--

ಬರ ಕುರಿತ ನಿರ್ವಚನೆ

ಬೆಂಕಿಯ ಮಳೆ ಸುರಿದು ಉರಿಸಿ ಕೊಲ್ಲಲುಬಾರದೆ?

ನೆಲ್ಲುಕುಂಟೆ ವೆಂಕಟೇಶ್

ಭಾಗ-1

ಬೆಂಗಳೂರಿಗೆ ತೀರಾ ಹತ್ತಿರದ ತೆಂಗು ಬೆಳೆಯುವ ಊರಿನಲ್ಲಿ ನಡೆದ ಘಟನೆಯಿದು. ಎಂಟೆಕರೆ ತೋಟವಿದ್ದ ಇಬ್ಬರು ಬುದ್ಧಿವಂತ ಮಕ್ಕಳ ಪುಟ್ಟದಾದ ಮತ್ತು ಖುಷಿ ನೆಲೆಸಿದ್ದ ಸಂಸಾರ. ಹೊಲ ಮನೆಯ ಕೆಲಸಗಳಿಗೆ ಆಳುಮಗನದೊಂದು ಸಂಸಾರವೂ ನೆಲೆಸಿತ್ತು. ಊರೊಟ್ಟಿನ ಕೆಲಸಗಳಿಗೆ ಎಲ್ಲರಿಗಿಂಥ ಹೆಚ್ಚು ದೇಣಿಗೆ ಕೊಡುತ್ತಿದ್ದ ಕುಟುಂಬ ಇದು. ಐದಾರು ಸೀಮೆ ಹಸುಗಳು ನಿರಂತರ ಹಾಲು ಕರೆಯುತ್ತಿದ್ದುದರಿಂದ ಹಣವೆಂದೂ ಸಮಸ್ಯೆ ಆಗಿರಲಿಲ್ಲ. ಇಂತಹ ಕುಟುಂಬಕ್ಕೆ, ಕಳೆದ ಏಳೆಂಟು ವರುಷಗಳಿಂದೀಚೆಗೆ ಬಿದ್ದ ನಿರಂತರ ಬರ ಬದುಕನ್ನು ಚಿಂದಿ ಮಾಡಿತು. ಮಕ್ಕಳಿಬ್ಬರೂ ಇಂಜಿನಿಯರಿಂಗ್ ಓದುತ್ತಿದ್ದರು. ಬರದ ಸುಡು ಸುಡುವ ದಾವಾನಲಕ್ಕೆ ಭೂಮಿ ಧೂಳಾಗಿ ಅಡಿಕೆ ತೊಡೆ ಸತ್ತು ಬಿದ್ದರೆ, ತೆಂಗು ಸುಳಿ ಉದುರಿ ಹೋದವು. ಕೂಡಿಟ್ಟ ಹಣ ಬೋರ್‌ವೆಲ್ ಕೊರೆಯಲು ಖರ್ಚಾಯಿತು. ಆದರೂ ನೀರ ಪಸೆ ಕಾಣಲಿಲ್ಲ. ಬರೀ ಧೂಳೇ ಧೂಳು. ಕೊನೆಗೆ ಮೇವು ಹೊಂದಿಸಲಾರದೆ ಹಸುಗಳನ್ನೂ ಮಾರಿಕೊಂಡಾಯ್ತು. ಮನೆ ಖರ್ಚಿಗೆ ಹೊಲದ ಬದುಗಳಲ್ಲಿದ್ದ ಹಲಸು, ಹೊಂಗೆ, ಮಾವು, ಬೇವು , ಅತ್ತಿ ಮುಂತಾದ ಮರಗಳೆಲ್ಲ ಸಾಮಿಲ್ಲು ಸೇರಿದವು. ಹಕ್ಕಿ ಪಕ್ಷಿಗಳಿಂದ ನಲಿಯುತ್ತಿದ್ದ ತೋಟ ಎಂಬ ಜಾಗವೀಗ ಸುಟ್ಟು ಉದುರಿಬಿದ್ದ ಸ್ಮಶಾನ ಭೂಮಿ. ಅದರ ಮಧ್ಯದಲ್ಲಿದ್ದ ಮನೆ ಮಾತ್ರ ಸಿಡಿಲಾಘಾತಕ್ಕೆ ಸಿಕ್ಕಿ ಕೊನೆ ಉಸಿರೆಳೆಯುತ್ತಿರುವ ಆನೆಯಂತೆ ಇಷ್ಟಿಷ್ಟೇ ಹೊಗೆ ಉಗುಳುತ್ತಾ ನಿಂತುಕೊಂಡಿತು. ಇದಿಷ್ಟೇ ಆಗಿದ್ದರೆ ಇದು ಚರಿತ್ರೆಯ ಕ್ರೌರ್ಯದ ನಡೆಯೊಳಗೊಂದು ಅಧ್ಯಾಯವೆಂದು ಭಾವಿಸಿ ಸುಮ್ಮನಿದ್ದು ಬಿಡಬಹುದಿತ್ತು.

ಮಕ್ಕಳ ಓದು ನಿಲ್ಲಿಸಬಾರದೆಂದು ಮನೆಯೊಡತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮನೆಯಾಳಿನ ಮಗನಿಂದ ಸಾಲ ಪಡೆಯಲಾರಂಭಿಸಿದಳು. ಇದು ಹೀಗೆ ಬೆಳೆದು ಮಗ ಸಮಾನನಾದ ಹುಡುಗನೊಂದಿಗೆ ಮಲಗಲಾರಂಭಿಸಿದಳು. ಇದರ ಮಧ್ಯೆ ಮಗಳ ಒಡಲೂ ಅವನೊಟ್ಟಿಗೆ ಬೆರೆಯಿತು. ಇದು ಪ್ರೇಮವೆಂದಾಯಿತು. ಹುಡುಗ ಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ಒತ್ತಾಯಿಸತೊಡಗಿದ. ಇದು ಲೋಕದ ಗಂಟಲಿಗೆ ಮೈಕು ಕಟ್ಟಿದಂತಾಗಿ, ತಾಯಿ ಮಗಳಿಬ್ಬರೂ ವಿಷ ಕುಡಿದು ಬಿಟ್ಟರು. ದೊಡ್ಡ ದೊಡ್ಡ ಕುಟುಂಬಗಳ ಅನೇಕ ಹೆಣ್ಣು ಮಕ್ಕಳು ಮೈ ಮಾರಿ ಬದುಕುವ ಪರಿಸ್ಥಿತಿಗೆ ಬಂದಿದ್ದಾರೆ. ಗಂಡ ಮಾವಂದಿರ ಮೌನ ಸಮ್ಮತಿಯೊಂದಿಗೇ ಇದು ನಡೆಯುತ್ತಿದೆ. ಕರ್ನಾಟಕದ ಅನೇಕ ಕಡೆ ಪರಿಸ್ಥಿತಿ ಹೀಗೇ ಇದೆ ಎನ್ನುವುದು ದಿಗಿಲು ಹುಟ್ಟಿಸುವ ವಿಷಯ ನೂರಾರು ವರ್ಷಗಳಿಂದ ಅನ್ನ ನೀಡುತ್ತಾ ಬಂದಿದ್ದ ಭೂಮಿ ಈಗ ಬರೀ ಬರಡು. ಒಂದೆರಡು ಸಾವಿರಗಳನ್ನು ದುಡಿಯಲಾಗದ ಸ್ಥಿತಿಗೆ ತಲುಪಿದೆ. ಭೂಮಿ ಮೇಲಿನ ಬರವನ್ನು, ಕ್ಷಾಮವನ್ನು ಎದುರಿಸಿ ಸಮುದಾಯಗಳಿಗೆ ಗೊತ್ತಿದೆ. ಆದರೆ ಭೂಮಿಯಾಳದ ಜಲಕ್ಷಾಮದ ನಿರ್ವಹಣೆಯ ಕುರಿತು ನಮ್ಮ ಸಮಾಜಕ್ಕೆ ಅರಿವಿಲ್ಲ. ಹಿಂದೆಯೂ ಮಳೆ ಕೈಕೊಡವಿ ಅಟ್ಟ ಸೇರಿದ ಉದಾಹರಣೆಗಳಿವೆ. ಆದರೆ ಮರ ಗಿಡಗಳು ಭೂಮಿಯೊಳಗಿನ ತೇವಾಂಶ ಹೀರಿ ಬದುಕುವುದಕ್ಕೆ ಬೇಕಾದ ಪರಿಸ್ಥಿತಿ ಇತ್ತು. ಬಾವಿ -ಹಳ್ಳಗಳು ಬತ್ತಿರಲಿಲ್ಲ. ಜೌಗು ನೆಲಗಳು ಅಸ್ತಿತ್ವ ಕಳೆದುಕೊಂಡಿರಲಿಲ್ಲ. ಈಗ ಎಲ್ಲವೂ ಬರಿದಾಗಿರುವುದು ಸಮಸ್ಯೆಯ ಮೂಲ. ಬರದ ಜೊತೆಯಲ್ಲಿ ಕೃಷಿ ಬಿಕ್ಕಟ್ಟುಗಳು ಸೃಷ್ಟಿಸುತ್ತಿರುವ ತಲ್ಲಣಗಳು ಒಂದೆರಡಲ್ಲ. ರೈತರ ಆತ್ಮಹತ್ಯೆಗಳೂ ಇದರ ಫಲವೆ. ಎಂಥಾ ಕವಲು ದಾರಿಯಲ್ಲಿ ನಾವಿದ್ದೇವೆ ಎಂದರೆ, ಮಕ್ಕಳಿಗೆ ದುಬಾರಿ ಶಾಲೆ ಕಾಲೇಜುಗಳಲ್ಲಿ ವಿದ್ಯೆ ಕೊಡಿಸಿದರೆ, ತಂದೆ ತಾಯಿಗಳಿಗೆ ನೆಮ್ಮದಿ ಗ್ಯಾರಂಟಿ ಎಂಬ ಮಿಥ್ ಅನ್ನು ಸೃಷ್ಟಿಸಲಾಗಿದೆ. ಕೃಷಿ ಬಿಕ್ಕಟ್ಟಿನ ಜೊತೆಗೆ ದುಬಾರಿ ಶಿಕ್ಷಣ ಮತ್ತು ಆರೋಗ್ಯ ವಲಯಗಳು ಭಾರತದ ಸಾಮಾಜಿಕ ಆರ್ಥಿಕ ಚಲನೆಗಳನ್ನು ದಿಕ್ಕೆಡಿಸುತ್ತಿವೆ. ಇದರ ಹೊಣೆಯನ್ನು ಯಾರು ಹೊರಬೇಕು?

ಬರಕ್ಕೆ ಸಿಕ್ಕಿ ತತ್ತರಿಸಿ ಜನ ಹಾಡಿದ ಮಕ್ಕಳ ಮಾರ್ಯಾರೋ ಮಳಿರಾಜ ಎಂಬ ಆರ್ತನಾದವನ್ನು ಕೇಳಿಸಿಕೊಂಡು ಬೆಳೆದಿದ್ದ ನನಗೆ ಹೆಣ್ಣುಮಕ್ಕಳು ಆತ್ಮಗೌರವ ಮಾರಿಕೊಂಡು ಬದುಕುವಂತಾಗಿರುವುದು ಸಮಕಾಲೀನ ಸಂದರ್ಭದ ರಾಜಕೀಯ-ಆರ್ಥಿಕ ಆಡಳಿತದ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ಸರಕಾರಗಳೇನೋ ಅನ್ನದ ಭರವಸೆ ನೀಡುತ್ತಿವೆ, ಆದರೆ ಮಕ್ಕಳ ಓದು, ಆರೋಗ್ಯ ಮುಂತಾದ ದಿನನಿತ್ಯದ ಜಂಜಡಗಳನ್ನು ನಿರ್ವಹಿಸಲು ಕನಿಷ್ಠ ಏಳೆಂಟು ಸಾವಿರ ದುಡಿಯಲಾಗದ ಸ್ಥಿತಿಗೆ ಈ ಕುಟುಂಬಗಳು ಬಂದು ನಿಂತಿವೆ. ಹಾಗಾಗಿ ಬರ ಎನ್ನುವುದೀಗ ಹಸಿವಿನ ಸಮಸ್ಯೆ ಅಷ್ಟೇ ಆಗಿ ಉಳಿದಿಲ್ಲ. ಅದು ಕುಟುಂಬಗಳ ಸಾಮಾಜಿಕ-ಆರ್ಥಿಕ ರಚನೆಯನ್ನು ಧ್ವಂಸ ಮಾಡುವ ಸಂಗತಿಯಾಗಿಯೂ ಮಾರ್ಪಡುತ್ತಿದೆ.

ಅರಸುಕೇಂದ್ರಿತ ಕಾವ್ಯ ಮತ್ತು ಪುರಾಣಗಳಲ್ಲಿ ಜನರ ಬದುಕಿನ ವಿವರಗಳು ತೀರಾ ವಿರಳ. ಅವುಗಳಲ್ಲಿ ನಿಖರತೆ ಎಂಬುದೇನೂ ಇಲ್ಲ. ಕಥೆ-ಚರಿತ್ರೆಗಳು ಒಂದರ ತೆಕ್ಕೆಯೊಳಗೊಂದು ಸೇರಿಕೊಂಡು ಅಯೋಮಯವಾಗಿವೆ. ಈ ಊಹೆಗಳನ್ನೇ ನಿಜವಾಗಿ ನಡೆದ ಘಟನೆ ಎಂಬಂತೆ ಬಿಂಬಿಸಿ ವಾಸ್ತವವನ್ನು ಘೋರ ರಣರಂಗ ಮಾಡಿಕೊಂಡು ಕೂತಿದ್ದೇವೆ. ಇವುಗಳಲ್ಲಿ ಬರ, ಕ್ಷಾಮಗಳಂಥ ಸಾಮೂಹಿಕ ವಿನಾಶಕಾರಿ ವಿದ್ಯಮಾನಗಳ ಬಗ್ಗೆ ದಿವ್ಯ ನಿರ್ಲಿಪ್ತತೆ ಇದೆ. ಆಸ್ಥಾನಿಕ ಕವಿಗಣ ಕ್ಷಾಮ ಡಾಮರಗಳ ಕುರಿತು ಬರೆದರೆ ತನ್ನ ಸ್ಥಾನಕ್ಕೆ ಕುತ್ತು ಬರಬಹುದೆಂದು ಭಾವಿಸಿ ಹಿತಾಸಕ್ತಿ ಸಂಘರ್ಷದಲ್ಲಿ ನರಳಿದಂತಿದೆ. ಹಾಗಾಗಿ ಅನಿವಾರ್ಯವಾಗಿ ಜನಪದರ ಕಥೆ ಕಾವ್ಯಗಳ ಕಡೆಗೆ ಹೋಗಲೇಬೇಕು. ಅಲ್ಲಿ ಇದರ ದಾರುಣ ಚಿತ್ರ ಅನಾವರಣಗೊಳ್ಳುತ್ತದೆ. ಮಕ್ಕಳ ಮಾರಿ ರೊಕ್ಕ ಹಿಡ್ಕೊಂಡು ಭತ್ತಂತ ತಿರುಗ್ಯಾರಎಂಬುದನ್ನು ಹುಸಿವರ್ಣನೆ ಎನ್ನಲಾದೀತೇ? ಬೇಕಿಲ್ಲದಿದ್ದರೆ ಬೆಂಕಿಯ ಮಳೆ ಸುರಿದು ಉರಿಸಿ ಕೊಲ್ಲಲುಬಾರದೇ, ಯಾತಕ್ಕೆ ಮಳೆ ಹೋದವೋ ಶಿವ ಶಿವ ಲೋಕ ತಲ್ಲಣಿಸುತಾವೊ ಎಂದು ಜನಪದರು ಹಾಡುತ್ತಿದ್ದರೆ ಮನುಷ್ಯನ ಆರ್ತನಾದ, ಅಸಹಾಯಕತೆ ಬಿರಿದುಕೊಳ್ಳುತ್ತದೆ. ಹುಟ್ಟಿಸಿದವನು ಹುಲ್ಲು ಮೇಯಿಸುತ್ತಾನೆಯೇ ಎಂದು ನಂಬಿ ಕೂತಿದ್ದವರಿಗೆ ಮಳೆ ಅಟ್ಟ ಹತ್ತಿ ಕೂತಿದೆ. ಪಟ್ಟದಾನೆಯಂಥ ಸ್ತ್ರೀಯರೂ ಸೊರಗಿದ್ದಾರೆ. ಅವರ ಸೀರೆ ಸೊಂಟದಲ್ಲಿ ನಿಲ್ಲುತ್ತಿಲ್ಲ. ಹಡೆದ ಬಾಣಂತಿಗೆ ಅನ್ನವಿಲ್ಲದೆ ಮೊಣಕೈಗೆ ಬಳೆ ಏರುತ್ತವೆ. ಒಕ್ಕಲು ಮಕ್ಕಳು ಮಕ್ಕಳನು ಮಾರಿ ದುಃಖ ಪಡುವ ಜನರ ಭೀಕರ ಪರಿಸ್ಥಿತಿಯ ನುಡಿಚಿತ್ರ ಇದು. ಮಳೆ, ಬಿಸಿಲುಗಳೆಲ್ಲವೂ ದೇವರ ಕರುಣೆಯ ವಿಷಯಗಳು ಎಂಬುದೊಂದು ಪ್ರಜ್ಞೆ ಜನಮಾನಸದ ಆಳದಲ್ಲಿ ಕೂತಿದೆ. ಇಂಥ ಪ್ರಜ್ಞೆಯ ಫಲವಾಗಿ ಪ್ರಕೃತಿಯ ಮೇಲೆ ಇನ್ನಷ್ಟು ಶೋಷಣೆ ನಡೆಯುತ್ತಿದೆ. ದೇವರ ಒಲಿಸಿಕೊಳ್ಳುವುದೆಂದರೆ ಗಂಗೆ ಕಾವೇರಿಯರ ಒಡಲಿಗೆ ಎಣ್ಣೆ, ಹೂ, ಬೂದಿ ಚೆಲ್ಲುವುದು, ಜಲಮೂಲಗಳಿಗೆ ವಿಷಕಾರಿ ಬಣ್ಣ ತುಂಬುವುದು, ಹಬ್ಬ ಹರಿದಿನಗಳೆಂದು ಮರ ತರಿದು ತೋರಣ ಕಟ್ಟುವುದು ಎಂದಾಗಿದೆ. ಎಲ್ಲಿ ಸುಫಲ, ಎಲ್ಲಿ ಸುಜಲ, ಎಲ್ಲಿ ಮಲಯಜ ಶೀತಲ?

ಯುರೋಪು ನದಿಯನ್ನು ನದಿಯಾಗಿ ನೋಡುತ್ತಿದೆ. ಅಲ್ಲಿ ವಿಜ್ಞಾನವಿದೆ. ಪ್ರಜ್ಞೆ ಇದೆ. ಆದ್ದರಿಂದ ನಗರದ ಮಧ್ಯೆ ಥೇಮ್ಸ್ ಹರಿದರೂ ಕುಡಿಯುವಷ್ಟು ಸ್ವಚ್ಛ. ನಾವು ನದಿಗಳನ್ನು ದೇವತೆ ಮಾಡಿದ್ದೇವೆ, ವಿಷ ತುಂಬಿ, ಕೊಳಚೆ ಮಾಡಿ ಶುದ್ಧೀಕರಿಸಲು ಸಾವಿರಾರು ಕೋಟಿ ಸುರಿಯುತ್ತಿದ್ದೇವೆ. ಆದರೂ ಸರಿಮಾಡಲಾಗುತ್ತಿಲ್ಲ. ದೇವರ ಸೃಷ್ಟಿಯನ್ನು ದೇವರೇ ನೋಡಿಕೊಳ್ಳಲಿ ಎಂಬ ಮೌಢ್ಯವೂ, ಹಿಪಾಕ್ರಸಿಯೂ ಸೇರಿ ವಿನಾಶದ ಕಡೆಗೆ ಸಾಗುತ್ತಿದ್ದೇವೆ. ಮನುಷ್ಯ ನಿಮಿತ್ತ ಮಾತ್ರ ಎಂಬ ಸಿದ್ಧಾಂತವನ್ನು ಗೀತೆ ಮುಂತಾದ ಕಥೆ, ಕೃತಿಗಳ ಮೂಲಕ ಭಾರತದ ಜನಮಾನಸದೊಳಕ್ಕೆ ಅಳವಡಿಸಿದ ಪುರೋಹಿತಶಾಹಿ ವ್ಯವಸ್ಥೆ ಗ್ರಾಮ ಭಾರತವನ್ನು ಕುದಿವ ಎಸರಿಗೆ ಎಸೆದು, ಅದನ್ನು ಅಳಿವು-ಉಳಿವಿನ ಸಂಗತಿಯಾಗಿ ಮಾರ್ಪಡಿಸಿದೆ. ಬರ, ಪ್ರವಾಹಗಳೆಲ್ಲ ದೇವರ ಕೃತ್ಯಗಳು ಎಂದು ಭಾವಿಸಿದ ಜನರು ಮಾತ್ರ ಬೆಂಕಿಯ ಮಳೆ ಸುರಿಸು, ಉರಿಸಿ ಕೊಲ್ಲು ಎಂಬ ಮಾತುಗಳನ್ನಾಡಲು ಸಾಧ್ಯ.

ಯಾತಕ್ಕೆ ಮಳೆ ಹೋದವೋ ಶಿವಶಿವದಂಥದ್ದೆ ಇನ್ನೊಂದು ಹಾಡು ಕರ್ನಾಟಕದಲ್ಲಿ ಜೀವಂತವಾಗಿದೆ. ಇದು ಬಣ್ಣದ ಗುಬ್ಯಾರೊ ಮಳಿರಾಜ, ಅವ್ರ ಮಣ್ಣಾಗಿ ಹೋದರೊ ಮಳಿರಾಜ ಎಂಬುದು. ಈ ಹಾಡಿನಲ್ಲೂ, ಒಕ್ಕಲಗೇರಿಯಲ್ಲಿ ಮಕ್ಕಳನ್ನು ಮಾರಿ ರೊಕ್ಕ ಹಿಡ್ಕೊಂಡು ಭತ್ತಂತ ತಿರುಗಿದರು, ಸೊಲಗಿ ಹಿಟ್ಟು ಸಿಕ್ಕಿತೆಂದರೆ ಅದರಲ್ಲಿ ಸುಣ್ಣ ಸೇರಿಸಿ ಕುಡಿಸಿದರು. ಇದರಿಂದ ಹಸ್ತು ಬಂದ ಕೇರಿ ಗಬಗಬ ತಿಂದು ಒದ್ದಾಡಿ ಸಾಯುತ್ತದೆ. ಮುಷ್ಟಿ ಅಕ್ಕಿಯೊಳಗೆ ಅಪುವನುಗಾಂಜಾಬೆರೆಸಿ ಸಣ್ಣ ಕೂಸಿಗೆ ಮನ್ನಿಸಿ ಉಣ್ಣಿಸಿದರು. ಉಂಡ ಕೂಸುಗಳು ಕಣ್ಣು ಮುಚ್ಚುವ ದಾರುಣ ಚಿತ್ರಗಳನ್ನು ಈ ಹಾಡುಗಳು ಕಟ್ಟುತ್ತವೆ. ದುಃಖ, ದುರಂತಗಳನ್ನು ಉಂಡೆ ಕಟ್ಟುವಂತೆ ನುಡಿಚಿತ್ರ ಕಟ್ಟುವ ಈ ಹಾಡುಗಳು ನಾಗರಿಕತೆಯುದ್ದಕ್ಕೂ ಗಾಯದ ನೆನಪುಗಳಾಗಿ ಕಾಡುತ್ತವೆ. ಇಂಥ ಹಾಡುಗಳನ್ನು ಕೇಳಿದ ಯಾರಿಗೆ ತಾನೆ ಹಿಂದಿನ ರಾಜಪ್ರಭುತ್ವಗಳ ಮೇಲೆ ಗೌರವ ಮೂಡಲು ಸಾಧ್ಯ. ರಾಜ ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಂಡ ಎಂಬುದು ಬುರ್ನಾಸು ಹೇಳಿಕೆ ಎನ್ನಿಸುತ್ತದೆ. ಬದಲಾಗಿ ಕುಮಾರವ್ಯಾಸ ಹಾಡಿದ ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿಎಂಬುದೇ ದಿಟ, ವಾಸ್ತವ ಅನ್ನಿಸುತ್ತದೆ.

ಹುಟ್ಟಿಸಿದ ನೀನು ಅನ್ನ ಕೊಡದೆ ಕಾಡಿಸುವ ಬದಲು ಬೆಂಕಿಯ ಮಳೆ ಸುರಿದು ಕೊಲ್ಲು ಎಂದು ದುಃಖಗೈಯುವ ಮನುಷ್ಯನೇ ಅನ್ನ ಬಟ್ಟೆಗಳು ತುಸು ನೇರ್ಪಾದ ಕೂಡಲೇ ಅನ್ಯರ ಕಂಡು ಅಸಹ್ಯ ಪಡುತ್ತಾ, ತುಸು ಮುಂದೆ ಹೋಗಿ ಈ ಅನ್ಯರೇ ನಮ್ಮೆಲ್ಲ ಕಷ್ಟಗಳಿಗೆ ಕಾರಣ ಎಂದು ಅವರನ್ನು ನಿವಾರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಅನ್ಯರ ಕಂಡು ಅಸಹ್ಯ ಪಡುವ ಪರಿಸ್ಥಿತಿ ಮೊದಲೂ ಇತ್ತು ಎಂಬ ಕಾರಣಕ್ಕೆ ಬಸವಣ್ಣನವರಿಂದ ಈ ವಚನ ಬಂದಿರಬೇಕು. ಜನಪದ ಕಥೆ ಮತ್ತು ಹಾಡುಗಳಲ್ಲಿ ಸಮಸ್ಯೆಯ ಭೀಕರತೆಯನ್ನು ಜನಮಾನಸಕ್ಕೆ ಮುಟ್ಟಿಸಲು ಕವಿ-ಕಥೆಗಾರ ಇಬ್ಬರೂ ಮಕ್ಕಳ ಮತ್ತು ಹೆಣ್ಣಿನ ಸಂಕಷ್ಟಗಳನ್ನು ಮುಂದು ಮಾಡುತ್ತಾರೆ. ಊರ ನೀರಿನ ಬರ ಪರಿಹರಿಸಲು ಗೌಡ ತನ್ನ ಸೊಸೆಯನ್ನೆ ಕೆರೆಗೆ ಆಹಾರ ಕೊಡುತ್ತಾನೆ. ದೊಡ್ಡ ಕೆರೆ, ಡ್ಯಾಮುಗಳನ್ನು ಕಟ್ಟುವಾಗ ಕಟ್ಟೆ ನಿಲ್ಲದಿದ್ದರೆ ಮಕ್ಕಳು, ಹೆಣ್ಣುಗಳನ್ನು ಬಲಿಕೊಟ್ಟರೆ ಸರಿಹೋಗುತ್ತದೆ ಎಂಬ ಮಿಥ್‌ನ್ನು ಸೃಷ್ಟಿ ಮಾಡಲಾಗಿದೆ. ಎಲ್ಲ ಕಾಲದಲ್ಲಿಯೂ ಅಸಹಾಯಕರ ಬಲಿ ಮೊದಲಿಗೆ.

ಯಾತಕ್ಕೆ ಮಳೆ ಹೋದವೋ ಹಾಡಿಗೆ ಹೋಲಿಸಿದರೆ ಮಕ್ಕಳ ಮಾರ್ಯಾರೊ ಮಳಿರಾಜ ಹಾಡು ಹೆಚ್ಚು ಪೊಲಿಟಿಕಲ್ ಆಗಿದೆ. ಹಿಟ್ಟಿನಲ್ಲಿ ಸುಣ್ಣ ಬೆರೆಸಿ ಮಾರುವ ವ್ಯಾಪಾರಿ ಕ್ರೌರ್ಯ ಎಲ್ಲ ಕಾಲಕ್ಕೂ ಸತ್ಯವೇ ಇರಬಹುದು! ಇವುಗಳನ್ನು ನೋಡಿದರೆ ಬರ ಮತ್ತು ಕ್ಷಾಮಗಳು ಹಿಂದೆಲ್ಲಾ ಮನುಷ್ಯರ ಹಸಿವಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿಗಳಾಗಿದ್ದವು. ದೊಡ್ಡ ಸಂಖ್ಯೆಯಲ್ಲಿರುವ ಜನಪದರ ಹಾಡುಗಳು ಪದೇ ಪದೇ ಪ್ರಸ್ತಾಪಿಸುವುದು ಅನ್ನದ ಸಮಸ್ಯೆಯನ್ನು. ಯಾತಕ್ಕೆ ಮಳೆ ಹೋದವೋ ಹಾಡಾಗಲಿ ಅಥವಾ ಮಕ್ಕಳ ಮಾರ್ಯಾರೋ ಮಳಿರಾಜ ಹಾಡಾಗಲಿ ಪ್ರಮುಖವಾಗಿ ಪ್ರಸ್ತಾಪಿಸುವುದು ಹಸಿವನ್ನೆ. ಯಾತಕ್ಕೆ ಮಳೆ ಹೋದವೋ ಹಾಡು ಪಟ್ಟದಾನೆಯಂಥ ಸ್ತ್ರೀಯರೂ ಸೊರಗಿ ಸೀರೆ ನಿಲ್ಲದಿಲ್ಲಿ ಸೊಂಟದಲ್ಲಿ ಎನ್ನುವಾಗ ಉಳ್ಳವರಿಗೂ ಹಸಿವು ಸಮಸ್ಯೆಯಾಗಿ ಕಾಡಿದೆ. ಪ್ರಕೃತಿಯ ಮುನಿಸಿನ ಮುಂದೆ ಎಲ್ಲ ಸಮಾನರು ಎನ್ನುವಾಗ ತತ್ವಪದೀಯ ಛಾಯೆ ಕಾಣಬಹುದು. ಆದರೆ ಮಕ್ಕಳ ಮಾರ್ಯಾರೋ ಮಳಿರಾಜ ಹಾಡಿನಲ್ಲಿ ವರ್ಗಪ್ರಜ್ಞೆ ಕೆಲಸ ಮಾಡಿದೆ ಎನ್ನಿಸುತ್ತದೆ.ಅಕ್ಕಿಯಲ್ಲಿ ಸುಣ್ಣ ಬೆರೆಸುವ, ಅಫೀಮು ಬೆರೆಸುವ ಉಲ್ಲೇಖ ಬರುತ್ತದೆ. ಇದು ಸಮಾಜವಾದಿ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಬರೆದ ಪಾವರ್ಟಿ ಆ್ಯಂಡ್ ಫೆಮೈನ್ ಪುಸ್ತಕದ ಆಶಯವನ್ನು ನೆನಪಿಸುತ್ತದೆ. ಬರ ಮತ್ತು ಕ್ಷಾಮಗಳನ್ನು ವ್ಯವಸ್ಥೆ ನಿರ್ವಹಿಸುವಲ್ಲಿ ನಡೆಯುವ ಪ್ರಮಾದಗಳಿಂದಾಗಿ ಸಾವು ನೋವುಗಳು ಸಂಭವಿಸುತ್ತವೆ ಎಂಬ ನಿಲುವಿಗೆ ಅವರು ಬರುತ್ತಾರೆ. ಎವೆರಿ ಒನ್ ಲವ್ಸ್ ಗುಡ್ ಡ್ರಾಟ್ ಎಂದು ಸಾಯಿನಾಥ್ ಬರೆಯುವಾಗ, ಅವರ ನಿಲುವುಗಳು ತುಸು ಸಿನಿಕ್ ಆಗಿ ಕಾಣಿಸಿದರೂ ವ್ಯವಸ್ಥೆಯ ಅವಿವೇಕಿತನ, ಸ್ವಾರ್ಥ, ಭ್ರಷ್ಟತೆಗಳು ಸಮಾಜವನ್ನು ನಾಶದ ದಾರಿಗೆ ಎಳೆಯುತ್ತವೆ ಎಂಬುದನ್ನು ಬಿಡಿ ಘಟನೆಗಳ ಮೂಲಕ ಕಟ್ಟುತ್ತಾರೆ.

ಈ ಹಾಡುಗಳಂಥದ್ದೆ ಕಥೆಯೊಂದು ಬಯಲುಸೀಮೆಯಲ್ಲಿ ಪ್ರಚಲಿತದಲ್ಲಿದೆ. ನಾವು ಚಿಕ್ಕವರಿದ್ದಾಗ ಅಮ್ಮ ಹೇಳುತ್ತಿದ್ದ ಕಥೆ ಕೊಟ್ಮುರಿಕೆ ಸಾಕಮ್ಮಾ ಎಂಬುದು. ಬರಕ್ಕೆ ನಲುಗಿದ ಕುಟುಂಬದಲ್ಲಿ ಹುಟ್ಟಿದ್ದ ಸಣ್ಣ ಹುಡುಗಿಗೆ ಹಸಿವು ಜಾಸ್ತಿ. ತಾಯಿ ರಾಗಿ ಹಿಟ್ಟಿನಲ್ಲಿ ಬೂದಿ ಬೆರೆಸಿ ರೊಟ್ಟಿ ಮಾಡಿ ಎಲ್ಲರಿಗೂ ಅರ್ಧರ್ಧಮುರುಕು ಹಂಚುತ್ತಾಳೆ. ಸಣ್ಣ ಹುಡುಗಿ ತನಗೆ ಮುರುಕು ರೊಟ್ಟಿ ಬ್ಯಾಡ ಪೂರ್ತಿ ಬೇಕೆಂದು ರಚ್ಚೆ ಹಿಡಿಯುತ್ತಾಳೆ. ಕೋಪಗೊಂಡ ತಾಯಿ ಕೂಸನ್ನು ಹೆದರಿಸಲೆಂದು ಮನೆಯಿಂದ ಹೊರಕ್ಕೆ ಹಾಕಿ ಬಾಗಿಲು ಹಾಕುತ್ತಾಳೆ. ಇದಕ್ಕಾಗಿಯೇ ಕಾಯ್ದು ಕೊಂಡಿತ್ತೆಂಬಂತೆ ಕಿರುಬಚಿರತೆ ಕೂಸನ್ನು ಕಚ್ಚಿಕೊಂಡು ಓಡಲಾರಂಭಿಸುತ್ತದೆ. ಕೂಸು ಕೊಟ್ಮುರಿಕೆ ಸಾಕಮ್ಮಾ, ಕೊಟ್ಮುರಿಕೇ ಸಾಕಮ್ಮಾ ಎಂದು ಆರ್ತನಾದಗೈಯುತ್ತದೆ. ಕೊನೆಗೆ ನಿಶ್ಯಬ್ದ ನೆಲೆಸುತ್ತದೆ. ತುಸು ಹೊತ್ತು ಬಿಟ್ಟು ಬಾಗಿಲು ತೆರೆದರೆ ಕೂಸು ಪತ್ತೆಯಿಲ್ಲ. ನೆತ್ತರ ಕಲೆಗಳು ಕಥೆ ಹೇಳುತ್ತವೆ. ಇದನ್ನು ನಾನು ನೂರಾರು ಬಾರಿ ಅಮ್ಮನಿಂದ ಕೇಳಿರಬೇಕು. ಭಯ ಎಷ್ಟು ಆಳವಾಗಿ ಕೂತಿದೆಯೆಂದರೆ, ಇದನ್ನು ನೆನೆಸಿಕೊಂಡಾಗಲೆಲ್ಲ ಬೆನ್ನು ಹುರಿ ಕಂಪಿಸುತ್ತದೆ. ಅನೇಕ ಊರುಗಳಲ್ಲಿ ಈ ಕಥೆ ಕೇಳಿದ್ದೇನೆ. ಅನಂತಮೂರ್ತಿಯವರೂ ಇದನ್ನು ದಾಖಲಿಸಿದ್ದಾರೆ. ತಿಪಟೂರಿನ ಕಿಬ್ಬನಹಳ್ಳಿಯವರು ಈ ಕಥೆ ನಡೆದದ್ದು ಇಲ್ಲಿಯೇ ಎಂದು ಹೇಳುತ್ತಾರೆ. ಅಲ್ಲಿ ನಿಂತಾಗಲೆಲ್ಲ ನಿಜವಿರಬಹುದು ಅನ್ನಿಸುತ್ತದೆ. ಇಂಥವು ಎಷ್ಟು ಊರುಗಳಲ್ಲಿ ಆಗಿ ಹೋಗಿಮೋ, ಲೆಕ್ಕ ಇಟ್ಟವರಾರು ಬಡವರ ಕೊಲೆಗಳನ್ನು?

ಜನಪದರ ಹಾಡುಗಳಲ್ಲಿ ತಪ್ಪಿಯೂ ಪ್ರಭುತ್ವದ ಕುರಿತಂತೆ ಜನರ ಭಾವನೆಗಳೇನು ಎಂಬ ಮಾಹಿತಿಯೇ ಸಿಗುವುದಿಲ್ಲ. ಯಾವ ರಾಜ ಬಂದರೂ ರಾಗಿ ಬೀಸೋದು ತಪ್ಪಲ್ಲ ಎಂದು ಕೂತ ಜನರು ತಮ್ಮ ಪಾಡಿಗೆ ತಾವಿದ್ದವರೆ. ಹಾಗಿದ್ದರೆ ಆಳುವವರ ಕುರಿತ ಭೀಕರ ನಿರ್ಲಿಪ್ತತೆಗೆ ಕಾರಣಗಳೇನು? ಎಂಬುದನ್ನು ಎಲ್ಲ ರೋಗಗಳಿಗೂ ಭೂತದಲ್ಲಿ ಉತ್ತರ ಹುಡುಕುತ್ತಾ ಉಳ್ಳವರ ಹಿತಾಸಕ್ತಿ ಕಾಯುವ ಸಿದ್ಧಾಂತಿಗಳು ಹೇಳಬೇಕು. ಮಳೆ, ಗಾಳಿ, ಬೆಂಕಿ, ಬಿಸಿಲಿಗೆಲ್ಲ ಒಬ್ಬೊಬ್ಬ ದೇವರನ್ನು ಕಾವಲಿಗೆ ಕೂರಿಸಿ, ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ಎಂದು ಹಾಡು ಕೇಳುತ್ತಾ ಕೂತ ಮನುಷ್ಯರಿಗೆ ಬರ, ಕ್ಷಾಮ, ಪ್ರವಾಹಗಳು ಸಹ ದೇವರ ಕೋಪದ ಫಲ ಎಂಬುದನ್ನು ನಮ್ಮ ಮಾನಸದೊಳಗೆ ಅಳವಡಿಸಿ ಆಕಾಶ ನೋಡುತ್ತಾ ಬದುಕುವುದನ್ನು ಹೇಳಿಕೊಡಲಾಗಿದೆ. ಚರಿತ್ರೆಯಲ್ಲಿ ರಾಜ ಕೆರೆ ಕಟ್ಟೆಗಳನ್ನು ಕಟ್ಟಿಸಿದ ಎಂದು ಹೇಳಲಾಗುತ್ತದೆ. ಆದರೆ ಯಾವ ಊರಿಗೆ ಹೋದರೂ ಅಲ್ಲಿನ ಕೆರೆ ಕಟ್ಟಿಸಿದವರು ಯಾರು ಎಂದು ಕೇಳಿದರೆ ಯಾರೋ ಮಕ್ಕಳಿಲ್ಲದ ಬಂಜೆಯರು, ಹರಕೆ ಹೊತ್ತ ಕುಟುಂಬಗಳು, ಇನ್ನೂ ಕೆಲವು ಕಡೆ ವೇಶ್ಯೆಯರ ಹೆಸರುಗಳನ್ನು ಹೇಳುತ್ತಾರೆ. ಇಂತಹ ಒಳ್ಳೆಯ ಕೆಲಸಗಳೂ ಸಹ ಪಾಪ-ಪುಣ್ಯದ ಪರಿಕಲ್ಪನೆಯಲ್ಲಿ ರೂಪುಗೊಂಡವಾಗಿವೆ. ಹೀಗೆ ಮಾಡಿರುವುದೂ ಪೂರ್ವಯೋಜಿತ ಸಿದ್ಧಾಂತಗಳ ಬಲದಿಂದಲೆ. ಈ ಸಿದ್ಧಾಂತಗಳು ಮಾನವ ವಿರೋಧಿ ಎಂದವರನ್ನು ಸಮಾಜದ್ರೋಹಿಗಳು ಎಂದು ಕರೆದು ದಮನಿಸುವ ಆ್ಯಂಟಿ ಇಂಟಲೆಕ್ಚುವಲ್ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಪ್ರಕೃತಿಯ ನಡೆಗಳ ಕುರಿತು ವೈಚಾರಿಕವಾಗಿ ಯೋಚಿಸುವುದನ್ನು ದೇಶಕ್ಕೆ ಕಲಿಸದೆ ಹೋದರೆ, ಭಾರತ ಪ್ರಾಕೃತಿಕ ವಿಕೋಪಗಳಿಂದ ಸಂಭವಿಸುವ ಭೀಕರ ಸಾವು ನೋವುಗಳಿಗೆ ಸಾಕ್ಷಿಯಾಗುತ್ತದೆ. ಜನದ್ರೋಹದ ಸಿದ್ಧಾಂತ ರೂಪಿಸಿದವರೂ ಉಳಿಯುವುದಿಲ್ಲ. ತುಸು ವಾಚ್ಯಗೊಳಿಸಿ ಹೇಳಬಹುದಾದರೆ ಯಾರೂ ಉಳಿಯುವುದಿಲ್ಲ.

ಯುರೋಪಿನಲ್ಲೂ ಇದು ಹೀಗೆ ಇದ್ದದ್ದೆ. ಅಲ್ಲಿಯೂ ಚರ್ಚ್ ಕೇಂದ್ರಿತ ಆಡಳಿತ ವ್ಯವಸ್ಥೆ ಎಲ್ಲ ಪ್ರಾಕೃತಿಕ ವಿಕೋಪಗಳಿಗೂ ಮನುಷ್ಯನ ಪಾಪಗುಣಗಳೆ ಕಾರಣ ಎಂದು ನಂಬಿಸಲಾಗಿತ್ತು. ಇದನ್ನು ಫ್ರಂಚ್ ಲೇಖಕ ಆಲ್ಬರ್ಟ್ ಕಾಮೂ ತನ್ನ ‘ದ ಪ್ಲೇಗ್’ ಕಾದಂಬರಿಯಲ್ಲಿ ಚಿತ್ರಿಸುತ್ತಾನೆ. ವೈದ್ಯನ ಹಿತನುಡಿಯನ್ನೂ ಕೇಳದ ಪಾದ್ರಿ ಪ್ಲೇಗ್ ಬಂದವರ ಕ್ಯಾಂಪಿನಲ್ಲಿ, ಸುರಕ್ಷತೆಯ ಯಾವ ವಿಧಾನವನ್ನೂ ಅಳವಡಿಸಿಕೊಳ್ಳದೆ ದೇವರು ರಕ್ಷಿಸುತ್ತಾನೆಂಬ ಭ್ರಮೆಯಲ್ಲಿ ಸೇವೆ ಮಾಡಲು ಹೋಗಿ ಸ್ವತಃ ಪ್ಲೇಗ್ ತಗಲಿ ಮರಣ ಹೊಂದುತ್ತಾನೆ. ಪಾದ್ರಿಯ ಮುಗ್ಧತೆಯ ಕುರಿತು ಮರುಕ ಹುಟ್ಟುವುದರ ಜೊತೆಗೆ ಪ್ರಭುತ್ವದ ಹಿತಾಸಕ್ತಿಗೆ ಪೂರಕವಾಗಿ ಸಿದ್ಧಾಂತಗಳನ್ನು ರೂಪಿಸುವ ಕೆಲಸ ಮಾಡುತ್ತಾ ಬಂದ ಚರ್ಚ್ ನಾಗರಿಕತೆಯ ಅವಸಾನಕ್ಕೆ ಕಾರಣವಾಗುತ್ತಿರುವುದನ್ನು ಕಮೂ ವಿವರಿಸುತ್ತಾನೆ. ಈ ಪ್ರಕ್ರಿಯೆಯ ಕುರಿತಂತೆ ಸಮಕಾಲೀನ ಜಾಗತಿಕ ಚಿಂತಕ ಯುವಲ್ ಹರಾರಿಯ ಮಾತುಗಳು ಆಸಕ್ತಿಕರವಾಗಿವೆ. ತಿಂಗಳಾನುಗಟ್ಟಲೆ ಸಾವಿರಾರು ಜನ, ಆಧಾರವಿಲ್ಲದೆ ಸೃಷ್ಟಿಸಿದ ಸುದ್ದಿಗಳನ್ನು ನಂಬಿದರೆ ಅದನ್ನು ಸುಳ್ಳು ಸುದ್ದಿ ಎನ್ನಬಹುದು. ಅದನ್ನೇ ನೂರಾರು ಕೋಟಿ ಜನರನ್ನು ಸಾವಿರಾರು ವರ್ಷಗಳಿಂದ ನಂಬುವಂತೆ ಮಾಡಿದ್ದರೆ ಅದನ್ನು ಧರ್ಮ ಎಂದು ಕರೆಯಲಾಗುತ್ತದೆ ಎನ್ನುತ್ತಾನೆ.

ಇಂಥ ಪರಿಸ್ಥಿತಿಯಲ್ಲಿದ್ದ ಯುರೋಪ್ ಬಹಳ ಬೇಗ ಸತ್ಯ ಅರಿತು ತನ್ನ ಮಗ್ಗುಲು ಹೊರಳಿಸಿಕೊಂಡಿತು ಮತ್ತು ಹಿಪಾಕ್ರಸಿಗಳಿಂದ ಹೊರಬರಲು ಪ್ರಯತ್ನಿಸಿತು. ವರ್ಡ್ಸ್‌ವರ್ತ್ ನಂತಹ ಕವಿ, ಡಾರ್ವಿನ್ನನಂತಹ ವಿಜ್ಞಾನಿ, ಏಂಗೆಲ್ಸ್‌ನಂತಹ ಸಮಾಜ ವಿಜ್ಞಾನಿ ಅನೇಕ ಜನಪರ ರಾಜಕಾರಣಿಗಳು, ಸುಧಾರಕರು, ಉದಾರವಾದಿಗಳು ಸೇರಿ ಯುರೋಪಿನ ಪ್ರಜ್ಞೆ ವಿಸ್ತರಿಸಲು ಶ್ರಮಿಸಿದರು. ಜನ ಅವರನ್ನು ನಂಬಿತು. ನಂಬಿಕೆಗಳನ್ನು ಪ್ರಯೋಗಿಸಿ ಒಪ್ಪಿಕೊಳ್ಳಬೇಕು ಎಂದು ಅರ್ಥಮಾಡಿಕೊಂಡಿತು. ಬೌದ್ಧಿಕತೆಯನ್ನು ಯುರೋಪು ಅವಮಾನಿಸಲಿಲ್ಲ ಬದಲಾಗಿ ಆದರದಿಂದ ನೋಡಿತು. ಹಾಗಾಗಿ ಅಲ್ಲಿ ನದಿ, ಮರ, ಗಿಡ ಪರ್ವತಗಳೆಲ್ಲವನ್ನೂ ಅವವುಗಳ ಸ್ವರೂಪದಲ್ಲಿಯೇ ನೋಡಲಾಯಿತು. ಪ್ರಕೃತಿಗೆ ಕೇಡು ಬಯಸದೆ ಉಳಿಸಿಕೊಳ್ಳಲಾಯಿತು. ನಾಗರಿಕ ಪ್ರಜ್ಞೆ ಎಂದು ಯಾವುದನ್ನು ಕರೆಯಬಹುದೋ ಅದನ್ನು ಅಳವಡಿಸಿಕೊಂಡಿತು. ಇಂದೂ ಸಹ ಸ್ವೀಡನ್‌ನ ನಾಗರಿಕರು ವಿಮಾನಗಳು ಉಳಿದ ವಾಹನಗಳಿಗಿಂತ ಶೇ. 61 ರಷ್ಟು ಹೆಚ್ಚು ಮಾಲಿನ್ಯಕಾರಕ ಹೊಗೆ ಉಗುಳುತ್ತವೆ ಎಂಬ ತಿಳುವಳಿಕೆ ಹುಟ್ಟಿ ವಿಮಾನದಲ್ಲಿ ಹೋಗಲಾರೆ ಎಂಬ ಚಳವಳಿ ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. 16 ವರ್ಷದ ಬಾಲಕಿಯ ಕರೆಗೆ ಇಡೀ ಸ್ವೀಡನ್ ಸ್ಪಂದಿಸುತ್ತಿದೆಯಂತೆ. ಬದಲಾಗಿ ನಾವು ಬರೀ ಹಿಪಾಕ್ರಸಿಯ ಮೂಲಕ ಬದುಕುವುದನ್ನು ರೂಢಿಸಿಕೊಂಡಿದ್ದೇವೆ. ಪ್ರಕೃತಿಯನ್ನು ದೇವರೆನ್ನುವ ನಾವು, ಅದರ ಶೋಷಣೆಯಲ್ಲೂ ಮುಂದಿದ್ದೇವೆ. ವಿಜ್ಞಾನ, ಬೌದ್ಧಿಕತೆಗಳನ್ನು ಅಪರಾಧವೆಂದು ನೋಡುವ ನಾಗರಿಕತೆಯೊಂದು ಜಗತ್ತಿನ ಗುರುವಾಗಲು ಸಾಧ್ಯವೇ? ಪ್ರಕೃತಿಯಲ್ಲಿ ಸಂಭವಿಸುವ ಕೆಲವು ಬೆರಗುಗಳನ್ನು ಆಧಾರವಾಗಿಟ್ಟುಕೊಂಡು ಜನರಲ್ಲಿ ಭೀತಿ-ಭಕ್ತಿಗಳನ್ನು ಸೃಷ್ಟಿಸಿ ಅವರನ್ನು ನಿಯಂತ್ರಿಸು ಎಂದು ಚಾಣಕ್ಯ ರಾಜನಿಗೆ ಬೋಧಿಸುತ್ತಾನೆ. ಮತ್ತೆ ಭಾರತದಲ್ಲಿ ಮನುವಿನ, ಚಾಣಕ್ಯನ ಹಾದಿ ಸಮರ್ಪಕ ಎಂದು ನಂಬಿಸಲು ಪ್ರಯತ್ನಿಸಲಾಗುತ್ತಿದೆ.

ಉಲ್ಲೇಖಗಳನ್ನು ಹುಡುಕುತ್ತಿದ್ದಾಗ ವಡ್ಡಾರಾಧನೆಯಲ್ಲಿ ಋಷಿಯ ಕಥೆಯೊಂದು ಗಮನ ಸೆಳೆಯುತ್ತದೆ. ಅದರಲ್ಲಿ 12 ವರ್ಷ ಮಳೆ ಮರೆಯಾಗಿ ಮಾನುಸರ್ ಮಾನಸರ ತಿಂಬರ್ ಎಂದು ಉಲ್ಲೇಖ ಬರುತ್ತದೆ. ಉತ್ತರದ ಮೌರ್ಯ ಸಾಮ್ರಾಟ ಚಂದ್ರಗುಪ್ತ ಮೌರ್ಯ ತನ್ನ ರಾಜ್ಯಕ್ಕೆ ಭೀಕರ ಬರ ಬಂದು ಕ್ಷಾಮವಾಗಿ ಕಾಡಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದ್ದರಿಂದ ರಾಜ್ಯ ತೊರೆದು ದಕ್ಷಿಣದ ಶ್ರವಣಬೆಳಗೊಳಕ್ಕೆ ಬಂದು ತಂಗುತ್ತಾನೆಂದು ಕಥೆಗಳಿವೆ. ಇದಕ್ಕೆ ಪೂರಕವೆಂಬಂತೆ ಕೌಟಿಲ್ಯ ತನ್ನ ಸಿರ್ಕಾ ಕ್ರಿ.ಪೂ. 320ಕೃತಿಯಲ್ಲಿ ಕ್ಷಾಮ ಆವರಿಸಿ ಅಪಾರ ಸಾವು ನೋವುಗಳಾದ ಕುರಿತು ಉಲ್ಲೇಖಿಸುತ್ತಾನೆ. ಪುರಾಣ ಮತ್ತು ಇತಿಹಾಸಗಳಲ್ಲಿ ಆಳುವ ರಾಜನ ಕಾಲ್ಗುಣ ಮತ್ತು ದೈವ ಬಲದ ಆಧಾರದ ಮೇಲೆ ಜನರ ಬದುಕನ್ನು ನಿರ್ಧರಿಸಲಾಗುತಿತ್ತು. ಹರಿಶ್ಚಂದ್ರ ಕಾವ್ಯದ ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ ಎನ್ನುವುದು ಇದಕ್ಕೆ ಉತ್ತಮ ರೂಪಕ. ಆಳುವ ರಾಜನ ಹಿಂದೆಯೇ ನಾಡಿನ ಪುಣ್ಯವೂ ನಾಡು ತೊರೆದು ಹೋಯಿತು ಎಂಬುದು ಕವಿಯ ಉತ್ಪ್ರೇಕ್ಷೆ. ಪುರಾತನ ಗ್ರೀಕ್‌ನಲ್ಲೂ ಇಂಥದೇ ಪುರಾಣಗಳಿವೆ. ವಿಧಿಯ ಆಟಕ್ಕೆ ಸಿಕ್ಕಿದ ಈಡಿಪಸ್ ಗೊತ್ತಿಲ್ಲದೆ ತಂದೆಯನ್ನು ಕೊಂದು, ತಾಯಿಯನ್ನು ಮದುವೆಯಾಗಿ ನಾಡಿನ ಪದ್ಧತಿಯಂತೆ ರಾಜನನ್ನು ಕೊಂದವನು ರಾಣಿಯನ್ನು ವರಿಸಬೇಕು. ಮಕ್ಕಳನ್ನು ಪಡೆದು ರಾಜನಾಗಿ ಆಳುತ್ತಿದ್ದಾಗ ನಾಡು ವಿಪರೀತ ಕ್ಷಾಮ ಸಂಕಟಕ್ಕೆ ಸಿಕ್ಕಿಕೊಳ್ಳುತ್ತದೆ. ಕಣಿ ಹೇಳುವವನಿಂದ ಸತ್ಯ ತಿಳಿದ ದೊರೆ ಈಡಿಪಸ್ ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಮಧ್ಯ ಯುಗೀನ ಸಮಾಜದ ಬಹಳ ಮುಖ್ಯ ಲಕ್ಷಣ ಆಳುವವನನ್ನು ದೇವರಿಗೆ ಸಮೀಕರಿಸಿ ನೋಡಿದ್ದು. ನ ವಿಷ್ಣುಃ ಪೃಥಿವೀಪತಿ ದೇವರಲ್ಲದವನು ರಾಜನಾಗಲಾರ ಎಂದು ಆಳುವವರು ಮತ್ತು ಪುರೋಹಿತರು ಸೇರಿ ರೂಪಿಸಿದ ಈ ತಂತ್ರ ಬಹಳ ಕಾಲ ಬಾಳಿಕೆ ಬಂದಿದೆ. ಅನೇಕ ಸಾರಿ ಅದು ಅವರಿಗೇ ತಿರುವು ಮುರುವಾದ ಅನೇಕ ಸಂದರ್ಭಗಳೂ ಇವೆ. ಆಳುವವನ ಕೃಪಾಕಟಾಕ್ಷ ಮಂತ್ರಿಯ ಮೇಲೆ ಬೀಳದಿದ್ದರೆ, ರಾಜನನ್ನೂ ದುಷ್ಟೀಕರಿಸಿ ನೋಡುವ ನೋಟವನ್ನು ಜನರಲ್ಲಿ ಉತ್ಪಾದಿಸಲಾಗುತಿತ್ತು. ಅದು ಇವತ್ತಿಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ನಮ್ಮಲ್ಲಿಯೂ ಮಳೆ ಬೆಳೆ ಹೋದರೆ ಮುಖ್ಯಮಂತ್ರಿಯ ಕಾಲ್ಗುಣ ಸರಿಯಿಲ್ಲ ಎಂಬಂತೆ ಬಿಂಬಿಸಲಾಗುತ್ತದೆ. ಇಲೆಕ್ಟ್ರಾನಿಕ್ ಮಾಧ್ಯಮಗಳು ಈ ಮೂಢನಂಬಿಕೆಯನ್ನು ಸತ್ಯವೆಂಬಂತೆ ಬಿಂಬಿಸಿ ಅದಕ್ಕೆ ಅಧಿಕೃತತೆ ನೀಡುತ್ತಾ ಹೋಗುತ್ತಿವೆ. ಇದು ಅನೇಕ ಸಾರಿ ಚುನಾವಣೆಯ ವಿಷಯವಾಗಿ ಸೋಲು ಗೆಲುವನ್ನು ನಿರ್ಧರಿಸುವ ಸಂಗತಿಯಾಗಿ ಕೆಲಸ ಮಾಡಿರುವುದಕ್ಕೆ ನಾವೇ ಸಾಕ್ಷಿಯಾಗಿದ್ದೇವೆ. ಇದರ ಅರಿವಿದ್ದೊ ಏನೋ ಜರ್ಮನಿಯ ಯಹೂದಿ ಕವಿ ಬ್ರೆಕ್ಟ್ ಹೊಸ ಆ್ಯಂಟೆನಾಗಳು ಬಿತ್ತರಿಸಿದ್ದು ಹಳೆಯ ಮೂರ್ಖತನಗಳನ್ನೆ ಎಂದು 1942 ರಲ್ಲಿಯೇ ಬರೆಯುತ್ತಾನೆ.

ಹಿಂದೆಲ್ಲ ಹಸಿವು ಎಂಬುದು ಸಾಮಾನ್ಯ ಸಂಗತಿಯಾಗಿತ್ತು, ಆದರೆ ಕ್ಷಾಮಗಳು ಅಪ್ಪಳಿಸಿದಾಗ ಸಂಭವಿಸುವಾಗ ಉಂಟಾಗುವ ಸಾವು-ನೋವುಗಳ ಪ್ರಮಾಣ ಇದ್ದಕ್ಕಿದ್ದಂತೆ ಅಗಾಧತೆ ಪಡೆದುಕೊಳ್ಳುತಿತ್ತು. ಈ ಕುರಿತು ಅಮರ್ತ್ಯಸೇನ್‌ರವರು ಕೆಲವು ಉದಾಹರಣೆಗಳನ್ನು ನೀಡುತ್ತಾರೆ. ಕ್ರಿ. ಪೂ 436 ರಲ್ಲಿ ಹಸಿವು ತಡೆಯಲಾರದೆ ಸಾವಿರಾರು ಜನರು ಟೈಬರ್ ನದಿಗೆ ಹಾರಿ ಪ್ರಾಣ ಬಿಡುತ್ತಾರೆ. ಕ್ರಿ.ಶ. 918 ರಲ್ಲಿ ಕಾಶ್ಮೀರದ ಝೇಲಂ ನದಿಯ ತುಂಬ ಹೆಣಗಳು ತೇಲುತ್ತಿದ್ದವಂತೆ, 1770ರಲ್ಲಿ ಭಾರತದಲ್ಲಿ ಸಂಭವಿಸಿದ ಕ್ಷಾಮದಿಂದ ಕನಿಷ್ಠವೆಂದರೂ ಒಂದು ಕೋಟಿ ಜನ ಮರಣಹೊಂದಿದರು. 1845 ರಲ್ಲಿ ಐರ್ಲೆಂಡಿನಲ್ಲಿ ಸಂಭವಿಸಿದ ಆಲೂಗಡ್ಡೆ ಕ್ಷಾಮದಿಂದಾಗಿ ಐದನೇ ಒಂದು ಭಾಗದಷ್ಟು ಐರಿಷರು ಮರಣ ಹೊಂದಿದದರೆಂಬ ಕುರಿತು ದಾಖಲೆಗಳಿವೆ ಎನ್ನುತ್ತಾರೆ.

ಭಾಗ-2

ಬರ, ಪ್ರವಾಹಗಳನ್ನು ನಿರ್ವಹಿಸುವ ಕುರಿತಂತೆ ಜನಮಾನಸ ಇನ್ನಷ್ಟು ಪ್ರತಿಗಾಮಿಯಾಗುತ್ತಿರುವುದಕ್ಕೆ ಇಂದಿನ ಭಾರತ ಸಾಕ್ಷಿಯಾಗುತ್ತಿದೆ. ಜನರನ್ನು ವೈಜ್ಞಾನಿಕವಾಗಿ ಯೋಚಿಸುವಂತೆ ಮಾಡದೆ ನಾಡು ಕಟ್ಟಲಾಗದು ಎಂಬ ತಿಳುವಳಿಕೆ ಇದ್ದರೂ ನಿನ್ನೆಗಳಲ್ಲಿ ಬದುಕುವಂತೆ ಮಾಡುವ ಹುನ್ನಾರವು ತೀವ್ರಗೊಂಡಿದೆ. ಇದರಿಂದ ಮನುಷ್ಯ ಸಂಕುಲ ಸಾಮೂಹಿಕ ವಿನಾಶದತ್ತ ಸಾಗಲು ಬೇಕಾದ ರಹದಾರಿಯನ್ನು ನಿರ್ಮಿಸಲಾಗುತ್ತಿದೆ. ಇದರ ತಕ್ಷಣದ ತೀವ್ರ ಪರಿಣಾಮ ನೀರಿನ ವಿಷಯದಲ್ಲಿ ಸಂಭವಿಸುತ್ತಿದೆ. ಗಾಬರಿ ಹುಟ್ಟಿಸುವ ಪರಿಸ್ಥಿತಿ ಇರುವುದು ಭೂಮಿಯಾಳದ ಜಲಕ್ಷಾಮದ ಕುರಿತು. ಭಾರತದ ಉದಾಹರಣೆಯನ್ನೆ ನೋಡಿದರೂ ಹತ್ತಿರತ್ತಿರ ಶೇ. 50 ಭಾಗದಷ್ಟು ದೇಶ ಬರಕ್ಕೆ ತುತ್ತಾಗುತ್ತಲೇ ಇದೆ. ಸುಮಾರು 500 ಮಿಲಿಯ ಜನಸಂಖ್ಯೆ ಬರದ ಬವಣೆಯಲ್ಲಿದೆ. ಕೇವಲ ಇಪ್ಪತ್ತು ವರ್ಷಗಳ ಹಿಂದೆ ಕರ್ನಾಟಕದ ಅಂತರ್ಜಲದ ಸರಾಸರಿ ಮಟ್ಟ 40 ಅಡಿಗಳಷ್ಟಿದ್ದರೆ, ಇಂದು 1,500 ಅಡಿಗಳ ಆಳಕ್ಕೆ ತಲುಪಿದೆ. ದಕ್ಷಿಣ ಏಶ್ಯಾ ರಾಷ್ಟ್ರಗಳ ಅಂತರ್ಜಲ ವೇದಿಕೆ ನಡೆಸಿರುವ ಅಧ್ಯಯನದಂತೆ ಭಾರತದಲ್ಲಿ ಒಟ್ಟು ನೀರಾವರಿ ಬಳಕೆಯಲ್ಲಿ ಅಂತರ್ಜಲದ ಪ್ರಮಾಣ ಶೇ.65 ರಷ್ಟು ಇದ್ದರೆ, ಕುಡಿಯುವ ನೀರಿನಲ್ಲಿ ಶೇ.85 ರಷ್ಟು ಪಾಲು ಪಡೆದಿದೆ. ಬೆಂಗಳೂರಿಗೆ 50 ಕಿಲೋಮೀಟರು ದೂರದಲ್ಲಿರುವ ನನ್ನ ಊರು 1996 ರಲ್ಲಿ ಬಾವಿಗಳಿಂದ ನೀರು ಮೊಗೆದು ಬಾಳುತಿತ್ತು. ಇಂದು 1,750 ಅಡಿ ಕೊರೆದರೂ ನೀರಿನ ಪಸೆ ಕಾಣುತ್ತಿಲ್ಲ. ಭೂಗರ್ಭತಜ್ಞರು ಬಳಸುತ್ತಿರುವ ಎಲ್ಲ ತಿಳುವಳಿಕೆಗಳೂ ವಿಫಲವಾಗುತ್ತಿವೆ. ಭೂಮಿ ಬರಿದಾಗಿದೆ. ಭೂಮಿಯ ಆಳದಲ್ಲಿ ನದಿಗಳು, ಸಮುದ್ರಗಳೂ ಓಡಾಡಿಕೊಂಡಿವೆ, ಅಕ್ಷಯಪಾತ್ರೆ ಎಂಬ ಜನರ ತಿಳುವಳಿಕೆ ಮೂಢನಂಬಿಕೆ ಎಂದು ಸಾಬೀತಾಗಿದೆ.

ಬಹುತೇಕ ಅಧ್ಯಯನಗಳು ತಿಳಿಸುತ್ತಿರುವಂತೆ 800 ಅಡಿಗಳ ಆಳದಿಂದ ಬಾಚಿ ತರುತ್ತಿರುವ ನೀರಿನಲ್ಲಿ ಫ್ಲೋರೈಡ್ ಮತ್ತು ಆರ್ಸೆನಿಕ್ ಎಂಬ ವಿಷಕಾರಿ ಅಂಶಗಳಿರುವ ಸಾಧ್ಯತೆ ಅತ್ಯಧಿಕ. ಎರಡು ದಶಕಗಳ ಹಿಂದೆ ನಳನಳಿಸುತ್ತಿದ್ದ ನನ್ನ ಹಳ್ಳಿ ಚೈತ್ರ ಮಾಸದ ಈ ದಿನಗಳಲ್ಲೂ ಬೂದಿ ಬಣ್ಣದಲ್ಲೇ ಇದೆ. ಇರುವ ಮರಗಳಲ್ಲಿ ದಟ್ಟ ಹಸಿರಿಲ್ಲ. ಬರಲು ಬರಲಾಗಿಯೇ ಹೂ ಬಿಟ್ಟ ಹೊಂಗೆ ಮರಗಳಲ್ಲಿ ಭೃಂಗದ ಸಂಗೀತವೂ ಇಲ್ಲ. ನೀಲಗಿರಿ ಲಂಟಾನಗಳೆಂಬ ಕಳೆಗಳೂ ಒಣಗಿಕೊಂಡಂತಿವೆ. ಈಗಿರುವುದು ಹಣದ ಸಮಸ್ಯೆ ಅಲ್ಲ. ದುಡಿಮೆಯ ದಾರಿಯನ್ನು ಬೆಂಗಳೂರಿನಂಥ ನಗರಗಳು ತೋರಿಸುತ್ತಿವೆ. ಆದರೆ ನೀರಿಲ್ಲದ, ಹಸಿರಿಲ್ಲದ ಊರುಗಳನ್ನು ಸರಿಮಾಡುವುದು ಹೇಗೆ?ಅಲ್ಲಿ ಜೀವ ಕಳೆ ತುಂಬುವುದು ಹೇಗೆ? ಎರಡು ವರ್ಷ ಪಶ್ಚಿಮ ಘಟ್ಟಗಳಲ್ಲಿ ಮಳೆ ಬೀಳದಿದ್ದರೆ ಬೆಂಗಳೂರು, ಹೈದರಾಬಾದ್, ಚೆನ್ನೈನಂತಹ ಭೀಕರಾಕಾರದ ನಗರಗಳ ಕಥೆ ಏನು? ಈಗಾಗಲೇ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಮಿಲಿಟರಿ ನೆರವು ಬಳಸಿಕೊಂಡು ನೀರನ್ನು ಪಡಿತರದಂತೆ ವಿತರಿಸಲಾಗುತ್ತಿದೆ. ಭಾರತದ ಕ್ರಿಕೆಟಿಗರು ಉಳಿದುಕೊಂಡಿದ್ದ ಹೊಟೇಲ್‌ನಲ್ಲೂ ತಲಾ 57 ಲೀಟರು ನೀರನ್ನು ಮಾತ್ರ ದಿನವೊಂದಕ್ಕೆ ಒದಗಿಸಲಾಗಿತ್ತು. ಅಂತರ್‌ರಾಷ್ಟ್ರೀಯ ನಿಯಮಗಳಂತೆ ಪ್ರತಿ ಪ್ರಜೆಗೆ ನಗರದಲ್ಲಿ 135 ಲೀಟರು ಶುದ್ಧ ನೀರು ನೀಡಬೇಕು. ಇಷ್ಟಾದರೂ ನಮ್ಮಾಳಗೆ ಜಲಪ್ರಜ್ಞೆ ಬಂದಿಲ್ಲ. ಪ್ರತಿ ಊರೂ ಹತ್ತಾರು ವಿಫಲ ಕೊಳವೆ ಬಾವಿಗಳ ಅವಶೇಷಗಳಿಗೆ ಸಾಕ್ಷಿಯಾಗಿವೆ. ಇತ್ತೀಚೆಗೆ ಮಧುಗಿರಿ ತಾಲೂಕಿನ ಪುರವರ ಇದು ಜಯಮಂಗಲಿ ನದಿ ದಂಡೆಯಲ್ಲಿರುವ ಊರು ಗ್ರಾಮದಿಂದ ಎರಡು-ಮೂರು ಕಿ. ಮೀ. ದೂರದಲ್ಲಿರುವ ಬಡಕನಹಳ್ಳಿಗೆ ಪ್ರಯಾಣಿಸುವಾಗ ಇಲ್ಲಿ ಅಪರೂಪಕ್ಕೆ ಕೆಲವರು ಮನೆ ಮೇಲೆ ಬೀಳುವ ನೀರನ್ನು ಕೊಯ್ಲುಸಂಗ್ರಹಿಸಿಮಾಡಿ ಕುಡಿಯುತ್ತಿದ್ದಾರೆ, ಅದನ್ನು ನೋಡಲೆಂದು ಹೋಗಿದ್ದೆವು. ರಸ್ತೆ ಪಕ್ಕದಲ್ಲೇ ಸುಮಾರು 18 ಕೊಳವೆ ಬಾವಿಗಳ ಕೇಸಿಂಗು ಪೈಪುಗಳನ್ನು ತುಕ್ಕು ತಿನ್ನುತ್ತಿವೆ. ಕೇವಲ ಇಪ್ಪತ್ತು ವರ್ಷಗಳ ಹಿಂದೆ ಈ ಊರುಗಳಲ್ಲಿ ಸಮೃದ್ಧಿ ನೆಲೆಸಿದ್ದ ಕುರಿತು ಬರಹಗಾರರಾದ ಕೇಶವರೆಡ್ಡಿ ಹಂದ್ರಾಳರು ದಾಖಲಿಸುತ್ತಾರೆ. ನೆಲದ ಮೇಲಿನ ಹಸಿರು ಮತ್ತು ನೆಲದಾಳದ ತೇವ ಇವುಗಳು ಮೋಡಗಳ ಸೃಷ್ಟಿಗೆ, ಮಳೆಗೆ ಮುಖ್ಯ ಕಾರಣ ಎನ್ನುತ್ತಾರೆ ಜಲತಜ್ಞ ರಾಜೇಂದ್ರಸಿಂಗ್. ಹಸಿರಿನಿಂದ ಸೃಷ್ಟಿಯಾಗುವ ಗ್ರೀನ್ ಗ್ಯಾಸ್ ಮಳೆ ಸುರಿಸಲು ಮುಖ್ಯಕಾರಣ ಎನ್ನುತ್ತಾರೆ. ಇಂಥದೊಂದು ಅಮೂಲ್ಯ ತಂತುವನ್ನು ಕತ್ತರಿಸಿ ಹಾಕಲು ಹಸಿರುಕ್ರಾಂತಿ, ಕೊಳವೆಬಾವಿಗಳು ಕಾರಣವಾಗಿವೆ.

ಹಸಿರು ಕ್ರಾಂತಿಯ ಕೆಟ್ಟ ಪರಿಣಾಮಗಳು ನೀರಾವರಿ ಪ್ರದೇಶಗಳಿಗಷ್ಟೆ ಆಗಲಿಲ್ಲ. ಮಳೆಯಾಶ್ರಿತ ಬಯಲು ಸೀಮೆಯ ಮೇಲೆ ಅದು ಮಾಡಿದ ಪರಿಣಾಮ ಭೀಕರ. ದುರಂತವೆಂದರೆ ಇದರ ಕುರಿತ ಅಧ್ಯಯನಗಳು ತೀರಾ ವಿರಳ. ಒಂದೆರಡು ಎಕರೆಗಳಲ್ಲಿ ಮನೆಗೆ ಬೇಕಾದಷ್ಟನ್ನು ಬೆಳೆಯಬಹುದೆಂಬ ಭರವಸೆ ಬಂದಿದ್ದೇ ತಡ ಉಳಿದ ಭೂಮಿಯಲ್ಲಿ ನೀಲಗಿರಿ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಗಿಡಗಳು ಮಾವು ಹಲಸು ಮುಂತಾದ ರೈತ ಸ್ನೇಹಿ ಮರಗಳಿಗೆ ಬೇಕಾದ ತೇವಾಂಶವನ್ನು ನಾಶ ಮಾಡಿದವು. ಈ ಯೂಕಲಿಪ್ಟಸ್ ಬೆಳೆ ತನ್ನ ಕಾಲ ಕೆಳಗಿನ ಹುಲ್ಲು, ಗಿಡ-ಗಂಟೆಗಳನ್ನು ನಾಶ ಮಾಡಿತು. ಅದರ ಮೂಲಕ ಭೂಮಿಯೊಳಗೆ ನೀರನಿಂಗಿಸುವ ಬೇರು ಜಾಲವನ್ನು ಇಲ್ಲವಾಗಿಸಿತು. ಹಳ್ಳ-ಕೊಳ್ಳಗಳು ಬತ್ತಿಹೋದವು. ಹೊಲದ ಬದುಗಳಲ್ಲಿ ಹಿರೀಕರು ನೆಟ್ಟ ಮರಗಳನ್ನು ಜನ ದ್ವೇಷಿಸತೊಡಗಿದರು. ಮರಗಳು ಬೆಳೆಯ ಶತ್ರುಗಳು, ಕಾಗೆ, ಗಿಳಿ, ಮಂಗಗಳಂಥ ಪ್ರಾಣಿ ಪಕ್ಷಿಗಳ ಆವಾಸಸ್ಥಾನ ಎಂಬುದೊಂದು ಭೀಕರ ವಾದವನ್ನು ಅವರು ಮುಂದಿಡುತ್ತಾರೆ. ಹಾಗಾಗಿ ಹಲಸು, ಮಾವು, ಹಿಪ್ಪೆ ನೇರಳೆ ಕಡಿದು ಮನೆ ಕಟ್ಟಿದರು. ಹೊಂಗೆ ಕಡಿದು ಇಟ್ಟಿಗೆ ಸುಟ್ಟರು. ಈ ನಡುವೆ ಬೋರ್‌ವೆಲ್‌ಗಳು ಆಳಕ್ಕಿಳಿಯತೊಡಗಿದವು. ಡ್ಯಾಮುಗಳ ಹಿಂದೆಲ್ಲಾ ಹಸಿರು ನೋಡಿ ಬಯಲು ಸೀಮೆಯವರು ಜಿದ್ದಿಗೆ ಬಿದ್ದು ಅಡಿಕೆ, ಬಾಳೆ, ಭತ್ತ ಬೆಳೆಯತೊಡಗಿದರು. ಅಡಿಕೆ ಒಣಗಿದರೆ ಮನೆಗೆ ಒಳ್ಳೆಯದಲ್ಲವೆಂಬ ನಂಬಿಕೆಯಿಂದ ನೆಲವೆಲ್ಲ ತೂತು ಕೊರೆದರು. ಅವೆಲ್ಲವೂ ಇಂದು ಬಿಸಿಗಾಳಿ, ಧೂಳು ಕಕ್ಕುತ್ತಾ, ಆಡುವ ಹಸುಳೆಗಳನ್ನು ನುಂಗುತ್ತಾ ನಿಂತಿವೆ. ಹಿಂದೆಂದೂ ಕಂಡರಿಯದ ಮಟ್ಟಿಗೆ ಬಯಲು ಸೀಮೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಹಳ್ಳಿಗಳಲ್ಲಿ ಸ್ಮಶಾನ ಮೌನ ನೆಲೆಸುತ್ತಿದೆ. ಯುವಕರು ನಗರಗಳಲ್ಲಿ ನರಳುತ್ತಿದ್ದಾರೆ. ಕುರಿ, ಮೇಕೆ, ಎತ್ತು, ಎಮ್ಮೆಗಳಿಂದ ನಳನಳಿಸುತ್ತಿದ್ದ ಊರುಗಳು ಬದುಕುವ ಭರವಸೆ ಕಳೆದುಕೊಳ್ಳುತ್ತಿವೆ. ಈ ಊರುಗಳಲ್ಲಿ ಕುಡಿಯುವ ನೀರಿಗೂ ಭೀಕರ ಬರ ಬರುವ ದಿನಗಳು ಕೈಯಳತೆ ದೂರದಲ್ಲಿವೆ.

ಸಾಧಾರಣ ಗಾತ್ರದ ಮರವೊಂದು ವರ್ಷಕ್ಕೆ ಸುಮಾರು 600 ಮಿಲಿಮೀಟರುಗಳಷ್ಟು ನೀರನ್ನು ಆವಿ ಮಾಡುತ್ತದೆ. ವಾತಾವರಣದಲ್ಲಿರುವ ತೇವಾಂಶಕ್ಕೆ ಮೂಲ ಧಾತುಗಳೇ ಮರಗಿಡಗಳು ಮತ್ತು ಕೆರೆ, ಕಟ್ಟೆ- ಕುಂಟೆಗಳು. ಮುಂಗಾರು ಪೂರ್ವದ ಅಡ್ಡ ಮಳೆಗಳು ಸುರಿಯಲು ಬೇಕಾದ ಮೋಡಗಳ ರಚನೆಯಲ್ಲಿ ಬಯಲು ಸೀಮೆಯ ಜಲತಾಣಗಳು ಮತ್ತು ಮರಗಿಡಗಳೂ ಕಾರಣವೆಂದು ತಜ್ಞರು ಹೇಳುತ್ತಾರೆ. ಮಾರುತಗಳುಮುಂಗಾರು-ಹಿಂಗಾರು ಗಾಳಿಯ ಚಲನೆಯ ಮೇಲೆ ನಿಂತಿದ್ದರೆ, ಅಡ್ಡ ಮಳೆಗಳ ಮೋಡಗಳು ಬಹುಪಾಲು ಕೇಂದ್ರೀಕೃತಗೊಂಡ ಸ್ಥಳೀಯ ತೇವಾಂಶವನ್ನೂ ಆಧರಿಸಿದಕಡಲ ಆವಿಯ ಸಹಕಾರದ ಜೊತೆಗೆ ಸ್ಥಿತಿಯಲ್ಲಿ ರಚನೆಗೊಳ್ಳುತ್ತವೆ. ಬಯಲು ಬೆಂಗಾಡಾದ ಕಾರಣ ಬರ ನಿರಂತರ ಎನ್ನುವಂತಾಗಿದೆ. ಬರವೆನ್ನುವುದು ಒಂಟಿಯಲ್ಲ. ಬಂದು ಹೋಗುವ ನೆಂಟನೂ ಅಲ್ಲ. ಸಣ್ಣ ಬರವೊಂದು ದೊಡ್ಡ ಬರಕ್ಕೆ ಮರಿ ಹಾಕುತ್ತಲೇ ಇರುತ್ತದೆ. 2003 ರಲ್ಲಿ ನಾಡನ್ನು ಆವರಿಸಿಕೊಂಡ ಬರ ನಿರಂತರವಾಗಿ ನಮ್ಮನ್ನು ಕಾಡುತ್ತಿದೆ. ಬರ ಸಹಜವಾಗಿದೆ. ಬರವಿಲ್ಲದ ವರ್ಷಗಳು ವಿರಳವಾಗಿವೆ. ಯೋಚಿಸಿದರೆ ಇನ್ನೈದು ವರ್ಷಗಳ ನಂತರ ನನ್ನ ಊರಿನ ಜನ ಎಲ್ಲಿಗೆ ಗುಳೆ ಹೋಗಲು ಸಾಧ್ಯ ಎಂದು ದಿಗಿಲಾಗುತ್ತದೆ. ಎಲ್ಲಿ ನಿಲ್ಲುವುದು. ಧರೆ ಹೊತ್ತಿ ಉರಿವಾಗ?ಕುಡಿವ ನೀರಿಗಲ್ಲದೆ ಬೇರೆ ಉದ್ದೇಶಕ್ಕೆ ಕೊಳವೆ ಬಾವಿ ಕೊರೆಯುವುದನ್ನು ನಿಲ್ಲಿಸದಿದ್ದರೆ, ಹಸಿರು ಹೊದಿಕೆ ಹೆಚ್ಚಿಸದಿದ್ದರೆ ನಮಗೆ ಉಳಿಗಾಲವೇ ಇಲ್ಲ. ಕುಗ್ರಾಮದಲ್ಲೂ ಲಕ್ಷಾಂತರ ಖರ್ಚು ಮಾಡಿ ಕಟ್ಟಿದ ದೇವಸ್ಥಾನ ಬಣ್ಣ ಹಚ್ಚಿಕೊಂಡು, ಗೋಪುರ ಹೊತ್ತುಕೊಂಡು ನಿಂತಿರುತ್ತದೆ. ಎಲ್ಲ ಕಷ್ಟಗಳಿಗೂ ದೇವರ ಮುಂದೆ ನಿಲ್ಲುವ ಪರಿಪಾಠ ಹೆಚ್ಚಾಗಿದೆ. ಪರಿಹಾರದ ನೈಜ ದಾರಿಗಳ ಯೋಚನೆಗಳು ಕ್ರಿಯಾಶೀಲವಾಗುತ್ತಿಲ್ಲ.

ಜಾಗತಿಕವಾಗಿಯೂ ಅಷ್ಟೆ, ದಕ್ಷಿಣದಿಂದ ಉತ್ತರ ಭೂ ಭಾಗಕ್ಕೆ ವ್ಯಾಪಕ ಪ್ರಮಾಣದಲ್ಲಿ ವಲಸೆ ನಡೆಯುತ್ತಿದೆ. ಅಲ್ಲಿ ವಲಸೆ ತಡೆಯಲು ತಂತಿ ಬೇಲಿಗಳನ್ನು ನಿಲ್ಲಿಸಲಾಗುತ್ತಿದೆ. ಪರಿಸರದ ಜಾಗತಿಕ ಬಿಕ್ಕಟ್ಟುಗಳನ್ನು ನಿರ್ವಹಿಸಲು ರಾಷ್ಟ್ರವಾದ ಸಮರ್ಥವಲ್ಲ ಎಂದು ಹರಾರಿ ಹೇಳುತ್ತಾನೆ. ನವೋಮಿ ಕ್ಲೇನ್ ಎಂಬ ಕೆನಡಾದ ಚಿಂತಕಿ ದಿಸ್ ಚೇಂಜಸ್ ಎವ್ವೆರಿಥಿಂಗ್ ಎಂಬ ಕೃತಿಯಲ್ಲಿ ಬೃಹತ್ ಬಂಡವಾಳಿಗರು ನಡೆಸುತ್ತಿರುವ ಎಲ್ಲ ಉತ್ಪಾದನಾ ಮತ್ತು ವಿತರಣಾ ಕ್ರಮಗಳು ಮನುಷ್ಯನ ಸಾಮೂಹಿಕ ಹತ್ಯೆಗೆ ಕಾರಣವಾಗುತ್ತಿವೆ ಎಂದು ಹೇಳುತ್ತಾಳೆ. ಈಗ ಯಾರನ್ನೂ ಆರೋಪ ಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಕೈಯಾರೆ ಎಲ್ಲರೂ ಸೇರಿ ನಾಶ ಮಾಡಿದ್ದೇವೆ. ಬೇರೆ ಬೇರೆ ಪ್ರಮಾಣದಲ್ಲಿರಬಹುದಷ್ಟೆ.

ಪ್ರಖ್ಯಾತ ಚಿಂತಕ ರೇಮಂಡ್ ವಿಲಿಯಮ್ಸ್ ಇಕಾಲಜಿ ಆ್ಯಂಡ್ ಸೋಷಿಯಲಿ ಸಂಕುರಿತು ಮಾಡಿದ ಭಾಷಣವೊಂದರಲ್ಲಿ, 19 ನೇ ಶತಮಾನದ ಯುರೋಪಿನ ಪ್ರಧಾನ ವಿಚಾರಧಾರೆ ಎಂದರೆ, ಪ್ರಕೃತಿಯ ಮೇಲೆ ಪ್ರಭುತ್ವ, ಪ್ರಕೃತಿಯ ಶಕ್ತಿಗಳನ್ನು ಮಣಿಸುವುದು ಎಂಬ ನಿಲುವಿತ್ತು. ನಿಧಾನಕ್ಕೆ ಅಲ್ಲಿ ಸಮಾಜವಾದಿ ಉತ್ಪಾದನಾ ಮಾರ್ಗವೇ ಸೂಕ್ತ ಎಂಬ ನಿಲುವು ಮುನ್ನೆಲೆಗೆ ಬಂತು ಎನ್ನುತ್ತಾನೆ. ಏಕೆಂದರೆ ಬಡತನ ನಿವಾರಿಸಬೇಕಾದರೆ ಆಧುನಿಕ ವೈಜ್ಞಾನಿಕ ಉತ್ಪಾದನೆ ಏಕಮಾತ್ರ ಮಾರ್ಗ ಎನ್ನುವ ತಿಳುವಳಿಕೆ ಆವರಿಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸುತ್ತಾನೆ.

ಮನುಷ್ಯ ಮತ್ತು ಪ್ರಕೃತಿಯ ಸಂಬಂಧಗಳನ್ನು ಗಾಂಧಿಯವರಷ್ಟು ಆಳವಾಗಿ ಧ್ಯಾನಿಸಿದವರು ವಿರಳ. ಆದರೆ ಭಾರತದ ಮಧ್ಯಮ ವರ್ಗ ಗಾಂಧಿಯವರನ್ನು ಸಾರಾಸಗಟಾಗಿ ವಿರೋಧಿಸುವುದನ್ನೇ ಮುಂದುಮಾಡಿಕೊಂಡು ಅವರೆಲ್ಲ ವಿಚಾರಧಾರೆಯನ್ನು ದಮನಿಸಿಬಿಟ್ಟಿತು. ಮನುಷ್ಯನ ದುರಾಸೆಗಳನ್ನು ನೀಗಿಸುವಷ್ಟು ಸಂಪತ್ತು ಭೂಮಿಯಲ್ಲಿ ಇಲ್ಲ ಎನ್ನುವ ಮೂಲಕ ಅವರು ಪರಿಸರ ಚಿಂತನೆಗೆ ಸಮಾಜವಾದಿ ದಾರ್ಶನಿಕ ಆಯಾಮವನ್ನು ನೀಡಿದರು. ಪ್ರಕೃತಿಯ ಲಯಬದ್ಧತೆಯನ್ನು ಅರ್ಥಮಾಡಿಕೊಂಡು ಬದುಕುವ ಮನುಷ್ಯನ ಘನತೆ ಎಂದೂ ಮುಕ್ಕಾಗುವುದಿಲ್ಲ ಎನ್ನುವುದು ಗಾಂಧೀಜಿಯ ನಿಲುವು. ನಾಗರಿಕತೆಯನ್ನು ಮುಂದುವರಿಸಲು ಸರಳ ಯಂತ್ರಗಳು ಸಾಕು ಎನ್ನುವ ಅವರನ್ನು ಆಧುನಿಕ ಭಾರತ ಅಸಡ್ಡೆ ಮಾಡಿತು. ಅವರ ಮರಣಾನಂತರ ಆಧುನಿಕ ಭಾರತದ ಮೇಲೆ ಯುರೋಪಿನ ಪುರುಷಾಧಿಪತ್ಯದ ಭಾಷೆ ಪ್ರಭಾವಿಸಿತು. ಅದೇ ಉದ್ಧಾರದ ಮಾರ್ಗ ಎಂಬ ದಾಷ್ಟ್ಯ ನಮ್ಮಲ್ಲಿ ಬೇರೂರಿತು. ಇದರಿಂದಾದ ಅನಾಹುತವೆಂದರೆ ಕಾಶಿ ವಿಶ್ವನಾಥನ ಭಕ್ತ ಎನ್ನಿಸಿಕೊಳ್ಳುವ ಕೈಗಾರಿಕೋದ್ಯಮಿಯೊಬ್ಬ ತನ್ನ ಕಾರ್ಖಾನೆಯ ಎಫ್ಲುಯೆಂಟನ್ನ ತ್ಯಾಜ್ಯವನ್ನು ಸಂಸ್ಕರಿಸದೆ ಗಂಗೆಯ ಒಡಲಿಗೆ ವಿಷಹರಿಸಿದರೆ, ಗಂಗೆ ಮೋಕ್ಷದಾಯಕಿಯೆಂದು ತಿಳಿದ ಸಾಂಪ್ರದಾಯಕ ಹಿಂದೂ ಪಿಂಡ, ಬೂದಿ, ಎಣ್ಣೆ, ಹೂವು ಮುಂತಾದ ನೀರಿಗೆ ಮಾರಕವಾದ ವಸ್ತುಗಳನ್ನು ಸುರಿದು ಗಂಗೆಯನ್ನು ಕೊಲ್ಲತೊಡಗಿದ. ಇದನ್ನು ತಪ್ಪು ಎಂದವರನ್ನು ಕೊಲ್ಲುವ ಮಟ್ಟಿಗೆ ದೇಶ ಸಾಗಲಾರಂಭಿಸಿತು. ಗಂಗೆಗಾಗಿ ಉಪವಾಸ ಮಾಡಿ ಮಡಿದ ಸಂತರೂ ಇದ್ದಾರೆ. ಹಿಂದೆ ಉತ್ತರಾಖಂಡದ ಸಂತರೊಬ್ಬರು ಗಂಗೆ-ಯಮುನೆ ಮುಂತಾದ ನದಿಗಳು ಮತ್ತು ಪರಿಸರದ ಮೇಲಿನ ದೌರ್ಜನ್ಯವನ್ನು ತಾಯಿಯ ಮೇಲೆ ಮಕ್ಕಳುಹಿಂದುಗಳು ಮಾಡುತ್ತಿರುವ ಅತ್ಯಾಚಾರವೆಂದು ಕರೆದಿದ್ದರು.

ಐವತ್ತರ ದಶಕದ ನಂತರ ಪ್ರಕೃತಿಯ ಮೇಲೆ ಮನುಷ್ಯನ ಪ್ರಭುತ್ವ ಎಂಬ ತತ್ವವನ್ನು ನಾವು ಅಳವಡಿಸಿಕೊಂಡಂತಾಗಿದೆ. ಈ ಹೊತ್ತಿನಲ್ಲಿ ಯುರೋಪು ತನ್ನ ಮಿತಿಗಳನ್ನು ಅರಿತುಕೊಳ್ಳಲು ಹೆಣಗತೊಡಗಿತು. ಒಂದರ್ಥದಲ್ಲಿ ಅದು ಗಾಂಧೀಜಿಯ ಆಧ್ಯಾತಿಕ ಸಮಾಜವಾದ ಮತ್ತು ಮಾರ್ಕ್ಸ್‌ನ ರಾಜಕೀಯಾರ್ಥಿಕಸಮಾಜವಾದಗಳನ್ನು ಏಕತ್ರಗೊಳಿಸಿ ಮುನ್ನಡೆಯುವ ಕುರಿತು ಯೋಚಿಸತೊಡಗಿದಂತೆ ಕಾಣುತ್ತದೆ. ಆದರೆ ಭಾರತ ಗಾಂಧಿಯನ್ನು ಹೊರಗಿಟ್ಟು ಅಭಿವೃದ್ಧಿಯನ್ನು ಸಾಧಿಸಬೇಕೆಂಬ ಹಪಾಹಪಿಗೆ ಸಿಲುಕಿಕೊಂಡಿದೆ. ಸ್ಮಾಲ್ ಈಸ್ ಬ್ಯೂಟಿಫುಲ್1973 ಕೃತಿ ಬರೆದ ಶುಮಾಕರ್, ಬುದ್ಧ ಮಾರ್ಗದಲ್ಲಿ ಬಿಡುಗಡೆ ಇದೆ ಎನ್ನುತ್ತಾನೆ. ಬುದ್ಧನ ಅಭಿವೃದ್ಧಿ ಮಾದರಿ ಎಂದರೆ ಸಕಲ ಜೀವ ರಾಶಿಗಳ ಅಸ್ತಿತ್ವವನ್ನು ಗೌರವಿಸುವುದು. ಬುದ್ಧನ ಅಷ್ಟಾಂಗಮಾರ್ಗಗಳಲ್ಲಿ ಜೀವನೋಪಾಯದ ಹಕ್ಕೂ ಒಂದು. ಬುದ್ಧನ ಆರ್ಥಿಕತೆ ಎಂದರೆ ಗರಿಷ್ಠ ಉತ್ಪಾದನೆಯಲ್ಲ ಬದಲಿಗೆ ಗರಿಷ್ಠ ಉದ್ಯೋಗ. ಇದಾಗ ಬೇಕೆಂದರೆ ಕಾಮನೆಗಳನ್ನು ದ್ವಿಗುಣಗೊಳಿಸಿಕೊಳ್ಳುವುದಲ್ಲ ಬದಲಾಗಿ ಮನುಷ್ಯನ ಚಾರಿತ್ರವನ್ನು ಶುದ್ಧಗೊಳಿಸಿಕೊಳ್ಳುವುದು; ಇದೇ ನಾಗರಿಕತೆಯ ಶ್ರೇಷ್ಠ ಕೆನೆ ಎಂಬುದು ಅವನ ಚಿಂತನೆ. ಬುದ್ಧಿಸಂ ಅರಣ್ಯದ ಕುರಿತು ಮಾಡಿದಷ್ಟು ಧ್ಯಾನ ಮತ್ಯಾವ ಧರ್ಮಗಳೂ ಮಾಡಿದಂತಿಲ್ಲ. ತನ್ನ ಪ್ರತಿಯೊಬ್ಬ ಅನುಯಾಯಿಯೂ ಮರವೊಂದನ್ನು ನೆಡಬೇಕೆಂದು ಬುದ್ಧ ಸೂಚಿಸಿದ್ದ. ವಿಶ್ವದ ಉಳಿವು ಮರಗಿಡಗಳನ್ನು ಅವಲಂಬಿಸಿದೆ ಮತ್ತು ಅದು ಅನ್ನದ ಮೂಲವೂ ಹೌದು ಎನ್ನುವುದು ಅವನ ನಿಲುವಾಗಿತ್ತು ಎಂದು ವಿಶ್ಲೇಷಿಸುವ ಶುಮಾಕರ್ ನಂತರದ ದಿನಗಳಲ್ಲಿ ದಕ್ಷಿಣ ಏಶ್ಯಾದ ರಾಷ್ಟ್ರಗಳು ಪಶ್ಚಿಮದ ಅರ್ಥಶಾಸ್ತ್ರಜ್ಞರು ತೋರಿಸುತ್ತಿರುವ ಮಾಯಾ ಕನ್ನಡಿಯಂಥ ಅಭಿವೃದ್ಧಿ ಮಾದರಿಗಳ ಹಿಂದೆ ಬಿದ್ದು ಲಜ್ಜೆಗೆಟ್ಟು, ಬುದ್ಧಿಹೀನರಾಗಿ ಮರಗಿಡಗಳನ್ನು ನಿರ್ಲಕ್ಷಿಸುತ್ತಿರುವ ಕುರಿತು ಆತಂಕ ವ್ಯಕ್ತಪಡಿಸುತ್ತಾನೆ. ಪ್ರಕೃತಿಯಲ್ಲಿ ಮನುಷ್ಯನ ಪಾಲಿಗೆ ದಕ್ಕಬಹುದಾದಷ್ಟನ್ನು, ದುರಾಸೆ ಪಡದೆ ಹಂಚಿ ಬದುಕುವ ಕ್ರಮಗಳನ್ನು ಬುದ್ಧ ಬದುಕಿ ತೋರಿಸುತ್ತಾನೆ. ಸೂಜಿ-ದಾರ, ಒಂದು ಜೊತೆ ಕಾಷಾಯ ವಸ್ತ್ರ, ತಣಿಗೆ, ಕಾಲಿಗೊಂದು ಜೊತೆ ಮೆಟ್ಟು, ಇಷ್ಟು ಸಾಕು ಎಂದು ಭಿಕ್ಕುಗಳಿಗೆ ನಿಯಮ ಮಾಡಿದ್ದನಂತೆ. ಈ ತತ್ವವನ್ನು ಗಾಂಧಿ ಇಪ್ಪತ್ತನೆ ಶತಮಾನಕ್ಕೆ ಇನ್ನಷ್ಟು ವಿಸ್ತರಿಸಿದರು ಎಂದು ಜೆ. ಸಿ. ಕುಮಾರಪ್ಪನವರ ಅರ್ಥಶಾಸ್ತ್ರವನ್ನು ವಿಶ್ಲೇಷಿಸುವಾಗ ಶುಮಾಕರ್ ಪ್ರಸ್ತಾಪಿಸುತ್ತಾನೆ.

ಇಂದು ಮನುಷ್ಯನ ಅಗತ್ಯವಿಲ್ಲದೆ ರೋಬೋಟುಗಳ ಮೂಲಕವೇ

ಉತ್ಪಾದಿಸಿ ಲಾಭ ಮಾಡಬಹುದು ಎಂಬ ನಿಲುವಿಗೆ ಬಂಡವಾಳವಾದ ತಲುಪುತ್ತಿದೆಬಂಡವಾಳವಾದದ ಈ ಹುನ್ನಾರ ಇವತ್ತಿನದೇನಲ್ಲ ಎಂದು ಆಟೊಮೇಶನ್ ಕುರಿತು ಶುಮಾಕರ್ ತನ್ನ ಕೃತಿಯಲ್ಲಿ 1973 ರ ಹೊತ್ತಿಗೆ ಪ್ರಸ್ತಾಪಿಸುತ್ತಾನೆ. ಆಧುನಿಕ ಉತ್ಪಾದನೆ ಮತ್ತು ವಿತರಣಾ ವಿಧಾನಗಳು ಬಹಳ ಗಂಭೀರವಾದ ಪರಿಸರದ ಬಿಕ್ಕಟ್ಟುಗಳನ್ನು ಜಾಗತಿಕ ಮಟ್ಟದಲ್ಲಿ ಸೃಷ್ಟಿಸುತ್ತಿವೆ. ಪದೇ ಪದೇ ಸಂಭವಿಸುತ್ತಿರುವ ಬರ-ಪ್ರವಾಹಗಳಿಗೆ ಈ ಬಿಕ್ಕಟ್ಟುಗಳೆ ಕಾರಣ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಕೈಗಾರಿಕಾ ಪೂರ್ವ ಯುಗದಲ್ಲೂ ಕ್ಷಾಮ-ಬರ, ಪ್ರವಾಹಗಳು ಘಟಿಸುತ್ತಿದ್ದವು. ಅವು ಶತಮಾನಗಳಿಗೊಮ್ಮೆ ಅಪ್ಪಳಿಸುತ್ತಿದ್ದ ವಿದ್ಯಮಾನಗಳಾಗಿದ್ದವು. ಇದೆಲ್ಲದರ ಜೊತೆಗೆ ನೆಲದಾಳದ ನೀರ ಶೋಷಣೆ, ಹಸಿರು ಶೂನ್ಯತೆಗಳು ಜಗತ್ತಿನ ಮುಕ್ಕಾಲು ಪಾಲು ಜನ ಸಮುದಾಯಗಳನ್ನು ನಾಶದ ಅಂಚಿಗೆ ತಂದು ನಿಲ್ಲಿಸಿವೆ. ಭೂಮಿ ಉರಿವ ಕಾವಲಿಯಾಗುತ್ತಿರುವುದೂ, ಸಮುದ್ರ ಭೂಮಿ ನುಂಗಲು ತನ್ನ ಭೀಕರ ನಾಲಿಗೆ ಚಾಚುತ್ತಿರುವುದೂ ಇದೇ ಕಾರಣಕ್ಕೆ. ಬಲಿಷ್ಠ ಮತ್ತು ಶ್ರೇಷ್ಠ ರಾಷ್ಟ್ರ ಕಟ್ಟುವ ಹವಣಿಕೆಯಲ್ಲಿ ಸಿಲುಕಿಕೊಂಡಿರುವ 21 ನೇ ಶತಮಾನ ಪ್ರಕೃತಿ ತತ್ವಕ್ಕೆ ಶರಣಾಗದೆ ಉಳಿಗಾಲವಿಲ್ಲ ಎಂಬ ಹಂತಕ್ಕೆ ತಲುಪಬೇಕು. ಬರ-ಪ್ರವಾಹಗಳ ನಿರ್ವಹಣೆಯೆಂದರೆ ಅಭಿವೃದ್ಧಿ ಮಾದರಿಗಳ ತೀವ್ರ ವಿಮರ್ಶೆ ಎಂದಾಗಬೇಕು. ಹೀಗಾಗಬೇಕಾದರೆ ಜಾಗತಿಕ ಸಹಕಾರದ ಅಗತ್ಯವಿದೆ ಎಂಬುದು ಹರಾರಿ ಮತ್ತು ಕ್ಲೈನ್‌ರ ಅಭಿಪ್ರಾಯ. ಜಗತ್ತು ಒಟ್ಟಿಗೆ ಪ್ರತಿಕ್ರಿಯಿಸುವವರೆಗೆ ಕಾಯುತ್ತಾ ಕೂತರಾಗದು ಎಂದು ಭಾವಿಸಿ ಕಾರ್ಯೋನ್ಮುಖರಾಗಿರುವ ಸಾಲುಮರದ ತಿಮ್ಮಕ್ಕ, ತಿಪಟೂರು ಬಳಿಯ ಗ್ಯಾರಘಟ್ಟದ ಬೀರಜ್ಜ, ರಾಜೇಂದ್ರಸಿಂಗ್, ಆಮೀರ್‌ಖಾನ್, ಗಂಗೆಗಾಗಿ ಉಪವಾಸ ಮಾಡಿ ಮಡಿದ ಸಂತರು ಮುಂತಾದ ಅನೇಕರು ಗಾಂಧಿ, ಬುದ್ಧರ ಮಾರ್ಗಗಳನ್ನು ನೆನಪಿಸುತ್ತಿದ್ದಾರೆ. ಭೂಮಿಯ ತೇವಾಂಶ ಹೆಚ್ಚಿಸುವ ಮತ್ತು ಹಸಿರು ಹೆಚ್ಚಿಸುವ ಮಾದರಿಗಳನ್ನು ಅನೇಕರು ಪ್ರಯೋಗಿಸುತ್ತಿದ್ದಾರೆ. ಅದು ಸಮುದಾಯಗಳ ಬದುಕಿನ ಮುಖ್ಯ ಧ್ಯಾನವಾಗಲಿ. ನೆಲದಡಿಯ ಜಲಕ್ಷಾಮ, ನೆಲದ ಮೇಲಿನ ಹಸಿರು ಕ್ಷಾಮ ಮರೆಯಾದರೆ ಮನುಷ್ಯ ಸಂಕುಲದ ಆಯುಷ್ಯ ಇನ್ನೊಂದಿಷ್ಟು ವಿಸ್ತರಣೆಯಾಗಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top