ದೇಶ ಕಂಡ ಅಭೂತಪೂರ್ವ ರೈತ ಗಣರಾಜ್ಯೋತ್ಸವ | Vartha Bharati- ವಾರ್ತಾ ಭಾರತಿ

--

ದೇಶ ಕಂಡ ಅಭೂತಪೂರ್ವ ರೈತ ಗಣರಾಜ್ಯೋತ್ಸವ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸ್ವಾತಂತ್ರೋತ್ತರ ಭಾರತ ಕಂಡರಿಯದ ಗಣರಾಜ್ಯೋತ್ಸವವೊಂದಕ್ಕೆ ಸಾಕ್ಷಿಯಾಯಿತು. ಸಾಧಾರಣವಾಗಿ ಗಣರಾಜ್ಯೋತ್ಸವದ ದಿನ, ರಾಜಪಥದಲ್ಲಿ ನಡೆಯುವ ‘ಪ್ರತಿಕೃತಿ’ಗಳ ಪರೇಡ್‌ಗಳನ್ನು ನೋಡುತ್ತಿದ್ದ ವರು, ರಸ್ತೆಗಳಲ್ಲಿ ಸಾಲು ಸಾಲಾಗಿ ಹರಿಯತೊಡಗಿದ ರೈತರ ಟ್ರಾಕ್ಟರ್‌ಗಳನ್ನು ನೋಡಿ ಮೂಕ ವಿಸ್ಮಿತರಾದರು. ದೇಶವ್ಯಾಪಿ ರೈತರು ಆಚರಿಸಿದ ಗಣರಾಜ್ಯೋತ್ಸವದ ಮುಂದೆ, ರಾಜಪಥದಲ್ಲಿ ಆಚರಿಸಲ್ಪಟ್ಟ ಗಣರಾಜ್ಯೋತ್ಸವ ಒಂದು ಸ್ತಬ್ಧಚಿತ್ರ ಅಥವಾ ಟ್ಯಾಬ್ಲೋದಂತೆ ನಿರ್ಜೀವವಾಗಿತ್ತು. ಸರಕಾರಿ ಗಣರಾಜ್ಯೋತ್ಸವದಲ್ಲಿ ಪ್ರದರ್ಶನಗೊಂಡ ದೇಶದ ಹೆಗ್ಗಳಿಕೆಗಳನ್ನು ಸಾರುವ ಟ್ಯಾಬ್ಲೊಗಳನ್ನು ದಿಲ್ಲಿಯಲ್ಲಿ ಸಾಗುತ್ತಿದ್ದ ಟ್ರಾಕ್ಟರ್‌ಗಳ ಸಾಲುಗಳು ವ್ಯಂಗ್ಯ ಮಾಡುತ್ತಿದ್ದವು. ಕೇಂದ್ರದ ಸರ್ವಾಧಿಕಾರದಿಂದಾಗಿ ದುರ್ಬಲಗೊಳ್ಳುತ್ತಿರುವ ಒಕ್ಕೂಟ ವ್ಯವಸ್ಥೆ, ರೈತ ಗಣರಾಜ್ಯೋತ್ಸವದ ಮೂಲಕ ಮತ್ತೊಮ್ಮೆ ಸೆಟೆದು ನಿಂತಿತು. ತಮ್ಮ ಆತ್ಮಗೌರವಕ್ಕೆ, ಅಸ್ತಿತ್ವಕ್ಕೆ ಧಕ್ಕೆ ತರುವ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ, ಇದೀಗ ಭಾರತದ ಪಾಲಿಗೆ ಎರಡನೆಯ ಸ್ವಾತಂತ್ರ ಹೋರಾಟವಾಗಿ ಪರಿವರ್ತನೆಗೊಂಡಿದೆ. ಇದು ಕೇವಲ ಹರ್ಯಾಣ, ಪಂಜಾಬ್ ರೈತರಿಗೆ ಸೀಮಿತವಾಗಿ ಉಳಿದಿಲ್ಲ. ಎಲ್ಲ ರಾಜ್ಯಗಳು ಅವರೊಂದಿಗೆ ಕೈ ಜೋಡಿಸಿವೆ. ಪ್ರಜಾಸತ್ತೆ ಮತ್ತು ಸಂವಿಧಾನ ಅತ್ಯಂತ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ರೈತರ ಗಣರಾಜ್ಯೋತ್ಸವ ದೇಶದ ಭವಿಷ್ಯದ ಒಂದು ದೊಡ್ಡ ಆಶಾಕಿರಣವಾಗಿದೆ.

ಇದೇ ಸಂದರ್ಭದಲ್ಲಿ, ರೈತರ ಟ್ರಾಕ್ಟರ್ ರ್ಯಾಲಿ ದಿಲ್ಲಿಯಲ್ಲಿ ಹಿಂಸಾತ್ಮಕ ರೂಪ ಪಡೆಯಿತು. ಪೊಲೀಸರ ಎಲ್ಲ ಅಡೆತಡೆಗಳನ್ನು ಭೇದಿಸಿ ಒಂದು ಗುಂಪು ಕೆಂಪು ಕೋಟೆಯಲ್ಲಿ ಸಿಖ್‌ರ ಆತ್ಮಗೌರವದ ಸಂಕೇತವಾಗಿರುವ ನಿಶಾನ್ ಸಾಹೇಬ್ ಧ್ವಜವನ್ನು ಹಾರಿಸಿತು. ಕೆಲವು ಪ್ರತಿಭಟನಾಕಾರರು ಪೊಲೀಸರ ಜೊತೆಗೆ ಕೈಕೈ ಮಿಲಾಯಿಸಿದರು. ಇದನ್ನೇ ಮುಂದಿಟ್ಟು, ಇಡೀ ರೈತರ ರ್ಯಾಲಿಯ ಬದ್ಧತೆಯನ್ನೇ ಕೆಲವು ರಾಜಕೀಯ ನಾಯಕರು ಪ್ರಶ್ನಿಸಲು ಹೊರಟಿದ್ದಾರೆ. ರ್ಯಾಲಿಯಲ್ಲಿ ಕೆಲವು ಅನಾಮಿಕ ದುಷ್ಕರ್ಮಿಗಳು ಸೇರಿದ್ದು ಅವರಿಂದಾಗಿ ಕೆಲವೆಡೆ ಹಿಂಸೆ ಸಂಭವಿಸಿದೆ ಎಂದು ರೈತ ಸಂಘಟನೆಗಳೇ ಸ್ಪಷ್ಟೀಕರಣ ನೀಡಿವೆ. ಇಷ್ಟಕ್ಕೂ, ಸಹಸ್ರಾರು ರೈತರು ಕಳೆದ ಎರಡು ತಿಂಗಳಿನಿಂದ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎನ್ನುವ ಅಂಶವನ್ನು ಕೇಂದ್ರ ಸರಕಾರ ನೆನಪಿಸಿಕೊಳ್ಳಬೇಕಾಗಿದೆ. ನೂರಕ್ಕೂ ಅಧಿಕ ರೈತರು ಈ ಸಂದರ್ಭದಲ್ಲಿ ಚಳಿ ಮಳೆಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಲವು ಮುಖಂಡರು ಪ್ರತಿಭಟನಾ ರೂಪಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಎಲ್ಲ ಸಂದರ್ಭಗಳಲ್ಲೂ ಪ್ರತಿಭಟನಾ ನಿರತ ರೈತರು ತಾಳ್ಮೆಯನ್ನು, ಸಂಯಮವನ್ನು ಕಾಪಾಡಿಕೊಂಡಿದ್ದಾರೆ. ಎಲ್ಲೂ ಹಿಂಸೆಗೆ ಇಳಿದಿಲ್ಲ. ‘ತಮಗೆ ಲಾಭದಾಯಕವಾಗಿರುವ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಾ ರೈತರೇಕೆ ಸಾಯುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?’ ಎನ್ನುವ ಒಂದು ಪ್ರಶ್ನೆಯನ್ನು ಕೇಂದ್ರ ಸರಕಾರ ತನಗೆ ತಾನೆ ಕೇಳಿಕೊಂಡಿದ್ದರೆ, ಇಂದು ರೈತರ ಟ್ರಾಕ್ಟರ್ ರ್ಯಾಲಿಯೇ ನಡೆಯುತ್ತಿರಲಿಲ್ಲವೇನೋ? ಕೇಂದ್ರದಲ್ಲಿರುವುದು ಬ್ರಿಟಿಷ್ ಸರಕಾರವಲ್ಲ. ಜನರಿಂದ ಆಯ್ಕೆಯಾದ ಸರಕಾರ. ಯಾವುದೇ ಕಾನೂನನ್ನು ಸರಕಾರ ರೂಪಿಸುವುದು ಜನರಿಗಾಗಿ. ಜನರೇ ಆ ಕಾನೂನು ಬೇಡವೆಂದು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ ಅದನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಹೊರಡುವುದು ಪ್ರಜಾಸತ್ತೆಯ ಮೂಲಕ ಆಯ್ಕೆಯಾದ ಸರಕಾರದ ಲಕ್ಷಣವಲ್ಲ. ಆದುದರಿಂದ ಪರಿಸ್ಥಿತಿ ಗಂಭೀರ ರೂಪ ಪಡೆಯುವ ಮೊದಲು ಸರಕಾರ ಪರಿಹಾರವನ್ನು ಕಂಡುಹಿಡಿಯಬೇಕಾಗಿತ್ತು. ಆದರೆ, ರೈತರ ವಿರುದ್ಧ ಕೇಂದ್ರ ಸರಕಾರ ಬ್ರಿಟಿಷರಿಗಿಂತ ಕ್ರೂರವಾಗಿ ನಡೆದುಕೊಂಡಿತು. ಸಾಲು ಸಾಲಾಗಿ ರೈತರ ಹೆಣಗಳು ಬೀಳುತ್ತಿದ್ದರೂ, ತನ್ನ ನಿರ್ಧಾರದಿಂದ ಸರಕಾರ ಹಿಂದಕ್ಕೆ ಸರಿಯಲಿಲ್ಲ. ಕನಿಷ್ಠ, ರೈತರು ಟ್ರಾಕ್ಟರ್ ರ್ಯಾಲಿಯನ್ನು ಘೋಷಿಸಿದಾಗಲಾದರೂ, ಸರಕಾರ ಎಚ್ಚೆತ್ತುಕೊಳ್ಳಬಹುದಿತ್ತು. ಜನರಿಗಿಂತ ಕಾರ್ಪೊರೇಟ್ ಹಿತಾಸಕ್ತಿಯೇ ಮುಖ್ಯ ಎಂಬ ನಿಲುವಿಗೆ ಅಂಟುವ ಮೂಲಕ ಕೇಂದ್ರ ಸರಕಾರ ತನ್ನದು ‘ನವ ಈಸ್ಟ್ ಇಂಡಿಯಾ ಕಂಪೆನಿ’ ಎನ್ನುವುದನ್ನು ಸಾಬೀತುಪಡಿಸಿತು.

ಲಕ್ಷಾಂತರ ಜನರು ಬೀದಿಯಲ್ಲಿದ್ದರೂ, ಯಾವುದೇ ದೊಡ್ಡ ಹಿಂಸಾಚಾರಗಳು ರೈತರಿಂದ ನಡೆದಿಲ್ಲ ಎನ್ನುವುದು ಈ ಸಂದರ್ಭದಲ್ಲಿ ಸಮಾಧಾನಕಾರಕ ಅಂಶ. ‘ರೈತರು ಖಾಲಿಸ್ತಾನಿಗಳು, ಉಗ್ರರು’ ಎಂಬಿತ್ಯಾದಿಯಾಗಿ ಕರೆದವರಿಗೆ ಈ ಶಾಂತಿಯುತ ರ್ಯಾಲಿಯೇ ದೊಡ್ಡ ಉತ್ತರವಾಗಿದೆ. ಇದೇ ಸಂದರ್ಭದಲ್ಲಿ ಕೆಲವೆಡೆಗೆ ಪೊಲೀಸರು ರೈತರನ್ನು ತಡೆಯಲು ಯತ್ನಿಸಿದಾಗ ಸಂಘರ್ಷಗಳಾಗಿವೆ. ಒಂದು ಗುಂಪು ಕೆಂಪುಕೋಟೆಯನ್ನು ಏರಿ, ಅಲ್ಲಿ ಸಿಖ್‌ರ ಮತ್ತು ರೈತರ ಧ್ವಜವನ್ನು ಹಾರಿಸಿದ್ದಾರೆ. ದಿಲ್ಲಿಯೂ ಸೇರಿದಂತೆ ದೇಶಾದ್ಯಂತ ನಡೆದ ಶಾಂತಿಯುತ ರ್ಯಾಲಿಯನ್ನು ಪಕ್ಕಕ್ಕಿಟ್ಟು ಕೆಂಪು ಕೋಟೆಯಲ್ಲಿ ನಡೆದ ಘಟನೆಯನ್ನಷ್ಟೇ ಮಾಧ್ಯಮಗಳ ಮೂಲಕ ಬಿತ್ತರಿಸಿ, ತನ್ನನ್ನು ತಾನು ಅಮಾಯಕ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಕೆಂಪು ಕೋಟೆಯನ್ನು ಏರಿದ ರೈತರು ಯಾರೂ ಆ ಸ್ಮಾರಕಕ್ಕೆ ಅವಮಾನವನ್ನು ಮಾಡಲಿಲ್ಲ, ಧಕ್ಕೆಯನ್ನೂ ಮಾಡಿಲ್ಲ. ರಾಷ್ಟ್ರ ಧ್ವಜದ ಪಕ್ಕದಲ್ಲೇ ತಮ್ಮ ಧ್ವಜವನ್ನು ನೆಟ್ಟಿದ್ದಾರೆ. ಅಲ್ಲಿ ರಾಷ್ಟ್ರಧ್ವಜಕ್ಕೆ ಯಾವ ಅಪಮಾನವೂ ಆಗಿಲ್ಲ. ರ್ಯಾಲಿಯಲ್ಲಿದ್ದ ಸಹಸ್ರಾರು ಜನರು ತಮ್ಮಾಂದಿಗೆ ರಾಷ್ಟ್ರಧ್ವಜವನ್ನೂ ಎತ್ತಿ ಹಿಡಿದಿದ್ದರು. ಅವರೆಲ್ಲ ಉಗ್ರರೇ ಆಗಿದ್ದರೆ ಎರಡು ತಿಂಗಳಿಂದ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ಯಾಕೆ ಮಾಡುತ್ತಿದ್ದರು? ಇನ್ನೊಂದು ಅಂಶವನ್ನು ನಾವು ಗಮನಿಸಬೇಕಾಗಿದೆ. ಇಂದು ಪ್ರಧಾನಿ ನೇತೃತ್ವದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇಸರಿ ಧ್ವಜದ ಜೊತೆಗೆ ರಾಮಮಂದಿರದ ಟ್ಯಾಬ್ಲೊವನ್ನು ‘ತಮ್ಮ ಸಾಧನೆ’ ಎಂಬಂತೆ ಸರಕಾರ ಪ್ರದರ್ಶಿಸಿತು.

ನ್ಯಾಯಾಲಯದ ಆದೇಶವನ್ನು ಮೀರಿ, ದುಷ್ಕರ್ಮಿಗಳು ಬಾಬರಿ ಮಸೀದಿ ಸ್ಮಾರಕವನ್ನು ಒಡೆದು, ಇದೀಗ ಆ ಜಾಗದಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ರಾಮಮಂದಿರವನ್ನು ಕಟ್ಟಲಾಗುತ್ತಿದೆ. ಇದುವೇ ಉತ್ತರ ಪ್ರದೇಶದ ಸಾಧನೆ ಎಂಬಂತೆ ಟ್ಯಾಬ್ಲೊದ ಮೂಲಕ ಸಾರಲಾಯಿತು. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸಾಲು ಅತ್ಯಾಚಾರಗಳು, ಹೆಚ್ಚುತ್ತಿರುವ ಅಪರಾಧಗಳು, ಹೆಚ್ಚಾಗುತ್ತಿರುವ ಬಡತನ, ಅನಾರೋಗ್ಯ ಇವೆಲ್ಲಕ್ಕೆ ಪರಿಹಾರವಾಗಿ ಈ ರಾಮಮಂದಿರ ಟ್ಯಾಬ್ಲೊವನ್ನು ಜನರಿಗೆ ನೀಡಲು ಹೊರಟಿದೆ. ಗಣರಾಜ್ಯಕ್ಕೂ ಈ ದೇಶಕ್ಕೂ ಯಾವ ಸಂಬಂಧವೂ ಇಲ್ಲದ ಟ್ಯಾಬ್ಲೊವೊಂದು ಗಣರಾಜ್ಯ ಪರೇಡ್‌ನಲ್ಲಿ ಪ್ರದರ್ಶನವಾಗುತ್ತದೆಯಾದರೆ, ರೈತರು ಕೆಂಪುಕೋಟೆಯಲ್ಲಿ ತಮ್ಮ ಧ್ವಜವನ್ನು ಸ್ಥಾಪಿಸಿದ್ದರಲ್ಲಿ ತಪ್ಪೇನಿದೆ? ಅವರೇನು ಬಾಬರಿ ಮಸೀದಿ ಉರುಳಿಸಿದಂತೆ, ಕೆಂಪುಕೋಟೆಗೆ ಧಕ್ಕೆಯನ್ನು ಮಾಡಿಲ್ಲ. ಅವರು ಆ ಮೂಲಕ ತಮ್ಮ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಸರಕಾರಕ್ಕೆ ತಲುಪಿಸುವ ಪ್ರಯತ್ನವನ್ನಷ್ಟೇ ಮಾಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಪ್ರತಿಭಟನಾ ನಿರತರೆಲ್ಲರನ್ನು ದೂಷಿಸುವುದು ಸಲ್ಲ. ಒಂದು ವೇಳೆ ಇವತ್ತು ಸಣ್ಣ ಪುಟ್ಟ ಹಿಂಸಾಚಾರಗಳು ನಡೆದಿದ್ದರೆ ಅದರ ಸಂಪೂರ್ಣ ಹೊಣೆಯನ್ನು ಕೇಂದ್ರ ಸರಕಾರವೇ ಹೊತ್ತುಕೊಳ್ಳಬೇಕು.

ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ ಎಂದು ರೈತರು ಹೇಳಿದ್ದಾರೆ. ಸಂಸತ್ತಿಗೆ ಮುತ್ತಿಗೆ ಹಾಕುವ ಬೆದರಿಕೆಯನ್ನೂ ನೀಡಿದ್ದಾರೆ. ಪ್ರಧಾನಿ ಮೋದಿಯವರು ತನ್ನ ಎರಡೂ ಕಿವಿಗಳಿಗೆ ತುರುಕಿರುವ ಆರೆಸ್ಸೆಸ್ ಮತ್ತು ಕಾರ್ಪೊರೇಟ್‌ಗಳೆಂಬ ಬಿರಡೆಗಳನ್ನು ತೆಗೆದು ರೈತರ ಬೇಡಿಕೆಗಳನ್ನು ಆಲಿಸಬೇಕು. ಸಿಎಎ ಪ್ರತಿಭಟನಾಕಾರರನ್ನು ದಮನಿಸಿದಂತೆಯೇ, ರೈತರ ಪ್ರತಿಭಟನೆಯನ್ನೂ ದಮನಿಸಬಹುದು ಎನ್ನುವ ಮೋದಿಯವರ ಹುಸಿ ಆತ್ಮವಿಶ್ವಾಸಕ್ಕೆ ದೇಶ ಭಾರೀ ಬೆಲೆಯನ್ನು ತೆರಬೇಕಾಗಬಹುದು. ತನ್ನದು ಬ್ರಿಟಿಷ್ ಸರಕಾರವಲ್ಲ, ಪ್ರಜಾಸತ್ತಾತ್ಮಕ ಸರಕಾರ ಎನ್ನುವುದನ್ನು ನೆನಪಿಸಿಕೊಂಡು, ರೈತರ ಪ್ರತಿಭಟನೆಗೆ ಸ್ಪಂದಿಸಬೇಕು. ಇದಕ್ಕೆ ಹೊರತಾದ ಯಾವ ದಾರಿಯೂ ಸರಕಾರದ ಮುಂದಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top