ಕ್ರಾಂತಿಕಾರಿ ಸುಧಾರಣೆಗಳನ್ನು ತಂದ ಟಿಪ್ಪು ಸುಲ್ತಾನ್: ಪ್ರೊ. ನಂಜರಾಜೇ ಅರಸ್, ಇತಿಹಾಸ ತಜ್ಞ | Vartha Bharati- ವಾರ್ತಾ ಭಾರತಿ

--

ದಕ್ಷಿಣದ ರಾಜರು ತಲೆಬಾಗಿಸಿ ನಿಂತಾಗ ಬ್ರಿಟಿಷರಿಗೆ ಸವಾಲೆಸೆದು ನಿಂತವನು ಟಿಪ್ಪು

ಕ್ರಾಂತಿಕಾರಿ ಸುಧಾರಣೆಗಳನ್ನು ತಂದ ಟಿಪ್ಪು ಸುಲ್ತಾನ್: ಪ್ರೊ. ನಂಜರಾಜೇ ಅರಸ್, ಇತಿಹಾಸ ತಜ್ಞ

ಇಂದು ಟಿಪ್ಪು ಜಯಂತಿ


ಟಿಪ್ಪುಮುಸ್ಲಿಮನಾಗಿ ಕಂಡದ್ದು ಯಾವಾಗಿನಿಂದ?
ನಮ್ಮ ಕಾಲದಿಂದ ಹಿಡಿದು ಇಂದಿನವರೆಗೂ ಟಿಪ್ಪು ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಮಾಹಿತಿಗಳಿವೆ. ಟಿಪ್ಪುವನ್ನು ವಿರೋಧಿಸುವವರೂ ಈ ಪಠ್ಯಗಳನ್ನು ಓದಿದ್ದಾರೆ. ಅವತ್ತು ನಾವು ಟಿಪ್ಪುಸುಲ್ತಾನ್ ಎಂಬ ವೀರನನ್ನು ನೋಡಿದ್ದೆವು. ಇವತ್ತು ಬಿಜೆಪಿ ಸರಕಾರ ಬಂದ ನಂತರ ಮುಸ್ಲಿಂ ರಾಜ ಎಂದು ನೋಡಲಾಗುತ್ತಿದೆ.
2015ರಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕೃತವಾಗಿ ಟಿಪ್ಪು ಜಯಂತಿ ಮಾಡಲು ಹೊರಟಾಗ ಸಂಘಪರಿವಾರ ಅದೇ ಹೆಸರಿನಲ್ಲಿ ಹಿಂದೂ-ಮುಸ್ಲಿಮರ ನಡುವೆ ಕಂದಕ ತೋಡಿತು. ಆವತ್ತಿನಿಂದ ಟಿಪ್ಪು ಮುಸ್ಲಿಮನಾದ. ಇಲ್ಲದ ಕಥೆಗಳನ್ನು ಕಟ್ಟಲಾಯಿತು. ಕೊಡಗಿನಲ್ಲಿ 70 ಸಾವಿರ ಯುವಕರನ್ನು ಕೊಂದ ಎಂದು ಒಬ್ಬ ಹೇಳಿದರೆ, ಮತಾಂತರ ಮಾಡಿ ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋದ ಎಂದು ಮತ್ತೊಬ್ಬ ಹೇಳುತ್ತಾನೆ. ಆದರೆ ಮತ್ತೊಬ್ಬ 60 ಸಾವಿರ ಯುವಕರು ಎಂದರೆ ಇನ್ನೊಬ್ಬ 80 ಸಾವಿರ ಎನ್ನುತ್ತಾನೆ.
ದೇವಟಿಪರಂಬು ಎಂಬಲ್ಲಿ ಟಿಪ್ಪುಈ ತಂತ್ರ ಹೂಡಿದ್ದ ಎಂದು ಆರೋಪಿಸಲಾಗುತ್ತಿದೆ. ಆದರೆ ಅದೇ ದೇವಟಿಪರಂಬುವಿನಲ್ಲಿ ಬಹುಶಃ 800 ಜನರಿಗಿಂತ ಹೆಚ್ಚು ಜನರು ನಿಲ್ಲಲು ಸಾಧ್ಯವಿಲ್ಲ. ಅಂಟಿಕೊಂಡು ನಿಂತರೂ 1,000 ಜನರು ನಿಲ್ಲಬಹುದು ಎನ್ನುವುದು ವಾಸ್ತವ.
ಇವರು 1785ರ ಆಸುಪಾಸಿನ ಕಥೆ ಹೇಳಿ ಸಾವಿರಾರು ಜನರನ್ನು ಕೊಂದ ಎಂದು ಹೇಳುತ್ತಾರೆ. 1785ರ ನಂತರ 50 ವರ್ಷಗಳ ಬಳಿಕ ಮೊದಲ ಜನಗಣತಿ ಬರುತ್ತದೆ. ಮೊದಲ ಜನಗಣತಿ ಪ್ರಕಾರ ಆವತ್ತಿನ ಕೊಡಗಿನ ಜನಸಂಖ್ಯೆ ಸುಮಾರು 73 ಸಾವಿರ ಮಾತ್ರ. ಅಂದರೆ ಅಜ್ಜನಿಂದ ಹಿಡಿದು ಮೊಮ್ಮಗುವಿನವರೆಗಿನ ಜನಸಂಖ್ಯೆ ಅದು. ಅದರಲ್ಲಿ ಗಂಡು, ಹೆಣ್ಣು, ಮಹಿಳೆಯರು, ವೃದ್ಧರು ಎಲ್ಲಾ ಸೇರಿದ್ದಾರೆ. ಹೀಗೆ ಬ್ರಿಟಿಷರಂತೆಯೇ ಹಿಂದೂ ಇತಿಹಾಸಕಾರರು ಕೂಡ ಉತ್ಪ್ರೇಕ್ಷೆಗಳ ಮೂಲಕ ಟಿಪ್ಪುವನ್ನು ಖಳನಾಯಕನನ್ನಾಗಿ ಮಾಡಿದ್ದಾರೆ.


ದೇವಸ್ಥಾನಗಳನ್ನು ಒಡೆದಿಲ್ಲ, ಸಾವಿರ ಎಕರೆ ಜಮೀನು ನೀಡಿದ್ದ!
ಮಲಬಾರಿನಿಂದ ಬರುವಾಗ ಸಾವಿರಾರು ದೇವಸ್ಥಾನಗಳನ್ನು ಟಿಪ್ಪುಒಡೆದು ಹಾಕಿದ ಎಂದು ಕೆಲವರು ಹೇಳುತ್ತಾರೆ. ಗುರುವಾಯೂರು ದೇವಸ್ಥಾನದ ಕೃಷ್ಣ ವಿಗ್ರಹವನ್ನು ಬೇರೆ ಕಡೆ ಇಟ್ಟರು, 18 ವರ್ಷಗಳ ನಂತರ ಟಿಪ್ಪುನಿಧನದ ಬಳಿಕ ಮತ್ತೆ ವಾಪಸ್ ತಂದು ಮರು ಪ್ರತಿಷ್ಠಾಪನೆ ಮಾಡಲಾಯಿತು ಎಂದೆಲ್ಲಾ ಕಥೆ ಕಟ್ಟಿದ್ದಾರೆ. ಆದರೆ ಟಿಪ್ಪು870 ಎಕರೆ ತೋಟ ಸೇರಿ 1,000 ಎಕರೆ ಜಮೀನನ್ನು ದೇವಸ್ಥಾನಗಳಿಗೆ ಉಂಬಳಿ ನೀಡಿದ್ದ. ದಕ್ಷಿಣ ಮಲಬಾರಿನಲ್ಲಿ 63 ದೇವಸ್ಥಾನಗಳಿಗೆ, 3 ಮಸೀದಿಗಳಿಗೆ, ಉಂಬಳಿ, ದಾನ ನೀಡಿದ್ದ ದಾಖಲೆಗಳಿವೆ. ಆದರೆ ಇದನ್ನೆಲ್ಲಾ ಹೇಳದೆ ದೇವಸ್ಥಾನವನ್ನು ಒಡೆದು ಹಾಕಿದ ಎಂದು ಹೇಳುತ್ತಾರೆ.


1782ರ ಡಿಸೆಂಬರ್‌ನಲ್ಲಿ 2ನೇ ಮೈಸೂರು ಯುದ್ಧ ನಡೆಯುತ್ತಿತ್ತು. ಮಂಗಳೂರು ಮಲಬಾರ್ ಮತ್ತು ಆರ್ಕಾಟ್ ಎರಡೂ ದಿಕ್ಕುಗಳಲ್ಲಿ ನಡೆಯುತ್ತಿದ್ದ ಈ ಯುದ್ಧದಲ್ಲಿ ಹೈದರ್ ಅಲಿ ಕೊನೆಯುಸಿರೆಳೆಯುತ್ತಾನೆ. ಆರ್ಕಾಟ್‌ನ ನಾರಾಯಣಪುರ ಎಂಬ ಹಳ್ಳಿಯಲ್ಲಿ ಟಿಪ್ಪು ಸುಲ್ತಾನನ ತಂದೆ ಹೈದರ್‌ನ ಮರಣವಾಗುತ್ತದೆ. ಆನಂತರ ರಾಜನಾದವನೇ ಟಿಪ್ಪು ಸುಲ್ತಾನ್.

ಹೈದರ್ ಅಲಿ ಮರಣಾನಂತರ ರಾಜ್ಯದ ಅಧಿಕಾರಿಗಳಾದ ದಿವಾನ್ ಪೂರ್ಣಯ್ಯ, ಮೀರ್ ಸಾದಿಕ್ ಸೇರಿ ಪ್ರಮುಖರು ಒಮ್ಮತದಿಂದ ಹೈದರ್ ನಂತರ ಇವನೇ ಸೂಕ್ತ ಉತ್ತರಾಧಿಕಾರಿ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಹೀಗೆ ಅಧಿಕಾರ ಏರಿದ ಟಿಪ್ಪು 1782ರಿಂದ 1799ರವರೆಗೆ ರಾಜ್ಯವನ್ನು ಆಳುತ್ತಾನೆ.
ಬ್ರಿಟಿಷ್ ಆಡಳಿತದ ಆ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಬ್ರಿಟಿಷರಿಗೆ ಎದುರಾಗಿ ಯಾರೂ ಇರಲಿಲ್ಲ. ಹೈದರಾಬಾದ್ ನಿಝಾಮನಿಗೆ ಬ್ರಿಟಿಷರನ್ನು ಎದುರಿಸುವ ಧೈರ್ಯವಿರಲಿಲ್ಲ. ಹೀಗಾಗಿ ಬ್ರಿಟಿಷರು ಕೀಲಿ ತಿರುಗಿಸಿದ ಹಾಗೆ ಮಾತನಾಡುತ್ತಿದ್ದ, ನಡೆದುಕೊಳ್ಳುತ್ತಿದ್ದ. ಆರ್ಕಾಟ್ ನವಾಬ ಕೂಡ ಬ್ರಿಟಿಷರ ಆಶ್ರಯದಲ್ಲೇ ಇದ್ದ. ಮರಾಠರು ಒಮ್ಮೆ ಬ್ರಿಟಿಷರ ವಿರುದ್ಧ ನಿಂತರೆ ಮತ್ತೊಮ್ಮೆ ಅವರ ಜೊತೆ ಕೈಜೋಡಿಸುತ್ತಿದ್ದರು. ಶಕ್ತಿಯುತ ರಾಜರಿದ್ದರೂ ಕೂಡ ಬ್ರಿಟಿಷರನ್ನು ಓಡಿಸಬೇಕು ಎನ್ನುವ ಸಂಕಲ್ಪಅವರಲ್ಲಿ ಇರಲಿಲ್ಲ. ಆದರೆ ಈ ಎಲ್ಲರ ನಡುವೆ ದಕ್ಷಿಣ ಭಾರತದಲ್ಲಿ ಬ್ರಿಟಿಷರು ತಮ್ಮ ರಾಜ್ಯ ವಿಸ್ತರಿಸುವುದಕ್ಕೆ ತಡೆಯಾಗಿ ನಿಂತವನು ಟಿಪ್ಪುಸುಲ್ತಾನ್.

ಬ್ರಿಟಿಷರು ಪರಕೀಯರು, ಅವರನ್ನು ನನ್ನ ರಾಜ್ಯದಿಂದ ಓಡಿಸಬೇಕು. ಸಮುದ್ರದ ಆಚೆಯಿಂದ ಬಂದವರು ಸಮುದ್ರದ ಆಚೆಗೆ ಹೋಗಬೇಕು. ಅವರನ್ನು ಓಡಿಸಿಯೇ ಸಿದ್ಧ ಎನ್ನುವ ದೃಢ ನಿರ್ಧಾರ ಟಿಪ್ಪುವಿನಲ್ಲಿತ್ತು. ಆದರೆ ದಕ್ಷಿಣದ ರಾಜರು ಕೈಜೋಡಿಸಲಿಲ್ಲ. ಇದಕ್ಕೆ ಕಾರಣ ಟಿಪ್ಪು ಅತ್ಯಂತ ಪ್ರಬಲ ವ್ಯಕ್ತಿಯಾಗಿದ್ದರೂ ಕೂಡ ಆತನನ್ನು ಇತರ ರಾಜರು, ಹಿಂದೂ ರಾಜರು, ಮರಾಠ ರಾಜರು, ಸಿಂಧ್ಯರು, ಮಧ್ಯಪ್ರದೇಶದ ರಾಜರು ನೋಡಿದ್ದು ಒಬ್ಬ ಮುಸ್ಲಿಮನಾಗಿ. ಹಾಗಾಗಿ ಅವನಿಂದ ದೂರ ನಿಂತರು. ನಿಝಾಮ, ಆರ್ಕಾಟ್ ನವಾಬರಿಗೆ ಟಿಪ್ಪುನಮಗಿಂತ ಶಕ್ತಿಶಾಲಿ, ಪ್ರಭಾವಶಾಲಿ ಎನ್ನುವ ಭಯ ಇತ್ತು. ಹಾಗಾಗಿ ಅವರೂ ಕೂಡ ಟಿಪ್ಪುವಿನ ಜೊತೆ ನಿಲ್ಲಲಿಲ್ಲ.

ಆದರೆ ಟಿಪ್ಪುವಿನ ಜೊತೆ ಕೈ ಜೋಡಿಸದ ಇವರೆಲ್ಲಾ ಕೈಜೋಡಿಸಿದ್ದು ಬ್ರಿಟಿಷರ ಜೊತೆ. ಸಮಯಾವಕಾಶಕ್ಕಾಗಿ ಕಾಯುತ್ತಿದ್ದ ಬ್ರಿಟಿಷರು ಕುಂಟು ನೆಪ ಹೇಳಿ, ಟಿಪ್ಪುವಿನ ಬಗ್ಗೆ ಆರೋಪಗಳನ್ನು ಮಾಡಿ ದಕ್ಷಿಣದ ರಾಜರನ್ನು ಖರೀದಿಸುತ್ತಾರೆ. ಈಗ ಒಂದು ಕಡೆ ನಿಝಾಮರು, ಆರ್ಕಾಟ್ ನವಾಬರು, ಮರಾಠರು ಮತ್ತು ಬ್ರಿಟಿಷರು, ಮತ್ತೊಂದು ಕಡೆ ಒಬ್ಬನೇ ಒಬ್ಬ ಟಿಪ್ಪು.

ಮೈಸೂರು ರಾಜರು: ಟಿಪ್ಪುಮತ್ತು ಹೈದರ್
ಹೈದರ್ ಅಲಿ ಮಾಮೂಲಿ ಸೈನಿಕನಾಗಿ ಮೈಸೂರು ಅರಮನೆ ಸೇರುತ್ತಾನೆ. ಮಹಾರಾಜರ ದೌರ್ಬಲ್ಯವೋ, ದಳವಾಯಿಗಳ ಕುತಂತ್ರವೋ ಅಥವಾ ಹೈದರ್‌ನ ಅದೃಷ್ಟ ಮತ್ತು ಚಾಕಚಕ್ಯತೆಯೋ ಹೈದರ್‌ಗೆ ಅಧಿಕಾರ ಲಭಿಸುತ್ತದೆ. ಆತ ಸರ್ವಾಧಿಕಾರಿಯಾಗಿ ರಾಜ್ಯಭಾರ ನಡೆಸುತ್ತಾನೆ. ಆದರೆ ಯಾವುದೇ ಕಾರಣಕ್ಕೂ ಹೈದರ್ ತಾನೊಬ್ಬ ಸರ್ವಾಧಿಕಾರಿ ಎನ್ನುವುದನ್ನು ತೋರಿಸಿಕೊಳ್ಳುವುದಿಲ್ಲ. ಎಷ್ಟೇ ರಾಜ್ಯಗಳನ್ನು ಹೈದರ್ ಗೆದ್ದರೂ ಅದನ್ನು ಹೆಸರಿಗೆ ಮಾತ್ರ ಇರುವ ರಾಜನ ಮುಂದೆ ಒಪ್ಪಿಸುತ್ತಾನೆ. ಒಬ್ಬ ರಾಜ ಸತ್ತರೆ ಇನ್ನೊಬ್ಬ ರಾಜನಿಗೆ ಪಟ್ಟ ಕಟ್ಟಿ ಸಿಂಹಾಸನದಲ್ಲಿ ಕೂರಿಸುತ್ತಾನೆ. ಆದರೆ ಇದೇ ವಿಚಾರದಲ್ಲಿ ಟಿಪ್ಪುವಿನ ದೃಷ್ಟಿಕೋನ, ಆತ ಬೆಳೆದು ಬಂದ ಹಾದಿ ಎಲ್ಲವೂ ಸಂಪೂರ್ಣ ತದ್ವಿರುದ್ಧವಾಗಿತ್ತು. ಒಬ್ಬ ಸರ್ವಾಧಿಕಾರಿಯ ಮಗನಾಗಿ ಬೆಳೆಯುವ ಟಿಪ್ಪು ತುಂಬಾ ಓದುತ್ತಾನೆ. 13ನೇ ವರ್ಷಕ್ಕೆ ತಂದೆಯ ಜೊತೆ ರಣರಂಗಕ್ಕೆ ಇಳಿಯುವ ಟಿಪ್ಪು, 16ನೇ ವಯಸ್ಸಿನಲ್ಲಿ ಹೈದರ್‌ನ ಪ್ರತಿನಿಧಿಯಾಗಿ ಹೈದರಾಬಾದ್‌ನಿಝಾಮನ ಬಳಿ ಹೋಗಿ ಸಂಧಾನ ಮಾಡುತ್ತಾನೆ. 2,000ದಷ್ಟಿದ್ದ ಬ್ರಿಟಿಷ್ ಸೈನಿಕರ ಪಡೆಯನ್ನು 200ರಷ್ಟಿದ್ದ ಟಿಪ್ಪುವಿನ ಸೈನಿಕರ ಪಡೆ ಸೋಲಿಸುತ್ತದೆ. ನಂತರ ಆ ಸೈನಿಕ ತುಕಡಿಯನ್ನು ಬಂಧಿಸಿ ಬ್ರಿಟಿಷರ ಮೇಜರ್‌ನನ್ನು ಜೈಲಲ್ಲಿ ಇಡುತ್ತಾನೆ.

ಗೆದ್ದವನೇ ರಾಜ ಎನ್ನುವ ಮನಸ್ಥಿತಿಯ ಟಿಪ್ಪುವಿಗೆ ಆತ್ಮಾಭಿಮಾನದ ಕಿಚ್ಚು ಹೆಚ್ಚಿರುತ್ತದೆ. ರಾಜನಾದವನು ಅಂತಪುರದಲ್ಲಿ ಬಿದ್ದಿರುತ್ತಾನೆ. ರಕ್ತ ಸುರಿಸಿ ಯುದ್ಧ ಮಾಡುವ ನಾನು ಅವನನ್ನೇಕೆ ತಲೆ ಮೇಲೆ ಹೊರಬೇಕು ಎನ್ನುವ ಭಾವನೆ ಟಿಪ್ಪುವಿನದ್ದು. ಆದರೆ ರಾಜನನ್ನು ಕೊಲ್ಲುವುದಿಲ್ಲ. ನವರಾತ್ರಿಗೆ ಸಂಬಂಧಿಸಿ ಧಾರ್ಮಿಕ ಆಚರಣೆಗಳನ್ನು ಅರಮನೆಯಲ್ಲಿ ಮಾಡಲು ಯಾವುದೇ ಸಮಸ್ಯೆಗಳನ್ನು ಮಾಡುವುದಿಲ್ಲ. ಆದರೆ ರಾಜ್ಯಾಡಳಿತದಲ್ಲಿ ಬಾಯಿ ಹಾಕಬಾರದು ಎಂದು ಹೇಳುತ್ತಾನೆ. ವಿಶೇಷವೇನೆಂದರೆ ಹೈದರ್ ಇದ್ದಾಗಲೂ ರಾಜ್ಯಾಡಳಿತದಲ್ಲಿ ರಾಜರು ಮೂಗು ತೂರಿಸುತ್ತಿರಲಿಲ್ಲ. ಆದರೆ ಅದನ್ನು ಹೈದರ್ ಯಾವತ್ತೂ ನೇರವಾಗಿ ಹೇಳಿದವನಲ್ಲ. ಆದರೆ ಟಿಪ್ಪು ನೇರವಾಗಿ ರಾಜತ್ವವನ್ನೇ ನಾನು ಒಪ್ಪುವುದಿಲ್ಲ ಎನ್ನುತ್ತಾನೆ.

ಇದಕ್ಕೆ ಉದಾಹರಣೆ ಒಂದಿದೆ. 1796ರಲ್ಲಿ ಖಾಸಾ ಚಾಮರಾಜ ಒಡೆಯರ್ ನಿಧನರಾಗುತ್ತಾರೆ. ಆಗ ಮುಮ್ಮಡಿ ಕೃಷ್ಣರಾಜ ಒಡೆಯರು 2 ವರ್ಷದ ಮಗುವಾಗಿದ್ದರು. ಹೈದರ್ ಆಗಿದ್ದರೆ ಪಟ್ಟ ಕಟ್ಟುತ್ತಿದ್ದ. ಆದರೆ ಟಿಪ್ಪುಪಟ್ಟ ಕಟ್ಟುವುದಿಲ್ಲ. ಪಟ್ಟ ಕಟ್ಟಿದರೆ ರಾಜತ್ವವನ್ನು ಒಪ್ಪಿರಾಜನ ಗುಲಾಮನಾದಂತೆ ಎಂದು ಹೇಳುತ್ತಾನೆ. ಹೀಗೆ 1796ರಿಂದ 1799ರವರೆಗೆ ಟಿಪ್ಪು ನಿಧನದವರೆಗೂ ಯದುವಂಶದ ರಾಜ ಅಧಿಕಾರದಲ್ಲಿ ಇರಲಿಲ್ಲ.
 
ಬ್ರಿಟಿಷರ ಅಪಹರಣಕಾರ ಎನ್ನುವ ಒಡೆದು ಆಳುವ ತಂತ್ರ
ಟಿಪ್ಪುವನ್ನು ನೇರವಾಗಿ ಎದುರಿಸಲಾಗದ ಬ್ರಿಟಿಷರು ಕುತಂತ್ರದ ಮೊರೆ ಹೋಗುತ್ತಾರೆ. ಟಿಪ್ಪುವಿಗೆ ‘ಇಶಿರ್ಪರ್’ (ಅಪಹರಣಕಾರ) ಎನ್ನುವ ಹೆಸರನ್ನು ಕಟ್ಟುತ್ತಾರೆ. ರಾಜ್ಯಗಳನ್ನು ಅಪಹರಿಸಿಕೊಂಡು, ರಾಜತ್ವವನ್ನು ಮೂಲೆಗುಂಪು ಮಾಡಿದ ಅಪಹರಣಕಾರ ಎಂದು ದಕ್ಷಿಣ ಭಾರತದ ರಾಜರಿಗೆ ಹೇಳುತ್ತಾರೆ. ವಂಶ ಪಾರಂಪರ್ಯ ರಾಜರಾದ ಯದುವಂಶದವರಿಗೆ ರಾಜ್ಯ ವಾಪಸ್ ನೀಡಬೇಕು ಎಂದು ಹೇಳುತ್ತಾರೆ.

ಈ ಯದುವಂಶದ ರಾಜರ ಕಥೆಯೇನು ಗೊತ್ತಾ?, ಇವರೂ ಕೂಡ ಇನ್ನೊಬ್ಬನನ್ನು ಕೊಂದೇ ರಾಜ್ಯ ವಿಸ್ತರಣೆ ಮಾಡಿದ್ದು. ಪಾಳೆಗಾರ ಮಾರನಾಯಕನನ್ನು ಕೊಂದೇ ಯದುವಂಶ ಪ್ರಾರಂಭವಾಗೋದು. ರಾಜ ಒಡೆಯರ್ ಶ್ರೀರಂಗಪಟ್ಟಣದ ಮಂಡಲಾಧೀಶನನ್ನು ಕೊಂದು ಶ್ರೀರಂಗಪಟ್ಟಣದ ಮಂಡಲವನ್ನು ವಶಪಡಿಸಿಕೊಳ್ಳುತ್ತಾರೆ. ಹಾಗಾದರೆ ಇದು ರಾಜ್ಯಗಳ ಅಪಹರಣ ಅಲ್ಲವೇ?. ರಣಧೀರ ಕಂಠೀರವ, ದೊಡ್ಡ ದೇವರಾಜ ಒಡೆಯರ್, ಚಿಕ್ಕ ದೇವರಾಜ ಒಡೆಯರು ಎಷ್ಟೊಂದು ಯುದ್ಧಗಳನ್ನು ಮಾಡಿದ್ದಾರೆ. 1 ಲಕ್ಷ ಚದರ ಮೈಲಿ ರಾಜ್ಯ ವಿಸ್ತರಣೆಯಾಗುತ್ತದೆ. ಹಾಗಾದರೆ ಇವರ ವಿರುದ್ಧ ಸೋತ ರಾಜರ ಕಥೆ ಏನಾಯಿತು. ಆ ರಾಜ್ಯಗಳನ್ನು ಇವರು ಅಪಹರಿಸಲಿಲ್ಲವೇ?, ಟಿಪ್ಪು ಒಬ್ಬ ಮುಸ್ಲಿಂ ಎನ್ನುವ ಕಾರಣದ ಜೊತೆಗೆ ಬ್ರಿಟಿಷರು ಅಪಹರಣಕಾರ ಎನ್ನುವ ಶಬ್ದವನ್ನೂ ದಕ್ಷಿಣದ ರಾಜರ ತಲೆಯಲ್ಲಿ ತುಂಬುತ್ತಾರೆ.

ಇದೇ ಸಂದರ್ಭದಲ್ಲಿ ದತ್ತುಮಕ್ಕಳಿಗೆ ಹಕ್ಕಿಲ್ಲ ಎನ್ನುವ ಕಾನೂನನ್ನೂ ತರುತ್ತಾರೆ. ಹೊರಗಿನಿಂದ ಬಂದು ಇಲ್ಲಿನ ರಾಜರ ಅಧಿಕಾರ ಕಿತ್ತುಕೊಳ್ಳಲು ಇವರು ಯಾರು?, ಮಕ್ಕಳಿಲ್ಲದ ರಾಜ ದತ್ತು ಪಡೆದರೆ ಅಧಿಕಾರವಿಲ್ಲ ಎಂದು ಹೇಳಲು, ಕಾನೂನು ತರಲು ಇವರು ಯಾರು? ಎನ್ನುವುದು ಸಹಜವಾಗಿ ಏಳುವ ಪ್ರಶ್ನೆ. ಆದರೆ ಹಿಂದೂ ರಾಜರಲ್ಲಿ ಒಮ್ಮತ ಇರಲಿಲ್ಲ. ಕೇಳುವ ತಾಕತ್ತಿರಲಿಲ್ಲ. ‘‘ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವುದು ಬ್ರಿಟಿಷರ ಕಾನೂನು, ಇದನ್ನು ನೀವು ಒಪ್ಪಿಕೊಳ್ಳಬೇಕು’’ ಎಂದಾಗ ‘‘ಆಯ್ತು ಮಹಾಸ್ವಾಮಿ’’ ಎಂದು ಒಪ್ಪಿಕೊಳ್ಳುತ್ತಾರೆ. ಬ್ರಿಟಿಷರಿಗೆ ರಾಜ್ಯ ವಹಿಸುತ್ತಾರೆ. ಆದರೆ ಇಂತಹವರ ನಡುವೆ ಎದೆ ಕೊಟ್ಟು ಬ್ರಿಟಿಷರಿಗೆ ಸವಾಲೆಸೆದು ನಿಂತವನು ಟಿಪ್ಪು ಸುಲ್ತಾನ್ ಒಬ್ಬನೇ. ಬ್ರಿಟಿಷರನ್ನು ಭಾರತದಿಂದ ಹೊರಹಾಕಬೇಕು ಎಂದು ದಕ್ಷಿಣ ಭಾರತದಲ್ಲಿ ನಿಷ್ಠೆಯಿಂದ ಹೋರಾಟ ಮಾಡಿದವನು ಟಿಪ್ಪುಒಬ್ಬನೇ.

ಬ್ರಿಟಿಷ್ ಇತಿಹಾಸಕಾರರು, ಬ್ರಿಟಿಷ್ ಸೇನೆಗಳ ಜೊತೆಗೆ ಬಂದವರು ಟಿಪ್ಪುವಿನ ವಿರುದ್ಧ ಅಪಪ್ರಚಾರ ಮಾಡಿದರು. ಯಾಕೆಂದರೆ ಅವನು ಬ್ರಿಟಿಷರ ಶತ್ರು. ಹಿಂದೂ ಇತಿಹಾಸಕಾರರು ಟಿಪ್ಪು ಮುಸ್ಲಿಂ ಎನ್ನುವ ಏಕ ಮಾತ್ರ ಕಾರಣಕ್ಕಾಗಿ ಅವನು ಹಿಂದೂ ದ್ವೇಷಿ ಎಂದು ಹೇಳುತ್ತಾರೆ. ಹಿಂದೂ ಇತಿಹಾಸಕಾರರಲ್ಲಿ ಬಹುತೇಕರು ಬ್ರಾಹ್ಮಣರು. ಮುಸ್ಲಿಮರನ್ನು ದ್ವೇಷಿಸಬೇಕು ಎನ್ನುವವರು. ಅವರು ಬರೆದದ್ದೆಲ್ಲವೂ ಟಿಪ್ಪುವಿರುದ್ಧವೇ.

ಮೈಸೂರು ರಾಜರ ಜೊತೆಗಿದ್ದ ಬ್ರಿಟಿಷರು ನಂತರ ಮಾಡಿದ್ದೇನು?
1799ರಲ್ಲಿ ಟಿಪ್ಪುಮರಣಾನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್‌ಗೆ ಬ್ರಿಟಿಷರು ಪಟ್ಟ ಕಟ್ಟುತ್ತಾರೆ. ಹಳೆ ಮೈಸೂರಿನ 8 ಜಿಲ್ಲೆಗಳನ್ನೂ ನೀಡುತ್ತಾರೆ. ಆದರೆ ಕೆಲವರ್ಷಗಳಲ್ಲೇ ಅವರ ಬಣ್ಣ ಬಯಲಾಗುತ್ತದೆ. 1831ರಲ್ಲಿ ರಾಜ್ಯ ಆಳಲು ಬರುವುದಿಲ್ಲ, ನಾಲಾಯಕ್ ನೀನು ಎಂದು ಮುಮ್ಮಡಿ ಕೃಷ್ಣರಾಜ ಒಡೆಯರ್‌ರಿಂದ ರಾಜ್ಯವನ್ನು ಕಿತ್ತುಕೊಳ್ಳುತ್ತಾರೆ. ಆನಂತರ ಸುಮಾರು 50 ವರ್ಷಗಳ ಕಾಲ ಮೈಸೂರು ರಾಜ್ಯವನ್ನು ಬ್ರಿಟಿಷರೇ ಆಳುತ್ತಾರೆ.
  
ಶ್ರೀರಂಗಪಟ್ಟಣದ ಮಸೀದಿ ಮತ್ತು ರಾಜತಾಂತ್ರಿಕ ಕಾರಣ
ಟಿಪ್ಪುಒಂದು ದೇವಸ್ಥಾನವನ್ನು ಮಾರ್ಪಡಿಸಿದ್ದ. ಶ್ರೀರಂಗಪಟ್ಟಣದಲ್ಲಿ ಇರುವ ಮಸೀದಿ ಮೊದಲಿಗೆ ಆಂಜನೇಯ ದೇವಸ್ಥಾನ ಆಗಿತ್ತು. ಅದನ್ನು ಮಸೀದಿಯಾಗಿ ಪರಿವರ್ತಿಸಿದ ಟಿಪ್ಪು, ದೇವಸ್ಥಾನದಲ್ಲಿದ್ದ ಆಂಜನೇಯ ಪ್ರತಿಮೆಯನ್ನು ತೆಗೆದು ಬೇರೆ ಕಡೆ ಪ್ರತಿಷ್ಠಾಪನೆ ಮಾಡಿ ಮತ್ತೊಂದು ದೇವಸ್ಥಾನ ನಿರ್ಮಿಸುತ್ತಾನೆ. ಮಸೀದಿಯಲ್ಲಿರುವ ಹಳೆಯ ಕಂಬಗಳೆಲ್ಲಾ ಹಾಗೆಯೇ ಇದೆ. ಅದನ್ನು ತೋರಿಸಿ ಈಗ ಟಿಪ್ಪುದ್ವೇಷಿಗಳು ದೇವಸ್ಥಾನ ಒಡೆದು ಹಾಕಿ ಮಸೀದಿ ಕಟ್ಟಿದ ಎಂದು ಸುಳ್ಳು ಹೇಳುತ್ತಾರೆ. ಆದರೆ ಇದರ ಹಿಂದಿನ ವಾಸ್ತವಾಂಶ ಬೇರೆಯೇ ಇದೆ.

ಅಂದಿನ ಕಾಲದಲ್ಲಿ ಒಬ್ಬ ರಾಜನಿಗೆ ರಾಜ್ಯದ ಸುವ್ಯವಸ್ಥೆ ಕಾಪಾಡಲು, ಚಲನವಲನಗಳನ್ನು ಗಮನಿಸಲು ಕಾವಲು ಗೋಪುರಗಳು ಅಗತ್ಯವಾಗಿತ್ತು. ಇಂದಿನ ಕಾಲದಲ್ಲಿ ಇದಕ್ಕಾಗಿ ಉಪಗ್ರಹಗಳನ್ನು ಬಳಸಲಾಗುತ್ತದೆ. ಉಪಗ್ರಹಗಳ ಮೂಲಕ ವೈರಿ ಸೇನೆ ಎಲ್ಲಿದೆ ಎನ್ನುವುದನ್ನು ನೋಡಲಾಗುತ್ತದೆ. ರಾಜರ ಕಾಲದಲ್ಲಿ ಕಾವಲು ಗೋಪುರಗಳನ್ನು ನಿರ್ಮಿಸಿದರೂ ಅದು ಕಾವಲುಗೋಪುರಗಳು ಎಂದು ಗೊತ್ತಾಗುವಂತಿರಲಿಲ್ಲ. ಗೊತ್ತಾದರೆ ಜನರು ಅವುಗಳನ್ನು ಒಡೆದು ಹಾಕುವ ಸಾಧ್ಯತೆ ಇತ್ತು. ಆಂಜನೇಯ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸುವ ಟಿಪ್ಪುಮಸೀದಿಗೆ 2 ಗೋಪುರಗಳನ್ನು (ಮಿನಾರ) ನಿರ್ಮಿಸುತ್ತಾನೆ. ಒಂದು ಗೋಪುರಕ್ಕೆ 200 ಮೆಟ್ಟಿಲುಗಳಿವೆ ಒಳಗೆ. ಸುಮಾರು 100 ಅಡಿ ಎತ್ತರದ ಈ ಗೋಪುರ ಹತ್ತಿ ನೋಡಿದರೆ ಸುಮಾರು 50 ಮೈಲಿ ದೂರದವರೆಗೆ ನೋಡಬಹುದು. ಅಲ್ಲಿಂದಲೇ ಮಳವಳ್ಳಿ, ಕನ್ನಂಬಾಡಿ ಕಟ್ಟೆ ಕಾಣುತ್ತೆ. ಕಾವಲು ಗೋಪುರಗಳು ಎಂದು ಗೊತ್ತಾಗಬಾರದು, ಆದರೆ ಕಾವಲು ಗೋಪುರಗಳು ಇರಬೇಕು ಎನ್ನುವ ತಂತ್ರದಿಂದ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಿ, ಗೋಪುರಗಳನ್ನು ನಿರ್ಮಿಸಲಾಗುತ್ತದೆ.

ಆ ಕಾಲದಲ್ಲಿ ಮಸೀದಿ ನಿರ್ಮಾಣವಾದಾಗ ಯಾರೂ ವಿರೋಧಿಸಿರಲಿಲ್ಲ. ಏಕೆಂದರೆ ಅವನು ದೇವಸ್ಥಾನವನ್ನು ನಿರ್ಮಾಣ ಮಾಡಿದ್ದ ಮತ್ತು ಪೂಜೆಯೂ ಆರಂಭವಾಗಿತ್ತು. ಶ್ರೀರಂಗಪಟ್ಟಣದಲ್ಲಿ ಆ ಒಂದು ದೇವಸ್ಥಾನವನ್ನು ಮಾರ್ಪಡಿಸಿದ್ದನೇ ಹೊರತು ಒಡೆದಿರಲಿಲ್ಲ. ಬೇರೆ ಯಾವುದೇ ದೇವಸ್ಥಾನವನ್ನು ಟಿಪ್ಪುಒಡೆದಿಲ್ಲ, ಒಡೆಸಿಲ್ಲ.
 
ಮಲಬಾರಿನಲ್ಲಿ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಗಳು
ಮಲಬಾರಿನಲ್ಲಿ ಹಲವು ದೇವಸ್ಥಾನಗಳಿಗೆ ಉಂಬಳಿ ಕೊಟ್ಟ ಟಿಪ್ಪು ಅಲ್ಲಿ ಮಾಡಿದ್ದ ಸಾಮಾಜಿಕ ಸುಧಾರಣೆಗಳು, ಕ್ರಾಂತಿಕಾರಿ ಕೆಲಸಗಳನ್ನು ಎಷ್ಟು ಹೇಳಿದರೂ ಸಾಲದು. ಟಿಪ್ಪುಮಲಬಾರಿಗೆ ಹೋದಾಗ ನಂಬೂದಿರಿಗಳು (ಬ್ರಾಹ್ಮಣರು) ಬಿಟ್ಟರೆ ಪ್ರತಿಯೊಬ್ಬ ವ್ಯಕ್ತಿಯೂ ಸೊಂಟದಿಂದ ಮಂಡಿಯವರೆಗೆ ಮಾತ್ರ ತುಂಡು ಬಟ್ಟೆಯನ್ನು ಧರಿಸಲು ಅವಕಾಶವಿತ್ತು. ಎಲ್ಲಾ ಹೆಣ್ಣುಮಕ್ಕಳು ಅರೆ ನಗ್ನರಾಗಿರಬೇಕಾಗಿತ್ತು. ನೂರಾರು ವರ್ಷಗಳಿಂದ ದೇವರೇ ಹುಟ್ಟುಹಾಕಿದ ಸಂಪ್ರದಾಯ ಎಂದು ನಂಬೂದಿರಿಗಳು ಹೇಳುತ್ತಿದ್ದರು. ಆದರೆ ನೀವು ಮಾತ್ರವಲ್ಲ, ಬೇರೆಯವರೂ ಮನುಷ್ಯರು ಎಂದು ಹೇಳಿ ಟಿಪ್ಪು ಆ ಸಂಪ್ರದಾಯಕ್ಕೆ ಕೊನೆ ಹಾಡುತ್ತಾನೆ.

ಕೊರಳಿನಿಂದ ಕಾಲಿನವರೆಗೆ ಪ್ರತಿಯೊಬ್ಬರೂ ಬಟ್ಟೆ ಧರಿಸಬೇಕು ಎಂದು ಹೇಳುವ ಟಿಪ್ಪು ಹೆಣ್ಣು ಮಕ್ಕಳಿಗೆ ಸೀರೆ, ರವಿಕೆ ಧರಿಸುವ ಹಕ್ಕು ನೀಡುತ್ತಾನೆ. ನಂಬೂದಿರಿಗಳು ಕೂಡಲೇ ಟಿಪ್ಪುಒಬ್ಬ ಮುಸ್ಲಿಂ, ನಮ್ಮ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾನೆ ಎನ್ನುತ್ತಾರೆ. ಆದರೆ ಟಿಪ್ಪು, ‘‘ನಿಮ್ಮ ಧರ್ಮದ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ನಿಮ್ಮ ಧರ್ಮಪಾಲನೆಯನ್ನು ಮನೆಯೊಳಗೆ ಮಾಡಿ, ಹೊಸಲು ದಾಟಿ ನನ್ನ ಸರಕಾರದ ಕಾನೂನು ಪಾಲನೆ ಮಾಡಬೇಕು’’ ಎಂದು ಹೇಳುತ್ತಾನೆ. ನೂರಾರು ವರ್ಷಗಳ ಸಂಪ್ರದಾಯ ಎನ್ನುವವರು ಅವರ ಮನೆಯವರನ್ನು ಹಾಗೆ ಹೊರಗೆ ಕಳುಹಿಸುತ್ತಾರೆಯೇ?.
 ಮೊಲಕ್ಕರಂ: ಟಿಪ್ಪುವಿನ ಸಾಮಾಜಿಕ ಸುಧಾರಣೆಗಳಲ್ಲಿ ಮತ್ತೊಂದು ಪ್ರಮುಖ ಸುಧಾರಣೆ ಮೊಲಕ್ಕರಂ ತೆರಿಗೆ ಪದ್ಧತಿಗೆ ಅಂತ್ಯ ಹಾಡಿದ್ದು. ಮಲಬಾರಿನಲ್ಲಿ ಹೆಣ್ಣುಮಗಳು ಋತುಮತಿಯಾದರೆ ತೆರಿಗೆ ಕಟ್ಟಬೇಕು ಎಂಬ ನಿಯಮವಿರುತ್ತದೆ. ಮೊಲಕ್ಕರಂ ಎಂದರೆ ಸ್ತನಕ್ಕೆ ತೆರಿಗೆ ಎಂದರ್ಥ. ಬಿದಿರಿನ ಗಿಣ್ಣು ಕತ್ತರಿಸಿ ಟೊಳ್ಳು ಜಾಗದ ಮೂಲಕ ಸ್ತನದ ಗಾತ್ರವನ್ನು ಅಳೆಯಲಾಗುತ್ತಿತ್ತು ಮತ್ತು ಗಾತ್ರಕ್ಕನುಗುಣವಾಗಿ ತೆರಿಗೆಯನ್ನು ವಿಧಿಸುವಂತಹ ನೀಚ ಪದ್ಧತಿ ಚಾಲ್ತಿಯಲ್ಲಿತ್ತು. ಈ ಪದ್ಧತಿಗೆ ಕೊನೆ ಹಾಡಿದವನು ಟಿಪ್ಪುಸುಲ್ತಾನ್.

ಇಲ್ಲಿದ್ದ ಇನ್ನೊಂದು ಅಮಾನವೀಯ ಪದ್ಧತಿಯನ್ನೂ ಟಿಪ್ಪುನಿಲ್ಲಿಸುತ್ತಾನೆ. ಬೇರೆ ಜಾತಿಯವರ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆದರೆ ನಂಬೂದಿರಿ ಮುಖಂಡನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎನ್ನುವ ನಿಯಮವಿರುತ್ತದೆ. ಕಾರ್ಯಕ್ರಮದಲ್ಲಿ ಆತನಿಗೆ ಸನ್ಮಾನ ಮಾಡುವುದು ಮಾತ್ರವಲ್ಲದೆ, ಮದುವೆಯ ಮೊದಲ ರಾತ್ರಿ ನವ ವಧು ನಂಬೂದಿರಿ ಮುಖಂಡನ ಜೊತೆ ಕಳೆಯಬೇಕಾಗಿತ್ತು. ಇಂತಹ ನೀಚ ಆಚರಣೆಯನ್ನು ಟಿಪ್ಪುನಿಲ್ಲಿಸಿದ.
 
ಕಮ್ಯುನಿಸಂ ಫಿಲಾಸಫಿಯ ಕೃಷಿ ನೀತಿ
ಕೃಷಿಯ ವಿಚಾರಕ್ಕೆ ಬಂದರೆ ಟಿಪ್ಪುವಿನದ್ದು ಕಮ್ಯುನಿಸಂ ಫಿಲಾಸಫಿಯ ಕೃಷಿ ನೀತಿ. ಇಡೀ ಜಮೀನು ಸರಕಾರದ್ದು, ಖಾಸಗಿ ಆಸ್ತಿ ಇಲ್ಲವೇ ಇಲ್ಲ. ಉಳುಮೆ ಮಾಡಲು ಬಯಸಿದವನಿಗೆ ಸರಕಾರದ ವತಿಯಿಂದ ಉಚಿತವಾಗಿ ಭೂಮಿ ನೀಡಲಾಗುತ್ತಿತ್ತು. 3 ರೂ., 3.5 ರೂ., 4 ರೂ. ಸಾಲ. ನೀಡಲಾಗುತ್ತಿತ್ತು. ಬೆಳೆ ಬೆಳೆದ ಬಳಿಕ ಸರಕಾರಕ್ಕೆ ನೀಡಬೇಕಾದದ್ದು ಹಣವನ್ನಲ್ಲ, ಬದಲಿಗೆ ನಿರ್ದಿಷ್ಟ ಪ್ರಮಾಣದ ಬೆಳೆಯನ್ನು. ಬೆಳೆದವನಿಗೆ ನಿರ್ದಿಷ್ಟ ಪಾಲು, ಸರಕಾರಕ್ಕೆ ನಿರ್ದಿಷ್ಟ ಪಾಲು ಎನ್ನುವ ಸರಾಸರಿ ಲೆಕ್ಕಾಚಾರ ಇತ್ತು. ಬಂಜರು ಭೂಮಿಯಲ್ಲಿ ಬಿತ್ತರೆ ಸರಕಾರಕ್ಕೆ ನೀಡಬೇಕಾದ ಪಾಲಿನಲ್ಲಿ ಕಡಿತಗೊಳಿಸಲಾಗುತ್ತಿತ್ತು.
ನೀನು ಉಳುವವರೆಗೆ ಜಮೀನು ನಿನ್ನದೇ, ಉಳುಮೆ ನಿಲ್ಲಿಸಿದ ತಕ್ಷಣದಿಂದ ಜಮೀನು ಸರಕಾರದ್ದು ಎನ್ನುವ ಸಮಾಜವಾದಿ ಸಿದ್ಧಾಂತದ ಕಮ್ಯುನಿಸಂ ತತ್ವ ಇದ್ದಂತಹ ಕಾನೂನದು.
 
ಟಿಪ್ಪುತಂತ್ರಜ್ಞಾನ ಮೆಚ್ಚಿದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ನಾಸಾ
ಯುದ್ಧದ ಸಂದರ್ಭ ರಾಕೆಟ್ ಬಳಸಲಾಗುತ್ತಿತ್ತು ಎನ್ನುವ ವಿಚಾರಕ್ಕೆ ಬರುವುದಾದರೆ ರಾಕೆಟ್ ಬಳಕೆ ಹೈದರ್ ಕಾಲದಲ್ಲೇ ಪ್ರಾರಂಭವಾಗಿತ್ತು. ಈ ರಾಕೆಟ್‌ಗಳು 200ರಿಂದ 300 ಅಡಿ ಹಾರುತ್ತಿತ್ತು. ಯುದ್ಧದ ಸಂದರ್ಭ ಬಿದಿರಿಗೆ ಕಟ್ಟಿ ಈ ರಾಕೆಟ್‌ಗಳನ್ನು ಹಾರಿ ಬಿಡಲಾಗುತ್ತಿತ್ತು. ಹೈದರ್‌ನಿಂದ ಆರಂಭವಾದ ಈ ತಂತ್ರಜ್ಞಾನವನ್ನು ಟಿಪ್ಪುನಂತರ ಅಭಿವೃದ್ಧಿಪಡಿಸುತ್ತಾನೆ. ಅದಕ್ಕಾಗಿ ಫ್ರೆಂಚರ ಸಹಾಯ ಪಡೆಯುತ್ತಾನೆ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರಪತಿಯಾದರು ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರು ಭಾರತದ ಉನ್ನತ ರಾಕೆಟ್ ತಂತ್ರಜ್ಞಾನಿ. ಅಬ್ದುಲ್ ಕಲಾಂ ಅವರು ಅಮೆರಿಕದ ನಾಸಾಕ್ಕೆ ಹೋದಾಗ ನಾಸಾದ ಗೋಡೆಯ ಮೇಲೆ ಚಿತ್ರವೊಂದನ್ನು ನೋಡುತ್ತಾರೆ. ಮೊದಲ ಸಲ ನೋಡಿದಾಗ ಯುದ್ಧ ನಡೆಯುತ್ತಿರುವ, ಹಿಂಭಾಗದಲ್ಲಿ ರಾಕೆಟ್ ಹಾರುತ್ತಿರುವ ಸಾಮಾನ್ಯ ಚಿತ್ರ ಎಂದು ಭಾವಿಸುತ್ತಾರೆ. ಆನಂತರ ಅಲ್ಲಿಂದ ತೆರಳುತ್ತಾರೆ. ಮತ್ತೆ ಅವರು ಆ ಚಿತ್ರವನ್ನು ಗಮನಿಸಿದಾಗ ಚಿತ್ರದಲ್ಲಿರುವ ಜನರು ಸ್ವಲ್ಪ ಕಪ್ಪುಬಣ್ಣದವರು ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಈ ಬಗ್ಗೆ ಕುತೂಹಲ ಮೂಡಿ ಕೂಲಂಕಷವಾಗಿ ಅಧ್ಯಯನ ನಡೆಸಿದಾಗ ಟಿಪ್ಪುರಣರಂಗದಲ್ಲಿ ಯುದ್ಧ ಮಾಡುತ್ತಿದ್ದಂತಹ ಚಿತ್ರ ಅದು ಎನ್ನುವುದು ಅರಿವಾಗುತ್ತದೆ. ಟಿಪ್ಪು ರಾಕೆಟ್ ಹಾರಿಸುತ್ತಿರುವ ಚಿತ್ರ ಅದಾಗಿತ್ತು ಎನ್ನುವುದು ವಿಶೇಷ.

ಇದೇ ವಿಚಾರದ ಬಗ್ಗೆ ಅಬ್ದುಲ್ ಕಲಾಂ, ‘‘ಟಿಪ್ಪುಹುಟ್ಟಿದ, ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದ ರಾಜ್ಯದವರೇ ಅವನನ್ನು ಮರೆತಿದ್ದಾರೆ. ಆದರೆ ವಿದೇಶದ ಜನ ನಾಸಾದಲ್ಲಿ ಅವನ ಫೋಟೊ ಹಾಕಿದ್ದಾರೆ’’ ಎಂದು ಬರೆಯುತ್ತಾರೆ. ‘‘ಟಿಪ್ಪುಶುರು ಮಾಡಿದ ರಾಕೆಟ್ ತಂತ್ರಜ್ಞಾನಕ್ಕೆ ಪಂಡಿತ್‌ಜವಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಚಾಲನೆ ಸಿಕ್ಕಿ ಅದು ಮುಂದುವರಿದಿತ್ತು’’ ಎಂದೂ ಬರೆಯುತ್ತಾರೆ.

ಆದರೆ ಸಂಘಪರಿವಾರದ ನಿಯಂತ್ರಣದಲ್ಲಿರುವ ಬಿಜೆಪಿ ಸರಕಾರಕ್ಕೆ ಟಿಪ್ಪು ಮುಸ್ಲಿಂ ಎನ್ನುವ ಕಾರಣಕ್ಕಾಗಿ ದೇಶದ್ರೋಹಿ, ನೆಹರೂ ಕಾಂಗ್ರೆಸ್ ಎನ್ನುವ ಕಾರಣಕ್ಕಾಗಿ ದೇಶದ್ರೋಹಿ. ಬಿಜೆಪಿ ಸರಕಾರವೇ ರಾಷ್ಟ್ರಪತಿ ಮಾಡಿದ ಅಬ್ದುಲ್ ಕಲಾಂ ಅವರು ಬರೆದದ್ದನ್ನೇ ಬಿಜೆಪಿಯವರು ಓದುವುದಿಲ್ಲ. ಓದಿದರೂ ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲ. ಅರ್ಥ ಮಾಡಿದರೂ ಬಹಿರಂಗವಾಗಿ ಹೇಳಲು ಸಾಧ್ಯವಾಗುವುದಿಲ್ಲ.
ಸಂಘಪರಿವಾರದ ಸರಕಾರ ಇರುವವರೆಗೆ ಟಿಪ್ಪುಬಗ್ಗೆ ಇತಿಹಾಸದ ನೈಜತೆಯನ್ನು ಹೊರತರಲು ಬಿಡುವುದಿಲ್ಲ. ಕೊನೆಯದಾಗಿ ಟಿಪ್ಪುಒಂದು ವೇಳೆ ಹಿಂದೂವಾಗಿ ಹುಟ್ಟಿದ್ದರೆ, ಸಾವರ್ಕರ್‌ಗೆ ಭಾರತ ರತ್ನ ಕೊಡಬೇಕು ಎಂದಿದ್ದ ಸಂಘಪರಿವಾರದ ಜನ ಟಿಪ್ಪುವಿಗೂ ಭಾರತ ರತ್ನ ಕೊಡಿ ಎಂದು ಹೇಳುತ್ತಿದ್ದರು. ಆದರೆ ಟಿಪ್ಪುಮುಸ್ಲಿಮನಾಗಿ ಹುಟ್ಟಿ ತಪ್ಪುಮಾಡಿಬಿಟ್ಟ, ಅದೇ ದುರಂತ!

ಪ್ರೊ. ನಂಜರಾಜೇ ಅರಸ್, ಇತಿಹಾಸ ತಜ್ಞ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top