧ ಕಾಯ್ದೆ ತರಲು ಮುಂದಾಗಿರುವ ರಾಜ್ಯ ಬಿಜೆಪಿ ಸರಕಾರ ಇದಕ್ಕಾಗಿ ‘ಧಾರ್ಮಿಕ ಸ್ವಾತಂತ್ರ ಹಕ್ಕು-ರಕ್ಷಣೆ ಹಕ್ಕು ಕಾಯ್ದೆ 2021’ ವಿಧೇಯಕ ಮಂಡಿಸಲು ಮುಂದಾಗಿದೆ. ಈಗ ತರಲು ಉದ್ದೇಶಿಸಲಾಗಿರುವ ಶಾಸನದ ಪ್ರಕಾರ, ಪರಿಶಿಷ್ಟ ಜಾತಿ, ಬುಡಕಟ್ಟು, ಅಪ್ರಾಪ್ತ ವಯಸ್ಸಿನವರು, ಮಹಿಳೆಯರು ಹಾಗೂ ಬುದ್ಧಿ ಮಾಂದ್ಯರನ್ನು ಮತಾಂತರ ಮಾಡಿದವರಿಗೆ ಕನಿಷ್ಠ 3ರಿಂದ 10 ವರ್ಷದವರೆಗೆ ಜೈಲು ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುವುದು.

ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆ ಮಾಡಲು ಹೊರಟರೆ ಅಚ್ಚರಿ ಪಡಬೇಕಾಗಿಲ್ಲ. ಇದು ಅವರ ಘೋಷಿತ ಕಾರ್ಯಕ್ರಮ. ಚುನಾವಣೆ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲು ಸಾಧ್ಯವಾಗದಿದ್ದಾಗ, ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಗುರಾಣಿ ಅದಕ್ಕೆ ಬೇಕಾಗುತ್ತದೆ.

ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ರಾಜಕೀಯ ವೇದಿಕೆ. ಸಂಘದ ಗುರಿ ‘ಹಿಂದೂ ರಾಷ್ಟ್ರ’ ನಿರ್ಮಾಣ. ಶ್ರೇಣೀಕೃತ ಜಾತಿ ವ್ಯವಸ್ಥೆ, ಹಿಂದೂ ಸಾಮಾಜಿಕ ಪದ್ಧ್ದತಿಯ ಅಡಿಪಾಯ. ಜಾತಿ ವ್ಯವಸ್ಥೆ ಯಾರು ಯಾವ ಕೆಲಸ ಮಾಡಬೇಕೆಂಬುದನ್ನು ನಿಗದಿಪಡಿಸಿದೆ. ಚಪ್ಪಲಿ ಹೊಲಿಯಬೇಕಾದವರ, ದನದ ಕೊಟ್ಟಿಗೆಯ ಸೆಗಣಿ ಬಳಿಯಬೇಕಾದವರು ವಚನ ಅಕ್ಷರ ಕಲಿತು ವಿದ್ಯಾವಂತರಾದರೆ ಕಸ ಬಳಿಯುವ, ಒಳಚರಂಡಿಗೆ ಇಳಿದು ಸ್ವಚ್ಛಗೊಳಿಸುವರು ಯಾರು? ಎಂಬ ಆತಂಕ ಆ ಸಿದ್ಧಾಂತ ನಂಬಿದವರಲ್ಲಿ ಸಹಜ.

ಆದರೆ, ವೀರಶೈವ ಅಥವಾ ಲಿಂಗಾಯತ ಎಂಬ ಧರ್ಮ ಅಸ್ತಿತ್ವಕ್ಕೆ ಬಂದಿದ್ದೇ ಮತಾಂತರದಿಂದ ಎಂಬುದು ಅವರಿಗೆ ಗೊತ್ತಿದ್ದರೂ ಮರೆತವರಂತೆ ವರ್ತಿಸುತ್ತಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆಯ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದ ಸಮುದಾಯಗಳ ಜನರನ್ನು ಮನವೊಲಿಸಿ ಲಿಂಗ ಕಟ್ಟಿದರು. ಆಗ ಜೈನರೂ ಕೂಡ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಧರ್ಮಕ್ಕೆ ಮತಾಂತರ ಮಾಡಿದರು. ಇವರೆಲ್ಲರಿಂದ ಲಿಂಗಾಯತ ಧರ್ಮ ಉದಯವಾಯಿತು. ಇಂತಹ ಧರ್ಮವನ್ನು ಪ್ರತಿನಿಧಿಸುವ ಮಠಾಧೀಶರು ರಾಜಕೀಯ ಪಕ್ಷಗಳ ಕಾರ್ಯಸೂಚಿಯ ಜಾರಿಗೆ ತಮ್ಮ ಪಾಲಿನ ಸೇವೆ ಸಲ್ಲಿಸುವುದು ಅವರಿಗೆ ಶೋಭೆ ತರುವುದಿಲ್ಲ.

ಆದರೆ ಹಿಂದೂ ಧರ್ಮಕ್ಕೆ ಸಂಬಂಧವಿಲ್ಲದ ಬಸವಣ್ಣನವರ ಹೆಸರು ಹೇಳುವ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶರಣರಿಗೂ ಮತಾಂತರ ಆತಂಕ ಉಂಟು ಮಾಡಿದ್ದನು ಕೇಳಿ ಆಶ್ಚರ್ಯ ವಾಯಿತು. ವೀರಶೈವ ಲಿಂಗಾಯತರು ಮತಾಂತರ ಆಗುತ್ತಿರುವ ಬಗ್ಗೆ ಶರಣರು ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಹಿಂದುಳಿದ ಸಮಾಜದ ಮಠಾಧೀಶರ ಸಭೆಯನ್ನು ನಡೆಸಿ ಮತಾಂತರ ನಿಷೇಧ ಕಾಯ್ದೆಯನ್ನು ತರುವಂತೆ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ನಾಗಪುರದ ಗುರುಗಳಿಗೆ ಹತ್ತಿರವಾಗಲು ಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಸಹಜ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಮತಾಂತರ ನಿಷೇಧದಂತಹ ಅವರ ನಿಲುವನ್ನು ಬೆಂಬಲಿಸಿದರೆ ಏನಾದರೂ ಪ್ರಯೋಜನವಾದೀತೆಂಬ ಲೆಕ್ಕಾಚಾರ ಸರಿಯಾಗಿದೆ. ಪ್ರಗತಿಪರರ ಒಡನಾಟದಿಂದ ಉಪಯೋಗ ವಿಲ್ಲವೆಂದು ಅವರು ತಮ್ಮ ಅನುಭವದಿಂದ ಕಂಡುಕೊಂಡಿದ್ದಾರೆ.

ಮತಾಂತರ ನಿಷೇಧ ಮಾಡಬೇಕೆಂದು ಹೇಳುವವರು ಜಾತಿ ಪದ್ಧತಿಯನ್ನು, ಮೇಲು ಕೀಳುಗಳನ್ನು ನಿಷೇಧಿಸಬೇಕೆಂದು ಹೇಳುವುದಿಲ್ಲ. ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಮಾತಾಡುವುದಿಲ್ಲ.ಹಸಿದವರ ನೋವುಗಳಿಗೆ ಧ್ವನಿಯಾಗುವುದಿಲ್ಲ. ಆದರೆ, ಮತಾಂತರ ವಿರೋಧಿಸುವ ಜೊತೆಗೆ ಬಡವರ ಮಕ್ಕಳು ಮೊಟ್ಟೆ ಸೇವಿಸುವುದನ್ನು ಆಕ್ಷೇಪಿಸುತ್ತಾರೆ.

ಮತಾಂತರ ನಿಷೇಧ ಕಾಯ್ದೆಯ ಜೊತೆಗೆ ಲವ್ ಜಿಹಾದ ನಿಷೇಧ ಶಾಸನವನ್ನು ತರಲಾಗುವುದೆಂದು ಸಚಿವರಾದ ಈಶ್ವರಪ್ಪಮತ್ತು ಸುನೀಲ್ ಕುಮಾರ್ ತಿಳಿಸಿದ್ದಾರೆ. ಇದು ಕೂಡ ಅವರ ಕಾರ್ಯಸೂಚಿಯ ಭಾಗ. ಹಿಂದುತ್ವ ಎಂಬ ಸಸಿ ಒಣಗದಂತೆ ನೋಡಿಕೊಳ್ಳಬೇಕಾದರೆ ಇವೆಲ್ಲ ಆಟಗಳನ್ನು ಆಡಲೇಬೇಕಾಗುತ್ತದೆ.

ಮತಾಂತರ ನಿಷೇಧದ ನೇರ ಗುರಿ ಕ್ರೈಸ್ತ ಸಮುದಾಯದ ಜನ. ಕ್ರೈಸ್ತ ಧರ್ಮಗುರುಗಳು ಬಲವಂತದಿಂದ ಮತಾಂತರ ಮಾಡಿಸುತ್ತಾರೆ ಎಂಬುದು ಇವರ ಆರೋಪ. ಆದರೆ ಬಿಜೆಪಿ ಸಹಿತ ಸಂಘ ಪರಿವಾರದ ನಾಯಕರಲ್ಲಿ ಬಹುತೇಕ ಮಂದಿ ವ್ಯಾಸಂಗ ಮಾಡಿದ್ದು ಮತ್ತು ಈಗ ತಮ್ಮ ಮಕ್ಕಳನ್ನು ಓದಿಸುತ್ತಿರುವುದು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಕಾನ್ವೆಂಟ್ ಗಳಲ್ಲಿ ಹಾಗೂ ಅಸ್ವಸ್ಥತೆ ಉಂಟಾದರೆ ಚಿಕಿತ್ಸೆ ಪಡೆಯುವುದು ಕ್ರೈಸ್ತರು ನಡೆಸುವ ಆಸ್ಪತ್ರೆಗಳಲ್ಲಿ ಎಂಬುದರ ಬಗ್ಗೆ ಜಾಣ ಮೌನ ತಾಳುತ್ತಾರೆ.

ಭಾರತದಲ್ಲಿ ಪ್ರತಿ ಮೂಲೆ, ಮೂಲೆಗಳಲ್ಲಿ ಸಾವಿರಾರು ಆಸ್ಪತ್ರೆ, ಶಾಲೆಗಳನ್ನು ಕ್ರೈಸ್ತ ಸಂಸ್ಥೆಗಳು ನಡೆಸುತ್ತ್ತಿವೆ. ಅಲ್ಲಿ ಬರುವ ರೋಗಿಗಳನ್ನು ಮತ್ತು ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಮತಾಂತರ ಮಾಡಿಸಿದ್ದರೆ ಕ್ರೈಸ್ತರ ಸಂಖ್ಯೆ ಈ ದೇಶದಲ್ಲಿ ಹತ್ತಾರು ಕೋಟಿ ದಾಟುತ್ತಿತ್ತು. ಆದರೆ ಅವರ ಜನಸಂಖ್ಯೆಯ ಅಧಿಕೃತ ಅಂಕಿ-ಅಂಶಗಳು ಕಳೆದ 70 ವರ್ಷಗಳಲ್ಲಿ ಶೇ.2ಕ್ಕಿಂತ ಹೆಚ್ಚಾಗಿಲ್ಲ. ಮತಾಂತರ ನಡೆದೇ ಇಲ್ಲವೆಂದಲ್ಲ ಆದರೆ ಅವೆಲ್ಲ ಸ್ವಯಂ-ಇಚ್ಛೆಯಿಂದ ನಡೆದ ಮತಾಂತರಗಳು. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಬಲವಂತದ ಮತಾಂತರ ಮಾತ್ರ ಸರಿಯಲ್ಲ. ಅದನ್ನು ನಿರ್ಬಂಧಿಸುವ ಕಾನೂನು ಈಗಾಗಲೇ ಇದೆ.ಈಗ ರಾಜ್ಯದ ಬಿಜೆಪಿ ಸರಕಾರ ತರಲು ಹೊರಟಿರುವ ಇನ್ನೊಂದು ಕಾಯ್ದೆ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡುತ್ತಿರುವ ಅಗ್ಗದ ಗಿಮಿಕ್ ಮಾತ್ರ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಗೊತ್ತಿದೆ. ಆದರೆ ಅವರು ಸ್ವತಂತ್ರರಲ್ಲ. ಕುರ್ಚಿ ಉಳಿಸಿಕೊಳ್ಳಲು ಇಂತಹದಕ್ಕೆಲ್ಲ ಮಣಿಯಲೇ ಬೇಕಾಗುತ್ತದೆ.

ಕರ್ನಾಟಕದಲ್ಲಿ ಒಮ್ಮಿಂದೊಮ್ಮೆಲೇ ಮತಾಂತರ ಕಾಯ್ದೆಯನ್ನು ತರುವುದಕ್ಕೆ ಶಾಸಕ ಗೂಳಿಹಟ್ಟಿ ಶೇಖರ್ ಅವರು ವಿಧಾನ ಸಭೆಯಲ್ಲಿ ತಮ್ಮ ತಾಯಿಯನ್ನೂ ಮತಾಂತರ ಮಾಡಿಸಲಾಗಿದೆ ಎಂದು ಮಾಡಿದ ಆರೋಪ. ಕೆಲ ಶಾಸಕರು ಅವರಿಗೆ ದನಿಗೂಡಿಸಿದರು. ಈ ಆರೋಪ ಬಂದ ನಂತರ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರಕಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಆಡಳಿತಕ್ಕೆ ಆದೇಶ ನೀಡಿತು. ತಾಲೂಕು ಆಡಳಿತ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯ ಪ್ರಕಾರ ಮತಾಂತರದ ಆರೋಪ ಸುಳ್ಳು. ಹೊಸ ದುರ್ಗ ತಾಲೂಕಿನಲ್ಲಿ ಬಲವಂತದ ಮತಾಂತರದ ಯಾವುದೇ ಪ್ರಕರಣ ನಡೆದಿಲ್ಲ. ಮತಾಂತರವಾದವರು ಸ್ವಯಂ-ಇಚ್ಛೆಯಿಂದ ಮತಾಂತರವಾಗಿದ್ದಾರೆ ಎಂದು ಹೊಸದುರ್ಗ ಆಡಳಿತ ತಮ್ಮ ವರದಿಯಲ್ಲಿ ತಿಳಿಸಿದೆ.

ಭಾರತದ ಸಂವಿಧಾನದ 25ನೇ ಕಲಂನ ಪ್ರಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ತನಗೆ ಇಷ್ಟವಾದ ಧರ್ಮವನ್ನು ಆಚರಿಸುವ ಸ್ವಾತಂತ್ರವಿದೆ.ಅಷ್ಟೇ ಅಲ್ಲ ತಾನು ಇಷ್ಟ ಪಡುವ ಧರ್ಮವನ್ನು ಪ್ರಚಾರ ಮಾಡುವ ಅವಕಾಶವೂ ಇದೆ. ವಾಸ್ತವಾಂಶ ಹೀಗಿರುವಾಗ ಕ್ರೈಸ್ತರು ಮತ್ತು ಮುಸ್ಲಿಮರ ಮೇಲೆ ಮತಾಂತರ, ಲವ್ ಜಿಹಾದ್ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿರುವುದೇಕೆ?

 ಬಸವಣ್ಣನವರ ಹೆಸರನ್ನು ಬಂಡವಾಳ ಮಾಡಿಕೊಂಡು ತಮ್ಮ ಪೀಠಗಳನ್ನು ಭದ್ರಪಡಿಸಿಕೊಳ್ಳುವ ಮಠಾಧೀಶರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರಿಗೆ ಇಷ್ಟು ದಿನ ಹೇಳುತ್ತಾ ಬಂದ ಬಸವಣ್ಣನವರೂ ಬೇಕು, ಬಾಬಾಸಾಹೇಬರ ಹೆಸರೂ ಬೇಕು. ನಾಗಪುರದ ಗುರುಗಳನ್ನು ಒಲೈಸಲು ಸರಕಾರದಿಂದ ಸವಲತ್ತುಗಳನ್ನು ಪಡೆಯಲು ಮತಾಂತರ ವನ್ನೂ ವಿರೋಧಿಸಬೇಕು.

ನೀವು ಮತಾಂತರವನ್ನು ವಿರೋಧಿಸದಿದ್ದರೆ ನಿಮ್ಮ ಪಾದಪೂಜೆಗೆ ಭಕ್ತರೂ ಸಿಗುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಅವರು ಎಚ್ಚರಿಕೆಯನ್ನೂ ನೀಡಿದ್ದಾರೆಂಬುದು ಗಮನಾರ್ಹ.

ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನು ತರುವ ಮೊದಲೇ ಬೆಳಗಾವಿ, ಬೇಲೂರು ಮುಂತಾದ ಕಡೆ ಕ್ರೈಸ್ತ ಧರ್ಮಗುರುಗಳ ಮೇಲೆ ಮತ್ತು ಪ್ರಾರ್ಥನಾಲಯಗಳ ಮೇಲೆ ನಡೆದ ದಾಳಿ ಮತ್ತು ಹಲ್ಲೆಗಳಿಗೆ ಯಾರು ಹೊಣೆ?

ರಾಜ್ಯ ಬಿಜೆಪಿ ಸರಕಾರ ತರಲಿರುವ ಮತಾಂತರ ನಿಷೇಧ ಕಾಯ್ದೆಗೆ ತಮ್ಮ ಸಹಮತವಿದೆ ಎಂದು ಮುರುಘಾ ಶರಣರು ಬಹಿರಂಗವಾಗಿ ಹೇಳಿರುವುದರಿಂದ ಅವರು ಯಾವ ಪಾಳೆಯ ಸೇರಿದ್ದಾರೆಂಬುದು ಸ್ಪಷ್ಟವಾಗಿದೆ. ದಲಿತ, ಪ್ರಗತಿಪರ ಸಂಘಟನೆಗಳು, ಪ್ರಗತಿಪರ ಎಂದು ಹೇಳಿಕೊಳ್ಳುವ ಮಠಾಧೀಶರು ಮತ್ತು ಸ್ವಾಮಿ ಗಳ ಬಗ್ಗೆ ಬಹಳ ಭ್ರಮೆ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ಎಲ್ಲ ಸ್ವಾಮಿಗಳು ಹಾಗಿರಲಿಕ್ಕಿಲ್ಲ. ಗದುಗಿನ ತೋಂಟದಾರ್ಯ ಮಠದ ಹಿಂದಿನ ಶ್ರೀಗಳು, ಈಗ ನಮ್ಮ ನಡುವಿರುವ ಧುತ್ತರಗಾಂವ್ ಮಠದ ಕೊರಣೇಶ್ವರ ಸ್ವಾಮಿಗಳು ಮತ್ತು ಸಾಣೆಹಳ್ಳಿ ಶ್ರೀಗಳು ಇದ್ದುದರಲ್ಲಿ ವಾಸಿ.ಸರಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ಅವರು ಸಮರ್ಥಿಸಿದ್ದಾರೆ.

ಮತಾಂತರ ಮತ್ತು ಲವ್ ಜಿಹಾದ್ ಹುಯಿಲು ಬಿಜೆಪಿಯ ಚುನಾವಣಾ ರಾಜಕೀಯದ ತಂತ್ರ ಎಂದು ತಿಳಿಯದಷ್ಟು ಮುರುಘಾ ಮಠದ ಶರಣರು ಮುಗ್ಧರಲ್ಲ. ಆದರೆ ಇವರು ಬಸವಣ್ಣ ಅಲ್ಲ.ಬಸವಣ್ಣನವರಿಗೆ ಬಿಜ್ಜಳನ ಮಂತ್ರಿ ಸ್ಥಾನ ಮುಖ್ಯವಾಗಿರಲಿಲ್ಲ. ತತ್ವದ ಪ್ರಶ್ನೆ ಬಂದಾಗ ಅವರು ರಾಜಿ ಮಾಡಿಕೊಳ್ಳಲಿಲ್ಲ. ಮಂತ್ರಿ ಸ್ಥಾನ ತೊರೆದು ತಾವು ನಂಬಿದ ಆದರ್ಶ ಮತ್ತು ಆಶಯಗಳೊಂದಿಗೆ ನಿಂತರು. ಆದರೆ ಅವರ ಹೆಸರು ಹೇಳುವ ಇಂದಿನ ಮಠಾಧೀಶರಿಗೆ ಬಸವಣ್ಣ ಮತ್ತು ನಂಬಿದ ತತ್ವಗಳಿಗಿಂತ ತಾವು ಅಲಂಕರಿಸಿದ ಪೀಠ ಮುಖ್ಯವಾಗಿದೆ.

ಒಟ್ಟಾರೆ ಕರ್ನಾಟಕದಲ್ಲಿ ಗುಜರಾತ್ ಮಾದರಿಯ ಹಿಂದುತ್ವ ಪ್ರಯೋಗ ಶಾಲೆಯನ್ನಾಗಿ ಮಾಡಲು ಮಸಲತ್ತು ನಡೆದಿರುವಾಗ ಅವರ ಕಾರ್ಯ ಸೂಚಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ ಮಾಡುವವರು ನಂಬಿಕೆಗೆ ಅರ್ಹರಲ್ಲ. ಇಂತಹವರು ಹಿಂದೆ ಆಡುತ್ತಾ ಬಂದ ಮಾತುಗಳು ಬೂಟಾಟಿಕೆಯಲ್ಲದೆ ಬೇರೇನೂ ಅಲ್ಲ.

ಮತಾಂತರ ಮತ್ತು ಲವ್ ಜಿಹಾದ್ ಹೆಸರಿನಲ್ಲಿ ಸಾಮಾಜಿಕ ಶಾಂತಿ, ನೆಮ್ಮದಿಯನ್ನು ಕದಡುವ ಹುನ್ನಾರಗಳನ್ನು ಕರ್ನಾಟಕದ ಜನ ವಿಫಲಗೊಳಿಸುತ್ತಾರೆ ಎಂಬ ನಂಬಿಕೆಯನ್ನು ನಾವು ಕಳೆದುಕೊಳ್ಳಬಾರದು

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top