-

ಕೊರೋನ ನಿಯಂತ್ರಣ ಮಕ್ಕಳ ಜವಾಬ್ದಾರಿಯಲ್ಲ, ಶಾಲೆಗಳನ್ನು ಮುಚ್ಚುವ ಅಗತ್ಯ ಇನ್ನಿಲ್ಲ

-

ಕೊರೋನ ಸೋಂಕಿನ ಭಯದಲ್ಲಿ ವ್ಯಾಪಾರ ಮಳಿಗೆಗಳು, ಚಿತ್ರಮಂದಿರಗಳು, ಉದ್ಯಾನಗಳಂತಹ ಸಾರ್ವಜನಿಕ ಸ್ಥಳಗಳು ಅವಶ್ಯಕವಲ್ಲವೆಂದು ಮುಚ್ಚಿ ಹಾಕಿ, ಜೊತೆಗೆ ಶಾಲೆಗಳನ್ನೂ ಅದೇ ಪಟ್ಟಿಗೆ ಸೇರಿಸಿ ಅನವಶ್ಯಕವೆಂದು ಮುಚ್ಚಿ ಎರಡು ತಿಂಗಳಿಗೂ ಹೆಚ್ಚಾಗಿದೆ, ವಾರ್ಷಿಕ ಪರೀಕ್ಷೆಗಳೂ ನಡೆಯದೆ ಲಕ್ಷಗಟ್ಟಲೆ ವಿದ್ಯಾರ್ಥಿಗಳ ಭವಿಷ್ಯವೇ ಸಂಕಟದಲ್ಲಿದೆ. ನಮ್ಮ ರಾಜ್ಯದಲ್ಲಿ ಒಂದು ಕೋಟಿಯಷ್ಟು ಮಕ್ಕಳು ಶಾಲೆಗಳಿಂದ ವಂಚಿತರಾಗಿ ಮನೆಗಳಲ್ಲಿ ಕೂಡಿ ಹಾಕಲ್ಪಟ್ಟಿದ್ದಾರೆ; ಜಗತ್ತಿನ ಹೆಚ್ಚಿನ ದೇಶಗಳಲ್ಲೂ ಇದೇ ಸ್ಥಿತಿಯಿದೆ.

ಅನವಶ್ಯಕವೆಂದು ಮುಚ್ಚಲಾಗಿರುವ ಶಾಲೆಗಳನ್ನು ತೆರೆಯಬೇಕೇ ಬೇಡವೇ, ಮಕ್ಕಳನ್ನು ಮನೆಗಳಲ್ಲೇ ಕೂರಿಸಿ ಶಾಶ್ವತವಾಗಿ ದೂರ ಶಿಕ್ಷಣ ನೀಡಲು ಸಾಧ್ಯವಿದೆಯಲ್ಲವೇ, ಶಿಕ್ಷಕರ ಅಗತ್ಯವಿದೆಯೇ, ಇದ್ದರೂ ಅವರಿಗೆ ಈಗಿನಂತೆ ಭತ್ಯೆಗಳನ್ನು ಕೊಡಬೇಕೇ ಎಂಬೆಲ್ಲ ಪ್ರಶ್ನೆಗಳನ್ನು ಅತ್ಯಂತ ಜವಾಬ್ದಾರಿಯ ಸ್ಥಾನಗಳಲ್ಲಿರುವವರೇ ಕೇಳತೊಡಗಿದ್ದಾರೆ.

ಶಾಲೆಗಳು ಅನವಶ್ಯಕ ಸೇವೆಯೆಂದಲ್ಲಿಂದ ಹೊರಟು ಈಗ ಶಾಲೆಗಳೂ, ಶಿಕ್ಷಕರೂ ಎಂದೆಂದಿಗೂ ಅನವಶ್ಯಕ ಎಂಬಲ್ಲಿಗೆ ಚರ್ಚೆಯನ್ನು ಎಳೆಯಲಾಗುತ್ತಿದೆ. ಹೆತ್ತವರೂ ಕೂಡ ಕೊರೋನ ಸಾಂಕ್ರಾಮಿಕವು ಸಂಪೂರ್ಣವಾಗಿ ಮರೆಯಾಗುವವರೆಗೆ ಮಕ್ಕಳನ್ನು ಶಾಲೆಗಳಿಗೆ ಕಳಿಸುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ಭೀತಿಗೊಳಗಾಗಿದ್ದಾರೆ. ಒಟ್ಟಿನಲ್ಲಿ, ಕೊರೋನ ಸೋಂಕಿನ ನೆಪದಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಾಗಿದೆ.

ನೂರಕ್ಕೆ ತೊಂಬತ್ತೊಂಬತ್ತು ಜನರಲ್ಲಿ ಯಾವೊಂದು ತೀವ್ರತರದ ಸಮಸ್ಯೆಯನ್ನೂ ಉಂಟುಮಾಡದ ಕೊರೋನ ಸೋಂಕಿಗಾಗಿ ಶಾಲೆಗಳನ್ನು ಮುಚ್ಚಬೇಕಾಗಿಲ್ಲ ಎಂದು ವೈದ್ಯಕೀಯ ತಜ್ಞರೀಗ ಸ್ಪಷ್ಟವಾಗಿ ಹೇಳತೊಡಗಿದ್ದಾರೆ. ಹಾಗಿರುವಾಗ, ಶಾಲೆಗಳು ಅವಶ್ಯಕವಷ್ಟೇ ಅಲ್ಲ, ಶಾಲೆಗಳಲ್ಲಿ ಮಾತ್ರವೇ ಸಮಗ್ರ ಕಲಿಕೆ ಸಾಧ್ಯ ಎನ್ನುವುದನ್ನು ಪೋಷಕರೂ, ಆಡಳಿತಗಾರರೂ, ರಾಜಕಾರಣಿಗಳೂ ಅರ್ಥ ಮಾಡಿಕೊಳ್ಳಬೇಕಾಗಿರುವುದು ಮೊದಲ ಅಗತ್ಯವಾಗಿದೆ.

ಕಲಿಕೆ ಎನ್ನುವುದು ಪುಸ್ತಕದಿಂದಷ್ಟೇ ಅಲ್ಲ, ಪರೀಕ್ಷೆ  ಎನ್ನುವುದು ಪ್ರಶ್ನೆಪತ್ರಿಕೆಯಷ್ಟೇ ಅಲ್ಲ, ಮಕ್ಕಳು ಮನೆಗಳಲ್ಲಷ್ಟೇ ಕಲಿಯುವುದಲ್ಲ, ಹೊರಗೂ ಕಲಿಯಲೇಬೇಕು ಎನ್ನುವುದಕ್ಕಾಗಿ ಶಾಲೆಗಳು ಇರಲೇ ಬೇಕು. ತಮ್ಮ ಮನೆಯಲ್ಲಿ ನೋಡುವುದಕ್ಕಿಂತ, ಕಲಿಯುವುದಕ್ಕಿಂತ ಬೇರೆಯಾದುದನ್ನು, ಬೇರೆ ರೀತಿಗಳಲ್ಲಿ, ಬೇರೆ ಮಕ್ಕಳು ಮತ್ತು ಶಿಕ್ಷಕರನ್ನು ನೋಡಿ, ಕೇಳಿ ಕಲಿಯುವ ಅವಕಾಶಗಳು ಎಲ್ಲ ಮಕ್ಕಳಿಗೂ ದೊರೆಯಲೇಬೇಕು. ಸುತ್ತಲಿನ ಜಗತ್ತಿನ ಬಗ್ಗೆ ಬಗೆಬಗೆಯ ಗ್ರಹಿಕೆಗಳು, ವೈವಿಧ್ಯತೆಯ ಅರಿವು, ಸಾಮಾಜಿಕ ಕೌಶಲಗಳು, ಒತ್ತಡವನ್ನು ಎದುರಿಸುವ ಉಪಾಯಗಳು, ಆದ್ಯತೆಗಳು ಮತ್ತು ಆಸಕ್ತಿಗಳ ಆಯ್ಕೆಗಳು, ಆಟೋಟಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲವೂ ಶಾಲೆಗಳಲ್ಲಷ್ಟೇ ಸಿಗುವುದರಿಂದ ಮನೆಗಳಲ್ಲಿ ಕಲಿಯಲಾಗದ್ದನ್ನು ಕಲಿಯುವುದಕ್ಕೆ, ಮನುಷ್ಯನನ್ನು ಸಮಾಜಜೀವಿಯಾಗಿ ಬೆಳೆಸುವುದಕ್ಕೆ ಶಾಲೆಗಳು ಅತ್ಯವಶ್ಯಕವಾಗಿವೆ. ಆದ್ದರಿಂದ ಕೊರೋನ ಭೀತಿಯಲ್ಲಿ ಶಾಲೆಗಳನ್ನು ಅನವಶ್ಯಕವಾಗಿಸಲು ಮಕ್ಕಳಾಗಲೀ, ಪೋಷಕರಾಗಲೀ ಬಿಡಲೇಬಾರದು.

ಶಾಲೆಗಳನ್ನು ಮುಚ್ಚುವುದರಿಂದ ಕೊರೋನ ಸೋಂಕಿನ ನಿಯಂತ್ರಣಕ್ಕೆ ಸಹಾಯವಾಗುತ್ತದೆಯೇ? ಅದೂ ಇಲ್ಲ. ಮಕ್ಕಳಿಗೆ ಸೋಂಕು ತಗಲದಂತೆ ರಕ್ಷಿಸಲು ಶಾಲೆಗಳನ್ನು ಮುಚ್ಚಬೇಕೇ ? ಅದೂ ಇಲ್ಲ ! ವೈದ್ಯಕೀಯ ವಿಜ್ಞಾನದ ಅತಿ ಪ್ರತಿಷ್ಠಿತ ಪತ್ರಿಕೆಗಳಾದ ದಿ ಲಾನ್ಸೆಟ್ (DOI: 10.1016/S2352-4642(20)30095-X), ಬ್ರಿಟಿಷ್ ಮೆಡಿಕಲ್ ಜರ್ನಲ್ (doi: 10.1136/archdischild-2020-319474), ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ (ಜೆಎಎಂಎ) (doi:10.1001/jamapediatrics.2020.2068; doi:10.1001/jamapediatrics.2020.1892] ಮುಂತಾದವುಗಳಲ್ಲಿ ಈ ಬಗ್ಗೆ ಹಲವು ವರದಿಗಳು ಈಗಾಗಲೇ ಪ್ರಕಟವಾಗಿವೆ, ಜೆಎಎಂಎ ಸಂಪಾದಕೀಯದಲ್ಲಿ ಶಾಲೆಗಳನ್ನು ಮುಚ್ಚಿರುವುದು ಅಪರಾಧವೆಂದೇ ಬಣ್ಣಿಸಲಾಗಿದೆ.

ಬಹುತೇಕ ಎಲ್ಲ ಮಕ್ಕಳಿಗೆ ಕೊರೋನ ಸೋಂಕಿನಿಂದ ಯಾವುದೇ ಅಪಾಯವಿಲ್ಲ. ವಿಶ್ವದಾದ್ಯಂತ ಇದುವರೆಗೆ ಕೊರೋನ ಸೋಂಕು ಗುರುತಿಸಲ್ಪಟ್ಟಿರುವವರಲ್ಲಿ ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳು ಶೇ. 1ಕ್ಕಿಂತ ಕಡಿಮೆಯಿದ್ದಾರೆ. ಇಟೆಲಿ, ಐಸ್‌ಲ್ಯಾಂಡ್, ಜಪಾನ್, ಚೀನಾ, ಮುಂತಾದೆಡೆಗಳಿಂದ ಈಗ ಲಭ್ಯವಿರುವ ವರದಿಗಳನುಸಾರ, ಹತ್ತು ವರ್ಷಕ್ಕಿಂತ ಕೆಳಗಿನ  ಮಕ್ಕಳಲ್ಲಿ ಕೊರೋನ ಸೋಂಕು ಇರುವುದೇ ಇಲ್ಲ, ಇದ್ದರೂ ಅತಿ ಅಪರೂಪ ಎನ್ನುವುದು ದೃಢಪಟ್ಟಿದೆ. ಹಾಗೆ ಸೋಂಕು ಗುರುತಿಸಲ್ಪಟ್ಟ ಮಕ್ಕಳಲ್ಲೂ ಸೋಂಕಿನ ಲಕ್ಷಣಗಳಿರುವುದು ಅಪರೂಪ, ತೀವ್ರ ಸಮಸ್ಯೆಗಳಾಗಿರುವುದು ಎಲ್ಲಾ ದೇಶಗಳಲ್ಲಿ ಹುಡುಕಿದರೂ ಬೆರಳೆಣಿಕೆಯಷ್ಟು ಮಕ್ಕಳಲ್ಲಿ ಮಾತ್ರ; ಮೊದಲೇ ಇತರ ಸಮಸ್ಯೆಗಳಿರುವ ಮಕ್ಕಳಲ್ಲಿ ಕೂಡ ಕೊರೊನಾದಿಂದ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳು ಬಹಳಷ್ಟು ಹೆಚ್ಚಬಹುದೆನ್ನುವುದಕ್ಕೂ ಬಲವಾದ ಆಧಾರಗಳಿಲ್ಲ.

ಕೊರೋನ ಸೋಂಕು ಹರಡುವಲ್ಲಿ ಮಕ್ಕಳ ಪಾತ್ರವು ತೀರಾ ನಗಣ್ಯ. ಮಕ್ಕಳಲ್ಲಿ ಸೋಂಕುಂಟಾಗುವ ಸಾಧ್ಯತೆಗಳು ಮತ್ತು ಸೋಂಕುಂಟಾದರೂ ರೋಗಲಕ್ಷಣಗಳುಂಟಾಗುವ ಸಾಧ್ಯತೆಗಳು ಅತಿ ವಿರಳವಾಗಿರುವುದರಿಂದ ಮಕ್ಕಳಿಂದ ಮನೆಗಳಲ್ಲಾಗಲೀ, ಶಾಲೆಗಳಲ್ಲಾಗಲೀ, ಬೇರೆಲ್ಲೇ ಆಗಲೀ ಇತರರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆಗಳು ಕೂಡ ಅತ್ಯಲ್ಪ; ಚೀನಾ, ಫ್ರಾನ್ಸ್, ಆಸ್ಟ್ರೇಲಿಯಾಗಳ ಅಧ್ಯಯನಗಳು ಇದನ್ನು ದೃಢಪಡಿಸಿವೆ. ಕೊರೋನ ವೈರಾಣುಗಳು ಸೋಂಕುಳ್ಳ ವಯಸ್ಕರಿಂದಲೇ ಮನೆಯಲ್ಲಿರುವ ಇತರ ವಯಸ್ಕರಿಗೂ, ಮಕ್ಕಳಿಗೂ ಹರಡುತ್ತವೆಯೇ ಹೊರತು ಮಕ್ಕಳಿಂದಲ್ಲ ಎನ್ನುವುದನ್ನು ನೆದರ್ಲೆಂಡಿನ ಅಧ್ಯಯನವು ತೋರಿಸಿದೆ. ಆದ್ದರಿಂದ ಕೊರೋನ ಸೋಂಕನ್ನು ಅತಿಯಾಗಿ ಹರಡುವುದಕ್ಕೆ ಮಕ್ಕಳು ಹೊಣೆಯಲ್ಲವೇ ಅಲ್ಲ.

ಶಾಲೆಗಳನ್ನು ಮುಚ್ಚುವುದರಿಂದ ಕೊರೋನ ಸೋಂಕನ್ನು ನಿಯಂತ್ರಿಸುವಲ್ಲಿ ಯಾವುದೇ ಸಹಾಯವಾಗುವುದಿಲ್ಲ. ತೈವಾನ್‌ ದೇಶವು ಶಾಲೆಗಳನ್ನು ಮುಚ್ಚದಿದ್ದರೂ ಕೊರೋನ ಹರಡುವಿಕೆಯನ್ನು ಯಶಸ್ವಿಯಾಗಿ ನಿಯಂತ್ರಿಸಿತು. ಆದರೆ ಚೀನಾ, ಹಾಂಗ್‌ಕಾಂಗ್, ಸಿಂಗಾಪುರ ಮುಂತಾದ ದೇಶಗಳಲ್ಲಿ ಶಾಲೆಗಳನ್ನು ವಾರಗಟ್ಟಲೆ ಮುಚ್ಚಿದರೂ ಕೊರೋನ ನಿಯಂತ್ರಣಕ್ಕೆ ಸಹಾಯವಾಗಲಿಲ್ಲ. ಶಾಲೆಗಳನ್ನು ಮುಚ್ಚುವುದರಿಂದ ಕೊರೋನದಿಂದಾಗುವ ಸಾವುಗಳನ್ನು ತಡೆಯುವಲ್ಲಿ ಶೇ.2-4ರಷ್ಟೇ ಪ್ರಯೋಜನವಾಗಬಹುದು ಎಂಬ ಅಂದಾಜನ್ನೂ ಮಾಡಲಾಗಿದೆ.

ಶಾಲೆಗಳನ್ನು ಮುಚ್ಚುವುದರಿಂದ ಕೊರೋನ ಹರಡದಂತೆ ತಡೆಯುವುದಕ್ಕೆ ಹೆಚ್ಚಿನ ಪ್ರಯೋಜನವಿಲ್ಲ ಎನ್ನುವುದು ಹೀಗೆ ದೃಢಗೊಂಡಿದ್ದರೆ, ಇನ್ನೊಂದೆಡೆ, ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳ ದೈಹಿಕ, ಮಾನಸಿಕ, ಪೌಷ್ಟಿಕ, ಶೈಕ್ಷಣಿಕ ಸ್ಥಿತಿಗತಿಗಳ ಮೇಲೂ, ಕುಟುಂಬಗಳ ಮೇಲೂ ಅಪಾರವಾದ ಕಷ್ಟಗಳಾಗಬಹುದು ಎನ್ನುವುದು ಕೂಡ ದೃಢಪಟ್ಟಿದೆ.

ಈ ಹಿಂದೆಯೂ ಆಫ್ರಿಕಾದಲ್ಲಿ ಇಬೋಲ ಹರಡುತ್ತಿದ್ದಾಗ ತಿಂಗಳುಗಟ್ಟಲೆ ಶಾಲೆಗಳನ್ನು ಮುಚ್ಚಿದ್ದರಿಂದಾಗಿ ಮಕ್ಕಳ ಮೇಲೆ ಎಲ್ಲ ರೀತಿಯ ದುಷ್ಪರಿಣಾಮಗಳಾದವು. ಮಕ್ಕಳು ಮನೆಯಲ್ಲೇ ಉಳಿದಾಗ ಶಾಲಾ ಕಲಿಕೆಯಿಂದ, ಶಿಕ್ಷಕರ ಮಾರ್ಗದರ್ಶನಗಳಿಂದ, ತಮ್ಮ ಸಹಪಾಠಿಗಳ ಸಖ್ಯದಿಂದ, ಆಟೋಟಗಳಿಂದ ವಂಚಿತರಾಗುವುದರ ಜೊತೆಗೆ, ಶಾಲೆಗಳಲ್ಲಿ ದೊರೆಯುವ ಬಿಸಿಯೂಟ, ವೈದ್ಯಕೀಯ ನೆರವು ಮತ್ತಿತರ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ದೂರ ಶಿಕ್ಷಣದ ಹಲವು ಇತಿಮಿತಿಗಳಿಂದಾಗಿ ಮತ್ತು ಮಕ್ಕಳಿಗೆ ಕಲಿಕೆಯಲ್ಲಿ ನೆರವಾಗಲು ಎಲ್ಲಾ ಮನೆಗಳಲ್ಲಿ ಸಾಧ್ಯವಾಗದಿರುವುದರಿಂದಾಗಿ ಹಲವು ಮಕ್ಕಳು ತೀವ್ರವಾದ ಕಷ್ಟಗಳಿಗೀಡಾಗಬೇಕಾಗುತ್ತದೆ.

ದೂರಶಿಕ್ಷಣಕ್ಕೆ ಸೌಲಭ್ಯಗಳನ್ನು ಒದಗಿಸಲಾಗದ ಕುಟುಂಬಗಳಲ್ಲಿ, ಅಂತಹ ತಂತ್ರಜ್ಞಾನದ ಅರಿವೇ ಇಲ್ಲದ ಕುಟುಂಬಗಳಲ್ಲಿ ಮಕ್ಕಳ ಕಲಿಕೆಯೇ ಸ್ಥಗಿತಗೊಳ್ಳಲಿದೆ. ಕೊರೋನ ಇರಲಿ, ಬೇರೇನೇ ಬರಲಿ, ನಿತ್ಯವೂ ಕೆಲಸಕ್ಕೆ ಹೋಗಲೇಬೇಕಾದ ಅವಶ್ಯಕ ಸೇವೆಗಳ ನೌಕರರು, ದಾದಿಯರು, ವೈದ್ಯರು ಮತ್ತಿತರರು ತಮ್ಮ ಮಕ್ಕಳಿಗೆ ದೂರ ಶಿಕ್ಷಣಕ್ಕೆ ಯಾವುದೇ ನೆರವನ್ನು ನೀಡಲು ಸಾಧ್ಯವಾಗುವುದಿಲ್ಲ. ಮನೆಯಿಂದಲೇ ಕೆಲಸ ಮಾಡುತ್ತಿರುವವರು ಕೂಡ ತಮ್ಮ ಮಕ್ಕಳಿಗೆ ದೂರ ಶಿಕ್ಷಣದಲ್ಲಿ ಯಾವುದೇ ನೆರವನ್ನು ಕೊಡಲು ಸಾಧ್ಯವಾಗದಿರಬಹುದು. ಮನೆಯಲ್ಲೇ ಮಕ್ಕಳಿಗೆ ಕಲಿಸಿಕೊಡಲು ಪ್ರಯತ್ನಿಸುವಾಗಲೂ ಗೊಣಗಾಟ, ರೇಗಾಟಗಳಿಂದ ಮಕ್ಕಳಿಗೆ ಸಮಸ್ಯೆಗಳೇ ಆಗಬಹುದು.

ಐದು-ಹತ್ತು ವರ್ಷಗಳ ಸಣ್ಣ ಮಕ್ಕಳಲ್ಲಂತೂ ಹೆತ್ತವರ ಅಥವಾ ಹಿರಿಯರ ನೆರವಿಲ್ಲದೆ ದೂರ ಶಿಕ್ಷಣವು ಸಾಧ್ಯವೇ ಆಗುವುದಿಲ್ಲ. ಎಲ್ಲೆಡೆ ದಿಗ್ಬಂಧನ ವಿಧಿಸಿ ಕೆಲಸವಿಲ್ಲದೆ, ಊಟವಿಲ್ಲದೆ, ವಸತಿಯೂ ಇಲ್ಲದೆ ಕಷ್ಟಗಳಾಗಿರುವಾಗ, ಹೊರಗಡೆ ಕೆಲಸವಿಲ್ಲದ ವಯಸ್ಕರು ಮನೆಯಲ್ಲೇ ಉಳಿಯುವಂತಾಗಿ ಮಕ್ಕಳ ಮೇಲೆ ದೌರ್ಜನ್ಯಗಳಾಗುವ ಸಾಧ್ಯತೆಗಳೂ ಹೆಚ್ಚುತ್ತವೆ, ಅದರಲ್ಲೂ ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳ ಸಾಧ್ಯತೆಗಳು ಹೆಚ್ಚುತ್ತವೆ; ಈಗಾಗಲೇ ಅಂತಹ ಹಲವು ವರದಿಗಳಾಗಿವೆ.

ಆದ್ದರಿಂದ, ಶೇ. 99 ಸೋಂಕಿತರಲ್ಲಿ ಯಾವ ಸಮಸ್ಯೆಯನ್ನೂ ಉಂಟುಮಾಡದ, ಮಕ್ಕಳಲ್ಲಂತೂ ಯಾವೊಂದು ತೊಂದರೆಯನ್ನೂ ಉಂಟು ಮಾಡದ, ಹರಡುವಿಕೆಯಲ್ಲಿ ಮಕ್ಕಳ ಪಾತ್ರವು ತೀರಾ ನಗಣ್ಯವಾಗಿರುವ ಕೊರೊನಾ ಸೋಂಕಿನ ನೆಪದಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ಮನೆಗಳಲ್ಲೇ ಬಂಧಿಸಿಟ್ಟಿರುವುದು ಅಕ್ಷಮ್ಯವಾಗಿದೆ.  ಆದ್ದರಿಂದ ಈಗಾಗಲೇ ಲಭ್ಯವಾಗಿರುವ ಎಲ್ಲಾ ವೈಜ್ಞಾನಿಕ ಆಧಾರಗಳನ್ನು ಪರಿಗಣಿಸಿ ಹೊಸ ಶೈಕ್ಷಣಿಕ ವರ್ಷವು ಆರಂಭಗೊಳ್ಳುತ್ತಿರುವಾಗ ಎಲ್ಲಾ ಶಾಲೆಗಳನ್ನು ಆದಷ್ಟು ಬೇಗನೇ, ಹೆಚ್ಚಿನ ನಿರ್ಬಂಧಗಳಿಲ್ಲದೆ ಆರಂಭಿಸಲು ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ನಮ್ಮ ಮಕ್ಕಳಿಗಾಗಿ ಅದನ್ನು ಮಾಡುವುದು ನಮ್ಮ ಬದ್ಧತೆಯಾಗಿದೆ, ಜೆಎಎಂಎ ಸಂಪಾದಕೀಯದಲ್ಲಿ ಹೇಳಿರುವಂತೆ, ಇಂದಿನ ಮಕ್ಕಳು ಮುಂದೊಮ್ಮೆ ಈ ಮಹಾವ್ಯಾಧಿಯ ಬಗ್ಗೆ ಪರ್ಯಾಲೋಚಿಸಿದಾಗ ನಮ್ಮ ಇಂದಿನ ನಡವಳಿಕೆಗೆ ನಮ್ಮನ್ನು ಬಾಧ್ಯರಾಗಿಸಲಿದ್ದಾರೆ.

ಈಗಾಗಲೇ ಮುಗಿದಿರುವ ಶೈಕ್ಷಣಿಕ ವರ್ಷವನ್ನು ಅಲ್ಲಿಗೇ ಮುಗಿಸಿ, ಹತ್ತನೇ ತರಗತಿಯವರೆಗಿನ ಎಲ್ಲ ಮಕ್ಕಳನ್ನೂ, ಇನ್ನು ಯಾವ ಪರೀಕ್ಷೆ ಗಳನ್ನೂ ನಡೆಸದೆ, ತೇರ್ಗಡೆಗೊಳಿಸುವುದು ಈಗಿನ ವಿಷಮ ಪರಿಸ್ಥಿತಿಯಲ್ಲಿ ಒಳ್ಳೆಯ ಕ್ರಮವಾದೀತು. ಯಾವುದೇ ಒತ್ತಡಗಳಿಗಾಗಲೀ, ಗೊಂದಲಗಳಿಗಾಗಲೀ ಸಿಲುಕದೆ, ಶಾಲೆಗಳನ್ನು ಆದಷ್ಟು ಬೇಗನೇ ಆರಂಭಿಸಿ, ಮಕ್ಕಳನ್ನು ಹಿಂದೆಂದಿನಂತೆಯೇ ಆಡಿ ಕಲಿಯಲು ಅವಕಾಶ ನೀಡಬೇಕು. ಮಕ್ಕಳ ಬಿಸಿಯೂಟ ಮತ್ತಿತರ ಎಲ್ಲಾ ಚಟುವಟಿಕೆಗಳೂ ಎಂದಿನಂತೆ ನಡೆಯಬೇಕು. ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಅಸೌಖ್ಯವಿರುವ ಮಕ್ಕಳು ಆ ದಿನಗಳಿಗೆ ಶಾಲೆಗೆ ಬರದಿದ್ದರಾಯಿತು (ಈ ಮೊದಲೂ ಕೂಡ ಅದನ್ನೇ ಪಾಲಿಸುತ್ತಿರಲಿಲ್ಲವೇ?) ಒಂದು ವೇಳೆ ಅಂಥ ಮಕ್ಕಳೇನಾದರೂ ಶಾಲೆಗೆ ಬಂದದ್ದೇ ಆದರೂ ಕೂಡ, ಅವರ ಸಂಪರ್ಕಕ್ಕೆ ಬಂದರೆಂದು ತರಗತಿಯ ಇತರೆಲ್ಲರನ್ನೂ ಮನೆಗಳಲ್ಲೇ ಇರುವಂತೆ ಹೇಳುವ ಅಗತ್ಯವಿಲ್ಲ; ಅವರಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳು ತೊಡಗಿದರೆ ಅಂಥವರಷ್ಟೇ ಮನೆಯಲ್ಲಿ ಉಳಿದರೆ ಸಾಕು. ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯಲ್ಲಿ ಯಾರಿಗಾದರೂ ನಿಯಂತ್ರಣದಲ್ಲಿಲ್ಲದ ಸಕ್ಕರೆ ಕಾಯಿಲೆ, ಹೃದ್ರೋಗ, ರಕ್ತದ ಏರೊತ್ತಡ ಇತ್ಯಾದಿ ಗಂಭೀರ ಸಮಸ್ಯೆಗಳಿದ್ದರೆ, ಅಂಥವರಿಗೆ ಮುಂದಿನ ನಾಲ್ಕು ತಿಂಗಲ ಕಾಲ ಕರ್ತವ್ಯದಿಂದ ವಿನಾಯಿತಿ ನೀಡಿದರೆ ಒಳ್ಳೆಯದು.

ಒಟ್ಟಿನಲ್ಲಿ, ಶಾಲೆಗಳನ್ನು ಆದಷ್ಟು ಬೇಗನೇ ಪುನರಾರಂಭಿಸಿ ಮಕ್ಕಳ ಕಲಿಕೆಯೂ, ಆಟೋಟಗಳೂ, ಬಿಸಿಯೂಟವೂ ನಿರಾತಂಕವಾಗಿರುವಂತೆ ಮಾಡಬೇಕು; ಕೊರೋನ ಸೋಂಕಿನ ನಿಯಂತ್ರಣಕ್ಕೆ ನಮ್ಮ ಮಕ್ಕಳಾರೂ ಜವಾಬ್ದಾರರಲ್ಲ, ಅವರದಲ್ಲದ ಭಾರವನ್ನು ಅವರ ಮೇಲೆ ಹೊರಿಸದಿರೋಣ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎನ್ನುವುದಷ್ಟೇ ಸರಿ; ಮನೆಯೇ ಎಂದೆಂದಿಗೂ ಪಾಠಶಾಲೆಯಾಗಲಾರದು, ಆಗಕೂಡದು.

ವಯಸ್ಕರು ಹೇಗೆ ಮನೆಯಿಂದ ಹೊರಹೋಗಿ ದುಡಿಯಬೇಕೋ, ಮಕ್ಕಳೂ ಕೂಡ ಹಾಗೆಯೇ ಹೊರಗೆ ಶಾಲೆಗೆ ಹೋಗಿ ಕಲಿಯಬೇಕು, ಆಡಬೇಕು; ಮಕ್ಕಳ ಪಾಲಿಗೆ ಶಾಲೆಯೇ ಎರಡನೇ ಮನೆ ಎಂಬುದನ್ನು ನಾವು ಮರೆಯಬಾರದು. ಜೊತೆಗೆ, ಈ ಹೊಸ ಕೊರೋನ ಸೋಂಕಿನ ಬಗ್ಗೆ, ಅದನ್ನು ನಾವೀಗ ನಿಭಾಯಿಸಿದ ಬಗ್ಗೆ ಮಕ್ಕಳಲ್ಲೂ ಚರ್ಚೆಗಳನ್ನು ಹುಟ್ಟಿಸಬೇಕು, ಅವರ ಅಭಿಪ್ರಾಯಗಳನ್ನೂ ಕೇಳಬೇಕು, ಅವರೆಲ್ಲರೂ ಈ ಬಗ್ಗೆ ಕಲಿಯುವಂತಾಗಬೇಕು. ಇಂದಿನ ಮಕ್ಕಳು ಮುಂದಿನ ಪ್ರಜೆಗಳಾದಾಗ, ಆಡಳಿತಕ್ಕೇರಿದಾಗ, ಹೊಸದಾಗಿ ಎದುರಾಗಲಿರುವ ಸೋಂಕುಗಳನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಜಾಣ್ಮೆಯಿಂದ, ಮಾನವೀಯತೆಯಿಂದ ನಿಭಾಯಿಸುವಂತಾಗಬೇಕು; ಅದಕ್ಕಾಗಿ ಅವರು ಆದಷ್ಟು ಬೇಗನೇ ಶಾಲೆಗಳಿಗೆ ಮರಳಬೇಕು.

ಡಾ. ಶ್ರೀನಿವಾಸ ಕಕ್ಕಿಲ್ಲಾಯ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top