-

ನ್ಯಾ.ಸಾಚಾರ್ ಒಂದು ನೆನಪು...

-

ನರೇಂದ್ರ ಮೋದಿಯವರ ಆಗಮನದ ಬಳಿಕ ರಾಷ್ಟ್ರಮಟ್ಟದಲ್ಲಿ ರಾಜಕೀಯವು ವಿಭಿನ್ನವಾದ ತಿರುವನ್ನು ಪಡೆದುಕೊಂಡಿದೆ. ಇದರ ಪರಿಣಾಮವಾಗಿ 2019ರ ಲೋಕಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಸಾಚಾರ್ ಸಮಿತಿಯ ಶಿಫಾರಸುಗಳ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳೂ ಪ್ರಸ್ತಾವಿಸಿಲ್ಲ. ನ್ಯಾಯಮೂರ್ತಿ ಸಾಚಾರ್ ಅವರು ಪ್ರಸಕ್ತ ಲೋಕಸಭಾ ಚುನಾವಣೆಯವರೆಗೂ ಬದುಕಿರಬೇಕೆಂದು ಬಯಸಿದ್ದರು. ಆದರೆ ಅವರ ಆಸೆಯನ್ನು ಈಡೇರಿಸಲು ಅವರ ಆರೋಗ್ಯ ಬಿಡಲಿಲ್ಲ. ಒಂದು ವೇಳೆ ಇಂದು ಅವರು ಬದುಕಿರುತ್ತಿದ್ದರೆ, ಈ ಬೆಳವಣಿಗೆಯ ಬಗ್ಗೆ ಅವರು ತುಂಬಾ ವಿಚಲಿತರಾಗುತ್ತಿದ್ದರು.

20 ಎಪ್ರಿಲ್ 2019ರಂದು ನ್ಯಾಯಮೂರ್ತಿ ರಾಜೀಂದರ್ ಸಾಚಾರ್ ಅವರ ಮೊದಲ ಪುಣ್ಯತಿಥಿಯಾಗಿದೆ. ಸಾಮಾಜಿಕ ದೃಷ್ಟಾರ, ದಕ್ಷ ನ್ಯಾಯಮೂರ್ತಿ, ನೈಜ ಜಾತ್ಯತೀತ ವಾದಿ ಹಾಗೂ ಪ್ರಜಾಪ್ರಭುತ್ವವಾದಿ, ಮಾನವಹಕ್ಕುಗಳ ಕಟ್ಟಾ ಪ್ರತಿಪಾದಕ ಹಾಗೂ ನಾಗರಿಕ ಸ್ವಾತಂತ್ರದ ಹೋರಾಟಗಾರ ಹಾಗೂ ಮಾನವನ ಒಳ್ಳೆಯ ತನದ ಬಗ್ಗೆ ಸಂಪೂರ್ಣ ನಂಬಿಕೆಯಿರುವ ನೈಜ ಮಾನವತಾವಾದಿ ಅವರಾಗಿದ್ದರು.

ಸಾಚಾರ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಸೀಮಾ ಮುಸ್ತಫಾ ‘ನಮ್ಮ ಶ್ರೇಷ್ಠತೆಯೊಂದು ಹೋಗಿಬಿಟ್ಟಿದೆ’ ಎಂದು ಹೇಳಿದ್ದರು. ಅವರ ಅಗಲಿಕೆಯಿಂದ ನನಗೆ ವೈಯಕ್ತಿಕವಾಗಿ ಅದರಲ್ಲೂ ನನ್ನ ರಾಜಕೀಯ ಚಟುವಟಿಕೆಗಳಿಗೆ ಭಾರೀ ನಷ್ಟ ಉಂಟಾಗಿದೆ. 2011ರಲ್ಲಿ ಅವರು ಹಾಗೂ ಸುರೇಂದ್ರ ಮೋಹನ್, ಭಾಯ್ ವೈದ್ಯ, ಪನ್ನಾಲಾಲ್ ಸುರಾನಾ, ಪ್ರೊ. ಕೇಶವ್ ಜಾಧವ್‌ರಂತಹ ಹಿರಿಯ ಸೋಶಿಯಲಿಸ್ಟ್ ನಾಯಕರ ಜೊತೆಗೂಡಿ ಸೋಶಿಯಲಿಸ್ಟ್ ಪಾರ್ಟಿ (ಇಂಡಿಯಾ)ಯನ್ನು ಸ್ಥಾಪಿಸಿದ್ದರು. ಪಕ್ಷದ ಚಟುವಟಿಕೆಗಳಲ್ಲಿ ಅವರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಹಾಲಿ ಕಾರ್ಪೊರೇಟ್, ಬಂಡವಾಳಶಾಹಿ ವ್ಯವಸ್ಥೆಯನ್ನು ಸ್ಥಾನಪಲ್ಲಟಗೊಳಿಸುವುದಕ್ಕಾಗಿ ಸೋಶಿಯಲಿಸ್ಟ್ ಪಕ್ಷದ ಗತವೈಭವ ಹಾಗೂ ಆ ಸಿದ್ಧಾಂತ ಅಥವಾ ಚಳವಳಿಯು ಮತ್ತೊಮ್ಮೆ ಭಾರತೀಯ ರಾಜಕಾರಣದಲ್ಲಿ ಅಭ್ಯುದಯವನ್ನು ಕಾಣಲಿದೆ ಎಂಬ ಭರವಸೆ ಹಾಗೂ ನಂಬಿಕೆಯನ್ನು ಅವರು ಹೊಂದಿದ್ದರು. ಅವರ ಈ ಆಶಾವಾದದ ಬಗ್ಗೆ ನನಗೇ ಅಚ್ಚರಿಯೆನಿಸುತ್ತಿತು. ಒಮ್ಮೆ ನಾನೇ ಅವರೊಂದಿಗೆ, ನಿಮ್ಮ ಸುತ್ತಮುತ್ತಲಿನ ಜನರೇ, ನಿಮ್ಮ ಮನವಿಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸದಿರುವಾಗ, ಇನ್ನು ಜನಸಾಮಾನ್ಯರು, ನಿಮ್ಮ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಬೆಂಬಲಿಸುವರೆಂಬ ಭರವಸೆಯಿರಿಸಿಕೊಳ್ಳುವುದು ಹೇಗೆ ಸಾಧ್ಯ ಎಂಬುದಾಗಿ ನಾನೇ ಆಗಾಗ್ಗೆ ಅವರನ್ನು ಪ್ರಶ್ನಿಸಿದ್ದೇನೆ. ಇದಕ್ಕವರು ಒಂದಿಷ್ಟೂ ನಿರಾಶೆಯ ಭಾವನೆಯನ್ನು ತೋರಿಸದೆಯೇ ಕೇವಲ ಮುಗ್ಧ ನಗೆ ಬೀರುತ್ತಿದ್ದರು. ಅವರ ಮುಗುಳ್ನಗೆಯು ನಮ್ಮನ್ನೆಲ್ಲಾ ಯಾವತ್ತೂ ಸಕಾರಾತ್ಮಕ ಮನಸ್ಥಿತಿಯ ಚೌಕಟ್ಟಿನೊಳಗೆ ಇರಿಸುತ್ತಿತ್ತು ಹಾಗೂ ಈಗ ಅವರು ನಮ್ಮ ಸುತ್ತಮುತ್ತಲೂ ಇರದಿರುವುದರಿಂದ ನಾವದನ್ನು ತುಂಬಾನೆ ಕಳೆದುಕೊಂಡಿದ್ದೇವೆ.

ಅವರ ಜೀವನದ ಕೊನೆಯ ಅವಧಿಯಲ್ಲಿ, ನ್ಯಾಯಮೂರ್ತಿ ಸಾಚಾರ್ ಅವರು ಸಾಚಾರ್ ಸಮಿತಿ ವರದಿಯಿಂದಾಗಿ, ದೇಶಾದ್ಯಂತ ಜನಪ್ರಿಯರಾಗಿದ್ದರು. ನ್ಯಾಯಮೂರ್ತಿ ರಾಜೀಂದರ್ ಸಾಚಾರ್ ನೇತೃತ್ವದ ಸಾಚಾರ್ ಸಮಿತಿಯನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ರಚಿಸಿದ್ದರು. ದೇಶದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಾನಮಾನದ ಕುರಿತು ವರದಿಯೊಂದನ್ನು ತಯಾರಿಸುವುದೇ ಈ ಸಮಿತಿ ರಚನೆಯ ಉದ್ದೇಶವಾಗಿತ್ತು. ಸಮಿತಿಯ 403 ಪುಟಗಳ ವರದಿಯನ್ನು 2006ರ ನವೆಂಬರ್ 30ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಸಾಚಾರ್ ಆಯೋಗದ ಅಧ್ಯಯನ ವರದಿ ಹಾಗೂ ಶಿಫಾರಸುಗಳು ರಾಜಕೀಯ,ಸಾಮಾಜಿಕ ಹಾಗೂ ಚಿಂತಕ ವಲಯಗಳಲ್ಲಿ ಈ ವರದಿಯು ತೀವ್ರ ಚರ್ಚೆಯ ವಿಷಯವಾಗಿ ಪರಿಣಮಿಸಿತ್ತು. ಭಾರತಾದ್ಯಂತ ಮುಸ್ಲಿಂ ಸಮುದಾಯದ ನೈಜ ಸ್ಥಿತಿಗತಿಗೆ ಹಿಡಿದ ಕೈಗನ್ನಡಿಯೆಂದು ಈ ವರದಿಯನ್ನು ಪರಿಗಣಿಸಲಾಗಿತ್ತು. ತರುವಾಯ, ಈ ವರದಿಗೆ ಚಿಂತಕವರ್ಗದ ಒಂದು ದೊಡ್ಡ ಭಾಗದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಈ ವರದಿಯಲ್ಲಿ ಕಂಡುಬಂದ ಅಂಶಗಳು, ಶಿಫಾರಸುಗಳು ಹಾಗೂ ವರದಿ ರಚನೆಯ ವಿಧಾನಗಳ ಬಗ್ಗೆ ಒಂದಿಷ್ಟು ಭಿನ್ನಾಭಿಪ್ರಾಯದ ಧ್ವನಿಗಳು ಕೇಳಿಬಂದಿದ್ದವಾದರೂ, ಹೆಚ್ಚಿನವರು ಅದನ್ನು ಸ್ವಾಗತಿಸಿದ್ದರು. ಆಯೋಗದ ವರದಿಯ ಪ್ರಕಟನೆಯ ಬಳಿಕ ಅದರ ವಿರುದ್ಧ ಹಲವಾರು ಪ್ರತಿಕೂಲಕರ ಪ್ರತಿಕ್ರಿಯೆಗಳು ವ್ಯಕ್ತವಾದವು. ನ್ಯಾ. ಸಾಚಾರ್ ಅವರ ಹತ್ಯೆ ನಡೆಸುವ ಸಂಚು ಕೂಡಾ ರೂಪಿಸಲ್ಪಟ್ಟಿತ್ತು. ಈ ವಿಷಯವನ್ನು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಬಹಿರಂಗಪಡಿಸಿದಾಗ ನಾನು ಮನಮೋಹನ್‌ಸಿಂಗ್ ಸರಕಾರಕ್ಕೆ ಪತ್ರವೊಂದನ್ನು ಬರೆದು ನ್ಯಾಯಮೂರ್ತಿ ಸಾಚಾರ್ ಅವರಿಗೆ ರಕ್ಷಣೆಯನ್ನು ಒದಗಿಸುವಂತೆ ಕೋರಿದ್ದೆ ಆದರೆ ಅದು ನನ್ನ ಕೋರಿಕೆಗೆ ಕಿವಿಗೊಡಲಿಲ್ಲ. ವರದಿಗಾಗಿ ಸಾಚಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಯನ್ನು ನೀಡಲು ಕೇಂದ್ರ ಬಯಸಿತ್ತಾದರೂ ನ್ಯಾಯಮೂರ್ತಿ ಸಾಚಾರ್ ಅವರು ಅದನ್ನು ವಿನಯಪೂರ್ವಕವಾಗಿಯೇ ತಿರಸ್ಕರಿಸಿದ್ದರು.

‘ಸಾಚಾರ್ ಸಮಿತಿ ವರದಿ’ ಎಂದೇ ಹೆಸರಾದ ಈ ವರದಿಯು ಸ್ವಾತಂತ್ರಾನಂತರ ಮುಸ್ಲಿಮ್ ಸಮುದಾಯದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅಭದ್ರತೆ ಹಾಗೂ ಮುಸ್ಲಿಮರ ಪ್ರತ್ಯೇಕಿಸುವಿಕೆಗೆ ಸಂಬಂಧಿಸಿ ಮೊದಲ ಬಾರಿಗೆ ಗಮನಸೆಳೆದಿತ್ತು. ಇತರ ಭಾರತೀಯರಿಗೆ ಹೋಲಿಸಿದರೆ, ಅಧಿಕ ಸಂಖ್ಯೆಯ ಮುಸ್ಲಿಮರು ಬಡವರು, ಅನಕ್ಷರಸ್ಥರು, ಅನಾರೋಗ್ಯ ಪೀಡಿತರಾಗಿದ್ದಾರೆ ಹಾಗೂ ಕಾನೂನಿನ ತೊಂದರೆಗೊಳಗಾಗಿದ್ದಾರೆ. ‘ ಮುಸ್ಲಿಂ ತುಷ್ಟೀಕರಣ’ವೆಂಬ ಮಿಥ್ಯಾರೋಪವನ್ನು ಈ ವರದಿಯು ಅನಾವರಣಗೊಳಿಸಿದೆ ಹಾಗೂ ಈ ವರದಿಯು ವಿವಿಧ ರಾಜಕೀಯ ಪಕ್ಷಗಳು/ನಾಯಕರ ನಡುವೆ ವಿವಾದ ಹಾಗೂ ಚರ್ಚೆಯ ಕೇಂದ್ರಬಿಂದುವಾಗಿ ಪರಿಣಮಿಸಿದೆ. ತನ್ನ ವರದಿ ಸೇರಿದಂತೆ ನ್ಯಾಯಮೂರ್ತಿ ಸಾಚಾರ್ ಅವರ ಚಟುವಟಿಕೆಗಳು ಸಮಾಜವಾದಿ ಸಿದ್ಧಾಂತ ಹಾಗೂ ಸಮಾಜವಾದಿ ಚಳವಳಿಯ ಗ್ರಹಿಕೆಯಿಂದ ಪ್ರೇರಿತವಾಗಿದೆ. ಮೊದಲನೆಯದಾಗಿ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಅವರು ಕಟ್ಟಾ ಲೋಹಿಯಾವಾದಿಯಾಗಿದ್ದರು.

ತದನಂತರ ಸಾಚಾರ್ ಸಮಿತಿಯ ವರದಿಯ ಶಿಫಾರಸು ಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡುವುದರಲ್ಲಿ ವಿವಿಧ ರಾಜಕೀಯ ಪಕ್ಷಗಳ ನಡುವೆ ಪೈಪೋಟಿಯೇರ್ಪಟ್ಟಿತ್ತು. ಬಿಜೆಪಿ ಮಾತ್ರ ಇದರಿಂದ ಹೊರತಾಗಿತ್ತು. ವಾಸ್ತವವಾಗಿ ಆ ಪಕ್ಷವು ಸಾಚಾರ್ ವರದಿಯನ್ನು ಬಲವಾಗಿ ವಿರೋಧಿಸಿತ್ತು. ಆದರೆ ಜಾತ್ಯತೀತ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಮತ್ತು ಘೋಷಣೆಗಳಲ್ಲಿ ಸಾಚಾರ್ ವರದಿಯನ್ನು ಜಾರಿಗೊಳಿಸುವ ಭರವಸೆಯನ್ನು ಪುನರುಚ್ಚರಿಸುತ್ತಲೇ ಇದ್ದವು. ಆದಾಗ್ಯೂ ವರದಿಯ ಜಾರಿಯ ವಿಷಯದಲ್ಲಿ ನಮಗೆ ಎದುರಾಗಿರುವ ಚಿತ್ರಣವು ತೀರಾ ನಿರಾಶಾದಾಯಕವಾಗಿದೆ. ಈ ವರದಿಯು, ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರು, ಎಲ್ಲ ಕಾಲದಲ್ಲೂ ಕೇಂದ್ರ ಸರಕಾರಗಳಿಂದ ನಿರ್ಲಕ್ಷಿಸಲ್ಪಡುತ್ತಲೇ ಬಂದಿದ್ದಾರೆಂಬ ಅಂಶದ ಬಗ್ಗೆ ಬೆಳಕು ಚೆಲ್ಲಿದೆ.

ವಸತಿ ಹಾಗೂ ಉದ್ಯೋಗದಂತಹ ವಿಷಯಗಳಲ್ಲಿ ಖಾಸಗಿ ವಲಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ವನ್ನು ನಡೆಸುವುದನ್ನು ತಡೆಯಲು ಸಮಾನ ಅವಕಾಶಗಳ ಸಮಿತಿ (ಇಒಸಿ)ಯನ್ನು ಸ್ಥಾಪಿಸುವಂತೆಯೂ ವರದಿಯು ಶಿಫಾರಸು ಮಾಡಿತ್ತು. ಆ ತನಕ ಖಾಸಗಿ ವಲಯದಲ್ಲಿ ತಾರತಮ್ಯವನ್ನೆಸಗಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತಿಲ್ಲ. ಆದರೆ ಶಿಫಾರಸನ್ನು ಅಕ್ಷಮ್ಯವಾದ ರೀತಿಯಲ್ಲಿ ಬದಿಗೊತ್ತಲಾಗಿದೆ. ಕೇಂದ್ರ ಸರಕಾರದ ಅನುಮತಿಯಿಲ್ಲದೆ ರಾಜ್ಯ ಸರಕಾರಗಳಿಗೆ ಇಒಸಿಯನ್ನು ಸ್ಥಾಪಿಸಲು ಸಾಧ್ಯವಿದೆ. ನ್ಯಾಯಯುತವಲ್ಲದ ರೀತಿಯಲ್ಲಿ ಮತದಾರ ಕ್ಷೇತ್ರಗಳ ವಿಂಗಡಣೆಯಿಂದಾಗಿ ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮರು ಶಾಸನಸಭೆಗಳಿಗೆ ಆಯ್ಕೆಯಾಗುತ್ತಿರುವ ಬಗ್ಗೆ ವರದಿಯು ಗಮನಸೆಳೆದಿದ್ದು, ಅದನ್ನು ಅತ್ಯಂತ ತುರ್ತಾಗಿ ನಿಭಾಯಿಸಬೇಕಾಗಿದೆ. ಶಾಸನಸಭೆಗಳಲ್ಲಿ ಕ್ಷೇತ್ರಗಳ ಅತಾರ್ಕಿಕ ವಿಂಗಡನೆಯಿಂದಾಗಿ ಈ ಲೋಪ ಸಂಭವಿಸಿದೆ.

ಉತ್ತರಪ್ರದೇಶದಲ್ಲಿ, ಮುಸ್ಲಿಮ್ ಅಭ್ಯರ್ಥಿಗಳು ಗಣನೀಯ ಸಂಖ್ಯೆಯಲ್ಲಿ ಕ್ಷೇತ್ರಗಳನ್ನು ಗೆಲ್ಲಲು ಹೇರಳವಾದ ಅವಕಾಶಗಳಿವೆ. ಆದರೆ ಇದನ್ನು ಸಾಧ್ಯವಾಗಿಸಲು ನ್ಯಾಯಯುತವಾದ ರೀತಿಯಲ್ಲಿ ಕ್ಷೇತ್ರಗಳ ಮರುವಿಂಗಡಣೆ ಅಗತ್ಯವಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಗಣನೀಯ ಸಂಖ್ಯೆಯ ಮುಸ್ಲಿಮರಿರುವ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗಳಿಗೆ ಮೀಸಲಿಡಲಾಗಿದೆ ಹಾಗೂ ಪರಿಶಿಷ್ಟ ಜಾತಿಯ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರಗಳನ್ನು ಅವರಿಗೆ ಮೀಸಲಿಡಲಾಗಿಲ್ಲ. ಮುಸ್ಲಿಂ ಹಾಗೂ ಪರಿಶಿಷ್ಟ ಜಾತಿಯ ಮತದಾರರಿಗೆ ಇದರಿಂದ ತೀರಾ ಅನ್ಯಾಯವಾಗಿದೆ ಎಂದು ಶಿಫಾರಸು ತಿಳಿಸಿತ್ತು. ಈ ಬಗ್ಗೆ ಸರಕಾರವು ಗಮನಹರಿಸುವುದೆಂದು ಸಾಚಾರ್ ಆಯೋಗವು ಭರವಸೆ ವ್ಯಕ್ತಪಡಿಸಿತ್ತು. ಯಾಕೆಂದರೆ ಆ ಸಮಯದಲ್ಲಿ ಕ್ಷೇತ್ರ ಮರುವಿಂಗಡಣೆ ಆಯೋಗವು ಈ ಪ್ರಕ್ರಿಯೆಯಲ್ಲಿ ನಿರತವಾಗಿತ್ತು. ತಾನು ಮಾಡಿದ ಸಲಹೆ, ಸೂಚನೆಯನ್ನು ಹಾಲಿ ಕ್ಷೇತ್ರಮರುವಿಂಗಡಣೆ ಆಯೋಗವು ಕಾರ್ಯಗತಗೊಳಿಸಬಹುದಾಗಿದೆ ಎಂದು ಸಾಚಾರ್ ವರದಿ ಅಭಿಪ್ರಾಯಿಸಿತ್ತು. ಆದರೆ ಕ್ಷೇತ್ರಮರುವಿಂಗಡಣೆ ಕುರಿತ ಸಾಚಾರ್ ಆಯೋಗದ ಸಲಹೆ ಸೂಚನೆಯನ್ನು ಸಾರಾಸಗಟಾಗಿ ಕಡೆಗಣಿಸಲಾಗಿತ್ತು.

ಆದರೆ ಈಗ, ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿಯವರ ಆಗಮನದ ಬಳಿಕ ರಾಜಕೀಯವು ವಿಭಿನ್ನವಾದ ತಿರುವನ್ನು ಪಡೆದುಕೊಂಡಿತು. ಇದರ ಪರಿಣಾಮವಾಗಿ 2019ರ ಲೋಕಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಸಾಚಾರ್ ಸಮಿತಿಯ ಶಿಫಾರಸುಗಳ ಬಗ್ಗೆ ಯಾವುದೇ ರಾಜಕೀಯ ಪಕ್ಷವು ಪ್ರಸ್ತಾವಿಸಿಲ್ಲ. ನ್ಯಾಯಮೂರ್ತಿ ಸಾಚಾರ್ ಅವರು ಪ್ರಸಕ್ತ ಲೋಕಸಭಾ ಚುನಾವಣೆಯವರೆಗೂ ಬದುಕಿರಬೇಕೆಂದು ಬಯಸಿದ್ದರು. ಆದರೆ ಅವರ ಆಸೆಯನ್ನು ಈಡೇರಿಸಲು ಅವರ ಆರೋಗ್ಯ ಬಿಡಲಿಲ್ಲ. ಒಂದು ವೇಳೆ ಇಂದು ಅವರು ಬದುಕಿರುತ್ತಿದ್ದರೆ, ಈ ಬೆಳವಣಿಗೆಯ ಬಗ್ಗೆ ಅವರು ತುಂಬಾ ವಿಚಲಿತರಾಗುತ್ತಿದ್ದರು.

( ಈ ಬರಹದ ಲೇಖಕ ಡಾ. ಪ್ರೇಮ್‌ಸಿಂಗ್ ಅವರು ದಿಲ್ಲಿಯ ವಿವಿಯಲ್ಲಿ ಹಿಂದಿ ಬೋಧಕರಾಗಿದ್ದಾರೆ ಹಾಗೂ ಸೋಶಿಯಲಿಸ್ಟ್ ಪಾರ್ಟಿ (ಇಂಡಿಯಾ)ಯ ಅಧ್ಯಕ್ಷರು).

ಕೃಪೆ: counter currents.org

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top