ಮೋದಿ ಟಿಆರ್ಪಿ ರಾಜಕೀಯ ನಡೆಸುತ್ತಿದ್ದಾರೆ: ರಾಹುಲ್
ಹೊಸದಿಲ್ಲಿ, ಡಿ.2: ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಸಭೆಯೊಂದರ ಅಧ್ಯಕ್ಷತೆಯನ್ನು ಇಂದು ಮೊದಲ ಬಾರಿಗೆ ವಹಿಸಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಟಿಆರ್ಪಿ ರಾಜಕೀಯ ನಡೆಸುತ್ತಿದ್ದಾರೆ ಹಾಗೂ ತನ್ನ ‘ಮರ್ಜಿ ಮತ್ತು ಅಸಾಮರ್ಥ್ಯದಿಂದಾಗಿ’ ದೇಶವನ್ನು ನರಳುವಂತೆ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ ಗಾಂಧಿಯವರ ಅನುಪಸ್ಥಿತಿಯಲ್ಲಿ ಸಿಪಿಪಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ತನ್ನದೇ ವರ್ಚಸ್ಸಿನ ಬಂದಿಯಾಗಿದ್ದಾರೆಂದು ಬಣ್ಣಿಸಿದರು. ತನ್ನ ವ್ಯಕ್ತಿತ್ವವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಮೋದಿ, ಜನರ ಮೇಲೆ ಭಾರೀ ಬವಣೆಯನ್ನು ಹೇರುತ್ತಿದ್ದಾರೆಂದು ರಾಹುಲ್ ಆರೋಪಿಸಿದರು.
ಅಂತಹ ಸಭೆಗಳು ಸಾಮಾನ್ಯವಾಗಿ ಮಾಧ್ಯಮಗಳಿಂದ ಹೊರಗಿರುತ್ತವಾದರೂ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ರಾಹುಲ್ ಮಾಡಿದ ಭಾಷಣದ ಭಾಗಗಳನ್ನು ಬಳಿಕ ಟಿವಿ ವಾಹಿನಿಗಳು ಪ್ರಸಾರ ಮಾಡಿವೆ.
ಮೋದಿ ಸಂಸತ್ತಿನಲ್ಲಿ ತಮ್ಮ ಮಾತುಗಳನ್ನು ಕೇಳುತ್ತಿಲ್ಲವೆಂಬ ವಿಪಕ್ಷೀಯರ ವಾಗ್ದಾಳಿಯ ನಡುವೆಯೇ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸಚಿವರ ಮಾತನ್ನು ಅವರು ಕೇಳಿದರೆ, ಪ್ರಕೃತ ಮೋದಿ ಎಸಗುತ್ತಿರುವ ವಿನಾಶಕಾರಿ ನಿತಿಯ ಪ್ರಮಾದವನ್ನು ಅದು ತಡೆಯಬಹುದು ಎಂದು ರಾಹುಲ್ ಹೇಳಿದ್ದಾರೆ.
ಸಂಸ್ಥೆಗಳಲ್ಲಿ ಕುಳಿತಿರುವವರ ಅನುಭವಗಳನ್ನು ಮೀರಿ ನಡೆಯುವ ಪ್ರಧಾನಿಯನ್ನು ತಾವೆಂದೂ ಭಾರತಕ್ಕೆ ಕೊಟ್ಟಿಲ್ಲ. ಪ್ರಧಾನಿಯ ‘ಮರ್ಜಿ ಹಾಗೂ ಅಸಾಮರ್ಥ್ಯದಿಂದ’ ದೇಶಕ್ಕೆ ಭಾರೀ ಹಾನಿಯಾಗಿದೆಯೆಂದು ಅವರು ಆರೋಪಿಸಿದರು.