ನೀವೂ ಕಸ ಕಳಿಸಿ

ನಿಮ್ಮ ಕಸ ನಿಮಗೆ

-

1998ನೇ ಇಸವಿ. ಕುಂದಾಪುರ ತಾಲೂಕಿನ ಗುಡ್ಡಿಯಂಗಡಿಯಲ್ಲಿರುವ ನಮ್ಮಭೂಮಿಯ ಭೀಮ ಕಲಾರಂಗ ಎಂಬ ದುಡಿಯುವ ಮಕ್ಕಳ ಕಲಾತಂಡವು ಎ.ಕೆ.ಹಿಮಕರ ಅವರ ನಿರ್ದೇಶನದಲ್ಲಿ ಪ್ಲಾಸ್ಟಿಕ್ ಮತ್ತು ಏಡ್ಸ್ ವಿರುದ್ಧ ಉಡುಪಿ ಜಿಲ್ಲೆಯಾದ್ಯಂತ ಬೀದಿನಾಟಕಗಳನ್ನು ಆಡುತ್ತಿತ್ತು. ಆಗಷ್ಟೇ ಪಿಯುಸಿ ಮುಗಿಸಿರುವ ನಾನು ಆ ತಂಡದ ಸದಸ್ಯನಾದೆ. ಅಲ್ಲಿಂದ ಆರಂಭವಾಗಿದ್ದು ನನಗೆ ರಂಗಭೂಮಿಯ ನಂಟು. ನಾನು ಪ್ಲಾಸ್ಟಿಕ್ ಅನ್ನು ವಿರೋಧಿಸುವುದನ್ನು ಕಲಿತು ಎರಡು ದಶಕವಾಯಿತು.

ನೀನಾಸಮ್ ರಂಗ ಶಿಕ್ಷಣ ಕೇಂದ್ರದಲ್ಲಿ ರಂಗಶಿಕ್ಷಣವನ್ನು ಪಡೆದು ನಾಟಕದ ವಿದ್ಯಾರ್ಥಿಯಾಗಿದ್ದ ನನಗೆ ಸರಕಾರಿ ಪ್ರೌಢ ಶಾಲೆಯಲ್ಲಿ ನಾಟಕದ ಮೇಷ್ಟ್ರಾಗುವ ನೌಕರಿಯೂ ಸಿಕ್ಕಿತು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಮ್ಮರಗಾಲದಲ್ಲಿ ವೃತ್ತಿ ಜೀವನ ಆರಂಭವಾಗಿ ಪ್ರಸ್ತುತ ಅದೇ ತಾಲೂಕಿನ ಹೆಗ್ಗಡಹಳ್ಳಿ ಪ್ರೌಢ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೇನೆ. ಈ ವರ್ಷಕ್ಕೆ ಒಂದು ದಶಕದ ವೃತ್ತಿಜೀವನ ಪೂರೈಸಿದ್ದೇನೆ.

ಕರಾವಳಿಯ ಮೀನೂಟ ಬಿಟ್ಟು ಬಾಡೂಟದ ಮೈಸೂರು ಸೀಮೆಗೆ ಬಂದರೂ ಪ್ಲಾಸ್ಟಿಕ್ ಮಾರಿಯ ನಂಟು ಬಿಡಲಿಲ್ಲ. ರಂಗಭೂಮಿ ಎನ್ನುವ ಸಶಕ್ತ ಮಾಧ್ಯಮವನ್ನಿಟ್ಟುಕೊಂಡು ಮಕ್ಕಳಲೋಕದೊಳಗೆ ರಂಗಪ್ರವೇಶವಾಗಿದೆ. ರಂಗಾಟ, ಹಾಡು, ಕುಣಿತ, ಬಣ್ಣ, ಸಾಹಿತ್ಯ, ಪತ್ರಿಕೆ ಹೀಗೆ ನಾಟಕ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುತ್ತಾ ಮಕ್ಕಳನ್ನು ಕ್ರಿಯಾಶೀಲವಾಗಿಸುವ ಮೂಲಕ ನನ್ನ ವಿದ್ಯಾರ್ಥಿತನವನ್ನು ಜೀವಂತವಾಗಿರಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಹೆಮ್ಮರಗಾಲದ ಹೆಮ್ಮರ ಪತ್ರಿಕೆ, ಹೆಗ್ಗಡಹಳ್ಳಿಯ ಅಳ್ಳೀಮರ ಪತ್ರಿಕೆ ಮತ್ತು ಬ್ಲಾಗ್, ರಸಬಾಳೆ ಗೋಡೆ ಪತ್ರಿಕೆ, ಮಾಯದ ರಕ್ಕಸ ಕವನಗಳ ಕಟ್ಟು ಇವು ಸಾಹಿತ್ಯಕ ಚಟುವಟಿಕೆಗಳು.

ನಮ್ಮ ಪರಿಸರದ ಕುರಿತಾದ ಹಲವಾರು ನಾಟಕಗಳನ್ನು ಶಾಲೆಯಲ್ಲಿ ಆಡಿದ್ದೇವೆ. ಪ್ಲಾಸ್ಟಿಕ್ ತ್ಯಾಜ್ಯ, ಜಾಗತಿಕ ತಾಪಮಾನ, ಜೈವಿಕ ಇಂಧನ, ಹಸಿರು ಮನೆ ಪರಿಣಾಮ ಇಂತಹ ಪ್ರಮುಖವಾದ ವಿಷಯಗಳನ್ನಿಟ್ಟುಕೊಂಡು ಮಕ್ಕಳ ನಾಟಕಗಳನ್ನು ಆಡಿಸುವಾಗೆಲ್ಲ ನನಗೆ ಅನಿಸುವುದು ನಾಳೆಗಳು ನಮ್ಮದು. ನಾಳೆ ಮಕ್ಕಳದ್ದು. ಹಾಗಾಗಿ ಆ ನಾಳೆಗಳು ಸುಂದರವಾಗಿರಬೇಕಾದರೆ ಇಂದಿನಿಂದಲೇ ಜಾಗ್ರತರಾಗಬೇಕು. ಆ ಜಾಗ್ರತಿಯ ಕಿರು ಪ್ರಯತ್ನಗಳೇ ನಮ್ಮ ಮಕ್ಕಳ ಪುಟ್ಟ ಪುಟ್ಟ ನಾಟಕಗಳು.

ನಮ್ಮ ಈ ಪುಟ್ಟ ಪ್ರಯತ್ನಗಳು ನಡೆದಿರುವಾಗಲೇ ಬಾಲಿ ದ್ವೀಪದಲ್ಲಿ ಇಬ್ಬರು ಹೆಣ್ಣು ಮಕ್ಕಳು ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಹೋರಾಟ ಮಾಡಿ ಇಡೀ ದ್ವೀಪದಲ್ಲಿ ಪ್ಲಾಸ್ಟಿಕ್ ನಿಷೇಧವಾಗುವಂತೆ ಮಾಡಿದ್ದು, ಸ್ವೀಡನ್ ದೇಶದ ಗ್ರೇಟಾ ಟುನ್‌ಬರ್ಗ್‌ ಎಂಬ ಹದಿನಾರು ವರ್ಷದ ಬಾಲಕಿಯೊಬ್ಬಳು ಹವಾಮಾನ ಬದಲಾವಣೆ ಕುರಿತು ಮಕ್ಕಳನ್ನು ಸಂಘಟಿಸುತ್ತಿರುವ ಸ್ಕೂಲ್ ಸ್ಟ್ರೈಕ್ ಚಳವಳಿ ನಡೆಸುತ್ತಿರುವುದು ನಮಗೆ ಇನ್ನಷ್ಟು ಬೆಂಬಲದಂತಿದೆ. ಅವರಿಂದ ಸ್ಫೂರ್ತಿ ಪಡೆದ ನಾವು ಹೆಗ್ಗಡಹಳ್ಳಿಯ ವಿದ್ಯಾರ್ಥಿಗಳು ನಿಮ್ಮ ಕಸ ನಿಮಗೆ ಎಂಬ ಅಭಿಯಾನವನ್ನು ಈ ಎಪ್ರಿಲ್ ಮೊದಲ ವಾರದಲ್ಲಿ ಆರಂಭಿಸಿದೆವು.

ಕಳೆದ ನಾಲ್ಕು ವರ್ಷದಿಂದ ಬೇಸಿಗೆ ರಜೆ ಆರಂಭವಾಗುವುದಕ್ಕೆ ಮುಂಚೆ ಒಂದು ವಾರಗಳ ಕಾಲ ಬಣ್ಣದಮೇಳ ಎಂಬ ರಂಗಶಿಬಿರವನ್ನು ಶಾಲೆಯಲ್ಲಿ ಮಾಡುತ್ತಿದ್ದೇವೆ. ಈ ಬಾರಿ ವಿಶೇಷವಾಗಿ ಮೇಳವನ್ನು ಮಾಡಬೇಕು ಎಂದು ತೀರ್ಮಾನವಾಗಿತ್ತು; ಮತ್ತೆ ಪ್ಲಾಸ್ಟಿಕ್ ನೆನಪಾಗಿತ್ತು. ಆಗ ಹೊಳೆದದ್ದೇ ‘ನಿಮ್ಮ ಕಸ ನಿಮಗೆ’.

ಮಕ್ಕಳು ತಿನ್ನುವ ತಿಂಡಿ, ಆಟಿಕೆ ಸಾಮಾನು, ಮನೆ ಬಳಕೆ ಸಾಮಗ್ರಿ, ಆಹಾರ ಪದಾರ್ಥ ಹೀಗೆ ನಾನಾ ವಿಧದ ವಸ್ತುಗಳು ಆಕರ್ಷಕವಾದ ಬಣ್ಣದ ಪ್ಯಾಕೇಟುಗಳಲ್ಲಿ ಮಾರುಕಟ್ಟೆಗೆ ಬರುತ್ತವೆ. ನಮ್ಮ ಮನೆಯೊಳಗೆ ಸೇರಿಕೊಂಡಿರುವ ದಲ್ಲಾಳಿ ಟಿವಿಯಲ್ಲಿ ಅವುಗಳ ಕುರಿತು ಜಾಹೀರಾತು ಬಂದಿರುತ್ತದೆ. ಈ ಜಾಹೀರಾತು ಎಷ್ಟು ಅಪಾಯಕಾರಿ ಎಂದರೆ ಮಕ್ಕಳ ಮೇಲೆ ಪ್ರಭಾವ ಬೀರುವಂತೆ ಮಾಡುವುದಕ್ಕೆ ಮಕ್ಕಳೇ ಅದರಲ್ಲಿ ರೂಪದರ್ಶಿಗಳಾಗಿರುತ್ತಾರೆ. ತಂದೆ ತಾಯಿ ಮಕ್ಕಳ ಒತ್ತಾಯಕ್ಕೆ ಮಣಿಯುತ್ತಾರೆ ಎಂಬುದು ಮಾರುಕಟ್ಟೆ ಜಗತ್ತಿಗೆ ತಿಳಿದುಹೋಗಿದೆ. ಮಕ್ಕಳೇ ರೂಪದರ್ಶಿ, ಗ್ರಾಹಕರಾಗಿದ್ದಾಗಲೂ ಒಂದು ಜಾಹೀರಾತು ಎಂಥ ಕೆಟ್ಟ ಸಂದೇಶ ಹರಡುತ್ತದೆ ಎಂದರೆ ಮಕ್ಕಳು ಒಬ್ಬರನ್ನೊಬ್ಬರು ಮುಟ್ಟುವುದರಿಂದ ಕೀಟಾಣು ಹರಡುತ್ತದೆ ಎಂದು!

ಗುರುಗಳಾದ ಶಿವರಾಮಯ್ಯ ಒಮ್ಮೆ ಹೇಳಿದ್ದು ಸುಂದರವಾದ ಜಾಹೀರಾತು ಕೂಡ ಬಹಳ ಅಪಾಯಕಾರಿ. ನಾವು ಏನೇ ತಂದರೂ ಅದರ ಜೊತೆಗೊಂದು ಪ್ಲಾಸ್ಟಿಕ್ ನಮ್ಮ ಮನೆಯನ್ನು ಸೇರುತ್ತದೆ. ಅದರ ವಿಲೇವಾರಿ ನಮಗಿನ್ನೂ ತಿಳಿದಿಲ್ಲ; ಎಸೆದು ಬಿಡುತ್ತೇವೆ. ವರ್ಷಕ್ಕೆ 300 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದಿಸಿ ಅದರಲ್ಲಿ ಶೇಕಡಾ ಹತ್ತರಷ್ಟನ್ನು ಮಾತ್ರ ಮರುಬಳಕೆ ಮಾಡುತ್ತೇವೆ. ಉಳಿದದ್ದೆಲ್ಲಾ ತ್ಯಾಜ್ಯ. ಪ್ರತೀ ವರ್ಷ ಹೀಗೆ ಸುರಿಯುವ ತ್ಯಾಜ್ಯ ನಮ್ಮ ಪರಿಸರವನ್ನೆಲ್ಲ ಆವರಿಸಿಬಿಟ್ಟಿದೆ. ಸಮುದ್ರದಾಳಕ್ಕೂ ಸುರಿಯುತ್ತಿದ್ದೇವೆ ಈ ಮಾರಿಯನ್ನು. ನಮಗಷ್ಟೇ ಅಲ್ಲ ಇಡೀ ಜೀವ ಸಂಕುಲಕ್ಕೆ ಗಂಡಾಂತರವನ್ನು ತಂದಿಟ್ಟಿದ್ದೇವೆ.

ಮಕ್ಕಳು ಈ ತ್ಯಾಜ್ಯದ ಕುರಿತು ಏನು ಮಾಡಬಹುದು? ನಿಮ್ಮ ಕಸ ನಿಮಗೆ. ಮಕ್ಕಳು ತಿನ್ನುವ ತಿಂಡಿಯ ಪ್ಯಾಕೇಟುಗಳನ್ನು ಆಯಾಯ ಕಂಪೆನಿಗೆ ವಾಪಸು ಕಳಿಸುವುದು. ಕಳಿಸಿಯೇಬಿಟ್ಟೆವು. ಈ ಬಾರಿಯ ಬಣ್ಣದಮೇಳದಲ್ಲಿ ಭಾರತದಲ್ಲಿ ಮಕ್ಕಳ ತಿಂಡಿಗಳನ್ನು ಉತ್ಪಾದಿಸುವ ಪೆಪ್ಸಿಕೊ, ಪಾರ್ಲೆ, ಬ್ರಿಟಾನಿಯಾ, ಐಟಿಸಿ, ನೆಸ್ಲೆ, ಹಲ್ದಿರಾಮ್‌ನಂತಹ ಪ್ರಖ್ಯಾತ ಕಂಪೆನಿಗಳಿಂದ ಹಿಡಿದು ಸ್ಥಳೀಯ ಕಂಪೆನಿಗಳವರೆಗೆ ಅವರ ಕವರುಗಳ ಜೊತೆಗೆ ನೂರು ಮಕ್ಕಳು ಸಹಿ ಮಾಡಿದ ಪತ್ರವನ್ನು ಕೊರಿಯರ್ ಮೂಲಕ ಕಳಿಸಿದ್ದೇವೆ. ‘‘ನಮ್ಮ ನಾಳೆಗಳಿಗೆ ನಿಮ್ಮ ಕಸ ಬೇಡ. ನಮ್ಮ ನಾಳೆಗಳನ್ನು ಸುಂದರವಾಗಿಡಲು ನೀವೂ ಕೈಜೋಡಿಸಿ. ನಿಮ್ಮ ಕಸವನ್ನು ವಾಪಾಸು ಪಡೆದು ಮರುಬಳಕೆ ಮಾಡಿ, ಕ್ರಮೇಣ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಲ್ಲಿಸುವತ್ತ ಯೋಚಿಸಿ’’ ಎಂದು ಪತ್ರದಲ್ಲಿ ಬರೆದಿದ್ದೇವೆ. ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇವೆ. ಯಾರಿಂದಲೂ ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ; ಹಾಗಂತ ನಾವು ಸುಮ್ಮನಿರುವುದಿಲ್ಲ.

ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಹೊಸ ಮಕ್ಕಳು ಬರುತ್ತಾರೆ. ಜೂನ್ 5 ಪರಿಸರ ದಿನದಿಂದು ಮತ್ತೆ ಕಳಿಸುತ್ತೇವೆ. ಪ್ರತೀ ತಿಂಗಳು ಕಳಿಸುತ್ತಲೇ ಇರುತ್ತೇವೆ. ನೀವೂ ನಮ್ಮ ಅಭಿಯಾನದಲ್ಲಿ ಪಾಲ್ಗೊಳ್ಳಿ. ನೀವಿರುವಲ್ಲಿಂದಲೇ ಸಾಂಕೇತಿವಾಗಿ ಕವರಿನ ಮೇಲಿರುವ ಕಂಪೆನಿ ವಿಳಾಸಕ್ಕೆ ಕಳಿಸಿ; ಎಲ್ಲರೂ ಕಳಿಸೋಣ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರುಬಳಕೆ ಮಾಡುವುದು ಶಾಶ್ವತ ಮದ್ದಲ್ಲ. ಎಲ್ಲಿಯವರೆಗೆ ಪ್ಲಾಸ್ಟಿಕ್ ಉತ್ಪಾದನೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಅದರ ತ್ಯಾಜ್ಯ ನಿಲ್ಲುವುದಿಲ್ಲ. ಅದಕ್ಕಾಗಿ ನಾವೆಲ್ಲ ಉತ್ಪಾದಕರಿಗೆ ಅವರ ತ್ಯಾಜ್ಯ ಕಳಿಸೋಣ. ವ್ಯಾಪಾರ, ಗಳಿಕೆಯ ಆಚೆಗೆ ಇರುವುದೊಂದೇ ಭೂಮಿಯ ಬಗ್ಗೆ ಕಿಂಚಿತ್ ಯೋಚಿಸುವಂತಾಗಲಿ. ಹಿರಿಯರಾದ ನಾಗೇಶ ಹೆಗಡೆಯವರು ಹೇಳಿದಂತೆ ನಮಗೆಲ್ಲ ಪ್ರತಿ ದಿನ ಪರಿಸರ ದಿನವಾಗಲಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top