ಭೀಮಾ ಕೋರೆಗಾಂವ್ ಆರೋಪಿಗಳ ವಿರುದ್ಧ ಸಾಕ್ಷ್ಯಗಳೇ ಇಲ್ಲ, ಅವರನ್ನು ಬಿಡುಗಡೆಗೊಳಿಸಿ ಪರಿಹಾರ ನೀಡಿ | Vartha Bharati- ವಾರ್ತಾ ಭಾರತಿ

--

ಭೀಮಾ ಕೋರೆಗಾಂವ್ ಆರೋಪಿಗಳ ವಿರುದ್ಧ ಸಾಕ್ಷ್ಯಗಳೇ ಇಲ್ಲ, ಅವರನ್ನು ಬಿಡುಗಡೆಗೊಳಿಸಿ ಪರಿಹಾರ ನೀಡಿ

Photo: Thewire

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪ್ರೊ.ಆನಂದ ತೇಲ್ತುಂಬ್ಡೆ ಅವರನ್ನು ಬಂಧನವನ್ನು ಖಂಡಿಸಿ ನಾವು ಒಂದು ವರ್ಷದ ಹಿಂದೆ ಜಂಟಿಯಾಗಿ ಲೇಖನವೊಂದನ್ನು ಬರೆದಿದ್ದೆವು. ಪ್ರಕರಣದಲ್ಲಿ ಅವರ ಬಂಧನಕ್ಕೂ ಒಳಸಂಚಿಗೂ ಯಾವುದೇ ಸಂಬಂಧವಿಲ್ಲ ಮತ್ತು ಅದು ಕಾರ್ಪೊರೇಟ್-ಮನುವಾದಿ ಮೋದಿ ಸರಕಾರಕ್ಕೆ ಬೆದರಿಕೆಯೆಂದೇ ಪರಿಗಣಿಸಲಾಗಿರುವ ಅವರ ದಲಿತ ಕೇಂದ್ರಿತ ಮಾರ್ಕ್ಸ್ವಾದಿ ಚಟುವಟಿಕೆಗಳಿಗೆ ಹೆಚ್ಚು ಸಂಬಂಧಿಸಿದೆ ಎನ್ನುವುದನ್ನು ನಾವು ಪ್ರಮುಖವಾಗಿ ಬಿಂಬಿಸಿದ್ದೆವು.


2018,ಎ.17ರಂದು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮೊದಲ ದಾಳಿಗಳು ನಡೆದಿದ್ದವು. ಅಲ್ಲಿಂದೀಚೆಗೆ ಮೂರು ವರ್ಷಗಳು ಉರುಳಿವೆ ಮತ್ತು ಪ್ರೊ. ತೇಲ್ತುಂಬ್ಡೆ ಸೇರಿದಂತೆ 16ಕ್ಕೂ ಅಧಿಕ ಖ್ಯಾತ ಮಾನವಹಕ್ಕು ಕಾರ್ಯಕರ್ತರು,‌ ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು ಮತ್ತು ಸಾಂಸ್ಕೃತಿಕ ಕಲಾವಿದರನ್ನು ಸುಳ್ಳು, ಕಪೋಲಕಲ್ಪಿತ ಆರೋಪಗಳಲ್ಲಿ ಬಂಧಿಸಿ ಜೈಲಿಗೆ ತಳ್ಳಲಾಗಿದೆ. ಈ ಪೈಕಿ ಹಿರಿಯ ಕವಿ ವರವರ ರಾವ್ ಅವರನ್ನು ಇತ್ತೀಚಿಗಷ್ಟೇ ಅನಾರೋಗ್ಯ ಕಾರಣದಿಂದ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಸದ್ಯಕ್ಕೆ ಪಂಚರಾಜ್ಯಗಳಲ್ಲಿಯ ವಿಧಾನಸಭಾ ಚುನಾವಣೆಗಳು ಮತ್ತು ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಕೊಂಚ ವಿರಾಮವನ್ನು ನೀಡಿರುವಂತಿದೆ. ಆದರೆ ಸಹಜ ಸ್ಥಿತಿ ಮರಳಿದಾಗ ಇನ್ನಷ್ಟು ಹೆಚ್ಚಿನ ಬಂಧನಗಳಾಗಬಹುದು. ದೇಶಾದ್ಯಂತ ದಲಿತರ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿರುವವರನ್ನು,ದಲಿತರನ್ನು ಕ್ರೋಢೀಕರಿಸುತ್ತಿರುವವರನ್ನು ಗುರಿಯಾಗಿಸಲು ಬಲೆಯನ್ನು ಇನ್ನಷ್ಟು ಮಜಬೂತುಗೊಳಿಸಲಾಗಿದೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯು ಈವರೆಗೆ ಆರು ರಾಜ್ಯಗಳ 50ಕ್ಕೂ ಅಧಿಕ ಜನರಿಗೆ ಸಮನ್ಸ್ ಹೊರಡಿಸಿದೆ.
 ‌
ದೇಶಾದ್ಯಂತದ ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ನಿರ್ದೇಶಿತ ಕಿರುಕುಳಗಳ ಹಿನ್ನೆಲೆಯಲ್ಲಿ ಅಮೆರಿಕದ ಸ್ವತಂತ್ರ ಡಿಜಿಟಲ್ ವಿಧಿವಿಜ್ಞಾನ ಸಂಸ್ಥೆ ಆರ್ಸೆನೆಲ್ ಬಿಡುಗಡೆಗೊಳಿಸಿರುವ ಎರಡು ವಿವರವಾದ ವರದಿಗಳಿಗೆ ನಮ್ಮ ಸಾಮೂಹಿಕ ಗಮನ ಮತ್ತು ಕ್ರಮಗಳು ಅಗತ್ಯವಾಗಿವೆ. ವಾಷಿಂಗ್ಟನ್ ಪೋಸ್ಟ್ ಮತ್ತು ಇತರ ಪ್ರಾದೇಶಿಕ ಮಾಧ್ಯಮಗಳು 2021 ಫೆಬ್ರವರಿಯಲ್ಲಿ ಈ ವರದಿಗಳ ಬಗ್ಗೆ ಪ್ರಕಟಿಸಿದ್ದವು. ಭೀಮಾ ಕೋರೆಗಾಂವ ಪ್ರಕರಣದಲ್ಲಿ ಬಂಧಿತರಲ್ಲೋರ್ವರಾಗಿರುವ ಮಾನವಹಕ್ಕು ಕಾರ್ಯಕರ್ತ ರೋನಾ ವಿಲ್ಸನ್ ಅವರ ಲ್ಯಾಪ್ಟಾಪ್ ಹಾರ್ಡ್‌ ಡಿಸ್ಕ್‌ ನ ಪ್ರತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ಆರ್ಸೆನೆಲ್ ‘ನೆಟ್ವೈರ್’ ಎಂಬ ಮಾಲ್ವೇರ್ ಮೂಲಕ ಹಾರ್ಡ್ ಡಿಸ್ಕ್‌ ನಲ್ಲಿ 10 ಕಡತಗಳನ್ನು ಸೇರಿಸಲಾಗಿತ್ತು ಎಂಬ ನಿರ್ಣಯಕ್ಕೆ ಬಂದಿದೆ. ಈ ಕಡತಗಳು ರೋನಾ ವಿಲ್ಸನ್ ಎಂದೂ ಖುದ್ದಾಗಿ ಸೃಷ್ಟಿಸಿರದ, ತೆರೆಯದ, ಪರಿಷ್ಕರಿಸದ ಮತ್ತು ನೋಡಿಯೇ ಇರದಿದ್ದ ಪ್ರತ್ಯೇಕ ಫೋಲ್ಡರ್ನಲ್ಲಿದ್ದವು.

ಇದೀಗ ಆರ್ಸೆನೆಲ್ ಬಿಡುಗಡೆಗೊಳಿಸಿರುವ ಎರಡನೇ ವರದಿಯು ವಿಲ್ಸನ್ ಅವರ ಲ್ಯಾಪ್ಟಾಪ್ನಲ್ಲಿ ಹೇಗೆ ಹಸ್ತಕ್ಷೇಪವನ್ನು ನಡೆಸಲಾಗಿತ್ತು ಮತ್ತು ಇನ್ನೂ 22 ಕಡತಗಳನ್ನು ಪ್ಲಾಂಟ್ ಮಾಡಲಾಗಿತ್ತು ಅಥವಾ ಸೇರಿಸಲಾಗಿತ್ತು ಎನ್ನುವುದನ್ನು ತೋರಿಸುವ ಪ್ರಬಲ ಸಾಕ್ಷಗಳನ್ನೊಳಗೊಂಡಿದೆ. ಹ್ಯಾಕರ್ ದಾಳಿಕೋರ ವಿಲ್ಸನ್ ರ ಕಂಪ್ಯೂಟರ್ನಲ್ಲಿ ಈ ಕಡತಗಳನ್ನು ಸೇರಿಸಲು ಆದೇಶಗಳನ್ನು ಟೈಪ್ ಮಾಡಿದ್ದನ್ನು ತೋರಿಸುವ ಮಾಹಿತಿಯನ್ನು ಈ ವರದಿಯು ಒಳಗೊಂಡಿದೆ. ಆರ್ಸೆನೆಲ್ ಅಧ್ಯಕ್ಷ ಮಾರ್ಕ್ ಸ್ಪೆನ್ಸರ್ ಅವರು ಇದನ್ನು ಅಪರಾಧವನ್ನೆಸಗುತ್ತಿರುವ ವ್ಯಕ್ತಿಯ ವಿಡಿಯೊಟೇಪ್ ಗೆ ಹೋಲಿಸಿದ್ದಾರೆ.

ಪ್ಲಾಂಟ್ ಮಾಡಲಾಗಿರುವ ಈ ದಾಖಲೆಗಳು ಇಂಟರ್ನೆಟ್ ಹ್ಯಾಕಿಂಗ್ ನ ಯಾದ್ರಚ್ಛಿಕ ಕೃತ್ಯವಲ್ಲ. ಇದು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 16 ಆರೋಪಿಗಳ ವಿರುದ್ಧ ಎನ್ಐಎ ದಾಖಲಿಸಿರುವ ಪ್ರಕರಣದ ಮುಖ್ಯ ತಿರುಳಾಗಿದೆ. ವಿಲ್ಸನ್ ಅವರ ಕಂಪ್ಯೂಟರ್ನಿಂದ ಪಡೆಯಲಾದ ಈ ಪ್ಲಾಂಟ್ ಮಾಡಲಾಗಿದ್ದ ದಾಖಲೆಗಳ ಆಧಾರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಒಳಸಂಚು ರೂಪಿಸಲಾಗಿತ್ತು ಎಂದು ಆಪಾದಿಸಲಾಗಿದೆ. ಈ ದಾಖಲೆಗಳು ಅಥವಾ ಕಡತಗಳು ಆರೋಪಿಗಳ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯನ್ನು ಹೇರಲು ಮಾರ್ಗವನ್ನು ಸುಗಮಗೊಳಿಸಿದ್ದವು. ಈ ಕಾಯ್ದೆಯಡಿ ಸರಕಾರವು ಆರೋಪಿಗಳನ್ನು ಎಷ್ಟು ಸಮಯ ಬೇಕಿದ್ದರೂ ಬಂಧನದಲ್ಲಿರಿಸಬಹುದು ಮತ್ತು ಜಾಮೀನು ಅಥವಾ ಶೀಘ್ರ ವಿಚಾರಣೆಗೂ ಆರೋಪಿಗಳು ಕೋರುವಂತಿಲ್ಲ. ‌

ವಿಲ್ಸನ್ ಮತ್ತು ಅವರ ಸಹ ಆರೋಪಿಗಳ ಕಂಪ್ಯೂಟರ್ ಅನ್ನು ಯಾರು ಹ್ಯಾಕ್ ಮಾಡಿದ್ದರು ಎನ್ನುವುದನ್ನು ಪತ್ತೆ ಹಚ್ಚಿ ಅವರನ್ನು ಕಾನೂನಿನ ಚೌಕಟ್ಟಿನೊಳಗೆ ತರುವ ಬದಲು ಎನ್ಐಎ ಈ ಪ್ರಕರಣದಲ್ಲಿ ಆರ್ಸೆನಿಲ್ ವರದಿಯನ್ನು ಸಾಕ್ಷವನ್ನಾಗಿ ಅಂಗೀಕರಿಸುವುದನ್ನು ವಿರೋಧಿಸುತ್ತಿದೆ.

ಇದು ಮೋದಿ ಸರಕಾರವು ಭೀಮಾ ಕೋರೆಗಾಂವ್ ಪ್ರಕರಣದ 16 ಆರೋಪಿಗಳನ್ನು ಏಕಾಗಿ ಗುರಿಯಾಗಿಸಿಕೊಂಡಿತ್ತು ಮತ್ತು ಏಕಾಗಿ ಅವರನ್ನು ಬಂಧಿಸಿತ್ತು ಎಂಬ ತಪ್ಪಿಸಲಾಗದ,ಮುಖ್ಯ ಪ್ರಶ್ನೆಯೊಂದನ್ನು ನಮ್ಮ ಮುಂದಿರಿಸಿದೆ. ಈ ಆರೋಪಿಗಳ ಪೈಕಿ ಯಾರೊಬ್ಬರೂ ಯಾವುದೇ ಅಪರಾಧವನ್ನು ಎಸಗಿರಲಿಲ್ಲ. ಯಾರೊಬ್ಬರೂ ಹಿಂಸಾಚಾರದಲ್ಲಿ ತೊಡಗಿಕೊಂಡಿರಲಿಲ್ಲ. ವಿದ್ಯುನ್ಮಾನ ಸಾಕ್ಷದ ಆಧಾರದಲ್ಲಿ ಪೊಲೀಸರ ಹೇಳಿಕೆಗಳಿಂದಾಗಿ ಅವರು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ವಿದ್ಯುನ್ಯಾನ ಸಾಕ್ಷವನ್ನೇ ಪ್ಲಾಂಟ್ ಮಾಡಲಾಗಿತ್ತು ಎಂದು ಆರ್ಸೆನೆಲ್ನ ಎರಡು ವರದಿಗಳು ಈಗ ಅತ್ಯಂತ ಸ್ಪಷ್ಟವಾಗಿ ಹೇಳಿರುವಾಗ ಒಳಸಂಚಿನ ಯಾವುದೇ ಆರೋಪಗಳು ನಿಲ್ಲುವುದಿಲ್ಲ. ಯುಎಪಿಎ ಅನ್ನು ಹೇರಿರುವುದು ಬಂಧಿತ ಕಾರ್ಯಕರ್ತರನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡಲು ಒಳಸಂಚು ಆರೋಪಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾಗಿತ್ತು ಎನ್ನುವುದನ್ನು ಸೂಚಿಸುತ್ತದೆ.

ಯಾವುದೇ ರೀತಿಯಲ್ಲಾದರೂ ಈ 16 ಆರೋಪಿಗಳನ್ನು ಜೈಲಿನಲ್ಲಿ ಕೊಳೆಸುವ ಮೂಲಕ ಮೋದಿ ಸರಕಾರವು ಏನನ್ನು ಸಾಧಿಸಲು ಬಯಸುತ್ತಿದೆ? ಅವರ ಸಾಮಾಜಿಕ ಹೋರಾಟವನ್ನು ಮೊಟಕುಗೊಳಿಸಲು, ಹೆಚ್ಚು ಪ್ರಜಾಸತ್ತಾತ್ಮಕ ವಿಶ್ವಕ್ಕಾಗಿ ಅವರ ಬೇಡಿಕೆಗಳ ಸದ್ದಡಗಿಸಲು ಮತ್ತು ಮನುವಾದಿ ಫ್ಯಾಸಿಸ್ಟ್ ಸರಕಾರದಿಂದ ಅಪಾಯಗಳ ವಿರುದ್ಧ ಅವರು ಧ್ವನಿಯೆತ್ತುವುದನ್ನು ನಿಲ್ಲಿಸಲು ಆಡಳಿತವು ಬಯಸಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದುರುದ್ದೇಶಪೂರಿತ ಕಾನೂನು ಕ್ರಮಗಳು ಕೇವಲ ಈ 16 ಬಂಧಿತರಿಗೆ ಮಾತ್ರ ಸಂಬಂಧಿಸಿದ್ದಲ,ಅದು ದಲಿತರ ಹಕ್ಕುಗಳನ್ನು ಪ್ರತಿಪಾದಿಸುವ ಮತ್ತು ಮೋದಿ ಸರಕಾರದಿಂದ ಈ ದೇಶವನ್ನು ಕಾರ್ಪೊರೇಟ್ಗಳಿಗೆ ಮಾರಾಟವನ್ನು ಪ್ರಶ್ನಿಸುವ ಭಾರತದಲ್ಲಿಯ ಯಾವುದೇ ವ್ಯಕ್ತಿಗೂ ಸ್ಪಷ್ಟ ಬೆದರಿಕೆಗಳಾಗಿವೆ ಎಂದು ಒತ್ತಿ ಹೇಳಲು ನಾವು ಬಯಸುತ್ತೇವೆ. ಭಿನ್ನಾಭಿಪ್ರಾಯದ ಸಣ್ಣ ಧ್ವನಿಯನ್ನೂ ದಮನಿಸಲು ಸರಕಾರಿ ಯಂತ್ರವನ್ನು ಹೇಗೆ ದುರುಪಯೋಗಪಡಿಸಬಹುದು ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.
 ‌
ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಯಾವುದೇ ಆಧಾರವಿಲ್ಲ ಮತ್ತು ಎಲ್ಲ ವಿದ್ಯುನ್ಮಾನ ಸಾಕ್ಷಗಳನ್ನು ಪ್ಲಾಂಟ್ ಮಾಡಲಾಗಿತ್ತು ಎನ್ನುವುದನ್ನು ಆರ್ಸೆನೆಲ್ ವರದಿಗಳು ಸ್ಪಷ್ಟವಾಗಿ ಬಯಲಿಗೆಳೆದಿವೆ ಎನ್ನುವುದನ್ನು ಪ್ರತಿಯೊಬ್ಬರಿಗೂ ನೆನಪಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ನಾವು ಬಯಸಿದ್ದೇವೆ. ಯಾವುದೇ ಸಾಕ್ಷಾಧಾರಗಳೇ ಇಲ್ಲದಿದ್ದಾಗ ಆರೋಪಿಗಳನ್ನು ಬಿಡುಗಡೆಗೊಳಿಸುವುದು ಹಾಗೂ ಅವರಿಗಾಗಿರುವ ಸಮಯ ನಷ್ಟ ಮತ್ತು ಬಂಧನದಿಂದ ಅವರು ಅನುಭವಿಸಿರುವ ಮಾನಸಿಕ ಹಿಂಸೆಗೆ ಪರಿಹಾರವನ್ನು ನೀಡುವುದು ಸರಿಯಾದ ಕ್ರಮವಾಗುತ್ತದೆ.

ಇದು ನ್ಯಾಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಸರಕಾರವು ಏನನ್ನು ಬೇಕಾದರೂ ಮಾಡಬಹುದು ಎಂಬ ನಿರ್ಭೀತಿಯ ವಾತಾವರಣವು ಕಾನೂನಿನ ಆಡಳಿತದ ದುರುಪಯೋಗದ ಅಪಾಯವನ್ನುಂಟು ಮಾಡುತ್ತದೆ. ಪ್ರಜೆಗಳ ಪ್ರಜಸತ್ತಾತ್ಮಕ ಹಕ್ಕುಗಳ ಉಲ್ಲಂಘನೆ ಸರಕಾರಗಳಿಂದ ನಿರ್ದೇಶಿತವಾಗಿರುವ ಅಜೆಂಡಾವನ್ನು ಹೊಂದಿರುವ ತನಿಖಾ ಸಂಸ್ಥೆಗಳ ಮಾಮೂಲು ಪದ್ಧತಿಯಾಗಬಾರದು.

ಭೀಮಾ ಕೋರೆಗಾಂವ್ ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಾವು ಎಲ್ಲ ಪ್ರಜಾಸತ್ತಾತ್ಮಕ,ಪ್ರಗತಿಪರ ಮತ್ತು ಅಂಬೇಡ್ಕರ್ ಅನುಯಾಯಿಗಳನ್ನು ಆಗ್ರಹಿಸುತ್ತೇವೆ. ಮುಂದಿನ ತಿಂಗಳುಗಳಲ್ಲಿ,ಸಾಂಕ್ರಾಮಿಕ ಅಂತ್ಯಗೊಂಡ ಬಳಿಕ ಅವರನ್ನು ಬಿಡುಗಡೆ ಮಾಡಿಸಲು ನಾವು ನಮ್ಮ ಸಾಮೂಹಿಕ ಶಕ್ತಿಯನ್ನು ಅರ್ಪಿಸುವ ಅಗತ್ಯವಿದೆ.‌

ಕೃಪೆ: Thewire.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top