2019ರ ತೀರ್ಪಿನ ಒಳಸುಳಿಗಳು | Vartha Bharati- ವಾರ್ತಾ ಭಾರತಿ

--

2019ರ ತೀರ್ಪಿನ ಒಳಸುಳಿಗಳು

ತಮಗೆ ಬೇಕಾದಂತೆ ಅಥವಾ ತಮ್ಮದೇ ಆದ ಶೈಲಿಯಲ್ಲಿ ಮಾತನಾಡುವ ಜನಪ್ರಿಯ ಸರ್ವಾಧಿಕಾರಿಗಳು ಎಲ್ಲರನ್ನೂ ಭ್ರಾಂತಿಗೊಳಪಡಿಸುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಮೋದಿಯವರ ಶೀಘ್ರ ಬದಲಾವಣೆಯಾಗುವ ವಾಗ್ಝರಿಗೆ ಸರಿಸಾಟಿಯಾಗಿ ತಮ್ಮ ವಾದ ಮಂಡಿಸಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಲೇ ಇಲ್ಲ. ತಮ್ಮ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿ ಹಲವಾರು ತಪ್ಪುಗಳನ್ನು ಮಾಡಿದರೂ ವಿರೋಧ ಪಕ್ಷಗಳು ಸಕಾಲದಲ್ಲಿ, ಸಮರ್ಥವಾಗಿ ಈ ತಪ್ಪುಗಳನ್ನು ಎತ್ತಿತೋರಿಸಲು ವಿಫಲವಾಗಿದ್ದವು. ಚೌಕಿದಾರ್ ಘೋಷಣೆಯಿಂದ ಒಮ್ಮೆಲೆ ಬಾಲಕೋಟ್‌ಗೆ ಜಿಗಿದ ಮೋದಿಯವರ ವಾಗ್ವಾದಕ್ಕೆ ಪ್ರತಿಯಾಗಿ, ಪುಲ್ವಾಮಾ ದಾಳಿ ಹೇಗೆ ನಡೆಯಿತು ಎಂದು ಕೇಳಲಿಕ್ಕೂ ಸಹ ವಿರೋಧ ಪಕ್ಷಗಳಿಗೆ ಸಮಯ ಕೂಡಿಬರಲಿಲ್ಲ.

2019ರ ಲೋಕಸಭಾ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ ಅಥವಾ ನರೇಂದ್ರ ಮೋದಿಯ ಅಭೂತಪೂರ್ವ ಗೆಲುವಿನ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ಬಂದಿವೆ. ಮೋದಿ ಗೆಲುವಿಗೆ ಕಾರಣವೇನು, ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಕಾರಣವೇನು? ಈ ಫಲಿತಾಂಶಗಳು ಇನ್ನೂ ಅಚ್ಚರಿ ಮೂಡಿಸುತ್ತಲೇ ಇರುತ್ತವೆ. ಮೋದಿ ಸರಕಾರದ ಆಡಳಿತಾವಧಿಯಲ್ಲಿ ಉದ್ಯೋಗ ನಷ್ಟ ಹೆಚ್ಚಾಗಿತ್ತು. ಕೃಷಿ ಬಿಕ್ಕಟ್ಟು ಉಲ್ಬಣಿಸಿತ್ತು. ಅಲ್ಪಸಂಖ್ಯಾತರ ನಿರ್ಲಕ್ಷ್ಯ ಪರಾಕಾಷ್ಠೆ ತಲುಪಿತ್ತು. ಸಾಮಾಜಿಕ ಧ್ರುವೀಕರಣ ತೀವ್ರವಾಗಿತ್ತು. ಆದಾಗ್ಯೂ ಮೋದಿ ಏಕೆ ಮರು ಆಯ್ಕೆಯಾಗುತ್ತಾರೆ? ಜಾತಿ ಮತ್ತು ವರ್ಗಗಳನ್ನೂ ಮೀರಿ ಮತದಾರರನ್ನು ತಲುಪುವ ಮೋದಿ ಸಂದೇಶದ ರಹಸ್ಯವಾದರೂ ಏನು? ಈ ಪ್ರಶ್ನೆಗಳು ಕಾಡುತ್ತವೆ.

ಕಳೆದ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ ಒಂದು ಸಮಾನ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಉದಾಹರಣೆಗೆ ರಶ್ಯಾ, ಅಮೆರಿಕ, ಟರ್ಕಿ, ಫಿಲಿಫೈನ್ಸ್, ಹಂಗೇರಿ, ಪೋಲ್ಯಾಂಡ್ ಮತ್ತು ಬ್ರೆಝಿಲ್ ದೇಶಗಳ ರಾಜಕಾರಣದಲ್ಲಿ ಸರ್ವಾಧಿಕಾರಿ ಜನಪ್ರಿಯತೆಯ ರಾಜಕೀಯ ಧೋರಣೆ ಹೆಚ್ಚಾಗುತ್ತಿದೆ. ಜನಪ್ರಿಯ ನಾಯಕರು ಬೃಹತ್ ಜನಬೆಂಬಲದಿಂದ ಆಯ್ಕೆಯಾಗುವುದರಿಂದ ಸಾಮಾನ್ಯವಾಗಿ ಪ್ರಜಾತಂತ್ರ ವಿರೋಧಿಗಳಾಗಿರುವುದಿಲ್ಲ. ಆದರೆ ಒಮ್ಮೆ ಆಯ್ಕೆಯಾದ ಕೂಡಲೇ ಈ ಸರ್ವಾಧಿಕಾರಿ ಜನಪ್ರಿಯ ನಾಯಕರು ತಮ್ಮ ಅಧಿಕಾರ ಚಲಾವಣೆಗೆ ಅಡ್ಡಗಾಲಾಗುವ ಎಲ್ಲ ಸಂಸ್ಥೆಗಳನ್ನೂ ಕಡೆಗಣಿಸತೊಡಗುತ್ತಾರೆ. ಎಲ್ಲ ಪ್ರಕ್ರಿಯೆಗಳನ್ನೂ ನಿರ್ಲಕ್ಷಿಸತೊಡಗುತ್ತಾರೆ. ನಾಗರಿಕ ಸಮಾಜ, ಮುಕ್ತ ಮಾಧ್ಯಮ, ಅಧಿಕಾರದ ಪ್ರತ್ಯೇಕತೆ ಮತ್ತು ನ್ಯಾಯಾಂಗ ಎಲ್ಲವನ್ನೂ ಕಡೆಗಣಿಸಲಾಗುತ್ತದೆ. ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಪ್ರಕ್ರಿಯೆಗಳ ಬಗ್ಗೆ ಈ ನಾಯಕರು ಸಹನೆ ಕಳೆದುಕೊಳ್ಳುತ್ತಾರೆ. ತಮ್ಮದೇ ಆದ ದೈಹಿಕ ವ್ಯಕ್ತಿತ್ವದಲ್ಲಿ ಎಲ್ಲ ಅಧಿಕಾರವನ್ನೂ ಕೇಂದ್ರೀಕರಿಸಲು ಯತ್ನಿಸುತ್ತಾರೆ. ಎರಡನೆಯದಾಗಿ ಸರ್ವಾಧಿಕಾರಿ ನಾಯಕರು ಶ್ರೀಮಂತ ವರ್ಗದವರನ್ನು ಭ್ರಷ್ಟರೆಂದು ಬಿಂಬಿಸುತ್ತಲೇ ಅಧಿಕಾರಕ್ಕೆ ಬರುತ್ತಾರೆ. ಕೆಲವೊಮ್ಮೆ ಅವರೇ ಈ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಉದಾಹರಣೆಗೆ ಅಮೆರಿಕದ ಅಧ್ಯಕ್ಷ ಶ್ರೀಮಂತ ಡೊನಾಲ್ಡ್ ಟ್ರಂಪ್ ಅಥವಾ 12 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ. ಮೂರನೆಯದಾಗಿ ಜನಪ್ರಿಯ ಸರ್ವಾಧಿಕಾರಿ ನಾಯಕರು ಸಾಮಾನ್ಯವಾಗಿ ಅಪೂರ್ಣ ಮತ್ತು ಕೃತ್ರಿಮ ಲಕ್ಷಣಗಳುಳ್ಳ ಪ್ರಜೆಗಳೊಡನೆ ನೇರವಾಗಿ ಸಂಭಾಷಿಸಲು ಬಯಸುತ್ತಾರೆಯೇ ಹೊರತು, ಪತ್ರಿಕಾಗೋಷ್ಠಿಗಳ ಮೂಲಕ, ಸಂಸತ್ತಿನ ಪ್ರಶ್ನೋತ್ತರಗಳ ಮೂಲಕ, ಭಾಷಣಗಳ ಮೂಲಕ ತಲುಪಲೆತ್ನಿಸುವುದಿಲ್ಲ. ನಾಲ್ಕನೆಯದಾಗಿ ಜನಪ್ರಿಯ ನಾಯಕರು ಅಲ್ಪಸಂಖ್ಯಾತರು ಮತ್ತು ವಲಸೆಗಾರರಂತಹ ಜನಸಮೂಹಗಳನ್ನು ಸಾರಾಸಗಟಾಗಿ ನಿರಾಕರಿಸುತ್ತಾರೆ. ಐದನೆಯದಾಗಿ ಜನಪ್ರಿಯ ಸರ್ವಾಧಿಕಾರಿಗಳು ಸಾರ್ವಜನಿಕ ಚರ್ಚೆ ಮುಂತಾದ ಪ್ರಕ್ರಿಯೆಗಳನ್ನು ನಿರ್ಲಕ್ಷಿಸುತ್ತಾರೆ. ಏಕೆಂದರೆ ಈ ಚರ್ಚೆಗಳಲ್ಲಿ ನಾಗರಿಕ ಲಕ್ಷಣಗಳಿರುತ್ತವೆ ಮತ್ತು ಭಾಗವಹಿಸುವವರ ಸಂವೇದನೆಗಳಿಗೆ ಸ್ಪಂದಿಸುವಂತಿರಬೇಕಾಗುತ್ತದೆ. ರಾಜಕೀಯವಾಗಿ ಸತ್ಯ ಎನಿಸುವ ಪರಿಭಾಷೆಯನ್ನು ಈ ನಾಯಕರುಗಳು ಅಸಡ್ಡೆಯಿಂದ ನೋಡುತ್ತಾರೆ. ನಿಷಿದ್ಧವಾದ ಪ್ರತಿಯೊಂದನ್ನೂ ಉಲ್ಲಂಘಿಸುವುದರಲ್ಲಿ ಸಂಭ್ರಮಿಸುವ ಇಂತಹ ನಾಯಕರು ಪ್ರಚೋದಿಸುವಂತೆಯೇ ಅವಹೇಳನ ಮಾಡುವುದರಲ್ಲೂ ತೊಡಗಿರುತ್ತಾರೆ.

ತಮಗೆ ಬೇಕಾದಂತೆ ಅಥವಾ ತಮ್ಮದೇ ಆದ ಶೈಲಿಯಲ್ಲಿ ಮಾತನಾಡುವ ಜನಪ್ರಿಯ ಸರ್ವಾಧಿಕಾರಿಗಳು ಎಲ್ಲರನ್ನೂ ಭ್ರಾಂತಿಗೊಳಪಡಿಸುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಮೋದಿಯವರ ಶೀಘ್ರ ಬದಲಾವಣೆಯಾಗುವ ವಾಗ್ಝರಿಗೆ ಸರಿಸಾಟಿಯಾಗಿ ತಮ್ಮ ವಾದ ಮಂಡಿಸಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಲೇ ಇಲ್ಲ. ತಮ್ಮ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿ ಹಲವಾರು ತಪ್ಪುಗಳನ್ನು ಮಾಡಿದರೂ ವಿರೋಧ ಪಕ್ಷಗಳು ಸಕಾಲದಲ್ಲಿ, ಸಮರ್ಥವಾಗಿ ಈ ತಪ್ಪುಗಳನ್ನು ಎತ್ತಿತೋರಿಸಲು ವಿಫಲವಾಗಿದ್ದವು. ಚೌಕಿದಾರ್ ಘೋಷಣೆಯಿಂದ ಒಮ್ಮೆಲೆ ಬಾಲಕೋಟ್‌ಗೆ ಜಿಗಿದ ಮೋದಿಯವರ ವಾಗ್ವಾದಕ್ಕೆ ಪ್ರತಿಯಾಗಿ, ಪುಲ್ವಾಮ ದಾಳಿ ಹೇಗೆ ನಡೆಯಿತು ಎಂದು ಕೇಳಲಿಕ್ಕೂ ಸಹ ವಿರೋಧ ಪಕ್ಷಗಳಿಗೆ ಸಮಯ ಕೂಡಿಬರಲಿಲ್ಲ. ತಮ್ಮ ಕೈಗಳೆರಡನ್ನು ಮೇಲೆತ್ತಿ ತಮ್ಮ್ಮಿಳಗಿನ ಎಲ್ಲ ಉದ್ವೇಗವನ್ನು ಹೊರಹಾಕಿ ಅಣ್ವಸ್ತ್ರ ಬಳಸುವ ಮಾತನ್ನಾಡಿದರೂ ನರೇಂದ್ರ ಮೋದಿಯವರ ವಿರುದ್ಧ ಯಾರೊಬ್ಬರೂ ತುಟಿಪಿಟಕ್ ಅನ್ನಲಿಲ್ಲ. ಹಾಗಾಗಿ ಈ ಸಾರವತ್ತಾದ ಜನಪ್ರಿಯ ಸರ್ವಾಧಿಕಾರಿ ನಾಯಕರು ಸ್ಥಿರತೆ ಮತ್ತು ಸಭ್ಯಾಚಾರವನ್ನೂ ನಿರ್ಲಕ್ಷಿಸಿ ತಮ್ಮನ್ನು ಒಬ್ಬ ಬಲಿಷ್ಠ, ಪ್ರಭಾವಶಾಲಿ ನಾಯಕನಂತೆ ಬಿಂಬಿಸಿಕೊಳ್ಳುತ್ತಾರೆ. ತನ್ಮೂಲಕ ನಿಯಮಗಳನ್ನು ಉಲ್ಲಂಘಿಸಿ, ಸಂಪ್ರದಾಯಗಳನ್ನು ಭೇದಿಸಿ ತಮ್ಮದೇ ಆದ ನಿಯಮಗಳನ್ನು ರೂಪಿಸುತ್ತಾರೆ. ಪ್ರಜಾತಂತ್ರ ಸಮಾಜಗಳಲ್ಲಿ ಪ್ರಜೆಗಳು ಏಕೆ ಇಂತಹ ಬಲಿಷ್ಠ ನಾಯಕರನ್ನು ಆಯ್ಕೆ ಮಾಡುತ್ತಾರೆ? ಬಹುಶಃ ನವ ಉದಾರವಾದ ಮತ್ತು ಜಾಗತೀಕರಣದಿಂದ ತಾವು ಎದುರಿಸುತ್ತಿರುವ ಅನಿಶ್ಚಿತತೆ ಮತ್ತು ಅಭದ್ರತೆಯಿಂದ ತಮ್ಮನ್ನು ರಕ್ಷಿಸುವ ಒಬ್ಬ ನಾಯಕನ ಶೋಧದಲ್ಲಿ ಈ ಜನತೆ ತೊಡಗಿರುತ್ತಾರೆ. ಭಾರತದಲ್ಲಿ ಈ ಎರಡೂ ಪ್ರಕ್ರಿಯೆಗಳು 1991ರಲ್ಲಿ ಒಮ್ಮೆಲೆ ಆರಂಭವಾಗಿದ್ದವು. 1980ರ ದಶಕದ ಉತ್ತರಾರ್ಧದಲ್ಲಿ ಆರಂಭವಾದ ಪ್ರಕ್ರಿಯೆಯಲ್ಲಿ ಅಮೆರಿಕದ ಅಧ್ಯಕ್ಷ ರೋನಾಲ್ಡ್ ರೇಗನ್ ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ಇತಿಶ್ರೀ ಹಾಡಿದ್ದರು. ಬ್ರಿಟನ್‌ನಲ್ಲಿ ಮಾರ್ಗರೆಟ್ ಥ್ಯಾಚರ್ ಇದೇ ನೀತಿಯನ್ನು ಅನುಸರಿಸಿದ್ದರು. ಅವರ ದೃಷ್ಟಿಯಲ್ಲಿ ಎಲ್ಲ ಸಮಸ್ಯೆಗಳಿಗೂ ಅನಿಯಂತ್ರಿತ, ಅನಿರ್ಬಂಧಿತ ಮಾರುಕಟ್ಟೆಯೇ ಸಿದ್ಧೌಷಧಿಯಾಗಿತ್ತು. ಮಾರುಕಟ್ಟೆಯ ಮಿಥ್ಯೆಯನ್ನು ಮತ್ತೊಮ್ಮೆ ಪ್ರತಿಪಾದಿಸುವ ಮೂಲಕ ಅದರ ವೈಫಲ್ಯಗಳನ್ನು ವ್ಯವಸ್ಥಿತವಾಗಿ ಮರೆಮಾಚಲಾಗಿತ್ತು. ತಮ್ಮ ‘ದ ಗ್ರೇಟ್ ಟ್ರಾನ್ಸ್‌ಫರ್ಮೇಶನ್’( ಮಹಾ ಪರಿವರ್ತನೆ 1944) ಕೃತಿಯಲ್ಲಿ ಕಾರ್ಲ್ ಪೋಲ್ಯಾನಿ ಹೇಳಿರುವಂತೆ ಮಾರುಕಟ್ಟೆ ಶೋಷಕ ಸಾಮಾಜಿಕ ಸಂಬಂಧಗಳನ್ನು ಆಧರಿಸಿದ್ದು ಇದು ಜನರ ಸ್ಥಾನಪಲ್ಲಟ ಮಾಡುವ ಮೂಲಕ ದುರವಸ್ಥೆಯನ್ನು ಉಂಟುಮಾಡುತ್ತದೆ. ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಇರುವ ಏಕೈಕ ಮಾರ್ಗ ಎಂದರೆ ದುಡಿಯುವ ವರ್ಗಗಳ ಸಂಘರ್ಷ ಮತ್ತು ಹೋರಾಟಗಳು. ಈ ಹೋರಾಟಗಳೇ ಮಾರುಕಟ್ಟೆಯನ್ನು ಪ್ರಭುತ್ವದಲ್ಲಿ ನೆಡುವುದರಲ್ಲಿ ಯಶಸ್ವಿಯಾಗಿದ್ದವು. ಮಾರುಕಟ್ಟೆಯ ಉಸ್ತುವಾರಿಯನ್ನು ಹೊರಲು ಒಬ್ಬರು ಅಗತ್ಯ. ಮಾರುಕಟ್ಟೆ ಎನ್ನುವ ಸಂಸ್ಥೆ ಸೃಷ್ಟಿಸುವ ಸಮಸ್ಯೆಗಳಿಗೆ ಮತ್ತು ಲೂಟಿಗೆ ಹೊಣೆ ಹೊರಲು ಒಬ್ಬರು ಅಗತ್ಯ. ಇಲ್ಲವಾದಲ್ಲಿ ಕಡಿವಾಣ ಇಲ್ಲದ ಕುದುರೆಯಂತೆ ಮಾರುಕಟ್ಟೆ ಒಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನೇ ನಾಶಪಡಿಸುತ್ತದೆ. ವಸಾಹತೋತ್ತರ ಕಾಲಘಟ್ಟದಲ್ಲಿನ ಶ್ರೀಮಂತ ವರ್ಗಗಳು ಸಾಮ್ರಾಜ್ಯಶಾಹಿಗಳ ಹಿಡಿತದಲ್ಲಿದ್ದ ಮಾರುಕಟ್ಟೆ ಪ್ರಕ್ರಿಯೆಯನ್ನು ತಮ್ಮ ಹತೋಟಿಯಲ್ಲಿರಿಸಿಕೊಂಡಿದ್ದರು. ಆದರೆ 1990ರಲ್ಲಿ ಮಾರುಕಟ್ಟೆ ತಮ್ಮ ಪ್ರಾಬಲ್ಯ ಮತ್ತು ಆಧಿಪತ್ಯವನ್ನು ಸ್ಥಾಪಿಸಿದ್ದೇ ಅಲ್ಲದೆ ಮಾನ್ಯತೆಯನ್ನೂ ಪಡೆದಿತ್ತು. ಆದರೆ ಈ ಸಂದರ್ಭದಲ್ಲಿ ಈ ವ್ಯವಸ್ಥೆಯ ನೀತಿಗಳನ್ನು ವಿರೋಧಿಸಲು, ಈ ಸಿದ್ಧಾಂತದ ವಿರುದ್ಧ ಸೆಣಸಲು ದುಡಿಯುವ ವರ್ಗಗಳು ಇರಲಿಲ್ಲ. ದುಡಿಯುವ ವರ್ಗಗಳನ್ನು ನೆಲಸಮ ಮಾಡಲಾಗಿತ್ತು.

ಭಾರತದಲ್ಲಿ ಸಂಘಟಿತ ಕಾರ್ಮಿಕರ ವಲಯದಲ್ಲೂ ಗುತ್ತಿಗೆ ಕಾರ್ಮಿಕರನ್ನು ನೇಮಿಸುವ ಪ್ರಕ್ರಿಯೆ ಆರಂಭವಾಯಿತು. ಇದರಿಂದ ದೇಶದಲ್ಲಿ ಅಭದ್ರತೆ ಹೆಚ್ಚಾಗತೊಡಗಿತು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ಮೂಲಕ ಕಾರ್ಮಿಕರನ್ನು ಬೀದಿಪಾಲು ಮಾಡಲಾಯಿತು. ಇಲ್ಲಿ ಬೀದಿಪಾಲಾದ ಕಾರ್ಮಿಕರು ಅಸಂಘಟಿತ ಕಾರ್ಮಿಕರೊಡನೆ ಸೇರಿಕೊಂಡರು. ಅಸಂಘಟಿತ ಕಾರ್ಮಿಕರ ಬದುಕು ಆತಂಕದ ಗೂಡಾಯಿತು. ನಾಳಿನ ಕೂಳು ಎಲ್ಲಿಂದ ಬರುತ್ತದೆ ಎನ್ನುವ ಆತಂಕ ಹೆಚ್ಚಾಗತೊಡಗಿತು. ಇದೇ ವೇಳೆ ಭಾರತ ಸೇವಾ ಕ್ಷೇತ್ರದತ್ತ ಮುನ್ನಡೆದಿತ್ತು. ಈ ಸೇವಾ ಕ್ಷೇತ್ರದ ಉದ್ದಿಮೆಗಳಲ್ಲಿ ಕೆಳಹಂತದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇರಲಿಲ್ಲ. ಯಾವುದೇ ಕ್ಷಣದಲ್ಲಿ ವಜಾಗೊಳ್ಳುವ ಭೀತಿಯಲ್ಲೇ ಕೆಲಸ ಮಾಡಬೇಕಾಯಿತು. ದುಡಿಯುವ ವರ್ಗಗಳು ಅಸ್ಥಿರ ಪರಿಸ್ಥಿತಿಯಲ್ಲೇ ಬದುಕುವಂತಾಯಿತು.

ಬದಲಾದ ಅರ್ಥ ವ್ಯವಸ್ಥೆ ಮತ್ತು ಬದಲಾದ ಸಂದರ್ಭದಲ್ಲಿ ಅರ್ಥವ್ಯವಸ್ಥೆಯ ಅನಿಯಂತ್ರೀಕರಣದ ಫಲವನ್ನು ಪ್ರಜೆಗಳ ಒಂದು ವರ್ಗ ಪಡೆದಿದ್ದು ನಿಜ. ಈ ವರ್ಗದ ಜನತೆ ನೂತನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಮೂಲಕ ನೂತನ ಕಾರ್ಯವಿಧಾನಗಳನ್ನೂ ತಮ್ಮದಾಗಿಸಿಕೊಂಡಿದ್ದರು. ಆದರೆ ಈ ಪ್ರಕ್ರಿಯೆಯಲ್ಲಿ ವಿವಿಧ ವರ್ಗಗಳ ನಡುವಿನ ಅಸಮಾನತೆಯ ಕಂದರ ಹೆಚ್ಚಾಗುತ್ತಲೇ ಹೋಗಿ ಅಪಾಯಕಾರಿ ಹಂತ ತಲುಪಿತು. ಈ ಪ್ರಕ್ರಿಯೆಯಲ್ಲಿ ಅವಕಾಶವಂಚಿತರಾದವರ ಮನಸಿನಲ್ಲಿ ಉತ್ತಮ ಜೀವನ ಶೈಲಿಯ ಕನಸುಗಳು ಚಿಗುರಲಾರಂಭಿಸಿದವು. ಹಾಗೆಯೇ ಶ್ರೀಮಂತರ ಥಳಥಳಿಸುವ ಜೀವನಶೈಲಿಯ ವಿರುದ್ಧ ಪ್ರತಿರೋಧವೂ ಸೃಷ್ಟಿಯಾಗಿತ್ತು. ಅಭದ್ರತೆ, ಆಕಾಂಕ್ಷೆ ಮತ್ತು ಅಸಮಾಧಾನಗಳ ಸಮ್ಮಿಶ್ರಣದ ಪರಿಣಾಮ ಆಕಾಂಕ್ಷೆಗಳ ರಾಜಕಾರಣ ಹಾಗೂ ಸಾಮಾಜಿಕ ಅಸೂಯೆ ಹೆಚ್ಚಾಗುತ್ತಲೇ ಹೋಯಿತು. ಈ ಕೆರಳುವ ಸ್ವಭಾವದ ಭಾವನೆಗಳ ಮಿಶ್ರಣದ ಪರಿಣಾಮವಾಗಿಯೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರ್ಯಾಪ್ ಸಂಗೀತ ಹೆಚ್ಚು ಜನಪ್ರಿಯತೆ ಗಳಿಸಿತ್ತು. ಇದೇ ಮಿಶ್ರಣವನ್ನು ಜನಪ್ರಿಯ ಸರ್ವಾಧಿಕಾರಿ ನಾಯಕರು ರಾಜಕೀಯವಾಗಿ ಬಳಸಿಕೊಂಡಿದ್ದರು. ಶ್ರೀಮಂತರ ವಿರುದ್ಧದ ಆಕ್ರೋಶವನ್ನು ಬಳಸಿಕೊಂಡು, ವಂಶಪಾರಂಪರ್ಯವಾಗಿ ಅನುಭವಿಸಿಕೊಂಡು ಬಂದಿದ್ದ ಸವಲತ್ತುಗಳ ವಿರುದ್ಧ ದಾಳಿ ನಡೆಸಲಾರಂಭಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ಈ ಜನಪ್ರಿಯ ಸರ್ವಾಧಿಕಾರಿಗಳು ಜನತೆಯ ಅಸಮಾಧಾನ ಮತ್ತು ಆಕ್ರೋಶವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪರಕೀಯರನ್ನು ದ್ವೇಷಿಸುವ ರಾಷ್ಟ್ರೀಯವಾದವನ್ನು ಬಲಪಡಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರಾಜಕಾರಣ ಹಿನ್ನಡೆ ಅನುಭವಿಸಿದ್ದನ್ನೂ ನಾವು ವಿಷಾದದಿಂದ ಕಾಣ ಬೇಕಾಯಿತು.

ಜಾಳು ಜಾಳಾದ ವರ್ಗ ನೆಲೆಗಳು, ಅಭದ್ರತೆಗಳು, ಉತ್ತಮ ಜೀವನದ ಮತ್ತು ಸಾಮಾಜಿಕ ಸ್ಥಾನಮಾನದ ಹಂಬಲ, ನಿಷ್ಫಲ ರಾಜಕಾರಣ ಮತ್ತು ಸಾಮಾಜಿಕ ಅಸೂಯೆ ಇವೆಲ್ಲವನ್ನೂ ಬಳಸಿಕೊಂಡು ಅನ್ಯ ದ್ವೇಷಿ ರಾಷ್ಟ್ರೀಯತೆಯನ್ನು ಬೆಳೆಸಲಾಗಿದೆ. ಈ ರಾಷ್ಟ್ರೀಯತೆಯ ಭಾವನೆ ದಟ್ಟವಾದಂತೆಲ್ಲಾ ನಮ್ಮಂತೆಯೇ ಇಲ್ಲದ ಎಲ್ಲರೂ ಸಹ ಶತ್ರುಗಳಾಗಿಬಿಡುತ್ತಾರೆ, ಭೂಮಿ ಮತ್ತು ಸಂಪನ್ಮೂಲಗಳನ್ನು ಕಬಳಿಸಿದ ಶತ್ರುಗಳಾಗಿಬಿಡುತ್ತಾರೆ. ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಹಲ್ಲೆ ನಡೆಸುವಲ್ಲಿ ಭಾರತದ ಬಹುಸಂಖ್ಯೆಯ ಜನತೆ ಭಾಗಿಯಾಗಿಲ್ಲವಾದರೂ, ಮಾನವೀಯತೆಯನ್ನೇ ನಾಚಿಸುವ ಇಂತಹ ಆಕ್ರಮಣಗಳಿಗೆ ಬಲಿಯಾಗುವ ಸಂತ್ರಸ್ತರಿಗೆ ಈ ಜನತೆ ಅನುಕಂಪವನ್ನೂ ತೋರುವುದಿಲ್ಲ. ಇಂತಹ ಅಸಹಿಷ್ಣುತೆ ಮತ್ತು ದ್ವೇಷದ ವಿರುದ್ಧ ಪ್ರತಿಭಟಿಸಿ ಮೇಣದಬತ್ತಿ ಮೆರವಣಿಗೆ ಮಾಡುವ ಕೆಲವರು ಇವರ ದೃಷ್ಟಿಯಲ್ಲಿ ದ್ರೋಹಿಗಳಾಗಿ ಕಾಣುತ್ತಾರೆ. ನಾನಾ ರೀತಿಯ ಅವಹೇಳನ ಎದುರಿಸುತ್ತಾರೆ. ನಮ್ಮವರೇ ಆದ ಜನತೆ ಅವರ ತಾಯ್ನಾಡಿನಲ್ಲೇ ಪರಕೀಯರಾಗಿಬಿಡುತ್ತಾರೆ. ಕವಿ ಫಿರಾಖ್ ಗೋರಖ್‌ಪುರಿ ತಮ್ಮ ಕವನವೊಂದರಲ್ಲಿ ಹೇಳಿರುವಂತೆ ಸತತವಾದ ವಲಸೆಗಾರರ ಅಲೆಗಳೇ ಭಾರತವನ್ನು ಒಂದು ಬಹುಮುಖಿ ದೇಶವನ್ನಾಗಿ ರೂಪಿಸಿದೆ. ತಮ್ಮ ಪೂರ್ವಿಕರು ಈ ನೆಲದಲ್ಲೇ ಬೇರು ಬಿಟ್ಟಿರುವುದನ್ನು ನೆನೆಯುತ್ತಲೇ ಬದುಕುತ್ತಿರುವವರು, ದೇಶದ ಸಂಪತ್ತಿನ ಉತ್ಪಾದನೆಯಲ್ಲಿ ತಮ್ಮ ಬೆವರು ಸುರಿಸಿರುವವರು, ತಮ್ಮ ಕಾಲಾನಂತರ ಇದೇ ಮಣ್ಣಲ್ಲಿ ಮಣ್ಣಾಗುವ ಜನಸಾಮಾನ್ಯರು ಇಂದು ವಿದೇಶಿಯರೆಂದು ಪರಿಗಣಿಸಲ್ಪಡುತ್ತಿದ್ದಾರೆ. ಆತಂಕ ಮತ್ತು ಆಕಾಂಕ್ಷೆಗಳ ತಾಕಲಾಟದಲ್ಲಿ ಗೊಂದಲಕ್ಕೀಡಾಗಿರುವ ಜನತೆಗೆ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವದ ವರ್ಚಸ್ಸು ಸಾಂತ್ವನ ನೀಡುತ್ತದೆ. ವಿಶ್ವದ ಇತರ ರಾಷ್ಟ್ರಗಳಲ್ಲೂ ಇದೇ ಪ್ರವೃತ್ತಿಯನ್ನು ಕಾಣಬಹುದು. ಸಂಶೋಧಕರ ಪ್ರಕಾರ ವಿಶ್ವದಾದ್ಯಂತ ದುಡಿಯುವ ವರ್ಗಗಳು ಬಲಪಂಥೀಯ ಜನಪ್ರಿಯ ನಾಯಕರಿಗೆ ಬೆಂಬಲ ನೀಡುತ್ತಿವೆ. ಭಾರತದ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಒಂದು ಹಂತದಲ್ಲಿ ನಮ್ಮಲ್ಲಿ ಸಾಮಾಜಿಕ ಪ್ರಜಾಸತ್ತಾತ್ಮಕ ಪ್ರಭುತ್ವ ಇತ್ತು. ಇಂದು ಸರ್ವಾಧಿಕಾರಿ ಜನಪ್ರಿಯ ನಾಯಕನ ಆಡಳಿತದಲ್ಲಿ ಜನತೆ ರಕ್ಷಣೆ ಬಯಸುತ್ತಿದ್ದಾರೆ. ಆದರೆ ಈ ನಾಯಕರಿಗೆ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಆಯಾಸಕರ ಸುದೀರ್ಘ ಪ್ರಕ್ರಿಯೆಯಲ್ಲಿ ವಿಶ್ವಾಸವೇ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 17ನೇ ಶತಮಾನದಲ್ಲಿ ಥಾಮಸ್ ಹಾಬ್ಸ್ ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂ ರಕ್ಷಣೆಗಾಗಿ ಹಂಬಲಿಸುತ್ತಾನೆ ಎಂದು ಹೇಳಿದ್ದರು. ತಮ್ಮ ಸ್ವ ರಕ್ಷಣೆಗಾಗಿ ಈ ಜನರೇ ತಮ್ಮ ಎಲ್ಲ ಹಕ್ಕುಗಳನ್ನೂ ಬಿಟ್ಟುಕೊಟ್ಟು ಒಬ್ಬ ಬಲಿಷ್ಠ ನಾಯಕನಿಗೆ ಅರ್ಪಿಸಲು ಸಿದ್ಧರಾಗುತ್ತಾರೆ. ನಾವು ಇಂತಹ ಬಲಿಷ್ಠರಿಗೇ ಮತ ನೀಡುತ್ತಾ ಮುಂದುವರಿಯುತ್ತೇವೆ.

ಕೃಪೆ: (ದ ಹಿಂದೂ 27-5-19)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top