--

ಅಲ್ಪಸಂಖ್ಯಾತರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಮಂಗಳೂರು ಹಜ್ ಭವನ: ಎ.ಬಿ.ಇಬ್ರಾಹೀಮ್

ಬೆಂಗಳೂರು: ರಾಜ್ಯ ಸರಕಾರದ ವತಿಯಿಂದ ಮಂಗಳೂರಿನ ಅಡ್ಯಾರ್ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಜ್ ಭವನಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ವಾದ, ವಿವಾದಗಳ ಕುರಿತು ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹೀಮ್ ‘ವಾರ್ತಾಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರವಾಗಿ ಉತ್ತರಿಸಿದ್ದಾರೆ.

► ಮಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಹಜ್ ಭವನದ ಯೋಜನೆ ಯಾವ ಹಂತದಲ್ಲಿದೆ ?

ಇಬ್ರಾಹೀಮ್: ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ, ಮಾದರಿ ಹಜ್ ಭವನ ನಿರ್ಮಿಸುವ ಉದ್ದೇಶವನ್ನು ಸರಕಾರ ಹೊಂದಿದೆ. ಇದಕ್ಕಾಗಿ ಸಮುದಾಯದ ವಿವಿಧ ಸ್ಥರಗಳಲ್ಲಿ ಗುರುತಿಸಲ್ಪಟ್ಟಿರುವ ಪ್ರಮುಖರನ್ನು ಒಳಗೊಂಡ ಯೋಜನಾ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದ್ದು, ಹಜ್ ಭವನದ ಸ್ವರೂಪದ ಕುರಿತು ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ. ಎಲ್ಲ ಪ್ರಕ್ರಿಯೆಗಳು ಅಂತಿಮಗೊಳ್ಳುತ್ತಿದ್ದಂತೆ ಟೆಂಡರ್ ಕರೆದು ಬಹುಶಃ ಸೆಪ್ಟಂಬರ್ ಅಂತ್ಯಕ್ಕೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಹಜ್ ಭವನ ಕಾಮಗಾರಿಯನ್ನು ಆರಂಭಿಸಲು ಉದ್ದೇಶಿಸಲಾಗಿದೆ.

► ಮಂಗಳೂರು ವಿಮಾನ ನಿಲ್ದಾಣ ಸಮೀಪದ 2 ಎಕರೆ ಸ್ಥಳವನ್ನು ಬಿಟ್ಟು, ಅಡ್ಯಾರ್‌ನಲ್ಲಿರುವ 65 ಸೆಂಟ್ಸ್ ಸ್ಥಳಕ್ಕೆ ಈ ಯೋಜನೆ ಸ್ಥಳಾಂತರಗೊಳ್ಳಲು ಕಾರಣವೇನು ?

ಇಬ್ರಾಹೀಮ್: 2014ರಲ್ಲಿ ಮಂಗಳೂರು ವಿಮಾನ ನಿಲ್ದಾಣದ ಬಳಿಯಿರುವ ಕೆಂಜಾರು ಬಳಿ ನಾನು ಜಿಲ್ಲಾಧಿಕಾರಿಯಾಗಿದ್ದಾಗ 2 ಎಕರೆ ಜಮೀನನ್ನು ಹಜ್‌ಭವನಕ್ಕಾಗಿ ಕಾಯ್ದಿರಿಸಲಾಗಿತ್ತು. ಅಂದಿನ ಹಜ್ ಸಚಿವರಾಗಿದ್ದ ಖಮರುಲ್ ಇಸ್ಲಾಮ್ ಹಜ್ ಭವನಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಜಮೀನಿಗೆ ಸಂಬಂಧಿಸಿದಂತೆ ಸಾರ್ವಜನಿಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಜಮೀನು ಮಂಜೂರಾತಿಯನ್ನು ತಡೆ ಹಿಡಿಯುವಂತೆ ಮಾಡಿದರು. ಅದರಿಂದಾಗಿ, 2014ರಲ್ಲಿ ಹಜ್‌ಭವನ ನಿರ್ಮಾಣ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ.

ಆ ನಂತರ, 2018ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಮರವೂರು ಗ್ರಾಮದಲ್ಲಿ ಪುನಃ ಹಜ್ ಭವನಕ್ಕಾಗಿ ಭೂಮಿ ಕಾಯ್ದಿರಿಸಿದ್ದರು. 2019ರಲ್ಲಿ ಅಂದಿನ ಹಜ್ ಸಚಿವರಾಗಿದ್ದ ಝಮೀರ್ ಅಹ್ಮದ್ ಖಾನ್ ಸ್ಥಳ ಪರಿಶೀಲನೆ ಮಾಡಿದರು. ಈ ಪ್ರದೇಶ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಬರುವುದರಿಂದ ಅಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪುನಃ ಅಲ್ಲಿಯೂ ಕೆಲವರು ನ್ಯಾಯಾಲ ಯದಲ್ಲಿ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದರು. ಆದುದರಿಂದ, ಕೆಂಜಾರು ಹಾಗೂ ಮರವೂರು ಬಳಿ ಹಜ್ ಭವನ ನಿರ್ಮಿಸಲು ಸಾಧ್ಯವಾಗಲಿಲ್ಲ.

ಯಾವುದೇ ಅಡೆತಡೆ ಇಲ್ಲದೆ, ವಿಘ್ನವಿಲ್ಲದೆ ಭವನ ನಿರ್ಮಿಸುವ ಉದ್ದೇಶದಿಂದ ಝಮೀರ್ ಅಹ್ಮದ್ ಖಾನ್ ಬೇರೆ ಬೇರೆ ಜಾಗಗಳನ್ನು ಪರಿಶೀಲಿಸಿದರು. ಬಜ್ಪೆ ಟೌನ್ ಒಳಗಡೆ ಜುಮಾ ಮಸೀದಿಯವರ ಸ್ಥಳವನ್ನು ಪರಿಶೀಲಿಸಲಾಯಿತು. ಆಗ ಅವರು ಕಟ್ಟಡ ನಿರ್ಮಿಸಿದ ನಂತರ ತಮ್ಮ ಸುರ್ಪದಿಗೆ ಬಿಡಬೇಕು ಎಂದು ಕೇಳಿದರು. ಕೊನೆಗೆ ಅಡ್ಯಾರ್ ಗ್ರಾಮದಲ್ಲಿ ಫಾತಿಮಾ ವಕ್ಫ್‌ಗೆ ಸೇರಿದ ಜಮೀನು ಪರಿಶೀಲಿಸಿ ಅಂತಿಮಗೊಳಿಸಲಾಯಿತು.

► ಅಡ್ಯಾರ್ ಗ್ರಾಮದಲ್ಲಿ ಗುರುತಿಸಲಾದ ಸ್ಥಳದ ಬಗ್ಗೆಯೂ ಅಪಸ್ವರ, ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಏನು ಹೇಳುತ್ತೀರಿ?

ಇಬ್ರಾಹೀಂ: ಕೆಂಜಾರು, ಮರವೂರು ಬಳಿ ಹಜ್‌ಭವನ ನಿರ್ಮಿಸಲು ಮುಂದಾದಾಗಲೂ ಅಪ ಸ್ವರಗಳು ಕೇಳಿ ಬಂದಿದ್ದವು, ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಯಾವುದೇ ಒಂದು ಯೋಜನೆ ಬರುವಾಗ ಆರಂಭಿಕವಾಗಿ ಅಪಸ್ವರಗಳು, ಆರೋಪಗಳು ಕೇಳಿ ಬರುವುದು ಸಹಜ.

ಯಾವುದೋ ಒಂದು ವರ್ಗದ ಜನ ಬೇರೆ ಬೇರೆ ಕಾರಣಗಳಿಗೆ ವಿರೋಧಿಸುತ್ತಾರೆ. ಅಂತಹವರನ್ನು ವಿಘ್ನ ಸಂತೋಷಿಗಳೆಂದು ಕರೆಯಬಹುದು. ಕರಾವಳಿ ಭಾಗದಲ್ಲಿ ಅದು ಸ್ವಲ್ಪ ಜಾಸ್ತಿಯಿದೆ. ಕೆಲವರು ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳ ಮೂಲಕ ವಿರೋಧಿಸಿದರೆ, ಕೆಲವರು ನ್ಯಾಯಾಲಯ, ಕಚೇರಿ, ಕಟ್ಲೆಗಳ ಮೂಲಕ ವಿರೋಧಿಸುತ್ತಾರೆ. ಮಂಗಳೂರು ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ಎಂಆರ್‌ಪಿಎಲ್ ಯೋಜನೆಗಳು ಬಂದಾಗಲೂ ವಿರೋಧ ವ್ಯಕ್ತವಾಗಿತ್ತು. ನಾನು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯ ನೂತನ ಸಂಕೀರ್ಣ ನಿರ್ಮಿಸಲು ಯತ್ನಿಸಿದಾಗ, ಪರಿಸರದ ಹೆಸರಿನಲ್ಲಿ ಅದನ್ನು ವಿರೋಧಿಸಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಎರಡು ವರ್ಷ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣ ನಿರ್ಮಾಣಕ್ಕೆ ತಡೆ ಹಾಕಲಾಗಿತ್ತು. ಅಂತಿಮವಾಗಿ ಚೆನ್ನೈನಲ್ಲಿರುವ ಹಸಿರು ನ್ಯಾಯಾಧೀಕರಣ ಅದಕ್ಕೆ ಹಸಿರು ನಿಶಾನೆ ತೋರಿದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಒಂದು ವೇಳೆ ಪ್ರಕರಣ ದಾಖಲು ಮಾಡದೆ ಇದ್ದಿದ್ದರೆ, ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣ ಸಿದ್ಧವಾಗಿರುತ್ತಿತ್ತು.

ಅದೇ ರೀತಿ, ಸರಕಾರಿ ಜಮೀನಿನಲ್ಲಿ ಸುಸಜ್ಜಿತವಾದ ಅಲ್ಪಸಂಖ್ಯಾತರ ಭವನ ನಿರ್ಮಿಸಲು ಯತ್ನಿಸಿದಾಗಲೂ ವಿರೋಧಿಸಿ, ಪ್ರಕರಣ ದಾಖಲು ಮಾಡಲಾಯಿತು. ನಿರಂತರವಾಗಿ ಹೋರಾಟ ಮಾಡಿ, ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದರಿಂದ, ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಕೆಲಸ ಮಾಡಲು ಸಾಧ್ಯವಾಯಿತು. ಹಿಂಜರಿದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.

► ಅಡ್ಯಾರ್‌ನಲ್ಲಿ ಹಜ್ ಭವನಕ್ಕೆ ಸ್ಥಳ ಗುರುತಿಸುವಾಗ ಸ್ಥಳೀಯ ಮುಸ್ಲಿಮ್ ಮುಖಂಡರು, ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ದೂರು ಕೇಳಿ ಬರುತ್ತಿದೆಯಲ್ಲ?

ಇಬ್ರಾಹೀಮ್: ಅಡ್ಯಾರ್‌ನಲ್ಲಿ ಹಜ್ ಭವನಕ್ಕೆ ಸ್ಥಳ ಗುರುತಿಸಿದ್ದು, ಒಂದೂವರೆ ವರ್ಷದ ಹಿಂದೆ. ಆ ಜಮೀನಿಗೆ ಸಂಬಂಧಪಟ್ಟಂತೆಯೂ ಬೇರೆ ಬೇರೆ ಅಡೆತಡೆಗಳು ಇದ್ದವು. ಖಾಸಗಿ ಜಮೀನು ಎಂದು ಬೇರೆಯವರಿಗೆ ಕರಾರು ಪತ್ರ ಮಾಡಿ ಕೊಡಲಾಗಿತ್ತು. ಅದನ್ನು ಬಿಡಿಸಿಕೊಳ್ಳಲಾಯಿತು. ನ್ಯಾಯಾಲಯದಲ್ಲಿ ಪ್ರಕರಣವು ದಾಖಲಾಗಿತ್ತು. ಖಾತೆ ಆಗಿರಲಿಲ್ಲ. ಕಳೆದ ಒಂದು ವರ್ಷದ ಹಿಂದೆ ಒತ್ತುವರಿಯನ್ನು ತೆರವು ಮಾಡಿ, ಮಂಗಳೂರಿನ ಸಹಾಯಕ ಆಯುಕ್ತರು ಖಾತೆಯನ್ನು ಮತ್ತೆ ಸ್ಥಾಪನೆ ಮಾಡಿದ್ದಾರೆ. ಅಲ್ಲಿ ಯಾವುದೇ ಅಡೆತಡೆಗಳು ಇಲ್ಲ.

ಝಮೀರ್ ಅಹ್ಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್ ಜೊತೆ ಚರ್ಚೆ ಮಾಡಿ ಅಂತಿಮಗೊಳಿಸಿದ ಸ್ಥಳ ಇದು. ಕಾನೂನು ಪ್ರಕ್ರಿಯೆಗಳಿಂದ ಕಾಮಗಾರಿ ಆರಂಭಕ್ಕೆ ಅಡೆತಡೆಗಳಾದವು. ಹಜ್‌ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಯೋಜನಾ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿದೆ. ಅದರಲ್ಲಿ ಸ್ಥಳೀಯ ಶಾಸಕರು, ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಜಿಲ್ಲೆಯ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್, ವಕ್ಫ್ ಮಂಡಳಿಯ ಸದಸ್ಯ ಶಾಫಿ ಸಅಧಿ, ಹಜ್ ಸಮಿತಿಯ ಸದಸ್ಯರನ್ನು ಸೇರಿಸಿಕೊಂಡು, ವಿವಿಧ ಸ್ಥರಗಳಲ್ಲಿ ಇರುವ ಮುಖಂಡರನ್ನು ಈ ಸಮಿತಿಗೆ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ.

ಜಿಲ್ಲೆಯ ಪ್ರಮುಖರಿಂದಲೆ ಬಂದಿರುವ ಪ್ರಸ್ತಾವವನ್ನು ಅಂಗೀಕರಿಸಿ, ಸರಕಾರ ಈ ಸಮಿತಿ ರಚನೆ ಮಾಡಿದೆ. ಯಾರನ್ನೂ ಕೈ ಬಿಟ್ಟಿಲ್ಲ, ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿದಿದ್ದೇವೆ.

► ರಿಯಲ್ ಎಸ್ಟೇಟ್, ಭೂ ಮಾಫಿಯಾಗೆ ಅನುಕೂಲ ಕಲ್ಪಿಸಲು ಈ ಹೊಸ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂಬ ಆರೋಪವಿದೆಯಲ್ಲ, ಇದಕ್ಕೆ ಏನಂತೀರಿ?

ಇಬ್ರಾಹೀಮ್: ವಿಮಾನ ನಿಲ್ದಾಣಕ್ಕೆ ಸಮೀಪವಿರುವ ವಿವಾದ ಇಲ್ಲದ ಯಾವುದಾದರೂ ಜಾಗ ಇದ್ದರೆ ತಿಳಿಸಿ, ಅಲ್ಲಿಯೇ ಭವನ ನಿರ್ಮಿಸೋಣ ಎಂದು ನಾನು ಮನವಿ ಮಾಡುತ್ತೇನೆ. ಈ ಕಟ್ಟಡದ ನಿರ್ಮಾಣದಿಂದ ಅಡ್ಯಾರ್ ಗ್ರಾಮದ ಸುತ್ತಮುತ್ತಲಿನ ಭೂಮಿಯ ಬೆಲೆ ಏನು ಏಕಾಏಕಿ ಏರಿಕೆಯಾಗುವ ಸಾಧ್ಯತೆಗಳಿಲ್ಲ. ಈ ಹಜ್‌ಭವನ ನಿರ್ಮಾಣದ ಹಿಂದೆ ಯಾವ ಭೂ ಮಾಫಿಯಾದ ಹಿತವು ಅಡಗಿಲ್ಲ, ಯಾವ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಅನುಕೂಲ ಕಲ್ಪಿಸುತ್ತಿಲ್ಲ. ಇಂತಹ ತಪ್ಪು ಕಲ್ಪನೆಗಳನ್ನು ಜನ ತಮ್ಮ ಮನಸ್ಸಿನಿಂದ ಕಿತ್ತೊಗೆಯಬೇಕು. ಈ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಬೇಕಾದರೆ ಎಲ್ಲರ ಸಹಕಾರಬೇಕು.

► ಸರಕಾರಿ ಜಾಗದ ಬದಲು ವಕ್ಫ್ ಭೂಮಿಯನ್ನು ಯಾವ ಕಾರಣಕ್ಕಾಗಿ ಪಡೆದುಕೊಳ್ಳಲಾಗಿದೆ?

ಇಬ್ರಾಹೀಮ್: ಹಜ್ ಭವನ ನಿರ್ಮಾಣಕ್ಕೆ ವಕ್ಫ್ ಭೂಮಿಯನ್ನು ಬಳಸಿಕೊಳ್ಳಬಾರದು ಅಂತ ಎಲ್ಲಿಯೂ ಇಲ್ಲ. ಬೆಂಗಳೂರಿನಲ್ಲಿರುವ ಹಜ್ ಭವನ ನಿರ್ಮಿಸಿರುವ ಜಾಗವು ವಕ್ಫ್‌ಗೆ ಸೇರಿದ್ದು, ಅದನ್ನು ಸರಕಾರ ಖರೀದಿ ಮಾಡಿದೆ. ಅಡ್ಯಾರ್ ಗ್ರಾಮದಲ್ಲಿ ಒಂದು ಕುಟುಂಬಕ್ಕೆ ಸೇರಿದ ವಕ್ಫ್ ಸ್ಥಳವನ್ನು ನೀಡಿದ್ದಾರೆ. ಇದರಲ್ಲಿ ಯಾವ ವಿವಾದಗಳೂ ಇಲ್ಲ.

► ಹಜ್‌ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಂದಿನ ನಡೆ ಏನು ?

ಇಬ್ರಾಹೀಮ್: 2017ರಲ್ಲಿ ಅಂದಿನ ಹಜ್ ಸಚಿವರಾಗಿದ್ದ ಆರ್.ರೋಷನ್ ಬೇಗ್ ವಿಶೇಷ ಮುತುವರ್ಜಿ ವಹಿಸಿ 10 ಕೋಟಿ ರೂ.ಗಳನ್ನು ಮಂಗಳೂರು ಹಜ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಿಸಿದ್ದರು. ಆದಷ್ಟು ಬೇಗ ಕಾಮಗಾರಿ ಆರಂಭವಾಗಿ, ಸರಕಾರದಿಂದ ಬಿಡುಗಡೆಯಾಗಿರುವ ಹಣ ಸದುಪಯೋಗವಾಗಬೇಕೆಂದು ಬಯಸಿದ್ದರು. ಈಗಿರುವ ಪರಿಸ್ಥಿತಿ ನಿಮಗೆಲ್ಲ ಗೊತ್ತಿದೆ. ಬಿಡುಗಡೆಯಾಗಿರುವ ಹಣ ಕಾಲಮಿತಿಯಲ್ಲಿ ಖರ್ಚು ಮಾಡದಿದ್ದರೆ ಅದು ವಾಪಸ್ ಹೋಗುವ ಸಾಧ್ಯತೆಗಳಿವೆ. ಅಂತಹ ಪರಿಸ್ಥಿತಿ ಎದುರಾಗುವುದು ಬೇಡ. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡುತ್ತೇನೆ. ಯೋಜನಾ ಅಭಿವೃದ್ಧಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಿದ ತಕ್ಷಣ ಸರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಮುಂದಿನ ಸಾಲಿನ ಹಜ್ ಯಾತ್ರೆಗೆ ಯಾತ್ರಾರ್ಥಿಗಳು ನೂತನ ಹಜ್ ಭವನದಿಂದ ಪ್ರಯಾಣ ಬೆಳೆಸುವಂತಾಗಬೇಕು ಎಂಬುದು ನಮ್ಮ ಆಶಯ.

►ವಿಮಾನ ನಿಲ್ದಾಣದಿಂದ ದೂರವಿದ್ದರೂ ಅಡ್ಯಾರ್‌ನಲ್ಲೇ ಯಾಕೆ ಸ್ಥಳವನ್ನು ಆಯ್ಕೆ ಮಾಡಲಾಯಿತು?

ಇಬ್ರಾಹೀಮ್: ಅಡ್ಯಾರ್ ರಾಷ್ಟ್ರೀಯ ಹೆದ್ದಾರಿಯ ಸಮೀಪವಿದೆ. ಬೇರೆ ಬೇರೆ ಜಿಲ್ಲೆಗಳಿಂದ ಜನರು ಈ ಭವನಕ್ಕೆ ಆಗಮಿಸಲು ಅನುಕೂಲವಾಗುತ್ತದೆ. ಅಲ್ಲದೆ, ಮಂಗಳೂರು ತಾಲೂಕು ಅಷ್ಟೇ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಲ್ಪಸಂಖ್ಯಾತರು ಇದರ ಸದುಪಯೋಗಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಂಜಾರು ಅಥವಾ ಮರವೂರು ಬಳಿ ಮಾಡಿದರೆ, ಜನರು ಅಷ್ಟೊಂದು ಒಳಪ್ರದೇಶಕ್ಕೆ ಹೋಗಲು ಹಿಂಜರಿಯಬಹುದು. ಹಜ್‌ಯಾತ್ರಿಗಳ ಎಮಿಗ್ರೇಷನ್ ಪ್ರಕ್ರಿಯೆ ಒಮ್ಮೆ ಮುಗಿದರೆ ಅವರು ವಾಹನಗಳ ಮೂಲಕವೇ ವಿಮಾನ ನಿಲ್ದಾಣ ತಲುಪುತ್ತಾರೆ. ಯಾರೂ ಕೂಡ ನಡೆದುಕೊಂಡು ಹೋಗುವುದಿಲ್ಲ. ಆದುದರಿಂದ, ವಿಮಾನ ನಿಲ್ದಾಣದಿಂದ ದೂರ ಇದೆ ಎಂಬ ಒಂದೇ ಕಾರಣಕ್ಕೆ ವಿರೋಧಿಸುವುದು ಸರಿಯಲ್ಲ.

►ಹಜ್ ಭವನ ಉಪಯುಕ್ತವಾಗುವಂತೆ ಹೇಗೆ ಯೋಜನೆ ರೂಪಿಸಲಾಗಿದೆ ?

ಇಬ್ರಾಹೀಮ್: ಮಂಗಳೂರಿನಲ್ಲಿ ವರ್ಷದಲ್ಲಿ ಕೇವಲ ಒಂದು ವಾರಗಳ ಕಾಲ ಮಾತ್ರ ಹಜ್‌ಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತವೆ. ಇನ್ನುಳಿದ 51 ವಾರಗಳು ಯಾವುದೇ ಚಟುವಟಿಕೆಗಳಿರುವುದಿಲ್ಲ. ಆದುದರಿಂದ, ಸರಕಾರ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸುವ ಭವನವು ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕತಿಕ ಚಟುವಟಿಕೆಗಳಿಗೆ ನಿರಂತರವಾಗಿಬಳಕೆಯಾಗಬೇಕು ಎಂಬುದು ನಮ್ಮ ಉದ್ದೇಶ.

ದೇಶದ ವಿವಿಧ ರಾಜ್ಯಗಳಲ್ಲಿರುವ ಹಜ್ ಭವನಗಳನ್ನು ಪರಿಶೀಲನೆ ಮಾಡಲಾಗಿದೆ. ಜಾರ್ಖಂಡ್‌ನ ರಾಂಚಿಯಲ್ಲಿ ರಾಜ್ಯದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಹಜ್‌ಭವನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿರುವ ಹಜ್‌ಭವನವು ಇದೀಗ ಕೋವಿಡ್ ಕೇರ್ ಸೆಂಟರ್ ಆಗಿ ಬಳಕೆಯಾಗುತ್ತಿದೆ. ಹಜ್‌ಭವನದಲ್ಲಿ ಯುವಕರಿಗೆ ಕೌಶಲ್ಯ ತರಬೇತಿ, ವಕ್ಫ್ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ತರಬೇತಿ, ವಿಚಾರ ಸಂಕಿರಣಗಳು, ಗೋಷ್ಠಿಗಳು, ಚರ್ಚಾಕೂಟಗಳನ್ನು ಹಮ್ಮಿಕೊಳ್ಳುವಂತಹ ಬಹುಪಯೋಗಿ ಭವನವನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಮಧ್ಯಮ ವರ್ಗದವರು, ಕೆಳಸ್ಥರದವರಿಗೆ ಮದುವೆ, ಸಭೆ ಸಮಾರಂಭಗಳನ್ನು ಹಮ್ಮಿಕೊಳ್ಳಲು ಕೈಗೆಟಕುವ ದರದಲ್ಲಿ ಈ ಭವನ ಸಿಗಬೇಕು. ಅಲ್ಲದೆ, ವಿವಿಧ ಸಂಘ ಸಂಸ್ಥೆಗಳು ತಮ್ಮ ಸಭೆ, ಸಮಾರಂಭಗಳಿಗೆ ಇದನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳುವ ನಮ್ಮ ಯುವಜನತೆಗೂ ಇದರಿಂದ ಅನುಕೂಲವಾಗಲಿದೆ. ಗ್ರಂಥಾಲಯವನ್ನು ನಿರ್ಮಿಸುವ ಉದ್ದೇಶವೂ ಇದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top