‘‘ಇಲ್ಲಿ ನಡೆದಿರುವುದು ಮಾನವೀಯತೆಯ ದಮನ’’ | Vartha Bharati- ವಾರ್ತಾ ಭಾರತಿ

--

‘‘ಇಲ್ಲಿ ನಡೆದಿರುವುದು ಮಾನವೀಯತೆಯ ದಮನ’’

ಭಾಗ -2
 

(ನಿನ್ನೆಯ ಸಂಚಿಕೆಯಿಂದ)
ಕೋಟಿಕೋಟಿ ಸುರಿದು, ದಿಲ್ಲಿಯ ಆಡಳಿತ ಕೇಂದ್ರದ ಕಟ್ಟಡ ವೈಭವವನ್ನು ಹೊಸ ಎತ್ತರಕ್ಕೆ ಒಯ್ಯುವ ತುರ್ತು ಇತ್ತು. ಹೊಸ ಹಿಂದೂ ಭಾರತವು ಹಳೆಯ ಪಳೆಯುಳಿಕೆ ಕಟ್ಟಡಗಳಲ್ಲಿ ಉಳಿಯುವುದಾದರೂ ಹೇಗೆ? ಜಗನ್ಮಾರಿಯ ದಾಳಿಗೆ ಸಿಕ್ಕು ಬಸವಳಿದಿದ್ದ ದಿಲ್ಲಿ ಈಗ ಲಾಕ್‌ಡೌನ್ ವೇಳೆಯಲ್ಲಿ ಅಗತ್ಯ ಸೇವೆ ಎಂದು ಪರಿಗಣಿತವಾಗಿರುವ ‘ಸೆಂಟ್ರಲ್ ವಿಸ್ತಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಕಾರ್ಮಿಕರನ್ನು ಅಲ್ಲಿಗೆ ಹೊತ್ತೊಯ್ಯಲಾಗುತ್ತಿದೆ. ಅಲ್ಲಿ ಅವರು ಯೋಜನೆ ನಕಾಶೆಯಲ್ಲಿ, ಸ್ಮಶಾನವೊಂದನ್ನು ಸೇರಿಸಿಕೊಳ್ಳಬಹುದು.

ಕುಂಭಮೇಳವನ್ನು ಆಯೋಜಿಸುವ ತುರ್ತಿತ್ತು. ಲಕ್ಷಾಂತರ ಹಿಂದೂ ಶ್ರದ್ಧಾಳುಗಳು ಆ ಸಣ್ಣ ನಗರದಲ್ಲಿ ಗುಂಪುಸೇರಿ ಗಂಗೆಯಲ್ಲಿ ಸ್ನಾನ ಮಾಡಿ, ಶುದ್ಧರಾಗಿ, ಪುನೀತರಾಗಿ ಅಲ್ಲಿಂದ ದೇಶದಾದ್ಯಂತ ತಮ್ಮ ತಮ್ಮ ಮನೆಗೆ ಹಿಂದಿರುಗುವಾಗ ವೈರಸ್ಸನ್ನೂ ತಮ್ಮಾಂದಿಗೆ ಸಮಾನವಾಗಿ ಕೊಂಡೊಯ್ದು ಹಂಚುವ ತುರ್ತಿತ್ತು. ಕುಂಭದ ಪವಿತ್ರ ಮುಳುಗುವಿಕೆ ‘‘ಸಾಂಕೇತಿಕವಾಗಲಿ’’ ಎಂಬ ಮೋದಿಯವರ ಮೆತ್ತಗಿನ ಹೇಳಿಕೆಯ ಹಿಂದಿರುವ ಅರ್ಥ ಅದೇನೇ ಇರಲಿ, ಮೇಳ ಸಂಭ್ರಮದಿಂದ ನಡೆಯಿತು. (ಕಳೆದ ವರ್ಷ ತಬ್ಲೀಗಿ ಜಮಾಅತ್ ಎಂಬ ಮುಸ್ಲಿಂ ಸಂಘಟನೆಯ ಸಮ್ಮೇಳನದ ವೇಳೆ ಅಲ್ಲಿ ಪಾಲ್ಗೊಂಡವರಿಗೆ ಆದಂತೆ, ಮಾಧ್ಯಮಗಳು ಈ ಬಾರಿ, ‘‘ಕೊರೋನ ಜಿಹಾದಿಗಳು’’ ಎಂದು ಆಪಾದಿಸಿಲ್ಲ ಅಥವಾ ಕುಂಭಮೇಳದಲ್ಲಿ ಪಾಲ್ಗೊಂಡವರನ್ನು ಮಾನವೀಯತೆಯ ವಿರುದ್ಧ ಅಪರಾಧಿಗಳೆಂದು ದೂರಿಲ್ಲ). ಇದಲ್ಲದೆ ಮ್ಯಾನ್ಮಾರ್‌ನಲ್ಲಿ ಕ್ರಾಂತಿಯ ನಡುವೆ ಪಲಾಯನಮಾಡಿ ಬಂದಿದ್ದ ಕೆಲವು ಸಾವಿರ ರೊಹಿಂಗ್ಯಾ ನಿರಾಶ್ರಿತರನ್ನು ತುರ್ತಾಗಿ ಮ್ಯಾನ್ಮಾರ್‌ನ ಸೇನಾಡಳಿತಕ್ಕೆ ವಾಪಸ್ ಕಳಿಸುವುದಿತ್ತು (ಮತ್ತೆ, ಇಲ್ಲಿ ಕೂಡ ಸುಪ್ರೀಂ ಕೋರ್ಟು ತನ್ನೆದುರು ದೂರು ಬಂದಾಗ ಸರಕಾರದ ದೃಷ್ಟಿಕೋನವನ್ನೇ ಸಮರ್ಥಿಸಿತು.)

ಒಟ್ಟಿನಲ್ಲಿ, ಸರಕಾರ ತನ್ನ ತುರ್ತು ಕೆಲಸಗಳಲ್ಲಿ ಬಹಳೇ ಬಹಳೇ, ಬಹಳೇ ವ್ಯಸ್ಥವಾಗಿತ್ತು. ಇಷ್ಟೆಲ್ಲಾ ತುರ್ತು ಕೆಲಸಗಳಲ್ಲದೇ, ಅಲ್ಲಿ ಪಶ್ಚಿಮ ಬಂಗಾಳದಲ್ಲಿ ಗೆಲ್ಲಲೇಬೇಕಾದ ಒಂದು ಚುನಾವಣೆ ಇತ್ತು. ಅದಕ್ಕಾಗಿ ಮೋದಿಯವರ ಖಾಸ್ ವ್ಯಕ್ತಿ, ಗೃಹಸಚಿವ ಅಮಿತ್ ಶಾ ಅವರು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ತಿಂಗಳುಗಟ್ಟಲೆ ಬಂಗಾಳದಲ್ಲಿ ಠಿಕಾಣಿ ಹೂಡಿ, ಅಲ್ಲಿ ಹಳ್ಳಿ ಹಳ್ಳಿಗಳಲ್ಲಿ ಮನುಷ್ಯರನ್ನು ಮನುಷ್ಯರಿಗೆ ಎತ್ತಿಕಟ್ಟುವ ಅವರ ಪಕ್ಷದ ಕೊಲೆಗಡುಕ ರಾಜಕಾರಣದ ಪ್ರಚಾರ ಮಾಡಿದ್ದರು. ಭೌಗೋಳಿಕವಾಗಿ, ಪಶ್ಚಿಮಬಂಗಾಳ ಸಣ್ಣ ರಾಜ್ಯ. ಚುನಾವಣೆಯನ್ನು ಒಂದೇ ದಿನದಲ್ಲೂ ಮುಗಿಸಬಹುದಿತ್ತು. ಆ ರೀತಿ ಮಾಡಿದ ಪೂರ್ವನಿದರ್ಶನಗಳಿವೆ. ಆದರೆ, ಬಿಜೆಪಿಗೆ ಅದು ಹೊಸ ಜಾಗವಾದ್ದರಿಂದ, ಪಕ್ಷಕ್ಕೆ ಬಂಗಾಲದವರಲ್ಲದ ಹೊರಗಿನ ಕಾರ್ಯಕರ್ತರ ಸಂಚಲನಕ್ಕಾಗಿ ಮತ್ತು ಚುನಾವಣಾ ಚಟುವಟಿಕೆಗಳ ಉಸ್ತುವಾರಿಗಾಗಿ ಸಮಯ ಬೇಕಿತ್ತು. ಚುನಾವಣೆಯನ್ನು ಎಂಟು ಹಂತಗಳಿಗೆ, ಒಂದು ತಿಂಗಳ ವಿಸ್ತಾರಕ್ಕೆ ವಿಂಗಡಿಸಲಾಯಿತು, ಎಪ್ರಿಲ್ 29ಕ್ಕೆ ಚುನಾವಣೆಯ ಕೊನೆಯ ಹಂತ. ಕೊರೋನ ಸೋಂಕು ಹೆಚ್ಚುತ್ತಾ ಹೋದಂತೆ, ಬೇರೆ ರಾಜಕೀಯ ಪಕ್ಷಗಳು ಚುನಾವಣಾ ವೇಳಾಪಟ್ಟಿಯನ್ನು ಮರುಪರಿಶೀಲಿಸುವಂತೆ ಚುನಾವಣಾ ಆಯೋಗವನ್ನು ಕೋರಿಕೊಂಡವು. ಅದನ್ನು ನಿರಾಕರಿಸಿದ ಚುನಾವಣಾ ಆಯೋಗ, ಸರಕಾರದ ಪರವಾಗಿ ನಿಂತಿತು ಮತ್ತು ಪ್ರಚಾರ ಸಭೆಗಳು ಮುಂದುವರಿದವು.

ಬಿಜೆಪಿಯ ಸ್ಟಾರ್ ಪ್ರಚಾರಕ, ಸ್ವತಃ ಪ್ರಧಾನಮಂತ್ರಿಗಳು ಸಂಭ್ರಮದಿಂದ ಮಾಸ್ಕ್ ರಹಿತರಾಗಿ, ಮಾಸ್ಕ್ ರಹಿತ ಜನಸ್ತೋಮವನ್ನುದ್ದೇಶಿಸಿ ಮಾಡಿದ ಭಾಷಣಗಳ ಮತ್ತು ದೊಡ್ಡ ಸಂಖ್ಯೆಯಲ್ಲಿ ಹಾಜರಾದದ್ದಕ್ಕಾಗಿ ಜನರನ್ನು ಅಭಿನಂದಿಸಿದ ವೀಡಿಯೊಗಳನ್ನು ಯಾರು ನೋಡಿಲ್ಲ? ಅದು ನಡೆದದ್ದು ಎಪ್ರಿಲ್ 17ರಂದು; ದೈನಂದಿನ ಸೋಂಕಿತರ ಸಂಖ್ಯೆಯ 2,00,000ಮೀರಿ ಮುನ್ನುಗ್ಗುತ್ತಿದ್ದ ಸಂದರ್ಭದಲ್ಲಿ. ಈಗ ಮತದಾನ ಮುಗಿದಿದ್ದು, ಪಶ್ಚಿಮ ಬಂಗಾಳವು ಕೊರೋನ ಸೋಂಕಿನ ಹೊಸ ಕೇಂದ್ರವಾಗಲು ಸನ್ನದ್ಧವಾಗಿದೆ, ಅದೂ ಮೂರನೇ ಮ್ಯುಟೇಷನ್ ಹೊಂದಿದ ವೈರಾಣು ವಿಧದೊಂದಿಗೆ-ಅದರ ಹೆಸರೇನು ಗೊತ್ತೇ? ಬಂಗಾಳ ವೈರಸ್. ರಾಜ್ಯದ ರಾಜಧಾನಿ ಕೋಲ್ಕತಾದಲ್ಲಿ ತಪಾಸಣೆಗೊಳಗಾದ ಇಬ್ಬರಲ್ಲಿ ಒಬ್ಬರು ಕೋವಿಡ್ ಪಾಸಿಟಿವ್ ಎಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಬಿಜೆಪಿ, ತಾನು ಗೆದ್ದರೆ, ಜನರಿಗೆ ಉಚಿತ ಲಸಿಕೆ ಎಂದು ಘೋಷಿಸಿದೆ. ಒಂದು ವೇಳೆ ಗೆಲ್ಲದಿದ್ದರೆ?

‘‘ಅಳುಬುರುಕರಾಗದಿರಲು ಪ್ರಯತ್ನಿಸೋಣ.’’

ಸರಿ, ಲಸಿಕೆಗಳ ಬಗ್ಗೆ ಏನಂತೀರಿ? ಅವು ನಮ್ಮ ಜೀವ ರಕ್ಷವೇ? ಭಾರತ ಜಾಗತಿಕವಾಗಿ ಲಸಿಕೆಗಳ ಉತ್ಪಾದನೆಗೆ ಹೃದಯಸ್ಥಾನ ಅಲ್ಲವೆ? ವಾಸ್ತವದಲ್ಲಿ, ಭಾರತ ಸರಕಾರ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮತ್ತು ಭಾರತ್ ಬಯೋಟೆಕ್ ಎಂಬೆರಡು ಕಂಪೆನಿಗಳ ಮೇಲೆ ಅವಲಂಬಿತವಾಗಿದ್ದು, ಅವೆರಡೂ ಕಂಪೆನಿಗಳು ಜಗತ್ತಿನ ಎರಡು ಅತಿ ದುಬಾರಿ ಲಸಿಕೆಗಳನ್ನು ಜಗತ್ತಿನ ಅತ್ಯಂತ ಬಡವರಿಗೆ ಕೊಡ ಹೊರಟಿವೆ. ಈ ವಾರ ಅವರು ಪ್ರಕಟನೆೆಯೊಂದನ್ನು ನೀಡಿ, ರಾಜ್ಯ ಸರಕಾರಗಳಿಗೆ ಸ್ವಲ್ಪ ಕಡಿಮೆ ದರದಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸ್ವಲ್ಪ ಹೆಚ್ಚಿನ ದರದಲ್ಲಿ ಅವನ್ನು ಮಾರುವುದಾಗಿ ಹೇಳಿಕೊಂಡಿದ್ದಾರೆ. ಸರಳ ಲೆಕ್ಕಾಚಾರಗಳಲ್ಲೂ, ಈ ಲಸಿಕೆ ಕಂಪೆನಿಗಳು ಭರಪೂರ ಲಾಭ ಗಳಿಸಲಿವೆ ಎಂಬುದು ಕಾಣಿಸುತ್ತಿದೆ.

ಮೋದಿಯವರ ನೇತೃತ್ವದಲ್ಲಿ ಭಾರತದ ಆರ್ಥಿಕತೆ ಶಿಥಿಲಗೊಂಡಿದೆ, ಕಷ್ಟದ ಬದುಕು ಕಟ್ಟಿಕೊಳ್ಳುತ್ತಿದ್ದ ಕೋಟ್ಯಂತರ ಜನ ಈಗ ಬಡತನದ ಶೂಲಕ್ಕೆ ಸಿಲುಕಿದ್ದಾರೆ. ದೊಡ್ಡ ಸಂಖ್ಯೆಯ ಜನರಿಗೆ ಈಗ ಅವರ ಬದುಕು ಸಾಗುವುದು ರಾಷ್ಟ್ರೀಯ ಗ್ರಾಮೀಣೋದ್ಯೋಗ ಖಾತ್ರಿ ಯೋಜನೆ (NREGA) ಯ ಬಲದಿಂದ. ಅದನ್ನು 2005ರಲ್ಲಿ ಆರಂಭಿಸಿದ್ದು, ಕಾಂಗ್ರೆಸ್ ಪಕ್ಷ. ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟ ಆಗಿರುವ ಜನ ತಮ್ಮ ದುಡಿಮೆಯ ದೊಡ್ಡ ಪಾಲನ್ನು ಲಸಿಕೆಗಾಗಿ ವೆಚ್ಚ ಮಾಡಿಯಾರೆಂಬುದನ್ನು ನಂಬುವುದು ಕಷ್ಟ. ಇಂಗ್ಲೆಂಡಿನಲ್ಲಿ ಲಸಿಕೆಗಳು ಉಚಿತ ಮತ್ತು ಅದು ಮೂಲಭೂತ ಹಕ್ಕು. ಲಸಿಕೆಗೆ ಸರದಿ ಮೀರಿ ಮುಂದೆ ಬರುವವರನ್ನು ಶಿಕ್ಷಿಸಲು ಅಲ್ಲಿನ ಸರಕಾರಕ್ಕೆ ಅಧಿಕಾರ ಇದೆ. ಆದರೆ ಭಾರತದಲ್ಲಿ ಲಸಿಕೆ ಪ್ರಚಾರದ ಹಿಂದಿರುವ ಮೂಲ ಪ್ರೇರಣೆ ಕಾರ್ಪೊರೇಟ್ ಲಾಭ.

ನಮ್ಮ ದೇಶದ ಮೋದಿ ಪರ ಟೆಲಿವಿಷನ್ ಚಾನೆಲ್‌ಗಳು ಈ ಜಗನ್ಮಾರಿಯ ಕುರಿತು ಸುದ್ದಿ ಮಾಡುವಾಗ, ಅವರು ಹೇಗೆ ಕಲಿಸಿದ್ದನ್ನು ಮಾತನಾಡುವ ಗಿಳಿಗಳಂತಾಡುತ್ತಾರೆಂಬುದು ಎದ್ದು ಕಾಣಿಸುತ್ತದೆ. ಅವರು ‘‘ಸಿಸ್ಟಮ್ ಕುಸಿದಿದೆ’’ ಎಂದು ಪದೇ ಪದೇ ಹೇಳುತ್ತಾರೆ. ವೈರಸ್ ದೇಶದ ಆರೋಗ್ಯ ಆರೈಕೆ ‘ಸಿಸ್ಟಮ್’ ಅನ್ನು ಹತೊಟಿಗೆ ತೆಗೆದುಕೊಂಡಿದೆ ಅನ್ನುತ್ತಾರೆ. ಇದು ಸಿಸ್ಟಮ್ ಕುಸಿದದ್ದಲ್ಲ. ‘ಸಿಸ್ಟಮ್’ ಇರಲೇ ಇಲ್ಲ. ಸರಕಾರ - ಈ ಸರಕಾರ ಮತ್ತು ಇದಕ್ಕಿಂತ ಹಿಂದಿನ ಕಾಂಗ್ರೆಸ್ ಸರಕಾರ ಕೂಡ- ಇದ್ದ ಬದ್ದ ಅಲ್ಪಸ್ವಲ್ಪಆರೋಗ್ಯ ಮೂಲಸೌಕರ್ಯವನ್ನು ಹದಗೆಡಿಸಿತು. ಆರೋಗ್ಯ ಆರೈಕೆ ವ್ಯವಸ್ಥೆ ಇಲ್ಲದಿದ್ದಲ್ಲಿ ಜಗನ್ಮಾರಿಗಳು ವಕ್ಕರಿಸಿದಾಗ ಇದೇ ಆಗುವುದು. ಭಾರತ ತನ್ನ ಜಿಡಿಪಿಯ ಶೇ. 1.25ಭಾಗವನ್ನು ಆರೋಗ್ಯ ಕ್ಷೇತ್ರಕ್ಕೆಂದು ಖರ್ಚು ಮಾಡುತ್ತದೆ, ಇದು ಬಡ ದೇಶಗಳೂ ಸೇರಿದಂತೆ, ಹೆಚ್ಚಿನ ದೇಶಗಳಿಗಿಂತ ಬಹಳ ಕಡಿಮೆ. ಸರಕಾರ ಹೇಳುತ್ತಿರುವ ಈ ಮೊತ್ತ ಕೂಡ ಎತ್ತರಿಸಿ ಹೇಳಿದ್ದು. ಯಾಕೆಂದರೆ, ಆರೋಗ್ಯ ಸೇವೆ ಎಂದು ಭಾವಿಸಲಾಗದಂತಹ ಸೇವೆಗಳೂ ಇದರಲ್ಲಿ ಸೇರಿವೆ. ಹಾಗಾಗಿ, ಆರೋಗ್ಯ ಕ್ಷೇತ್ರದಲ್ಲಿ ಭಾರತದ ವಾಸ್ತವ ಜಿಡಿಪಿ ಶೇ. 0.34ಅಷ್ಟೇ. ದುರಂತ ಎಂದರೆ, 2016ರ ಲಾನ್ಸೆಟ್ ಅಧ್ಯಯನವೊಂದು ಹೇಳುವಂತೆ, ದೇಶದಲ್ಲಿ ನಗರಗಳ ಶೇ. 78 ಆರೋಗ್ಯ ವ್ಯವಸ್ಥೆ ಮತ್ತು ಹಳ್ಳಿಗಳ ಶೇ. 71 ಆರೋಗ್ಯ ವ್ಯವಸ್ಥೆಯನ್ನು ಖಾಸಗಿ ವಲಯ ನಿರ್ವಹಿಸುತ್ತಿದೆ.

ಸಾರ್ವಜನಿಕ ಕ್ಷೇತ್ರದಲ್ಲಿರುವ ಸಂಪನ್ಮೂಲಗಳನ್ನೂ ಕೂಡ ಭ್ರಷ್ಟ ಅಧಿಕಾರಿಗಳು, ವೈದ್ಯರು ಸೇರಿಕೊಂಡು ಭ್ರಷ್ಟ ರೆಫರಲ್‌ಗಳು ಮತ್ತು ವಿಮಾ ರಾಕೆಟ್‌ಗಳ ಮೂಲಕ ಖಾಸಗಿಯವರ ಕೈಗೆ ಹರಿವಾಣದಲ್ಲಿಟ್ಟು ಕೊಡುತ್ತಿದ್ದಾರೆ. ಆರೋಗ್ಯ ಆರೈಕೆ ಒಂದು ಮೂಲಭೂತ ಹಕ್ಕಾಗಿದ್ದು, ಖಾಸಗಿ ವಲಯದವರು, ಹಣವಿಲ್ಲದ ಹಸಿದ, ಅನಾರೋಗ್ಯ ಪೀಡಿತ, ಸಾಯುತ್ತಿರುವ ಜನತೆಗೆ ಅದನ್ನು ಒದಗಿಸಲಾರರು. ಆರೋಗ್ಯ ಕ್ಷೇತ್ರ ಈ ಗಾತ್ರದಲ್ಲಿ ಖಾಸಗೀಕರಣವಾಗುತ್ತಿರುವುದು ಅಪರಾಧವೇ ಸರಿ.

ಕುಸಿದಿರುವುದು ಸಿಸ್ಟಮ್ ಅಲ್ಲ, ಸರಕಾರ. ‘‘ಕುಸಿದಿದೆ’’ ಎಂಬುದು ಹೆಚ್ಚಿನಂಶ ಸಮರ್ಪಕವಾದ ಶಬ್ದ ಅಲ್ಲ. ಏಕೆಂದರೆ, ನಾವೀಗ ಅನುಭವಿಸುತ್ತಿರುವುದು ಕ್ರಿಮಿನಲ್ ನಿರ್ಲಕ್ಷ ಅಲ್ಲ, ಬದಲಾಗಿ ಮಾನವೀಯತೆಗೆ ಮಾಡುತ್ತಿರುವ ಅಪಚಾರ. ವೈರಾಣು ತಜ್ಞರ ಪ್ರಕಾರ, ಶೀಘ್ರವೇ ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆಯ 5,00,000ಕ್ಕೆ ಏರಲಿದೆ. ಮುಂದಿನ ತಿಂಗಳುಗಳಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಳ್ಳಲಿದ್ದಾರೆ. ನಾನು ಮತ್ತು ನನ್ನ ಸ್ನೇಹಿತರೆಲ್ಲ ಪ್ರತಿದಿನ ಪರಸ್ಪರ ದೂರವಾಣಿ ಕರೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ; ಶಾಲೆಯಲ್ಲಿ ಹಾಜರಿ ತೆಗೆದಂತೆ. ಯಾಕೆಂದರೆ ನಾವು ಎಲ್ಲ ಬದುಕಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ. ನಾವು ನಮ್ಮ ಪ್ರೀತಿಪಾತ್ರರೊಡನೆ ಹಾಗೆ ಮಾತನಾಡುವುದು ಆತಂಕದಿಂದ ಕಣ್ಣೀರು ತುಂಬಿಕೊಂಡೇ. ನಮಗೆ ಮತ್ತೊಮ್ಮೆ ಭೇಟಿಮಾಡಲಾಗುತ್ತದೆಯೇ ಗೊತ್ತಿಲ್ಲ. ನಮ್ಮ ಬರವಣಿಗೆ, ಕೆಲಸಗಳೆಲ್ಲ ನಡೆಯುತ್ತಿವೆ, ಆದರವು ಪೂರ್ಣಗೊಳ್ಳಲಿವೆಯೇ ಗೊತ್ತಿಲ್ಲ. ಮುಂದೇನು ಘೋರದುರಂತ ಕಾದಿದೆ, ಮುಜುಗರ ಕಾದಿದೆ ಎಂದೂ ಗೊತ್ತಿಲ್ಲ. ನಮ್ಮನ್ನಿಂದು ಕಂಗೆಡಿಸಿರುವುದು ಇವೆಲ್ಲ ಸಂಗತಿಗಳು ತಂದೊಡ್ಡಿರುವ ಅಪಮಾನ. ಸಾಮಾಜಿಕ ಜಾಲತಾಣಗಳಲ್ಲಿ ್ಫ#ModiMustResign ಟ್ರೆಂಡ್ ಆಗುತ್ತಿದೆ.

ಮೀಮ್‌ಗಳಲ್ಲಿ, ವ್ಯಂಗ್ಯಚಿತ್ರಗಳಲ್ಲಿ ಮೋದಿ ತನ್ನ ಗಡ್ಡದ ಮರೆಯಿಂದ ತಲೆಬುರುಡೆಗಳ ರಾಶಿಯ ಜೊತೆ ಇಣುಕುತ್ತಿರುವುದು ಕಾಣಿಸುತ್ತಿದೆ. ಮಹಾತ್ಮಾ ಮೋದಿ ಸಾರ್ವಜನಿಕ ಸಭೆಯಲ್ಲಿ ಹೆಣಗಳ ಸಮೂಹವನ್ನುದ್ದೇಶಿಸಿ ಮಾತನಾಡುವುದು ಕಾಣಿಸುತ್ತಿದೆ. ರಣಹದ್ದುಗಳಂತೆ ಚಿತ್ರಿತವಾಗಿರುವ ಮೋದಿ ಮತ್ತು ಅಮಿತ್ ಶಾ ಜೋಡಿ ಶವಗಳಿಂದ ಭರಿತವಾದ ನೆಲದಲ್ಲಿ ವೋಟುಗಳಿಗಾಗಿ ಅರಸುತ್ತಿರುವುದು ಕಾಣಿಸುತ್ತಿದೆ. ಆದರೆ ಇವೆಲ್ಲ ಕಥೆಯ ಒಂದು ಮಗ್ಗುಲು ಮಾತ್ರ. ಅದರ ಇನ್ನೊಂದು ಭಾಗದಲ್ಲಿ, ಭಾವನೆಗಳಿಲ್ಲದ ವ್ಯಕ್ತಿ, ಖಾಲಿಕಣ್ಣುಗಳ ನಂಜು ನಗೆಯ ವ್ಯಕ್ತಿ, ಈ ಹಿಂದೆ ಹಲವರು ಸರ್ವಾಧಿಕಾರಿಗಳು ಮಾಡಿದಂತೆ ಉಳಿದವರನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸುತ್ತಿರುವುದು ಕಾಣಿಸುತ್ತದೆ. ಅವರ ಈ ರೋಗಲಕ್ಷಣಗಳು ಸಾಂಕ್ರಾಮಿಕವಾಗಬಲ್ಲವು. ಆ ಕಾರಣಕ್ಕಾಗಿಯೇ ಅವರು ಬೇರೆಯವರಿಗಿಂತ ಭಿನ್ನ. ಅವರ ಮತದಾರರು ಬಲುದೊಡ್ಡ ಸಂಖ್ಯೆಯಲ್ಲಿರುವ ಹಾಗೂ ತನ್ನ ಬೃಹತ್ ಗಾತ್ರದ ಕಾರಣದಿಂದಾಗಿಯೇ ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಉತ್ತರ ಭಾರತದಲ್ಲಿ, ಈ ವ್ಯಕ್ತಿ ಉಂಟುಮಾಡುತ್ತಿರುವ ನೋವು ಅವರಿಗೆ ವಿಲಕ್ಷಣವಾದ ಆನಂದವನ್ನು ಉಂಟುಮಾಡುತ್ತಿರುವಂತಿದೆ.

ಫ್ರೆಡ್ರಿಕ್ ಡೊಗ್ಲಾಸ್ ಸರಿಯಾಗಿಯೇ ಹೇಳಿದ್ದಾರೆ: ‘‘ಸರ್ವಾಧಿಕಾರಿಗಳ ಮಿತಿ ನಿಗದಿಯಾಗುವುದು ಅವರು ಯಾರನ್ನು ಮೆಟ್ಟಿ ಆಡಳಿತ ನಡೆಸುತ್ತಾರೋ ಅಂತಹವರ ಸಹನಶೀಲತೆಯಲ್ಲಿ.’’ ನಾವು ಭಾರತದಲ್ಲಿ ನಮ್ಮ ಸಹನಶೀಲತೆಯ ಬಗ್ಗೆ ಹೆಮ್ಮೆ ಹೊಂದಿದ್ದೇವೆ. ನಮ್ಮನ್ನು ಹೊಂದಾಣಿಕೆಯ ಬದುಕಿಗೆ, ಯಾರ ತಂಟೆಗೂ ಹೋಗದೆ ನಮ್ಮಷ್ಟಕ್ಕೆ ನಾವೇ ಇದ್ದುಬಿಡುವುದಕ್ಕೆ, ನಮ್ಮ ಸಿಟ್ಟನ್ನು ಹೊರ ಹಾಕುತ್ತಲೇ ಸಮಸಮಾಜ ನಿರ್ಮಿಸುವಲ್ಲಿ ನಮ್ಮ ಅಸಾಮರ್ಥ್ಯವನ್ನು ಹೇಳಿಕೊಳ್ಳುವುದಕ್ಕೆ ನಾವು ಬಹಳ ಚೆನ್ನಾಗಿ ತರಬೇತಿ ಪಡೆದಿದ್ದೇವೆ. ನೋಡಿ, ನಮಗಾಗುತ್ತಿರುವ ಅಪಮಾನವನ್ನು ನಾವು ಎಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಿದ್ದೇವೆ.

ಅವರು 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ರಾಜಕೀಯ ಪ್ರವೇಶಿಸಿದ ಬಳಿಕ, 2002ರ ಗುಜರಾತ್ ನರಮೇಧದ ಮೂಲಕ ತನ್ನ ಭವಿಷ್ಯದ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಕೆಲವು ದಿನಗಳ ಕಾಲ ನಡೆದ ಈ ಕರಾಳ ಘಟನೆಯಲ್ಲಿ, ಕಾನೂನು ಕೈಗೆತ್ತಿಕೊಂಡ ಹಿಂದೂ ಸಂಘಟನೆಗಳು, ಗುಜರಾತ್ ಪೊಲೀಸರ ಸಹಕಾರದಲ್ಲಿ ಅಥವಾ ಅವರ ಕಣ್ಣಳತೆಯಲ್ಲೇ ಸಾವಿರಾರು ಮಂದಿ ಮುಸ್ಲಿಮರನ್ನು ಕೊಲೆಗೈದರು, ಅತ್ಯಾಚಾರ ಮಾಡಿದರು, ಜೀವಂತ ಸುಟ್ಟರು. 50 ಮಂದಿ ಹಿಂದೂ ಯಾತ್ರಿಕರನ್ನು ಜೀವಂತ ಸುಟ್ಟ ಘೋರ ದಾಳಿಗೆ ‘‘ಪ್ರತೀಕಾರ’’ ರೂಪದಲ್ಲಿ ಇದು ನಡೆದಿತ್ತು. ಹಿಂಸೆ ಕಡಿಮೆಯಾದ ಬಳಿಕ, ಆಗಷ್ಟೇ ತನ್ನ ಪಕ್ಷದಿಂದ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದ ಮೋದಿ, ಅವಧಿ ಪೂರ್ವ ಚುನಾವಣೆ ನಿಗದಿ ಮಾಡುತ್ತಾರೆ. ‘ಹಿಂದೂ ಹೃದಯ ಸಾಮ್ರಾಟ’ ಎಂದು ಅವರನ್ನು ಬಿಂಬಿಸಿ ಇಡಿಯ ಚುನಾವಣಾ ಪ್ರಚಾರ ನಡೆಯುತ್ತದೆ ಮತ್ತು ಮೋದಿಗೆ ಅಭೂತಪೂರ್ವ ಬಹುಮತ ಸಿಗುತ್ತದೆ. ಅಲ್ಲಿಂದೀಚೆಗೆ ಮೋದಿ ಚುನಾವಣೆಗಳನ್ನು ಸೋತದ್ದೇ ಇಲ್ಲ.

ಪತ್ರಕರ್ತ ಆಶಿಷ್ ಖೇತಾನ್, ಗುಜರಾತ್ ನರಮೇಧಕ್ಕೆ ಕಾರಣರಾದ ಕೊಲೆಗಡುಕರು ಹಲವು ಮಂದಿಯನ್ನು ಕ್ಯಾಮರಾದೆದುರು ಮಾತನಾಡಿಸಿದಾಗ ಅವರು, ತಮ್ಮ ನರಮೇಧದ ಕತೆಗಳನ್ನು ಜಂಬಕೊಚ್ಚಿಕೊಂಡದ್ದಿದೆ. ಹೇಗೆ ಜನರನ್ನು ಕತ್ತರಿಸಿಹಾಕಿದೆವು, ಹೇಗೆ ಗರ್ಭಿಣಿಯ ಹೊಟ್ಟೆ ಸೀಳಿದೆವು ಮತ್ತು ಹೇಗೆ ಮಕ್ಕಳ ತಲೆಯನ್ನು ನೆಲಕ್ಕೆ ಅಪ್ಪಳಿಸಿದೆವು ಎಂದು. ಮೋದಿ ತಮ್ಮ ಮುಖ್ಯಮಂತ್ರಿ ಆಗಿದ್ದುದರಿಂದಲೇ ತಮಗೆ ಇದನ್ನೆಲ್ಲ ಮಾಡಲು ಸಾಧ್ಯವಾಯಿತು ಎಂದವರು ಹೇಳಿದ್ದರು. ರಾಷ್ಟ್ರೀಯ ವಾಹಿನಿಗಳು ಆ ವೀಡಿಯೊಗಳನ್ನು ಪ್ರಸಾರ ಮಾಡಿದ್ದವು. ಮೋದಿ ಅಧಿಕಾರದ ಕುರ್ಚಿಯಲ್ಲಿ ಇರುವಂತೆಯೇ, ಖೇತಾನ್ ಅವರ ಈ ಟೇಪ್‌ಗಳನ್ನು ನ್ಯಾಯಾಲಯಗಳಲ್ಲಿ ಸಲ್ಲಿಸಲಾಗಿತ್ತು ಮತ್ತು ಫೊರೆನ್ಸಿಕ್ ತಪಾಸಣೆಗಳಿಗೆ ಒಳಪಡಿಸಲಾಗಿತ್ತು; ಅವನ್ನು ಹಲವು ಬಾರಿ ಸಾಕ್ಷ್ಯಗಳಾಗಿ ಬಳಸಿಕೊಳ್ಳಲಾಗಿತ್ತು.

ಕಾಲಾನುಕ್ರಮದಲ್ಲಿ ಕೆಲವರು ಕೊಲೆಗಡುಕರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು, ಆದರೆ ಬಹುತೇಕರು ಇನ್ನೂ ಹೊರಗಿದ್ದಾರೆ. ಖೇತಾನ್ ತನ್ನ ಇತ್ತೀಚೆಗಿನ ಪುಸ್ತಕ "Undercover: My Journey Into the Darkness of Hindutva'’ದಲ್ಲಿ, ಮೋದಿ ಮುಖ್ಯಮಂತ್ರಿತ್ವದ ಅವಧಿಯಲ್ಲಿ, ಗುಜರಾತಿನ ಪೊಲೀಸರು, ನ್ಯಾಯಾಧೀಶರು, ವಕೀಲರು, ಸರಕಾರಿ ವಕೀಲರು ಮತ್ತು ತನಿಖಾ ಸಂಸ್ಥೆಗಳು ಒಟ್ಟು ಸೇರಿ ಹೇಗೆ ಕುತಂತ್ರದಿಂದ ಸಾಕ್ಷಗಳನ್ನು ತಿರುಚಿದರು, ಸಾಕ್ಷಿಗಳಿಗೆ ಭೀತಿ ಹುಟ್ಟಿಸಿದರು ಮತ್ತು ನ್ಯಾಯಾಧೀಶರನ್ನು ವರ್ಗಾಯಿಸಿದರು ಎಂಬುದನ್ನು ವಿವರವಾಗಿ ಹೇಳಿದ್ದಾರೆ. ಇದೆಲ್ಲ ಚೆನ್ನಾಗಿ ಗೊತ್ತಿದ್ದರೂ, ಭಾರತದ ಹಲವು ಮಂದಿ ಸಾರ್ವಜನಿಕ ಬುದ್ಧಿಜೀವಿಗಳೆನ್ನಿಸಿಕೊಂಡವರು, ದೊಡ್ಡ ದೊಡ್ಡ ಕಂಪೆನಿ ಗಳ ಮುಖ್ಯಸ್ಥರು ಮತ್ತವರ ಮಾಲಕತ್ವದಲ್ಲಿರುವ ಮಾಧ್ಯಮಗಳು, ಮೋದಿ ಪ್ರಧಾನಮಂತ್ರಿ ಆಗುವುದಕ್ಕೆ ಹಾದಿ ಮಾಡಿಕೊಡಲು ಬಹಳ ಶ್ರಮ ಹಾಕಿದರು. ಇದನ್ನೆಲ್ಲ ಸತತವಾಗಿ ಟೀಕಿಸುತ್ತಿದ್ದ ನಮ್ಮಂತಹವರನ್ನು ಅಪಮಾನಿಸಿ, ಬೈದರು.

‘‘ನಿರ್ಲಕ್ಷಿಸಿ ಮುನ್ನುಗ್ಗಿ’’ ಅವರ ಮಂತ್ರವಾಗಿತ್ತು. ಈವತ್ತಿಗೂ ಕೂಡ ಅವರು ಮೋದಿಯವರನ್ನು ಅವರ ಭಾಷಣ ಕೌಶಲಕ್ಕಾಗಿ ‘‘ಕಠಿಣ ಪರಿಶ್ರಮಕ್ಕಾಗಿ’’ ಹೊಗಳಿಯಾರೇ ಹೊರತು, ಕಟುವಾದ ಮಾತುಗಳಿಂದ ಟೀಕಿಸಲಾರರು. ಆದರೆ ವಿರೋಧ ಪಕ್ಷಗಳಲ್ಲಿರುವವರಿಗೆ ಅವರ ಟೀಕೆಗಳು, ಗೇಲಿಗಳು ಕಟುವಾಗಿರುತ್ತವೆ. ಕೋವಿಡ್ ಬರುತ್ತದೆಂದು ಪದೇಪದೇ ಎಚ್ಚರಿಸುತ್ತಾ, ಸನ್ನದ್ಧತೆ ಮಾಡಿಕೊಳ್ಳಿ ಎಂದು ಪದೇಪದೇ ವಿನಂತಿಸುತ್ತಾ ಇದ್ದ ಕಾಂಗ್ರೆಸ್ ಪಕ್ಷದ ರಾಜಕಾರಣಿ ರಾಹುಲ್ ಗಾಂಧಿಯವರಿಗೆ ಇವರ ವಿಶೇಷ ಅಪಹಾಸ್ಯ ಮೀಸಲಿರುತ್ತದೆ. ಹೀಗೆ ಆಳುವ ಪಕ್ಷದ ಪ್ರಚಾರ ಸತ್ರಗಳಲ್ಲಿ ಪಾಲ್ಗೊಂಡು ವಿರೋಧ ಪಕ್ಷಗಳನ್ನು ನಾಶಮಾಡುವಲ್ಲಿ ಸಹಾಯ ಮಾಡುವುದೆಂದರೆ, ಅದು ಪ್ರಜಾತಂತ್ರವನ್ನು ನಾಶಮಾಡುವ ಷಡ್ಯಂತ್ರಕ್ಕೆ ಸಮನಾದುದು. ನಾವೀಗ ಇಲ್ಲಿಗೆ ತಲುಪಿದ್ದೇವೆ. ಅವರೆಲ್ಲ ಒಂದಾಗಿ ರೂಪಿಸಿದ ನರಕಕ್ಕೆ. ಇಲ್ಲಿ, ಪ್ರಜಾತಂತ್ರ ಸುಲಲಿತವಾಗಿ ನಡೆದುಕೊಂಡು ಹೋಗಲು ಅಗತ್ಯವಿರುವ ಪ್ರತಿಯೊಂದೂ ಸಂಸ್ಥೆಗಳನ್ನು ಅವರಿಗೆ ಬೇಕಾದಂತೆ ತಿರುಚಲಾಗಿದೆ ಅಥವಾ ಶಿಥಿಲಗೊಳಿಸಲಾಗಿದೆ ಮತ್ತು ವೈರಸ್ ಮೇಲಿನ ನಿಯಂತ್ರಣ ಸಂಪೂರ್ಣ ತಪ್ಪಿಹೋಗಿದೆ.

ನಾವು ಸರಕಾರ ಎಂದು ಕರೆಯುತ್ತಿರುವ ಈ ಸಮಸ್ಯೋತ್ಪಾದಕ ಯಂತ್ರಕ್ಕೆ ನಮ್ಮನ್ನೀಗ ಈ ವಿಕೋಪದಿಂದ ರಕ್ಷಿಸಿ ಹೊರತರುವ ಸಾಮರ್ಥ್ಯ ಇಲ್ಲ. ಒಬ್ಬನೇ ವ್ಯಕ್ತಿ ಸರಕಾರದಲ್ಲಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಮತ್ತವರು ಅಪಾಯಕಾರಿ ಕೂಡ ಎಂಬುದು-ತೀರಾ ಸಣ್ಣದಾಗಿ ಹೇಳಬೇಕೆಂದರೆ, ನಿರಾಶಾದಾಯಕ ಸ್ಥಿತಿ. ಈ ವೈರಸ್ ಒಂದು ಅಂತರ್‌ರಾಷ್ಟ್ರೀಯ ಸಮಸ್ಯೆ. ಅದನ್ನು ನಿಭಾಯಿಸುವಲ್ಲಿ, ತೀರ್ಮಾನಗಳನ್ನು ಕೈಗೊಳ್ಳುವ, ಅದನ್ನು ಕನಿಷ್ಠ ನಿಯಂತ್ರಿಸಿ ನಿರ್ವಹಿಸುವ ಕೆಲಸವನ್ನು ಪಕ್ಷಪಾತವಿಲ್ಲದ ಸಂಸ್ಥೆಯೊಂದು ಕೈಗೆತ್ತಿಕೊಳ್ಳಬೇಕಾಗಿದೆ, ಅದರಲ್ಲಿ ಆಳುವ ಪಕ್ಷದ, ಪ್ರತಿಪಕ್ಷದ ಸದಸ್ಯರು, ಆರೋಗ್ಯ ಮತ್ತು ಆಡಳಿತನೀತಿ ಪರಿಣತರು ಇರಬೇಕಾಗುತ್ತದೆ. ಮೋದಿಯವರಿಗೆ, ತನ್ನ ಅಪರಾಧಗಳಿಗಾಗಿ ರಾಜೀನಾಮೆ ಕೊಡುವುದು ಒಂದು ಸ್ವೀಕಾರಾರ್ಹ ಆಯ್ಕೆಯೆ? ಹೆಚ್ಚಿನಂಶ ಅವರು ಇವುಗಳಿಂದೆಲ್ಲ-ಅವರ ಈ ತನಕದ ಕಠಿಣ ಪರಿಶ್ರಮಗಳಿಂದ- ಸ್ವಲ್ಪಕಾಲ ದೂರ ಇರಬೇಕು. ಅಲ್ಲಿ ಏರ್ ಇಂಡಿಯಾ ಒನ್ ಇದೆ. 564 ಮಿಲಿಯ ಡಾಲರ್ ತೆತ್ತು ಖರೀದಿಸಿರುವ ಬೋಯಿಂಗ್ 777. ಅದನ್ನು ವಿವಿಐಪಿ ಪ್ರಯಾಣಕ್ಕಾಗಿ -ಅಂದರೆ ಅವರಿಗೆ- ಸಿದ್ಧಪಡಿಸಲಾಗಿದೆ. ಅದು ಈಗ ಬಹಳ ಸಮಯಗಳಿಂದ ಕೆಲಸ ಇಲ್ಲದೆ ಖಾಲಿ ಕುಳಿತಿದೆ. ಅವರು ಮತ್ತು ಅವರ ಜನ ಅದರಲ್ಲಿ ಸ್ವಲ್ಪತಿರುಗಾಡಿ ಬರಲಿ. ನಾವಿಲ್ಲಿ ಉಳಿದವರು ಈಗ ಆಗಿರುವ ಕಸಮುಸುರೆಗಳನ್ನೆಲ್ಲ ಎತ್ತಿ ಸ್ವಚ್ಛಪಡಿಸಲು ನಮಗೇನೆಲ್ಲ ಮಾಡಲು ಸಾಧ್ಯವಾಗುತ್ತದೆಯೋ ಅದನ್ನೆಲ್ಲ ಮಾಡೋಣ.
ಭಾರತವನ್ನು ಪ್ರತ್ಯೇಕಿಸಿ ಇರಿಸಬೇಡಿ. ನಮಗೆ ಸಹಾಯ ಬೇಕಿದೆ.

ಕೃಪೆ: www.theguardian.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top