ತುರ್ತು ಸ್ಥಿತಿಯಲ್ಲಿಲ್ಲದ ಕೊರೋನ ಸೋಂಕಿಗೆ ತುರ್ತಾಗಿ ಲಸಿಕೆ ಬೇಕೇ? | Vartha Bharati- ವಾರ್ತಾ ಭಾರತಿ

--

ತುರ್ತು ಸ್ಥಿತಿಯಲ್ಲಿಲ್ಲದ ಕೊರೋನ ಸೋಂಕಿಗೆ ತುರ್ತಾಗಿ ಲಸಿಕೆ ಬೇಕೇ?

ವಿಜ್ಞಾನ-ತಂತ್ರಜ್ಞಾನಗಳ ಸಾಧನೆಯಿಂದ ಹೊಸ ಕೊರೋನ ಸೋಂಕಿನ ಬಗ್ಗೆ ಅಗಾಧ ಮಾಹಿತಿಯೆಲ್ಲವೂ ಎರಡೇ ತಿಂಗಳಲ್ಲಿ ಲಭ್ಯವಾಗಿದ್ದರೂ ಅಜ್ಞಾನ, ಅವೈಚಾರಿಕತೆ ಮತ್ತು ರಾಜಕೀಯ ಮೇಲಾಟಗಳಿಂದ ಲಾಕ್‌ಡೌನ್ ಮಾಡಿ ಇಡೀ ದೇಶವೇ ಅಪಾರ ಕಷ್ಟನಷ್ಟಗಳಿಗೀಡಾಗುವಂತಾಯಿತು; ಈಗ ಅದೇ ವಿಜ್ಞಾನ-ತಂತ್ರಜ್ಞಾನಗಳು ಒಂದೇ ವರ್ಷದಲ್ಲಿ ಹಲವು ಲಸಿಕೆಗಳನ್ನು ತಯಾರಿಸಿದ್ದರೂ, ವ್ಯಾಪಾರಿ ಹಿತಾಸಕ್ತಿಗಳ ಲಾಭ ಗಳಿಸುವ ಒತ್ತಡಗಳು ಮತ್ತು ಅದೇ ರಾಜಕೀಯ ಮೇಲಾಟಗಳು ವೈಜ್ಞಾನಿಕ ಪರೀಕ್ಷೆಗಳನ್ನೂ, ನೈತಿಕ ಆದರ್ಶಗಳನ್ನೂ ಬದಿಗೊತ್ತಿ ಲಸಿಕೆಗಳನ್ನು ಜನರ ಮೇಲೆ ಹೇರಹೊರಟಿವೆ. ಹಾಗಿರುವಾಗ, ಪ್ರತಿಯೋರ್ವರೂ ತಮ್ಮ ಸ್ವಂತ ವಿವೇಚನೆಯನ್ನು ಬಳಸಿ ಲಸಿಕೆ ಪಡೆಯಬೇಕೇ ಬೇಡವೇ ಎಂದು ನಿರ್ಧರಿಸಿದರೆ ಒಳ್ಳೆಯದು. ಈಗ ಲಸಿಕೆ ಪಡೆಯಬಲ್ಲವರ ಪಟ್ಟಿಯೊಳಗಿರುವವರು ಎರಡರಲ್ಲಿ ಯಾವ ಲಸಿಕೆ ಎಂಬ ಆಯ್ಕೆ ಮಾಡುವಂತಿಲ್ಲದಿದ್ದರೂ, ಲಸಿಕೆ ಕಡ್ಡಾಯವಲ್ಲ ಎಂದು ಸರಕಾರವೇ ಹೇಳಿದೆ ಎನ್ನುವುದನ್ನು ನೆನಪಿಟ್ಟುಕೊಂಡು ನಿರ್ಧರಿಸಿದರೆ ಸಾಕು.


ಹೊಸ ಕೊರೋನ ಸೋಂಕು ಬಂದು ಒಂದು ವರ್ಷವಾಗಿ, ಲಾಕ್‌ಡೌನ್ ಕಷ್ಟ ನಷ್ಟ ಎಲ್ಲ ಆಗಿ, ಕೋಟಿಗಟ್ಟಲೆ ಜನರಿಗೆ ಹರಡಿಯಾದ ಬಳಿಕ ಈಗ ಪೂರ್ಣ ಕುಂಭ, ಅಂಬಾರಿ ಸಮೇತವಾಗಿ ಲಸಿಕೆಗಳ ಪರ್ವ. ಚೀನಾ, ಅಮೆರಿಕ, ಯುರೋಪುಗಳನ್ನು ನಕಲು ಮಾಡಿ ಲಾಕ್‌ಡೌನ್, ಚಪ್ಪಾಳೆ, ದೀಪಜ್ವಲನ, ಹೂಮಳೆಗಳಾದ ಬಳಿಕ ಲಸಿಕೆಗಳಲ್ಲೂ ನಾವೇನು ಕಡಿಮೆಯೆಂದು ಒಂದಲ್ಲ, ಎರಡು ಲಸಿಕೆಗಳಿಗೆ ಕೇಂದ್ರ ಸರಕಾರದ ವಿಶೇಷ ತಜ್ಞರ ಸಮಿತಿಯು ಜನವರಿ 2ರಂದು ಅನುಮೋದನೆ ನೀಡಿದೆ; ಮೊದಲನೆಯದು ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಸಿದ್ಧ್ದಪಡಿಸಿರುವ, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಉತ್ಪಾದಿಸುವ, ಕೋವಿಶೀಲ್ಡ್ ಹೆಸರಿನ ಲಸಿಕೆ, ಎರಡನೆಯದು ಹೈದರಾಬಾದಿನ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ, ಇನ್ನೂ ಪರೀಕ್ಷೆಗಳೇ ಮುಗಿಯದಿರುವ, ಕೋವ್ಯಾಕ್ಸಿನ್ ಎಂಬ ಲಸಿಕೆ. ಒಂದು ವಿದೇಶಿ ಲಸಿಕೆ, ಇನ್ನೊಂದು ಸಾಬೀತಾಗದ ಲಸಿಕೆ, ಸರಕಾರದನುಸಾರ ಇದು ಭಾರತದ ಮಹತ್ಸಾಧನೆ! ಈ ತರಾತುರಿಯ ನಿರ್ಧಾರದ ಬಗ್ಗೆ ಅನೇಕ ವಿಜ್ಞಾನಿಗಳು, ರಾಜಕಾರಣಿಗಳು, ಹೆಚ್ಚಿನ ಪ್ರಮುಖ ಪತ್ರಿಕೆಗಳವರು ಗಂಭೀರವಾದ ಪ್ರಶ್ನೆಗಳನ್ನೆತ್ತಿದ್ದಾರೆ. ವಿಶೇಷ ತಜ್ಞರ ಸಮಿತಿಯು ಈ ಲಸಿಕೆಗಾಗಿ ಡಿಸೆಂಬರ್ 30, ಜನವರಿ 1 ಮತ್ತು 2 ರಂದು ಬೆನ್ನು-ಬೆನ್ನಿಗೆ ಸಭೆಗಳನ್ನು ನಡೆಸಿತೆಂದೂ, ಮೊದಲೆರಡು ಸಭೆಗಳಲ್ಲಿ ಕಂಪೆನಿಯು ಮುಂದಿಟ್ಟ ಸಾಕ್ಷ್ಯಾಧಾರಗಳು ತೃಪ್ತಿಕರವಾಗಿರಲಿಲ್ಲವೆಂದೂ, ಮೂರನೇ ಸಭೆಯಲ್ಲಿ ಕಂಪೆನಿಯು ಬ್ರಿಟನ್‌ನ ಹೊಸ ವೈರಸ್ ನೆಪದಲ್ಲಿ ತುರ್ತು ಅನುಮೋದನೆಯನ್ನು ಯಾಚಿಸಿತೆಂದೂ, ಸರಕಾರದ ಒತ್ತಡದಿಂದ ಸಮಿತಿಯು ಒಪ್ಪಬೇಕಾಯಿತೆಂದೂ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಜನವರಿ 6ರಂದು ವರದಿ ಮಾಡಿದೆ.

ಈ ಎರಡು ಲಸಿಕೆಗಳವರು ಕೂಡ ತಮ್ಮಳಗೇ ಕಾದಾಡಿಕೊಂಡಿದ್ದಾರೆ; ಕೋವಿಶೀಲ್ಡ್‌ನ ಆದಾರ್ ಪೂನಾವಾಲ ‘‘ಕೋವ್ಯಾಕ್ಸಿನ್ ಲಸಿಕೆಯು ನೀರಿನಂತಿದೆ’’ ಎಂದು ಹೀಗಳೆದರೆ, ಕೋವ್ಯಾಕ್ಸಿನ್‌ನ ಕೃಷ್ಣ ಎಲ್ಲ ಅವರು ‘‘ಕೋವಿಶೀಲ್ಡ್ ಲಸಿಕೆಯ ಪರೀಕ್ಷೆಗಳೇ ಕಳಪೆಯಾಗಿವೆ, ಶೇ. 60-70 ಜನರಲ್ಲಿ ಅಡ್ಡ ಪರಿಣಾಮಗಳಾಗಿವೆ’’ ಎಂದಿದ್ದಾರೆ; ಈ ಕಾದಾಟದಲ್ಲಿ ಎರಡೂ ಲಸಿಕೆಗಳ ವಾಸ್ತವವು ಹೊರ ಬಿದ್ದಂತಾಗಿದೆ. ಹಿರಿಯ ಲಸಿಕೆ ವಿಜ್ಞಾನಿ ಡಾ. ಗಗನ್‌ದೀಪ್ ಕಾಂಗ್ ಅವರು ಕೋವಿಶೀಲ್ಡ್ ಲಸಿಕೆಯ ಬಗ್ಗೆ ಭಾರತದಲ್ಲಿ ನಡೆಸಲಾಗಿರುವ ಪರೀಕ್ಷೆಗಳ ವರದಿಗಳು ಪ್ರಕಟವಾಗಿಲ್ಲ, ಅತ್ತ ಕೋವ್ಯಾಕ್ಸಿನ್ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ, ಆದ್ದರಿಂದ ಇವೆರಡನ್ನೂ ತಾನು ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಹಿರಿಯ ವೈರಾಣು ತಜ್ಞ ಡಾ. ಜೇಕಬ್ ಜಾನ್ ಅವರು ಕೋವಿಶೀಲ್ಡ್ ಲಸಿಕೆಗೆ ಅಡ್ಡ ಪರಿಣಾಮಗಳು ವರದಿಯಾಗಿರುವುದರಿಂದ ತಾನದನ್ನು ಹಾಕಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಹಿರಿಯ ರೋಗರಕ್ಷಣಾ ವಿಜ್ಞಾನಿ ಡಾ. ವಿನೀತಾ ಬಾಲ್ ಅವರು ಸೋಂಕನ್ನು ತಡೆಗಟ್ಟುವ ಸಾಮರ್ಥ್ಯದ ಬಗ್ಗೆ ಆಧಾರಗಳಿಲ್ಲದೆಯೇ ಲಸಿಕೆಗಳನ್ನು ಬಳಸತೊಡಗುವುದು ಅನೈತಿಕವೆಂದೂ, ಹಿಟ್ಲರ್‌ಶಾಹಿ ವರ್ತನೆಯಾಗುತ್ತದೆಂದೂ ಹೇಳಿದ್ದಾರೆ. ಹಿರಿಯ ವೈರಾಣು ತಜ್ಞ ಡಾ. ಶಾಹಿದ್ ಜಮೀಲ್ ಅವರು ಈ ಲಸಿಕೆಗಳಿಗೆ ಅನುಮತಿ ಕೊಟ್ಟ ಬಗೆಯನ್ನು ಪ್ರಶ್ನಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಲಸಿಕೆಗಳ ಉಪಯುಕ್ತತೆ ಮತ್ತು ಸುರಕ್ಷತೆಗಳ ಕನಿಷ್ಠ ಮಾನದಂಡಗಳು ಖಾತರಿಯಾಗುವವರೆಗೆ ಅವುಗಳನ್ನು ಸಾರ್ವತ್ರಿಕವಾಗಿ ಬಳಸುವುದಕ್ಕೆ ಅನುಮತಿ ನೀಡುವಂತಿಲ್ಲ ಎಂದಿದ್ದಾರೆ. ಕೇಂದ್ರದ ಅನುಮೋದನಾ ಪತ್ರದಲ್ಲಿರುವ ಪದಗಳೂ ಕೂಡ ಸಂಶಯಾಸ್ಪದವಾಗಿವೆ.

ಈ ಅನುಮೋದನೆಯು ‘ಸೀರಂ ಇನ್‌ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪೆನಿಗಳ ವಿನಂತಿಯ ಮೇರೆಗೆ ತ್ವರೆಗೊಳಿಸಲಾದ ಪ್ರಕ್ರಿಯೆ’ ಎಂದೇ ಸಮಿತಿಯು ಹೇಳಿದೆ. ಕೋವಿಶೀಲ್ಡ್ ಲಸಿಕೆಗೆ ‘ಹಲವಾರು ನಿಯಂತ್ರಣಗಳ ಶರತ್ತುಗಳನ್ನು ಅನ್ವಯಿಸಿ, ತುರ್ತು ಸ್ಥಿತಿಯಲ್ಲಿ ಪರಿಮಿತ ಬಳಕೆಗಾಗಿ ಅನುಮತಿ ನೀಡಲಾಗಿದೆ’ ಎಂದೂ, ಕೋವ್ಯಾಕ್ಸಿನ್ ಲಸಿಕೆಗೆ ‘ತುರ್ತು ಸ್ಥಿತಿಯಲ್ಲಿ ಪರಿಮಿತ ಬಳಕೆಗಾಗಿ, ಬಹು ಎಚ್ಚರಿಕೆಯಿಂದ, ಸಾರ್ವಜನಿಕ ಹಿತಾಸಕ್ತಿಗಾಗಿ, ಪ್ರಾಯೋಗಿಕ ನೆಲೆಯಲ್ಲಿ, ಅದರಲ್ಲೂ ವಿಶೇಷವಾಗಿ, ರೂಪಾಂತರಿತ ಬಗೆಯ ಸೋಂಕಿನ ಸನ್ನಿವೇಶದಲ್ಲಿ, ಅನುಮತಿ ನೀಡಲಾಗಿದೆ’ ಎಂದೂ ಹೇಳಲಾಗಿದೆ. ಇವುಗಳ ಅರ್ಥವೇನೆಂದು ಹಲವು ತಜ್ಞರು ಕೇಳಿದ್ದಾರೆ.

ಹೀಗೆ ‘ಶರತ್ತುಗಳಿಂದ’, ‘ಪರಿಮಿತ ಬಳಕೆ’ಗೆ ಅನುಮತಿ ನೀಡಲಾಗಿರುವ ಕೋವಿಶೀಲ್ಡ್ ಲಸಿಕೆಯ 10 ಕೋಟಿ ಡೋಸ್‌ಗಳನ್ನು ತಲಾ ರೂ. 200ರ ದರಕ್ಕೆ ಕೇಂದ್ರ ಸರಕಾರವು ಖರೀದಿಸಿದೆ; ಅದರಲ್ಲಿ ಜನವರಿ 16ರೊಳಗೆ 1.1 ಕೋಟಿ ಡೋಸ್‌ಗಳು, ಎಪ್ರಿಲ್ ವೇಳೆಗೆ ಇನ್ನೂ 4 ಕೋಟಿ ಡೋಸ್‌ಗಳು ಪೂರೈಕೆಯಾಗಲಿವೆ ಎನ್ನಲಾಗಿದೆ. ಇನ್ನೂ ಪರೀಕ್ಷೆಗಳೇ ಪೂರ್ಣಗೊಂಡಿಲ್ಲದ, ‘ತುರ್ತು ಸ್ಥಿತಿಯ, ಬಹು ಎಚ್ಚರಿಕೆಯ, ಪ್ರಾಯೋಗಿಕ ಬಳಕೆಗೆ’ ಅನುಮತಿ ನೀಡಲಾಗಿರುವ ಕೋವ್ಯಾಕ್ಸಿನ್ ಲಸಿಕೆಯ 55 ಲಕ್ಷ ಡೋಸ್‌ಗಳನ್ನು ಕೂಡ ಸರಕಾರವು ಖರೀದಿಸಿದೆ! ಅಂದರೆ, ಸರಕಾರವು ತನ್ನ ಖರ್ಚಿನಲ್ಲಿ, ತನ್ನ ಸಿಬ್ಬಂದಿಯ ಮೇಲೆ ಪರೀಕ್ಷೆಗಳನ್ನು ನಡೆಸಲಿದೆಯೆಂದು ಅರ್ಥವೇ? ಸರಕಾರದಿಂದ ಲಸಿಕೆಗಳನ್ನು ಪಡೆಯಲಿರುವವರಿಗೆ ಈ ಎರಡು ಲಸಿಕೆಗಳ ನಡುವೆ ಆಯ್ಕೆಯ ಸ್ವಾತಂತ್ರ್ಯ ಇರುವುದಿಲ್ಲವೆಂದೂ, ತಮ್ಮ ಪಾಲಿಗೆ ಬಂದದ್ದನ್ನು ಪಡೆಯಬೇಕೆಂದೂ ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿರುವುದನ್ನು ಗಮನಿಸಬೇಕಾಗಿದೆ.

ಹೀಗೆಲ್ಲ ಪ್ರಾಯೋಗಿಕವಾಗಿ ಲಸಿಕೆಗಳನ್ನು ನೀಡುವುದಕ್ಕೆ ನಮ್ಮ ದೇಶದಲ್ಲೀಗ ಕೊರೋನ ಸೋಂಕಿನ ‘ತುರ್ತು ಸ್ಥಿತಿ’ ಇದೆಯೇ? ಅಂದಾಜು 90-100 ಕೋಟಿ ಭಾರತೀಯರು, ಅವರಲ್ಲಿ 3-4 ಕೋಟಿ ಕನ್ನಡಿಗರು, (ಜನಸಂಖ್ಯೆಯ ಶೇ.60-70) ಕೊರೋನದಿಂದ ಸೋಂಕಿತರಾಗಿ ಗುಣಮುಖರಾಗಿದ್ದಾರೆ ಎಂದು ಸರಕಾರದ ಸಂಸ್ಥೆಗಳೇ ಹೇಳಿವೆ. ಇವರೆಲ್ಲರಲ್ಲೂ ರೋಗ ನಿರೋಧಕ ಶಕ್ತಿಯು ಬೆಳೆದಾಗಿದೆ, ಅದೇ ಕಾರಣಕ್ಕೆ ಕೊರೋನ ಸೋಂಕು ಇಳಿಮುಖವಾಗುತ್ತಿದೆ, ಈ ತಿಂಗಳಾಂತ್ಯಕ್ಕೆ ತೀರಾ ವಿರಳವಾಗಲಿದೆ; ಎರಡನೇ ಅಲೆಯಾಗಲೀ, ರೂಪಾಂತರಿತ ವೈರಸಿನ ಹರಡುವಿಕೆಯಾಗಲೀ ಉಂಟಾಗುವ ಸಾಧ್ಯತೆಗಳೂ ದೂರವಾಗಿವೆ. ಆಗ ಕೇವಲ 560 ಪ್ರಕರಣಗಳಿದ್ದಾಗ ಮಹಾಮಾರಿ ಬಂತೆಂದು ಹೆದರಿಸಿ ರಾತೋರಾತ್ರಿ ದೇಶವನ್ನಿಡೀ ಲಾಕ್‌ಡೌನ್ ಮಾಡಿದ್ದ ಸರಕಾರವು ಈಗ ಸೋಂಕು ಮರೆಯಾಗುತ್ತಿರುವ ಸನ್ನಿವೇಶದಲ್ಲಿ ತುರ್ತು ಸ್ಥಿತಿ ಇದೆ ಎಂದು ಹೇಳುತ್ತಾ ಲಸಿಕೆ ನೀಡಲು ಹೊರಟಿದೆ! ಲಾಕ್‌ಡೌನ್ ಮಾಡಿದಾಗ ಕೇಳಲಿಲ್ಲ, ಆದರೆ ಈಗಲಾದರೂ ಇಲ್ಲದಿರುವ ತುರ್ತು ಸ್ಥಿತಿಯಲ್ಲಿ ಲಸಿಕೆಗೇನು ತುರ್ತೆಂದು ಕೇಳಿಕೊಳ್ಳುವುದೊಳ್ಳೆಯದು.

ಈ ಕೊರೋನ ಸೋಂಕು ತುರ್ತು ಲಸಿಕೆಯ ಅಗತ್ಯವಿರುವಷ್ಟು ಗಂಭೀರವಾದ ಕಾಯಿಲೆಯೇ? ಅದೂ ಇಲ್ಲ. ಇದುವರೆಗೆ ಯಶಸ್ವಿಯಾಗಿ, ಸುರಕ್ಷಿತವಾಗಿ ಬಳಸಲಾಗಿರುವ ಲಸಿಕೆಗಳೆಲ್ಲವೂ ಸಿಡುಬು, ಪೋಲಿಯೊ, ಧನುರ್ವಾತ, ಡಿಫ್ತೀರಿಯಾ, ನಾಯಿ ಕೆಮ್ಮು, ಹೆಪಟೈಟಿಸ್ ಬಿ, ರೇಬೀಸ್, ಮಿದುಳು ಜ್ವರಗಳಂತಹ ಅತ್ಯಂತ ಮಾರಣಾಂತಿಕವಾದ ಅಥವಾ ಸೋಂಕು ತಗಲಿದ ಹಲವರಲ್ಲಿ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಅಥವಾ ಅಂಗ ವೈಕಲ್ಯಗಳನ್ನುಂಟು ಮಾಡುವ ರೋಗಗಳಿಗಿದಿರಾಗಿ ಇರುವಂತಹವು. ಹೊಸ ಕೊರೋನ ಸೋಂಕು ಶೇ. 99 ಜನರಲ್ಲಿ ಯಾವುದೇ ಸಮಸ್ಯೆಗಳನ್ನೂ ಉಂಟುಮಾಡದೆ ತಾನಾಗಿ ವಾಸಿಯಾಗುತ್ತದೆ, ಅವರೆಲ್ಲರಲ್ಲೂ ಉತ್ತಮವಾದ, ಶಾಶ್ವತವಾದ ರೋಗರಕ್ಷಣಾ ಶಕ್ತಿಯನ್ನೂ ನೀಡುತ್ತದೆ.

ಹಿರಿಯ ವಯಸ್ಕರು ಮತ್ತು ಅದಾಗಲೇ ಅನ್ಯ ರೋಗಗಳಿದ್ದವರಲ್ಲಷ್ಟೇ ಅದು ಗಂಭೀರ ಸಮಸ್ಯೆಗಳನ್ನುಂಟು ಮಾಡುತ್ತದೆ, ಅಂತಹವರಲ್ಲೂ ಹೆಚ್ಚಿನವರನ್ನು ಕ್ಲಪ್ತವಾದ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ. ಅದಾಗಲೇ ಸೋಂಕಿತರಾಗಿರುವ ದೇಶದ ಶೇ. 60-70 ಜನರಿಗಾಗಲೀ, ಸೋಂಕಿನಿಂದ ಸಮಸ್ಯೆಗಳಾಗುವ ಅಪಾಯವಿಲ್ಲದ ಗರ್ಭಿಣಿಯರು, ಮಕ್ಕಳು, ಯುವಜನರು ಮುಂತಾದವರಿಗಾಗಲೀ ಲಸಿಕೆಯಿಂದ ಹೆಚ್ಚಿನ ಪ್ರಯೋಜನವೇನೂ ಆಗುವುದಿಲ್ಲ (ಗರ್ಭಿಣಿಯರು ಮತ್ತು 18 ವರ್ಷಕ್ಕೆ ಕೆಳಗಿನ ಮಕ್ಕಳಲ್ಲಿ ಈ ಲಸಿಕೆಗಳಾವುದನ್ನೂ ಪರೀಕ್ಷಿಸಿಯೇ ಇಲ್ಲ, ಅವರಿಗೆ ಕೊಡುವ ಯೋಜನೆಯೂ ಯಾವ ದೇಶದಲ್ಲೂ ಇಲ್ಲ). ಸೋಂಕಿನಿಂದ ಸಮಸ್ಯೆಗಳಾಗುವ ವರ್ಗಗಳವರ ಮೇಲೆ ಲಸಿಕೆಗಳ ಪರೀಕ್ಷೆಗಳನ್ನೇ ಸರಿಯಾಗಿ ನಡೆಸಲಾಗಿಲ್ಲ, ನಮ್ಮ ದೇಶದಲ್ಲೀಗ ಅವರಿಗೆ ಲಸಿಕೆಗಳನ್ನು ನೀಡುತ್ತಲೂ ಇಲ್ಲ.

ಭಾರತದಲ್ಲೀಗ ನೀಡಹೊರಟಿರುವ ಲಸಿಕೆಗಳು ಸೋಂಕಿನೆದುರು ಪರಿಣಾಮಕಾರಿಯೇ, ಸುರಕ್ಷಿತವೇ? ಇವೂ ಕೂಡ ಇನ್ನೂ ದೃಢ ಪಟ್ಟಿಲ್ಲ. ಅಮೆರಿಕ, ಬ್ರಿಟನ್, ಇಸ್ರೇಲ್ ಮುಂತಾದ ದೇಶಗಳಲ್ಲೀಗ ತುರ್ತು ಸ್ಥಿತಿಯೆಂದು ನೀಡಲಾಗುತ್ತಿರುವ ಫೈಝರ್ ಮತ್ತು ಮೊಡರ್ನಾ ಕಂಪೆನಿಗಳ ಎಂಆರ್‌ಎನ್‌ಎ ಲಸಿಕೆಗಳು ಶೇ. 90ಕ್ಕಿಂತ ಹೆಚ್ಚು ಪರಿಣಾಮಕಾರಿಯೆಂದೂ, ಸಾಕಷ್ಟು ಸುರಕ್ಷಿತವೆಂದೂ ವರದಿಗಳಾಗಿವೆ. ಆದರೆ 55 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಇವನ್ನೂ ಪರೀಕ್ಷಿಸಿಲ್ಲ. ಈ ಲಸಿಕೆಗಳು ಇಲ್ಲಿ ಲಭ್ಯವೂ ಇಲ್ಲ. ಆಕ್ಸ್‌ಫರ್ಡ್ ಲಸಿಕೆಯ ಬಗ್ಗೆ ಬ್ರಿಟನ್, ದಕ್ಷಿಣ ಆಫ್ರಿಕ ಮತ್ತು ಬ್ರೆಝಿಲ್‌ಗಳಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಅವು ಶೇ. 60-70 ಪರಿಣಾಮಕಾರಿಯೆಂದೂ, ಸಾಕಷ್ಟು ಸುರಕ್ಷಿತವೆಂದೂ ಕಂಡುಬಂದಿದೆ, ಅದಕ್ಕೀಗ ಬ್ರಿಟನ್‌ನಲ್ಲಿ ಅನುಮತಿ ನೀಡಲಾಗಿದೆ.

ಇದೇ ಆಕ್ಸ್ ಫರ್ಡ್ ಲಸಿಕೆ ಇಲ್ಲೀಗ ಕೋವಿಶೀಲ್ಡ್ ಹೆಸರಲ್ಲಿ ಬಳಕೆಗೆ ಬಂದಿದೆ; ಆದರೆ ಭಾರತದಲ್ಲಿ ನಡೆದಿರುವ ಅದರ ಪರೀಕ್ಷೆಗಳ ಫಲಿತಾಂಶಗಳಿನ್ನೂ ಪ್ರಕಟವಾಗಿಲ್ಲ, ಭಾರತೀಯರಲ್ಲಿ ಅದು ಹೇಗೆ ವರ್ತಿಸುತ್ತದೆನ್ನುವುದು ಇನ್ನೂ ತಿಳಿದಿಲ್ಲ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ಯಾವ ಹಂತದ ಪರೀಕ್ಷೆಗಳ ವರದಿಗಳೂ ಲಭ್ಯವಿಲ್ಲ. ಇದುವರೆಗೆ ಪ್ರಕಟವಾಗಿರುವ ವರದಿಗಳಲ್ಲಿ ಎಲ್ಲಾ ಲಸಿಕೆಗಳನ್ನು ಎರಡೆರಡು ಡೋಸ್‌ಗಳಲ್ಲಿ ಪಡೆಯಬೇಕೆಂದೂ, ಎರಡನೇ ಡೋಸ್ ಪಡೆದು ಎರಡು ವಾರಗಳ ಬಳಿಕವಷ್ಟೇ ರೋಗಲಕ್ಷಣಗಳ ವಿರುದ್ಧ ರಕ್ಷಣೆ ದೊರೆಯಬಹುದೆಂದೂ, ಆದರೆ ಸೋಂಕು ತಗಲದಂತೆ ರಕ್ಷಣೆ ದೊರೆಯುತ್ತದೆನ್ನುವುದು ಇನ್ನೂ ದೃಢಗೊಂಡಿಲ್ಲವೆಂದೂ ಹೇಳಲಾಗಿದೆ. ಒಟ್ಟಿನಲ್ಲಿ ಶೇ. 99 ಜನರಲ್ಲಿ ತಾನಾಗಿ ವಾಸಿಯಾಗುವ, ಹತ್ತು ಸಾವಿರಕ್ಕೆ 7 (ಶೇ. 0.07) (ನಮ್ಮ ದೇಶದಲ್ಲಿ 90-100 ಕೋಟಿ ಪ್ರಕರಣಗಳಲ್ಲಿ ಮೃತರು ಒಂದೂವರೆ ಲಕ್ಷದಷ್ಟು, ಶೇ. 0.016) ಸೋಂಕಿತರಲ್ಲಿ ಮಾರಣಾಂತಿಕವಾಗುವ ಸೋಂಕಿಗೆ ಇಷ್ಟೊಂದು ತುರ್ತಾಗಿ, ಸರಿಯಾಗಿ ಪರೀಕ್ಷೆಗಳೇ ಆಗದ ಲಸಿಕೆಗಳನ್ನು ಪ್ರಾಯೋಗಿಕವಾಗಿ ನೀಡಬೇಕೇ?

ಎಲ್ಲಾ ಕೊರೋನ ಯೋಧರಿಗೂ ಈ ಲಸಿಕೆಗಳ ಅಗತ್ಯವಿದೆಯೇ ಎನ್ನುವುದಕ್ಕೂ ಆಡಳಿತದ ಬಳಿ ಉತ್ತರಗಳಿಲ್ಲ. ಅಕ್ಟೋಬರ್ ವೇಳೆಗೆ ಸುಮಾರು ಶೇ. 30 ಆರೋಗ್ಯಕರ್ಮಿಗಳು ಕೊರೋನದಿಂದ ಸೋಂಕಿತರಾಗಿದ್ದಾರೆಂಬ ವರದಿಗಳಾಗಿದ್ದು, ಈಗ ಇನ್ನಷ್ಟು ಆರೋಗ್ಯ ಕರ್ಮಿಗಳು ಸೋಂಕಿತರಾಗಿರಬಹುದು. ಈಗಾಗಲೇ ಸೋಂಕಿತರಾದವರನ್ನು ಗುರುತಿಸುವ ವ್ಯವಸ್ಥೆಯನ್ನಾಗಲೀ, ಅವರಿಗೆ ಲಸಿಕೆ ನೀಡಬೇಕೇ ಬೇಡವೇ ಎಂಬ ಬಗ್ಗೆ ದೃಢವಾದ ನೀತಿಯನ್ನಾಗಲೀ ಸರಕಾರವು ಮಾಡಿದಂತಿಲ್ಲ. ಆರೋಗ್ಯ ಸೇವೆಗಳಲ್ಲಿರುವವರ ಪೈಕಿ ಕೊರೋನದಿಂದ ಹೆಚ್ಚಿನ ಸಮಸ್ಯೆಗೀಡಾಗಬಲ್ಲ ಹಿರಿಯ ವಯಸ್ಕರು ಮತ್ತು ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅದ್ಯತೆಯ ಮೇಲೆ ಲಸಿಕೆ ನೀಡುವ ಯೋಜನೆಯೂ ಇದ್ದಂತಿಲ್ಲ.

ಈಗ ಮುಂಚೂಣಿ ಕಾರ್ಯಕರ್ತರಿಗಷ್ಟೇ ಲಸಿಕೆಯನ್ನು ನೀಡಲಾಗುತ್ತಿದ್ದು, ಸರಕಾರದ ವತಿಯಿಂದ ಬೇರೆ ಯಾರಿಗೂ ಲಸಿಕೆಯನ್ನು ನೀಡುವ ಯೋಜನೆಯೂ ಇದ್ದಂತಿಲ್ಲ. ಜನಸಾಮಾನ್ಯರು ಲಸಿಕೆಯನ್ನು ಹಾಕಿಸಿಕೊಳ್ಳಬೇಕಾದರೆ ಇನ್ನೂ ಆರೇಳು ತಿಂಗಳು ಕಾಯಬೇಕಾಗಬಹುದು ಮತ್ತು ಪ್ರತಿಯೊಬ್ಬರೂ ರೂ. ಎರಡು ಸಾವಿರ ಅಥವಾ ಅದಕ್ಕೂ ಹೆಚ್ಚು ಹಣವನ್ನು ತೆರಬೇಕಾಗಬಹುದು. ಫೈಝರ್, ಮೊಡರ್ನಾ, ರಶ್ಯದ ಸ್ಪುಟ್ನಿಕ್ ಲಸಿಕೆಗಳಿಗೂ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳೂ ಇಲ್ಲಿ ಲಭ್ಯವಾಗಬಹುದು. ಅಷ್ಟರಲ್ಲಿ ಇನ್ನೊಂದಷ್ಟು ಜನರಿಗೆ ಸೋಂಕೇ ಹರಡಿ ಅವರಲ್ಲೂ ರೋಗ ರಕ್ಷಣೆ ಉಂಟಾಗಬಹುದು!

ಒಟ್ಟಿನಲ್ಲಿ, ವಿಜ್ಞಾನ-ತಂತ್ರಜ್ಞಾನಗಳ ಸಾಧನೆಯಿಂದ ಹೊಸ ಕೊರೋನ ಸೋಂಕಿನ ಬಗ್ಗೆ ಅಗಾಧ ಮಾಹಿತಿಯೆಲ್ಲವೂ ಎರಡೇ ತಿಂಗಳಲ್ಲಿ ಲಭ್ಯವಾಗಿದ್ದರೂ ಅಜ್ಞಾನ, ಅವೈಚಾರಿಕತೆ ಮತ್ತು ರಾಜಕೀಯ ಮೇಲಾಟಗಳಿಂದ ಲಾಕ್‌ಡೌನ್ ಮಾಡಿ ಇಡೀ ದೇಶವೇ ಅಪಾರ ಕಷ್ಟನಷ್ಟಗಳಿಗೀಡಾಗುವಂತಾಯಿತು; ಈಗ ಅದೇ ವಿಜ್ಞಾನ-ತಂತ್ರಜ್ಞಾನಗಳು ಒಂದೇ ವರ್ಷದಲ್ಲಿ ಹಲವು ಲಸಿಕೆಗಳನ್ನು ತಯಾರಿಸಿದ್ದರೂ, ವ್ಯಾಪಾರಿ ಹಿತಾಸಕ್ತಿಗಳ ಲಾಭ ಗಳಿಸುವ ಒತ್ತಡಗಳು ಮತ್ತು ಅದೇ ರಾಜಕೀಯ ಮೇಲಾಟಗಳು ವೈಜ್ಞಾನಿಕ ಪರೀಕ್ಷೆಗಳನ್ನೂ, ನೈತಿಕ ಆದರ್ಶಗಳನ್ನೂ ಬದಿಗೊತ್ತಿ ಲಸಿಕೆಗಳನ್ನು ಜನರ ಮೇಲೆ ಹೇರಹೊರಟಿವೆ. ಹಾಗಿರುವಾಗ, ಪ್ರತಿಯೋರ್ವರೂ ತಮ್ಮ ಸ್ವಂತ ವಿವೇಚನೆಯನ್ನು ಬಳಸಿ ಲಸಿಕೆ ಪಡೆಯಬೇಕೇ ಬೇಡವೇ ಎಂದು ನಿರ್ಧರಿಸಿದರೆ ಒಳ್ಳೆಯದು. ಈಗ ಲಸಿಕೆ ಪಡೆಯಬಲ್ಲವರ ಪಟ್ಟಿಯೊಳಗಿರುವವರು ಎರಡರಲ್ಲಿ ಯಾವ ಲಸಿಕೆ ಎಂಬ ಆಯ್ಕೆ ಮಾಡುವಂತಿಲ್ಲದಿದ್ದರೂ, ಲಸಿಕೆ ಕಡ್ಡಾಯವಲ್ಲ ಎಂದು ಸರಕಾರವೇ ಹೇಳಿದೆ ಎನ್ನುವುದನ್ನು ನೆನಪಿಟ್ಟುಕೊಂಡು ನಿರ್ಧರಿಸಿದರೆ ಸಾಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top