ಯಡಿಯೂರಪ್ಪನವರ ಹೃದಯದಿಂದ ಬಂದ ಮಾತು | Vartha Bharati- ವಾರ್ತಾ ಭಾರತಿ

--

ಯಡಿಯೂರಪ್ಪನವರ ಹೃದಯದಿಂದ ಬಂದ ಮಾತು

ಗುಣಕ್ಕೆ ಮತ್ಸರ ಉಂಟೆ? ಎಂದು ಆದಿಕವಿ ಪಂಪ ಪ್ರಶ್ನಿಸಿದ್ದಾನೆ. ಗುಣಗ್ರಾಹಿತ್ವ, ಕನ್ನಡ ಸಂಸ್ಕತಿಯಾಗಿದೆ. ಅದು ಪ್ರಜಾಪ್ರಭುತ್ವದ ಮೂಲ ತತ್ತ್ವವೂ ಆಗಿದೆ. ಇಂಥ ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ನಾನು ಅನೇಕ ಸಲ ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪನವರನ್ನು ಬೆಂಬಲಿಸುತ್ತ ಬಂದಿದ್ದೇನೆ. ಹಾಗೆ ಬೆಂಬಲಿಸಿದ ಕೆಲ ಪ್ರಸಂಗಗಳು ನೆನಪಾಗುತ್ತಿವೆ.


ಭಾರತೀಯ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ಜನ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದರೂ ಜಾತಿ ರಾಜಕಾರಣದ್ದೇ ಪ್ರಧಾನ ಪಾತ್ರವಾಗಿದೆ. ಯಡಿಯೂರಪ್ಪ, ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ದೇಶಪಾಂಡೆ ಮುಂತಾದವರು ತಮ್ಮ ಸಮಾಜದ ಅಭ್ಯುದಯದ ಪ್ರಜ್ಞೆಯೊಂದಿಗೆ ಪಕ್ಷದ ಜನನಾಯಕರಾಗಿ ಬೆಳೆದರು. ಈ ತೆರನಾದ ನಾಯಕತ್ವ ಕರ್ನಾಟಕದಲ್ಲಿ ಮುಸ್ಲಿಂ ಸಮಾಜದಿಂದ ಬರಲೇ ಇಲ್ಲ. ಜಾಫರ್ ಷರೀಫ್, ನಝೀರ್‌ಸಾಬ್, ಬಿ.ಎ. ಮೊಹಿದೀನ್ ಅವರಂಥ ನಾಯಕರು ಜನಪ್ರಿಯರಾಗಿದ್ದರು. ಜಾತ್ಯತೀತ ಮನೋಭಾವದಿಂದ ರಾಜಕೀಯ ಜವಾಬ್ದಾರಿಗಳನ್ನು ನಿರ್ವಹಿಸಿದರು. ಆದರೆ ಮುಸ್ಲಿಂ ಸಮಾಜದ ಸ್ಥಿತಿಗತಿಗಳ ಅರಿವಿದ್ದರೂ ಹೇಳಿಕೊಳ್ಳುವಂಥದ್ದನ್ನು ಮಾಡಲಿಕ್ಕಾಗಲಿಲ್ಲ. ಈ ದೃಷ್ಟಿಯಲ್ಲಿ ವೀರಶೈವ/ಲಿಂಗಾಯತರಿಗೆ ಭರವಸೆ ಮೂಡಿಸಿದ ಪ್ರಬಲ ನಾಯಕರೆಂದರೆ ಯಡಿಯೂರಪ್ಪಅವರು.

ಯಡಿಯೂರಪ್ಪನವರು ನೇರ ನುಡಿಯವರು. ರಾಜಕೀಯ ನಾಯಕರ ಸಾಮಾನ್ಯ ಗುಣವಾದ ವ್ಯಂಗ್ಯ ಮತ್ತು ಹಾಸ್ಯಭರಿತ ಮಾತುಗಳನ್ನು ಆಡುವ ಸ್ವಭಾವದವರಲ್ಲ. ಪಟ್ಟುಹಿಡಿದು ನೌಕರಶಾಹಿಯಿಂದ ಕೆಲಸ ಮಾಡಿಸಿಕೊಳ್ಳುವವರು. ತಮ್ಮ ಸಮಾಜದ ಬೆಂಬಲದೊಂದಿಗೆ ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ಸಾಮರ್ಥ್ಯ ಉಳ್ಳವರು. ಹೀಗಾಗಿ ಅವರು ಕರ್ನಾಟಕದಲ್ಲಿ ತಮ್ಮ ಪಕ್ಷದ ಆಧಾರ ಸ್ತಂಭವಾಗಿದ್ದಾರೆ.

ಗುಣಕ್ಕೆ ಮತ್ಸರ ಉಂಟೆ?

ಗುಣಕ್ಕೆ ಮತ್ಸರ ಉಂಟೆ? ಎಂದು ಆದಿಕವಿ ಪಂಪ ಪ್ರಶ್ನಿಸಿದ್ದಾನೆ. ಗುಣಗ್ರಾಹಿತ್ವ ಕನ್ನಡ ಸಂಸ್ಕೃತಿಯಾಗಿದೆ. ಅದು ಪ್ರಜಾಪ್ರಭುತ್ವದ ಮೂಲ ತತ್ತ್ವವೂ ಆಗಿದೆ. ಇಂಥ ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ನಾನು ಅನೇಕ ಸಲ ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪನವರನ್ನು ಬೆಂಬಲಿಸುತ್ತ ಬಂದಿದ್ದೇನೆ. ಹಾಗೆ ಬೆಂಬಲಿಸಿದ ಕೆಲ ಪ್ರಸಂಗಗಳು ನೆನಪಾಗುತ್ತಿವೆ. ಟಿಪ್ಪುಸುಲ್ತಾನ್ ಜನ್ಮದಿನಾಚರಣೆಯ ಪ್ರಸಂಗ ಬಿಟ್ಟರೆ ಅವರೆಂದೂ ಕೋಮುವಾದಿ ರಾಜಕಾರಣದಲ್ಲಿ ವ್ಯಕ್ತಿಗತವಾಗಿ ಸಿಕ್ಕಿಹಾಕಿಕೊಂಡವರಲ್ಲ. ಯಾವುದೇ ಧರ್ಮದ ಜನರನ್ನು ಅವರು ಎಂದೂ ಟೀಕಿಸಿಲ್ಲ. ಯಾವ ಧರ್ಮದ ಬಗ್ಗೆಯೂ ವ್ಯಂಗ್ಯವಾಡಿಲ್ಲ. ಯಡಿಯೂರಪ್ಪನವರು ಚುನಾವಣೆಯಲ್ಲಿ ಕೂಡ ಕೋಮುರಾಜಕೀಯ ಮಾಡಿದವರಲ್ಲ.

ಯಡಿಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲಾಹನ ಆಣೆ ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದು ಆಯಿತು. ಟಿಪ್ಪುಸುಲ್ತಾನ್ ವೇಷ ಧರಿಸಿ ಟಿಪ್ಪುಜಯಂತಿಯಲ್ಲಿ ಭಾಗವಹಿಸಿದ್ದೂ ಆಯಿತು. ನಂತರ ಬಿಜೆಪಿ ಸೇರಿ ಮುಖ್ಯಮಂತ್ರಿ ಆದಮೇಲೆ ಅವರು ಟಿಪ್ಪುಜಯಂತಿಯನ್ನು ನಿಲ್ಲಿಸುವ ಅವಶ್ಯಕತೆ ಇದ್ದಿದ್ದಿಲ್ಲ. ಏಕೆಂದರೆ ಟಿಪ್ಪುಸುಲ್ತಾನ್ ಫ್ರೆಂಚ್ ಕ್ರಾಂತಿಯನ್ನು ಸ್ವಾಗತಿಸಿ ದರಿಯಾ ದೌಲತ್‌ನಲ್ಲಿ ವಿಜಯೋತ್ಸವ ಆಚರಿಸಿ ಪ್ರಜಾಪ್ರಭುತ್ವವನ್ನು ಸ್ವಾಗತಿಸಿದ್ದರು. ತಮ್ಮನ್ನು ತಾವು ಸಿಟಿಜನ್ ಟಿಪ್ಪುಎಂದು ಕರೆದುಕೊಂಡಿದ್ದರು. ಬೃಹತ್ ಪ್ರಮಾಣದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ತಂದೆ ಹೈದರ್ ಅಲಿ ಜೊತೆ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಆರಂಭಿಸಿ ಹುತಾತ್ಮರಾಗಿದ್ದರು. ದೇಶದಲ್ಲಿ ಮೊದಲ ಬಾರಿಗೆ ‘ಉಳುವವನೇ ಭೂಮಿಯ ಒಡೆಯ’ ಎಂದು ಸಾರಿ ದಲಿತರು, ಹಿಂದುಳಿದವರು ಮುಂತಾದವರಿಗೆ ಭೂಮಿ ಹಂಚಿದ್ದರು. ಜಮೀನ್ದಾರಿ ವ್ಯವಸ್ಥೆಯನ್ನು ತೆಗೆದು ಹಾಕಿ ರಾಜ್ಯ ಮತ್ತು ರೈತನ ಮಧ್ಯೆ ನೇರ ಸಂಪರ್ಕ ಕಲ್ಪಿಸಿದ ದೊರೆ ಇವರಾಗಿದ್ದರು. ದರ್ಗಾ, ಮಠ, ಮಂದಿರಗಳ ಮತ್ತು ಅಗ್ರಹಾರಗಳ ಅಧೀನದಲ್ಲಿದ್ದ ಸಹಸ್ರಾರು ಎಕರೆ ಭೂಮಿಯನ್ನು ಗೇಣಿದಾರರಿಗೆ ಹಂಚಿದ್ದರು. ಅವರ ಆಳ್ವಿಕೆಯಲ್ಲಿ ಒಬ್ಬ ಜಹಾಗೀರದಾರನೂ ಇದ್ದಿದ್ದಿಲ್ಲ! ಮೈಸೂರು ಪ್ರಾಂತವನ್ನು ಎಲ್ಲ ರೀತಿಯಿಂದಲೂ ಆರ್ಥಿಕವಾಗಿ ಸಬಲಗೊಳಿಸಿದ್ದರು. ಯಾವುದೇ ರಾಜ ತನ್ನ ರಾಜ್ಯವನ್ನು ಕಾಪಾಡಿಕೊಳ್ಳುವಲ್ಲಿ ತೋರುವ ಅತಿರೇಕವನ್ನೇ ನೆಪ ಮಾಡಿಕೊಂಡು ಎಲ್ಲ ಸಾಧನೆಗಳನ್ನು ಮರೆಮಾಚಿ ಟಿಪ್ಪುಜಯಂತಿಯನ್ನು ನಿಲ್ಲಿಸುವಲ್ಲಿ ಅವರ ಮೇಲೆ ಇದ್ದ ಪಕ್ಷದ ಒತ್ತಡವೂ ಕಾರಣವಾಗಿರಬಹುದು. ಅದನ್ನು ಎದುರಿಸುವ ಶಕ್ತಿಯನ್ನು ಅವರಿಂದ ತೋರಿಸಲಿಕ್ಕೆ ಆಗಿರಲಿಕ್ಕಿಲ್ಲ.

‘‘ಬಿಜೆಪಿಯ ಕೆಲ ಕೋಮುವಾದಿ ಪ್ರಜ್ಞೆಯ ನಾಯಕರು ಯಡಿಯೂರಪ್ಪನವರಿಂದ ಪಾಠ ಕಲಿಯಬೇಕು’’ ಎಂದು ಹಿಂದೊಮ್ಮೆ ಫೇಸ್ ಬುಕ್‌ನಲ್ಲಿ ಬರೆದಿದ್ದೆ. ಕುಮಾರಸ್ವಾಮಿಯವರ ಸರಕಾರ ಉರುಳಿಸಲು ಯತ್ನಿಸುವಾಗ ವಿರೋಧ ವ್ಯಕ್ತಪಡಿಸಿದ ರೀತಿಯಲ್ಲೇ ಈ ಹಿಂದೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಯಡಿಯೂರಪ್ಪಅವರ ಸರಕಾರ ಉರುಳಿಸಲು ವಿರೋಧಿಗಳು ಪ್ರಯತ್ನಿಸಿದ್ದನ್ನು ಪ್ರತಿಭಟಿಸಿ ಫೇಸ್ ಬುಕ್‌ನಲ್ಲಿ ಬರೆದಿದ್ದೆ.

ತಬ್ಲೀಗಿ ಅಪಪ್ರಚಾರ
 2020ನೇ ಮಾರ್ಚ್ 13ರಂದು ಕೇಂದ್ರ ಆರೋಗ್ಯ ಸಚಿವಾಲಯ ‘‘ಕೊರೋನ ವೈರಸ್ ಆರೋಗ್ಯ ತುರ್ತುಪರಿಸ್ಥಿತಿ ಅಲ್ಲ’’ ಎಂದು ಹೇಳಿಕೆ ನೀಡಿತು. ಅದೇ ದಿನ ದಿಲ್ಲಿಯ ನಿಜಾಮುದ್ದೀನ್ ಕೇಂದ್ರದಲ್ಲಿ ತಬ್ಲೀಗಿ ಜಮಾಅತ್‌ನವರ ಧಾರ್ಮಿಕ ಸಭೆ ಪ್ರಾರಂಭವಾಯಿತು. ದೇಶ ವಿದೇಶಗಳಿಂದ ಬಂದ 4,000 ಪ್ರತಿನಿಧಿಗಳು ಈ ಧರ್ಮಸಭೆಯಲ್ಲಿ ಭಾಗವಹಿಸಿದ್ದರು. ಮಾರ್ಚ್ 16ರಂದು ದಿಲ್ಲಿ ಸರಕಾರ ಎಲ್ಲ ಧಾರ್ಮಿಕ ಸಂಸ್ಥೆಗಳನ್ನು ಮುಚ್ಚುವ ನೋಟಿಸ್ ನೀಡಿತು. ಮಾರ್ಚ್ 22ರಂದು ಪ್ರಧಾನಿ ದೇಶಾದ್ಯಂತ ಕರ್ಫ್ಯೂ ಘೋಷಣೆ ಮಾಡಿದರು. ಮಾರ್ಚ್ 25ರಂದು ದೇಶಾದ್ಯಂತ ಲಾಕ್‌ಡಾನ್ ಘೋಷಿಸಿದರು. ಈ ಎಲ್ಲ ಕಾರಣಗಳಿಂದ ತಬ್ಲೀಗಿಗಳು ದಿಕ್ಕುತೋಚದಾದರು. ಬಹಳಷ್ಟು ಜನ ನಿಜಾಮುದ್ದೀನ್ ಕೇಂದ್ರದಲ್ಲೇ ಅನಿವಾರ್ಯವಾಗಿ ಉಳಿದುಕೊಳ್ಳುವಂಥ ಪರಿಸ್ಥಿತಿ ಬಂದೊದಗಿತು.

ನಿಜಾಮುದ್ದೀನ್ ಕೇಂದ್ರದಲ್ಲಿ ಮಾರ್ಚ್ 13ರಿಂದ 15ರ ವರೆಗೆ ಭಾಗವಹಿಸಿದ್ದವರಲ್ಲಿನ ಆರು ಜನ ತಬ್ಲೀಗಿಗಳು ಮಾರ್ಚ್ 30ರಂದು ತೀರಿಕೊಂಡರು. ಭಾರತದ ಬಹುಪಾಲು ಮಾಧ್ಯಮಗಳು ಕೊರೋನ ವೈರಸ್ ಅನ್ನು ‘ತಬ್ಲೀಗಿ ವೈರಸ್’ ಎಂದು ಅಪಪ್ರಚಾರ ಮಾಡಿದವು. ಜಗತ್ತಿನಲ್ಲಿ ಕೊರೋನಕ್ಕೆ ಎಲ್ಲಿಯೂ ಅಂಟಿಕೊಳ್ಳದ ಧರ್ಮ ನಮ್ಮ ದೇಶದಲ್ಲಿ ಅಂಟಿಕೊಂಡಿತು!

ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ಕಾರಣಗಳಿಂದಾಗಿ ಮೊದಲೇ ಘಾಸಿಗೊಂಡಿದ್ದ ಮುಸ್ಲಿಮರು ತಬ್ಲೀಗಿ ವೈರಸ್ ಎಂಬ ಸುಳ್ಳು ಪ್ರಚಾರದಿಂದ ಬಹಳಷ್ಟು ಕುಗ್ಗಿ ಹೋದರು. ತಬ್ಲೀಗಿ ಧರ್ಮಸಭೆಯಲ್ಲಿ ಪಾಲ್ಗೊಂಡವರಲ್ಲಿ ಅನೇಕರು ವಿವಿಧ ದೇಶಗಳಿಂದ ಬಂದವರಾಗಿದ್ದರು. ಫೆಬ್ರವರಿ ಆರಂಭದಲ್ಲಿ ಕೊರೋನ ಸುದ್ದಿ ವಿಶ್ವಾದ್ಯಂತ ಹರಡಿದ್ದರೂ ಈ ವಿದೇಶಿಯರಿಗೆ ಅದು ಹೇಗೆ ಭಾರತ ಪ್ರವೇಶದ ಅನುಮತಿ ದೊರೆಯಿತು? ಈ ಧಾರ್ಮಿಕ ಸಭೆಗೆ ಅದು ಹೇಗೆ ಅವಕಾಶ ಸಿಕ್ಕಿತು? ಧಾರ್ಮಿಕ ಸಭೆಯಲ್ಲಿ ಸೇರಿದ್ದ ಜನರಿಗೆ ವಾಹನ ವ್ಯವಸ್ಥೆ ಮಾಡುವುದಾಗಿ ನಿಜಾಮುದ್ದೀನ್ ಕೇಂದ್ರದವರು ಮಾರ್ಚ್ 16ರಂದು ಹೇಳಿದರೂ ಅನುಮತಿ ಏಕೆ ಸಿಗಲಿಲ್ಲ? ಬೇರೆ ಕಡೆ ಹೀಗೆ ಸಿಕ್ಕಿಬಿದ್ದವರಿಗೆ ವಾಹನ ವ್ಯವಸ್ಥೆ ಮಾಡಿದಂತೆ ಸರಕಾರ ಇವರಿಗೆ ಏಕೆ ಮಾಡಲಿಲ್ಲ? ಎಂಬ ಪ್ರಶ್ನೆಗಳು ಮಾಧ್ಯಮದವರಿಂದ ಬರಲಿಲ್ಲ. ಕೊರೋನ ವೈರಸ್‌ಗೆ ತಬ್ಲೀಗಿಗಳನ್ನು ಹೊಣೆ ಮಾಡುವುದರಲ್ಲೇ ಅವರಲ್ಲಿ ಬಹಳಷ್ಟು ಜನ ತಲ್ಲೀನರಾಗಿದ್ದರು. ಆ ಸಂದರ್ಭದಲ್ಲಿ ದೇಶದ ಮುಸ್ಲಿಮರು ಹೌ ಹಾರಿದರು. ತಬ್ಲೀಗಿ ಜಮಾಅತ್‌ಗೆ ಶತಮಾನದ ಇತಿಹಾಸವಿದೆ. ಇವರು ಯಾವುದೇ ರಾಜಕೀಯ ಪಕ್ಷದಲ್ಲಿ ಆಸಕ್ತಿ ತೋರುವವರಲ್ಲ. ಈ ಜಗತ್ತಿನ ಆಕರ್ಷಣೆಗಳಿಗೂ ಮರುಳಾಗುವವರಲ್ಲ. ಇವರು ಒಂದು ರೀತಿಯ ಜನ. ಇವರ ಚಿಂತನೆ ಭೂಮಿಯ ಕೆಳಗೆ ಮತ್ತು ಆಕಾಶದ ಮೇಲೆ ಇರುವಂಥದ್ದು. ಮಾನವ ಸತ್ತ ಮೇಲೆ ಸ್ವರ್ಗಕ್ಕೆ ಹೋಗಬೇಕಾದರೆ ಪರಧರ್ಮದ ಬಗ್ಗೆ ಯಾವುದೇ ಟೀಕೆ ಮಾಡದೆ ತಮ್ಮ ಧರ್ಮಪಾಲನೆ ಮಾಡುತ್ತ ಪವಿತ್ರವಾಗಿರಬೇಕು ಎಂಬುದು ಇವರ ಜೀವನವಿಧಾನವಾಗಿದೆ.

ಮುಸ್ಲಿಮರ ನೆರವಿಗೆ ಬಂದ ಸಿ.ಎಂ.
ಈ ಕೊರೋನ ಹಾವಳಿ ತಾರಕಕ್ಕೆ ಏರುವುದಕ್ಕೆ ಮುಂಚೆ ಅಂದರೆ ಫೆಬ್ರವರಿ 25ರಂದು ಅಸ್ತಿತ್ವಕ್ಕೆ ಬಂದ ‘ಖಟ್ಟರ್ ಹಿಂದುತ್ ಏಕತಾ’ ಎಂಬ 125 ಜನರ ವ್ಯಾಟ್ಸ್‌ಆ್ಯಪ್ ಗುಂಪು ದಿಲ್ಲಿಯ ಭಾಗೀರಥಿ ವಿಹಾರದ ಗೋಕುಲಪುರಿ ಪ್ರದೇಶದಲ್ಲಿ 36 ಗಂಟೆಗಳೊಳಗೆ ಒಂಬತ್ತು ಮಂದಿ ಮುಸ್ಲಿಮರ ಕೊಲೆ ಮಾಡಿ ಅನೇಕ ಮುಸ್ಲಿಮರ ಆಸ್ತಿಪಾಸ್ತಿಗೆ ಭಾರೀ ಹಾನಿ ಮಾಡಿತು. ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಚಳವಳಿಯಲ್ಲಿ ನಿರತರಾದವರ ಮೇಲೆ ಹಲ್ಲೆ ನಡೆದು ಒಟ್ಟು 51 ಜನ ಸಾವಿಗೀಡಾದರು. ಇಂತಹ ವಿಷಮ ವಾತಾವರಣದಲ್ಲಿ ಮುಸ್ಲಿಮರ ವಿಚಾರದಲ್ಲಿ ಗೊಂದಲಗಳನ್ನು ಸೃಷ್ಟಿಸಲಾಯಿತು. ಉದ್ದೇಶಪೂರ್ವಕವಾಗಿ ಕೊರೋನ ವೈರಸ್ ಹಬ್ಬಿಸುತ್ತಿದ್ದಾರೆ ಎಂಬ ಅಪಪ್ರಚಾರವನ್ನೂ ಮಾಡಲಾಯಿತು. ಇಂಥ ಪರಿಸ್ಥಿತಿಯಲ್ಲಿ ಮುಸ್ಲಿಮರ ನೆರವಿಗೆ ಬಂದವರು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು. ಕನ್ನಡ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಅವರು, ‘‘ಎಲ್ಲೋ ಒಂದು ಸಣ್ಣ ಘಟನೆ ನಡೆದರೆ ಅದಕ್ಕೆ ಇಡೀ ಮುಸ್ಲಿಂ ಸಮುದಾಯವೇ ಜವಾಬ್ದಾರರು ಅಂತ ಮಾತಾಡಿದರೆ ಅಂಥವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ವಿಚಾರದಲ್ಲಿ ಹಿಂದೆ ಮುಂದೆ ನೋಡುವುದಿಲ್ಲ’’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಸಂದರ್ಶನದಲ್ಲಿ ನಿರೂಪಕರು, ‘‘ಕೊರೋನ ವಿರುದ್ಧ ವೈದ್ಯರು, ದಾದಿಯರು ಹೋರಾಟ ಮಾಡುತ್ತಿರುವುದರ ಬಗ್ಗೆ ನೀವು ಹೇಳಿದಿರಿ. ಇನ್ನೊಂದು ಕಡೆ ಗಣತಿಗೆ ಹೋಗುವವರ ಮೇಲೆ ಹಲ್ಲೆಗಳಾಗುತ್ತಿವೆ. ವೈದ್ಯರ ಮೇಲೆ ಹಲ್ಲೆ ಮಾಡುತ್ತಾರೆ. ಓಡಿಸಿಕೊಂಡು ಹೋಗುತ್ತಾರೆ. ಹೆಣ್ಣುಮಕ್ಕಳು ಡೇಟಾ ಸಂಗ್ರಹಿಸಲು ಹೋದಲ್ಲಿ ಅವರ ಮೇಲೆ ಹಲ್ಲೆ ಪ್ರಯತ್ನ ನಡೆಯುತ್ತಿವೆ ಯಡಿಯೂರಪ್ಪನವರೇ’’ ಎಂದು ಜೋರು ದನಿಯಲ್ಲಿ ಪ್ರಶ್ನೆ ಕೇಳುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿಗಳು ನಿರೂಪಕರಿಗೂ ಸಹ ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ.

‘‘ಆ ಥರ ಒಂದೆರಡು ಘಟನೆ ನಡೆದಿವೆ. ಅವರ ಮೇಲೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ನಾನು ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದೂರಬೇಡಿ ಎಂದು ಮನವಿ ಮಾಡುತ್ತೇನೆ. ಆದರೆ ಇಡೀ ಸಮುದಾಯವೇ ಜವಾಬ್ದಾರಿ ಎಂದು ನೀವು ಮಾತನಾಡಿದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’’ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪಅವರ ಈ ಸ್ಪಷ್ಟ ನಿಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಭೇದ ಮರೆತು ಪ್ರಶಂಸೆ ವ್ಯಕ್ತವಾಗಿದೆ.

ಮುಖ್ಯಮಂತ್ರಿಗಳ ಕಳಕಳಿ ಅರ್ಥ ಮಾಡಿಕೊಳ್ಳಿ
 ಎಪ್ರಿಲ್ 6ರಂದು ನನ್ನ ಫೇಸ್‌ಬುಕ್ ಹೇಳಿಕೆ: ಕಾನೂನನ್ನು ಪಾಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಜಗತ್ತಿನ ಇತಿಹಾಸದಲ್ಲಿ ಪ್ಲೇಗ್ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಕೋಟ್ಯಂತರ ಜನ ಸತ್ತಿದ್ದರೂ ಅವು ಏಕಕಾಲಕ್ಕೆ ಕೊರೋನ ವೈರಸ್ ಹಾಗೆ ವಿಶ್ವವ್ಯಾಪಿಯಾಗಿ ಹರಡಿದ್ದಿಲ್ಲ. ಈ ವೈರಸ್ ಇಡೀ ಮಾನವಕುಲವನ್ನೇ ನಾಶ ಮಾಡುವ ರೀತಿಯಲ್ಲಿದೆ.

ಭಾರತದಲ್ಲಿ ಮೊದಲೇ ಕ್ರಿಯಾಶೀಲವಾಗಿದ್ದ ಕೋಮುವೈರಸ್ ಜೊತೆ ಕೊರೋನ ವೈರಸ್ ಸೇರಿಕೊಂಡಿದೆ. ಇವುಗಳ ಜೊತೆ ಪ್ರತಿಗಾಮಿ ಗುಂಪಿನ (ಎಲ್ಲ ಅಲ್ಲ) ಮಾಧ್ಯಮ ವೈರಸ್ ಸೇರಿಕೊಂಡಿದ್ದರಿಂದ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ. ಕೋಮುಗಲಭೆ ಹಬ್ಬಿಸಿ ಭಾರತವನ್ನು ‘ಮಹಾಭಾರತ’ ಮಾಡುವ ಅತ್ಯುತ್ಸಾಹವನ್ನು ಅವು ತೋರುತ್ತಿವೆ. ಕೆಲ ಹುಂಬ ಮುಸ್ಲಿಮರು ಮಾಡಿದ ತಪ್ಪನ್ನು ದೇಶದ 20 ಕೋಟಿ ಮುಸ್ಲಿಮರ ಮೇಲೆ ಹೇರುತ್ತ ಜನಸಾಮಾನ್ಯರ ದೃಷ್ಟಿಯಲ್ಲಿ ಅಪರಾಧಿಗಳಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿವೆ. ಅಷ್ಟೇ ಅಲ್ಲದೆ ಸುದ್ದಿಮೂಲವನ್ನು ಶೋಧಿಸದೆ ಮಾಧ್ಯಮಧರ್ಮಕ್ಕೆ ಅಪಚಾರ ಮಾಡುತ್ತಿವೆ.

ಮುಸ್ಲಿಮರ ಬಗ್ಗೆ ದ್ವೇಷ ಹುಟ್ಟಿಸಲು ಕೋಮುವಾದಿ ಶಕ್ತಿಗಳು ಈ ಎಲ್ಲ ಅವಕಾಶ ಬಳಸಿಕೊಳ್ಳುತ್ತಿವೆ. ಇಂತಹ ದುರಂತ ಸ್ಥಿತಿಯಲ್ಲಿ ಪ್ರತಿಯೊಬ್ಬರು ಮುಖ್ಯಮಂತ್ರಿಗಳ ಕಳಕಳಿಯನ್ನು ಅರ್ಥ ಮಾಡಿಕೊಳ್ಳಬೇಕು. ಗಾಳಿಸುದ್ದಿ ಮತ್ತು ಪ್ರಚೋದನಕಾರಿ ಮಾತುಗಳ ಬಗ್ಗೆ ಉದಾಸೀನ ಮಾಡಬೇಕು. ಸಂಯಮ, ಅಹಿಂಸೆ ಮತ್ತು ಕರುಣೆಯಿಂದ ಮಾತ್ರ ಈ ಅನಾಹುತದಿಂದ ದೇಶದ ಜನಸಮುದಾಯವನ್ನು ರಕ್ಷಿಸಲು ಸಾಧ್ಯ.

ದ್ವೇಷದಿಂದ ದ್ವೇಷವನ್ನು ಕೊನೆಗಾಣಿಸಲಿಕ್ಕಾಗದು. ಅದು ಜೀವಕಾರುಣ್ಯದಿಂದ ಮಾತ್ರ ಸಾಧ್ಯ. ಶತಮಾನಗಳಿಂದ ಗುರು ಗೋವಿಂದಭಟ್ಟ ಮತ್ತು ಶಿಶುನಾಳ ಶರೀಫರಂತಹ ಹಿಂದೂ-ಮುಸ್ಲಿಂ ಹಿರಿಯರು ಬದುಕಿದ ಪರಂಪರೆ ನಮ್ಮ ಮುಂದಿದೆ. ‘‘ನಿಮ್ಮ ಧರ್ಮದವರು ತಪ್ಪು ಮಾಡುವಾಗ ನೀವು ಬೆಂಬಲಿಸಿದರೆ, ಅದು ಕೋಮುವಾದ ಆಗುತ್ತದೆ’’ ಎಂದು ಪೈಗಂಬರರು 15 ಶತಮಾನಗಳಷ್ಟು ಹಿಂದೆಯೇ ಹೇಳಿದ್ದಾರೆ. ಇದು ಎಲ್ಲ ಧರ್ಮದವರಿಗೂ ಅನ್ವಯಿಸುವ ಸಾರ್ವಕಾಲಿಕ ಸತ್ಯವಾಗಿದೆ.

‘‘ಹಿಂದ್ (ಹಿಂದೂಸ್ತಾನ) ಕಡೆಯಿಂದ ನನ್ನ ಕಡೆಗೆ ತಂಪುಗಾಳಿ (ಶಾಂತಿಯ ಗಾಳಿ) ಬೀಸುತ್ತಿದೆ’’ ಎಂದು ಪೈಗಂಬರರು ಹೇಳಿದ್ದಾರೆ. ಇಂದು ಗರಂ ಹವಾ ಬೀಸುತ್ತಿದ್ದು, ಹಿಂದೂ-ಮುಸ್ಲಿಮರು ಸೇರಿ ಅದನ್ನು ತಂಪುಗಾಳಿಯಾಗಿಸಬೇಕಿದೆ.
ಪೈಗಂಬರರು 1500 ವರ್ಷಗಳ ಹಿಂದೆ ಈ ಮಾತು ಹೇಳುವಾಗ ಭಾರತದ ಉಪನಿಷತ್ ಶಾಂತಿ ಸಂದೇಶ ಯಾವ ರೀತಿಯಲ್ಲಿ ತಲುಪಿತು ಎಂಬುದರ ಕುರಿತು ಸಂಶೋಧನೆ ಮಾಡುವುದು ಅವಶ್ಯವಾಗಿದೆ. ಇಸ್ಲಾಂ ಎಂದರೆ ಶಾಂತಿ. ಇಸ್ಲಾಂ ಎಂದರೆ ದೇವರಿಗೆ ಶರಣಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪನವರು ಕರ್ನಾಟಕದಲ್ಲಿ ಇಂಥ ಶಾಂತಿಯನ್ನು ಬಯಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top