--

ಇಂದು ಕುವೆಂಪು ಜನ್ಮ ದಿನ

ಕುವೆಂಪು ಕೃತಿಗಳ ದೋಣಿಯಲ್ಲಿ...

ನಟರಾಜ್ ಹುಳಿಯಾರ್

ಕುವೆಂಪು ಯಾನವನ್ನು ನಮ್ಮ ಕಾಲದ ಹೊಸ ಲೇಖಕ, ಲೇಖಕಿಯರು ಕೂಡ ಅರ್ಥಪೂರ್ಣವಾಗಿ ಮುನ್ನಡೆಸಿದಾಗ ಮಾತ್ರ ಕುವೆಂಪು ಮೂಲಕ ಕನ್ನಡದಲ್ಲಿ ಹಬ್ಬಿರುವ ಆಧುನಿಕ ವೈಚಾರಿಕತೆ, ಕಲಾಪ್ರಜ್ಞೆ, ಬರವಣಿಗೆಯ ಶಿಸ್ತು, ಸೌಂದರ್ಯ ತತ್ವಗಳು ಹೊಸ ಹೊಸ ಆಯಾಮಗಳನ್ನು ಪಡೆಯಬಲ್ಲವು. ಅಷ್ಟೇ ಮುಖ್ಯವಾಗಿ, ಏಕಾಕಿತನ, ಖಾಲಿತನಗಳನ್ನು ಅನುಭವಿಸುವ ಯಾವುದೇ ಸೂಕ್ಷ್ಮ ವ್ಯಕ್ತಿಗಳಿಗೆ ಕುವೆಂಪು ಸಾಹಿತ್ಯ ಆತ್ಮೀಯ ಸಂಗಾತಿಯಾಗಬಲ್ಲದು; ಕುವೆಂಪು ಸಮಗ್ರ ಸಾಹಿತ್ಯದೊಡನೆ ಕನ್ನಡದ ಜಾಣ ಜಾಣೆಯರು ತಮ್ಮ ಜೀವಮಾನವಿಡೀ ಅರ್ಥಪೂರ್ಣವಾಗಿ ಬದುಕಬಹುದು ಎಂಬುದು ನನ್ನ ಪ್ರಾಮಾಣಿಕ ನಂಬಿಕೆ.

1. ಕುವೆಂಪು: ನವಪದ ನಿರ್ಮಾಣ; ನವ ತತ್ವಗಳ ವಿಕಾಸ

ಕೀರಂ ನಾಗರಾಜ್ ಒಂದು ದಿನ ಕುವೆಂಪು ಕಾವ್ಯದಲ್ಲಿ ಕಾಣುವ ನವಪದ ನಿರ್ಮಾಣ ಪ್ರತಿಭೆಯ ಬಗ್ಗೆ ಮೈದುಂಬಿ ಮಾತಾಡತೊಡಗಿದರು: ‘‘ಉದಾಹರಣೆಗೆ, ‘ಪಕ್ಷಿ’ ಅಂತ ಒಂದು ಪದ ಇರುತ್ತೆ, ‘ಕಾಶಿ’ ಅಂತ ಇನ್ನೊಂದು ಪದ ಇರುತ್ತೆ. ಕುವೆಂಪು ಕಲ್ಪನಾವಿಲಾಸ ಈ ಎರಡನ್ನೂ ಸೇರಿಸಿ ‘ಪಕ್ಷಿಕಾಶಿ’ ಅಂತ ನವಪದ ಮಾಡಿಬಿಡುತ್ತೆ! ಪ್ರೇಮ ಎಂಬ ಪದ, ಕಾಶ್ಮೀರ ಎಂಬ ಪದ ಎರಡನ್ನೂ ಸೇರಿಸಿ ಕುವೆಂಪು ‘ಪ್ರೇಮಕಾಶ್ಮೀರ’ ಅನ್ನೋ ನವಪದ ಮಾಡಿಬಿಡ್ತಾರೆ ಇವು ಕನ್ನಡದ ಹೊಸ ನುಡಿಗಟ್ಟುಗಳಾಗುತ್ತವೆ, ನವರೂಪಕಗಳಾಗುತ್ತವೆ...’’

 ಕನ್ನಡದ ಶ್ರೇಷ್ಠ ವಿಮರ್ಶಕರಲ್ಲೊಬ್ಬರಾದ ಕೀರಂ ಕಾಣಿಸಿದ ಕುವೆಂಪುವಿನ ನವಪದನಿರ್ಮಾಣ ಸಾಧ್ಯತೆಗಳನ್ನು ನೆನೆಯುತ್ತಾ ಮುಂದೊಮ್ಮೆ ಕುವೆಂಪು ಸಾಹಿತ್ಯವನ್ನು ಮತ್ತೊಂದು ದಿಕ್ಕಿನಿಂದ ನೋಡತೊಡಗಿದೆ. ಆಗ ನವಪದ ನಿರ್ಮಾಣಗಳ ಹಿಂದಿರುವ ಕುವೆಂಪುವಿನ ನವ ತಾತ್ವಿಕತೆ ಹೊಳೆಯತೊಡಗಿತು. ‘ನೇಗಿಲಯೋಗಿ’ ಪದ್ಯದಲ್ಲಿ ಕುವೆಂಪು ‘ಯೋಗಿ’ ಎಂಬ ಪದಕ್ಕಿದ್ದ ‘ಆರಾಮಜೀವಿ’ಯ ಸಿದ್ಧ ಅರ್ಥವನ್ನು ಒಡೆದು, ಶ್ರಮಜೀವಿ ‘ನೇಗಿಲಯೋಗಿ’ಯನ್ನು ಮುನ್ನೆಲೆಗೆ ತಂದಿದ್ದಾರೆ; ‘ತಪಸ್ವಿ’ ಎಂಬ ಪದದ ಹಳೆಯ ಬ್ರಾಹ್ಮಣೀಯ ಅರ್ಥ ಒಡೆದು ‘ಶೂದ್ರ ತಪಸ್ವಿ’ ಎಂಬ ಹೊಸ ವ್ಯಕ್ತಿತ್ವವನ್ನು ಸೃಷ್ಟಿಸಿದ್ದಾರೆ ಎಂಬುದು ಹೊಳೆಯತೊಡಗಿತು! ಕುವೆಂಪುವಿನ ನವಪದ ಪ್ರಯೋಗಗಳ ಜೊತೆಗೆ ಅವರ ಹೊಸ ಸೈದ್ಧಾಂತಿಕ ಅರ್ಥಗಳನ್ನೂ ಗ್ರಹಿಸಿದರೆ ಕುವೆಂಪು ಕನ್ನಡದ ವಿಶಿಷ್ಟ ಫಿಲಾಸರ್ ಕೂಡ ಎಂಬುದು ಗೊತ್ತಾಗುತ್ತದೆ.

ಈಚೆಗೆ ಕನ್ನಡ ವಿಶ್ವವಿದ್ಯಾನಿಲಯ ಹೊರತಂದಿರುವ ಕುವೆಂಪು ಸಮಗ್ರ ಸಾಹಿತ್ಯದ 12 ಸಂಪುಟಗಳನ್ನು ಒಟ್ಟಿಗೇ ನೋಡುತ್ತಾ ಕೀರಂ ನಾಗರಾಜರನ್ನು ನೆನೆಯಲು ಕಾರಣವಿದೆ. ಈ ಸಂಪುಟಗಳನ್ನು ಹೀಗೆ ಒಟ್ಟಿಗೆ ತರಲು ಕಳೆದ ಇಪ್ಪತ್ತು ವರ್ಷಗಳಿಂದ ದುಡಿದವರು ಕೀರಂ ನಾಗರಾಜರ ಪ್ರಿಯ ಶಿಷ್ಯ ಡಾ.ಕೆ.ಸಿ. ಶಿವಾರೆಡ್ಡಿ. ಪೂರ್ಣಚಂದ್ರ ತೇಜಸ್ವಿಯವರು ರೂಪಿಸಿದ ವಿನ್ಯಾಸ ಹಾಗೂ ರಕ್ಷಾಪುಟಗಳ ಐಡಿಯಾಗಳ ಸಮೇತ ಈ ಸಂಪುಟಗಳು ನಮ್ಮೆದುರಿಗಿವೆ. ನಾಡಿನೆಲ್ಲೆಡೆ ಕುವೆಂಪು, ಬೇಂದ್ರೆ ಮುಂತಾಗಿ ಎಲ್ಲ ದೊಡ್ಡ ಲೇಖಕರ ಗುಂಗನ್ನು ಹಬ್ಬಿಸುತ್ತಿದ್ದ ಕೀರಂ, ಶಿವಾರೆಡ್ಡಿಯವರಿಗೂ ಕುವೆಂಪು ಗುಂಗು ಹಿಡಿಸಿದ್ದರೆ ಅಚ್ಚರಿಯಲ್ಲ. ಹಾಗೆ ನೋಡಿದರೆ, ಕುವೆಂಪುವಿನೆಡೆಗೆ ಮತ್ತೆ ನನ್ನನ್ನು ಸೆಳೆದವರೂ ಈ ಗುರು-ಶಿಷ್ಯರೇ!

2. ಭಾವಗೀತೆಯ ಕೇಂದ್ರದಿಂದ ಸಕಲ ದಿಕ್ಕುಗಳ ಕಡೆಗೆ

ಕುವೆಂಪು ಸಮಗ್ರ ಕಾವ್ಯ ಸಂಪುಟಗಳನ್ನು (1,2,3) ಇವತ್ತು ನೋಡುತ್ತಿದ್ದರೆ ಭಾವಗೀತೆಯ ಥರಥರದ ತೀವ್ರ ಧಾಟಿಗಳು ಕಾಣತೊಡಗುತ್ತವೆ: ‘ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ’ ಎಂಬ ರಮ್ಯತೆ; ‘ಬಡಬಗ್ಗರ ಜಠರಾಗ್ನಿಯು ಎದ್ದು ಗುಡಿಸಲುಗಳಿಗೇ ಬೆಂಕಿಯು ಬಿದ್ದುಬಡವರ ಬೆಂಕಿಯ ನಾಲಗೆ ಚಾಚಿ ಶ್ರೀಮಂತರನಪ್ಪಿತು ನಾಚಿ’ ಎಂಬ ಸಮತಾವಾದಿಯ ಸಿಟ್ಟು; ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ’ ಎಂಬ ಸ್ವಾತಂತ್ರ್ಯ ಹೋರಾಟದ ಸ್ಪಿರಿಟ್, ‘ಕರಿಸಿದ್ಧ’ದ ಶೋಕ ಹೀಗೆ ವಿಭಿನ್ನ ದನಿಗಳಿಗೆ ಈ ಭಾವಗೀತೆಗಳು ಬಾಯಾಗಿವೆ. ಮುಂದೆ ನವ್ಯ ಕಾಲದಲ್ಲಿ ಪರಿಚಿತವಾದ ಗದ್ಯ ಲಯವನ್ನೂ ಕುವೆಂಪು ಆಗ ಪದ್ಯಗಳಲ್ಲಿ ಪ್ರಯೋಗಿಸಿದ್ದರು: ‘ಕರಿಯ ತಲೆ, ಗಾಜುಗಣ್ಣು; ಬಾಯಲ್ಲಿ ಹೊಗೆ, ಮೂಗಿನಲ್ಲಿ ಕಿಡಿ, ರೈಲಿನೆಂಜಿಣ್ಣು! ಹರಿಯುತಿದೆ ಗಡಗಡನೆ ಸದ್ದು ಮಾಡಿ ದೊಡ್ಡದೊಂದೊನಕೆ ಹುಳು! ಹೊಟ್ಟೆಯೆಲ್ಲಾ ಗಾಡಿ!’ ಇವೆಲ್ಲದರ ಜೊತೆಗೆ, ಸಾನೆಟ್ ಚೌಕಟ್ಟು, ಕಿಂದರಿ ಜೋಗಿಯ ಶಿಶು ಲಯ, ಪ್ರಾಸ, ನಾಟಕಗಳ ಕಾವ್ಯಮಯತೆ ಎಲ್ಲವೂ ಮುಂದೆ ಬರಲಿದ್ದ ಅವರ ಮಹಾಕಾವ್ಯಕ್ಕೆ ಸಿದ್ಧತೆಗಳಂತಿದ್ದವು. ಕಾಡಿನ ಸದ್ದುಗಳಿಗೆ ಕಿವಿಗೊಟ್ಟು ಸಹಜ ಕವಿಯಾದ ಕುವೆಂಪು, ಶೇಕ್‌ಸ್ಪಿಯರ್ ನಾಟಕ, ವರ್ಡ್ಸ್‌ವರ್ತ್, ಶೆಲ್ಲಿಯರ ಕಾವ್ಯ; ರಾಘವಾಂಕ, ಹರಿಹರ, ಜನ್ನ ಎಲ್ಲರಿಂದಲೂ ಕಲಿಯುತ್ತಾ ಬರೆಯುತ್ತಿದ್ದರು. ಇದೆಲ್ಲದರ ನಡುವೆ ಮಹಾಕಾವ್ಯ ಬರವಣಿಗೆ ಕುವೆಂಪುವಿನ ಕನಸಿನಲ್ಲೂ ಕಾಡತೊಡಗಿತ್ತು: ‘ನಾನೊಂದು ಬೃಹತ್ ಗಾತ್ರದ ಎಪಿಕ್ ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ. ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ!’ ಕನಸಿನಲ್ಲೂ ಕವಿ ಎಂದಿನಂತೆ ತನ್ನ ಕೃತಿಗೆ ತಾನೇ ಮಣಿಯುತ್ತಿರುವಾಗ... ಕನಸೊಡೆಯುತ್ತದೆ!

 ಮಹಾಕಾವ್ಯದ ಕನಸು ತಕ್ಷಣಕ್ಕೆ ಕೈಗೂಡದೆ ಕಾವ್ಯವನ್ನೇ ಕೇಂದ್ರ ಸಂವೇದನೆಯಾಗಿಸಿಕೊಂಡು ಮುಂದುವರಿದ ಕುವೆಂಪು ಕಾದಂಬರಿಯತ್ತ ಹೊರಳಿದ್ದು ಒಂದು ಥರದಲ್ಲಿ ಆಕಸ್ಮಿಕವಾಗಿತ್ತು. ತನಗೆ ‘ಕಾದಂಬರಿ ಎಂದರಂತೂ ಒಂದು ಬಗೆಯ ತಿರಸ್ಕಾರವಿತ್ತು’ ಎನ್ನುವ ಕುವೆಂಪು, ಟಾಲ್‌ಸ್ಟಾಯ್ ಬರೆದ ‘ರಿಸರಕ್ಷನ್’ ಕಾದಂಬರಿ ಓದಿ, ಫ್ರೆಂಚ್, ಇಂಗ್ಲಿಷ್, ರಶ್ಯನ್ ಭಾಷೆಯ ಕಾದಂಬರಿಗಳನ್ನು ವೇಗವಾಗಿ ಓದಲಾರಂಭಿಸುತ್ತಾರೆ. ಕತೆ ಬರೆದಿದ್ದ ಕುವೆಂಪುವಿಗೆ ‘ವಾರ್‌ಆ್ಯಂಡ್ ಪೀಸ್’ ಥರದ ಬೃಹತ್ ಕಾದಂಬರಿ ಬರೆಯುವ ಆಸೆ; ಆದರೆ ಕಾದಂಬರಿ ಬರೆಯಬಲ್ಲೆನೆ ಎಂಬ ಅಳುಕು! ಈ ಅಳುಕು ಕಂಡ ಗುರು ಟಿ.ಎಸ್. ವೆಂಕಣ್ಣಯ್ಯ, ‘ಕಥನ, ಸಂವಾದ ಮತ್ತು ವರ್ಣನೆ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಬೃಹತ್ ಕಾದಂಬರಿಯನ್ನೇ ಬರೆಯಿರಿ’ ಎಂದು ಧೈರ್ಯ ತುಂಬಿದ ಮೇಲೆ ಕುವೆಂಪು ಕಾದಂಬರಿ ಶುರು ಮಾಡಿದರು. ಇಂಗ್ಲಿಷ್ ಕವಿಯಾಗಲು ಹೊರಟು ಕನ್ನಡದತ್ತ ಬಂದಿದ್ದ ಕುವೆಂಪು ಕನ್ನಡದಲ್ಲಿ ಆಗಲೇ ರೂಪುಗೊಂಡಿದ್ದ ಕಾದಂಬರಿ ಪ್ರಕಾರವನ್ನು ದೊಡ್ಡ ಕ್ಯಾನ್ವಾಸ್, ಸ್ಥಳೀಯ ಭಾಷಾ ವೈವಿಧ್ಯ, ನೆಲದ ಗಂಧ, ನವ ಆದರ್ಶಗಳ ಸಂಗಮವನ್ನಾಗಿಸಿದರು. ಕಾದಂಬರಿ ಬರವಣಿಗೆಯ ನಡುವೆ ತತ್ವಶಾಸ, ಮನೋವಿಜ್ಞಾನ, ಆಧ್ಯಾತ್ಮ... ಎಲ್ಲವನ್ನೂ ಕುವೆಂಪು ಓದುತ್ತಿದ್ದರು. ಓದಿನ ಜೊತೆಗೇ ರೈತರ ಕಷ್ಟ, ದಲಿತರ ಯಾತನೆ, ಸುತ್ತಣ ನೋವು, ಸ್ವಾತಂತ್ರ್ಯ ಚಳವಳಿ, ಗಾಂಧೀಜಿಯ ಬಗ್ಗೆ ಗೌರವ, ರಾಜಪ್ರಭುತ್ವದ ವಿರುದ್ಧ ಸಿಟ್ಟು...ಎಲ್ಲಕ್ಕೂ ಮಿಡಿಯುತ್ತಾ, ಗುಪ್ತಪ್ರೇಮವೊದರಲ್ಲಿ ಅರಳುತ್ತಾ ಕುವೆಂಪು ಬರೆಯುತ್ತಿದ್ದರು. ತನ್ನವು ‘ಓದು ನಾಟಕಗಳು’ ಎಂದು ಒಮ್ಮೆ ಘೋಷಿಸಿದ ಕುವೆಂಪು ತಮ್ಮ ನಾಟಕದಲ್ಲಿ ಸತ್ಯವಾನನಾಗಿಯೂ ನಟಿಸಿದರು! ತಮ್ಮ ಕವಿತೆಗಳನ್ನು ಹಾಡಿದರು. ಹೀಗೆ ಕುವೆಂಪುವಿನಲ್ಲಿ ಹಲವು ವ್ಯಕ್ತಿತ್ವಗಳು ಬೆರೆಯುತ್ತಿದ್ದವು; ಮುಖಾಮುಖಿಯಾಗುತ್ತಿದ್ದವು. ಗಾಂಧೀಜಿ ಜೈಲಿನಿಂದ ಬಿಡುಗಡೆಯಾದಾಗ ಹರೆಯದ ಕುವೆಂಪು ಭಾವುಕರಾಗಿ ‘Sing, temples, sing…Ring, Churches, ring… Ye Mosques, your incense burn and pray for him...’ ಎಂದು ಕವಿತೆ ಬರೆದರು; ಮುಂದೊಮ್ಮೆ ‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ’ ಎಂಬ ದಿಟ್ಟ ಕರೆಯನ್ನೂ ನೀಡಿದರು. ಶೂದ್ರರನ್ನು ಪುರೋಹಿತಶಾಹಿಯ ದಾಸ್ಯದಿಂದ ಬಿಡಿಸಲು ವೈಚಾರಿಕ ಬರಹ, ಭಾಷಣಗಳ ಮೂಲಕ ಪ್ರಯತ್ನಿಸುತ್ತಿದ್ದ ಕುವೆಂಪು ಕಾರ್ಡು, ಪತ್ರಗಳ ಶುರುವಿನಲ್ಲಿ ‘ಓಂ ಶಾಂತಿಃ’ಗೆ ಬದಲಾಗಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು! ಅವರ ಕವಿತೆಗಳು ಸ್ವಾತಂತ್ರ ಚಳವಳಿ, ಸಾಮಾಜಿಕ ಚಳವಳಿಗಳ ಭಾಗಗಳಾದವು.

3. ಪ್ರೇಮಿ, ಹುಚ್ಚ, ಕವಿ ಮತ್ತು ಅಧ್ಯಾತ್ಮಜೀವಿ!

 ‘ಕವಿ, ಹುಚ್ಚ, ಪ್ರೇಮಿ ಕಲ್ಪನಾವಿಲಾಸದಿಂದ ತುಂಬಿ ತುಳುಕುತ್ತಿರುತ್ತಾರೆ’ ಎಂಬ ಶೇಕ್ ‌ಸ್ಪಿಯರನ ವರ್ಣನೆಯನ್ನು ಬಲ್ಲ ಕುವೆಂಪುವಿಗೆ ಈ ಮೂರರ ಜೊತೆಗೆ ಅಧ್ಯಾತ್ಮವೂ ಸೇರಿಕೊಂಡಿತ್ತು. ಹರೆಯದಲ್ಲಿ ಮಲೇರಿಯಾ ಸೇರಿದಂತೆ ಹಲ ಬಗೆಯ ಕಾಯಿಲೆಗಳಿಗೆ ತುತ್ತಾಗಿದ್ದ ಕುವೆಂಪುವಿಗೆ ಒಮ್ಮೆ ತೀವ್ರ ಕಾಯಿಲೆಯೊಂದರ ಸ್ಥಿತಿಯಲ್ಲಿ ಉನ್ಮಾದ ಭುಗಿಲೆದ್ದಿತು. ಈ ಉನ್ಮಾದ, ‘ಪುಟ್ಟಪ್ಪ ತೀರಿಕೊಂಡಿದ್ದಾನೆ; ಈಗ ನಾನು ವಿವೇಕಾನಂದ’ ಎಂದು ಕುವೆಂಪುವೇ ನಂಬಿ ಹೇಳುವಲ್ಲಿಗೂ ಮುಟ್ಟಿತು! ಈ ಅನುಭವ ಕುರಿತು ಕುವೆಂಪು 1973ರಲ್ಲಿ ಬರೆಯುತ್ತಾರೆ: ‘ಈಗಲೂ ಕೂಡ ನನ್ನ ಕವಿಚೇತನದ ಭಾವಾನುಭವಗಳನ್ನೂ ಚಿಂತನಗಳನ್ನೂ ಮುಚ್ಚುಮರೆಯಿಲ್ಲದೆ ಲೋಕರಂಗದಲ್ಲಿ ಬಿಚ್ಚಿದೆನಾದರೆ ನಾನು ಅಂದಿಗಿಂತಲೂ ಹೆಚ್ಚಾಗಿ ಹುಚ್ಚನಾಗಿ ಕಾಣುವುದರಲ್ಲಿ ಸಂಶಯವಿಲ್ಲ!’ ಬರವಣಿಗೆಯ ಸ್ತರವನ್ನು ದಿವ್ಯಸ್ವಪ್ನದ ಸ್ಥಿತಿಯೆಂದು ನಂಬಿದ್ದ ಕುವೆಂಪುವಿನ ಬರವಣಿಗೆಯಲ್ಲಿ ಆದರ್ಶ ನಾಯಕರು, ನೆಲಮೀರಿದ ಪಾತ್ರಗಳು, ಪರವಶ ಸ್ಥಿತಿಗಳು ಮತ್ತೆಮತ್ತೆ ಬರುತ್ತಲೇ ಇರುತ್ತಿದ್ದವು. ಈ ಸ್ಥಿತಿಗಳನ್ನೆಲ್ಲ ಅಣಕಿಸುವಂತೆ ಕಟುವಾಸ್ತವದ ಚಿತ್ರಗಳು, ನಿತ್ಯದ ಸಂಕಟಗಳಲ್ಲಿ ಕುಸಿವ ಪಾತ್ರಗಳು ಕೂಡ ಅವರ ಕಾದಂಬರಿಗಳಲ್ಲಿ ಸೃಷ್ಟಿಯಾಗುತ್ತಿದ್ದವು. ತಾವು ಹೊಕ್ಕ ಎಲ್ಲ ಸಾಹಿತ್ಯ ಪ್ರಕಾರಗಳೂ ತಮ್ಮನ್ನು ಹಲ ಬಗೆಯ ದಿಕ್ಕಿನಲ್ಲಿ ಒಯ್ಯಲು ಬಿಟ್ಟಿದ್ದರಿಂದ ಕೂಡ ಕುವೆಂಪು ಬರವಣಿಗೆಯಲ್ಲಿ ಇಷ್ಟೊಂದು ವೈವಿಧ್ಯವಿದೆ. ಆದರೆ ‘ನೆನಪಿನ ದೋಣಿಯಲ್ಲಿ’ ಆತ್ಮಕತೆಯ ಬರವಣಿಗೆಯ ಕಾಲಕ್ಕೆ ಲೇಖಕನ ಅತಿ ಆತ್ಮವಿಶ್ವಾಸದಿಂದಲೋ ಏನೋ ಈ ‘ಪ್ರಕಾರ ಪ್ರಜ್ಞೆ’ ಕೊಂಚ ಹಿನ್ನೆಲೆಗೆ ಸರಿದು ಬರವಣಿಗೆ ಅನಗತ್ಯವಾಗಿ ಹಿಗ್ಗಿಬಿಟ್ಟಿದೆ.

4. ವಿಭಿನ್ನ ಹೊಣೆಗಳು; ವಿವಿಧ ಪಾತ್ರಗಳು

 ಇನ್ನು ಕುವೆಂಪು ಸೃಷ್ಟಿಸಿರುವ 11,750 ಪುಟಗಳನ್ನುಳ್ಳ 12 ಸಂಪುಟಗಳ ಒಂದು ಸ್ಥೂಲ ಅವಲೋಕನ: ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿ ಮಹಾಕಾವ್ಯ, ಭಾವಗೀತೆ, ನಾಟಕ- ಈ ಮೂರನ್ನು ಮೂಲ ಸಾಹಿತ್ಯ ಪ್ರಾಕಾರಗಳು ಎನ್ನುತ್ತಾರೆ. ಕುವೆಂಪು ಐವತ್ತು ವರ್ಷ ತಲುಪುವ ಹೊತ್ತಿಗೆ ಈ ಮೂರೂ ಮೂಲ ಪ್ರಕಾರಗಳಲ್ಲಿ ಎತ್ತರದ ಕೃತಿಗಳನ್ನು ಸೃಷ್ಟಿಸಿದ್ದರು. ಎಲ್ಲ ಆಧುನಿಕ ಸಾಹಿತ್ಯ ಪ್ರಾಕಾರಗಳನ್ನೂ ನಿರ್ವಹಿಸಿದರು. ಕಾದಂಬರಿ, ಕತೆ, ಗದ್ಯ, ಕಾವ್ಯ ಮೀಮಾಂಸೆ, ವಿಮರ್ಶೆ, ಜೀವನ ಚರಿತ್ರೆ, ಆತ್ಮಕತೆ, ಮಕ್ಕಳ ಸಾಹಿತ್ಯ, ಸರಳ ಕನ್ನಡದಲ್ಲಿ ‘ಜನಪ್ರಿಯ ವಾಲ್ಮೀಕಿ ರಾಮಾಯಣ’ ಹೀಗೆ ಕುವೆಂಪು ಅವರ 80 ಪುಸ್ತಕಗಳು ಈ ಹನ್ನೆರಡು ಸಂಪುಟಗಳಲ್ಲಿ ಹರಡಿವೆ. ಕುವೆಂಪು ಇಷ್ಟೊಂದು ಪುಟಗಳನ್ನು ಕೈಬರಹದಲ್ಲಿ ಬರೆದದ್ದು ಹೇಗೆ ಎಂಬ ಪ್ರಶ್ನೆ ಈ ಕಾಲದ ಹೊಸ ಓದುಗರಲ್ಲಿ ಸಹಜವಾಗಿಯೇ ಮೂಡಬಹುದು! ಕುವೆಂಪು ಕಾಲಕಾಲಕ್ಕೆ ತಮ್ಮ ವಿಭಿನ್ನ ಹೊಣೆಗಳು ಹಾಗೂ ಪಾತ್ರಗಳನ್ನು ವಿವರಿಸಿಕೊಂಡ ಕ್ರಮದಿಂದಾಗಿ ಕೂಡ ಅಷ್ಟೊಂದು ಪ್ರಕಾರಗಳಲ್ಲಿ ಬರೆಯಲೇಬೇಕಾಯಿತು. ತಾರುಣ್ಯದಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ಕರ್ತವ್ಯ-ಗುರಿ ಏನೆಂಬುದನ್ನು ಸ್ಪಷ್ಟಪಡಿಸಿಕೊಂಡ ಕುವೆಂಪು ಪ್ರಾಚೀನ ಕೃತಿಗಳನ್ನು ಓದುವ ರೀತಿಗಳನ್ನು ಕಲಿಸಲು ವಿಮರ್ಶೆ, ಕಾವ್ಯಮೀಮಾಂಸೆ ಎಲ್ಲವನ್ನೂ ಬರೆಯಬೇಕಾಯಿತು. ಭಾರತೀಯ ಕಾವ್ಯ ಮೀಮಾಂಸೆ, ಪಶ್ಚಿಮದ ಕಾವ್ಯಮೀಮಾಂಸೆ ಎರಡರ ಕಡೆಗೂ ನೋಡಬೇಕಾಯಿತು. ‘ತಪೋನಂದನ,’ ‘ರಸೋವೈಸಃ’, ‘ದ್ರೌಪದಿಯ ಶ್ರೀಮುಡಿ’ ಥರದ ವಿಮರ್ಶಾ ಕೃತಿಗಳು ವಿಮರ್ಶೆಯ ಭಾಷೆ, ಪರಿಕಲ್ಪನೆ, ತೌಲನಿಕ ನೋಟ, ಸದಭಿರುಚಿಗಳನ್ನು ರೂಪಿಸಲೆತ್ನಿಸುತ್ತವೆ. ಯಾವುದೇ ಕನ್ನಡ ಅಧ್ಯಾಪಕಿಯ, ಅಧ್ಯಾಪಕನ ಕೆಲಸ ಕ್ಲಾಸಿನೊಳಗೆ ಮುಗಿಯುವುದಿಲ್ಲ; ಕ್ಲಾಸಿನ ಹೊರಗೂ ಅವರು ಕನ್ನಡ ಸಾಹಿತ್ಯದ ಮೂಲಕ ಹೊಸ ಸಂವೇದನೆ, ವೈಚಾರಿಕ ಜಾಗೃತಿಯನ್ನು, ವಿಮರ್ಶಾ ಪ್ರಜ್ಞೆಯನ್ನು ರೂಪಿಸಬೇಕು ಎಂಬುದನ್ನು ನಂಬಿದ್ದ ಕುವೆಂಪು ಕನ್ನಡ ಬೋಧನೆಯ ಶ್ರೇಷ್ಠ ಮಾದರಿಯನ್ನೂ ತೋರಿಸಿದರು.

ಅದರ ಜೊತೆಗೆ, ಸಾಮಾನ್ಯರೂ ಪ್ರಾಚೀನ ಕೃತಿಗಳನ್ನು ಹೊಸ ನೆಲೆಯಲ್ಲಿ ಆಧುನಿಕ ಅರ್ಥಗಳ ಸಹಿತ ನೋಡಬೇಕೆಂಬ ತುಡಿತವೂ ಕುವೆಂಪುವಿಗಿತ್ತು. ತಮ್ಮನ್ನು ದಮನಿಸುತ್ತಿದ್ದ ಪುರೋಹಿತಶಾಹಿ ಹಾಗೂ ್ಯೂಡಲ್ ಮೂಲಗಳನ್ನು ಆಗಷ್ಟೇ ಅರಿಯತೊಡಗಿದ್ದ ಶೂದ್ರ ಜನಾಂಗಕ್ಕೆ ಹೊಸ ಆತ್ಮವಿಶ್ವಾಸ ತುಂಬಲು ಶೂದ್ರ ತಪಸ್ವಿಯ ಅಥವಾ ಏಕಲವ್ಯನ ಕತೆಯನ್ನು ಆಧುನಿಕ ಪ್ರಜ್ಞೆಯ ಮೂಲಕ ನಾಟಕವಾಗಿಸಿ ಹೇಳಬೇಕು; ಈ ನಾಟಕಗಳನ್ನು ಶೂದ್ರ ಸಮುದಾಯದ ಬಿಡುಗಡೆಯ ದೊಡ್ಡ ಚಳವಳಿಗಳ ಜೊತೆಗೆ ತಾತ್ವಿಕವಾಗಿ ಬೆಸೆಯಬೇಕು; ಜನರು ರಾಮಾಯಣವನ್ನು ಹಳೆಯ ರೀತಿಯಲ್ಲಿ ಓದಿ ಮನಸ್ಸನ್ನು ಕಗ್ಗಂಟಾಗಿಸಿಕೊಳ್ಳದೆ ಒಂದು ಬೃಹತ್ ಕಾದಂಬರಿಯಂತೆ ಮುಕ್ತವಾಗಿ ಓದಬೇಕು ಈ ಥರದ ಹೊಣೆಗಳನ್ನು ರೂಢಿಸಿಕೊಂಡ ಕುವೆಂಪು ಸಾಹಿತ್ಯಕೃತಿಗಳ ಜೊತೆಗೇ ವಿಚಾರ ಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳ ಸೃಷ್ಟಿ, ವಿಜ್ಞಾನಮತಿಯ ಬೆಳವಣಿಗೆ... ಇವೆಲ್ಲದರಲ್ಲೂ ತೊಡಗಿದ್ದರು.

ಲೇಖಕ, ಲೇಖಕಿಯರು ಬರೆದ ಶ್ರೇಷ್ಠ ಬರವಣಿಗೆ ಬರಬರುತ್ತಾ ಅವರಿಗಷ್ಟೇ ಸೇರದೆ, ಭಾಷೆಯ, ಪರಂಪರೆಯ ಭಾಗವಾಗಿಬಿಡುವುದನ್ನು ಕುರಿತು ಲೇಖಕ ಬೋರ್ಹೆಸ್ ಹೇಳುವುದರ ಅರ್ಥ ಕುವೆಂಪು ಸಮಗ್ರ ಸಾಹಿತ್ಯವನ್ನು ಓದುತ್ತಿದ್ದಾಗ ಸ್ಪಷ್ಟವಾಗಿ ಹೊಳೆಯುತ್ತದೆ. ಮಕ್ಕಳಿಗಾಗಿ, ತರುಣ, ತರುಣಿಯರಿಗಾಗಿ, ಪ್ರಬುದ್ಧರಿಗಾಗಿ, ಕೇಳುಗರಿಗಾಗಿ, ಪಾಠ ಹೇಳುವವರಿಗಾಗಿ ಹೀಗೆ ಕುವೆಂಪು ಕಾಲಕಾಲಕ್ಕೆ ಬರೆದ ಬರವಣಿಗೆಗಳೆಲ್ಲ ಕನ್ನಡ ಪರಂಪರೆಯ ಭಾಗವಾಗುವುದು ಹೀಗೆಯೇ. ಆದ್ದರಿಂದಲೇ ಒಮ್ಮೆ ಶುರುವಾದ ನಮ್ಮ ಕುವೆಂಪುಯಾನ ಕುವೆಂಪು ಪುಸ್ತಕಗಳಿಗೇ ನಿಲ್ಲುವುದಿಲ್ಲ. ಕುವೆಂಪು ಸಂವೇದನೆ ಕಾರಂತ, ಬೇಂದ್ರೆಯವರ ಕಡೆಗೂ ನಮ್ಮನ್ನು ಒಯ್ಯುತ್ತದೆ. ಕೆಲವು ವಿಚಾರಗಳಲ್ಲಿ ಕುವೆಂಪುವಿಗಿಂತ ಸೂಕ್ಷ್ಮವಾಗಿ, ಸಂಕೀರ್ಣವಾಗಿ, ಮೊನಚಾಗಿ, ಆಧುನಿಕವಾಗಿ, ನೇರವಾಗಿ ಬರೆಯುವ ಲಂಕೇಶ್, ತೇಜಸ್ವಿಯವರ ಕಡೆಗೆ ನಾವು ಚಲಿಸುತ್ತೇವೆ. ಕುವೆಂಪು ಕೈ ಚಾಚಿದ ಜಗತ್ತಿನ ದೊಡ್ಡ ಲೇಖಕರ ಕಡೆಗೂ ನೋಡುತ್ತೇವೆ. ಹೀಗೆ ಕುವೆಂಪು ಬರಹಗಳ ದೋಣಿ ನಮ್ಮನ್ನು ಜಗತ್ತಿನ ಅತ್ಯುತ್ತಮ ಸಾಹಿತ್ಯದ ಕಡೆಗೆ ಒಯ್ಯುತ್ತದೆ. ಆದರೆ ನಾವು ಕೇವಲ ಕುವೆಂಪು ಭಕ್ತರಾಗಿ ಕುವೆಂಪುವಿನಲ್ಲೇ ‘ಸ್ಟಕ್’ ಆದರೆ, ಈ ಕುವೆಂಪುಯಾನ ಅಪೂರ್ಣವಾಗುತ್ತದೆ!
    

5. ಕುವೆಂಪು ಕೃತಿಗಳ ಜೊತೆಗೆ: ದೂರ ತೀರ ಯಾನ!

ಈ ಕುವೆಂಪು ಯಾನವನ್ನು ತರಗತಿಗಳಲ್ಲಿ ಮುಂದುವರಿಸಿದ ಸಾವಿರಾರು ಕನ್ನಡ ಬೋಧಕ, ಬೋಧಕಿಯರಂತೆ, ಕುವೆಂಪುವಿನ ಕ್ರಾಂತಿಕಾರಿ ಸಂದೇಶಗಳನ್ನು ಕವಿ ಸಿದ್ದಲಿಂಗಯ್ಯ, ಕೆ.ಎಸ್. ಭಗವಾನ್, ಜ. ಹೊ. ನಾರಾಯಣಸ್ವಾಮಿ ಥರದ ಪ್ರಖರ ಸಾಮಾಜಿಕ ಜವಾಬ್ದಾರಿಯ ಲೇಖಕರೂ ಕೂಡ ತಮ್ಮ ಬರವಣಿಗೆಗಳಲ್ಲಿ ವಿಸ್ತರಿಸಿದ್ದಾರೆ. ಕುವೆಂಪು ಅನೇಕ ಪ್ರಗತಿಪರ ಸಂಘಟನೆಗಳಿಗೆ ಸೂರ್ತಿಯಾಗಿದ್ದಾರೆ. ಕರ್ನಾಟಕದ ದಲಿತ ಸಂಘಟನೆ, ರೈತ ಸಂಘಟನೆಗಳಲ್ಲಿ ಕುವೆಂಪು ಮರುದನಿ ಕೇಳುತ್ತದೆ. ರೈತನಾಯಕರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಕುವೆಂಪು ಕೃತಿಗಳ ವಿಶಿಷ್ಟ ವ್ಯಾಖ್ಯಾನಕಾರಲ್ಲೊಬ್ಬರಾಗಿದ್ದರು. ಕರ್ನಾಟಕದ ಬಹುಜನ ಸಮಾಜಪಕ್ಷ ಕುವೆಂಪುವನ್ನು ತನ್ನ ಸಾಂಸ್ಕೃತಿಕ ಐಕಾನ್‌ಗಳ ನಡುವೆ ಇರಿಸಿಕೊಂಡಿದೆ. ಕನ್ನಡ ಅಧ್ಯಯನ, ವಿಮರ್ಶೆ, ಸಿನೆಮಾ, ಟೆಲಿಧಾರಾವಾಹಿ, ರಂಗಭೂಮಿ, ಸಮೂಹಗಾನ ಹೀಗೆ ಎಲ್ಲವೂ ಕುವೆಂಪುವನ್ನು ಮುಂದೊಯ್ಯುತ್ತಿವೆ.

ಈ ಎಲ್ಲ ಯಾನಗಳಿಗೆ ಒತ್ತಾಸೆಯಾದ ಕುವೆಂಪು ಕೃತಿಗಳ ಪ್ರಕಾಶಕರ ಜವಾಬ್ದಾರಿಯೂ ಅತ್ಯಂತ ಮುಖ್ಯವಾದುದು. ಕಾವ್ಯಾಲಯ ಪ್ರಕಾಶನದ ಕೂಡಲಿ ಚಿದಂಬರಂ ಅವರ ನಿಷ್ಠೆಯ ಪ್ರಕಾಶಕ ವೃತ್ತಿ, ಒಂದು ಘಟ್ಟದಲ್ಲಿ ತಮ್ಮ ಕೃತಿಗಳ ಪ್ರಕಟನೆಯ ಬಗೆಗೆ ಗಮನ ಕೊಟ್ಟು ‘ಉದಯರವಿ’ ಪ್ರಕಾಶನ ಶುರು ಮಾಡಿದ ಕುವೆಂಪುವಿನ ವ್ಯಾವಹಾರಿಕ ಜಾಣ್ಮೆ, ಓದುಗರ ನಿರಂತರ ಸ್ವೀಕಾರ ಇವೆಲ್ಲವುಗಳಿಂದಲೂ ಕುವೆಂಪು ಕೃತಿಗಳು ಉಳಿದು ಬೆಳೆದಿವೆ. ಆನಂತರ ಪೂರ್ಣಚಂದ್ರ ತೇಜಸ್ವಿ, ಅವರ ಸಂಗಾತಿ ರಾಜೇಶ್ವರಿ, ರಾಘವೇಂದ್ರ ಜನ್ನಾಪುರ, ಬಿ.ಎನ್. ಶ್ರೀರಾಮ್, ತಾರಿಣಿ ಚಿದಾನಂದಗೌಡ... ಇವರೆಲ್ಲರ ಪ್ರೀತಿ ಮತ್ತು ಬದ್ಧತೆಗಳು ಕೂಡ ಕುವೆಂಪು ಪುಸ್ತಕಗಳನ್ನು ಪೊರೆದಿವೆ. ತೇಜಸ್ವಿಯವರು ಕಂಪ್ಯೂಟರ್ ಹಿಡಿದು, ರಾಘವೇಂದ್ರ ಜನ್ನಾಪುರ ಥರದ ಗೆಳೆಯರೊಡಗೂಡಿ ಈ ಸಂಪುಟಗಳ ವಿನ್ಯಾಸದಲ್ಲಿ ತೊಡಗಿದ ಮೇಲೆ, ಅವರ ಜೊತೆ ಸೇರಿ, ನಂತರ ತೇಜಸ್ವಿಯವರ ಮಾರ್ಗದರ್ಶನದಲ್ಲಿ ಈ ಹನ್ನೆರಡು ಸಂಪುಟಗಳನ್ನು ಸಂಪಾದಿಸಿರುವ ಡಾ.ಕೆ.ಸಿ. ಶಿವಾರೆಡ್ಡಿಯವರ ಶ್ರಮ ಅನನ್ಯವಾದುದು. ಈ ಸಂಪುಟಗಳಿಗಾಗಿ ಅವರು ದಣಿವರಿಯದೆ ದುಡಿದಿದ್ದಾರೆ. ಆ ಮೂಲಕ ಕುವೆಂಪು ಸಾಹಿತ್ಯದ ಉತ್ತಮ ವ್ಯಾಖ್ಯಾನಕಾರರಾಗಿಯೂ ಅವರು ರೂಪುಗೊಂಡಿದ್ದಾರೆ. ಅವರು ಒದಗಿಸಿರುವ ಕೃತಿಗಳ ಅನುಬಂಧಗಳು, ಲೇಖಕರ ವಿವರಗಳು, ವಿಷಯ ಸೂಚಿ, ಟಿಪ್ಪಣಿಗಳು ಎಲ್ಲವೂ ಕುವೆಂಪು ಅಧ್ಯಯನಕ್ಕೆ ಅತ್ಯಂತ ಉಪಯುಕ್ತವಾಗಿವೆ. ಅಲ್ಲಲ್ಲಿ ಉಳಿದಿರುವ ದೋಷಗಳನ್ನು ಮುಂದೆ ಸರಿಪಡಿಸಿಕೊಂಡು, ಇನ್ನೂ ಉಳಿದಿರಬಹುದಾದ ಕುವೆಂಪು ಬರವಣಿಗೆಯನ್ನು ಸಂಗ್ರಹಿಸಬೇಕಾದ ಶಿವಾರೆಡ್ಡಿಯವರಂತಹ ಸಂಪಾದಕರು ಮಾಡಬೇಕಾದ ಕುವೆಂಪು ಕಾಯಕ ಇನ್ನೂ ಬಾಕಿಯಿದೆ!

 ಈ ಕುವೆಂಪು ಯಾನವನ್ನು ನಮ್ಮ ಕಾಲದ ಹೊಸ ಲೇಖಕ, ಲೇಖಕಿಯರು ಕೂಡ ಅರ್ಥಪೂರ್ಣವಾಗಿ ಮುನ್ನಡೆಸಿದಾಗ ಮಾತ್ರ ಕುವೆಂಪು ಮೂಲಕ ಕನ್ನಡದಲ್ಲಿ ಹಬ್ಬಿರುವ ಆಧುನಿಕ ವೈಚಾರಿಕತೆ, ಕಲಾಪ್ರಜ್ಞೆ, ಬರವಣಿಗೆಯ ಶಿಸ್ತು, ಸೌಂದರ್ಯ ತತ್ವಗಳು ಹೊಸ ಹೊಸ ಆಯಾಮಗಳನ್ನು ಪಡೆಯಬಲ್ಲವು. ಅಷ್ಟೇ ಮುಖ್ಯವಾಗಿ, ಏಕಾಕಿತನ, ಖಾಲಿತನಗಳನ್ನು ಅನುಭವಿಸುವ ಯಾವುದೇ ಸೂಕ್ಷ್ಮ ವ್ಯಕ್ತಿಗಳಿಗೆ ಕುವೆಂಪು ಸಾಹಿತ್ಯ ಆತ್ಮೀಯ ಸಂಗಾತಿಯಾಗಬಲ್ಲದು; ಕುವೆಂಪು ಸಮಗ್ರ ಸಾಹಿತ್ಯದೊಡನೆ ಕನ್ನಡದ ಜಾಣ ಜಾಣೆಯರು ತಮ್ಮ ಜೀವಮಾನವಿಡೀ ಅರ್ಥಪೂರ್ಣವಾಗಿ ಬದುಕಬಹುದು ಎಂಬುದು ನನ್ನ ಪ್ರಾಮಾಣಿಕ ನಂಬಿಕೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top