ಹೆರಿಗೆ ನೋವಿನೊಂದಿಗೆ ಆರು ಕಿ.ಮೀ ನಡೆಯುತ್ತಲೇ ಆಸ್ಪತ್ರೆಗೆ ಬಂದ ತುಂಬು ಗರ್ಭಿಣಿ !
ಭೋಪಾಲ್,ಆಗಸ್ಟ್ 27: ತುಂಬು ಗರ್ಭಿಣಿಯೊಬ್ಬರು ಹೆರಿಗೆನೋವಿನೊಂದಿಗೆ 6ಕಿ.ಮೀ. ನಡೆದು ಆಸ್ಪತ್ರೆಗೆ ಬಂದಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪೂರ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇಬ್ಬರು ಮಹಿಳೆಯರು ಈ ಗರ್ಭಿಣಿಯ ನೆರವಿಗೆ ಜೊತೆಗಿದ್ದರು. ಐಎನ್ಐ ಸುದ್ದಿ ಸಂಸ್ಥೆ, ಹಳ್ಳವೊಂದರ ಮೂಲಕ ಇತರ ಇಬ್ಬರು ಮಹಿಳೆಯರ ನೆರವಿನಲ್ಲಿ ಗರ್ಭಿಣಿಮಹಿಳೆ ನಡೆದು ಬರುತ್ತಿರುವ ಫೋಟೊ ಸಹಿತ ವರದಿ ಮಾಡಿದೆ.
ಹೆರಿಗೆನೋವಿನಿಂದಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ಗೆ ಫೋನ್ಮಾಡಿದ್ದರೂ ನೆರೆ ನೀರು ಇದೆ ಎಂದು ಹೇಳಿ ಅದು ಬಂದಿರಲಿಲ್ಲ. ಆನಂತರ ಆಟೊರಿಕ್ಷಾದ ಮೂಲಕ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಟೊ ದಾರಿಮಧ್ಯೆ ಕೆಸರಿನಲ್ಲಿ ಹೂತು ಹೋಯಿತು. ಬೇರೆ ಯಾವುದೇ ವಾಹನಗಳೂ ದೊರಕದ್ದರಿಂದ ಗತ್ಯಂತರವಿಲ್ಲದೆ ಆರು ಕಿ.ಮೀವರೆಗೆ ನಡೆದು ಆಸ್ಪತ್ರೆಸೇರಬೇಕಾಯಿತು ಎಂದು ವರದಿ ತಿಳಿಸಿದೆ.
ಎಂಟು ಕಿ.ಮೀ.ದೂರದಲ್ಲಿ ಆಸ್ಪತ್ರೆಯಿತ್ತು. ಆ್ಯಂಬುಲೆನ್ಸ್ಗೆ ಕರೆಮಾಡಿದಾಗ ಅಲ್ಲಿಗೆ ತಲುಪಲು ಅರ್ಧಗಂಟೆ ಆಗಬಹುದು ಎಂದು ಹೇಳಲಾಯಿತು. ನಂತರ ಆಟೊದಲ್ಲಿ ಗರ್ಭಿಣಿಯನ್ನು ಕರೆತರುವಾಗ ಅದುಕೂಡಾ ಕೆಸರಿನಲ್ಲಿ ಹೂತು ಹೋಯಿತು.. ನಂತರ ಇದ್ದ ಆರುಕಿ.ಮೀಯನ್ನು ಗರ್ಭಿಣಿಯನ್ನು ನಡೆಸಿಕೊಂಡು ಹೋಗಲು ತೀರ್ಮಾನಿಸಿದೆವು ಎಂದು ಆಶಾಕಾರ್ಯಕರ್ತೆ ಮೀಋಅಬಾಯಿ ತಿಳಿಸಿದ್ದಾರೆ.ಆಸ್ಪತ್ರೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದರೂ ಈವರೆಗೂ ಯಾರ ವಿರುದ್ಧವೂ ಕ್ರಮಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.