ಸೆ.18ರಿಂದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ
ಉಡುಪಿ, ಸೆ.14: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ಸೆ.18ರಿಂದ 21ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ನಡೆಯಲಿದೆ.
ಸೆ.18 ಮತ್ತು 19ರಂದು ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್ಬಾಲ್, ಈಜು, ಟೆನಿಸ್, ಬಾಕ್ಸಿಂಗ್ ಸ್ಪರ್ಧೆಗಳು ಹಾಗೂ ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್ ಬಾಲ್, ಕುಸ್ತಿ, ಹ್ಯಾಂಡ್ಬಾಲ್, ಟೇಬಲ್ ಟೆನಿಸ್, ನೆಟ್ಬಾಲ್, ವೈಯ್ಟ್ಲಿಫ್ಟಿಂಗ್ ಮತ್ತು ಬಾಲ್ಬ್ಯಾಡ್ಮಿಂಟನ್ ಸ್ಪರ್ಧೆಗಳು.
ಸೆ.20ರಂದು ಕೊಡಗಿನ ಕೂಡಿಗೆ ಕ್ರೀಡಾಶಾಲೆಯಲ್ಲಿ ಹಾಕಿ ಮತ್ತು ಜಿಮ್ನಾಸ್ಟಿಕ್ ಸ್ಪರ್ಧೆಗಳು, ಸೆ.20 ಮತ್ತು 21ರಂದು ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತ್ರೋಬಾಲ್, ಖೋ-ಖೋ, ಕಬಡ್ಡಿ, ಬ್ಯಾಡ್ಮಿಂಟನ್, ಜೂಡೋ ಮತ್ತು ಟೇಕ್ವಾಂಡೋ ಸ್ಪರ್ಧೆಗಳು ನಡೆಯಲಿವೆ.
ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಳಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ:0820-2521324ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.