ನಿಜವಾದ ಜಾತ್ಯತೀತರಿಗೆ ಮೀಸಲಾತಿ ಎಲ್ಲಿ ? | Vartha Bharati- ವಾರ್ತಾ ಭಾರತಿ

--

1990 ರಲ್ಲಿ ಲಂಕೇಶ್ ಪತ್ರಿಕೆಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಲೇಖನ, ಸದನದಲ್ಲಿ ಸಿದ್ದಲಿಂಗಯ್ಯ ಕೃತಿಯಿಂದ...

ನಿಜವಾದ ಜಾತ್ಯತೀತರಿಗೆ ಮೀಸಲಾತಿ ಎಲ್ಲಿ ?


ಕೆ.ಪಿ ಪೂರ್ಣ ಚಂದ್ರ ತೇಜಸ್ವಿ

ಸಿದ್ದಲಿಂಗಯ್ಯನವರು ಈ ಸಂದರ್ಭದಲ್ಲಿ ಇನ್ನೊಂದು ತೊಂದರೆಯನ್ನೂ ಪ್ರಸ್ತಾಪಿಸಿದ್ದಾರೆ. ಪರಿಶಿಷ್ಟ ವರ್ಗದ ಕಷ್ಟಪಟ್ಟು ಓದಿ ಮುಂದೆ ಬಂದ ಹುಡುಗರನ್ನು ಮುಂದುವರಿದ ಜಾತಿ ಹುಡುಗಿಯರು ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎಂದು. ಹಾಗಾಗಿ ಪರಿಶಿಷ್ಟ ವರ್ಗದ ಹೆಣ್ಣು ಮಕ್ಕಳಿಗೆ ಮುಂದುವರಿದ ಗಂಡುಗಳೇ ದೊರೆಯದೆ ಅವರು ಶಾಶ್ವತವಾಗಿ ಹಿಂದುಳಿಯು ತ್ತಿದ್ದಾರೆಂದು. ಇದು ಹಿಂದುಳಿದ ಜಾತಿಗಳಲ್ಲಿ ನಿಜವಾಗಿಯೂ ಇರುವ ತೊಂದರೆ, ಅಂತರ್ಜಾತಿಯ ಮದುವೆಗಳಲ್ಲಿ ಹೆಣ್ಣು ಮಕ್ಕಳು ಗಂಡುಗಳಿಗಿಂತ ಹಿಂದುಳಿದ ಜಾತಿಗೆ ಸೇರಿದ್ದರೆ ಅಂತಹವರಿಗೆ ಮೊದಲು ಪರಿಗಣಿಸುತ್ತೇವೆಂದು ಶಾಸನ ಮಾಡಿದರೆ ಈ ಸಮಸ್ಯೆಗೆ ಕೆಲಮಟ್ಟಿಗಿನ ಪರಿಹಾರ ದೊರೆಯುತ್ತದೆ.

ಅಂತರ್ಜಾತಿಯ ವಿವಾಹ ಆದವರಿಗೆ ನೌಕರಿಯಲ್ಲೂ ಅವರ ಮಕ್ಕಳಿಗೆ ವಿದ್ಯಾಭ್ಯಾಸದಲ್ಲೂ ಒಂದು ತಲೆಮಾರಿನವರೆಗೆಶೇ.5.ರಷ್ಟು ಮೀಸಲಾತಿ ದೊರಕಿಸಬೇಕೆಂದು ಡಾ. ಸಿದ್ದಲಿಂಗಯ್ಯನವರು ವಿಧಾನಪರಿಷತ್ತಿನಲ್ಲಿ ಒತ್ತಾಯ ಮಾಡಿರುವುದು ಅತ್ಯಂತ ಔಚಿತ್ಯ ಪೂರ್ಣ ಅಭಿನಂದನಾರ್ಹ ಕ್ರಮ. ಈ ವಿಷಯ ನಾವೆಲ್ಲ ನೂರಾರು ವೇದಿಕೆಗಳಿಂದ ಹಾಗೂ ವೈಯಕ್ತಿಕವಾಗಿ ಅನೇಕ ರಾಜಕಾರಣಿಗಳ ಬಳಿ ಮನವಿ ಮಾಡಿಕೊಂಡಾಗ್ಯೂ ಯಾರೂ ಈ ಬಗ್ಗೆ ಚಕಾರ ಎತ್ತಿರಲಿಲ್ಲ. ಈ ರಾಜಕಾರಣಿಗಳ ಮಂದಬುದ್ಧಿಗೆ ಇದು ಮುಖ್ಯವೆಂದು ಅನ್ನಿಸದುದರ ಜೊತೆಗೆ, ಇವರೆಲ್ಲಾ ತಮ್ಮ ತಮ್ಮ ಜಾತಿಯನ್ನೇ ಮುಂದೆ ಮಾಡಿಕೊಂಡು ಓಟು ಸಂಪಾದಿಸಿ ಗೆದ್ದಿದ್ದರಿಂದ ಇವರಿಗೆಲ್ಲಾ ಒಳಗೊಳಗೇ ನಿಜವಾಗಿಯೂ ಜಾತ್ಯತೀತ ಸಮಾಜ ನಿರ್ಮಿಸುವುದರಲ್ಲಿ ಯಾವ ಶ್ರದ್ಧೆಯೂ ಇಲ್ಲ. ಅಂತರ್ಜಾತಿಯ ವಿವಾಹವಾದವರಿಗೆ ಪ್ರೋತ್ಸಾಹ ಕೊಡಲು ಕಾನೂನು ಮಾಡಿದರೆ ನಮ್ಮ ಯಾವ ನ್ಯಾಯಾಲಯವೂ ಕೊಕ್ಕೆ ಹಾಕುವುದಿಲ್ಲ. ಯಾವ ಸಂವಿಧಾನದ ವಿಧಿಗೂ ಅದು ವ್ಯತಿರಿಕ್ತ ಅಲ್ಲ. ಗಾಂಧೀಜಿಯವರಿಂದ ಹಿಡಿದು ಎಲ್ಲರೂ ಅದನ್ನು ಪ್ರತಿಪಾದಿಸಿರುವವರೇ, ಇಷ್ಟಾದರೂ ನಮ್ಮ ಆಯೋಗಗಳೂ ಶಾಸಕರೂ ಈ ಬಗ್ಗೆ ಯಾವುದೇ ಸ್ಪಷ್ಟ ಶಾಸನ ತರಲು ಮುಂದೆ ಬರದಿರುವುದನ್ನು ನೋಡಿದರೆ ಇದಕ್ಕೆ ಕಾರಣ ಈ ಆಯೋಗಗಳ ಸದಸ್ಯರು ಮತ್ತು ಶಾಸಕರುಗಳಿಗೆ ನಿಜವಾಗಿಯೂ ಜಾತ್ಯತೀತರಾಗಲು ಮಾನಸಿಕ ತಯಾರಿ ಇಲ್ಲವೆಂದೇ ಹೇಳಬೇಕು. ಏನೇ ಆಗಲಿ, ಈ ಬಗ್ಗೆ ವಿಧಾನಪರಿಷತ್ತಿನಲ್ಲಿ ದಿಟ್ಟವಾಗಿ ಮಾತಾಡಿದ ಸಿದ್ದಲಿಂಗಯ್ಯ ನಮ್ಮೆಲ್ಲರ ಅಭಿನಂದನೆಗೆ ಅರ್ಹರು.

ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿರುವ ಪ್ರೊಫೆಸರ್ ನಂಜುಂಡಸ್ವಾಮಿ ವಿಧಾನ ಸಭೆಯಲ್ಲಿ ಮಾತಾಡಲು ಸಿಕ್ಕಿರುವ ಸಮಯ ಸದುಪಯೋಗ ಮಾಡಿಕೊಂಡು ಸಿದ್ದಲಿಂಗಯ್ಯನವರಿಗೆ ಕೆಳಮನೆಯಲ್ಲೂ ಬೆಂಬಲ ದೊರಕಿಸಬಹುದು. ಸಿದ್ದಲಿಂಗಯ್ಯ ನವರ ನಿರ್ಣಯಕ್ಕೆ ತಿದ್ದುಪಡಿ ಸೂಚಿಸಿರುವ ತಿಪ್ಪಣ್ಣ ಮತ್ತು ಶ್ರೀಮತಿ ಲಲಿತಾ ನಾಯಕರು ಈ ಬಗ್ಗೆ ಕೇವಲ ಸಮಯ ಸ್ಫೂರ್ತಿಯಿಂದಷ್ಟೇ ಮಾತಾಡಿದ್ದಾರೆ. ಇದನ್ನು ಶಾಸನವನ್ನಾಗಿ ರೂಪಿಸಲು ಬೇಕಾದ ಅಭ್ಯಾಸದ ಕೊರತೆ ಅವರ ಮಾತುಗಳಲ್ಲಿ ಕಾಣುತ್ತದೆ.

ಅಂತರ್ಜಾತಿಯ ವಿವಾಹಕ್ಕೆ ಮೀಸಲಾತಿ ಕೊಟ್ಟರೆ ಅದನ್ನು ಕೇವಲ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಬೇಕೆಂಬ ಇವರ ಅಭಿಪ್ರಾಯಗಳು ಸಮರ್ಪಕವೆಂದು ಹೇಳಲಾಗದು. ನಮ್ಮ ಗ್ರಾಮೀಣ ಸಮಾಜದಲ್ಲಿ ಅಂತರ್ಜಾತಿಯ ವಿವಾಹ ಆದವರೆಲ್ಲರಿಗೂ ತೊಂದರೆಗಳು ಒಂದೇ ರೀತಿ ಇದೆ. ಎರಡು ಕಡೆ ಜಾತಿಗಳಿಂದಲೂ ಬಹಿಷ್ಕಾರ, ಅನೇಕ ವೇಳೆ ದಂಡ ವಿಧಿಸುವುದು ಹಾಗೂ ಊರು ಬಿಟ್ಟು ಓಡಿಸುವುದು ಇತ್ಯಾದಿಗಳೆಲ್ಲ ನಡೆಯುತ್ತವೆ. ಇಷ್ಟೊಂದು ವ್ಯತಿರಿಕ್ತ ಸನ್ನಿವೇಶಗಳಲ್ಲಿ ಮದುವೆಯಾಗಿ ಒಂದು ಜಾತ್ಯತೀತ ಸಮಾಜ ನಿರ್ಮಿಸಲು ನೆರವಾಗುವವರಿಗೆ ಸರಕಾರದ ಸಹಾಯಹಸ್ತ ಮೀಸಲಾತಿಯ ಮುಖಾಂತರ ನೀಡುವುದು ಸರಿಯಾದುದು.

ಆದರೆ ಎಲ್ಲ ರೀತಿಯ ಅಂತರ್ಜಾತಿಯ ವಿವಾಹಗಳನ್ನೂ ಒಂದೇ ಎಂದು ಪರಿಗಣಿಸಲಾಗುವುದಿಲ್ಲ. ಇದರಲ್ಲೂ ಎಬಿಸಿ ಎಂದು ವರ್ಗೀಕರಿಸಿ ಯಾವ ಯಾವ ಜಾತಿಯ ಅಂತರ್ಜಾತಿಯ ವಿವಾಹಗಳು ಅತಿ ಹೆಚ್ಚಿನ ಸಾಮಾಜಿಕ ಪ್ರತಿರೋಧವನ್ನು ಎದುರಿಸಬೇಕಾಗುತ್ತದೋ ಅಂಥವರಿಗೆ ಮೊದಲನೇ ಸ್ಥಾನ ಕೊಡಬೇಕು. ಉದಾಹರಣೆಗೆ ಹಿಂದೂ, ಮುಸ್ಲಿಂ ಅಥವಾ ಹರಿಜನ, ಬ್ರಾಹ್ಮಣ ಮುಂತಾದ ಮದುವೆಗಳು. ಶ್ರೀ ಸಿದ್ದಲಿಂಗಯ್ಯನವರು ಈ ಸಂದರ್ಭದಲ್ಲಿ ಇನ್ನೊಂದು ತೊಂದರೆಯನ್ನೂ ಪ್ರಸ್ತಾಪಿಸಿದ್ದಾರೆ. ಪರಿಶಿಷ್ಟ ವರ್ಗದ ಕಷ್ಟಪಟ್ಟು ಓದಿ ಮುಂದೆ ಬಂದ ಹುಡುಗರನ್ನು ಮುಂದುವರಿದ ಜಾತಿ ಹುಡುಗಿಯರು ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎಂದು. ಹಾಗಾಗಿ ಪರಿಶಿಷ್ಟ ವರ್ಗದ ಹೆಣ್ಣು ಮಕ್ಕಳಿಗೆ ಮುಂದುವರಿದ ಗಂಡುಗಳೇ ದೊರೆಯದೆ ಅವರು ಶಾಶ್ವತವಾಗಿ ಹಿಂದುಳಿಯುತ್ತಿದ್ದಾರೆಂದು. ಇದು ಹಿಂದುಳಿದ ಜಾತಿಗಳಲ್ಲಿ ನಿಜವಾಗಿಯೂ ಇರುವ ತೊಂದರೆ, ಅಂತರ್ಜಾತಿಯ ಮದುವೆಗಳಲ್ಲಿ ಹೆಣ್ಣು ಮಕ್ಕಳು ಗಂಡುಗಳಿಗಿಂತ ಹಿಂದುಳಿದ ಜಾತಿಗೆ ಸೇರಿದ್ದರೆ ಅಂತಹವರಿಗೆ ಮೊದಲು ಪರಿಗಣಿಸುತ್ತೇವೆಂದು ಶಾಸನ ಮಾಡಿದರೆ ಈ ಸಮಸ್ಯೆಗೆ ಕೆಲಮಟ್ಟಿಗಿನ ಪರಿಹಾರ ದೊರೆಯುತ್ತದೆ.

ಅಂತರ್ಜಾತಿಯ ವಿವಾಹವಾದವರು ತಾವೇ ಒಂದು ಜಾತಿ ಎಂದು ಸಂಘಟನೆಯಾಗದ ಕಾರಣ ಮತ್ತು ಮೂಲತಃ ಇವರೆಲ್ಲ ಆದರ್ಶವಾದಿಗಳಾದ್ದರಿಂದ ಈ ಸಮುದಾಯ ಆಯೋಗದ ಮುಂದಾಗಲಿ, ಮಂತ್ರಿಗಳ ಮುಂದಾಗಲಿ ಕೈ ಜೋಡಿಸಿ ಮೀಸಲಾತಿಗೆ ಅಂಗಲಾಚಿ ನಿಲ್ಲುವುದಿಲ್ಲ. ಹೀಗಾಗಿ ಇವರ ಕಷ್ಟಗಳೂ ತೊಂದರೆಗಳೂ, ಇವರಿಗೆ ಸಿಕ್ಕಬೇಕಾದ ಪ್ರೋತ್ಸಾಹ ಕೇಳುವವರು ಕೊಡುವವರು ಯಾರೂ ಇಲ್ಲ. ಇಲ್ಲಿ ಇವರಿಗೆ ನ್ಯಾಯ ದೊರಕಿಸಬೇಕೆಂಬುದು ಅಷ್ಟೇನೂ ಮುಖ್ಯವಾದ ಪ್ರಶ್ನೆ ಅಲ್ಲ. ಈಗಿರುವ ಪ್ರಶ್ನೆ ಉಲ್ಬಣಿಸುತ್ತಿರುವ ಜಾತೀಯತೆಯನ್ನು ನಿಲ್ಲಿಸುವುದು ಹೇಗೆ ಎಂಬುದು. ಮೀಸಲಾತಿಯಂಥ ಸಮಾನತೆಯ ಪ್ರಯತ್ನದಲ್ಲೂ ಜಾತೀಯತೆಯೇ ಉಲ್ಬಣಿಸುತ್ತಿರುವುದನ್ನು ಯಾವ ವಿವೇಕಿ ರಾಜಕಾರಣಿಯೂ ಗಮನಿಸಬಹುದು. ಹೆಜ್ಜೆ ಹೆಜ್ಜೆಗೆ ಮನೆಮನೆಗೆ ಒಂದೊಂದು ಜಾತಿಯಾಗಿ ಪ್ರತಿಯೊಬ್ಬರೂ ತಾವೇ ಹಿಂದುಳಿದವರೆಂದು ಪೈಪೋಟಿ ನಡೆಸುತ್ತಿದ್ದಾರೆ. ಜಾತಿಗಳು ಅಳೆಯುವುದರ ಬದಲು ಇನ್ನಷ್ಟು ಕಗ್ಗಂಟಾಗುತ್ತಿವೆ.

ಇದರಿಂದ ಹೊರದಾರಿ ಇವತ್ತಲ್ಲದಿದ್ದರೆ ನಾಳೆ ಸಿದ್ದಲಿಂಗಯ್ಯನವರು ಸೂಚಿಸಿರುವು ದೊಂದೇ ಮಾರ್ಗ, ಇನ್ನು ನೂರು ವರ್ಷ ಮೀಸಲಾತಿ ಕೊಟ್ಟರೂ ಮುಂದುವರಿಯದಷ್ಟು ವೇಗವಾಗಿ ಈ ಜನಾಂಗವನ್ನು ಅಂತರ್ಜಾತಿಯ ವಿವಾಹಗಳು ಮುಂದೆ ತರುತ್ತವೆ. ಅಷ್ಟೇ ಅಲ್ಲದೆ ಮುಂದುವರಿದವರಿಗೆ ಹಿಂದುಳಿದವರ ಸಾಮಾಜಿಕ ಸತ್ಯಗಳೂ ಅರಿವಾಗುತ್ತವೆ. ಅಷ್ಟಲ್ಲದೆ ಈ ಮೀಸಲಾತಿಯ ಒಂದೊಂದು ಅವಕಾಶಗಳಲ್ಲೂ ಎರಡೆರಡು ಜಾತಿಗಳಿಗೆ ನಾವು ಸೌಲಭ್ಯ ಒದಗಿಸುತ್ತಿದ್ದೇವೆ ಎನ್ನುವುದನ್ನು ಮರೆಯುವಂತಿಲ್ಲ.

ಕೇವಲ ಮೀಸಲಾತಿಗೋಸ್ಕರ ಮದುವೆಯಾಗುತ್ತಾರೆ ಎನ್ನುವ ಆಕ್ಷೇಪಣೆಯನ್ನು ಕೆಲವರು ಎತ್ತಬಹುದು. ಜೀವಿಸುವ ಅವಕಾಶಗಳೇ ಸೀಮಿತವಾಗುತ್ತಿರುವ ಈ ಸಂದರ್ಭದಲ್ಲಿ ಇದರಲ್ಲಿ ಕೆಲಮಟ್ಟಿಗೆ ಸತ್ಯಾಂಶವೂ ಇದೆ. ಆದರೆ ಈ ಆಕ್ಷೇಪಣೆಗೆ ನಾನು ಹೇಳುವ ಸಮಾಧಾನ ಇಷ್ಟೆ-ಈಗಲೂ ವರದಕ್ಷಿಣೆ ಆಸೆಗೆ, ಆಸ್ತಿ ಪಡೆದುಕೊಳ್ಳುವ ಆಸೆಗೆ ಅಥವಾ ಜಾತಕ ಹೊಂದುತ್ತದೆ ಎನ್ನುವ ಕಾರಣಕ್ಕೆ ಮದುವೆಯಾಗುವವರಿಲ್ಲವೇ? ಅವರಿಗಿಂತ ಮೀಸಲಾತಿಯ ಆಸೆಗೆ ಮದುವೆಯಾದವರು ಮೇಲಲ್ಲವೇ. ಕೊನೆಯಪಕ್ಷ ಒಂದು ಜಾತ್ಯತೀತ ರಾಷ್ಟ್ರವಾದರೂ ಮುಂದೆ ನಿರ್ಮಾಣವಾಗುವುದಿಲ್ಲವೇ. ಈ ಬಗ್ಗೆ ಈಗಲಾದರೂ ನಮ್ಮ ಶಾಸಕರು ಗಂಭೀರವಾಗಿ ಕುಳಿತು ವಿಚಾರ ಮಾಡಬೇಕಾದ ಹೊತ್ತು ಬಂದಿದೆ. ಓಟಿಗೋಸ್ಕರ, ಕ್ಷುಲ್ಲಕ ರಾಜಕಾರಣಕ್ಕೋಸ್ಕರ ಈಗಾಗಲೇ ನಾವು ದೇಶವನ್ನು ಸಾಕಷ್ಟು ಹಾಳುಗೆಡವಿದ್ದೇವೆ.

ಈ ವಿಷಯವನ್ನು ಧೈರ್ಯವಾಗಿ ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ ಸಿದ್ದಲಿಂಗಯ್ಯನವರು ನಿಜಕ್ಕೂ ಅಭಿನಂದನಾರ್ಹರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top