ಕೃಷಿ ವಿಹೀನನ ದೇಶವದು ದುರ್ದೇಶ | Vartha Bharati- ವಾರ್ತಾ ಭಾರತಿ

--

ಕೃಷಿ ವಿಹೀನನ ದೇಶವದು ದುರ್ದೇಶ

ಪ್ರತಿಭಟಿಸುತ್ತಿರುವ ರೈತರು ತಮಗಾಗಿ ಮಾತ್ರ ಪ್ರತಿಭಟಿಸುತ್ತಿಲ್ಲ. ದೇಶಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ನಗರಗಳ ನಮ್ಮೆಲ್ಲರ ರಕ್ಷಣೆಗಾಗಿ ಪ್ರತಿಭಟಿಸುತ್ತಿದ್ದಾರೆ ದಯಮಾಡಿ ಅರ್ಥಮಾಡಿಕೊಳ್ಳಿ. ಹೇಗೆ ಗೊತ್ತೆ? ಎಪಿಎಂಸಿ ಕಾಯ್ದೆಯ ನಂತರ ಮತ್ತೊಂದು ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದಾರೆ. ಅದು ಅಗತ್ಯ ವಸ್ತುಗಳ ಕಾಯ್ದೆ. ಅದರಲ್ಲಿ ಮನುಷ್ಯರು ಬದುಕಲಿಕ್ಕೆ ತಿನ್ನಬಹುದಾದ ಆಹಾರ ಧಾನ್ಯಗಳು, ಎಣ್ಣೆ, ಕಾಳುಗಳು, ಬೇಳೆಗಳು ಮುಂತಾದವುಗಳನ್ನು ಗೋಡೌನುಗಳಲ್ಲಿ ಸಂಗ್ರಹಿಸುವುದಕ್ಕೆ ಈ ಮೊದಲು ಒಂದು ಮಿತಿ ಇತ್ತು. ಈಗ ಆ ಮಿತಿ ತೆಗೆದು ಹಾಕಿದ್ದಾರೆ. ಯಾರು ಎಷ್ಟು ಬೇಕಾದರೂ ಸಂಗ್ರಹಿಸಿಡಬಹುದು. ಇದರಿಂದ ರೈತರಿಗೂ ಗ್ರಾಹಕರಿಬ್ಬರಿಗೂ ಭೀಕರ ಹೊಡೆತ ಬೀಳುತ್ತದೆ.


ದೇಶದ ರೈತರು ಇಂದು ಅತ್ಯಂತ ಹತಾಶರಾಗಿ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ಏಕೆ ನಡೆಯುತ್ತಿದೆಯೆಂದು ಅನೇಕರಿಗೆ ಗೊತ್ತಿದೆ. ಗೊತ್ತಿಲ್ಲದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ರಾಜ್ಯದ, ನಮ್ಮ ದೇಶದ ಅಸಂಖ್ಯಾತ ಜನರು ಅತ್ಯಂತ ಮೂಲಭೂತ ಅಗತ್ಯಗಳಾದ ಅನ್ನ, ಬಟ್ಟೆ, ಆರೋಗ್ಯ, ಶಿಕ್ಷಣ ಹೀಗೆ ದೈನಂದಿನ ವಿಚಾರಗಳಲ್ಲಿ ಮುಳುಗಿದ್ದಾರೆ. ದೇಶದ ಆಗು ಹೋಗುಗಳ ಕುರಿತು ಆಸಕ್ತಿ ಇರುವವರು ಮಾಹಿತಿಯನ್ನು ಹುಡುಕಿ ಅಥವಾ ಕೇಳಿ ಪಡೆದುಕೊಂಡು ಸತ್ಯ ಯಾವುದು, ಸುಳ್ಳು ಯಾವುದು ಎಂದು ಪರಾಮರ್ಶಿಸಿ ವಿಚಾರವಂತರಾಗುತ್ತಿದ್ದಾರೆ. ಉಳಿದವರು ಮಾಧ್ಯಮಗಳು ಏನು ಹೇಳುತ್ತವೆ? ತಿಳಿದವರು ಏನು ಹೇಳುತ್ತಾರೆ? ಎಂದು ಎದುರು ನೋಡುತ್ತಿದ್ದಾರೆ. ಹಾಗಾಗಿ ನಾಡು ಕಟ್ಟುವ ಕೆಲಸದಲ್ಲಿ ತಿಳಿದವರು ಮತ್ತು ಮಾಧ್ಯಮಗಳ ಪಾತ್ರ ಅತ್ಯಂತ ನಿರ್ಣಾಯಕವಾದುದು. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಈ ಇಬ್ಬರ ಪಾತ್ರವೂ ತುಂಬ ಪ್ರಮುಖವಾದುದು. ಸರಿ ಯಾವುದು? ತಪ್ಪು ಯಾವುದು? ಆಡಳಿತ ನಡೆಸುವವರು ರಾಜ್ಯ-ದೇಶಗಳ ಹಿತಾಸಕ್ತಿಯನ್ನು ರಕ್ಷಿಸುತ್ತಿದ್ದಾರಾ? ದೀನ-ದುರ್ಬಲರು, ದಮನಕ್ಕೆ ಒಳಗಾದವರು, ಧ್ವನಿ ಇಲ್ಲದವರ ಹಿತಾಸಕ್ತಿಯನ್ನು ರಕ್ಷಿಸಲಾಗುತ್ತಿದೆಯೇ? ಅಥವಾ ಕೆಲವೇ ಜನ ಧನಾಢ್ಯರು, ಬಲಾಢ್ಯರು ಮಾತ್ರ ಸುಖದಿಂದ ಇರಲು, ಅವರ ಸಂಪತ್ತು ಹೆಚ್ಚಿಸಲು ಸರಕಾರಗಳು ನೀತಿ ನಿಯಮಗಳನ್ನು ರೂಪಿಸುತ್ತಿವೆಯೇ ಎಂಬ ಕುರಿತು ತಿಳಿದವರು ಮತ್ತು ಮಾಧ್ಯಮಗಳು ಅರಿತು ಜನರಿಗೆ ಸತ್ಯ ತಿಳಿಸಬೇಕು. ತಿಳಿದ ಜನರು ಹೇಗೆ ವರ್ತಿಸಬೇಕು ಎಂಬುದಕ್ಕೆ ದೊಡ್ಡವರು ಒಂದು ಮಾತನ್ನು ಹೇಳುತ್ತಾರೆ.

ಸಾಧಾರಣವಾಗಿ ಕಾಡಿನ ಎತ್ತರದ ಮರಗಳ ಮೇಲೆ ಕೂರುವ ಹಕ್ಕಿಗಳಿಗೆ ಹೋಲಿಸಲಾಗುತ್ತದೆ. ಮರದ ತುದಿಯಲ್ಲಿ ಕುಳಿತ ಹಕ್ಕಿಗಳಿಗೆ ಕಾಡಿನ ಪ್ರತಿ ಜೀವಿಯ ಚಲನ ವಲನಗಳು ಅರಿವಿಗೆ ಬರುತ್ತವೆ. ಜಿಂಕೆ, ಮೊಲ, ಕುರಿ, ಕೋಳಿ, ನವಿಲು ಮುಂತಾದ ದುರ್ಬಲ ಪ್ರಾಣಿಗಳು ಹೊಟ್ಟೆೆ ತುಂಬಿಸಿಕೊಳ್ಳುವ ಕೆಲಸದಲ್ಲಿದ್ದಾಗ, ಮೊಟ್ಟೆಗೆ ಕಾವು ಕೊಡುತ್ತಿದ್ದಾಗ, ಮರಿಗಳನ್ನು ಪೋಷಿಸುತ್ತಿದ್ದಾಗ ಹುಲಿ, ಸಿಂಹ, ಚಿರತೆ, ತೋಳಗಳಂತಹ ಬಲಾಢ್ಯ ಪ್ರಾಣಿಗಳು ಹೊಂಚು ಹಾಕಿ ನುಗ್ಗಿ ಬರುವಾಗ ಮರದ ತುದಿಯ ಮೇಲೆ ಕುಳಿತ ಹಕ್ಕಿಗಳು ತಮ್ಮದೇ ಭಾಷೆಯಲ್ಲಿ ಕೂಗಲಾರಂಭಿಸುತ್ತವೆ. ಆ ಕೂಗು ದುರ್ಬಲ ಪ್ರಾಣಿಗಳಿಗೆ ಎಚ್ಚರಿಕೆಯ ಗಂಟೆ. ಆಗ ಹುಲ್ಲು ಮೇಯುತ್ತಿದ್ದ ದುರ್ಬಲ ಪ್ರಾಣಿಗಳೆಲ್ಲ ತಮ್ಮ ರಕ್ಷಣೆಯನ್ನು ತಾವು ಮಾಡಿಕೊಳ್ಳುತ್ತವೆ. ಮಕ್ಕಳು ಮರಿಗಳನ್ನು ಕಾಪಾಡಿಕೊಳ್ಳುತ್ತವೆ. ತಿಳಿದವರು ಇಂದು ಮಾಡಬೇಕಾದ ಕೆಲಸ ಇದು. ಈ ತಿಳಿದವರನ್ನೇ ಬುದ್ಧಿವಂತರು, ಸಮಾಜ ಚಿಂತಕರು ಎನ್ನುವುದು. ಹುಲಿ, ಸಿಂಹ, ಹೆಬ್ಬಾವು, ತೋಳಗಳಾದರೂ ಹೊಟ್ಟೆ ತುಂಬಿದ ಮೇಲೆ ಇನ್ನೊಂದು ತುತ್ತಿಗೂ ಆಸೆ ಪಡಲಾರವು.

ಮನುಷ್ಯನ ಆಸೆಗೆ ಕೊನೆಯೇ ಇಲ್ಲವಲ್ಲ. ನೀವೇ ನೋಡಿದ್ದೀರಿ. ಇಡೀ ದೇಶ ಕೊರೋನದಿಂದ ನರಳುತ್ತಿದ್ದಾಗ ಅಂಬಾನಿ ಮುಂತಾದವರ ಸಂಪತ್ತು ಯಾವ ರೀತಿ ಬೆಳೆಯಿತು ಎಂದು. ಜನ ಅನ್ನಕ್ಕೆ ಪರದಾಡುತ್ತಿದ್ದಾಗ ಪ್ರತಿ ಸೆಕೆಂಡಿಗೂ ಇವರ ಸಂಪತ್ತು ಹೆಚ್ಚಿತು. ಆದರೂ ಅವರ ದಾಹ ಇಂಗುವುದಿಲ್ಲ. ನಾವು ಎಷ್ಟೊಂದು ಉದಾರಿಗಳು ಎಂದರೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡುತ್ತಾರೆ. ಅದರಲ್ಲಿ ನಮ್ಮವರು ಎಷ್ಟು ಜನ ಇದ್ದಾರೆ, ಎಷ್ಟನೇ ಸ್ಥಾನದಲ್ಲಿದ್ದಾರೆ ಎಂದು ಕುತೂಹಲದಿಂದ ನೋಡುತ್ತೇವೆ. ಹಾಗೆ ನೋಡುವುದು ತಪ್ಪೇನೂ ಅಲ್ಲ. ಆದರೆ ಅದೇ ಸಮಯದಲ್ಲಿ ನನ್ನ ದೇಶದ ಜನರ ತಟ್ಟೆಯಲ್ಲಿ ಹೊಟ್ಟೆ ತುಂಬುವಷ್ಟು ಅನ್ನವಿತ್ತೇ? ಮಕ್ಕಳ ಸ್ಕೂಲು ಬ್ಯಾಗಿನಲ್ಲಿ ಪುಸ್ತಕಗಳಿದ್ದವೇ? ಮಕ್ಕಳ ಊಟದ ಡಬ್ಬಿಯಲ್ಲಿ ಒಂದು ಹಣ್ಣೋ, ಇಲ್ಲ ಅರ್ಧ ಮೊಟ್ಟೆಯಾದರೂ ಇತ್ತೇ? ದುಡಿಯಬೇಕಾದವರ ಕೈಯಲ್ಲಿ ಉದ್ಯೋಗವಿತ್ತೇ? ರೈತನಲ್ಲಿ ಬೀಜ, ಗೊಬ್ಬರಕ್ಕೆ ಹಣ ಇತ್ತೇ? ರೈತ ಬೆಳೆದದ್ದಕ್ಕೆ, ಅವನ ಬೆವರಿಗೆ ನ್ಯಾಯ ಸಿಕ್ಕಿತೇ? ಗಂಡನ, ಮಕ್ಕಳ ಔಷಧಿಗೆ ಹೆಣ್ಣು ಮಕ್ಕಳ ಕೈಯಲ್ಲಿ ಮೂರು ಕಾಸಿದ್ದವೇ? ಮಗುವಿನ ಸಣ್ಣ ಆಸೆಯಾದ ಆಟದ ಗೊಂಬೆ, ಸಣ್ಣ ಮೂರು ಚಕ್ರದ ಸೈಕಲ್ ಕೊಡಿಸಲು ಸಾಧ್ಯವಾಯಿತೇ? ಮನೆ ಮನೆಗಳಲ್ಲಿ ಆತಂಕವಿಲ್ಲದೆ ದೀಪ ಉರಿಯಿತೇ? ಇವೆಲ್ಲವನ್ನೂ ನಾಡಿನ ತಿಳುವಳಿಕಸ್ಥರು ಗಮನಿಸಬೇಕು. ಮಾಧ್ಯಮಗಳು ತಾಯಿ ಕಣ್ಣಿನಿಂದ ನೋಡಬೇಕು. ಆಡಳಿತ ನಡೆಸುವವರಿಗೆ ತಾಯಿ ಹೃದಯ ಇರಬೇಕು. ನಾನು ಇವರೆಲ್ಲರಿಗೂ ಇಲ್ಲವೇ ಇಲ್ಲ ಎಂದು ಹೇಳುತ್ತಿಲ್ಲ. ಇರಬೇಕಾದಷ್ಟು ಪ್ರಮಾಣದಲ್ಲಿ ನಮ್ಮಿಳಗೆ ಇವೆಯೇ ಎಂದು ಪರಿಶೀಲಿಸಿಕೊಳ್ಳಬೇಕಾಗಿದೆ.

 ದೇಶದ ಕೆಲವು ಭಾಗಗಳಲ್ಲಿ ಒಂದು ಮಾತಿದೆ. ಹಿಂದೆ ಯಥೇಚ್ಛವಾಗಿ ಕಸ್ತೂರಿ ಮೃಗ ಎಂಬ ಅಮಾಯಕ ಪ್ರಾಣಿಗಳಿದ್ದವು. ಈಗ ತೀರಾ ವಿರಳವಾಗಿವೆಯಂತೆ. ಅವುಗಳು ಬೇಟೆಗಾರರನ್ನು ನೋಡಿ ಹೆದರಿ ತಪ್ಪಿಸಿಕೊಳ್ಳುತ್ತವೆ. ತಪ್ಪಿಸಿ ಓಡಿ ಹೋಗಿ ಅವಿತುಕೊಂಡ ಪ್ರಾಣಿಗಳನ್ನು ಬಯಲಿಗೆ ತರಲು ಅತ್ಯಂತ ನುರಿತ ಕೊಳಲುವಾದಕರು ಕೊಳಲು ನುಡಿಸುತ್ತಾರಂತೆ. ಕೊಳಲ ಗಾಯನಕ್ಕೆ ಮರುಳಾದ ಕಸ್ತೂರಿ ಮೃಗಗಳು ನಿಧಾನಕ್ಕೆ ಹೊರಬರುತ್ತವೆಯಂತೆ. ಆಗ ಬೇಟೆಗಾರರು ಬಾಣ ಬಿಟ್ಟು ಕೊಲ್ಲುತ್ತಾರಂತೆ. ಈಗ ಹೇಳಿ ತಿಳಿದ ಜನರು ಮರದ ಮೇಲೆ ಕೂತು ಅಮಾಯಕ ಪ್ರಾಣಿಗಳನ್ನು ಎಚ್ಚರಿಸುವ ಹಕ್ಕಿಗಳಾಗಬೇಕೋ? ಇಲ್ಲ ಅವಿತುಕೊಂಡ ಅಮಾಯಕ ಪ್ರಾಣಿಗಳನ್ನು ಹಾಡಿ ಕೊಲ್ಲುವವರಾಗಬೇಕೋ? ಇದನ್ನು ನಾಡಿನ ಎಲ್ಲ ಜನರು ತೀರ್ಮಾನಿಸಬೇಕು.

ದೇಶದ ರೈತರು ಕಣ್ಣಲ್ಲಿ ನೀರು ಹಾಕಿ ರೋದಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರು ಯಾಕೆ ಕಣ್ಣೀರು ಹಾಕುತ್ತಿದ್ದಾರೆ? ದಿಲ್ಲಿಯ ಮೈನಸ್ ಡಿಗ್ರಿ ಚಳಿಯಲ್ಲಿ ವಯಸ್ಸಾದವರು, ಅಸಹಾಯಕರು, ಯುವಕರು ಕೂತು ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಸುಮಾರು 140 ಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಯಾಕೆ ಹುತಾತ್ಮರಾದರು? ಸಾವೆಂಬುದು ಅಷ್ಟೊಂದು ಸರಳವೇ ಅವರಿಗೆ? ರೈತರ ಸಾವಿಗೆ ಎಂಥೆಂಥ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಮಧ್ಯಮ ವರ್ಗದ ನಗರಗಳಲ್ಲಿನ ನಾವು ಅರ್ಥ ಮಾಡಿಕೊಂಡಿದ್ದೇವೆಯೇ? ಯಾರೋ ಕೆಲವು ಕಿಡಿಗೇಡಿಗಳು ಜನವರಿ 26ರಂದು ಕೆಂಪು ಕೋಟೆಯ ಬಳಿ ಬಾವುಟ ಹಾರಿಸಿದರು, ದಾಂಧಲೆ ಮಾಡಿದರು. ದಾಂಧಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ನಿಜ. ದಿಲ್ಲಿಯ ಬೀದಿ ಬೀದಿಗಳಲ್ಲಿ ಸಿಸಿ ಕ್ಯಾಮರಾಗಳಿವೆ ಎಂದು ಕೇಳಿದ್ದೇನೆ. ಅವುಗಳ ಮೂಲಕ ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಲಿ. ಕೆಂಪು ಕೋಟೆಯ ಆವರಣಕ್ಕೆ ಹೋದವರೆಷ್ಟು ಜನ? ಹೆಚ್ಚೆಂದರೆ ಒಂದೆರಡು ಸಾವಿರ ಜನರಿರಬಹುದು. ಉಳಿದಂತೆ ಪೊಲೀಸರು ವಿಧಿಸಿದ್ದ ನಿಯಮಗಳಂತೆ ನಡೆದುಕೊಂಡು ರ್ಯಾಲಿ ನಡೆಸಿದ 10 ಲಕ್ಷ ರೈತರನ್ನು ಯಾವ ನಾಲಿಗೆಯಲ್ಲಿ ದೇಶದ್ರೋಹಿಗಳು ಎನ್ನುವುದು? ಆತ್ಮ, ಹೃದಯಗಳನ್ನು ಮಾರಿಕೊಂಡ, ಒತ್ತೆ ಇಟ್ಟುಕೊಂಡ ಜನದ್ರೋಹಿಗಳು ಮಾತ್ರವೇ ಈ ಮಾತುಗಳನ್ನಾಡಲು ಸಾಧ್ಯ ಅಲ್ಲವೆ? ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ? ದೇಶ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾಗ ಲಾಲ್ ಬಹುದ್ದೂರ್ ಶಾಸ್ತ್ರಿಯವರು ‘‘ಜೈ ಜವಾನ್ ಜೈ ಕಿಸಾನ್’’ ಘೋಷಣೆ ಕೊಟ್ಟರು. ಡಾ. ಬಾಬು ಜಗಜೀವನ್ ರಾಂ ಅವರು, ಇಂದಿರಾ ಗಾಂಧಿಯವರು ಅದಕ್ಕೂ ಮೊದಲು ನೆಹರೂ ಅವರು ವಿಶೇಷ ಕಾಳಜಿ ವಹಿಸಿ ಹಸಿರು ಕ್ರಾಂತಿ ಯೋಜನೆ ರೂಪಿಸಿದರು. ನಮ್ಮ ವಿಜ್ಞಾನಿಗಳು ರೈತರೊಂದಿಗೆ ಹಗಲಿರುಳು ದುಡಿದರು. ನನ್ನ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅಮೆರಿಕದ ಮುಗ್ಗಲು, ಹುಳ ಹಿಡಿದ ಗೋಧಿಯನ್ನು ಬೊಗಸೆಯೊಡ್ಡಿ ಪಡೆದುಕೊಂಡ ಪರಿಸ್ಥಿತಿ ಇತ್ತು. ಇದ್ದ ಬದ್ದದ್ದನ್ನೆಲ್ಲ ಬ್ರಿಟಿಷರು ಲೂಟಿ ಮಾಡಿದ್ದರು. ಅಸಂಖ್ಯಾತ ಜನರು ಹೊಟ್ಟೆಗಿಲ್ಲದೆ ಮರಣ ಹೊಂದಿದರು. ಅಂಥ ನನ್ನ ದೇಶವನ್ನು ಹೆಮ್ಮೆಯ ರೈತರು ಹಗಲೂ ರಾತ್ರಿ ದುಡಿದು ಇಡೀ ಜಗತ್ತಿನೆದುರು ತಲೆ ಎತ್ತಿ ನಿಲ್ಲುವಂತೆ ಮಾಡಿದರು. ಇಂಥ ರೈತರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಎಂದರೆ ನಮ್ಮ ಬಾಯಲ್ಲಿ ಹುಳು ಬೀಳುವುದಿಲ್ಲವೇ? ಸತ್ತ ಮೇಲಾದರೂ ನಮಗೆ ಸದ್ಗತಿ ದೊರೆಯಬಾರದೇ? ರೈತರು ತಮ್ಮ ಮನೆಗೆ ಬೆಂಕಿ ಬಿದ್ದಿದೆ ಎಂದು ಗೋಳಾಡುತ್ತಿದ್ದರೆ ಅವರನ್ನು ನಿಂದಿಸುತ್ತಾ ಕೂರುವುದನ್ನು ಮಾನವೀಯತೆ ಎನ್ನಲಾದೀತೆ?

  ಬಾಯಿ ಮಾತಲ್ಲಿ ಮಾತ್ರ ದೇಶ ಪ್ರೇಮದ ಬಗ್ಗೆ ಬರೀ ಭಾಷಣ ಮಾಡುವ ಬಿಜೆಪಿಯವರು ಮೊನ್ನೆ, ‘‘ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಅತಿ ಹೆಚ್ಚು ಆತ್ಮಹತ್ಯೆಗಳಾದವು’’ ಎಂದು ಟ್ವೀಟ್ ಮಾಡಿದ್ದರು. ಇದನ್ನು ತಿಳುವಳಿಕೆಯುಳ್ಳ ನಾಡಿನ ಜನರು ಪರಿಶೀಲಿಸಿ ನೋಡಿದರೆ ಸತ್ಯ ತಿಳಿಯುತ್ತದೆ. ಅತಿ ಹೆಚ್ಚು ಆತ್ಮಹತ್ಯೆಗಳಾಗಿರುವುದು ಬಿಜೆಪಿ ಸರಕಾರಗಳಿದ್ದ ಮಹಾರಾಷ್ಟ್ರ, ಮಧ್ಯ ಪ್ರದೇಶ ಮುಂತಾದ ರಾಜ್ಯಗಳಲ್ಲಿ. ಇಷ್ಟಕ್ಕೂ ಯಾಕೆ ಆತ್ಮಹತ್ಯೆಗಳಾದವು? ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ರೇಷ್ಮೆಯ ಮೇಲಿನ ಆಮದು ತೆರಿಗೆಯನ್ನು ಶೇ.5 ಕ್ಕೆ ಇಳಿಸಿದರು. ನಮ್ಮ ರೇಷ್ಮೆಗೆ ಬೆಲೆ ಕುಸಿಯಿತು. ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬಿತ್ತು. ಮಲೇಶಿಯಾ ಮುಂತಾದ ದೇಶಗಳಿಂದ ದೊಡ್ಡ ಮಟ್ಟದಲ್ಲಿ ಎಣ್ಣೆ, ಸೋಯಾ ಕಾಳುಗಳನ್ನು ಆಮದು ಮಾಡಿಕೊಂಡರು. ದೇಶದಲ್ಲಿ ಎಣ್ಣೆ ಕಾಳು ಬೆಳೆಯುವ ಮಧ್ಯ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ರೈತರ ಬದುಕಿಗೆ ಗಂಡಾಂತರ ಒದಗಿತು. ಇದರ ಜೊತೆಯಲ್ಲಿ ದೇಶದ ಅನೇಕ ಕಡೆ ಭೀಕರ ಬರಗಾಲ ಬಂತು. ರೈತರ ಸಾಲ ಮನ್ನಾ ಮಾಡಿ ಎಂದು ಕೈ ಮುಗಿದು ಕೇಂದ್ರವನ್ನು ರಾಜ್ಯಗಳು ಕೇಳಿಕೊಂಡವು.

ಮೋದಿಯವರು ರೈತರ ಸಾಲ ಮನ್ನಾ ಮಾಡುವ ಬದಲಾಗಿ ದೊಡ್ಡ ಕೈಗಾರಿಕೋದ್ಯಮಿಗಳ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಿ ಅದನ್ನು ಎನ್ ಪಿ ಎ ಎಂದು ಮಾಫಿ ಮಾಡಿಬಿಟ್ಟರು. ನೀವೆಲ್ಲರೂ ನೋಡುತ್ತಿದ್ದೀರಿ. ಇನ್ನಷ್ಟು ವಿಶಾಲ ಮನಸ್ಸಿನಿಂದ ನೋಡಿ ಕೇಂದ್ರದ ಪಾಲಿಸಿಗಳು ಯಾರ ಪರವಾಗಿವೆ ಎಂದು. ಬಡವರ ಪರವಾಗಿವೆ ಎಂದು ನನಗಂತೂ ಅನ್ನಿಸುತ್ತಿಲ್ಲ. ಅಡುಗೆ ಅನಿಲದ ಬೆಲೆ ಗಗನಕ್ಕೇರಿದೆ. ಯುಪಿಎ ಸರಕಾರದ ಅಂತ್ಯದ ವೇಳೆಗೆ ಪೆಟ್ರೋಲ್ ಮೇಲೆ ಕೇಂದ್ರ ಸರಕಾರ ವಿಧಿಸುತ್ತಿದ್ದ ತೆರಿಗೆ 9.21 ರೂ. ಮಾತ್ರ. ಇದನ್ನು ಈಗ 32.98 ರೂ.ಗೆ ಹೆಚ್ಚಿಸಲಾಗಿದೆ. ಹಾಗೆಯೇ ಡೀಸೆಲ್ ಮೇಲೆ ಮೊದಲಿದ್ದ ತೆರಿಗೆ 3.45 ರೂ. ಮಾತ್ರ. ಈಗ ಇದನ್ನು 31.83 ರೂ.ಗೆ ಹೆಚ್ಚಿಸಲಾಗಿದೆ. ರಾಜ್ಯದಿಂದ ಸ್ಥೂಲವಾಗಿ ನೋಡಿದರೂ ಸುಮಾರು ಎರಡೂವರೆ ಲಕ್ಷಕೋಟಿ ಹಣ ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ 1 ಲಕ್ಷಕೋಟಿ ರೂ. ಆದಾಯ ತೆರಿಗೆ, 83 ಸಾವಿರ ಕೋಟಿ ರೂ. ಜಿಎಸ್‌ಟಿ, 36 ಸಾವಿರ ಕೋಟಿ ರೂ. ಪೆಟ್ರೋಲ್, ಡೀಸೆಲ್ ಮೇಲಿನ ಹೆಚ್ಚುವರಿ (ಅಡಿಷನಲ್) ತೆರಿಗೆ, ಯುಪಿಎ ಸರಕಾರವಿದ್ದಾಗ ಕೇವಲ 3,500 ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹವಾಗುತ್ತಿತ್ತು. 17.5 ಸಾವಿರ ಕೋಟಿ ರೂ. ಕಸ್ಟಮ್ಸ್ ತೆರಿಗೆ ಮುಂತಾದವೆಲ್ಲ ಸೇರಿವೆ. ನಮ್ಮ ಐ.ಟಿ. ರಫ್ತಿನಿಂದ ಬರುವ ತೆರಿಗೆಯನ್ನು, ಸುಂಕವನ್ನು, ಸೆಸ್‌ಗಳನ್ನು ಇದರಲ್ಲಿ ಸೇರಿಸಿಲ್ಲ. ದೇಶದಲ್ಲಿ ಶೇ.40 ಕ್ಕೂ ಹೆಚ್ಚಿನ ಪ್ರಮಾಣದ ರಫ್ತು ನಮ್ಮ ರಾಜ್ಯದಿಂದಲೇ ಆಗುತ್ತದೆ. ಆದರೆ ಕೇಂದ್ರ ನಮಗೆ ಶೇ. 42 ರಷ್ಟು ಕೊಡಬೇಕಲ್ಲವೇ? ಆದರೆ ತೆರಿಗೆ, ಸಹಾಯಧನಗಳ ರೂಪದಲ್ಲಿ ಕೊಡುತ್ತಿರುವುದು ಕೇವಲ 45 ರಿಂದ 50 ಸಾವಿರ ಕೋಟಿ ರೂ. ಮಾತ್ರ. ದೇಶದ ಬೇರೆ ಬೇರೆ ರಾಜ್ಯಗಳೂ ಬೆಳವಣಿಗೆಯಾಗಬೇಕು ನಿಜ. ಅದಕ್ಕೆ ಕೇಂದ್ರ ಉಳಿಸಿಕೊಳ್ಳುವ ಶೇ.58ರಷ್ಟು ನಮ್ಮ ಹಣದಲ್ಲಿ ಉದಾರವಾಗಿ ನೀಡಲಿ ಯಾರು ಬೇಡ ಅಂದವರು?

ರೈತರ ವಿಚಾರಕ್ಕೆ ಬರೋಣ. ರೈತರು ಈಗ ಕೇಂದ್ರವು ಜಾರಿಗೆ ತಂದಿರುವ ಮೂರೂ ಕಾಯ್ದೆಗಳು ನಮ್ಮನ್ನು ನಾಶ ಮಾಡುತ್ತವೆ ಎಂದು ಹೇಳುತ್ತಿದ್ದಾರೆ. ಅವುಗಳನ್ನು ಹಿಂಪಡೆಯಿರಿ ಎಂದು ಪ್ರತಿಭಟಿಸುತ್ತಿದ್ದಾರೆ. ಈ ಕಾಯ್ದೆಗಳು ರೈತರನ್ನು ಉದ್ಧಾರ ಮಾಡುತ್ತವೆ ಎಂದು ಕೇಂದ್ರ ಹೇಳುತ್ತಿದೆ. ತಿಳಿದವರು ಯಾವುದು ಸರಿ ಎಂದು ಯೋಚಿಸಬೇಕಲ್ಲವೆ? ಸರಿ ತಪ್ಪುಗಳ ಕುರಿತು ಜನರಿಗೆ ಹೇಳಬೇಕಲ್ಲವೇ? ಚರ್ಚೆ, ಸಂವಾದ ನಡೆಸುವವರನ್ನೇ ದೇಶದ್ರೋಹಿಗಳು ಎಂದು ಬಿಂಬಿಸಿ ಅನೇಕ ಮಾಧ್ಯಮದವರ ಮೇಲೆ ಕೇಸು ಹಾಕಿಬಿಟ್ಟರೆ ಅದನ್ನು ಪ್ರಜಾಪ್ರಭುತ್ವ ಎನ್ನಲಾದೀತೆ? ರೈತರು ಕೇಳುತ್ತಿರುವುದು ಇಷ್ಟೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೀರಿ. ಯಾರು ಎಲ್ಲಿ ಬೇಕಾದರೂ ಕೊಳ್ಳಬಹುದು, ಮಾರಬಹುದು ಎನ್ನುತ್ತೀರಿ. ಎಪಿಎಂಸಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ತೆರಿಗೆ ಕಟ್ಟಬೇಕು. ಹೊರಗೆ ಖರೀದಿಸುವವರು ತೆರಿಗೆ ಕಟ್ಟುವಂತಿಲ್ಲ. ಹಾಗಾದಾಗ ಯಾರು ಎಪಿಎಂಸಿಗೆ ಬಂದು ಖರೀದಿಸುತ್ತಾರೆ? ಕೊಳ್ಳುವವರು ಇಲ್ಲ ಎಂದ ಮೇಲೆ ಮಾರುವವರು ತಮ್ಮ ಉತ್ಪನ್ನ ಎಲ್ಲಿ ಮಾರುವುದು? ರೈತರು ತಮ್ಮ ಹೊಲ ಗದ್ದೆಗಳಲ್ಲೇ ಮಾರಿದರೆ ಎಷ್ಟು ಬೆಲೆಗೆ ಮಾರಿದರು ಎಂದು ನೋಡುವುದು ಹೇಗೆ? ರೈತರನ್ನು ಒಬ್ಬಂಟಿಗಳಾಗಿಸಿ ಶೋಷಣೆ ಮಾಡಿದರೆ ಅದನ್ನು ಹೇಗೆ ನಿಲ್ಲಿಸುತ್ತೀರಿ? ಉತ್ಪನ್ನಗಳ ಬೆಲೆಯನ್ನು ಹೇಗೆ ನಿರ್ಣಯಿಸುತ್ತೀರಿ? ಎಪಿಎಂಸಿಗಳಿದ್ದರೆ ರೈತರು ತಮ್ಮ ಉತ್ಪನ್ನವನ್ನು ಮಳಿಗೆಗಳಲ್ಲಿಟ್ಟು ಸಾಲ ಪಡೆಯಬಹುದು. ಈಗ ಎಪಿಎಂಸಿಗಳೆಲ್ಲ ಖಾಸಗಿಯವರ ಪಾಲಾದರೆ ರೈತರು ಬದುಕುವುದು ಹೇಗೆ? ಎಪಿಎಂಸಿ ವ್ಯವಸ್ಥೆಯಲ್ಲಿ ಲೋಪಗಳಿಲ್ಲ ಎಂದಲ್ಲ.

ಅವುಗಳನ್ನು ಸರಕಾರ-ರೈತರು ಒಟ್ಟಾಗಿ ಸೇರಿ ಸರಿ ಮಾಡಬೇಕಲ್ಲವೆ? ರೈತರೊಂದಿಗೆ ಚರ್ಚಿಸದೆ ಕೊರೋನ ಕರ್ಫ್ಯೂ ಇದ್ದಾಗ ಸುಗ್ರೀವಾಜ್ಞೆ ಮೂಲಕ ಯಾಕೆ ಹೊಸ ಕಾನೂನು ತಂದಿರಿ? ಸಂವಿಧಾನದಲ್ಲಿ ರಾಜ್ಯಗಳಿಗೆ ಇರುವ ಕೃಷಿ ಮಾರುಕಟ್ಟೆಗಳ ಮೇಲಿನ ಅಧಿಕಾರವನ್ನು ಯಾಕೆ ದಮನಿಸಿ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದೀರಿ? ಎಂದು ರೈತರು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಉತ್ತರಿಸುತ್ತಿಲ್ಲ. ಬದಲಿಗೆ, ‘ಬೆಂಬಲ ಬೆಲೆ ರದ್ದು ಮಾಡಲಾಗುತ್ತದೆ ಎಂದು ಕೆಲವು ರೈತರು ಮತ್ತು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದು ಸುಳ್ಳು’’ ಎಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ನೀಡುತ್ತಾರೆ. ಇದಕ್ಕೆ ರೈತರು ಕೇಳುತ್ತಿದ್ದಾರೆ. ಆಯಿತಪ್ಪ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಕಾಯ್ದೆಯೊಂದನ್ನು ಜಾರಿಗೆ ತನ್ನಿ ಎಂದರೆ ಕೇಂದ್ರ ಸರಕಾರ ಬಾಯಿಯನ್ನೇ ಬಿಡದೆ ಮೌನವಾಗುತ್ತದೆ. ಪಂಜಾಬ್ ಮತ್ತು ಕೇರಳ ಸರಕಾರಗಳು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಯಾರಾದರೂ ಕೊಂಡುಕೊಂಡರೆ ಅದು ಶಿಕ್ಷಾರ್ಹ ಅಪರಾಧ ಎಂದು ಕಾಯ್ದೆ ತಂದರೆ ರಾಷ್ಟ್ರಪತಿಗಳು ಆ ಕಾಯ್ದೆಗೆ ಸಹಿ ಮಾಡದೆ ತಿರಸ್ಕರಿಸುತ್ತಾರೆ. ಏನಿದರ ಅರ್ಥ? ಮತ್ತದೇ ಗೌರವಾನ್ವಿತ ರಾಷ್ಟ್ರಪತಿಗಳ ಬಾಯಲ್ಲಿ ಈ ಮೂರೂ ಕಾಯ್ದೆಗಳು ರೈತ ಪರವಾಗಿವೆ ಎಂದು ಕೇಂದ್ರ ಸರಕಾರ ಭಾಷಣ ಮಾಡಿಸುತ್ತದೆ. ಹೇಗೆ ಸಹಾಯವಾಗ್ತದೆ ಹೇಳ್ರಪ್ಪಾ ಅಂದರೆ ಮತ್ತದೇ ಮಾತು ತಿರುಚುವ ಕೆಲಸ. ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಎಂಬ ಕೇಸು. ಹಾಗಿದ್ದರೆ ರೈತರನ್ನು ಹೇಗೆ ರಕ್ಷಿಸಬೇಕು? ಗದುಗಿನ ಭಾರತ ಕೃತಿ ಬರೆದ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಹೇಳುತ್ತಾನೆ; ‘‘ಕೃಷಿಯೇ ಮೊದಲು ಸರ್ವಕ್ಕೆ...ಕೃಷಿ ವಿಹೀನನ ದೇಶವದು ದುರ್ದೇಶ’’ ಎಂದು. ಇದು ಇವರಿಗೆ ಯಾಕೆ ಅರ್ಥವಾಗುವುದಿಲ್ಲ.

ಪ್ರತಿಭಟಿಸುತ್ತಿರುವ ರೈತರು ತಮಗಾಗಿ ಮಾತ್ರ ಪ್ರತಿಭಟಿಸುತ್ತಿಲ್ಲ. ದೇಶಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ನಗರಗಳ ನಮ್ಮೆಲ್ಲರ ರಕ್ಷಣೆಗಾಗಿ ಪ್ರತಿಭಟಿಸುತ್ತಿದ್ದಾರೆ ದಯಮಾಡಿ ಅರ್ಥಮಾಡಿಕೊಳ್ಳಿ. ಹೇಗೆ ಗೊತ್ತೆ? ಎಪಿಎಂಸಿ ಕಾಯ್ದೆಯ ನಂತರ ಮತ್ತೊಂದು ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದಾರೆ. ಅದು ಅಗತ್ಯ ವಸ್ತುಗಳ ಕಾಯ್ದೆ. ಅದರಲ್ಲಿ ಮನುಷ್ಯರು ಬದುಕಲಿಕ್ಕೆ ತಿನ್ನಬಹುದಾದ ಆಹಾರ ಧಾನ್ಯಗಳು, ಎಣ್ಣೆ, ಕಾಳುಗಳು, ಬೇಳೆಗಳು ಮುಂತಾದವುಗಳನ್ನು ಗೋಡೌನುಗಳಲ್ಲಿ ಸಂಗ್ರಹಿಸುವುದಕ್ಕೆ ಈ ಮೊದಲು ಒಂದು ಮಿತಿ ಇತ್ತು. ಈಗ ಆ ಮಿತಿ ತೆಗೆದು ಹಾಕಿದ್ದಾರೆ. ಯಾರು ಎಷ್ಟು ಬೇಕಾದರೂ ಸಂಗ್ರಹಿಸಿಡಬಹುದು. ಇದರಿಂದ ರೈತರಿಗೂ ಗ್ರಾಹಕರಿಬ್ಬರಿಗೂ ಭೀಕರ ಹೊಡೆತ ಬೀಳುತ್ತದೆ. ಉದಾಹರಣೆಗೆ ಹಿಮಾಚಲದ ಸೇಬನ್ನು ವ್ಯಾಪಾರಿಗಳು ಹಿಂದೆ ತೋಟಗಳಲ್ಲೇ 20ರೂ. ಕೊಟ್ಟು ಖರೀದಿಸುತ್ತಿದ್ದರಂತೆ. ಈ ದೇಶದ ದೊಡ್ಡ ವ್ಯಾಪಾರಿಯೊಬ್ಬ ಅವನು ಯಾರು ಎಂದು ಹೇಳಬೇಕಾಗಿಲ್ಲ ಹೋಗಿ ನಾನು 30 ರೂ. ಕೊಡುತ್ತೇನೆ ಎಂದು ಎರಡು ವರ್ಷ ಖರೀದಿಸಿದನಂತೆ. ಉಳಿದ ವ್ಯಾಪಾರಿಗಳು ನಷ್ಟ ಅನುಭವಿಸಿದರು. ಬೇರೆ ಕೆಲಸಗಳನ್ನು ಹುಡುಕಿ ಹೊರಟರು. ಈಗ ಆ ದೊಡ್ಡ ವ್ಯಾಪಾರಿ ಕುಳ ರೈತರಿಂದ 8- 10 ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತಿದ್ದಾನಂತೆ. ಹಾಗೆ ಕೊಂಡುಕೊಂಡು ದಾಸ್ತಾನು ಮಾಡಿ ನಮಗೆ ನಿಮಗೆ 150-180 ರೂ.ಗೆ ಮಾರತೊಡಗಿದ್ದಾನೆ. 2015-16 ರಲ್ಲಿ ತೊಗರಿ ಬೇಳೆ ಏನಾಯಿತು ಎಂದು ನಿಮಗೆ ಗೊತ್ತಿದೆ.

ರೈತರಿಂದ 60-70 ರೂ.ಗೆ ಖರೀದಿ ಮಾಡಿ 180-200 ರೂ.ಗೆ ನಮಗೆ ಮಾರಾಟ ಮಾಡಿದರು. ಆಗ ಐಟಿ ಇಲಾಖೆ ಅದಾನಿ, ಜಿಂದಾಲ್ ಮತ್ತು ಇತರ ಬಹುರಾಷ್ಟ್ರೀಯ ಕಂಪೆನಿಗಳ ಗೋಡೌನುಗಳ ಮೇಲೆ ದಾಳಿ ಮಾಡಿ 75 ಸಾವಿರ ಟನ್ ತೊಗರಿ ಬೇಳೆ ವಶ ಪಡಿಸಿಕೊಂಡಿತು. ಇವರೆಲ್ಲರೂ ಅಕ್ರಮ ದಾಸ್ತಾನು ಮಾಡಿದ್ದರು. ಹೊಸ ಕಾಯ್ದೆ ಪ್ರಕಾರ ಮುಂದಿನ ದಿನಗಳಲ್ಲಿ ಯಾರೂ ದಾಳಿ ಮಾಡುವಂತಿಲ್ಲ. ಆ ರೀತಿ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಗೋಡೌನ್‌ಗಳಲ್ಲಿನ ಗೋಲ್‌ಮಾಲ್‌ನಿಂದ ಅವರಿಗೆ ಸಿಗುವ ಲಾಭದ ಲೆಕ್ಕವೆಷ್ಟು ಗೊತ್ತಾ? ಭಾರತದಲ್ಲಿ ನಾವು ವರ್ಷಕ್ಕೆ 48-50 ಮಿಲಿಯನ್ ಮೆಟ್ರಿಕ್ ಟನ್ ತೊಗರಿ ಬೇಳೆ ಬಳಸುತ್ತೇವೆ. ಒಂದು ಕೆ.ಜಿ. ತೊಗರಿ ಬೇಳೆಗೆ ಕೇವಲ 30 ರೂ. ಜಾಸ್ತಿಯಾದರೆ ದೇಶದ ಜನ ಸುಮಾರು ಒಂದೂವರೆ ಲಕ್ಷ ಕೋಟಿ ರೂ. ಯನ್ನು ಹೆಚ್ಚಿಗೆ ತಮ್ಮ ಜೇಬಿನಿಂದ ಪಾವತಿಸುತ್ತಾರೆ. ಈ ಕಾಯ್ದೆ ಜಾರಿಗೆ ತಂದಾಗಿನಿಂದ ತೊಗರಿ ಬೇಳೆಗೆ ಸುಮಾರು 40 ರೂ. ಜಾಸ್ತಿಯಾಗಿದೆ. ಅಡುಗೆ ಎಣ್ಣೆಗೆ ಸುಮಾರು 40 ರೂ. ಜಾಸ್ತಿಯಾಗಿದೆ. ಅಕ್ಕಿ ಬೆಲೆ ಜಾಸ್ತಿಯಾಗಿದೆ. ಹೀಗೆ ಆಹಾರ ಧಾನ್ಯಗಳ ಬೆಲೆಗಳೆಲ್ಲ ಜಾಸ್ತಿಯಾಗಿವೆ. ನಿಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕೇಳಿ ನೋಡಿ. ಕಳೆದ 4 ತಿಂಗಳಿಂದೀಚೆಗೆ ಪ್ರತಿ ತಿಂಗಳ ಮನೆ ಖರ್ಚು ಎಷ್ಟು ಹೆಚ್ಚಾಗುತ್ತಲೇ ಹೋಗುತ್ತಿದೆ ಎಂದು. ಇದನ್ನೂ ಸರಿಪಡಿಸಬೇಕೆಂದು ರೈತರು ಹೋರಾಡುತ್ತಿದ್ದಾರೆ. ಅಂಥ ರೈತರನ್ನು ಕೆಲವರು ದೇಶದ್ರೋಹಿಗಳು ಎನ್ನುತ್ತಾರಲ್ಲ? ಅವರನ್ನು ಮನುಷ್ಯರು ಎನ್ನುವುದೋ ಇಲ್ಲ ಪಂಚೇಂದ್ರಿಯಗಳು ಸತ್ತು ಹೋದ ರಾಕ್ಷಸರೆನ್ನುವುದೋ? ಭತ್ತಕ್ಕೆ ಬೆಲೆ ಇಲ್ಲ ಆದರೆ ಅಕ್ಕಿ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಇತ್ತ ರೈತರಿಗೂ ಬೆಲೆ ಸಿಗುತ್ತಿಲ್ಲ. ಗ್ರಾಹಕರಿಗೂ ಅನುಕೂಲ ಆಗುತ್ತಿಲ್ಲ. ಹಾಗಾದರೆ ದೇಶದ ಹಣ ಎಲ್ಲಿಗೆ ಹೋಗುತ್ತಿದೆ? ತಿಳಿದವರು ಮರದ ಮೇಲೆ ಕುಳಿತ ಹಕ್ಕಿಗಳಂತೆ ಕೆಲಸ ಮಾಡಬೇಕೋ ಇಲ್ಲ ಕೊಳಲೂದಿ ಬೇಟೆಗಾರ ಬೇಟೆಯಾಡಲು ಸಹಾಯ ಮಾಡಬೇಕೋ? ಎಂದು ನನ್ನ ಪ್ರೀತಿಯ ಜನರೇ ಹೇಳಬೇಕು.

ಇಷ್ಟೆಲ್ಲಾ ಸಾಲದು ಎಂದು ಕೇಂದ್ರ ಸರಕಾರ, ‘ರೈತರೊಂದಿಗೆ ಬಂಡವಾಳಿಗರು ಒಪ್ಪಂದ ಮಾಡಿಕೊಳ್ಳುವ ಕಾಯ್ದೆಯನ್ನೂ ಜಾರಿಗೆ ತಂದಿದೆ. ಒಪ್ಪಂದದಲ್ಲಿ ಏನಾದರೂ ಲೋಪಗಳಾದರೆ ರೈತರು ಎಸಿ-ಡಿಸಿ ಬಳಿಗೆ ಹೋಗಬೇಕಂತೆ. ಕೋರ್ಟಿಗೆ ಹೋಗಬಾರದಂತೆ. ಈ ಸಮಸ್ಯೆ ಇತ್ಯರ್ಥ ಪಡಿಸುವ ಅಧಿಕಾರವನ್ನು ಆ ಕಾಯ್ದೆಯಲ್ಲಿ ಕೋರ್ಟ್‌ಗಳಿಗೆ ಕೊಟ್ಟೇ ಇಲ್ಲ ಎಂದು ಹೇಳಲಾಗಿದೆ. ಹೀಗಿದ್ದಾಗ ಈ ಅಧಿಕಾರಿಗಳು ಯಾರ ಪರವಾಗಿ ತೀರ್ಮಾನ ಮಾಡುತ್ತಾರೆಂದು ನಮಗೆಲ್ಲ ಗೊತ್ತಿದೆಯಲ್ಲ. ಈಗ ಹೇಳಿ ಈ ಕಾಯ್ದೆಗಳು ದೇಶದ ಜನರ ಪರವಾಗಿವೆಯೇ? ರೈತರ ಪರವಾಗಿವೆಯೇ? ಕಾರ್ಮಿಕರನ್ನು ಶೋಷಣೆ ಮಾಡುವುದಕ್ಕಂತೂ ಇನ್ನೂ ಭೀಕರ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕರು ಬೀದಿಯಲ್ಲಿದ್ದರೂ ಯಾರೂ ಕೇಳುವವರಿಲ್ಲ. ಈಗಲೂ ನನ್ನ ದೇಶದ ಹೆಮ್ಮೆಯ ರೈತರನ್ನು ದೇಶದ್ರೋಹಿಗಳು ಎನ್ನಲು ನಿಮಗೆ ಮನಸ್ಸು ಬರುತ್ತದೆಯೇ?

ಮತ್ತೊಮ್ಮೆ ನಾಡಿನ ಪ್ರೀತಿಯ ಜನರನ್ನು ವಿನಂತಿಸುತ್ತೇನೆ. ದಯಮಾಡಿ ರೈತರನ್ನು ದೇಶದ್ರೋಹಿಗಳು ಎನ್ನಬೇಡಿ. ಅವರ ಕಷ್ಟಕ್ಕೆ ಜೊತೆಯಾಗಿ. ಆಗದಿದ್ದರೆ ಅವರ ಬಗ್ಗೆ ಕೆಟ್ಟ ಮಾತು ಆಡುವುದನ್ನಾದರೂ ನಿಲ್ಲಿಸಿ. ಇಡೀ ದೇಶ ಪ್ರತಿಭಟನಾನಿರತ ರೈತರ ಋಣದಲ್ಲಿದೆ ಎನ್ನುವುದನ್ನು ಮರೆಯದಿರೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top