ಪ್ರವಾದಿ ಮುಹಮ್ಮದ್ (ಸ) ಸಾಮಾಜಿಕ ಕ್ರಾಂತಿಯ ಪ್ರತಿಪಾದಕ ಮಾತ್ರವಲ್ಲ; ಸ್ಥಾಪಕ ಕೂಡಾ | Vartha Bharati- ವಾರ್ತಾ ಭಾರತಿ

--

ಪ್ರವಾದಿ ಮುಹಮ್ಮದ್ (ಸ) ಸಾಮಾಜಿಕ ಕ್ರಾಂತಿಯ ಪ್ರತಿಪಾದಕ ಮಾತ್ರವಲ್ಲ; ಸ್ಥಾಪಕ ಕೂಡಾ

ಜಗತ್ತಿನ ಹೆಚ್ಚಿನ ಮಹಾನ್ ಧಾರ್ಮಿಕ ನಾಯಕರಿಗೆ ಹೋಲಿಸಿದಾಗ ಪ್ರವಾದಿ ಮುಹಮ್ಮದ್ (ಸ) ಅವರಲ್ಲಿ ನಮಗೆ ಎದ್ದು ಕಾಣುವ ಒಂದು ದೊಡ್ಡ ವಿಶೇಷತೆಯೇನೆಂದರೆ ಅವರು ಕೇವಲ ಬೋಧಕರಾಗಿ ಮಾತ್ರ ಯಶಸ್ವಿಯಾದವರಲ್ಲ. ತಾವು ಬೋಧಿಸಿದ್ದನ್ನು ಸಮಾಜದಲ್ಲಿ ಸ್ಥಾಪಿಸಿ ತೋರಿಸುವ ವಿಷಯದಲ್ಲೂ ಅವರಿಗೆ ಅಭೂತಪೂರ್ವ ಯಶಸ್ಸು ಪ್ರಾಪ್ತವಾಗಿತ್ತು. ಇದೇ ಮಾನವ ಜಗತ್ತಿನ ಒಂದು ಸಣ್ಣ ಭಾಗದಲ್ಲಾದರೂ ಮದ್ಯ ಮುಕ್ತ, ಜೂಜುಮುಕ್ತ, ಹಿಂಸೆ ಮುಕ್ತ, ಶೋಷಣೆ ಮುಕ್ತ, ಬಡ್ಡಿಮುಕ್ತ, ಜನಾಂಗ ತಾರತಮ್ಯ ಮುಕ್ತ ಸಮಾಜವನ್ನು ನಿಜಕ್ಕೂ ಅವರು ಸ್ಥಾಪಿಸಿದರು. ಅವರು ಪರಿಚಯಿಸಿದ ಎಷ್ಟೋ ಒಳಿತುಗಳು ಅವರ ನಂತರದ ಕಾಲದಲ್ಲೂ ಹಲವು ಶತಮಾಗಳ ಕಾಲ ಉಳಿದವು, ಈಗಲೂ ಉಳಿದಿವೆ.

‘‘ಎಲ್ಲ ಮಾನವರೂ (ಪ್ರಥಮ ಮಾನವ ಜೋಡಿಯಾಗಿದ್ದ) ಆದಮ್ ಮತ್ತು ಹವ್ವಾರ ಸಂತತಿಗಳು. ಅರಬ್ ಜನಾಂಗದ ಯಾರೂ ಅರಬ್ ಅಲ್ಲದವನಿಗಿಂತ ಶ್ರೇಷ್ಠನಲ್ಲ. ಹಾಗೆಯೇ, ಅರಬ್ ಜನಾಂಗದವನಲ್ಲದ ಯಾರೂ ಅರಬ್ ಜನಾಂಗದವನಿಗಿಂತ ಶ್ರೇಷ್ಠನಲ್ಲ. ಯಾವ ಬಿಳಿಯನೂ ಕರಿಯನಿಗಿಂತ ಶ್ರೇಷ್ಠನಲ್ಲ, ಯಾವ ಕರಿಯನೂ ಬಿಳಿಯನಿಗಿಂತ ಶ್ರೇಷ್ಠನಲ್ಲ. ’’

ಇವು ಪ್ರವಾದಿ ಮುಹಮ್ಮದ್ (ಸ) ಅವರ ಮಾತುಗಳು. ಇಂದು ಕೂಡಾ ತುಂಬಾ ಗಮನಾರ್ಹವೆನಿಸುವ ಈ ಮಾತುಗಳನ್ನು ಅವರು ಆಡಿದ್ದು ವಿಶ್ವಸಂಸ್ಥೆಯಲ್ಲಾಗಲಿ, ಮಾನವ ಸಮಾನತೆಯನ್ನು ಸಮರ್ಥಿಸುವ 21ನೇ ಶತಮಾನದ ಬೇರಾವುದಾದರೂ ಆಧುನಿಕ ವೇದಿಕೆಯಲ್ಲಾಗಲಿ ಅಲ್ಲ. 15 ಶತಮಾನಗಳ ಹಿಂದೆ, ಸಮಾನತೆ ಎಂಬುದು ಕಟ್ಟುನಿಟ್ಟಾಗಿ ನಿಷಿದ್ಧವಾಗಿದ್ದ ಒಂದು ಸಮಾಜದಲ್ಲಿ ಅವರು ಪ್ರಸ್ತುತ ಮಾತುಗಳನ್ನು ಹೇಳಿದ್ದರು. ಅಸಮಾನತೆ ಎಂಬುದು ಆ ಸಮಾಜದಲ್ಲಿ ಸಾಮಾಜಿಕ ವ್ಯವಸ್ಥೆಯ ಒಂದು ಭಾಗ ಮಾತ್ರ ಆಗಿರಲಿಲ್ಲ. ಅಸಮಾನತೆಯೇ ಆ ಸಮಾಜದ ತಳಹದಿಯಾಗಿತ್ತು. ಅಲ್ಲಿ ಅಸ್ಪೃಶ್ಯತೆ ಇರಲಿಲ್ಲ ಎಂಬುದು ನಿಜ. ಅಸ್ಪೃಶ್ಯತೆ ಆ ಕಾಲದಲ್ಲೂ ಬೇರಾವುದೇ ಕಾಲದಲ್ಲೂ ಭಾರತ ಬಿಟ್ಟರೆ ಜಗತ್ತಿನ ಬೇರಾವ ಭಾಗದಲ್ಲೂ ಆಚರಣೆಯಲ್ಲಿರಲಿಲ್ಲ. ಆದರೆ ಜನಾಂಗವಾದ, ವಂಶವಾದ, ಗೋತ್ರವಾದ ಇತ್ಯಾದಿ ಅನಿಷ್ಟಗಳು ಅಲ್ಲಿ ಬಹಳ ಆಳವಾಗಿ ಬೇರೂರಿದ್ದವು. ಅರಬಿಗಳು ಅರಬ್ ಅಲ್ಲದವರನ್ನು ‘ಅಜಮಿ’ಗಳೆಂದು ಅಂದರೆ ಮೂಗರೆಂದು ಕರೆಯುತ್ತಿದ್ದರು. ಕೆಲವು ಯಹೂದಿ ಪಂಗಡಗಳ ಜನರು - ನಾವು ದೇವರ ಪರಮಾಪ್ತರು - ನಾವು ಎಲ್ಲ ಸದ್ಮೌಲ್ಯಗಳನ್ನು ನಮ್ಮ ಮಧ್ಯೆ ಪಾಲಿಸಿದರೆ ಸಾಕು. ಅನ್ಯರು ಅದಕ್ಕೆ ಯೋಗ್ಯರಲ್ಲ. ನಮ್ಮ ಗುಂಪಿನ ಹೊರಗಿನವರಿಗೆ ನಾವೇನು ಅನ್ಯಾಯ ಮಾಡಿದರೂ ದೇವರು ನಮ್ಮನ್ನು ಪ್ರಶ್ನಿಸಲಾರ - ಎಂದು ನಂಬಿಕೊಂಡಿದ್ದರು.

 ಈ ತರದ ಜನಾಂಗವಾದ ಅಥವಾ ಹುಟ್ಟಿನ ಅಥವಾ ಬಣ್ಣದ ಆಧಾರದಲ್ಲಿ, ನಾವು ಶ್ರೇಷ್ಠರು ಮತ್ತು ಇತರ ಕೆಲವರು ನಿಕೃಷ್ಟರು ಎಂಬ ನಂಬಿಕೆಯೊಂದಿಗೆ ಕೆಲವು ಮಾನವರು ಇತರ ಕೆಲವು ಮಾನವರನ್ನು ತಾತ್ಸಾರದಿಂದ ಕಾಣುವ ಮತ್ತು ಅವರನ್ನು ದ್ವೇಷಿಸುವ ಹೊಲಸು ಪ್ರವೃತ್ತಿ ಜಗತ್ತಿನ ಹಲವೆಡೆ ಇಂದಿಗೂ ಜೀವಂತವಿದೆ. ಸಮಕಾಲೀನ ಜಗತ್ತಿನ ಅತ್ಯಂತ ಶಿಕ್ಷಿತ, ಸಮೃದ್ಧ, ಸುಶಕ್ತ ಹಾಗೂ ಮುಂದುವರಿದ ದೇಶವೆಂದು ಪರಿಗಣಿಸಲಾಗುವ ಅಮೆರಿಕದಲ್ಲಿ ಈಗಲೂ ಜನಾಂಗವಾದವು ಅತಿದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಮೆರೆಯುತ್ತಿದೆ. ಸಾವಿರ ಕಾನೂನುಗಳನ್ನು ಮಾಡಿಯೂ ಸಾವಿರ ಆಂದೋಲನಗಳನ್ನು ನಡೆಸಿಯೂ ಈ ಅನಿಷ್ಟವನ್ನು ಅಳಿಸಿಹಾಕಲು ಅಲ್ಲಿನವರಿಗೆ ಸಾಧ್ಯವಾಗಿಲ್ಲ.

ಕಳೆದ ವಾರವಷ್ಟೇ (ಅಕ್ಟೊಬರ್ 24) ನಮ್ಮ ದೇಶದ ಅತಿಶ್ರೀಮಂತರಲ್ಲೊಬ್ಬರಾದ ಕುಮಾರಮಂಗಲಂ ಬಿರ್ಲಾ ಅವರ ಮಗಳು ಅನನ್ಯಾ ಬಿರ್ಲಾ ಹೀಗೆಂದು ಟ್ವೀಟಿಸಿದ್ದಾರೆ:

‘‘ಈ ಹೊಟೇಲ್‌ನವರು ನನ್ನನ್ನು ಮತ್ತು ನನ್ನ ಕುಟುಂಬದವರನ್ನು ತಮ್ಮ ಸ್ಥಳದಿಂದ ಅಕ್ಷರಶಃ ಹೊರಗೆಸೆದಿದ್ದಾರೆ. ಎಷ್ಟೊಂದು ಜನಾಂಗವಾದಿ, ಎಷ್ಟೊಂದು ಶೋಚನೀಯ. ನಿಜವಾಗಿ ನೀವು ನಿಮ್ಮ ಗ್ರಾಹಕರನ್ನು ಸರಿಯಾದ ರೀತಿಯಲ್ಲಿ ಉಪಚರಿಸಬೇಕು. ಇದು ತೀರಾ ಜನಾಂಗವಾದಿ ಕ್ರಮ. ಇದು ಸರಿಯಲ್ಲ.’’

ಲಾಸ್ ಏಂಜಲಿಸ್‌ನ ಹೊಟೇಲೊಂದರಲ್ಲಿ ತಾನು ಎದುರಿಸಿದ ಜನಾಂಗೀಯ ತಾರತಮ್ಯಕ್ಕೆ ಇದು ಅವರ ಪ್ರತಿಕ್ರಿಯೆಯಾಗಿತ್ತು.

ಯುರೋಪಿನಲ್ಲೂ ಅಷ್ಟೇ. ಅಲ್ಲಿ ಜನಾಂಗವಾದಕ್ಕೆ ಕಾನೂನಿನ ಮನ್ನಣೆ ಇಲ್ಲವಾದರೂ ಅಲ್ಲಿನ ಹಲವು ದೇಶಗಳಲ್ಲಿ ಜನಾಂಗವಾದವು ಸಮಾಜದ ಪಾಲಿಗೆ ಒಂದು ದೊಡ್ಡ ಸವಾಲಾಗಿದೆ. ಅಲ್ಲಿ ಶ್ವೇತ ಜನಾಂಗವಾದವು ಹಲವೊಮ್ಮೆ ಹಿಂಸಾತ್ಮಕ ಘಟನೆಗಳ ರೂಪದಲ್ಲಿ ಪ್ರಕಟವಾದರೆ, ನಿತ್ಯ ಜೀವನದಲ್ಲಿ ಬೇರೆ ಅನೇಕ ರೂಪಗಳಲ್ಲಿ ತನ್ನ ಉಪಸ್ಥಿತಿಯನ್ನು ನೆನಪಿಸುತ್ತಲಿರುತ್ತದೆ. ಅತ್ಯಾಧುನಿಕ ಯುಗದಲ್ಲಿ, ಅತ್ಯಾಧುನಿಕ ಸಮಾಜಗಳಲ್ಲಿ ಜನಾಂಗವಾದದ ಬೇರುಗಳು ಇಷ್ಟು ಆಳವಾಗಿರುವಾಗ, 15 ಶತಮಾನಗಳ ಹಿಂದಿನ ಕಟ್ಟಾ ಸಂಪ್ರದಾಯವಾದಿ ಸಮಾಜವೊಂದರಲ್ಲಿ ಪ್ರವಾದಿವರ್ಯರು (ಸ) ಈ ಬಗೆಯ ಸಂಪೂರ್ಣ ಮತ್ತು ನಿಶ್ಯರ್ತ ಸಮಾನತೆಯ ಧೋರಣೆಯನ್ನು ಘಂಟಾಘೋಷವಾಗಿ ಪ್ರತಿಪಾದಿಸಿದಾಗ ಆ ಸಮಾಜದ ಕಡೆಯಿಂದ ಎಂತಹ ಪ್ರತಿಕ್ರಿಯೆ ಪ್ರಕಟವಾಗಿರಬಹುದು? ಸಂಕ್ಷಿಪ್ತವಾಗಿ ಹೇಳಬೇಕೆಂದರೆ ತಮ್ಮ ಸಮಾಜದಲ್ಲಿ ಬಾಲ್ಯದಿಂದಲೇ ಎಲ್ಲರ ಆಪ್ತರಾಗಿದ್ದ ಪ್ರವಾದಿ, ತಾವು ಘೋಷಿಸಿದ ಸತ್ಯ, ನ್ಯಾಯ ಮತ್ತು ಸಮಾನತೆಯ ಸಂದೇಶದಿಂದಾಗಿ ಹಠಾತ್ತನೆ ಆ ಸಮಾಜದ ಎಲ್ಲರ ಸಮಾನ ಶತ್ರುವಾಗಿ ಬಿಟ್ಟರು. ಅವರ ಸಂದೇಶದ ವಿರುದ್ಧ ಪ್ರತಿರೋಧವು ಕ್ರಮೇಣ ಎಷ್ಟು ತೀವ್ರವಾಗಿ ಬಿಟ್ಟಿತೆಂದರೆ ವಿರೋಧಿಗಳು ಪ್ರವಾದಿವರ್ಯರನ್ನು ಕೊಂದೇ ಬಿಡಬೇಕೆಂಬ ಒಮ್ಮತದ ತೀರ್ಮಾನಕ್ಕೆ ಬಂದರು. ಈ ಕಾರ್ಯದಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳೂ ಶತ್ರುಗಳೂ ಆಗಿದ್ದ ಮಕ್ಕಾ ಪಟ್ಟಣದ ಹಲವು ಪ್ರತಿಷ್ಠಿತ ಗೋತ್ರಗಳ ಜನರು ಕೈಜೋಡಿಸಿದರು. ಕೊಲೆಯ ಕಾರ್ಯಾಚರಣೆಯಲ್ಲಿ ಮಕ್ಕಾದ ಪ್ರತಿಯೊಂದು ಗೋತ್ರದ ಒಬ್ಬ ಪ್ರತಿನಿಧಿ ಭಾಗವಹಿಸಬೇಕೆಂದು ತೀರ್ಮಾನವಾಯಿತು. ಈ ಪ್ರಾತಿನಿಧಿಕ ತಂಡ ರಾತ್ರಿಹೊತ್ತು ಶಸ್ತ್ರ ಸಜ್ಜಿತವಾಗಿ ಪ್ರವಾದಿಯ ಮನೆಗೆ ಮುತ್ತಿಗೆ ಹಾಕಿ ಕೊಲೆಗಾಗಿ ಕ್ಷಣಗಣನೆ ಮಾಡುತ್ತಿದ್ದಾಗ ಪ್ರವಾದಿವರ್ಯರು(ಸ) ಅಲ್ಲಿಂದ ತಪ್ಪಿಸಿಕೊಂಡು 450 ಕಿ.ಮೀ. ದೂರದ ಮದೀಾ ಪಟ್ಟಣಕ್ಕೆ ವಲಸೆ ಹೋದರು.

ಅರಬಿ ಭಾಷೆಯಲ್ಲಿ ವಲಸೆಗೆ ‘ಹಿಜ್ರತ್’ ಎನ್ನುತ್ತಾರೆ. ಪ್ರವಾದಿವರ್ಯರು ಮಕ್ಕಾದಲ್ಲಿ ತಮ್ಮ ಪ್ರವಾದಿತ್ವವನ್ನು ಘೋಷಿಸಿದ 13 ವರ್ಷಗಳ ಬಳಿಕ ನಡೆದ ಈ ಹಿಜ್ರತ್ ಅಥವಾ ವಲಸೆಯು ಮುಸ್ಲಿಮ್ ಇತಿಹಾಸದ ಅತ್ಯಂತ ನಿರ್ಣಾಯಕ ಘಟನೆಯಾಗಿತ್ತು. ಮುಸ್ಲಿಮರ ಹಿಜರಿ ಶಕೆ ಈ ಘಟನೆಯಿಂದಲೇ ಆರಂಭವಾಗುತ್ತದೆ.

ಪ್ರವಾದಿವರ್ಯರು ಮದೀನಾಕ್ಕೆ ವಲಸೆಹೋಗುವ ಮುನ್ನವೇ ಅಲ್ಲಿ ಅವರ ಹಲವು ಅನುಯಾಯಿಗಳಿದ್ದರು. ಮಕ್ಕಾದಲ್ಲಿ ಉಳಿದುಕೊಂಡಿದ್ದ ಮತ್ತು ತಮ್ಮ ಜೀವ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳಲು ಇತರ ನಾಡುಗಳಿಗೆ ವಲಸೆ ಹೋಗಿದ್ದ ಮುಸ್ಲಿಮರೂ ಮದೀನಾಕ್ಕೆ ಶೀಘ್ರವೇ ಬಂದು ಪ್ರವಾದಿವರ್ಯರ ಜೊತೆ ಸೇರಿಕೊಂಡರು. ಮಕ್ಕಾದಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತಿರೋಧವನ್ನು ಮತ್ತು ಹಿಂಸಾತ್ಮಕ ವಿರೋಧವನ್ನು ಎದುರಿಸಿದ್ದ ಪ್ರವಾದಿವರ್ಯರಿಗೆ ಮದೀನದಲ್ಲಿ ತಮ್ಮ ಸಂದೇಶದ ಪ್ರಸಾರಕ್ಕೆ ಹಾಗೂ ತಾವು ಬಯಸುವ ವ್ಯವಸ್ಥೆಯ ಸ್ಥಾಪನೆಗೆ ಒಂದು ಪೂರಕ ವಾತಾವರಣ ಸಿಕ್ಕಿತು. ಮದೀನಾದಲ್ಲಿ ಪ್ರವಾದಿವರ್ಯರಿಗೆ ಸಿಕ್ಕಿದ ಕಾಲಾವಕಾಶ ಕೇವಲ 10 ವರ್ಷಗಳು. ಅವು ಅವರ ಬದುಕಿನ ಕೊನೆಯ 10 ವರ್ಷಗಳಾಗಿದ್ದವು. ಅಲ್ಲಿಯ ಜನತೆ ಅವರನ್ನು ತಮ್ಮ ನಾಯಕರಾಗಿ, ಮಾತ್ರವಲ್ಲ, ತಮ್ಮ ಆಡಳಿತಗಾರರಾಗಿ ಅಂಗೀಕರಿಸಿದರು. ಕಠಿಣ ಸವಾಲುಗಳು ಮತ್ತು ಅಡೆತಡೆಗಳು ಅಲ್ಲೂ ಇದ್ದುವು. ಆದರೆ ಅಲ್ಲಿ ಅವಕಾಶಗಳೂ ಧಾರಾಳವಾಗಿದ್ದವು. ಆ ಅವಕಾಶಗಳನ್ನು ಮತ್ತು ಸೀಮಿತ ಜನಬಲವನ್ನು ಬಳಸಿಕೊಂಡು ಅವರು ಅಲ್ಲಿ ಸಾಮಾಜಿಕ ಪರಿವರ್ತನೆಯ ಪ್ರಕ್ರಿಯೆಯೊಂದನ್ನು ಆರಂಭಿಸಿದರು. ಒಂದು ದಶಕದ ಸಂಕ್ಷಿಪ್ತ ಅವಧಿಯಲ್ಲೇ ಮದೀನಾದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿ, ಆದರ್ಶ ಸಮಾಜದ ಮಾದರಿಯೊಂದನ್ನು ಜಗತ್ತಿನ ಮುಂದಿಡಲು ಅವರಿಗೆ ಸಾಧ್ಯವಾಯಿತು.

 ಮದೀನಾದಲ್ಲಿ ಪರಿವರ್ತನೆಯ ಪ್ರಕ್ರಿಯೆಯ ಪ್ರಥಮ ಭಾಗವಾಗಿ ಪ್ರವಾದಿವರ್ಯರು(ಸ) ವಿವಿಧ ಹಿನ್ನೆಲೆಯ ಮುಸ್ಲಿಮರನ್ನು ಸೇರಿಸಿ ಒಂದು ‘ಉಮ್ಮತ್’ (ಸಮುದಾಯ)ವನ್ನು ಸ್ಥಾಪಿಸಿದರು. ಬಹುಕಾಲದಿಂದ ಪರಸ್ಪರ ಯುದ್ಧನಿರತರಾಗಿದ್ದ ಔಸ್ ಮತ್ತು ಖಜ್ರಜ್ ಎಂಬ ಮದೀನಾದ ಎರಡು ದೊಡ್ಡ ಪಂಗಡಗಳ ನಡುವೆ ಶಾಂತಿ ಸಂಧಾನವನ್ನು ಏರ್ಪಡಿಸಿದರು. ಹಾಗೆಯೆ ಮದೀನಾದ ಹೆಚ್ಚಿನೆಲ್ಲ ಸಮುದಾಯಗಳ ಮಾನ್ಯತೆ ಪಡೆದ ಒಂದು ಸರಕಾರವನ್ನು ರಚಿಸಿದರು. ಎಲ್ಲರ ಹಕ್ಕು ಬಾಧ್ಯತೆಗಳನ್ನು ಸ್ಪಷ್ಟಪಡಿಸುವ ಒಂದು ಲಿಖಿತ ಸಂವಿಧಾನವನ್ನು ರೂಪಿಸಿದರು. ಅವರು ಮದೀನಾದಲ್ಲಿ ಅರಮನೆಯನ್ನಾಗಲಿ, ಕೋಟೆಯನ್ನಾಗಲಿ ಕಟ್ಟಲಿಲ್ಲ. ಅಲ್ಲಿ ಅವರು ಮೊದಲು ಕಟ್ಟಿಸಿದ್ದು ಒಂದು ಮಸೀದಿಯನ್ನು. ಸ್ವತಃ ಪ್ರವಾದಿ ಮತ್ತು ಅವರ ಅನುಯಾಯಿಗಳ ಶ್ರಮದಾನದ ಮೂಲಕ ಸುಮಾರು 7 ತಿಂಗಳ ಅವಧಿಯಲ್ಲಿ ನಿರ್ಮಾಣವಾದ ಆ ಮಸೀದಿಯು ಸುಮಾರು 11,000 ಚದರ ಅಡಿ ವಿಸ್ತಾರ ಮತ್ತು ಸುಮಾರು 12 ಅಡಿ ಎತ್ತರವಿರುವ ಒಂದು ವಿಶಾಲ ಕಟ್ಟಡದ ರೂಪದಲ್ಲಿತ್ತು. ‘ಮಸ್ಜಿದುನ್ನಬವಿ’ (ಪ್ರವಾದಿಯ ಮಸೀದಿ) ಎಂದು ಕರೆಯಲಾಗುವ ಆ ಮಸೀದಿ ಕೇವಲ ಆರಾಧನೆಯ ಸ್ಥಳವಾಗಿರಲಿಲ್ಲ. ಅದು ಮದೀನಾದ ಆಡಳಿತ ಕೇಂದ್ರವೂ ಆಗಿತ್ತು. ಆಧ್ಯಾತ್ಮಿಕ ಸ್ಫೂರ್ತಿ ಕೇಂದ್ರ, ಸಮಾಲೋಚನಾ ಕೇಂದ್ರ, ಸಾಮಾಜಿಕ ಸುಧಾರಣಾ ಕೇಂದ್ರ, ಸಭಾಂಗಣ, ಮಾಹಿತಿ ಕೇಂದ್ರ, ವಿದ್ಯಾಕೇಂದ್ರ, ನ್ಯಾಯಾಲಯ, ವಿವಾಹಾಲಯ, ಸೇನಾ ಮುಖ್ಯಾಲಯ, ಸೈನಿಕ ತರಬೇತಿಕೇಂದ್ರ, ಚಿಕಿತ್ಸಾಲಯ ಹೀಗೆ ಹಲವು ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಕೇಂದ್ರವಾಗಿ ಅದನ್ನು ಬಳಸಲಾಯಿತು. ಬೇರೆ ಬೇರೆ ಊರುಗಳಿಂದ ಬರುತ್ತಿದ್ದ ವಿವಿಧ ಧಾರ್ಮಿಕ, ರಾಜಕೀಯ ಹಿನ್ನೆಲೆಯ ವಿದ್ವಾಂಸರು, ವರ್ತಕರು ಮತ್ತು ರಾಯಭಾರಿಗಳನ್ನು ಪ್ರವಾದಿವರ್ಯರು ಅಲ್ಲೇ ಭೇಟಿಯಾಗುತ್ತಿದ್ದರು. ಹಲವು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಒಪ್ಪಂದ ಮತ್ತು ಒಡಂಬಡಿಕೆಗಳು ಅಲ್ಲೇ ನಡೆದಿದ್ದವು. ಮುಂದೆ ಯುದ್ಧಗಳು ನಡೆದಾಗ ಸಮಾರಾರ್ಜಿತ ಸೊತ್ತುಗಳ ಸಂಗ್ರಹ ಮತ್ತು ವಿತರಣೆ ಇಲ್ಲಿಂದಲೇ ನಡೆಯುತ್ತಿತ್ತು. ಮಕ್ಕಾದಿಂದ ಬಂದಿದ್ದ ವಲಸಿಗ ನಿರಾಶ್ರಿತರಲ್ಲಿ ಹಲವರಿಗೆ ಇಲ್ಲೇ ಆಶ್ರಯ ಒದಗಿಸಲಾಯಿತು. ಪ್ರವಾದಿವರ್ಯರ (ಸ) ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ಗುಡಿಸಲುಗಳನ್ನೂ ಪ್ರಸ್ತುತ ಮಸೀದಿಯ ಗೋಡೆಗಳಿಗೆ ಲಗತ್ತಿಸಿ ಕಟ್ಟಲಾಗಿತ್ತು. ಪ್ರವಾದಿವರ್ಯರು (ಸ) ತಮ್ಮ ಮುಂದಿನ ಜೀವನದುದ್ದಕ್ಕೂ ಆ ಗುಡಿಸಲುಗಳಲ್ಲೇ ಬದುಕಿದರು.

ಮದೀನಾದಲ್ಲಿ ಹೊಸ ಸಮಾಜದ ನಿರ್ಮಾಣದ ಭಾಗವಾಗಿ ಪ್ರವಾದಿವರ್ಯರು ಕೈಗೊಂಡ ಕೆಲವು ಕ್ರಮಗಳು, ಸಂಕ್ಷಿಪ್ತವಾಗಿ ಹೀಗಿವೆ;

► ಸಮಾಜ ನಿರ್ಮಾಣ ಇಟ್ಟಿಗೆಗಳಿಂದಾಗುವುದಿಲ್ಲ, ಶ್ರೇಷ್ಠ ಸಮಾಜವು ಶ್ರೇಷ್ಠ ವ್ಯಕ್ತಿಗಳು, ಶ್ರೇಷ್ಠ ಕುಟುಂಬಗಳು ಮತ್ತು ಶ್ರೇಷ್ಠ ಸಮುದಾಯಗಳಿಂದ ನಿರ್ಮಾಣ ವಾಗುತ್ತದೆ ಎಂಬುದು ಪ್ರವಾದಿಯ ಧೋರಣೆಯಾಗಿತ್ತು. ಆ ಪ್ರಕಾರ ಅವರು ಚಾರಿತ್ರ್ಯ ನಿರ್ಮಾಣಕ್ಕೆ ಬಹಳಷ್ಟು ಒತ್ತು ಕೊಟ್ಟರು. ಇದಕ್ಕಾಗಿ ಅವರು ಕೇವಲ ಉಪದೇಶಗಳನ್ನು ಅವಲಂಬಿಸುವ ಬದಲು, ಮೊದಲು ಜನರ ನಂಬಿಕೆಗಳನ್ನು ತಿದ್ದಿದರು. ಪವಿತ್ರ ಕುರ್‌ಆನ್‌ನ ಮೂಲಕ ಸಿಕ್ಕ ದಿವ್ಯ ಮಾರ್ಗದರ್ಶನದ ಆಧಾರದಲ್ಲಿ ಸೃಷ್ಟಿ, ಸೃಷ್ಟಿಕರ್ತ, ಎಲ್ಲೆಲ್ಲೂ ಇರುವ ದೇವರ ಉಪಸ್ಥಿತಿ, ಬದುಕಿನ ನಶ್ವರತೆ, ಪರೀಕ್ಷಾರ್ಥ ಬದುಕಿನ ಇತಿಮಿತಿಗಳು, ಪರಲೋಕ, ಕ್ಷಣಕ್ಷಣದ ಕರ್ಮಗಳ ಬಗ್ಗೆ ದೇವರ ಮುಂದೆ ಉತ್ತರದಾಯಿತ್ವ ಹೀಗೆ ವಿವಿಧ ವಿಷಯಗಳಲ್ಲಿ ಜನರಿಗೆ ಸ್ಪಷ್ಟಾದ ಸತ್ಯವನ್ನು ಪರಿಚಯಿಸಿದರು.

► ಸತ್ಯನಿಷ್ಠೆ, ನ್ಯಾಯಪ್ರಜ್ಞೆ, ಮಾನವೀಯ ಬಂಧುತ್ವ ಇತ್ಯಾದಿ ವಿಶ್ವಮಾನ್ಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊ್ಳುವಂತೆ ಜನರ ಮನವೊಲಿಸಿದರು.

► ಸಹಜೀವಿಗಳು, ಪಕ್ಷಿ-ಪ್ರಾಣಿಗಳು, ಗಿಡ-ವೃಕ್ಷಗಳು, ಗಾಳಿ-ನೀರು, ಕಲ್ಲು-ಮಣ್ಣು ಇತ್ಯಾದಿ ಪ್ರತಿಯೊಂದು ವಿಷಯದಲ್ಲಿ ಮಾನವರಿಗಿರುವ ಹಕ್ಕು ಮತ್ತು ಬಾಧ್ಯತೆಗಳನ್ನು ಮನವರಿಕೆ ಮಾಡಿಸಿದರು. ಯಾವುದೇ ಬಾಹ್ಯ ಒತ್ತಡವಿಲ್ಲದೆ ಸ್ವಪ್ರೇರಣೆಯಿಂದ ಒಂದು ಆಚಾರಸಂಹಿತೆಯನ್ನು ಪಾಲಿಸಲು ನಾಗರಿಕರನ್ನು ಪ್ರೇರೇಪಿಸಿದರು.

► ಮಹಿಳೆಯರು, ಮಕ್ಕಳು, ಅನಾಥರು, ವೃದ್ಧರು, ಬಡವರು, ಸಂಪಾದಿಸಲಾಗದವರ ಕುರಿತಂತೆ ವ್ಯಕ್ತಿಗಳಿಗೂ ಸಮಾಜಕ್ಕೂ ಜವಾಬ್ದಾರಿಗಳಿವೆ.*ಮದ್ಯಪಾನ, ಜೂಜು, ಕಳವು, ದರೋಡೆ, ವ್ಯಭಿಚಾರ, ಕಾಳಸಂತೆ ಇತ್ಯಾದಿಗಳ ವಿರುದ್ಧ ಜನಾಭಿಪ್ರಾಯ ರೂಪಿಸುವ ವ್ಯಾಪಕ ಅಭಿಯಾನಗಳನ್ನು ನಡೆಸಿದರು. *ಎಲ್ಲ ಬಗೆಯ ಬಡ್ಡಿ ವ್ಯವಹಾರಗಳನ್ನು ನಿಷೇಧಿಸಿದರು.

► ಪ್ರತಿಯೊಬ್ಬ ನಾಗರಿಕನು ಸಮಾಜದಲ್ಲಿ ಸತ್ಕಾರ್ಯಗಳನ್ನು ಪ್ರೋತ್ಸಾಹಿಸುವುದನ್ನು ಮತ್ತು ಕೆಡುಕುಗಳನ್ನು ವಿರೋಧಿಸುವುದನ್ನು ತನ್ನ ನಿತ್ಯ ಕರ್ತವ್ಯವಾಗಿ ಪರಿಗಣಿಸುವಂತೆ ಮಾಡಿದರು. ಈ ರೀತಿ ಆ ಸಮಾಜದಲ್ಲಿ ಸುಧಾರಣೆಯ ಪ್ರಕ್ರಿಯೆ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದೊಂದಿಗೆ ನಡೆಯಿತು.

► ಸರಕಾರೀ ಬೊಕ್ಕಸವನ್ನು ಸ್ಥಾಪಿಸಿದರು. ನೆರವಿಗೆ ಅರ್ಹರಾಗಿರುವವರಿಗೆ ಸರಕಾರೀ ಬೊಕ್ಕಸದಿಂದ ನೆರವು ಒದಗಿಸುವ ಏರ್ಪಾಡು ಮಾಡಿದರು.

► ದಾನವನ್ನು ವೈಭವೀಕರಿಸಿ, ಝಕಾತ್ (ಕಡ್ದಾಯದಾನ)ನ ವ್ಯವಸ್ಥಿತ ಸಂಗ್ರಹ ಮತ್ತು ವಿತರಣೆಯ ಏರ್ಪಾಡು ಮಾಡಿದರು. ನಿರ್ದಿಷ್ಟ ಮಿತಿಗಿಂತ ಹೆಚ್ಚು ಸಂಪತ್ತುಳ್ಳವರು ತಮ್ಮ ಸಂಪತ್ತಿನ ಶೇ.2.5 ಭಾಗವನ್ನು ಕಡ್ಡಾಯವಾಗಿ ಝಕಾತ್ ರೂಪದಲ್ಲಿ ಸಮಾಜದ ಅರ್ಹರಿಗೆ ಪಾವತಿಸಬೇಕೆಂದು ವಿಧಿಸಲಾಯಿತು. ಇದಲ್ಲದೆ, ಸಾಧ್ಯವಾದಷ್ಟು ಸಂಪತ್ತನ್ನು ‘ಸದಕಃ’ (ಐಚ್ಛಿಕ ದಾನ)ದ ರೂಪದಲ್ಲಿ ಬಡಬಗ್ಗರಿಗೆ ನೀಡುವುದನ್ನು ಪ್ರೋತ್ಸಾಹಿಸಲಾಯಿತು.

► ಝಕಾತ್ ಜೊತೆಗೆ ‘ಉಶ್ರ್’ ವ್ಯವಸ್ಥೆಯನ್ನೂ ಪರಿಚಯಿಸಿದರು. ಆಪ್ರಕಾರ, ವಿವಿಧ ಬಗೆಯ ವ್ಯವಸಾಯಗಳನ್ನು ನಡೆಸುವ ಭೂಮಾಲಕರು ಮತ್ತು ತೋಟಗಳ ಒಡೆಯರು ನೀರಾವರಿಗಾಗಿ ಪ್ರಾಕೃತಿಕ ಮೂಲಗಳನ್ನು ಅವಲಂಬಿಸಿದ್ದರೆ ತಮ್ಮ ಬೆಳೆಯ ಕನಿಷ್ಠ ಶೇ.10 ಭಾಗವನ್ನು ಮತ್ತು ನೀರಾವರಿಗಾಗಿ ಕೃತಕ ಮೂಲಗಳನ್ನು ಅವಂಬಿಸಿರುವವರು ತಮ್ಮ ಬೆಳೆಯ ಕನಿಷ್ಠ ಶೇ.5 ಭಾಗವನ್ನು, ಕೊಯ್ಲು ಕೊಯ್ಯುವ ದಿನವೇ ಬಡವರಿಗೆ ನೀಡಬೇಕೆಂಬ ನಿಯಮವನ್ನು ಜಾರಿಗೊಳಿಸಿದರು.

► ಸಮಾಜದಲ್ಲಿ ಸಂಪತ್ತಿನ ಸಂಗ್ರಹದ ಸಂಸ್ಕೃತಿಯನ್ನು ನಿರುತ್ತೇಜಿಸಿ ವಿತರಣೆಯ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದರು. ಆಹಾರದ ವಿಷಯದಲ್ಲಿ ಮಾತ್ರವಲ್ಲ ಉಡುಗೆ, ವಾಹನ, ನಿವಾಸ ಇತ್ಯಾದಿ ಎಲ್ಲ ವಿಷಯಗಳಲ್ಲೂ ಉಳ್ಳವರು ಇಲ್ಲದವರ ಜೊತೆ ಹಂಚಿಕೊಳ್ಳಬೆೀಕೆಂಬ ಸ್ಫೂರ್ತಿಯನ್ನು ಬೆಳೆಸಿದರು.

► ಸೃಷ್ಟಿಕರ್ತನೇ ಜಗತ್ತಿನಲ್ಲಿರುವ ಎಲ್ಲ ವಸ್ತು ಮತ್ತು ಸೊತ್ತುಗಳ ನೈಜ ಹಾಗೂ ಅಂತಿಮ ಒಡೆಯ. ಆಡಳಿತಗಾರರು ಮತ್ತು ಜನಸಾಮಾನ್ಯರು ಸೇರಿದಂತೆ ಎಲ್ಲ ಮನುಷ್ಯರು ಹೆಚ್ಚೆಂದರೆ ತಮ್ಮ ಅಧೀನವಿರುವ ಸೊತ್ತುಗಳ ತಾತ್ಕಾಲಿಕ ಮೇಲ್ವಿಚಾರಕರು ಮಾತ್ರ. ತಮ್ಮ ಅಧೀನವಿರುವ ಎಲ್ಲವನ್ನೂ ಸೃಷ್ಟಿಕರ್ತನ ಆದೇಶಾನುಸಾರ ನಿಭಾಯಿಸುವುದು ಮಾನವರ ಕರ್ತವ್ಯ ಎಂಬ ಕಲ್ಪನೆಯನ್ನು ಅವರು ಜನಪ್ರಿಯಗೊಳಿಸಿದರು.

► ಸಾರ್ವಜನಿಕ ವ್ಯವಹಾರಗಳನ್ನು ಜನರೊಂದಿಗೆ ಸಮಾಲೋಚಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧರಿಸಬೇಕೆಂದು ಕಲಿಸಿದರು.

► ಒಂದು ಪ್ರಾಯೋಗಿಕ ಮತ್ತು ವಸ್ತುನಿಷ್ಠ ನಾಗರಿಕ ಕಾನೂನು ಸಂಹಿತೆ ಮತ್ತು ದಂಡ ಸಂಹಿತೆುನ್ನು ಪರಿಚಯಿಸಿ, ಅನುಷ್ಠಾನಿಸಿದರು.

► ಮುಸ್ಲಿಮ್ ಆಡಳಿತದಲ್ಲಿ ಇತರ ಧರ್ಮಗಳ ಅನುಯಾಯಿಗಳಿಗೆ ಸಂಪೂರ್ಣ ಸಂರಕ್ಷಣೆ ಸಿಗಲು ಬೇಕಾದ ಕ್ರಮಗಳನ್ನು ಕೈಗೊಂಡರು.

► ಅಕ್ಕ ಪಕ್ಕದ ಹಲವು ದೇಶಗಳ ಹಾಗೂ ಜನಾಂಗಗಳ ಬಳಿಗೆ ರಾಯಭಾರಿಗಳನ್ನು ಕಳಿಸಿ ಅವರ ಜೊತೆ ಶಾಂತಿ ಒಪ್ಪಂದಗಳನ್ನು ಮಾಡಿಕೊಂಡರು.

ಜಗತ್ತಿನ ಹೆಚ್ಚಿನ ಮಹಾನ್ ಧಾರ್ಮಿಕ ನಾಯಕರಿಗೆ ಹೋಲಿಸಿದಾಗ ಪ್ರವಾದಿ ಮುಹಮ್ಮದ್ (ಸ) ಅವರಲ್ಲಿ ನಮಗೆ ಎದ್ದು ಕಾಣುವ ಒಂದು ದೊಡ್ಡ ವಿಶೇಷತೆಯೇನೆಂದರೆ ಅವರು ಕೇವಲ ಬೋಧಕರಾಗಿ ಮಾತ್ರ ಯಶಸ್ವಿಯಾದವರಲ್ಲ. ತಾವು ಬೋಧಿಸಿದ್ದನ್ನು ಸಮಾಜದಲ್ಲಿ ಸ್ಥಾಪಿಸಿ ತೋರಿಸುವ ವಿಷಯದಲ್ಲೂ ಅವರಿಗೆ ಅಭೂತಪೂರ್ವ ಯಶಸ್ಸು ಪ್ರಾಪ್ತವಾಗಿತ್ತು. ಇದೇ ಮಾನವ ಜಗತ್ತಿನ ಒಂದು ಸಣ್ಣ ಭಾಗದಲ್ಲಾದರೂ ಮದ್ಯ ಮುಕ್ತ, ಜೂಜುಮುಕ್ತ, ಹಿಂಸೆ ಮುಕ್ತ, ಶೋಷಣೆ ಮುಕ್ತ, ಬಡ್ಡಿಮುಕ್ತ, ಜನಾಂಗ ತಾರತಮ್ಯ ಮುಕ್ತ ಸಮಾಜವನ್ನು ನಿಜಕ್ಕೂ ಅವರು ಸ್ಥಾಪಿಸಿದರು. ಅವರು ಪರಿಚಯಿಸಿದ ಎಷ್ಟೋ ಒಳಿತುಗಳು ಅವರ ನಂತರದ ಕಾಲದಲ್ಲೂ ಹಲವು ಶತಮಾಗಳ ಕಾಲ ಉಳಿದವು, ಈಗಲೂ ಉಳಿದಿವೆ.

 ಸಮಾನತೆ ಸ್ಥಾಪಿಸುವ ನಿಟ್ಟಿನಲ್ಲಿ ಪ್ರವಾದಿವರ್ಯರು ತಂದ ಕ್ರಾಂತಿ ಎಷ್ಟು ಪರಿಣಾಮಕಾರಿಯಾಗಿತ್ತು ಎಂಬುದಕ್ಕೆ ಹಜ್ರತ್ ಬಿಲಾಲ್ (ರ) ಒಂದು ಉದಾಹರಣೆಯಾಗಿದ್ದಾರೆ. ಇಥಿಯೋಪಿಯಾ ಮೂಲದ ಕರಿಯ ಜನಾಂಗದ ಬಿಲಾಲ್ ಒಂದು ಕಾಲದಲ್ಲಿ ಗುಲಾಮರಾಗಿದ್ದವರು. ಗುಲಾಮರಾಗಿದ್ದಕ್ಕಾಗಿ ಸಾಕಷ್ಟು ಹಿಂಸೆ, ಅವಮಾನಗಳನ್ನು ಸಹಿಸಿಕೊಂಡಿದ್ದ ಅವರು ಪ್ರವಾದಿತ್ವದ ಮೊದಲ ಹಂತದಲ್ಲೇ ಪ್ರವಾದಿವರ್ಯರ ಅನುಯಾಯಿಯಾಗಿ ಮಾರ್ಪಟ್ಟವರು ಮತ್ತು ಅದಕ್ಕಾಗಿ ಸಾಕಷ್ಟು ಚಿತ್ರಹಿಂಸೆಗಳನ್ನು ಅನುಭವಿಸಿದವರು. ಪ್ರವಾದಿವರ್ಯರು, ಅವರನ್ನು ಅವರ ಮಾಲಕನಿಂದ ಖರೀದಿಸಿ, ಆಮೂಲಕ ಅವರನ್ನು ಗುಲಾಮಗಿರಿಯಿಂದ ಬಿಡಿಸಿ ಅವರನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿಸುವ ಏರ್ಪಾಡು ಮಾಡಿದ್ದರು. ಆ ಸಮಾಜದಲ್ಲಿ ಮಾಜಿ ಗುಲಾಮರಿಗೂ ಗೌರವದ ಸ್ಥಾನ ನಿಷಿದ್ಧವಾಗಿತ್ತು. ಆದರೆ ಪ್ರವಾದಿವರ್ಯರು ಬಿಲಾಲ್‌ರನ್ನು ಎಷ್ಟು ಆಪ್ತರಾಗಿಸಿಕೊಂಡರು ಮತ್ತು ಅವರ ಜೊತೆ ಎಷ್ಟೊಂದು ಗೌರವದೊಂದಿಗೆ ವ್ಯವಹರಿಸಿದರೆಂದರೆ ಅವರ ಎಲ್ಲ ಅನುಯಾಯಿಗಳ ಪಾಲಿಗೂ ಬಿಲಾಲ್ ಪರಮಾಪ್ತರಾಗಿ ಬಿಟ್ಟರು. ಜನರು ಅವರನ್ನು ‘ಯಾ ಸಯ್ಯಿದೀ’ (ನನ್ನ ನಾಯಕರೇ) ಎಂದು ಕರೆಯತೊಡಗಿದ್ದರು. ಮದೀನಾದ ಮಸೀದಿಯಲ್ಲಿ, ಇತಿಹಾಸದಲ್ಲೇ ಪ್ರಥಮ ಬಾರಿಗೆ ಅದಾನ್ (ಬಾಂಗ್) ಕರೆಕೊಡುವ ಸಂದರ್ಭ ಬಂದಾಗ ಆ ಗೌರವವನ್ನು ಪ್ರವಾದಿವರ್ಯರು ಬೇರೆಲ್ಲ ಗೌರವಾನ್ವಿತರನ್ನು ಬಿಟ್ಟು ಬಿಲಾಲ್ ರಿಗೆ ವಹಿಸಿಕೊಟ್ಟರು. ಪ್ರವಾದಿವರ್ಯರು ಮಕ್ಕ ನಗರದ ಮೇಲೆ ವಿಜಯ ಸಾಧಿಸಿ ಅದನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ದಿನ ಪವಿತ್ರ ಕಾಬಾ ಮಸೀದಿಯಲ್ಲಿ ಪ್ರಥಮ ಅದಾನ್ ಹೇಳುವವರು ಯಾರೆಂದು ಹಲವರಲ್ಲಿ ಕುತೂಹಲವಿತ್ತು. ಪ್ರವಾದಿವರ್ಯರು ಬಿಲಾಲ್ ರನ್ನು ಕರೆದು ಅದಾನ್ ಕರೆ ಮೊಳಗಿಸುವಂತೆ ಆದೇಶಿಸಿದರು. ಆ ಪ್ರಕಾರ ಕಾಬಾದ ಗೋಡೆಯ ಮೇಲೆ ಹತ್ತಿ ಹಜ್ರತ್ ಬಿಲಾಲ್ ಉಚ್ಚರಿಸಿದ ಅದಾನ್ ಮಾನವ ಇತಿಹಾಸದ ಅತ್ಯಂತ ಅವಿಸ್ಮರಣೀಯ ಅದಾನ್ ಆಗಿತ್ತು. ಅದು ಕೇವಲ ನಮಾಝ್‌ಗೆ ಆಮಂತ್ರಿಸುವ ಧ್ವನಿಯಾಗಿರಲಿಲ್ಲ. ಅಸಮಾನತೆಯ ಭದ್ರಕೋಟೆಗಳನ್ನು ಉರುಳಿಸುವ ಘೋಷಣೆಯಾಗಿತ್ತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top