ಪ್ರಾರ್ಥನಾ ಮಂದಿರಗಳು ಮಗುವಿನ ಪಾದಸ್ಪರ್ಶದಿಂದ ಸಾರ್ಥಕತೆ ಪಡೆಯಲಿ | Vartha Bharati- ವಾರ್ತಾ ಭಾರತಿ

--

ಪ್ರಾರ್ಥನಾ ಮಂದಿರಗಳು ಮಗುವಿನ ಪಾದಸ್ಪರ್ಶದಿಂದ ಸಾರ್ಥಕತೆ ಪಡೆಯಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಾಜ್ಯದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ದೇವಸ್ಥಾನವನ್ನು ಸರಕಾರ ಕೆಡವಿರುವುದು ಸಂಘಪರಿವಾರ ಸಂಘಟನೆಗಳಿಗೆ ತೀವ್ರ ಮುಜುಗರ ಸೃಷ್ಟಿಸಿದೆ. ತಮ್ಮದೇ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವಂತಹ ಅನಿವಾರ್ಯತೆಗೆ ಅವರು ಸಿಲುಕಿಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ರಾಜ್ಯ ಮತ್ತು ಕೇಂದ್ರದಲ್ಲಿದ್ದರೂ ‘ಹಿಂದೂ ಧರ್ಮ ಅಪಾಯದಲ್ಲಿದೆ’ ಎಂದು ಬೀದಿಯಲ್ಲಿ ನಿಂತು ಜನರ ಮುಂದೆ ಭಾಷಣ ಮಾಡುತ್ತಿದ್ದಾರೆ. ಇವರು ಯಾರ ವಿರುದ್ಧ ಮಾತನಾಡುತ್ತಿದ್ದಾರೆ, ಹಿಂದೂ ಧರ್ಮ ಯಾರಿಂದ ಅಪಾಯದಲ್ಲಿದೆ ಎನ್ನುವುದು ಅರ್ಥವಾಗದೆ ಸಂಘಪರಿವಾರದ ತಳಸ್ತರದ ಕಾರ್ಯಕರ್ತರು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲೇ ರಾಜ್ಯದ ಕೊಪ್ಪಳ ತಾಲೂಕಿನ ಹನುಮ ಸಾಗರ ಸಮೀಪದ ದೇವಸ್ಥಾನವೊಂದಕ್ಕೆ ಆಕಸ್ಮಿಕವಾಗಿ ಎರಡು ವರ್ಷದ ದಲಿತ ಮಗುವೊಂದು ಕಾಲಿಟ್ಟು ದೇವಸ್ಥಾನವನ್ನು ಅಶುದ್ಧಿಗೊಳಿಸಿತು ಎಂದು ಅಲ್ಲಿನ ಗ್ರಾಮಸ್ಥರು ಮಗುವಿನ ಕುಟುಂಬಕ್ಕೆ 25,000 ರೂ. ದಂಡ ಹಾಕಿದ ಪ್ರಕರಣ ವರದಿಯಾಗಿದೆ. ಈ ದಂಡ ಹಾಕಿದ ಕ್ರಮವನ್ನು ಖಂಡಿಸಬೇಕು, ಪ್ರತಿಭಟಿಸಬೇಕು ಎಂದು ಸಂಘಪರಿವಾರ ಸಂಘಟನೆಗಳಿಗಾಗಲಿ, ಹಿಂದೂ ಧಾರ್ಮಿಕ ಮುಖಂಡರಿಗಾಗಲಿ ಅನ್ನಿಸಿಲ್ಲ.

ದೇವಸ್ಥಾನದಲ್ಲಿ ದಲಿತರಿಗೂ ಪ್ರವೇಶ ನೀಡಬೇಕು, ದಲಿತರನ್ನು ಅರ್ಚಕರನ್ನಾಗಿ ಮಾಡಬೇಕು ಇತ್ಯಾದಿ ಬೇಡಿಕೆಗಳು ಇಂದು ನಿನ್ನೆಯದಲ್ಲ. ಆದರೆ ಭಾರತದ ಧಾರ್ಮಿಕ ಸಂರಚನೆಯನ್ನು ಗಮನಿಸಿದರೆ ಹಿಂದೂ ಧರ್ಮದಲ್ಲಿ ಈ ಬೇಡಿಕೆಯನ್ನು ಈಡೇರಿಸುವುದು ಅಷ್ಟು ಸುಲಭವಿಲ್ಲ. ಯಾಕೆಂದರೆ ‘ಹಿಂದೂ ಧರ್ಮ’ ಎನ್ನುವುದು ಭಾರತದಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದರ ಬಗ್ಗೆಯೇ ಹಲವರಲ್ಲಿ ಗೊಂದಲಗಳಿವೆ. ಭಾರತದಲ್ಲಿ ಒಟ್ಟು ಸಂಘಟಿತ ಜಾತಿಗಳ ಸಮೂಹವನ್ನೇ ಒಂದು ಧರ್ಮವಾಗಿ ಗುರುತಿಸುವ ಪ್ರಯತ್ನವನ್ನು ಹಲವು ಧಾರ್ಮಿಕ ಚಳವಳಿಕಾರರು ಮಾಡಿದ್ದಾರೆ.

ಇಷ್ಟಕ್ಕೂ ವರ್ಣಾಶ್ರಮದಲ್ಲಿ ನಾಲ್ಕು ಆಶ್ರಮಗಳಷ್ಟೇ ಇವೆ. ತಳದಲ್ಲಿ ಶೂದ್ರರಿದ್ದಾರೆ. ದಲಿತರು ಪಂಚಮರಾಗಿ ಈ ವರ್ಣವ್ಯವಸ್ಥೆಯಿಂದಲೂ ಹೊರಗಿದ್ದಾರೆ. ಎಲ್ಲ ದೇವಸ್ಥಾನಗಳನ್ನು ಹಿಂದೂ ದೇಗುಲಗಳೆಂದು ಬೀಸಾಗಿ ಗುರುತಿಸಲಾಗುತ್ತವೆಯಾದರೂ, ಆಳದಲ್ಲಿ ಬ್ರಾಹ್ಮಣರೊಳಗಿನ ವಿವಿಧ ಪಂಥಗಳೇ ಪರಸ್ಪರ ದೇವಸ್ಥಾನಗಳ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿಲ್ಲ. ಬಹುತೇಕ ದೇವಸ್ಥಾನಗಳು ನಿಂತಿರುವುದು ವೈದಿಕ ಆಚಾರ, ವಿಚಾರಗಳ ತಳಹದಿಯಲ್ಲಿ ಆಗಿರುವುದರಿಂದ ಮತ್ತು ಅಲ್ಲಿ ಆರಾಧನೆಯಲ್ಲಿ ಅವರೇ ಜಾರಿಗೆ ತಂದಿರುವ ಹಲವು ಶಾಸ್ತ್ರೀಯ ನಿಯಮಗಳಿರುವುದರಿಂದ, ಒಂದು ದೇವಸ್ಥಾನದೊಳಗೆ ಯಾರೋ ಹೋಗಿ ತಮ್ಮ ಜಾತಿ, ಸಂಪ್ರದಾಯದ ಆಚರಣೆಯನ್ನು ಆಚರಿಸುವುದಕ್ಕೆ ಸಾಧ್ಯವಿಲ್ಲ. ಆದುದರಿಂದಲೇ, ಈ ದೇಶ ಕೆಳಜಾತಿಗಳಿಗೆ ದೇವಸ್ಥಾನ ಪ್ರವೇಶವನ್ನು ಧಾರ್ಮಿಕವಾಗಿ ಸಂಪೂರ್ಣ ಸಹಮತಿಯೊಂದಿಗೆ ನೀಡುವುದು ಕಷ್ಟ. ಯಾಕೆಂದರೆ ದೇವಸ್ಥಾನಗಳ ಆಚಾರ ವಿಚಾರಗಳು ಅನುಷ್ಠಾನದಲ್ಲಿರುವುದು ಸಂವಿಧಾನದ ತಳಹದಿಯ ಮೇಲಲ್ಲ. ಯಾವುದೇ ಶಾಲೆ, ಲೈಬ್ರರಿ, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲು ಸಮಾನ ಅವಕಾಶ ನೀಡಬೇಕು ಎಂದು ಹಕ್ಕಿನ ರೂಪದಲ್ಲಿ ಕೇಳಿಕೊಂಡಂತೆ, ‘ಹಿಂದೂ ಧರ್ಮ’ದ ದೇವಸ್ಥಾನಗಳ ವಿಷಯದಲ್ಲಿ ಕೇಳುವುದು ಭಾರತದ ಪಾಲಿಗೆ ವಾಸ್ತವ ಅಲ್ಲ. ಇದನ್ನು ಮನಗಂಡೇ ಅಂತಿಮವಾಗಿ ಅಂಬೇಡ್ಕರ್ ಅವರು ‘ದೇವಸ್ಥಾನವನ್ನು ತಿರಸ್ಕರಿಸಿ’ ಎಂದು ದಲಿತರಿಗೆ ಕರೆ ನೀಡಿದರು. ಅಷ್ಟೇ ಅಲ್ಲ, ಜೀವನದ ಕಟ್ಟ ಕಡೆಯ ದಿನಗಳಲ್ಲಿ ಅವರು ಹಿಂದೂಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ವಿಷಾದನೀಯ ಸಂಗತಿಯೆಂದರೆ, ದಲಿತರು ಅಥವಾ ಕೆಳಜಾತಿಯ ಜನರಿಗೆ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ನೀಡುವುದಷ್ಟೇ ಇಂದು ದೇವಾಲಯದ ಸಮಸ್ಯೆಯಲ್ಲ. ಎರಡು ವರ್ಷದ ದಲಿತ ಮಗುವಿನ ಸ್ಪರ್ಶದಿಂದಲೇ ದೇವಸ್ಥಾನ ಅಶುದ್ಧವಾಯಿತು ಎಂದು ಯೋಚಿಸುವಷ್ಟು ಸಮಸ್ಯೆ ಆಳವಾಗಿದೆ. ಆ ಮಗು ದೇವಸ್ಥಾನಕ್ಕೆ ಹೋಗಿರುವುದು ಯಾವುದೇ ಧಾರ್ಮಿಕ ಉದ್ದೇಶದಿಂದ ಅಲ್ಲ ಎನ್ನುವುದನ್ನು ನಾವು ಯೋಚಿಸುವುದು ಕಷ್ಟವೇನಿಲ್ಲ. ಇಲ್ಲಿ ಮಗುವಿನ ಪಾದ ಸ್ಪರ್ಶದಿಂದ ದೇವಸ್ಥಾನ ಅಶುದ್ಧಿಯಾಯಿತು ಎಂದು ಭಾವಿಸುವುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ‘ಮಕ್ಕಳು ದೇವರಿಗೆ ಸಮಾನ’ ಎಂದು ನಂಬುವ ಸಮಾಜ ನಮ್ಮದು. ಅಂತಹ ಒಂದು ಮಗು ಕೆಳ ಜಾತಿಗೆ ಸೇರಿದೆ ಎನ್ನುವ ಒಂದೇ ಕಾರಣಕ್ಕಾಗಿ, ದೇವಸ್ಥಾನವನ್ನು ಪ್ರವೇಶಿಸಿದರೆ ಇಡೀ ದೇವಸ್ಥಾನ ಅಶುದ್ಧಿಯಾಯಿತು ಎಂದು ಭಾವಿಸುವುದು ಮನುಷ್ಯ ಘನತೆಗೆ ಕಳಂಕವಾಗಿದೆ. ಇದು ಕೇವಲ ದೇವಸ್ಥಾನಕ್ಕಷ್ಟೇ ಸಂಬಂಧಿಸಿದ ವಿಷಯವಾಗಬೇಕಾಗಿಲ್ಲ. ಯಾವುದೇ ದೇವಸ್ಥಾನ, ಮಸೀದಿ, ಚರ್ಚ್‌ಗಳ ಒಳಗೆ ಇನ್ನೊಂದು ಸಮುದಾಯದ, ಇನ್ನೊಂದು ಜಾತಿಯ ಅಥವಾ ಇನ್ನೊಂದು ಧರ್ಮದ ಪುರುಷ ಅಥವಾ ಮಹಿಳೆ ಪ್ರವೇಶಿಸಿದರೆ ಆ ಸ್ಥಳ ಅಶುದ್ಧಗೊಳ್ಳುತ್ತದೆ ಎನ್ನುವುದು ಕೇವಲ ವೌಢ್ಯ ನಂಬಿಕೆ ಮಾತ್ರವಲ್ಲ, ಅದು ಅಮಾನವೀಯವೂ ಆಗಿದೆ. ಮಸೀದಿ, ಮಂದಿರ, ಚರ್ಚ್‌ಗಳು ಸ್ಥಾಪನೆಯಾಗಿರುವುದು ಮನುಷ್ಯನನ್ನು ಮೇಲೆತ್ತುವುದಕ್ಕಾಗಿ.

ಮನುಷ್ಯ ಅದರೊಳಗೆ ಪ್ರವೇಶಿಸುವುದಕ್ಕೇ ನಿರಾಕರಿಸಿದರೆ ಅದು ಬರಿ ಕಟ್ಟಡ ಮಾತ್ರ. ಅವರವರ ನಂಬಿಕೆಗೆ ಅನುಸಾರವಾಗಿ ದೇವಸ್ಥಾನ, ಮಸೀದಿಗಳು ನಿರ್ಮಾಣವಾಗಿರಬಹುದು. ಪೂಜೆಯ ಸಂದರ್ಭದಲ್ಲಿ ಅವರದೇ ಸಂಪ್ರದಾಯಗಳೂ ಆಚರಣೆಯಲ್ಲಿ ಇರಬಹುದು. ಆದರೆ ಯಾವುದೇ ಧರ್ಮಕ್ಕೆ ಸೇರಿದ ಹೆಣ್ಣಾಗಲಿ, ಗಂಡಾಗಲಿ, ಮಕ್ಕಳಾಗಲಿ ಇನ್ನೊಂದು ಧರ್ಮ, ಜಾತಿಗಳಿಗೆ ಸೇರಿದ ಧಾರ್ಮಿಕ ಸ್ಥಳವನ್ನು ಮುಟ್ಟಿದಾಗ ಅವುಗಳು ಅಶುದ್ಧಗೊಳ್ಳುತ್ತವೆ ಎನ್ನುವ ಕಲ್ಪನೆ ದೇವರಿಗೆ ಮಾಡುವ ಅವಮಾನವಾಗಿದೆ. ದೇವಸ್ಥಾನ, ಮಸೀದಿಗಳಲ್ಲಿ ಹಲ್ಲಿ, ಚೇಳು, ಜಿರಳೆ, ಇಲಿ ಇತ್ಯಾದಿಗಳು ಲಿಂಗಭೇದ, ಜಾತಿ, ಧರ್ಮ ಭೇದವಿಲ್ಲದೆ ಓಡಾಡಬಹುದಾದರೆ, ಮನುಷ್ಯ ಸ್ಪರ್ಶದಿಂದ ಅದು ಅಶುದ್ಧಗೊಳ್ಳುವುದು ಸಾಧ್ಯವೇ? ಈ ಕುರಿತಂತೆ ತಮ್ಮ ಅನುಯಾಯಿಗಳಲ್ಲಿ ಆ ಧರ್ಮದ ಮುಖಂಡರೇ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ.

 ಇಂದು ತಮ್ಮ ತಮ್ಮ ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ಕೇವಲ ತಮ್ಮ ಜಾತಿ, ಧರ್ಮೀಯರಿಗಷ್ಟೇ ಸೀಮಿತಗೊಳಿಸದೆ ಇತರರಿಗೂ ಪರಿಚಯಿಸುವ ಕೆಲಸ ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ಇತರ ಧರ್ಮಗಳಿಗೆ ಸೇರಿದ ಪುರುಷ, ಮಹಿಳೆ, ಮಕ್ಕಳನ್ನು ತಮ್ಮ ಮಸೀದಿಯೊಳಗೆ ಆಹ್ವಾನಿಸಿ ಅಲ್ಲಿನ ಪರಿಸರವನ್ನು ಪರಿಚಯಿಸುವುದು ಮುಸ್ಲಿಮ್ ಧಾರ್ಮಿಕ ಮುಖಂಡರ ಆದ್ಯತೆಯ ಕೆಲಸವಾಗಬೇಕು. ಇದೇ ಸಂದರ್ಭದಲ್ಲಿ ಹಿಂದೂ ದೇವಸ್ಥಾನದೊಳಗೆ ಮೊದಲು ಎಲ್ಲ ಜಾತಿಯ ಜನರಿಗೆ ಪ್ರವೇಶಾವಕಾಶಕೊಟ್ಟು, ಬಳಿಕ ಇತರ ಧರ್ಮೀಯರಿಗೂ ದೇವಸ್ಥಾನವನ್ನು ಪರಿಚಯಿಸುವ ಕೆಲಸವನ್ನು ಹಿಂದೂಧರ್ಮದ ಮುಖಂಡರು ಮಾಡಬೇಕಾಗಿದೆ. ಹಾಗೆಯೇ ಚರ್ಚ್‌ನೊಳಗೆ ಇತರ ಧರ್ಮೀಯರನ್ನು ಮೇಲು ಕೀಳು ಎಂದು ಭಾವಿಸದೆ ಆಹ್ವಾನಿಸಿ, ಅದರೊಳಗಿನ ವ್ಯವಸ್ಥೆಯನ್ನು ಪರಿಚಯಿಸಿಕೊಡುವ ಕೆಲಸವನ್ನು ಕ್ರಿಶ್ಚಿಯನ್ ಮುಖಂಡರು ಮಾಡಬೇಕು. ಇದರಿಂದಾಗಿ ಪರಸ್ಪರ ಅಪನಂಬಿಕೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ, ಜಾತಿ, ಧರ್ಮಗಳ ನಡುವಿರುವ ಗೋಡೆಗಳು ಕುಸಿದು ಸಹಬಾಳ್ವೆಗೆ ಅನುಕೂಲವಾಗುತ್ತದೆ. ಕೊಪ್ಪಳದಲ್ಲಿ ದಲಿತ ಮಗುವಿನ ಸ್ಪರ್ಶದಿಂದ ದೇವಸ್ಥಾನ ಅಪವಿತ್ರವಾಯಿತು ಎಂದು ಆ ಮಗುವಿನ ಕುಟುಂಬಕ್ಕೆ ದಂಡ ವಿಧಿಸಿದ ಕ್ರಮವನ್ನು ಹಿಂದೂ ಧರ್ಮದ ನೇತೃತ್ವ ವಹಿಸಿದ ಸ್ವಾಮೀಜಿಗಳು ಮತ್ತು ಸಂಘಟನೆಗಳು ಮೊತ್ತ ಮೊದಲು ಖಂಡಿಸಬೇಕು. ಜೊತೆಗೆ ಜಾಗೃತಿ ಮೂಡಿಸುವುದಕ್ಕಾಗಿ ಕೊಪ್ಪಳದಲ್ಲಿ ಹಿಂದೂ ಸಮಾವೇಶವನ್ನು ಹಮ್ಮಿಕೊಂಡು ಎಲ್ಲ ಜಾತಿ, ಧರ್ಮಗಳನ್ನು ಒಂದಾಗಿಸುವ ಕೆಲಸ ಮಾಡಬೇಕು.

ಕೆಳಜಾತಿ-ಮೇಲ್‌ಜಾತಿ ಎನ್ನುವುದು ನಾವೇ ಸೃಷ್ಟಿಸಿಕೊಂಡ ಕಂದರಗಳು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಸಿ, ಎಲ್ಲರನ್ನು ದೇಗುಲದೊಳಗೆ ಮುಕ್ತವಾಗಿ ಬಿಟ್ಟಕೊಳ್ಳಬೇಕು. ಹಿಂದೆ ವಿವೇಕಾನಂದ, ನಾರಾಯಣ ಗುರುಗಳು ಇಂತಹ ಪ್ರಯತ್ನ ಮಾಡಿರುವುದರಿಂದಲೇ ಇಂದು ಹಿಂದೂ ಧರ್ಮ ಉಳಿದಿದೆ, ಬೆಳೆದಿದೆ. ಹಿಂದೂ ಧರ್ಮ ಅಪಾಯದಲ್ಲಿರುವುದು ಇತರ ಧರ್ಮೀಯರ ಕಾರಣದಿಂದಲ್ಲ, ಹಿಂದೂ ಧರ್ಮದೊಳಗಿರುವ ಜಾತೀಯತೆ, ಮೇಲುಕೀಳುಗಳ ಕಾರಣದಿಂದ ಎನ್ನುವುದನ್ನು ಅರಿತುಕೊಂಡು ಅವರು ಕೆಲಸ ಮಾಡಿದರು. ಅದನ್ನು ಇಂದಿನ ಧಾರ್ಮಿಕ ನಾಯಕರು ಅರಿತರೆ ಮತಾಂತರ ಪಿಡುಗು ತನ್ನಷ್ಟಕ್ಕೆ ಅಳಿಯಬಹುದು. ಶತ್ರುವನ್ನು ತನ್ನೆದೆಯೊಳಗೆ ಬಚ್ಚಿಟ್ಟುಕೊಂಡು ಅಂಗಳದಲ್ಲಿ ಆತನನ್ನು ಹುಡುಕಿದಂತೆ ನಾಟಕ ಮಾಡುವುದರಿಂದ ರಾಜಕೀಯ ದುರುದ್ದೇಶಗಳನ್ನಷ್ಟೇ ಈಡೇರಿಸಿಕೊಳ್ಳಬಹುದು. ಧರ್ಮದೊಳಗಿನ ಒಳ್ಳೆಯ ಅಂಶಗಳು ಜನಸಾಮಾನ್ಯರಿಗೆ ತಲುಪಬೇಕಾದರೆ ಒಳಗೆ ಬಚ್ಚಿಟ್ಟುಕೊಂಡಿರುವ ಕಳ್ಳನನ್ನು ಮೊದಲು ಹಿಡಿಯುವ ಪ್ರಯತ್ನ ನಡೆಯಬೇಕು. ದೇವಸ್ಥಾನ, ಮಂದಿರ, ಮಸೀದಿಗಳು ಮಕ್ಕಳ ಪಾದಸ್ಪರ್ಶದಿಂದ ಸಾರ್ಥಕಗೊಳ್ಳಬಹುದೇ ಹೊರತು,ಯಾವ ಕಾರಣಕ್ಕೂ ಅಶುದ್ಧವಾಗಲಾರವು ಎನ್ನುವ ಪ್ರಾಥಮಿಕ ಅಧ್ಯಾತ್ಮವನ್ನು ಜನರಿಗೆ ತಲುಪಿಸುವ ಕೆಲಸ ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಿದೆ ಎನ್ನುವುದನ್ನು ಕೊಪ್ಪಳ ಪ್ರಕರಣ ನಮಗೆ ತೋರಿಸಿಕೊಟ್ಟಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top