-

ಕಥಾಸಂಗಮ

ಕಳ್ಳ

-

ಅರುಣ್‌ನನ್ನು ಭೇಟಿಯಾದಾಗ ನಾನೊಬ್ಬ ಕಳ್ಳನಾಗಿದ್ದೆ. ನನಗೆ ಕೇವಲ ಹದಿನೈದು ವರ್ಷಗಳಾದರೂ ಅನುಭವದಿಂದ ಕೈ ಚೆನ್ನಾಗಿ ಪಳಗಿತ್ತು.

ಅಖಾಡದಲ್ಲಿ ಕುಸ್ತಿ ಆಡುತ್ತಿದ್ದವರನ್ನು ನೋಡುತ್ತಿದ್ದ ಅರುಣ್ ಬಳಿ ಹೋದೆ. ಸುಮಾರು ಇಪ್ಪತ್ತು ವರ್ಷ ಪ್ರಾಯದ ತೆಳ್ಳಗೆ ಉದ್ದಕ್ಕಿದ್ದ ಅರುಣ್ ಒಳ್ಳೆಯವನಂತೆ ಕಂಡುಬಂದ. ನನಗೆ ಅಂಥವರೇ ಬೇಕಾಗಿದ್ದದ್ದು. ಈಚೆಗೆ ಯಾವ ಅದೃಷ್ಟದ ಹಣವೂ ಕೈಗೆ ತಗುಲಿರಲಿಲ್ಲ. ಹಾಗಾಗಿ ಈತನ ನಂಬಿಕೆಯನ್ನು ಗಳಿಸಬೇಕು.

ಕುಸ್ತಿ ನೋಡುವುದರಲ್ಲಿ ಅರುಣ್ ಮಗ್ನನಾಗಿದ್ದ. ಕೆಮ್ಮಣ್ಣಿನ ಮೇಲೆ ಇಬ್ಬರು ಮದಗಜಗಳಂತೆ ಒಬ್ಬರಿಗೊಬ್ಬರು ಪಟ್ಟುಗಳನ್ನು ಹಾಕುತ್ತಾ ತೊಡೆತಟ್ಟಿ ಸೆಣಸುತ್ತಿದ್ದರು.

ಅರುಣ್‌ನನ್ನು ಮಾತಿಗೆಳೆದೆ. ‘ನೀವೂ ಕುಸ್ತಿಪಟುವಿನಂತೆಯೇ ಇದ್ದೀರಿ’ ಅಂದೆ.

‘ನೀನೂ ಅಷ್ಟೆ’ ಅಂದ. ಮೂಳೆ ಚಕ್ಕಳದಂತೆ ಒಣಕಲು ಮೈಯ ನನ್ನ ಬಗ್ಗೆ ಹಾಗೆ ಹೇಳಿದಾಗ ಮುಜುಗರವಾಯಿತು.

‘ಹೌದು, ನಾನೂ ಆಗಾಗ ಕುಸ್ತಿ ಮಾಡ್ತೀನಿ’ ಅಂದೆ.

‘ಏನು ನಿನ್ನ ಹೆಸರು?’

‘ದೀಪಕ್’ ಎಂದು ಸುಳ್ಳು ಹೇಳಿದೆ. ಇದು ನನ್ನ ಐದನೇ ಹೆಸರಿರಬೇಕು. ಈ ಹಿಂದೆ ರಣಬೀರ್, ಸುಧೀರ್, ತ್ರಿಲೋಕ್, ಸುರೀಂದರ್ ಎಂದೆಲ್ಲಾ ಹೆಸರಿಟ್ಟುಕೊಂಡಿದ್ದೆ. ಅರುಣ್ ಕುಸ್ತಿ ಕುರಿತು ಮಾತನಾಡತೊಡಗಿದ. ನಾನು ಹೆಚ್ಚು ಮಾತನಾಡಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಪ್ರೇಕ್ಷಕರ ನಡುವಿನಿಂದ ಅರುಣ್ ಹೊರಬಂದ. ನಾನು ಹಿಂಬಾಲಿಸಿದೆ. ‘ಚೆನ್ನಾಗಿತ್ತಾ?’ ಅಂದ.

ನಕ್ಕೆ.‘ನಮಗೆ ನಿಮ್ಮ ಬಳಿ ಕೆಲಸ ಕೊಡಿ’ ಅಂದೆ.

ನಡೆಯುತ್ತಲೇ,‘ನನ್ನ ಬಳಿ ಕೆಲಸ ಇದೆ ಎಂದು ನಿನಗೆ ಹೇಗೆ ಅನ್ನಿಸ್ತು?’

‘ನಾನು ಬೆಳಗ್ಗೆಯಿಂದ ಒಳ್ಳೆಯವರ ಬಳಿ ಕೆಲಸಕ್ಕೆ ಸೇರಬೇಕೆಂದು ಹುಡುಕುತ್ತಾ ಇದ್ದೆ. ನೀವು ಕಾಣಿಸಿದಿರಿ. ಅದಕ್ಕೆ ಕೇಳಿದೆ.’

‘ನನ್ನನ್ನು ಹೊಗಳ್ತಾ ಇದ್ದೀಯ, ಇರಲಿ ಪರವಾಗಿಲ್ಲ. ಆದರೆ ನೀನು ನನ್ನಲ್ಲಿ ಕೆಲಸ ಮಾಡಲಾರೆ.’

‘ಏಕೆ?’

‘ಏಕೆಂದರೆ ನಾನು ನಿನಗೆ ಸಂಬಳ ಕೊಡಲಾರೆ.’

ನಾನು ಈ ವ್ಯಕ್ತಿಯನ್ನು ತಪ್ಪಾಗಿ ಅಂದಾಜಿಸಿದೆನೇ ಎಂದು ಯೋಚಿಸಿದೆ. ‘ಊಟ ಹಾಕ್ತೀರಾ?’ ಅಂತ ಕೇಳಿದೆ. ‘ಅಡುಗೆ ಮಾಡಲು ಬರುತ್ತಾ?’

‘ಬರುತ್ತೆ’ ಎಂದು ಸುಳ್ಳು ಹೇಳಿದೆ.

‘ನೀನು ಅಡುಗೆ ಮಾಡಿದರೆ,ನನ್ನ ಬಳಿ ನಿನಗೆ ಊಟ ಸಿಗುತ್ತೆ ’ ಎಂದು ಹೇಳಿ ತನ್ನ ಮನೆಗೆ ಕರೆದೊಯ್ದ.

‘ವೆರಾಂಡದಲ್ಲಿ ನೀನು ಮಲಗಬಹುದು’ ಎಂದು ತಿಳಿಸಿದ. ಅಂದರೆ ಹೆಚ್ಚೂ ಕಡಿಮೆ ನನ್ನದು ಬೀದಿಯಲ್ಲಿ ಮಲಗುವ ಪರಿಸ್ಥಿತಿ!

ನಾನು ಮಾಡಿದ ಅಡುಗೆ ಕೆಟ್ಟದಾಗಿತ್ತು ಅನ್ನಿಸುತ್ತೆ. ಅರುಣ್ ಅದನ್ನು ಪಕ್ಕದ ಮನೆಯ ಬೆಕ್ಕಿಗೆ ತಿನ್ನಲು ಕೊಟ್ಟು, ‘ನೀನಿನ್ನು ಹೋಗಬಹುದು’ ಅಂದ. ಆದರೆ ನಾನು ಅಲ್ಲೇ ತಲೆ ಕೆರೆದುಕೊಂಡು ನಿಂತೆ. ನನ್ನನ್ನು ನೋಡಿ ಜೋರಾಗಿ ನಕ್ಕ. ಹತ್ತಿರ ಕರೆದು ತಲೆ ಸವರಿ, ಬೆಳಗ್ಗೆ ಅಡುಗೆ ಮಾಡುವುದನ್ನು ಕಲಿಸುವುದಾಗಿ ಹೇಳಿದ. ಅಡುಗೆ ಮಾಡುವುದನ್ನಷ್ಟೇ ಅಲ್ಲ, ನನ್ನ ಹೆಸರು, ಅವನ ಹೆಸರನ್ನೂ ಬರೆಯುವಷ್ಟು ಅಕ್ಷರಗಳನ್ನು ಕಲಿಸಿದ. ಹೀಗೇ ಕಲಿತರೆ ಮುಂದೆ ನನಗೆ ಓದು ಬರಹ ಕಲಿಸುವುದಾಗಿ ಹೇಳಿದ. ಜೇಬಲ್ಲಿ ಕಾಸಿಲ್ಲದಿದ್ದರೇನಂತೆ ಪೇಪರಿನಲ್ಲಿ ಹಣ ಲೆಕ್ಕ ಹಾಕುವುದನ್ನೂ ನನಗೆ ಕಲಿಸುವನಂತೆ!

ಅರುಣ್ ಬಳಿ ಕೆಲಸಮಾಡಲು ಈಗ ನನಗೆ ಯಾವುದೇ ಸಮಸ್ಯೆಯಿರಲಿಲ್ಲ. ಬೆಳಗ್ಗೆ ಟೀ ಮಾಡಿ, ದಿನದ ಅಡುಗೆಗೆ ಬೇಕಾದ ಸಾಮಾನು ತರಲು ಹೋಗುತ್ತಿದ್ದೆ. ಅದರಲ್ಲಿ ಅಲ್ಪಸ್ವಲ್ಪ ಹಣ ಉಳಿಸಿಕೊಳ್ಳುತ್ತಿದ್ದೆ. ನನಗೆ ಸಂಬಳ ಕೊಡುತ್ತಿರಲಿಲ್ಲ. ಹಾಗಾಗಿ, ನಾನು ಕೊಂಚ ಹಣ ಉಳಿಸಿಕೊಳ್ಳುವುದು ಗೊತ್ತಾದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ನನಗೆ ಬರೆಯಲು ಕಲಿಸುತ್ತಿದ್ದುದರಿಂದ ಅರುಣ್ ಬಗ್ಗೆ ಗೌರವ ಹೆಚ್ಚಾಗಿತ್ತು. ವಿದ್ಯಾವಂತನಾದರೆ ಹೆಚ್ಚು ಹಣ ಸಂಪಾದಿಸಬಹುದು. ಅದು ಸಾಧನೆಗೆ ದಾರಿ. ಪ್ರಾಮಾಣಿಕ ಬದುಕನ್ನೂ ರೂಪಿಸಿಕೊಳ್ಳಬಹುದು.

ಅರುಣ್ ಪತ್ರಿಕೆಗಳಿಗೆ ಬರೆದು ಹಣ ಸಂಪಾದಿಸುತ್ತಿದ್ದ, ಒಂದು ವಾರ ಯಾರಿಂದಲೋ ಹಣ ಸಾಲ ತಂದರೆ ಮುಂದಿನ ವಾರ ವಾಪಸ್ ಮಾಡುತ್ತಿದ್ದ. ತನಗೆ ಬರುವ ಚೆಕ್‌ಗೆ ಕಾದಿರುತ್ತಿದ್ದು, ಅದು ಬರುತ್ತಿದ್ದಂತೆಯೇ ಧಾಂ ಧೂಂ ಎಂದು ಖರ್ಚು ಮಾಡಿಬಿಡುತ್ತಿದ್ದ.

ಒಂದು ಸಂಜೆ ಅರುಣ್ ಒಂದು ಕಂತೆ ನೋಟುಗಳೊಂದಿಗೆ ಬಂದ. ತಲೆದಿಂಬಿನ ಬಳಿ ಹಾಸಿಗೆಯ ಕೆಳಗೆ ಅದನ್ನು ಇಟ್ಟಿದ್ದು ನೋಡಿದೆ.

ಸುಮಾರು ಹದಿನೈದು ದಿನಗಳಿಂದ ಅರುಣ್ ಬಳಿ ಕೆಲಸ ಮಾಡುತ್ತಿರುವೆ. ಸಾಮಾನು ತರುವಾಗ ಕೊಂಚ ಹಣ ಉಳಿಸಿಕೊಂಡಿದ್ದು ಬಿಟ್ಟರೆ ಉಳಿದಂತೆ ಅವನಿಂದೇನೂ ತೆಗೆದುಕೊಂಡಿರಲಿಲ್ಲ. ಅವಕಾಶಗಳಿದ್ದರೂ ದುರ್ಬಳಕೆ ಮಾಡಿರಲಿಲ್ಲ. ಮನೆಯ ಕೀ ನನ್ನ ಬಳಿಯೂ ಒಂದಿತ್ತು. ಅರುಣ್ ಇಲ್ಲದೇ ಇದ್ದಾಗಲೂ ಮನೆಯೊಳಗೆ ಹೋಗಿ ಬರುವ ಅವಕಾಶವಿತ್ತು. ಅನ್ಯರನ್ನು ಇಷ್ಟೊಂದು ನಂಬುವ ಮನುಷ್ಯನನ್ನು ನಾನು ನೋಡಿಯೇ ಇಲ್ಲ. ಹಾಗಾಗಿಯೇ ಇರಬೇಕು ಇವನ ಬಳಿ ಕಳ್ಳತನ ಮಾಡಿರಲಿಲ್ಲ. ದುರಾಸೆಯ ಮನುಷ್ಯನ ಬಳಿ ಕಳ್ಳತನ ಮಾಡಬೇಕು ಅನ್ನಿಸುತ್ತೆ. ಸಾಹುಕಾರನ ಬಳಿ ಕಳ್ಳತನ ಮಾಡಿದರೆ ಆತ ಹೆಚ್ಚೇನೂ ಕಳೆದುಕೊಂಡಂತೆ ಆಗದು. ಆದರೆ ಬಡವನ ಬಳಿ ಕಳ್ಳತನ ಮಾಡುವುದು ಕಷ್ಟ. ಅದರಲ್ಲೂ ಕಳ್ಳತನದ ಬಗ್ಗೆ ಕಾಳಜಿ ಕೂಡ ಮಾಡದವನ ಬಳಿ ಇನ್ನೂ ಕಷ್ಟಕಷ್ಟ.

ದುರಾಸೆಯವ, ಸಾಹುಕಾರ ಅಥವಾ ಸದಾ ಎಚ್ಚರದಿಂದಿರುವವರು ಯಾರೂ ಹಾಸಿಗೆ ಕೆಳಗೆ ಹಣ ಇಡುವುದಿಲ್ಲ.ಬೀರೂವಿನಲ್ಲಿಟ್ಟು ಬೀಗ ಹಾಕುತ್ತಾರೆ. ಅರುಣ್ ಹಣ ಇಟ್ಟಿರುವ ರೀತಿ ಹೇಗಿದೆಯೆಂದರೆ, ಅವನಿಗೆ ತಿಳಿಯದಂತೆ ಅದನ್ನು ಎಗರಿಸುವುದು ನನಗೆ ಮಕ್ಕಳಾಟದಂತೆ.

ನನ್ನ ಕೈಕಸುಬಿನ ಕೆಲಸ ಮಾಡಿ ಬಹಳ ದಿನಗಳಾದವು. ಅಭ್ಯಾಸ ತಪ್ಪಿದಂತಿದೆ... ನಾನು ಹಣ ತೆಗೆದುಕೊಳ್ಳದಿದ್ದರೆ ಅವನೇನೂ ಸುಮ್ಮನಿರುವುದಿಲ್ಲ. ತನ್ನ ಸ್ನೇಹಿತರಿಗೆ ಖರ್ಚು ಮಾಡುತ್ತಾನೆ... ನನಗೆ ಹೇಗಿದ್ದರೂ ಸಂಬಳ ಕೊಡುವುದಿಲ್ಲ...

ಅರುಣ್ ನಿದ್ರಿಸುತ್ತಿದ್ದ, ಬೆಳದಿಂಗಳು ವರಾಂಡದ ಮೂಲಕ ಹಾದು ಹಾಸಿಗೆಯ ಮೇಲೂ ಬಿದ್ದಿತ್ತು. ಮೆಲ್ಲನೆ ಎದ್ದೆ. ಕಂಬಳಿಯನ್ನು ಹೊದ್ದುಕೊಂಡೆ. ನೋಟಿನ ಕಂತೆಯನ್ನು ಕದ್ದ ನಂತರ ನಾನು ಊರು ಬಿಡಬೇಕು. ಹತ್ತು ಮೂವತ್ತರ ಅಮೃತಸರ ಎಕ್ಸ್‌ಪ್ರೆಸ್ ಹಿಡಿದರೆ ಕೆಲಸವಾದಂತೆ.

ಕಂಬಳಿಯನ್ನು ಅಲ್ಲೇ ಬಿಟ್ಟು, ಮೆಲ್ಲನೆ ತೆವಳುತ್ತಾ ಹಾಸಿಗೆ ಬಳಿ ಸಾಗಿದೆ. ಅರುಣ್ ನೆಮ್ಮದಿಯಾಗಿ ಮಲಗಿದ್ದ. ಅವನ ಮುಖ ಪ್ರಶಾಂತವಾಗಿತ್ತು. ಹಲವು ಗೀಚುಗಾಯಗಳಿಂದ ಕೂಡಿದ ನನ್ನ ಮುಖವನ್ನು ಹೋಲಿಕೆ ಮಾಡಿಕೊಂಡೆ.

ಮೆಲ್ಲನೆ ನನ್ನ ಕೈ ಹಾಸಿಗೆ ಕೆಳಗೆ ಸರಿಯಿತು. ಬೆರಳುಗಳು ನೋಟಿನ ಕಂತೆಯನ್ನು ಹುಡುಕಿ ದವು. ಸಿಕ್ಕೊಡನೆ ಸರಾಗವಾಗಿ ಹಿಂದಕ್ಕೆ ಬಂತು. ಅರುಣ್ ನಿದ್ದೆಯಲ್ಲೇ ಮಗ್ಗುಲಾಗಿ ನನ್ನೆಡೆಗೆ ತಿರುಗಿದ. ಇನ್ನೂ ಹಾಸಿಗೆ ಮೇಲೆಯೇ ಇದ್ದ ನನ್ನ ಕೈಬೆರಳಿಗೆ ಅವನ ತಲೆಗೂದಲು ತಾಕಿತು.

ಕೂದಲು ತಕಿದೊಡನೆ ಭಯವಾಯ್ತು. ಮೆಲ್ಲನೆ ತೆವಳುತ್ತಾ ಕೋಣೆೆಯಿಂದ ಹೊರಬಂದೆ.

ರಸ್ತೆಗೆ ಬಂದವನೇ ಓಡತೊಡಗಿದೆ. ರೈಲು ನಿಲ್ದಾಣಕ್ಕೆ ಹೋಗಲು ಪೇಟೆ ಬೀದಿಯಲ್ಲಿ ಓಡಿದೆ. ಅಂಗಡಿಗಳೆಲ್ಲ ಮುಚ್ಚಿದರೂ ಕೆಲವಡೆ ಇನ್ನೂ ದೀಪ ಉರಿಯುತ್ತಿತ್ತು. ಫೈಜಾಮಾದ ಲಾಡಿಗೆ ನೋಟಿನ ಕಂತೆಯನ್ನು ಸಿಕ್ಕಿಸಿಕೊಂಡಿದ್ದೆ, ನಿಂತು ಹಣವನ್ನು ಎಣಿಸಬೇಕೆಂದು ಅನ್ನಿಸಿತು. ರೈಲಿಗೆ ತಡವಾಗಬಹುದು. ಗಡಿಯಾರದ ಗೋಪುರದಲ್ಲಿ ಸಮಯ ಹತ್ತು ಇಪ್ಪತ್ತು ತೋರಿಸುತ್ತಿತ್ತು. ಓಡುತ್ತಿದ್ದವನು ನಿಧಾನಿಸಿ ನಡೆಯತೊಡಗಿದೆ, ಹಣ ಎಣಿಸಿದೆ. ಐದು ರೂ.ಗಳ ನೂರು ನೋಟುಗಳಿದ್ದವು. ಸಾಕಷ್ಟು ಹಣ. ಎರಡು ತಿಂಗಳು ರಾಜನಂತೆ ಇರಬಹುದು.

ನಿಲ್ದಾಣ ತಲುಪಿದವನೇ ಟಿಕೆಟ್ ಕೊಳ್ಳಲು ಹೋಗಲಿಲ್ಲ ( ನನ್ನ ಜೀವಮಾನದಲ್ಲಿ ಒಮ್ಮೆಯೂ ಟಿಕೆಟ್ ಖರೀದಿಸಿ ಪ್ರಯಾಣಿಸಿಲ್ಲ). ಸೀದ ಪ್ಲಾಟ್‌ಫಾರಂಗೆ ಹೋದೆ. ಅಮೃತಸರ ಎಕ್ಸಪ್ರೆಸ್ ಹೊರಡುತ್ತಿತ್ತು. ಆರಾಮವಾಗಿ ಹೋಗಿ ಯಾವುದಾದರೂ ಬೋಗಿ ಹತ್ತಬಹುದಾಗಿತ್ತು. ಆದರೆ ಅದೇಕೋ ಏನೋ ನಾನು ಹಿಂಜರಿದೆ.

ಗರಬಡಿದವನಂತೆ ರೈಲು ನನ್ನ ಮುಂದೆಯೇ ಹೋಗುತ್ತಾ ಇರುವುದನ್ನು ನೋಡುತ್ತಾ ನಿಂತೆ.

ರೈಲು ಹೋದ ನಂತರ ಜನರ ಗದ್ದಲವೆಲ್ಲ ಕರಗಿತು. ಎಲ್ಲರೂ ಹೋದ ಮೇಲೆ ಆ ನಿರ್ಜನ ಪ್ಲಾಟ್‌ಫಾರಂನಲ್ಲಿ ನಾನೊಬ್ಬನೇ ನಿಂತಿದ್ದೆ. ಕದ್ದಿದ್ದ ಆ ನೂರು ನೋಟುಗಳ ಕಂತೆ ನನ್ನ ಒಂಟಿತನವನ್ನು ಇನ್ನಷ್ಟು ಹೆಚ್ಚಿಸಿತ್ತು. ರಾತ್ರಿ ಎಲ್ಲಿ ಕಳೆಯುವುದು? ನನಗೆ ಸ್ನೇಹಿತರು ಯಾರೂ ಇರಲಿಲ್ಲ. ಇದ್ದರೂ ಅವರಿಂದ ತೊಂದರೆಯೇ. ಹೊಟೇಲ್‌ನಲ್ಲಿ ಉಳಿದರೆ ಎಲ್ಲರ ಕಣ್ಣಿಗೂ ಬೀಳುತ್ತೇನೆ. ಇನ್ನು ನನಗೆ ಚೆನ್ನಾಗಿ ಗೊತ್ತಿದ್ದ ನಂಬಿಕೆಗೆ ಅರ್ಹನಾದ ವ್ಯಕ್ತಿಯ ಹತ್ತಿರ ಹೋಗೋಣವೆಂದರೆ, ಅವನಿಂದ ಹಣ ಕದ್ದಿದ್ದೇನೆ!

ನಿಲ್ದಾಣದಿಂದ ಪೇಟೆ ಬೀದಿಗೆ ಹೋದೆ. ಪೇಟೆ ನಿರ್ಜನವಾಗಿತ್ತು. ದೀಪಗಳನ್ನು ಆರಿಸಿದ್ದರು. ಅರುಣ್ ನೆನಪಾದ. ತನ್ನ ಬಳಿ ನಡೆದ ಕಳ್ಳತನದ ಬಗ್ಗೆ ಅರಿವಿಲ್ಲದೇ ನೆಮ್ಮದಿಯಿಂದ ನಿದ್ರಿಸುತ್ತಿರುತ್ತಾನೆ.

ಕಳ್ಳತನದ ಅನುಭವದಿಂದ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡವರ ಮುಖದ ಭಾವನೆಗಳನ್ನು ನಾನು ಬಲ್ಲೆ. ದುರಾಸೆಯ ಮನುಷ್ಯ ಕಂಗಾಲಾಗುತ್ತಾನೆ, ಶ್ರೀಮಂತ ಕೋಪಗೊಳ್ಳುತ್ತಾನೆ, ಬಡವನಾದರೆ ಭಯಪಡುತ್ತಾನೆ. ಆದರೆ ನನಗೆ ಗೊತ್ತು ಅರುಣ್ ಮುಖದಲ್ಲಿ ಈ ಮೂರು ಭಾವನೆಗಳು ಕಂಡುಬರುವುದಿಲ್ಲ (ತನ್ನ ಹಣ ಕಳ್ಳತನವಾಗಿದ್ದರೂ). ಆತ ದುಃಖಪಡುತ್ತಾನೆ. ಹಣ ಹೋಗಿದ್ದಕ್ಕಲ್ಲ. ನಾನು ಮಾಡಿದ ನಂಬಿಕೆ ದ್ರೋಹಕ್ಕೆ.

ದಾರಿಯಲ್ಲಿ ಕಂಡ ಕಲ್ಲು ಬೆಂಚಿನ ಮೇಲೆ ಕುಕ್ಕುರುಗಾಲು ಹಾಕಿ ಕುಳಿತೆ. ಚಳಿಯಿತ್ತು. ಕಂಬಳಿಯನ್ನು ತರಬೇಕಿತ್ತು ಅಂದುಕೊಂಡೆ. ತುಂತುರು ಮಳೆ ಹನಿ ಪ್ರಾರಂಭವಾಯಿತು. ಹಾಗೇ ಮಳೆ ಜೋರಾಯ್ತು. ನನ್ನ ಅಂಗಿ ಮತ್ತು ಪೈಜಾಮ ಮೈಗೆ ಅಂಟಿಕೊಂಡಿತ್ತು. ಗಾಳಿಯ ರಭಸಕ್ಕೆ ಮಳೆಯ ಹನಿಗಳು ಮುಖಕ್ಕೆ ರಾಚುತ್ತಿದ್ದವು.. ಮೊದಲು ಹೀಗೆಯೇ ಕಲ್ಲುಬೆಂಚುಗಳ ಮೇಲೆ ರಾತ್ರಿ ಕಳೆಯುವುದು ರೂಢಿಯಾಗಿತ್ತು. ಆದರೆ ವರಾಂಡ ನನ್ನನ್ನು ಬದಲಾಯಿಸಿದೆ.

ಅಲ್ಲಿಂದ ಪೇಟೆ ಬೀದಿಗೆ ಹೋಗಿ ಮುಚ್ಚಿದ ಅಂಗಡಿಯೊಂದರ ಮೆಟ್ಟಿಲ ಮೇಲೆ ಕುಳಿತೆ. ಕೆಲ ಅಲೆಮಾರಿಗಳು ಕಂಬಳಿ ಹೊದ್ದು ಅಲ್ಲಿ ಮಲಗಿದ್ದರು. ಗಡಿಯಾರದ ಗೋಪುರ ಮಧ್ಯರಾತ್ರಿ ಎಂದು ಹೇಳುತ್ತಿತ್ತು. ಹಣವನ್ನು ಮುಟ್ಟಿ ನೋಡಿಕೊಂಡೆ. ಮಳೆಗೆ ಚೆನ್ನಾಗಿ ನೆನೆದು ಗರಿಗರಿಯಾಗಿದ್ದ ನೋಟುಗಳು ಮೆತ್ತಗಾಗಿದ್ದವು.

ಅರುಣನ ಹಣವಿದು. ಬೆಳಗ್ಗೆ ನನಗೆ ಅದರಲ್ಲಿ ಒಂದು ರೂಪಾಯಿ ಕೊಟ್ಟು ಸಿನೆಮಾಗೆ ಹೋಗಿ ಬಾ ಎನ್ನುತ್ತಿದ್ದನೇನೋ. ಆದರೆ ಈಗ ಅಷ್ಟೂ ಹಣ ನನ್ನ ಬಳಿಯಿದೆ. ಅವನಿಗೆ ಅಡುಗೆ ಮಾಡಿ ಹಾಕುವಂತಿಲ್ಲ, ಪೇಟೆಗೆ ಹೋಗಿ ಸಾಮಾನು ತರುವಂತಿಲ್ಲ, ಓದು ಬರಹ ಕಲಿಯುವಂತಿಲ್ಲ.

ಅರೆ, ಓದು ಬರಹ...

ಹಣ ಕದಿಯುವ ಉತ್ಸಾಹದಲ್ಲಿ ನಾನು ಮುಖ್ಯವಾಗಿ ಅದನ್ನೇ ಮರೆತಿದ್ದೆ. ಓದು ಬರಹ ಚೆನ್ನಾಗಿ ಕಲಿತರೆ ಮುಂದೊಂದು ದಿನ ಈ ನೂರು ನೋಟುಗಳಿಗಿಂತ ಹೆಚ್ಚು ಸಂಪಾದಿಸಬಹುದು. ಕದಿಯುವುದು ಅತ್ಯಂತ ಸುಲಭದ ಕೆಲಸ (ಹಾಗೇ ಸಿಕ್ಕಿ ಹಾಕಿಕೊಳ್ಳುವುದೂ ಸುಲಭವೇ). ಆದರೆ, ಸಾಧಕನಾಗಿ, ದೊಡ್ಡ ಮನುಷ್ಯನಾಗಿ ಹೆಸರು ಮಾಡಬೇಕಲ್ಲ. ವಿದ್ಯೆ ಕಲಿಯಲು ನಾನು ಅರುಣ್ ಹತ್ತಿರ ಹೋಗಲೇಬೇಕು ಅಂದುಕೊಂಡೆ.

ಬಹುಶಃ ಅರುಣ್ ಬಗ್ಗೆ ನನಗೆ ಇದ್ದ ಕಾಳಜಿ ಕೂಡ ಅವನೆಡೆಗೆ ಸೆಳೆಯಿತೇನೋ. ಸಹಾನುಭೂತಿ ನನ್ನ ದೌರ್ಬಲ್ಯ ಕೂಡ. ಹಾಗಾಗಿಯೇ ಹಲವು ಬಾರಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದೆ. ನಿಜವಾದ ಕಳ್ಳ ಈ ದೌರ್ಬಲ್ಯಗಳನ್ನು ಮೀರಬೇಕು. ಅರುಣ್ ಅಂದ್ರೆ ನನಗೆ ಇಷ್ಟ. ಅವನ ಕುರಿತಾದ ಕಾಳಜಿ, ಸಹಾನುಭೂತಿ, ಎಲ್ಲಕ್ಕಿಂತ ಮಿಗಿಲಾಗಿ ಓದು ಬರಹ ಕಲಿಯಬೇಕೆಂಬ ನನ್ನ ತುಡಿತ ಅರುಣ್ ಮನೆಯ ಕಡೆಗೆ ನನ್ನನ್ನು ಸೆಳೆಯಿತು.

ಹೆದರಿಕೆಯಿಂದಲೇ ಅರುಣ್ ಮನೆಗೆ ಹೋದೆ. ಕದಿಯುವುದು ಸುಲಭ. ಆದರೆ, ಅದನ್ನೇ ತಿಳಿಯದಂತೆ ವಾಪಸ್ ಮಾಡುವುದು ಬಹಳ ಕಷ್ಟ. ಹಾಸಿಗೆ ಹತ್ತಿರ ಹೋದಾಗ, ಹಣ ಹಿಡಿದಿದ್ದ ನಾನು ಸಿಕ್ಕಿಹಾಕಿಕೊಂಡರೆ? ಹಾಸಿಗೆ ಕೆಳಗೆ ಕೈ ಇಟ್ಟಾಗ ಅವನಿಗೆ ಎಚ್ಚರವಾದರೆ ಏನೆಂದು ಹೇಳಲಿ. ಅರುಣ್ ಆ ಸಮಯದಲ್ಲಿ ನನ್ನನ್ನು ಹಿಡಿದರೆ ನನ್ನ ಕಥೆ ಮುಗಿದಂತೆಯೇ.

ಮೆಲ್ಲನೆ ಬಾಗಿಲನ್ನು ತೆರೆದೆ. ನನಗಿಂತ ಮೊದಲೇ ಬೆಳದಿಂಗಳು ಒಳಗೆ ಹೋಯಿತು. ಕೋಣೆಯ ಕತ್ತಲಿಗೆ ನನ್ನ ಕಂಗಳು ಹೊಂದಿಕೊಂಡವು. ಅರುಣ್ ಇನ್ನೂ ಮಲಗಿದ್ದ. ತೆವಳುತ್ತಾ ಹಾಸಿಗೆಯ ಬಳಿ ಹೋದೆ. ಸೊಂಟದಲ್ಲಿ ಸಿಕ್ಕಿಸಿದ್ದ ನೋಟಿನ ಕಂತೆ ತೆಗೆದೆ. ಹಣದ ಸ್ಪರ್ಶವು ವಿವಿಧ ಭಾವನೆಗಳನ್ನು ಹೊಮ್ಮಿಸಿತು. ಕೆಲ ಕ್ಷಣ ಕದಲದೆ ಉಳಿದೆ. ನಂತರ ಹಾಸಿಗೆ ತಳವನ್ನು ತಡಕಿ ಮೆಲ್ಲಗೆ ನೋಟಿನ ಕಂತೆಯನ್ನು ಅಲ್ಲಿ ಸೇರಿಸಿದೆ.

ಬೆಳಗ್ಗೆ ನನಗೆ ಎಚ್ಚರವಾಗುವಷ್ಟರಲ್ಲಿ ಅರುಣ್ ಎದ್ದು ಟೀ ಮಾಡಿದ್ದ. ಅವನ ಮುಖವನ್ನು ನೋಡಲು ನನಗೆ ಮುಜುಗರವಾಯಿತು. ನನ್ನೆಡೆಗೆ ಅರುಣ್ ಕೈ ಚಾಚಿದ್ದ. ಅವನ ಬೆರಳ ಸಂದಿಯಲ್ಲಿ ಐದು ರೂ.ಗಳ ನೋಟೊಂದಿತ್ತು. ನನ್ನ ಎದೆ ಧಸಕ್ಕೆಂದಿತು.

‘ನಿನ್ನೆ ಒಳ್ಳೆ ಸಂಪಾದನೆಯಾಯ್ತು’ ಅಂದ, ‘ಇನ್ನು ಮುಂದೆ ನಿನಗೆ ಸಂಬಳ ಕೊಡ್ತೀನಿ’..

ಮುರಿದುಬಿದ್ದಂತಿದ್ದ ನನ್ನಲ್ಲಿನ ಉತ್ಸಾಹ ಪುಟಿದೆದ್ದಿತು. ಹಣ ವಾಪಸ್ ಮಾಡಿದ್ದಕ್ಕೆ ನನ್ನ ಬಗ್ಗೆಯೇ ಮೆಚ್ಚುಗೆ ಮೂಡಿತು.

ಆದರೆ, ಆ ಐದು ರೂ. ಪಡೆದಾಗ ಅರುಣ್‌ಗೆ ಎಲ್ಲಾ ಗೊತ್ತಾಗಿದೆ ಎಂದು ಅನಿಸಿತು. ಏಕೆಂದರೆ, ಆ ನೋಟು ರಾತ್ರಿಯ ಮಳೆಯಿಂದ ಇನ್ನೂ ಒದ್ದೆಯಾಗಿಯೇ ಇತ್ತು.

‘ಇವತ್ತು ನಾನು ನಿನ್ನ ಹೆಸರಿನ ಜೊತೆ ಇನ್ನಷ್ಟು ಬರೆಯಲು ಕಲಿಸ್ತೀನಿ’ ಅಂದ. ರಾತ್ರಿಯ ಸತ್ಯ ಅವನಿಗೆ ತಿಳಿದಿದ್ದರೂ, ತನ್ನ ಮಾತಲ್ಲಾಗಲೀ, ನೋಟದಲ್ಲಾಗಲೀ ತೋರ್ಪಡಿಸಲಿಲ್ಲ.

ನನ್ನ ಮುಖವರಳಿತು. ಅರುಣ್‌ನಡೆಗೆ ನೋಡಿ ಮುಗುಳ್ನಕ್ಕೆ. ನನಗೇ ತಿಳಿಯದಂತೆ ಮನದಾಳದಿಂದ ಹೊರಹೊಮ್ಮಿದ ಸಂತಸದ ನಗುವದು.

ಕೃಪೆ: ನವಕರ್ನಾಟಕ ಪ್ರಕಾಶನ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top