ಅಂಬೇಡ್ಕರ್ ರಥ ಹಿಂದಕ್ಕೆ ಚಲಿಸದಿರಲಿ

ಬಾಬಾಸಾಹೇಬರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಇತರ ಜನಾಂಗದಿಂದ ಅವರನ್ನು ಹಾಗೂ ಅವರ ಹೋರಾಟವನ್ನು ದೂರ ಉಳಿಯುವಂತೆ ಮಾಡಿ ಹೋರಾಟದ ದಿಕ್ಕು ತಪ್ಪಿಸಿರುವ ಮನುವಾದಿಗಳ ಮರ್ಮವನ್ನು ಬಯಲು ಮಾಡಬೇಕಾಗಿದೆ. ಎಲ್ಲಾ ಜಾತಿ ಜನಾಂಗಗಳಿಗೂ ನಿಮ್ಮ ನೈಜ ಹೋರಾಟಗಳನ್ನು ತಿಳಿಸಿ ಜಾಗೃತಿ ಮೂಡಿಸಿ ಜಾತಿ ಜಾತಿಗಳ ನಡುವಿನ, ಧರ್ಮ ಧರ್ಮಗಳ ನಡುವಿನ ಒಳಜಗಳವನ್ನು ನಿಲ್ಲಿಸಿ ಸಾಮರಸ್ಯವನ್ನು ಮೂಡಿಸಬೇಕಾಗಿದೆ.

1956 ಡಿಸೆಂಬರ್ 6 ರಂದು ಬಾಬಾಸಾಹೇಬರು ದೈಹಿಕವಾಗಿ ಇಲ್ಲವಾದ ದಿನ. ಈ ದಿನ ಬಂದ ಕೂಡಲೇ ದಲಿತರಲ್ಲಿ ಏನೋ ಒಂಥರಾ ವೌನ ಆವರಿಸಿಬಿಡುತ್ತದೆ. ದೊಡ್ಡದೊಡ್ಡ ಕಟೌಟುಗಳ ಮೂಲಕ ಬಾಬಾಸಾಹೇಬರ ಜೊತೆಗೆ ಅಭಿಮಾನಿಗಳ ದಂಡಿನ ಫೋಟೊಗಳನ್ನು ಹಾಕಿಕೊಂಡು ಶ್ರದ್ಧಾಂಜಲಿ ಕೋರುತ್ತಾರೆ. ಸಾಲದು ಎಂಬಂತೆ ‘ಅಂಬೇಡ್ಕರ್ ಪರಿನಿಬ್ಬಾಣ ದಿನದ ಶುಭಾಶಯಗಳು’ ಎಂಬುದಾಗಿಯೂ ಬರೆಸಿರುತ್ತಾರೆ. ಇವರೆಲ್ಲ ಕಣ್ಣೀರು ಹಾಕುತ್ತಾ ಬಾಬಾಸಾಹೇಬರು ನಮ್ಮನ್ನು ಬಿಟ್ಟು ಹೋದ ದಿನ ಎಂದು ಅತ್ತೂ ಕರೆದೂ ಗೋಳಾಡಿ ಅವರ ಫೋಟೊಗೆ ಹೂವಿನ ಹಾರ, ಗಂಧದಕಡ್ಡಿ, ಕರ್ಪೂರ ಹಚ್ಚಿ ಪೂಜೆ ಮಾಡಿ ಕ್ಯಾಂಡಲ್ ಹಿಡಿದು ಒಂದಷ್ಟೊತ್ತು ವೌನವಾಗಿ ನಿಲ್ಲುತ್ತಾರೆ. ಕೆಲವು ಹುಡುಗರಂತೂ ಆ ದಿನ ಡಿಜೆ ಆರ್ಕೆಸ್ಟ್ರಾ ಹಾಕಿ ಹಾಡಿಗೂ ಹೆಜ್ಜೆಹಾಕುತ್ತಾರೆ. ಆನಂತರ ಅಲ್ಲಿಂದ ಜಾಗ ಖಾಲಿಮಾಡಿ ಮಾರನೇ ದಿನದಿಂದ ಯಥಾಪ್ರಕಾರ ಹಿಂದೂ ಜಾತಿಪದ್ಧತಿಯೊಳಗಿನ ಗುಲಾಮಗಿರಿ ಬದುಕನ್ನು ಸಾಗಿಸುತ್ತಾರೆ. ಬಾಬಾಸಾಹೇಬರು ಇದನ್ನು ಬಯಸಿದ್ದರೇ? ಬಾಬಾಸಾಹೇಬರು ಹೇಳಿದ್ದೇನು? ನಾವು ಮಾಡುತ್ತಿರುವುದೇನು?

ನಾನು ಗಮನಿಸಿದಂತೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿರುವಷ್ಟು ಸಂಘಟನೆಗಳು ಭಾರತದ ಇನ್ಯಾವ ರಾಷ್ಟ್ರನಾಯಕನ ಹೆಸರಿನಲ್ಲಿ ಇಲ್ಲ. ಹಾಗೆಯೇ ಬಾಬಾಸಾಹೇಬರ ಪರಿನಿಬ್ಬಾಣ ದಿನ ಹಾಗೂ ಅವರು ಹುಟ್ಟಿದ ದಿನವನ್ನು ಆಚರಿಸುವಷ್ಟು ಪರಿಯಲ್ಲಿ ಬೇರೆ ಯಾವೊಬ್ಬ ನಾಯಕನನ್ನೂ ಆಚರಿಸುವುದಿಲ್ಲ. ಭಾರತದಲ್ಲಿ ಬಾಬಾಸಾಹೇಬರ ಕುರಿತಾದ ಪ್ರತಿಮೆಗಳು ಸಹ ಕಡಿಮೆಯೇನೂ ಇಲ್ಲ. ಹಾಗೆಯೇ ಅಂಬೇಡ್ಕರ್ ಹೆಸರಿನಲ್ಲಿ ಅವರ ಅಭಿಮಾನಿಗಳು ಕಟ್ಟಿರುವ ಸಂಘಟನೆಗಳು ಬೀದಿಗೊಂದರಂತೆ ಕಾಣಸಿಗುತ್ತವೆ. ನೆನಪಿರಲಿ; ಬಾಬಾಸಾಹೇಬರು ಕೇಳಿದ್ದು ನನಗೆ ಆಭಿಮಾನಿಗಳು ಬೇಡ, ಅನುಯಾಯಿಗಳು ಬೇಕೆಂದು. ಮೊನ್ನೆ ಐಷಾರಾಮಿ ಕಾರುಗಳಲ್ಲಿ ಬಂದ ದಲಿತ ಸಮುದಾಯದ ರಾಜಕಾರಣಿಗಳು, ನೌಕರರು, ಸಣ್ಣಪುಟ್ಟ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಬಾಬಾಸಾಹೇಬರ ಪ್ರತಿಮೆಗೆ ದೊಡ್ಡ ದೊಡ್ಡ ಗುಲಾಬಿ ಹಾರಗಳನ್ನು ಹಾಕಿ ಕೈ ಮುಗಿದು ಗೌರವ ಸಲ್ಲಿಸಿ ಒಂದಷ್ಟು ಹೊತ್ತು ಭಾಷಣಬಿಗಿದು ಜಾಗ ಖಾಲಿ ಮಾಡಿದರು. ಜಾಗ ಖಾಲಿ ಮಾಡಿದವರೇ ಕೇಳಿ; ಬಾಬಾಸಾಹೇಬರು ಆರಂಭಿಸಿದ ದಲಿತ ಹೋರಾಟವು ಇಲ್ಲಿಯತನಕ ಒಂದಲ್ಲ ಒಂದು ರೂಪದಲ್ಲಿ ನಡೆಯುತ್ತಲೇ ಇದೆ. ಯಾವುದೇ ಒಂದು ಜನಾಂಗದ ಅಥವಾ ರಾಷ್ಟ್ರದ ಹೋರಾಟವು ಪೂರ್ಣಗೊಳ್ಳದೆ ನಡೆಯುತ್ತಿದೆ ಎಂದರೆ ಯಾವ ಉದ್ದೇಶಗಳಿಗಾಗಿ ಆ ಹೋರಾಟವು ಹುಟ್ಟಿಕೊಂಡಿತೋ ಆ ಉದ್ದೇಶಗಳು ಇನ್ನೂ ಪೂರೈಕೆಯಾಗಿಲ್ಲ ಎಂದರ್ಥ. ಅಂದರೆ, ದಲಿತ ಹೋರಾಟವು ಇಲ್ಲಿಯತನಕವೂ ತನ್ನ ಗುರಿಯನ್ನು ಪೂರೈಸಲಾಗಿಲ್ಲ ಎಂದರ್ಥ. ಯಾವ ಉದ್ದೇಶಗಳನ್ನು ಈಡೇರಿಸಲು ಬಾಬಾಸಾಹೇಬರು ದಲಿತ ಹೋರಾಟವನ್ನು ಆರಂಭಿಸಿದರೋ ಆ ಉದ್ದೇಶಗಳು ಈವರೆಗೂ ಈಡೇರಿಲ್ಲ. ಹಾಗಾದರೆ ಅವರ ಹೆಸರಿನಲ್ಲಿರುವ ಸಂಘಟನೆಗಳು ಮಾಡುತ್ತಿರುವುದು ಏನನ್ನು? ಅವರ ಹೋರಾಟದ ಫಲವನ್ನು ಉಂಡ ದಲಿತ ರಾಜಕಾರಣಿಗಳು, ನೌಕರರು ಹಾಗೂ ವಿದ್ಯಾವಂತರ ಜವಾಬ್ದಾರಿಯೇನು? ಇವರು ಪ್ರತಿಕ್ರಿಯೆಯ ಬದಲಿಗೆ ಸಕ್ರಿಯವಾದ ಹೋರಾಟಗಳನ್ನು ಮಾಡಬೇಕಾಗಿದೆ. ಆಗಮಾತ್ರ ಬಾಬಾಸಾಹೇಬರು ಆರಂಭಿಸಿದ ಹೋರಾಟ ಪೂರ್ಣವಾಗುವುದಕ್ಕೆ ಸಾಧ್ಯ.

ದಲಿತರು ಯಾತಕ್ಕಾಗಿ ಹೋರಾಡಬೇಕು? ಮೊದಲನೆಯದಾಗಿ, ಶಿಕ್ಷಣ ಮತ್ತು ಅರಿವನ್ನು ಪಡೆಯಲು ಹೋರಾಡಬೇಕು. ಯಾವುದೇ ಅನೀತಿಯುತ, ಅಮಾನುಷ ಶೋಷಣೆಯುಳ್ಳ ವ್ಯವಸ್ಥೆಯ ವಿರುದ್ಧ ಹೋರಾಡಬೇಕಾದರೆ, ಆ ವ್ಯವಸ್ಥೆಯು ಆಧರಿಸಿ ನಿಂತಿರುವ ಸುಳ್ಳುಗಳನ್ನು ಮೊದಲು ಬಯಲು ಮಾಡಬೇಕು ಮತ್ತು ಅವುಗಳು ಇರುವುದು ಯಾತಕ್ಕೆಂಬುದನ್ನು ಸ್ಪಷ್ಟವಾಗಿ ಅರಿಯಬೇಕು. ಇದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಬಾಬಾಸಾಹೇಬರು ಗುರುತಿಸಿದರು. ಬಾಬಾಸಾಹೇಬರು ರಚಿಸಿಕೊಟ್ಟ ಸಂವಿಧಾನದ ಫಲವಾಗಿ ಶೋಷಿತ ಸಮುದಾಯಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆದು ಸರಕಾರಿ ನೌಕರಿಯ ಕಡೆಗೆ ಸಾಗಿದರು. ಇದನ್ನು ಅರಿತ ಮನುವಾದಿಗಳು ಖಾಸಗೀಕರಣವನ್ನು ಜಾರಿಗೆ ತಂದು ಸರಕಾರಿ ನೌಕರಿಗೆ ಸೇರುವ ದಲಿತರ ಸಂಖ್ಯೆಗೆ ಕಡಿವಾಣ ಹಾಕಿದ್ದಾರೆ. ಆ ಮೂಲಕ ಆರ್ಥಿಕವಾಗಿ ಸಬಲರಾಗುವುದನ್ನೇ ತಡೆದು ನಿಲ್ಲಿಸಿದ್ದಾರೆ. ಇದರ ವಿರುದ್ಧ ಅಂಬೇಡ್ಕರ್ ಹೆಸರಿನ ಸಂಘಟನೆಗಳು ಎಷ್ಟರಮಟ್ಟಿಗೆ ಸಕ್ರಿಯವಾಗಿ ಹೋರಾಟ ರೂಪಿಸಿದೆ? ದಲಿತರಿಗೆ ಬಡತನವೇ ಮೂಲ ಸಮಸ್ಯೆಯೆಂದು ಕಂಡುಕೊಂಡ ಬಾಬಾಸಾಹೇಬರು ಭಾರತ ಸಂವಿಧಾನದ 39ನೇ ವಿಧಿಯಲ್ಲಿ ಭೂಮಿ ರಾಷ್ಟ್ರೀಕರಣದ ಬಗ್ಗೆ, ಸಾಮೂಹಿಕ ಕೃಷಿಪದ್ಧತಿಯ ಬಗ್ಗೆ ಮಾತನಾಡುತ್ತಾರೆ. ಪ್ರತಿಯೊಂದು ಕುಟುಂಬಕ್ಕೂ ಭೂ ಒಡೆತನದ ಅವಶ್ಯಕತೆಯ ಬಗ್ಗೆ ಚರ್ಚಿಸುತ್ತಾರೆ. ಹಾಗೆಯೇ ಕಡ್ಡಾಯ ಶಿಕ್ಷಣದ ಜೊತೆಗೆ ಉದ್ಯೋಗ ಕಲ್ಪಿಸುವುದು ಸರಕಾರದ ಜವಾಬ್ದಾರಿ ಎಂದು 41ನೇ ವಿಧಿಯಲ್ಲಿ ತಿಳಿಸುತ್ತಾರೆ. ಈ ಕುರಿತು ಪ್ರಗತಿಪರ ಸಂಘಟನೆಗಳು ಎಷ್ಟರ ಮಟ್ಟಿಗೆ ಮಾತನಾಡಿದ್ದವೇ? ಹೋರಾಡಿದ್ದವೇ? ಗಮನಿಸಿ; ಬಾಬಾಸಾಹೇಬರ ಹೆಸರಿನಲ್ಲಿ ಇಷ್ಟೊಂದು ಸಂಘಟನೆಗಳಿದ್ದರೂ ಪ್ರತಿದಿನ ಹಿಂದೂ ಸವರ್ಣೀಯರಿಂದ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರಗಳು ನಡೆಯುತ್ತಿರುವುದು ನಿಂತಿವೆಯೇ? ಉತ್ತರ; ಇಲ್ಲ. ಹಾಗಾದರೆ ಸಂಘಟನೆಗಳು ದಿಕ್ಕು ತಪ್ಪಿವೆ ಎಂದರ್ಥವಲ್ಲದೆ ಮತ್ತೇನು?

ಹಿಂದೂ ಧರ್ಮದೊಳಗಿನ ಸಾಮಾಜಿಕ ಅಸಮಾನತೆಯ ಅವಮಾನದಿಂದ ಹೊರಬರಲು ಬಾಬಾಸಾಹೇಬರು ಕೈಗೊಂಡ ದಿಟ್ಟ ಕ್ರಮಗಳಲ್ಲಿ ‘ಬುದ್ಧದಮ್ಮ ಸ್ವೀಕಾರ’ವೂ ಒಂದು. ಅವರ ನೋವು ಎಷ್ಟು ಅಗಾಧವಾದುದು ಎಂಬುದಕ್ಕೆ 1931ರ ಆಗಸ್ಟ್ 14ರಂದು ಗಾಂಧೀಜಿಯವರಿಗೆ ಹೀಗೆ ಹೇಳುತ್ತಾರೆ; ‘‘ನನಗೊಂದು ತಾಯಿನಾಡಿಲ್ಲ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ನಮ್ಮನ್ನು ಅತ್ಯಂತ ಕೀಳಾಗಿ ಕಾಣುವ ಈ ಧರ್ಮವನ್ನು ನನ್ನ ನಾಡೆಂದು, ನನ್ನ ಧರ್ಮವೆಂದು ಹೇಗೆ ಕರೆಯಲಿ? ಹೇಗೆ ಭಾವಿಸಲಿ? ಈ ವಿಷಯದಲ್ಲಿ ನನ್ನನ್ನು ದೇಶದ್ರೋಹಿ ಎಂದು ಕರೆಯುವುದಾದರೆ ಅದಕ್ಕೆ ನನ್ನ ವಿಷಾದವಿಲ್ಲ. ನಾನು ದೇಶದ್ರೋಹಿ ಎನ್ನುವುದಾದರೆ ಅದಕ್ಕೆ ಕಾರಣ ಈ ನಾಡು. ತುಳಿತಕ್ಕೊಳಗಾದ ನನ್ನ ಜನಕ್ಕೆ ಮಾನವೀಯ ಹಕ್ಕುಗಳನ್ನು ದೊರಕಿಸುವ ಹೋರಾಟದಲ್ಲಿ ದೇಶದಹಿತಕ್ಕೆ ತೊಂದರೆ ಎನ್ನುವುದಾದರೆ ಅದನ್ನು ದ್ರೋಹವೆಂದು ನಾನು ಪರಿಗಣಿಸುವುದೇ ಇಲ್ಲ’’ ಎಂದರು. ಆನಂತರ ‘ಅಸ್ಪಶ್ಯರಿಗೆ ಬೌದ್ಧಧರ್ಮದ ಹೊರತು ಬೇರೆ ಯಾವುದೇ ಅಭ್ಯುದಯದ ಮಾರ್ಗವಿಲ್ಲ’ ಎಂದು 1956 ಅಕ್ಟೋಬರ್ 26ರಂದು ಬೌದ್ಧದಮ್ಮವನ್ನು ಸ್ವೀಕಾರ ಮಾಡಿದರು. ಅವರ ಪರಿನಿಬ್ಬಾಣದ ದಿನ ನೆರೆದಿದ್ದ ದಲಿತ ರಾಜಕಾರಣಿಗಳು, ನೌಕರರು, ಉದ್ಯಮಿಗಳು, ವಿದ್ಯಾರ್ಥಿಗಳಲ್ಲಿ ಎಷ್ಟುಮಂದಿ ಬಾಬಾಸಾಹೇಬರೊಟ್ಟಿಗೆ ಸಾಗಿದ್ದಾರೆ?. ಬೌದ್ಧದಮ್ಮದ ಮೂಲಕ ಇಡೀ ಭಾರತವನ್ನು ಸಮಾನತೆಯ ನೆಲೆಯಲ್ಲಿ ಕಟ್ಟಬೇಕೆಂಬುದು ಬಾಬಾಸಾಹೇಬರ ಕನಸಾಗಿತ್ತು. ಬಾಬಾಸಾಹೇಬರು ಹೇಳಿದ್ದು ನನ್ನ ಹೋರಾಟವೇ ನಿಮಗೆ ಸಂದೇಶ ಎಂದು. ಹೋರಾಟ ಮಾತ್ರ ವಂಚಿತ ಸಮುದಾಯಕ್ಕೆ ಸ್ಥಾನಮಾನವನ್ನು ಕಲ್ಪಿಸಲು ಸಾಧ್ಯ. ಹೋರಾಟ ಅಸ್ಪಶ್ಯರಿಗೆ ಬಿಡುಗಡೆಯ ಮಾರ್ಗ ತೋರಬಲ್ಲದು. ದೃಢನಂಬಿಕೆ ಬೆಳೆಸಿಕೊಳ್ಳಿ: ಅಸ್ಪಶ್ಯರೆಲ್ಲರೂ ಒಂದು ಸಾಮೂಹಿಕ ಸಂಕಲ್ಪವನ್ನು ಅಂತರ್ಗತ ಮಾಡಿಕೊಳ್ಳಬೇಕು. ಅವರು ತಮ್ಮಿಳಗಿನ ಸಮಸ್ತ ಜಡತ್ವವನ್ನು ಬಿಟ್ಟು ಏಕತೆಯೊಂದಿಗೆ ಎದ್ದು ನಿಂತು ಪ್ರತಿಭಟಿಸುವುದನ್ನು ಕಲಿತುಕೊಳ್ಳಬೇಕು. ಜೊತೆಗೆ ತಾವು ಕೈಗೊಂಡಿರುವ ಮಹತ್ತರ ಕಾರ್ಯದ ಪಾವಿತ್ರತೆಯ ಬಗ್ಗೆ ದೃಢನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲಕ್ಕೂ ಮಿಗಿಲಾಗಿ ತಾವು ಮುಟ್ಟಬೇಕಾದ ಗುರಿಯ ಬಗ್ಗೆ ಒಂದು ಸಮಷ್ಟಿ ನಿರ್ಧಾರವನ್ನು ಸೃಷ್ಟಿಸಿಕೊಳ್ಳಬೇಕು ಎಂದರು. ಆದರೆ, ಎಷ್ಟುಮಂದಿ ಅಂಬೇಡ್ಕರ್‌ವಾದಿಗಳಲ್ಲಿ ಈ ಸಮಷ್ಟಿ ಪ್ರಜ್ಞೆಯಿದೆ?

ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿಕೊಟ್ಟಿರುವ ಸಮಾನತೆಯ ಸಂವಿಧಾನದ ಸವಲತ್ತುಗಳನ್ನು, ಗಳಿಸಿಕೊಟ್ಟಿರುವ ಸಂವಿಧಾನಾತ್ಮಕ ಹಕ್ಕು-ಅಧಿಕಾರಗಳನ್ನು ಎಲ್ಲಾ ಜಾತಿ, ಮತಧರ್ಮಗಳ ಜನಬಾಂಧವರೆಲ್ಲರೂ ಅನುಭವಿಸುತ್ತಿದ್ದಾರೆ. ಬಾಬಾಸಾಹೇಬರು ಎಲ್ಲಾ ಜಾತಿಯಲ್ಲಿರುವ ದುರ್ಬಲರ, ಬಡವರ, ಶೋಷಿತರ ಉದ್ಧಾರಕ್ಕಾಗಿ ಹಗಲಿರುಳು ದುಡಿದಿದ್ದಾರೆ, ಹೋರಾಡಿದ್ದಾರೆ. ಅವರು ತಮ್ಮ ಐತಿಹಾಸಿಕ ಪ್ರಜ್ಞೆಯಿಂದ ಎಸ್ಸಿ, ಎಸ್ಟಿಗಳ ಜೊತೆಗೆ ಜನಸಂಖ್ಯೆಯಾಧಾರದ ಮೇಲೆ ಒಬಿಸಿ, ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮ್, ಕ್ರೈಸ್ತ, ಸಿಖ್ ಬಾಂಧವರಿಗೆ ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಎಲ್ಲಾ ಜಾತಿಯ ಮಹಿಳೆಯರಿಗೆ ಸಮಾನ ಹಕ್ಕು ಅವಕಾಶಗಳನ್ನು ಗಳಿಸಿಕೊಡಲೆಂದು ಹೋರಾಡಿ ಹಿಂದೂ ಕೋಡ್ ಮಸೂದೆಯನ್ನು ಸಲ್ಲಿಸಿದರು. ಆ ಮಸೂದೆ ಅಂಗೀಕಾರವಾಗದ ಕಾರಣಕ್ಕಾಗಿ ತಮ್ಮ ಮಂತ್ರಿ ಪದವಿಯನ್ನೇ ತ್ಯಜಿಸಿದರು. ಸ್ವಾತಂತ್ರ, ಸಮಾನತೆ, ಸೋದರತೆಯನ್ನು ಸ್ಥಾಪಿಸಲು ರಾಷ್ಟ್ರದ ಐಕ್ಯತೆಗಾಗಿ ದುಡಿದರು. ಇಷ್ಟೆಲ್ಲ ಹೋರಾಡಿದ ಬಾಬಾಸಾಹೇಬರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಇತರ ಜನಾಂಗದಿಂದ ಅವರನ್ನು ಹಾಗೂ ಅವರ ಹೋರಾಟವನ್ನು ದೂರ ಉಳಿಯುವಂತೆ ಮಾಡಿ ಹೋರಾಟದ ದಿಕ್ಕು ತಪ್ಪಿಸಿರುವ ಮನುವಾದಿಗಳ ಮರ್ಮವನ್ನು ಬಯಲು ಮಾಡಬೇಕಾಗಿದೆ. ಎಲ್ಲಾ ಜಾತಿ ಜನಾಂಗಗಳಿಗೂ ನಿಮ್ಮ ನೈಜ ಹೋರಾಟಗಳನ್ನು ತಿಳಿಸಿ ಜಾಗೃತಿ ಮೂಡಿಸಿ ಜಾತಿ ಜಾತಿಗಳ ನಡುವಿನ, ಧರ್ಮ ಧರ್ಮಗಳ ನಡುವಿನ ಒಳಜಗಳವನ್ನು ನಿಲ್ಲಿಸಿ ಸಾಮರಸ್ಯವನ್ನು ಮೂಡಿಸಬೇಕಾಗಿದೆ. ಒಡೆದ ಜಾತಿ, ಧರ್ಮಗಳನ್ನು ಒಂದು ಮಾಡಿ ಸಮಾನತೆಯ, ಸೋದರತೆಯ ಬೆಸಿಗೆ ಹಾಕಿ ಒಟ್ಟಾಗಿ ಬದುಕಬೇಕಾಗಿದೆ. ಆ ಮೂಲಕ ಬಾಬಾಸಾಹೇಬರ ಹೆಸರನ್ನು ಉಳಿಸಬೇಕಾಗಿದೆ. ಅದಕ್ಕಾಗಿಯೇ ಬದುಕಲು ಬದ್ಧರಾಗಿ, ಸಿದ್ಧರಾಗಿ ಒಕ್ಕೊರಳಿನಿಂದ ಬಾಬಾಸಾಹೇಬರ ಪ್ರತಿವರ್ಷ ಪರಿನಿಬ್ಬಾಣದಿನದಂದು ಸಂಕಲ್ಪ ಮಾಡಬೇಕಿದೆ. ಬಾಬಾಸಾಹೇಬರ ಪರಿನಿಬ್ಬಾಣದ ದಿನ ಮುಗಿದ ನಂತರ ಅವರು ಹುಟ್ಟಿದ ದಿನದ ತನಕ ಮಲಗಿ ಆನಂತರ ಆ ದಿನವನ್ನು ಆಚರಿಸುವುದಕ್ಕಾಗಿ ಎದ್ದೇಳುವ ಪ್ರವೃತ್ತಿಯಿಂದ ಅಂಬೇಡ್ಕರ್ ಹೆಸರಿನ ಸಂಘಟನೆಗಳು, ನೌಕರರು, ವಿದ್ಯಾವಂತರು ತುರ್ತಾಗಿ ಹೊರಬರಬೇಕಾಗಿದೆ. ಬಾಬಾಸಾಹೇಬರು ತಮ್ಮ ಬದುಕಿನುದ್ದಕ್ಕೂ ನನ್ನ ಜನ ನನ್ನ ಜನ ಎಂದೇ ಉಸಿರಾಡಿದರು, ಹೋರಾಡಿದರು. ಆದರೆ ಅವರು ಯಾರನ್ನು ನನ್ನ ಜನರೆಂದು ತಮ್ಮ ಬದುಕನ್ನೆ ಅರ್ಪಿಸಿದರೋ ಅವರೇ ಅವರ ಕಣ್ಣೀರಿಗೆ ಕಾರಣಕರ್ತರಾದರು. ಕೊನೆಯದಾಗಿ: ಬಾಬಾಸಾಹೇಬರು ಕಣ್ಣೀರು ಹಾಕುತ್ತಾ ತಮ್ಮ ಕೊನೆಯ ಸಂದೇಶವನ್ನು ನಾನಕ್ ಚಂದು ರತ್ತು ಜೊತೆ ಹೀಗೆ ಹೇಳುತ್ತಾರೆ; ಬಹಳ ಕಷ್ಟಪಟ್ಟು ನನ್ನ ಹೋರಾಟದ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಇದು ಹೀಗೇ ಮುನ್ನಡೆಯಬೇಕು. ಅದರ ಮಾರ್ಗದಲ್ಲಿ ಏನೆಲ್ಲ ಎಡರುತೊಡರುಗಳು ಎದುರಾಗಬಹುದು. ಅಡ್ಡಿ ಅಡಚಣೆಗಳು ಅಡ್ಡಬರಬಹುದು. ಚ್ಯುತಿ ನ್ಯೂನತೆಗಳಂತಹ ಕಷ್ಟಗಳು ಅದರ ಮುನ್ನಡೆಗೆ ತೊಂದರೆ ಒಡ್ಡಬಹುದು. ಇವೆಲ್ಲವನ್ನು ಮೆಟ್ಟಿ ನಿಲ್ಲುತ್ತಾ ಮುಂದೆ ಸಾಗಬೇಕು. ನನ್ನ ಜನರು ಈ ಸಂದರ್ಭದ ಸವಾಲನ್ನು ಸ್ವೀಕರಿಸುವ ಧೀಮಂತಿಕೆ ತೋರಬೇಕು. ಒಂದು ಗೌರವಾರ್ಹವಾದ ಮರ್ಯಾದೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಅವರೆಲ್ಲ ಇದಕ್ಕೆ ಸಿದ್ಧರಾಗಬೇಕು. ಒಂದು ವೇಳೆ ನನ್ನ ಜನ ಹಾಗೂ ನನ್ನ ಅನುಯಾಯಿಗಳು ಈ ಆಂದೋಲನದ ರಥವನ್ನು ಮುಂದೆ ನಡೆಸುವಲ್ಲಿ ವಿಫಲರಾದರೂ ಪರವಾಗಿಲ್ಲ. ಅವರು ಮಾಡಬಹುದಾದ ಉತ್ತಮ ಕೆಲಸವೆಂದರೆ ಅದು ಎಲ್ಲಿಗೆ ಬಂದಿದೆಯೋ ಅಲ್ಲಿಯೇ ನಿಲ್ಲುವಂತಾದರೂ ನೋಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಅದು ಹಿಂದಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಇದು ನನ್ನ ಕೊನೆ ಸಂದೇಶ. ನನ್ನ ಈ ಮಾತಿಗೆ ಎಲ್ಲರೂ ಕಿವಿಗೊಡುವರೆಂಬ ವಿಶ್ವಾಸ ನನಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top