ರಾಜ್ಯದಲ್ಲಿ ಕ್ಷೀಣಿಸುತ್ತಿರುವ ಎಮ್ಮೆ ಸಂತತಿ | Vartha Bharati- ವಾರ್ತಾ ಭಾರತಿ

--

ಸರಕಾರದ ನಿರ್ಲಕ್ಷಕ್ಕೆ ಬಲಿಯಾಗುತ್ತಿರುವ ಎಮ್ಮೆ ಹೈನೋದ್ಯಮ

ರಾಜ್ಯದಲ್ಲಿ ಕ್ಷೀಣಿಸುತ್ತಿರುವ ಎಮ್ಮೆ ಸಂತತಿ

► ಸಾಕಣೆ ಬಗ್ಗೆ ನಿರಾಸಕ್ತಿ

► ನಿಕೃಷ್ಟವಾಗಿ ಕಾಣುವ ಮನೋಭಾವ ಸಂಖ್ಯೆ ಇಳಿಕೆಗೆ ಕಾರಣ: ಆರೋಪ

► ಎಮ್ಮೆ ಏಕೆ ದೇಶದ ಹೆಮ್ಮೆಯಲ್ಲ?

ಮಂಗಳೂರು: ಭಾರತದ ಕ್ಷೀರ ಉತ್ಪಾದನೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ, ‘ಗ್ರಾಮೀಣ ಬಡಜನರ ಸ್ನೇಹಿ’ ಎಂದೇ ಖ್ಯಾತಿಯಾದ ಎಮ್ಮೆಗಳ ಸಂಖ್ಯೆ ರಾಜ್ಯದಲ್ಲಿ ಕ್ಷೀಣಿಸುತ್ತಿದ್ದು, ಈ ಕುರಿತು ಸರಕಾರ ದಿವ್ಯ ನಿರ್ಲಕ್ಷವನ್ನು ತೋರಿಸುತ್ತಿದೆ ಎಂದು ಎಮ್ಮೆ ಸಾಕಣೆಯನ್ನು ನೆಚ್ಚಿರುವ ರೈತರು ಆರೋಪಿಸಿದ್ದಾರೆ. ವಿಶ್ವದಲ್ಲಿರುವ ಒಟ್ಟು ಎಮ್ಮೆಗಳ ಪೈಕಿ ಶೇ.53ರಷ್ಟು ಭಾರತದಲ್ಲಿವೆ. ದೇಶದ ಹಾಲಿನ ಉತ್ಪಾದನೆಯಲ್ಲಿ ಎಮ್ಮೆಗಳ ಹಾಲಿನ ಪಾಲು ಶೇ.50ಕ್ಕಿಂತ ಹೆಚ್ಚಾಗಿದೆ. ಎಮ್ಮೆಗಳಲ್ಲಿ ಸೂರ್ತಿ, ಮುರ್ರಾ, ಜಾಫ್ರಾಬಾದಿ, ಭಡ್ವಾರಿ, ನೀಲಿ-ರವಿ, ನಾಗಪುರಿ, ಫಂಡಾರಪುರಿ, ಧಾರವಾಡಿ, ಜವಾರಿ ಸೇರಿದಂತೆ ವಿವಿಧ ತಳಿಗಳನ್ನು ಕಾಣಬಹುದು. ರಾಜ್ಯದಲ್ಲಿ 2012ರಲ್ಲಿ 34,70,505 ಎಮ್ಮೆಗಳಿದ್ದು 2019ರಲ್ಲಿ ಅವುಗಳ ಸಂಖ್ಯೆ 29,84,560ಕ್ಕಿಳಿದಿದೆ. ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 27,34,966, ನಗರ ಪ್ರದೇಶದಲ್ಲಿ 2,49,594 ಎಮ್ಮೆಗಳಿವೆ. 2012-2019ರ ಅವಧಿಯಲ್ಲಿ ಅವುಗಳ ಸಂಖ್ಯೆ 4,85,945ಕ್ಕೆ ಇಳಿಕೆಯಾಗಿದೆ. ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2012ರಲ್ಲಿ 3, 700 ಇದ್ದ ಎಮ್ಮೆಗಳ ಸಂಖ್ಯೆ 2019ರಲ್ಲಿ 1,832ಕ್ಕಿಳಿದಿದೆ. ಮಂಗಳೂರು ತಾಲೂಕಿನಲ್ಲಿ 596, ಬಂಟ್ವಾಳ 242, ಬೆಳ್ತಂಗಡಿ 491, ಪುತ್ತೂರು 405, ಸುಳ್ಯದಲ್ಲಿ 98 ಎಮ್ಮೆಗಳಿವೆ. ದ.ಕ.ದಲ್ಲಿ ಕೋಣಗಳನ್ನು ಕೇವಲ ಕಂಬಳಕ್ಕೆ ಮಾತ್ರ ಬಳಸಲಾಗುತ್ತದೆ. ಅವುಗಳನ್ನೂ ಬೇರೆಡೆಯಿಂದ ತರಲಾಗುತ್ತಿದೆ. 2012-2019ರ ಅವಧಿಯಲ್ಲಿ ಬೆಂಗಳೂರು, ಬಳ್ಳಾರಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಎಮ್ಮೆಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿರುವುದು ಪಶುಸಂಗೋಪನಾ ಇಲಾಖೆ ನಡೆಸಿದ ಜಾನುವಾರು ಗಣತಿಯಲ್ಲಿ ದಾಖಲಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಎಮ್ಮೆಗಳಿಗೆ ಕಾಯಿಲೆಗೆಳು ಬರುವುದು ತುಂಬಾ ವಿರಳ. ಕೆಚ್ಚಲು ಬಾವಂತೂ ಬಹಳ ಕಡಿಮೆ. ಹಸುವಿನ ಹಾಲಿಗಿಂತಲೂ ಎಮ್ಮೆ ಹಾಲಿನಲ್ಲಿ ಹೆಚ್ಚು ಘನ ಪದಾರ್ಥ ಇದೆ. ಕೊಬ್ಬಿನಾಂಶ ಹೆಚ್ಚಾಗಿದ್ದರೂ ಎಮ್ಮೆಯ ಹಾಲಿನಲ್ಲಿ ಕೊಲೆಸ್ಟ್ರಾಲ್ ಕಡಿಮೆಯಿದೆ. ಜೊತೆಗೆ ಹಸುವಿನ ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ, ರಂಜಕ, ‘ಎ’ ಪ್ರೊಟೀನ್, ‘ಸಿ’ ಪ್ರೊಟೀನ್ ಇದ್ದು, ಕಡಿಮೆ ಸೋಡಿಯಂ ಹಾಗೂ ಪೊಟ್ಯಾಷಿಯಂ ಇವೆ. ಹೆಚ್ಚಾಗಿ ಎಮ್ಮೆಯ ಹಾಲು ದಪ್ಪವಾಗಿರುತ್ತದೆ ಮತ್ತು ಬೇಗ ಕೆಡುವುದಿಲ್ಲ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ.

ಎಮ್ಮೆಯ ಹಾಲು ಸೇವನೆಯಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ ಎಂಬುದು ಜಾನುವಾರು ತಜ್ಞರ ಅಭಿಪ್ರಾಯ. ಎಮ್ಮೆಗಳು ಮೇಲ್ನೋಟಕ್ಕೆ ತುಂಬಾ ಗಟ್ಟಿ ಎಂಬಂತೆ ತೋರಿದರೂ ವಾಸ್ತವವಾಗಿ ಸೂಕ್ಷ್ಮವಾಗಿರುತ್ತವೆ. ಗಂಟಲು ಬೇನೆ ಎಂಬ ಕಾಯಿಲೆ ಬಂದರೆ ಸೂಕ್ತ ಚಿಕಿತ್ಸೆ ದೊರಕದಿದ್ದರೆ ಹಸುಗಳಿಗಿಂತ ಬೇಗ ಇವು ಕಾಯಿಲೆಗೆ ಬಲಿಯಾಗುತ್ತವೆ ಮೂಗುದಾರ ಹಾಕಿ ಅಭ್ಯಾಸ ಮಾಡಿಕೊಳ್ಳದಿದ್ದರೆ ಇವುಗಳನ್ನು ಹಿಡಿಯುವುದು ತುಂಬಾ ಕಷ್ಟ. ಅದರಲ್ಲೂ ಚಿಕಿತ್ಸೆ ನೀಡಬೇಕಾದಲ್ಲಿ ಪಶು ವೈದ್ಯರು ಹರಸಾಹಸ ಪಡಬೇಕಾಗುತ್ತದೆ ಎನ್ನುತ್ತಾರೆ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಬಿ.ಶ್ರೀಧರ.

ಎಮ್ಮೆಗಳ ಚರ್ಮದ ಕೆಳಗೆ ಕೊಬ್ಬಿನ ಪದರವಿರುವುದರಿಂದ ಹಾಗೂ ಇವುಗಳಲ್ಲಿ ಬೆವರಿನ ಗ್ರಂಥಿಗಳು ಹೆಚ್ಚು ಇಲ್ಲದಿರುವುದರಿಂದ ವಾತಾವರಣದಲ್ಲಿ ಬಿಸಿ ಹೆಚ್ಚಾದ ತಕ್ಷಣ ನೀರಿನಲ್ಲಿ ಬಿದ್ದುಕೊಳ್ಳಲು ಇಷ್ಟಪಡುತ್ತವೆ. ನೀರು ಸಿಗದಿದ್ದಲ್ಲಿ ಕೆಸರಾದರೂ ಸರಿಯೇ, ಹೊರಳಾಡಿ ಮೈಯ ಶಾಖ ಕಡಿಮೆ ಮಾಡಿಕೊಳ್ಳುತ್ತವೆ. ಆದ್ದರಿಂದ ಇವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಂದು ಸವಾಲಾಗಿರುತ್ತದೆ. ಎಮ್ಮೆಗಳು ಬೆದೆಗೆ ಬಂದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಕೃತಕ ಗರ್ಭಧಾರಣೆಯ ಸಮಯವನ್ನು ನಿರ್ಧರಿಸುವುದು ಕಷ್ಟ. ಹಾಗಾಗಿ ಗರ್ಭ ಧರಿಸುವುದು ಅನೇಕ ವೇಳೆ ತಡವಾಗುತ್ತದೆ. ಸ್ಥಳೀಯ ದನಗಳಿಗೆ ಸಿಗುವ ಪ್ರೋತ್ಸಾಹ ಎಮ್ಮೆಗೂ ಸಿಗಬೇಕು ಎಂಬುದು ಪ್ರಾಣಿ ಪ್ರೇಮಿಗಳ ಒತ್ತಾಯವಾಗಿದೆ.

ಎಮ್ಮೆ ಹಾಲು ಕುಡಿದರೆ ಬುದ್ಧಿ ಮಂದವಾಗುತ್ತೆ, ಅದು ಅನಿಷ್ಟದ ಸಂಕೇತ, ಗಲೀಜು ಪ್ರಾಣಿ, ಪೂಜೆಗೆ ಯೋಗ್ಯವಲ್ಲ, ಅದರ ಹಾಲನ್ನು ಅಭಿಷೇಕಕ್ಕೂ ಬಳಸಬಾರದು ಎಂಬಿತ್ಯಾದಿ ಆರೋಪಗಳ ಸುರಿಮಳೆಯನ್ನೇ ಅದರ ಮೇಲೆ ಹೊರಿಸಿ ಅನ್ಯಾಯವಾಗಿ ಅದು ಕಸಾಯಿ ಖಾನೆಗೆ ಸೇರುವಂತೆ ಮಾಡಿ ಆಕಳನ್ನು ಗೋಮಾತೆ ಎಂದು ಅಟ್ಟಕ್ಕೇರಿಸಿ ಎಮ್ಮೆಯನ್ನು ತ್ಯಾಜ್ಯ ವಸ್ತುವಿನಂತೆ ನಿಕೃಷ್ಟವಾಗಿ ಕಂಡದ್ದೇ ಎಮ್ಮೆಯ ಸಂಖ್ಯೆ ಇಳಿಕೆಗೆ ಕಾರಣ ಎಂಬುದು ಎಮ್ಮೆ ಪ್ರೇಮಿಗಳು ಆರೋಪವಾಗಿದೆ. ಗೋಮೂತ್ರದಲ್ಲಿ, ದೇಶಿ ಹಸುವಿನ ಹಾಲಿನಲ್ಲಿ ಔಷಧಿ ಗುಣಗಳು ಹೇರಳವಾಗಿವೆ ಎಂಬುದು ಒಂದು ನಂಬಿಕೆಯೇ ಹೊರತು ವಾಸ್ತವವಲ್ಲ. ಒಂದೇ ಹುಲ್ಲನ್ನು ತಿನ್ನುವ ಎರಡು ಪ್ರಾಣಿಗಳಲ್ಲಿ ಒಂದು ಅಸ್ಪೃಶ್ಯ ಎನಿಸಿಕೊಂಡು ಶೋಷಿತ ಜೀವಿಗಳು ಆಗಿರುವುದು ಯಾಕೆ, ಎಮ್ಮೆ ಏಕೆ ದೇಶದ ಹೆಮ್ಮೆಯಾಗಲಿಲ್ಲ ಎಂಬುದು ಎಮ್ಮೆ ಪ್ರೇಮಿಗಳ ಪ್ರಶ್ನೆಯಾಗಿದೆ.

‘ಕಡುಬಡವನ ಟ್ರಾಕ್ಟರ್’ ಎಂದು ಖ್ಯಾತಿಯಾಗಿರುವ ಎಮ್ಮೆ ಪುರಾತನ ಕಾಲದಿಂದ ಶಾಪಕ್ಕೊಳಗಾಗಿದೆ. ನಮ್ಮ ಎಲ್ಲ ಜಾನುವಾರುಗಳ ಪೈಕಿ ನಿಕೃಷ್ಟವೆಂದು ಕಳಂಕ ಹೊತ್ತ ಪ್ರಾಣಿ ಎಮ್ಮೆಯಾಗಿದೆ. ಪ್ರಾಣಿಗಳಲ್ಲಿಯೂ ಜಾತಿ ಭೇದ, ವರ್ಣಭೇದ ಸೃಷ್ಟಿಸಿರುವುದು ಮಾನವನ ದುರಂತಗಳಲ್ಲೊಂದಾಗಿದೆ. ಕಪ್ಪೆಂದು ಜರೆಯುವ ಇದೇ ಎಮ್ಮೆಗಳು ಗದ್ದೆ ಉಳುತ್ತವೆ, ಕನಿಷ್ಠ ತಿಂದು ಗರಿಷ್ಠ ಹಾಲು ನೀಡುತ್ತವೆ ಎನ್ನುವ ಜಾನುವಾರು ತಜ್ಞರು ಎಮ್ಮೆಯನ್ನು ‘ಭಾರತದ ಹೆಮ್ಮೆ’ ಎಂದು ಬಣ್ಣಿಸಿದ್ದಾರೆ.

ಕೊಪ್ಪಳದ ಮುನಿರಾಬಾದ್‌ನಲ್ಲಿ ಹೋರಿ ಮತ್ತು ಕೋಣಗಳ ವೀರ್ಯವನ್ನು ಉತ್ಪಾದಿಸಲಾಗುತ್ತದೆ. ಧಾರವಾಡದ ತೇಗೂರಿನಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರ ಮತ್ತು ದ.ಕ., ಬಳ್ಳಾರಿ, ಹೆಸರಘಟ್ಟ-ಬೆಂಗಳೂರು, ಕೊಪ್ಪಳ, ಧಾರವಾಡ ಸೇರಿ ವಿವಿಧೆಡೆಗಳಲ್ಲಿ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ.

ನಮ್ಮದೇ ದೇಶದ ಹೆಮ್ಮೆಯ ಪ್ರಾಣಿ ಎಮ್ಮೆಯನ್ನು ಮುಂದಿನ ಪೀಳಿಗೆಗೆ ಕೇವಲ ಚಿತ್ರದಲ್ಲಿ ತೋರಿಸುವಂತಾಗದಿರಲಿ ಎಂಬುದು ಪ್ರಾಣಿಪ್ರೇಮಿಗಳ ಆಶಯವಾಗಿದೆ.

‘ಎಮ್ಮೆಗಳನ್ನು ಯಾರು ಮಾತೆ ಎಂದು ಕರೆದಾರು?’

ದೇಶೀಯ ಪ್ರಾಣಿಯಾದ ಎಮ್ಮೆಗಳ ಉಳಿವಿಗಾಗಿ ‘ನಮ್ಮ ಹೆಮ್ಮೆಯ ಎಮ್ಮೆ’ ಎಂಬ ಅಭಿಯಾನ ನಡೆಯಬೇಕಾಗಿದೆ. ಮಠ, ಮಂದಿರಗಳಲ್ಲಿ ಎಮ್ಮೆಯನ್ನು ಪೂಜಿಸುವುದಿಲ್ಲ. ಗೋ ಪವಿತ್ರ ಎಂದು ಅದರ ಉಳಿವಿಗೆ ಹೋರಾಡಲು ಸಾಕಷ್ಟು ಸಂಘ-ಸಂಸ್ಥೆಗಳು, ಸಂಘಟನೆಗಳಿವೆ. ಆದರೆ ಎಮ್ಮೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆಕಳುಗಳನ್ನು ಗೋಮಾತೆ, ಕಾಮಧೇನು, ಇತ್ಯಾದಿಗಳಿಂದ ಕರೆದರೂ ಎಮ್ಮೆಗಳನ್ನು ಯಾರು ಮಾತೆ, ತಾಯಿ ಎಂದು ಕರೆದಾರು? ಕರೆಯುವುದು ಅಪರೂಪ ಎನ್ನುತ್ತಾರೆ ಶಿವಮೊಗ್ಗ ಪಶುವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಬಿ. ಶ್ರೀಧರ.

ಎಮ್ಮೆಗಳನ್ನು ಸಾಕುವ ಬಗ್ಗೆ ರೈತರು ಹಾಗೂ ಜನಸಾಮಾನ್ಯರಲ್ಲಿ ಆಸಕ್ತಿ ತುಂಬಾ ಕಡಿಮೆಯಾಗಿದೆ. ಹುಲ್ಲಿನ ಸಮಸ್ಯೆ, ತಗಲುವ ದುಬಾರಿ ವೆಚ್ಚವೇ ಇದಕ್ಕೆ ಕಾರಣ. ಆದ್ದರಿಂದಲೇ ಎಮ್ಮೆಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ದೊಡ್ಡ ದೊಡ್ಡ ಫಾರ್ಮ್‌ನವರು ಹಟ್ಟಿ ಗೊಬ್ಬರಕ್ಕಾಗಿ ಎಮ್ಮೆಗಳನ್ನು ಸಾಕುತ್ತಿದ್ದಾರೆ.

 ಡಾ. ಪ್ರಸನ್ನ ಕುಮಾರ್ ಟಿ.ಜಿ., ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ, ದ. ಕ.

 ಸರಕಾರದ ನಿರ್ದೇಶನದಂತೆ ಕೊಯ್ಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವನ್ನು ಮಲೆನಾಡು ಗಿಡ್ಡ ಹಸುಗಳ ಸಂವರ್ಧನಾ ಕೇಂದ್ರವಾಗಿ ಮಾರ್ಪಾಡು ಮಾಡಲಾಗುತ್ತದೆ. ಆದ್ದರಿಂದ ಮುಂದೆ ಎಮ್ಮೆ ಸಾಕಣೆಯನ್ನು ನಿಲ್ಲಿಸಲಾಗುವುದು. ಸದ್ಯ ನಮ್ಮ ಕೇಂದ್ರದಲ್ಲಿ ಒಟ್ಟು 60 ಮುರ್ರಾ ತಳಿಯ ಎಮ್ಮೆಗಳಿವೆ. ಕಳೆದ ವರ್ಷ100ಕ್ಕೂ ಹೆಚ್ಚಿದ್ದವು. ಗೋಶಾಲೆಗಳಿಗೆ ಮತ್ತು ರೈತರಿಗೆ ನೀಡಿರುವುದರಿಂದ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆಧುನೀಕರಣ, ನಗರೀಕರಣದಿಂದ ಎಮ್ಮೆ ಮೇಯಿಸಲು ಜಾಗವೇ ಇಲ್ಲವಾಗಿದೆ. ಜಿಲ್ಲೆಯಲ್ಲಿ ಉಷ್ಣಾಂಶ ಜಾಸ್ತಿ ಇರುವುದರಿಂದ ಎಮ್ಮೆ ಗರ್ಭ ಕಟ್ಟಲ್ಲ. ಆದ್ದರಿಂದ ರೈತರಿಗೆ ಎಮ್ಮೆ ಸಾಕುವುದು ಕಷ್ಟವಾಗಿದೆ.

ಡಾ. ಹೆನ್ರಿ ಲಾಸ್ರಾಡೊ, ಉಪನಿರ್ದೇಶಕ,ಕಡಬತಾಲೂಕಿನ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ

ಹರ್ಯಾಣದ ಮುರ್ರಾ ತಳಿಯ ಎಮ್ಮೆಗಳನ್ನು ಸಾಕಿದ್ದೇನೆ. ಒಂದು ದಿನಕ್ಕೆ ಕನಿಷ್ಠ 10-12ಲೀಟರ್ ಹಾಲು ಕೊಡುತ್ತವೆ. ಎಮ್ಮೆಗಳ ಸಾಕಣೆ ನನಗೆ ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗಿದೆ. ಸಮಯಕ್ಕೆ ಸರಿಯಾಗಿ ಆಹಾರ, ನೀರು ನೀಡುವ ಮೂಲಕ ಉತ್ತಮವಾಗಿ ಎಮ್ಮೆ ಸಾಕಣೆ ಮಾಡಬಹುದು ಎನ್ನುತ್ತಾರೆ ಯಾದಗಿರಿಯ ರೈತ ಭೀಮಪ್ಪ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಳ್ಳಕೊಳ್ಳ, ಗೋಮಾಳ, ಕೆರೆಗಳು ಕಡಿಮೆಯಾಗುತ್ತಿರುವುದು ಎಮ್ಮೆಗಳ ಸಂಖ್ಯೆ ಇಳಿಕೆಯಾಗಲು ಮುಖ್ಯ ಕಾರಣವಾಗಿದೆ. ಮೇವು, ಕೂಲಿಕಾರರಿಗೆ ವೇತನ ಸೇರಿ ಎಮ್ಮೆ ಸಾಕಣೆಗೆ ಹೆಚ್ಚಿನ ವೆಚ್ಚ ತಗಲುತ್ತದೆ. ಆದರೆ ಅದರ ಹಾಲಿನ ದರ ಹೆಚ್ಚಾಗಿಲ್ಲ. ಆದ್ದರಿಂದ ಸಾಕಲು ರೈತರು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಕೇಂದ್ರದಲ್ಲಿ ಮುರ್ರಾ, ಸೂರ್ತಿ ತಳಿಯ ಒಟ್ಟು 130 ಎಮ್ಮೆಗಳಿವೆ.

ಡಾ.ಅನೀಲ್‌ಕುಮಾರ್, ಮುಖ್ಯ ಪಶುವೈದ್ಯಾಧಿಕಾರಿ,ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು, ಧಾರವಾಡ

ಎಮ್ಮೆಗಳಲ್ಲಿ ಪೋಷಕಾಂಶ, ಲವಣಾಂಶ ಕಡಿಮೆಯಿದ್ದಾಗ ಹಾಗೂ ತಾಪಮಾನ ಹೆಚ್ಚಾದಾಗ ಸಂತಾನೋತ್ಪತ್ತಿ ಕ್ರಿಯೆಗಳು ಸರಿಯಾಗಿ ಆಗುವುದಿಲ್ಲ. ಬೆದೆಗೆ ಬಂದಾಗ ಅದನ್ನು ಗುರುತಿಸಲಾಗದಿರುವುದು, ಬೇಜವಾಬ್ದಾರಿ ನಿರ್ವಹಣಾ ಪದ್ಧತಿ ಇವೆಲ್ಲಾ ಎಮ್ಮೆಗಳ ಸಂಖ್ಯೆ ಇಳಿಕೆಯಾಗಲು ಮುಖ್ಯ ಕಾರಣವಾಗಿವೆ. ಹಸುವಿನ ಕರುಗಳಿಗೆ ಹೋಲಿಸಿದರೆ ಎಮ್ಮೆ ಕರುಗಳ ಸಾವಿನ ಪ್ರಮಾಣ ಹೆಚ್ಚಿದೆ.ವೈಜ್ಞಾನಿಕ ರೀತಿಯಲ್ಲಿ ಪಶು ಸಾಕಣೆಯತ್ತ ಯುವಕರು ಗಮನಹರಿಸುತ್ತಿರುವುದು ಆಶಾದಾಯಕವಾಗಿದೆ. ರೈತರು ಕೃಷಿಗೆ ಒತ್ತು ಕೊಟ್ಟಷ್ಟೇ ಪಶುಸಂಗೋಪನೆಗೂ ನೀಡಬೇಕು.

ಡಾ. ವಿ. ಚಂದ್ರಶೇಖರ್ ಮೂರ್ತಿ, ಸಹ ವಿಸ್ತರಣಾ ನಿರ್ದೇಶಕ ಪಶು ವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ, ಬೆಂಗಳೂರು

ಎಮ್ಮೆಗಳ ಸಂಖ್ಯೆ (ಜಿಲ್ಲಾವಾರು)

   ಜಿಲ್ಲೆ                                   2012                                 2019

ದಕ್ಷಿಣ ಕನ್ನಡ                            3,700                                1,832

ಉಡುಪಿ                                  8,846                               2,408

ಉತ್ತರ ಕನ್ನಡ                         87,816                              73,993

ಮೈಸೂರು                            45,419                                21,682

ಬೆಂ.ಗ್ರಾಮಾಂತರ                   24,381                              16,924

ಚಾಮರಾಜನಗರ                    20,887                              9,918

ಚಿಕ್ಕಬಳ್ಳಾಪುರ                      47,140                               26,397

ಚಿಕ್ಕಮಗಳೂರು                     70,870                              34,362

ಚಿತ್ರದುರ್ಗ                       1,52,852                             1,13,304

ದಾವಣಗೆರೆ                      1,75,896                             91,896

ಬಾಗಲಕೋಟೆ                   2,34,802                            2,34,340

ಧಾರವಾಡ                       79,513                                61,245

ಗದಗ                             60,989                                55,798

ಕಲಬುರಗಿ                        91,254                                73,176

ಹಾಸನ                           1,41,264                            1,07,971

ಹಾವೇರಿ                           98,468                                85,501

ಕೊಡಗು                            14,476                              5,236 

ಕೋಲಾರ                            45,876                            26,520

ಕೊಪ್ಪಳ                             77,860                             63,467

ಮಂಡ್ಯ                            1,45,516                          1,09,443

ರಾಯಚೂರು                    1,36,854                           1,12,420

ರಾಮನಗರ                       30,619                             19,644

ಶಿವಮೊಗ್ಗ                         1,49,515                           1,20,563

ತುಮಕೂರು                      1,81,118                          1,42,047

ಯಾದಗಿರಿ                        76,855                              57,438

ಬೀದರ್                          1,30,781                            1,25,510

ಬೆಂಗಳೂರು                      8,453                                11,168

ಬಳ್ಳಾರಿ                         142,255                              1,59,107

ಬೆಳಗಾವಿ                        8,29,370                           8,44,171

ವಿಜಯಪುರ                     1,56,860                           1,77,079

(ಕೃಪೆ: ಪಶು ಇಲಾಖೆ ನಡೆಸಿದ 2012, 2019ರ ಜಾನುವಾರು ಗಣತಿ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top